ಸಣ್ಣ ಕಥೆ: ನೀತಿ ಸೂತ್ರದ ಸುತ್ತ

Share Button

Nagesh Mysore

ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ ಗಳಿಗೆಗದು ಕೆಲಸ ಮಾಡುವಂತೆ ಕಂಡರು ಬರಿ ಕೆಲ ಗಳಿಗೆಗಳಷ್ಟೆ; ಮತ್ತೊಂದೆರಡೆ ಕ್ಷಣದಲ್ಲಿ ಮತ್ತದೇ ಮರುಕಳಿಸಿ, ಈ ಬಾರಿ ತಡೆಯಲಾಗದ ಆಕಳಿಕೆಯಾಗಿ ಹೊರಬಿದ್ದಾಗ ಬೋಧನಾ ವೇದಿಕೆಯ ಮೇಲೆ ಏನನ್ನೊ ವಿವರಿಸುತ್ತಿದ್ದ ವಿಲಿಯಂಸ್ ನ ಕಣ್ಣಿಗು ಅದು ಗೋಚರವಾಗಿತ್ತು. ‘ಛೇ! ರಾತ್ರಿ ಇನ್ನೊಂದಷ್ಟು ನಿದಿರೆಯಿದ್ದಿದ್ದರೆ ಚೆನ್ನಿರುತ್ತಿತ್ತು’ ಅಂದುಕೊಳ್ಳುತ್ತಲೆ ಮತ್ತೆ ಆ ಪ್ರವಚನದತ್ತ ಗಮನ ಹರಿಸಲೆತ್ನಿಸಿದೆ.

ವಿಲಿಯಂಸ್ ವಾಂಗ್ ಚೆನ್ನಾಗಿ ನುರಿತ ತರಬೇತುದಾರ. ಕಂಪನಿಯ ಬಹುತೇಕ ಸೀನಿಯರ ಮ್ಯಾನೇಜ್ಮೆಂಟಿನ ಸಿಬ್ಬಂದಿಯ ತರಬೇತಿಗಳಲ್ಲಿ ಅವನದೆ ಪ್ರಮುಖ ಪಾತ್ರ. ಅನುಭವ, ಜಾಣ್ಮೆ, ನಿಖರ ಪ್ರಸ್ತುತ ಮಾಹಿತಿ ಮತ್ತು ಸಂಬಂಧಿತ ಜ್ಞಾನಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಅಭಿರುಚಿ, ಆದ್ಯತೆಗಳಿಗನುಗುಣವಾಗಿ ಸೂತ್ರೀಕರಿಸಿ ತರಬೇತಿ ಶಿಬಿರ ನಡೆಸುವುದು ಅವನ ಹೆಚ್ಚುಗಾರಿಕೆ. ಈ ಬಾರಿಯ ತರಬೇತಿ ನಡುವರ್ಗದ ಮ್ಯಾನೇಜರುಗಳದಾದರು ತಾನು ಈ ತರಬೇತಿಯನ್ನಿನ್ನು ಮುಗಿಸಿಲ್ಲವೆಂಬ ನೆನಪೋಲೆ ಮೂರ್ನಾಲ್ಕು ಬಾರಿ ಎಡತಾಕಿದಾಗ, ಸದ್ಯದಲ್ಲೆ ಬರಲಿರುವ ಆಡಿಟ್ಟಿನ ನೆನಪಾಗಿ ತೀರಾ ಸೂಕ್ತವಾದದ್ದನ್ನು ಕಾಯದೇ, ತಕ್ಷಣಕ್ಕೆ ದೊರೆತ ತರಬೇತಿಯ ದಿನಾಂಕವನ್ನೆ ಆರಿಸಿಕೊಂಡಿದ್ದೆ. ಅದರಲ್ಲೇನು ಅಂತಹ ತೊಡಕಿರಲಿಲ್ಲ – ಎಲ್ಲವು ಅಂದುಕೊಂಡ ಹಾಗೆ ನಡೆದಿದ್ದರೆ. ಹಿಂದಿನ ದಿನದ ಸಂಜೆಯೊಳಗೆ ಬಿಜಿನೆಸ್ ಟ್ರಿಪ್ ಮುಗಿಸಿ ಮನೆ ತಲುಪಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ನಾಲ್ಕು ಗಂಟೆಗಳಷ್ಟು ತಡವಾಗಿ ಕೊನೆಗೆ ಮನೆ ತಲುಪಿದಾಗ ರಾತ್ರಿಯ ಎರಡು ಗಂಟೆಯಾಗಿಹೋಗಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಡಿ ಕೊನೆಗೆ ಐದರ ಆಚೀಚೆಗೆ ನಿದ್ದೆ ಬಂತೆನಿಸುವ ಹೊತ್ತಲ್ಲಿ ಒಂಭತ್ತಕ್ಕೆ ಇರುವ ಟ್ರೈನಿಂಗ್ ನೆನಪಾಗಿ ಮತ್ತೆ ಗಡಬಡಿಸಿಕೊಂಡು ಎದ್ದು ಬರುವಂತಾಗಿತ್ತು – ಮಂಪರಿನ ಕಣ್ಣಲ್ಲೆ.

” ಮಿಸ್ಟರ ಭಾಗವತ್… ಇಲ್ಲಿರೋರಲ್ಲಿ ನೀವೇ ಹೆಚ್ಚು ಅನುಭವ ಇರೋವವರು.. ನಿಮ್ಮ ಅನುಭವದಿಂದ ಹೇಳೋದಾದ್ರೆ ನಿಮ್ಮ ಕೆಲಸ ನಿಭಾಯಿಸಬೇಕಾದಾಗ ಎದುರಾಗೊ ಎಡರು ತೊಡರುಗಳು ಯಾವುವು ? ನಿಮ್ಮಂತಹ ಉನ್ನತಾಧಿಕಾರದಲ್ಲಿ ಇರುವ ಅಧಿಕಾರಿಗಳಿಗೆ ಎಲ್ಲವೂ ಸುಲಭವಾಗಿಯೆ ಇರಬೇಕಲ್ಲವೆ?” ವಿಲಿಯಂಸ್ ನಾನು ಮಂಪರಿಗೆ ಜಾರದಂತಿರಲು ಯತ್ನಿಸುತ್ತಿರುವುದನ್ನು ಗಮನಿಸಿಯೆ ಈ ಪ್ರಶ್ನೆ ಕೇಳಿರಬೇಕು.. ಆರಂಭದಲ್ಲೆ ಅವನಿಗೆ ರಾತ್ರಿಯ ತಡ ಪ್ರಯಾಣದ ವಿಷಯ ಹೇಳಿದ್ದ ಕಾರಣ ತೊಂದರೆಯೇನು ಇರಲಿಲ್ಲ.

” ನಾನು ಹೆಚ್ಚಾಗಿ ದೈನಂದಿನ ಕಾರ್ಯಗಳಲ್ಲಿ ತೊಡಗಬೇಕಾದ ಅಗತ್ಯವಿಲ್ಲದ ಕಾರಣದಿಂದ, ಅವುಗಳ ಕುರಿತು ಹೆಚ್ಚು ಹೇಳಲಾರೆ.. ಆದರೆ ನನ್ನ ಕೆಲಸದಲ್ಲಿ ಮಾತ್ರ ನಿತ್ಯವು ಒಂದಿಲ್ಲೊಂದು ನಿರ್ಧಾರ ಮಾಡಬೇಕಾಗುತ್ತದೆ. ಅದು ನನ್ನ ಕೆಲಸದಲ್ಲಿ ಬಹಳ ಕಠಿಣವಾದ ಭಾಗ… ಬಹುತೇಕ ಪ್ರತಿನಿತ್ಯ ಇಂತಹ ಹತ್ತಾರು ಸಂಧರ್ಭಗಳು ಎದುರಾಗುತ್ತವೆ.. ಹಲವಾರು ಬಾರಿ ಒಂದೇ ರೀತಿಯ ಸಂಧರ್ಭಗಳೂ ಎದುರಾಗುತ್ತವೆ. ಅದರೆ, ಪ್ರತೀ ಬಾರಿಯೂ ನಿರ್ಧಾರ ಕೈಗೊಳ್ಳುವ ಹೊತ್ತಿನಲ್ಲಿ ಒಂದಲ್ಲ ಒಂದು ತಾಕಲಾಟ, ಗೊಂದಲ, ಅನಿಶ್ಚಿತತೆ ಕಾಡಿರುತ್ತದೆ.. ಇದು ಒಂದು ರೀತಿಯಲ್ಲಿ ಮೇಲ್ನೋಟಕ್ಕೆ ಸುಲಭವಾಗಿ ಕಂಡರು ಆಳದಲ್ಲಿ ಸಾಕಷ್ಟು ಕಂಗೆಡಿಸುವ ಆಯಾಮಗಳನ್ನು ಒಳಗೊಂಡಿರುತ್ತದೆ – ಆಯಾ ಹೊತ್ತಿನ ಸಮಯಾ-ಸಾಂಧರ್ಭಿಕ ಸನ್ನಿವೇಶಗಳಿಗನುಸಾರವಾಗಿ..”

ನನ್ನ ಮಾತು ಕೇಳಿ ವಿಲಿಯಂಸ್ ಸೇರಿದಂತೆ ಮಿಕ್ಕೆಲ್ಲರಿಗು ಅಚ್ಚರಿಯಾದಂತೆ ಕಂಡಿತು. ಅವರಿಗೆ ಹಾಗೆನಿಸಿದ್ದರಲ್ಲಿ ಅತಿಶಯವೇನು ಇರಲಿಲ್ಲವೆಂದೆ ಹೇಳಬೇಕು.. ನಾನಿರುವ ಅಧಿಕಾರಯುತ ಸ್ಥಾನದಲ್ಲಿ ಬೇಕಾದ ಹಾಗೆ ಅಧಿಕಾರ ಚಲಾಯಿಸುತ್ತ, ಕೈ ಕೆಳಗಿನವರಿಂದ ಕೆಲಸ ತೆಗೆಯುತ್ತ ನಡೆದರೆ ಸಾಕು. ಹೀಗೆ ಎಲ್ಲವನ್ನು ಬಾಯಿ ಮಾತಲ್ಲೆ ನಡೆಸುವ ಅನುಕೂಲ, ಸವಲತ್ತಿರುವಾಗ ನನಗೆಂಥ ಕಠಿಣ ಸ್ಥಿತಿ ಎಂದವರ ಆಲೋಚನಾ ಸರಣಿ.. ಅದನ್ನೆ ಮಾತಾಗಿಸಿ ಪ್ರಶ್ನೆಯ ರೂಪದಲ್ಲಿ ಕೇಳಿದವಳು ಮಾರ್ಕೆಟಿಂಗ್ ವಿಭಾಗದ ಅಧಿಕಾರಿಣಿ ಜುಬೇದಾ ಬೇಗಂ. ಎಲ್ಲರೂ ಅವಳನ್ನು ಜುಬೇದಾ ಮೇಡಂ ಎಂದೆ ಕರೆಯುತ್ತಿದ್ದರು ನಾನು ಜುಬೇದಾ ಬೇಗಂ ಎಂದು ಪೂರ್ತಿ ಹೆಸರಿಡಿದು ಕರೆಯುವುದೆ ಅವಳಿಗೊಂದು ತರ ವಿಚಿತ್ರ ಅನುಭೂತಿ. ಅದೇನು ಮುಜುಗರವೊ, ಸಂಭ್ರಮವೊ- ನನಗೆ ಎಲ್ಲರನ್ನು ಆದಷ್ಟು ಪೂರ್ತಿ ಹೆಸರಿನಿಂದ ಕರೆಯುವುದೇ ಸಹಜವಾಗಿ ಭಾಸವಾಗುತ್ತದೆ. ಕನಿಷ್ಠ ಫಸ್ಟ್ ನೇಮ್, ಲಾಸ್ಟ್ ನೇಮ್ ಗಳಂತಹದನ್ನು ನೆನಪಿಟ್ಟುಕೊಳ್ಳುವ ಗೋಜಿಲ್ಲದೆ ಕರೆದುಬಿಡಬಹುದು…

” ಭಾಗವತ್ ಸಾರ್.. ಇದು ನಮಗೆಲ್ಲ ಸ್ವಲ್ಪ ಆಶ್ಚರ್ಯವೆ ಎನ್ನಬೇಕು.. ನೀವೆಂಥ ದಕ್ಷ ಅಧಿಕಾರಿ ಅಂತ ನಮಗೆಲ್ಲ ಗೊತ್ತಿದೆ.. ನಿಮ್ಮ ಹತ್ತಿರ ಬಂದ ಯಾವ ನಿರ್ಧಾರವು ಅಗತ್ಯಕ್ಕಿಂತ ಒಂದು ಗಂಟೆಯೂ ಕೂಡ ಹೆಚ್ಚಾಗಿ ನಿಲ್ಲದೆಂಬ ಪ್ರತೀತಿಯೆ ಇದೆ.. ಅಲ್ಲದೇ ನಮ್ಮದು ಹೇಳಿ ಕೇಳಿ ಐ-ಎಸ್-ಓ 9000, ಐ-ಎಸ್ 27000 ಗಳಂತಹ ವಿಶ್ವಮಾನ್ಯತೆಯುಳ್ಳ ಗುಣಮಟ್ಟ ಖಾತರಿ ಸರ್ಟೀಫಿಕೆಟ್ಟುಗಳನ್ನು ಸತತವಾಗಿ ಪಡೆಯುತ್ತಿರುವ ಸಂಸ್ಥೆ. ನಮ್ಮಲ್ಲಿ ಪ್ರತಿಯೊಂದಕ್ಕು ನೀತಿ, ನಿಯಮಾವಳಿ, ಸೂಚನೆ, ಕಾನೂನು, ತುಲನಾತ್ಮಕ ಹೋಲಿಕೆ, ವಿವರಣಾತ್ಮಕ ಕಾರ್ಯ ಸೂಚಿಕೆಗಳು, ಪ್ರಕ್ರಿಯೆಗಳ ವಿವರಗಳು – ಹೀಗೆ ಎಲ್ಲದಕ್ಕು ನಿರ್ದಿಷ್ಠವಾದ ಮಾರ್ಗಸೂಚಿಕೆಗಳಿವೆ. ಸಾಲದ್ದಕ್ಕೆ ಇದರಲ್ಲಿನ ಬಹುತೇಕ ಭಾಗ ಗಣಕೀಕೃತವಾಗಿರುವುದರಿಂದ ಹೆಚ್ಚು ಕಡಿಮೆ ಪ್ರತಿಯೊಂದಕ್ಕು ಅಗತ್ಯ ಮಾಹಿತಿ ಬೇಕಾದಾಗ ಸುಲಭವಾಗಿಯೆ ದೊರಕುತ್ತೆ… ನಿಮ್ಮ ಸ್ಥಾನಮಾನದಲ್ಲಿ, ನೀವು ಕೇಳಿದ ಮಾಹಿತಿಯೆಲ್ಲ ಇದ್ದಲ್ಲಿಗೆ ಕ್ಷಿಪ್ರವಾಗಿ ಸರಬರಾಜಾಗುವುದರಿಂದ ಡಿಸಿಶನ್ ಮೇಕಿಂಗ್ ಸುಲಭವಲ್ಲವೆ ?” ಅಲ್ಲಿರುವ ಮುಕ್ಕಾಲು ಪಾಲು ಜನ ಅವನ ಸಮ್ಮುಖದಲ್ಲಿ ಬಾಯಿ ಬಿಡಲೆ ಹೆದರುತ್ತಾರೆ.. ಅಂತದ್ದರಲ್ಲಿ ಅವಳು ದನಿಯೆತ್ತಿದ್ದೆ ಅಲ್ಲದೆ ಅಷ್ಟುದ್ದ ಮಾತಾಡುವ ಧೈರ್ಯವನ್ನು ತೋರಿಸಲು ಒಂದು ಮುಖ್ಯ ಕಾರಣವೆಂದರೆ, ಕಂಪನಿಯಲ್ಲಿ ಅಧಿಕಾರ ಸ್ಥಾನದಲ್ಲಿರುವ ಸ್ತ್ರೀಯರ ಸಂಖ್ಯೆ ಹೆಚ್ಚಬೇಕೆಂದು, ತನ್ಮೂಲಕ ವೈವಿಧ್ಯತೆ ಭಾಗವಾಗಿ ಅದನ್ನು ನೀರೆರೆದು ಪೋಷಿಸಿ ಬೆಳೆಸಬೇಕೆಂದು ಬಲವಾಗಿ ಒತ್ತಾಸೆ ನೀಡುತ್ತಿರುವ ಕೆಲವೆ ಹಿರಿಯ ಅಧಿಕಾರಿಗಳಲ್ಲಿ ಭಾಗವತ್ ಸಹ ಒಬ್ಬರು ಎಂದು ಅವಳಿಗೆ ಚೆನ್ನಾಗಿ ಗೊತ್ತು.. ಆ ಧೈರ್ಯದ ಮೇಲೆ ಸ್ವಲ್ಪ ಹೆಚ್ಚಿನ ಸ್ವೇಚ್ಛೆ ತೆಗೆದುಕೊಂಡು ಮಾತನಾಡುತ್ತಿದ್ದಳು…

ನನಗೆ ಇದ್ದಕ್ಕಿದ್ದಂತೆ ನಿದ್ದೆಯೆಲ್ಲೊ ಹಾರಿಹೋದಂತೆನಿಸಿ ಉತ್ಸಾಹ ಮೂಡಿಬಂತು. ಈ ರೀತಿಯ ಚರ್ಚೆಗಳೆಂದರೆ ನನಗೂ ಅದಮ್ಯ ಉತ್ಸಾಹ. ನಾನು ಉತ್ತರ ಹೇಳಲು ಹೊರಡುವ ಹೊತ್ತಿಗೆ ಮಧ್ಯೆ ವಿಲಿಯಂಸ್ ಬಾಯಿ ಹಾಕಿ, “ಹೌದು ಮಿ. ಭಾಗವತ್.. ದಿಸ್ ವಿಲ್ ಬಿ ಯೆ ಇಂಟರೆಸ್ಟಿಂಗ್ ಸ್ಟೋರಿ ಫಾರ್ ಆಲ್ ಆಫ್ ಅಸ್.. ನನಗೂ ಅದೇ ಕುತೂಹಲವಿದೆ.. ಎಷ್ಟೊಂದು ಮಾರ್ಗದರ್ಶಿ ಕಾರ್ಯ ಸೂಚನೆಗಳಿವೆ, ಆಡಿಟ್ಟುಗಳಿವೆ, ಸಲಹೆ ಮತ್ತು ಸೂಚನಾ ತಜ್ಞರ ತಂಡಗಳೆ ಇವೆ.. ಆದರೆ ನೀವು ಹೇಳಿದ ಇದೇ ಮಾತನ್ನ ನಾನು ಸುಮಾರು ಎಲ್ಲಾ ಲೀಡರುಗಳ ಬಾಯಲ್ಲೂ ಕೇಳಿದ್ದೇನೆ.. ಬೇರೆಯವರು ಹೇಳಿದಾಗ ಅದು ಅವರ ವೀಕ್ ಏರಿಯಾ ಇರ್ಬೇಕು ಅನ್ಕೊಂಡ್ನೇ ಹೊರತು ಇದು ಜನರಲ್ ಪ್ರಾಬ್ಲಮ್ ಅಂತೆ ರೆಕಗನೈಸ್ ಮಾಡಿರಲಿಲ್ಲ.. ಆದರೆ ನೀವೂ ಅದೇ ಮಾತು ಹೇಳ್ತಿರೋದು ಕೇಳಿದ ಮೇಲೆ ಇದರಲ್ಲೇನೊ ಹುರುಳಿರಬೇಕು ಅನ್ಸುತ್ತೆ.. ಪ್ಲೀಸ್ ಶೇರ ಯುವರ ಎಕ್ಸ್ಪೀರಿಯನ್ಸ್ ಅಂಡ್ ಥಾಟ್ಸ್ ಆನ್ ದಿಸ್” ಎಂದು ಮುಂದಿನ ಚರ್ಚೆಗೊಂದು ವೇದಿಕೆ ನಿರ್ಮಿಸಿ ಕೊಟ್ಟ..

“ಗುಡ್.. ಹಾಗಾದ್ರೆ ಹೀಗೆ ಮಾಡೋಣ.. ಐ ವಿಲ್ ಶೇರ ಏ ಸ್ಟೋರಿ ವಿತ್ ಆಲ್ ಆಫ್ ಯೂ.. ಬಿಫೋರ್ ದಟ್ ಲೆಟ್ ಮೀ ಆಸ್ಕ್ ಸಮ್ ಕ್ವೆಶ್ಚನ್ಸ್..ಓಕೆ?” ಎಂದೆ ಸುತ್ತಲೂ ನೋಡುತ್ತ. ಸುಮಾರು ಜನರು ಗೋಣಾಡಿಸಿದರು – ‘ಆಗಲಿ’ ಎನ್ನುವಂತೆ. ಕಥೆ ಎಂದ ತಕ್ಷಣ ಎಲ್ಲರಿಗು, ಈ ಬೋರೆನಿಸುವ ತರಬೇತಿ ಶಿಬಿರದಲ್ಲೂ ಇದ್ದಕ್ಕಿದ್ದಂತೆ ಆಸಕ್ತಿ ಹುಟ್ಟಿರುವಂತೆ ಕಾಣುತ್ತಿತ್ತು. ‘ಆ ಆಸಕ್ತಿಯನ್ನೆ ಬಂಡವಾಳವಾಗಿರಿಸಿಕೊಂಡು ಈ ಯುವ ಸಮೂಹಕ್ಕೊಂದು ನೀತಿಪಾಠದ ತುಣುಕಿನ ರುಚಿ ಯಾಕೆ ತೋರಿಸಬಾರದು ? ಹೇಗೂ ಇವರೆ ತಾನೆ ಕಂಪನಿಯ ಮುಂದಿನ ಭವಿಷ್ಯ ? ಇಂತಹ ಸಂಧರ್ಭಗಳನ್ನು ಅವರೂ ಎದುರಿಸಲೇಬೇಕಲ್ಲಾ ? ಆದರೆ ಅದು ಬರಿಯ ರಂಜನೀಯ ಕಥೆ ಆಗಿಬಿಟ್ಟರೆ ಪೂರ್ತಿ ನೆಲೆಯಾಗಿ ನಿಲ್ಲುವುದಿಲ್ಲ.. ಅದನ್ನು ಹೇಗಾದರೂ ಕಂಪನಿಯ ತತ್ವ, ನೀತಿ ಸೂತ್ರಕ್ಕೆ ಜೋಡಿಸಿ ಸಂಗತವಾಗಿಸಬೇಕು. ಅದನ್ನು ಹೇಗೆ ಮಾಡುವುದು ?’ ಆ ಅಲೋಚನೆಯ ಬೆನ್ನಲ್ಲೆ ಬಾಯಿ ಮಾತ್ರ ಮಾತನಾಡುತ್ತಲೆ ಇತ್ತು ತನ್ನ ಪಾಡಿಗೆ..

” ಓಕೆ..ಅದನ್ನೆ ಮಾಡೋಣ.. ಆದರೆ ಆ ಕಥೆ ಹೇಳೊ ಮೊದಲು ನಾವೆಲ್ಲ ಕೆಲವು ಮೂಲಭೂತ ಸಿದ್ದಾಂತ ಸಂಬಂಧಿ ವಿಷಯಗಳಲ್ಲಿ ಒಂದೇ ಮಟ್ಟದ ಸಮಾನ ತಿಳುವಳಿಕೆಯ ಸ್ತರದಲ್ಲಿರಬೇಕು. ‘ಕಾಮನ್ ಲೆವಲ್ ಆಫ್ ಅಂಡರಸ್ಟ್ಯಾಂಡಿಂಗ್ ಅಮಾಂಗ್ ಅವರ್ಸೆಲ್ಸ್’ – ಓಕೆ ?”

ಗುಂಪಿನ ಹಲವಾರು ದನಿಗಳು ‘ಓಕೆ, ಓಕೆ’ ಎಂದಿದ್ದು ಕೇಳಿಸಿತು ಈ ಬಾರಿ; ಅದು ನಿಜಕ್ಕೂ ಉತ್ತೇಜಕ ಚಿಹ್ನೆ.. ನಾನು ಮೇಲೆದ್ದು ನೇರ ವಿಲಿಯಂಸ್ ನಿಂತಿದ್ದ ವೇದಿಕೆಯತ್ತ ನಡೆದು ವೈಟ್ ಬೋರ್ಡಿನ ಬದಿಯಲ್ಲಿ ನಿಂತು ಕೇಳಿದೆ..

” ಈಗ ನಿಮ್ಮಲ್ಯಾರಾದರು ಹೇಳುತ್ತೀರಾ.. ? ನಮ್ಮ ಅಥವಾ ಯಾವುದೆ ಸಂಸ್ಥೆಯನ್ನಾಗಲಿ ಮುನ್ನಡೆಸಲು ಬೇಕಾಗುವ ಅತೀ ಮೂಲಭೂತ ‘ಕಾರ್ಪೋರೇಟ್ ಸ್ಟ್ರಾಟೆಜಿ’ ಅರ್ಥಾತ್ ‘ಸಂಸ್ಥಾ ಕಾರ್ಯ ತಂತ್ರ’ ಯಾವುದು ಎಂದು ?”

ಒಂದರೆಗಳಿಗೆ ಎಲ್ಲವೂ ಮೌನ.. ಮೇಲ್ನೋಟಕ್ಕೆ ಸುಲಭದಂತೆ ಕಂಡರು ಗಹನವಾದ ಆ ಪ್ರಶ್ನೆಯನ್ನು ಎಲ್ಲಾ ಜೀರ್ಣಿಸಿಕೊಳ್ಳುತ್ತಿದ್ದಂತಿತ್ತು. ಆಮೇಲೆ ನಿಧಾನವಾಗಿ ‘ಗುಜುಗುಜು’ ಎಂದು ಶುರುವಾದ ಮಾತುಕಥೆ ಇಡೀ ಸಭಾಂಗಣದಲ್ಲಿ ತುಂಬಿಹೋಯ್ತು.. ಆಗ ವಿಲಿಯಂಸ್ ಮುಂದೆ ಬಂದವನೆ, “ನೋ ಕ್ರಾಸ್ ಡಿಸ್ಕಶನ್ ಪ್ಲೀಸ್… ಐ ಸಜೆಸ್ಟ್ ಯೂ ರೈಸ್ ಯುವರ್ ಹ್ಯಾಂಡ್ಸ್ ಅಂಡ್ ಟೇಕ್ ಟರ್ನ್ಸ್ ಟು ಆನ್ಸರ್..” ಎಂದ. ಆ ಗುಜುಗುಜು ಶಾಂತವಾಗುತ್ತಿದ್ದಂತೆ ಹಿಂದಿನ ಸಾಲಿನಿಂದ ಯಾರೊ ಕೈ ಎತ್ತಿದ್ದು ಕಾಣಿಸಿತು – ಅದು ಸೇಲ್ಸ್ ವಿಭಾಗದಲ್ಲಿರುವ ಮ್ಯಾನೇಜರು ಗೋವಿಂದ್ ಪಂಡಿತನ ಕೈ.. ಅವನ ಮಾತಿನ ವರಸೆ ಜಾಣ್ಮೆ ಬಲ್ಲವರಿಗೆ ಅವನ ಉತ್ತರದ ಬಗ್ಗೆ ಕುತೂಹಲವಿದ್ದೆ ಇರುತ್ತದೆ – ನನಗೂ ಸಹ. ಕೂತಲ್ಲಿಂದಲೆ ತನ್ನ ಕಂಚಿನ ಕಂಠದಲ್ಲಿ ಉತ್ತರಿಸಿದ ಗೋವಿಂದ್..

meeting

” ಮಿ. ಭಾಗವತ್.. ನಿಮ್ಮ ಸ್ಥಾನಮಾನದ ನೆಲೆಗಟ್ಟಿನಿಂದ ಯೋಚಿಸಿ ಹೇಳುವುದಾದರೆ ಪ್ರತಿ ಸಂಸ್ಥೆಯಲ್ಲು ಮೊದಲಿಗಿರಬೇಕಾದ ಮುಖ್ಯ ಸರಕೆಂದರೆ ವಿಶನ್, ಮಿಶನ್, ಗೋಲ್ಸ್ ಅಂಡ್ ಆಬ್ಜೆಕ್ಟೀವ್ಸ್.. ದೂರದೃಷ್ಟಿತ್ವವನ್ನು ಸಾರುವ ಪರಮೋದ್ದೇಶವನ್ನು ಹೊಂದಿದ ವಿಶನ್ ವ್ಯಾಖ್ಯೆ ಅತ್ಯುನ್ನತ ಮಟ್ಟದಲ್ಲಿ ಕಂಪನಿಯ ಪರಮಾಂತಿಮ ಗಮ್ಯವನ್ನು ಸೃಜಿಸಿ, ನಿರೂಪಿಸಿ ಎಲ್ಲರ ಕಾರ್ಯತಂತ್ರವನ್ನು ಅದರ ಸುತ್ತಲೆ ಸುತ್ತುವಂತೆ ಮಾಡುವ ಮಹಾನ್ ವಿಸ್ತೃತ ಪರಿಧಿ..” ಅವನು ವಿವರಿಸಿದ ರೀತಿಯಲ್ಲೆ ಸಂಸ್ಥೆಯ ‘ಬಿಗ್ ಪಿಕ್ಚರು ಅರ್ಥಾತ್ ಬೃಹತ್ ಕಲ್ಪನೆಯ ಚಿತ್ರ’ದ ಐಡಿಯಾ ಎಲ್ಲರ ಮನದಲ್ಲು ತರಿಸಿಬಿಟ್ಟಿದ್ದ.. ಅದೇ ಹೊತ್ತಿನಲ್ಲಿ ಮತ್ತೊಂದು ಮೂಲೆಯಿಂದ ಶಾರಿ ಪಾಂಡೆಯ ದನಿ ತೇಲಿ ಬಂದಿತ್ತು..” ಉದಾಹರಣೆಗೆ ನಮ್ಮ ಸಂಸ್ಥೆಯ ಪರಮೋದ್ದೇಶ ಮಾರಾಟ ಮತ್ತು ಲಾಭಾಂಶ ಗಳಿಕೆಯಲ್ಲಿ ನಮ್ಮ ಸಂಸ್ಥೆ ಮಾರುಕಟ್ಟೆಯಲ್ಲೆ ಮೊದಲ ಸ್ಥಾನದಲ್ಲಿರಬೇಕೆನ್ನುವುದು..”

ನಾನು ಅವರಿಬ್ಬರ ಮಾತಿನಡಿಪಾಯದ ಆಧಾರದ ಮೇಲೆ ಮಿಕ್ಕವನ್ನು ಸಂಕ್ಷಿಪ್ತವಾಗಿ ವಿವರಿಸಲು ನಿರ್ಧರಿಸಿ, ಅದೇ ತರ್ಕವನ್ನು ಮುಂದುವರೆಸಿದೆ “ನೀವೆಲ್ಲ ಈ ವಿಷಯದಲ್ಲಿ ಈಗಾಗಲೆ ಸಾಕಷ್ಟು ಮಾಹಿತಿ ಹೊಂದಿದ್ದೀರಿ ಎಂದಾಯ್ತು.. ಮಿಕ್ಕವನ್ನು ಕ್ಷಿಪ್ರವಾಗಿ ವಿವರಿಸಿ ಕಥೆಯತ್ತ ಇಣುಕಿ ನೋಡೋಣಾ… ಇದರ ಮುಂದಿನದೆ ಮಿಶನ್ , ಅಂದರೆ ಧ್ಯೇಯ. ಧ್ಯೇಯ ವಾಕ್ಯವನ್ನು ಪರಮೋದ್ದೇಶದಿಂದಲೆ ಸೃಜಿಸುವುದಾದರು ಅದಕ್ಕೊಂದು ನಿರ್ದಿಷ್ಠ ಕಾಲಮಿತಿಯ ಗುರಿಯಿರುತ್ತದೆ ಮತ್ತು ನಿಖರವಾದ ಗುರಿಯ ಅಂಕಿ ಅಂಶಗಳ ಜತೆ ಇರುತ್ತದೆ. ಉದಾಹರಣೆಗೆ ಐದು ವರ್ಷಗಳಲ್ಲಿ ಈಗಿರುವ ಮಾರಾಟದ ಎರಡು ಪಟ್ಟು ಗಮ್ಯವನ್ನು ಸಾಧಿಸಬೇಕೆನ್ನುವುದು. ಇದರ ನಂತರದ ಹಂತ ಗುರಿಗಳದು ಮತ್ತು ಧ್ಯೇಯೋದ್ದೇಶಗಳದ್ದು.. ಇವು ಇನ್ನು ನಿಕಟವಾದ ಮತ್ತು ನಿಖರವಾದ ಹತ್ತಿರದ ವಾರ್ಷಿಕ ಸಾಧನೆಯಂತ ಗಮ್ಯಗಳ ಮೇಲೆ ಕಣ್ಣಿಟ್ಟು ನಡೆಯುತ್ತವೆ. ಹೀಗೆ ಮುಂದುವರೆದುಕೊಂಡು ಹೋದರೆ ಈ ಮೂಲದ ಸುತ್ತಲೆ ಸ್ಪೂರ್ತಿ ವಾಕ್ಯಗಳನ್ನು, ಮುಂದಿನ ಕಾರ್ಯಸೂಚಿಗಳನ್ನು, ಕಾರ್ಯತಂತ್ರಗಳನ್ನು ರೂಪಿಸಿರುತ್ತೇವೆ.. ನೀವು ಮೊದಲೆ ಹೇಳಿದ ಕಂಪನಿಯ ನೀತಿ, ನಿಯಾಮವಳಿ, ನೇಮಕಾತಿಗಳೆಲ್ಲವನ್ನು ಈ ಅಂಶಗಳೆ ನಿರ್ದೇಶಿಸಿ ಮಾರ್ಗದರ್ಶನ ಮಾಡುವುದು.. ಸರಿಯೆ ?”

ಎಲ್ಲರಿಗು ತಾನು ಹೇಳಿದ ಅಂಶಗಳು ಮನವರಿಕೆಯಾಗುತ್ತಿದೆಯೆ ಎಂದೊಮ್ಮೆ ಸುತ್ತ ದಿಟ್ಟಿಸಿ ನೋಡಿದವನೆ ನಾನು ಮತ್ತೆ ಮುಂದುವರೆಸಿದೆ ಅದರ ಮುಂದಿನ ಪ್ರಶ್ನೆಯತ್ತ ಅವರ ಗಮನ ಸೆಳೆಯುತ್ತ.

” ಅಂದರೆ ಇವೆಲ್ಲಾ ಉನ್ನತ ಮಹತ್ತರ ಧ್ಯೇಯಗಳೆ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಿಸುವ, ನಿಯಂತ್ರಿಸುವ , ಹತೋಟಿಯಲ್ಲಿಡುವ ಪ್ರಕ್ರಿಯೆ, ಕಾರ್ಯ ಚಟುವಟಿಕೆಗಳಾಗಿ, ನೀತಿ-ನಿಯಮಾವಳಿಗಳಾಗಿ, ಸಂಸ್ಥೆಯ ಪ್ರತಿಯೊಂದು ಸಣ್ಣಪುಟ್ಟ ಚಟುವಟಿಕೆಗು ದಾರಿದೀಪವಾಗುತ್ತವೆ ಸರಿಯೆ? ಆದರೆ ಈ ಬರಹ ರೂಪಿ, ನಿಯಮರೂಪಿ ಮಾರ್ಗದರ್ಶಿತ್ವದಲ್ಲಿರುವ ಮತ್ತು ನೈಜ ಅನುಕರಣೆ ಅಥವಾ ಅನುಸರಣೆಯಲ್ಲಿರುವ ಒಂದು ಪ್ರಮುಖ ಅಂತರವೇನು ಗೊತ್ತಾ ? ಮತ್ತೊಂದು ವಿಧದಲ್ಲಿ ಹೇಳುವುದಾದರೆ, ಇಷ್ಟೆಲ್ಲಾ ಪರಿಪೂರ್ಣ ನೀತಿ ನಿಯಮಾವಳಿಯಿದ್ದರೂ ನಿಮ್ಮನ್ನೆಲ್ಲಾ ಇಲ್ಲಿ ಅದರ ಉಸ್ತುವಾರಿ ನೋಡಿಕೊಳ್ಳಲೆಂದು ಯಾಕೆ ನೇಮಿಸಬೇಕು? ಸಿದ್ದಾಂತದಲ್ಲಿ ಮತ್ತದರ ಅನುಷ್ಠಾನದಲ್ಲಿರುವ ಯಾವ ಅಂತರ ಇದನ್ನು ಅನಿವಾರ್ಯವಾಗಿಸುತ್ತೆ?”

ಮತ್ತೊಂದರೆಗಳಿಗೆ ಅಲ್ಲಿ ಮೌನ ಹಾಸಿಕೊಂಡಂತಿತ್ತು. ಯಾರಿಗು ಅದರ ನಿಖರವಾದ ಉತ್ತರ ಗೊತ್ತಿದ್ದಂತೆ ಕಾಣಲಿಲ್ಲ. ಕೊನೆಗೆ ಮೂಲೆಯೊಂದರಿಂದ ಒಂದು ಕೈ ಮೇಲೆದ್ದಿತು. ಅದು ಮಿಸ್ಟರ್ ಹ್ವಾಂಗ್ ಹೋ – ಆ ಗುಂಪಿನಲ್ಲೆ ಅತಿ ಹೆಚ್ಚು ವಯಸ್ಸಾದ, ಹೆಚ್ಚಿನ ವರ್ಷಗಳ ಅನುಭವಿರುವ ವ್ಯಕ್ತಿ..

” ಮಾರ್ಗದರ್ಶನದ ನೀತಿ ನಿಯಮಗಳು ಬರಿಯ ಮಾರ್ಗದರ್ಶನದ ಉದ್ದೇಶಗಳಿಂದಲೆ ಮಾಡಿರುವುದಾದ ಕಾರಣ ನೈಜದಲ್ಲಿ ನಡೆಯುವ ಎಲ್ಲಾ ವಿಕಲ್ಪಗಳನ್ನು , ಸಾಧ್ಯಾಸಾಧ್ಯತೆಗಳನ್ನು ಅದು ಒಳಗೊಳ್ಳಲು ಸಾಧ್ಯವಿಲ್ಲ. ಅದನ್ನು ಮೇಲ್ಪಂಕ್ತಿಯಂತೆ ಪರಿಗಣಿಸಿ ಅದನ್ನು ತಾರ್ಕಿಕವಾಗಿ ದಿನದಿನದ ಅಗತ್ಯಕ್ಕೆ ಬಳಸಿಕೊಳ್ಳಬಹುದೆ ಹೊರತು ಅಡುಗೆ ಮಾಡಲು ಸಿಗುವ ಸಿದ್ದ ಸೂತ್ರದ ರಿಸೇಪಿಯಂತೆ ಅಲ್ಲಾ.. ಅದೇ ಮುಖ್ಯವಾದ ಅಂತರ. ಈ ಅಂತರವನ್ನು ಸುಸೂತ್ರವಾಗಿ, ಸೂಕ್ತವಾಗಿ ಮುಚ್ಚಲೆಂದೆ ನಮ್ಮಂತಹ ಮ್ಯಾನೇಜರುಗಳ ಅಗತ್ಯವಿರುವುದು..” ಎಂದು ಹೇಳಿ ಕುಳಿತುಕೊಂಡ.

ಮಿಸ್ಟರ್ ಹ್ವಾಂಗ್ ಹೋ ನೇರ ಮೂಲಭೂತ ಅಂಶಕ್ಕೆ ಕೈ ಹಾಕಿದ್ದ..

“ಫಂಟಾಸ್ಟಿಕ್ ಮಿಸ್ಟರ ಹ್ವಾಂಗ್.. ದಟ್ ಇಸ್ ಎಗ್ಸಾಕ್ಟ್ಲೀ ದ ಪಾಯಿಂಟ್..ಅಷ್ಟೆಲ್ಲ ರೂಲ್ಸು, ರೆಗ್ಯುಲೇಷನ್ಸ್ ಅಂತೆಲ್ಲ ಇದ್ರು , ಯಾಕೆ ನಿರ್ಧಾರ ಮಾಡೋದು ಕಷ್ಟ ಅಂತ ಕೇಳಿದಿರಲ್ಲ – ಅದರ ಮುಖ್ಯ ಕಾರಣ ಇದು. ಯಾವುದೆ ನೀತಿ, ನಿಯಮಾವಳಿ, ಕಾರ್ಯ ಸೂಚಿಯ ಪ್ರಕ್ರಿಯೆಯಾಗಲಿ ನೈಜದಲ್ಲಾಗುವ ಪ್ರತಿಯೊಂದು ಸೂಕ್ಷ್ಮವನ್ನು ಒಳಗೊಂಡಿರಲು ಸಾಧ್ಯವಿಲ್ಲ.. ಹೀಗಾಗಿ ಪ್ರತಿಬಾರಿಯೂ ಅದರದೇ ಆದ ದೃಷ್ಟಿಕೋನದಲಿ ಎಲ್ಲವನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಒಂದೇ ರೀತಿಯ ಸಂದರ್ಭಗಳಲ್ಲಿ ಕೈಗೊಂಡ ಒಂದೇ ತರದ ನಿಲುವುಗಳು ವಿರುದ್ಧ ಫಲಿತಕ್ಕೆ ಕಾರಣವಾಗುವುದು ಉಂಟು.. ಇನ್ನು ಕೆಲವೊಮ್ಮೆ ನೀತಿ, ನಿಯಮ, ಕಾನೂನಿನ ಹೊರತಾಗಿ ಮಾನವೀಯ ಮೌಲ್ಯಗಳ ಪರಿಗಣನೆಯನ್ನು ಮಾಡಬೇಕಾಗುತ್ತದೆ. ಆ ಹೊತ್ತಿನಲ್ಲಿ ಬರುವ ಬಹು ದೊಡ್ಡ ದ್ವಂದ್ವವೆಂದರೆ ಕಟ್ಟುನಿಟ್ಟಾಗಿ ನಿಯಮಾವಳಿ ಪಾಲಿಸುವುದೊ ? ಅಥವಾ ತುಸು ಸಡಿಲಿಕೆ ತೋರಿ ನೈಜ ಪರಿಸ್ಥಿತಿಗೆ ಪ್ರತಿಸ್ಪಂದಿಸುವುದೊ ? ಅಲ್ಲು ಕಾಡುವ ತಾಕಾಲಾಟಗಳೆಂದರೆ ಸ್ವಂತ ವ್ಯಕ್ತಿತ್ವದ ಮೌಲ್ಯ ವ್ಯವಸ್ಥೆಗು ಮತ್ತು ಸಂಸ್ಥೆಯ ಅಧಿಕಾರ ಆರೋಪಿಸುವ ಮೌಲ್ಯ ವ್ಯವಸ್ಥೆಗು ನಡುವಿನ ದ್ವಂದ್ವ. ದಿ ಕಾನ್ಫ್ಲಿಕ್ಟ್ ಆಪ್ ಪರ್ಸನಲ್ ಅಂಡ್ ಆರ್ಗನೈಸೇಷನಲ್ ವ್ಯಾಲ್ಯೂ ಸಿಸ್ಟಂ.. ಇವೆರಡು ಒಂದೆ ಸ್ತರದಲ್ಲಿ ಹೊಂದಾಣಿಕೆಯಾಗುವ ರೀತಿಯಲ್ಲಿದ್ದರೆ ಅಷ್ಟು ತೊಡಕಾಗುವುದಿಲ್ಲ. ಒಂದು ವೇಳೆ ಅವೆರಡರ ನಡುವೆ ಅಂತರವಿದ್ದರೆ, ಪ್ರತಿ ಬಾರಿಯೂ ಅದೇ ತೊಡಕಾಗಿಬಿಡುತ್ತದೆ – ಬಲವಂತದಿಂದ ಸಂಧರ್ಭಕ್ಕೆ ತಕ್ಕ ವಿಭಿನ್ನ ಪಾತ್ರಧಾರಿಯಾಗುವಂತೆ ಪ್ರೇರೇಪಿಸುತ. ಸಂಸ್ಥೆಯ ಪರವಾಗಿ ಕಾರ್ಯ ನಿರ್ವಹಿಸುವಾಗ ‘ಅನುಮಾನಕ್ಕೆಡೆಯಿಲ್ಲದಂತೆ’ ನಿಖರವಾಗಿ, ನಿಯಮಬದ್ಧವಾಗಿ ನಡೆಯಬೇಕಾದ ಅಗತ್ಯದಿಂದಾಗಿ ಸಂಧರ್ಭಕ್ಕೆ ಬೇಕಾದ ಸ್ವಾತ್ಯಂತ್ರ , ಸ್ವೇಚ್ಚೆ ಇರುವುದಿಲ್ಲ. ಈ ಎರಡು ಮೌಲ್ಯಗಳ ನಡುವೆ ತಿಕ್ಕಾಟ ವಾಗುವ ಸಂಧರ್ಭ ಬಂದಾಗಲೆಲ್ಲ ನಿರ್ಧಾರ ಕೈಗೊಳ್ಳುವುದು ಕಠಿಣತರ ಎನಿಸಿಬಿಡುತ್ತದೆ. ಆದರೆ ನಿರ್ಧಾರ ಕೈಗೊಳ್ಳಲೇ ಬೇಕಾದ ಅನಿವಾರ್ಯವೂ ಇರುವುದರಿಂದ ಅದು ಯಾವುದೊ ಬಗೆಯ ಹೊಂದಾಣಿಕೆಯತ್ತ ದೂಡುವುದು ಸಹಜವೆ..” ಎಂದು ಒಂದು ಧೀರ್ಘ ಉಪನ್ಯಾಸವನ್ನೆ ತೆರೆದಿಟ್ಟೆ ಆ ಸಭೆಯ ಮುಂದೆ.

” ಆ ಹೊಂದಾಣಿಕೆಯೆನ್ನುವುದೂ ಕೂಡ ಒಂದು ರೀತಿಯ ಕಾಂಪ್ರೊಮೈಸ್ ಆದ ಕಾರಣ ಅದು ಇನ್ನೊಂದು ರೀತಿಯ ಗೊಂದಲಕ್ಕು ಕಾರಣವಾಗುತ್ತದೆ – ದಿ ಲೀಡರ್ಶಿಪ್ ಡೈಲಮಾ.. ಅಲ್ಲವೆ ಮಿ. ಭಾಗವತ್ ? ಯಾಕೆಂದರೆ ನಾಯಕರಾಗಿ ಸತ್ವಯುತ, ಖಚಿತ ನಿರ್ಧಾರ ಕೈಗೊಳ್ಳಬೇಕೆನ್ನುವುದು ನಾಯಕರಿಂದ ನಿರೀಕ್ಷಿಸಲ್ಪಡುವ ಕನಿಷ್ಠ ಗುಣ ಲಕ್ಷಣ.. ಹೌದೊ ?” ಎಂದು ಪ್ರಶ್ನಿಸಿದ ವಿಲಿಯಂಸ್.

ನಾನು ಅದಕ್ಕುತ್ತರಿಸಿವ ಮೊದಲೆ ಗುಂಪಿನಿಂದ ಮತ್ತಾರೊ ಮಾತಾಡಿದ ಸದ್ದು ಕೇಳಿಸಿತು. ಇದಾರದೊ ಅಪರಿಚಿತ ಮುಖ . ಬಹುಶ ಹೊಸಬನಿರಬೇಕು..” ಮಿಸ್ಟರ ಭಾಗವತ್, ನೀವೀಗ ಹೇಳಿದ್ದೆಲ್ಲ ಒಂದು ರೀತಿಯ ಅಮೂರ್ತ, ಅಬ್ಸ್ ಟ್ರಾಕ್ಟ್.. ಸ್ಥೂಲವಾಗಿ ಅರ್ಥವಾಗುತ್ತಾದರು ಅದು ಸ್ಪಷ್ಟವಾಗಿ ಪೂರ್ತಿ ಗ್ರಹಿಕೆಗೆ ಸಿಗುತ್ತೆ ಅಂತ ಹೇಳೊಕಾಗಲ್ಲ… ಸ್ವಲ್ಪ ಅದನ್ನೆ ಒಂದು ಉದಾಹರಣೆ ಮೂಲಕ ವಿವರಿಸ್ತೀರಾ..? ಬಹುಶಃ ನೀವು ಕಥೆ ಹೇಳ್ತೀನಿ ಅಂದಿದ್ದು ಆ ಉದ್ದೇಶದಿಂದಲೆ ಇರಬೇಕು.. ಆದರೂ ನನಗನಿಸಿದ್ದನ್ನ ಹೇಳ್ತಾ ಇದೀನಿ..”

ನಾನು ಒಮ್ಮೆ ವಿಲಿಯಂಸಿನತ್ತ ದಿಟ್ಟಿಸಿ, ನಂತರ ಹೊಸಬನತ್ತಲು ತಿರುಗಿ ನೋಡಿ, ” ವಿಲಿಯಂಸ್ ಈಗ ತಾನೆ ಹೇಳಿದ ಹಾಗೆ ಆ ಲೀಡರ್ಶಿಪ್ ಡೈಲೆಮಾ ಅನ್ನೋದು ಅಷ್ಟು ಸರಳವಾಗಿ ಹೇಳೋಕೆ ಆಗೋದಿಲ್ಲ.. ಆದರೆ ನಾಯಕರುಗಳಾಗಿ ನಾವೆಲ್ಲ ದಿನ ನಿತ್ಯ ಇವುಗಳ ಜತೆ ಹೆಣಗಾಡಲೇಬೇಕು.. ಆ ಕಾರಣಕ್ಕೆ ನಾನು ಕಥೆ ಹೇಳ್ತೀನಿ ಅಂದದ್ದು.. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.. ಈ ಕಥೆಗೆ ಮುಕ್ತಾಯ ಏನಾಯ್ತು ಅಂತ ನಾನು ಹೇಳಲ್ಲ.. ದಟ್ ಇಸ್ ಲೆಫ್ಟ್ ಟು ಯುವರ್ ಇಮಾಜಿನೇಶನ್.. ಯು ಕ್ಯಾನ್ ಫಾರ್ಮ್ ಯುವರ್ ಓನ್ ಕನ್ಕ್ಲೂಶನ್ಸ್.. ದಟ್ ಇಸ್ ದ ಲೀಡರ್ಶಿಪ್ ಹೋಮ್ವರ್ಕ್ ಫಾರ್ ಟುಡೇ.. ಓಕೆ ?” ಎಂದು ಹೇಳಿ ಒಮ್ಮೆ ಸುತ್ತಲೂ ನೋಡಿದೆ.. ಎಲ್ಲರ ಮುಖದಲ್ಲು ಅಸ್ಪಷ್ಟ ಉತ್ತರಗಳಿದ್ದರು ತಲೆಯಾಡಿಸುವ ಜನರೆ ಹೆಚ್ಚಾಗಿ ಕಂಡುಬಂದುದ್ದರಿಂದ ನನ್ನ ಕಥೆಯನ್ನು ಬಿಚ್ಚಿಡಲು ನಿರ್ಧರಿಸಿ ವೇದಿಕೆಯ ತುದಿಯತ್ತ ಬಂದೆ.

” ಇದೊಂದು ನಮ್ಮದೇ ರೀತಿಯ ಸಂಸ್ಥೆಯ ಕಥೆ.. ತುಂಬಾ ಮೌಲ್ಯಾಧಾರಿತ ರೀತಿಯಲ್ಲಿ ನಡೆಸುವ ಇಂಗಿತ ಮತ್ತು ಆಶಯಗಳುಳ್ಳ ಸಂಸ್ಥೆ.. ಹೀಗಾಗಿ ನಮ್ಮ ಹಾಗೆ ರೂಲ್ಸು, ರೆಗ್ಯುಲೇಷನ್ಸ್, ಪ್ರೊಸೀಜರ್ಸು ಎಲ್ಲ. ಅಲ್ಲದೇ ಕಾಂಪ್ಲಯನ್ಸಿನಲ್ಲು ನಮ್ಮ ಹಾಗೆ ತೀರಾ ಶಿಸ್ತುಬದ್ಧ ಕಂಪನಿ.. ಹೀಗಾಗಿ ಎಲ್ಲಾ ವ್ಯವಹಾರಗಳು ನ್ಯಾಯಬದ್ದವಾಗಿ, ಕಾನೂನುಬದ್ದವಾಗಿ, ನೀತಿಬದ್ದವಾಗಿ, ನಿಯಮಬದ್ದವಾಗಿ ನಡೆಯಬೇಕೆಂಬುದು ಅಲ್ಲಿನ ಬಲವಾದ ಕಟ್ಟಳೆ.. ವ್ಯವಹಾರದಲ್ಲಿ ನಷ್ಟವಾದರು ಸರಿಯೆ, ಅನ್ಯಾಯ, ಅನೀತಿಯಲ್ಲಿ ವ್ಯವಹರಿಸುವುದಿಲ್ಲ ಎನ್ನುವ ಘೋಷ ವಾಕ್ಯ.. ಇದು ಬರಿಯ ಹೊರಗಿನ ವ್ಯವಹಾರಗಳಿಗೆ ಮಾತ್ರವಲ್ಲ, ದೈನಂದಿನ ಸಣ್ಣಪುಟ್ಟ ವ್ಯವಹಾರಗಳಿಗು ಇದೇ ನೀತಿ, ನಿಯಮದ ಚೌಕಟ್ಟು…”

“ಮಿಸ್ಟರ್ ಭಾಗವತ್.. ನೀವು ಹೇಳ್ತೊರೋದ್ ನೋಡಿದ್ರೆ ನಮ್ ಕಂಪನಿ ಕಥೆನೆ ಅನ್ನೊ ಹಾಗಿದೆ ..? ಏನು ಈ ಕತೆಲಿ ಬರೋ ಕ್ಯಾರಕ್ಟರು ಕೂಡ ನೀವೇ ಅನ್ಕೊಂಡ್ಬಿಡೋಣ್ವಾ?” ಛೇಡಿಸುವ ದನಿಯಲ್ಲಿ ಕೇಳಿದ ವಿಲಿಯಂಸಿನ ದನಿಗೆ ಇಡಿ ಕಾರ್ಯಾಗಾರದಲ್ಲಿದ್ದವರೆಲ್ಲರು ನಕ್ಕು ತಾವು ಜತೆಯಾದರು. ಅದನ್ನು ಕೇಳಿದ ನಾನು ಜತೆಯಲ್ಲೆ ನಗುತ್ತ, ” ಇಲ್ಲಾ ವಿಲಿಯಂಸ್ ..ಇಲ್ಲಿ ಅದೇ ಟ್ವಿಸ್ಟು.. ಈ ಕಥೆಯಲ್ಲಿರೋದು ನಾನಲ್ಲ, ಬದಲಿಗೆ ನೀವು..!” ಎಂದಾಗ ಮತ್ತೊಮ್ಮೆ ಎಲ್ಲರು ನಗೆಗೂಡಿಸಿದರು.. ನಾನು ಈಗ ವಾತಾವರಣ ತುಸು ಹಗುರ ಲಯಕ್ಕೆ ಬಂದದ್ದನ್ನು ಪರಿಗಣಿಸಿ, ಇದೆ ಸಕಾಲವೆಂದು ನನ್ನ ಕಥೆಯನ್ನು ಮುಂದುವರೆಸಿದೆ..

” ಓಕೆ ಈ ಕ್ಯಾರಕ್ಟರಿನ ಹೆಸರು ವಿಲಿಯಂಸ್ ಎಂದೆ ಇಟ್ಟುಕೊಳ್ಳೋಣ.. ಯೂ ಸೀ… ? ವಿಲಿಯಂಸ್ ಇಸ್ ಏ ವೆರಿ ಸಿನಿಯರ್ ಪರ್ಸನ್ ಇನ್ ದ ಕಂಪನಿ… ಅಂದ್ಮೇಲೆ ಹೀ ವಿಲ್ ಹ್ಯಾವ್ ಏ ಲಾಟ್ ಆಫ್ ಪರ್ಕ್ಸ್ ಅಂಡ್ ಫೆಸಿಲಿಟೀಸ್ ರೈಟ್?” ಎಂದವನೆ ವಿಲಿಯಂಸಿನತ್ತ ನೋಡಿ ಒಮ್ಮೆ ಕಣ್ಣು ಮಿಟುಕಿಸಿ ” ಹೌ ಎವರ್… ಅದೆಲ್ಲಾ ಸವಲತ್ತುಗಳು ಕಂಪನಿ ಒದಗಿಸಿದ ಅನುಕೂಲಗಳು.. ಅಧಿಕೃತ ಕೆಲಸಕ್ಕೆಂದು ನಿಗದಿಪಡಿಸಿದ ಸೌಲಭ್ಯಗಳೆ ಹೊರತು ಪೂರ್ತಿ ಸ್ವಂತ ಬಳಕೆಗೆಂದು ಕೊಟ್ಟದ್ದಲ್ಲ.. ಕೆಲವನ್ನು ಸ್ವಂತ ಬಳಕೆಗೆ ಉಪಯೋಗಿಸಲು ನಿಯಮಿತ ಪರವಾನಗಿ ಇದ್ದರು ಅದಕ್ಕೊಂದು ಮಿತಿ, ಪರಿಮಿತಿಯ ಚೌಕಟ್ಟು ಇರುತ್ತದೆ.. ಉದಾಹರಣೆಗೆ ಕಂಪನಿಯಲ್ಲಿ ಕೊಟ್ಟಿರುವ ಕಾರು. ಈ ಕಾರು ಮತ್ತು ಅದನ್ನು ಓಡಿಸಲು ಡ್ರೈವರು ಎರಡು ಕಂಪನಿಯ ಅಧಿಕೃತ ಕೆಲಸಗಳಿಗಾಗಿ ಕೊಟ್ಟಿರುವ ಸೌಲಭ್ಯಗಳಾದರು, ಅಧಿಕಾರದಲ್ಲಿರುವ ತನಕ ಅಧಿಕೃತ ಕೆಲಸಗಳಿಗೆ ಚ್ಯುತಿ ಬರದ ರೀತಿಯಲ್ಲಿ ಅವರ ಸ್ವಂತ ಮನೆಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲು ಪರವಾನಗಿ ಇದೆ… ಹೀಗಾಗಿ ಡ್ರೈವರು ಮತ್ತು ಕಾರು ಆಫೀಸಿನ ಕೆಲಸವಿಲ್ಲದಾಗ ಮನೆಯದೊ, ಮಕ್ಕಳ ಸ್ಕೂಲಿನದೊ ಜರೂರನ್ನು ನಿಭಾಯಿಸುವುದು ಸಾಮಾನ್ಯ ವಿಷಯ..”

” ಆದರೆ ಮಿಸ್ಟರ್. ಭಾಗವತ್, ನನ್ನಲ್ಲಿರುವುದು ಕಂಪನಿಯ ಲೀಸ್ಡ್ ಕಾರು. ಅರ್ಥಾತ್ ನಾವು ಖರೀದಿಸುವುದು ಅದರ ಸೇವಾ ಅವಧಿ ಮತ್ತು ಡ್ರೈವರನ ಸಮಯವನ್ನೆ ಹೊರತು ಕಾರನ್ನಲ್ಲ.. ಹೀಗಾಗಿ ಇದೊಂದು ರೀತಿ ಒಡೆಯನಲ್ಲದ ಒಡೆತನದ ರೀತಿ.. ಹೇಳಿದ ಹೊತ್ತಿಗೆ ಕಾರು ತರುತ್ತಾರೆ, ಹೇಳಿದ ಕೆಲಸ ಮಾಡುತ್ತಾರೆ, ಸಮಯ ಮುಗಿದ ಮೇಲೆ ಕಾರು ವಾಪಸ್ಸು ತೆಗೆದುಕೊಂಡು ಹೋಗಿಬಿಡುತ್ತಾರೆ.. ಅರ್ಜೆಂಟಿದ್ದರೆ ಪೋನ್ ಮಾಡಿದಾಗ ಬರುತ್ತಾರೆ ಎನ್ನುವುದು ನಿಜವಾದರು ಕಾರಿನ ಓನರು ಅವರೊ, ಇಲ್ಲ ನಾವೊ ಎನ್ನುವ ಅನುಮಾನ ಸದಾ ಕಾಡುತ್ತಿರುತ್ತದೆ.. ಅದೇ ರೀತಿ, ಅವರು ತಮ್ಮ ಬಳಿಯಿದ್ದ ಹೊತ್ತಿನಲ್ಲಿ, ತಮ್ಮ ಖಾಸಗಿ ಬಳಕೆಗೆ ಉಪಯೋಗಿಸುವಂತಿಲ್ಲ.. ಯಾಕೆಂದರೆ ಕಾರಿನ ಅಧಿಕೃತ ಅಧಿಕಾರ ನಮ್ಮದು..! ಅಲ್ಲಿಗೆ ಒಂದು ರೀತಿಯ ಎಡಬಿಡಂಗಿ ಪರಿಸ್ಥಿತಿ ಎನ್ನಬಹುದು.. ಅವರದೂ ಅಲ್ಲ, ನಮ್ಮದೂ ಅಲ್ಲ..ಅಷ್ಟೇಕೆ, ಸ್ವಲ್ಪ ರಜೆ ದಿನಗಳು ಬಂತೆಂದರೆ ಡ್ರೈವರನಿಗು ರಜೆ ಹೀಗಾಗಿ ಅವರಿಗೆ ಓವರಟೈಮ್ ಕೊಟ್ಟು ಕರೆಸಿಕೊಳ್ಳಬೇಕು, ಒಂದು ದಿನ ಮೊದಲೆ ಸುದ್ದಿ ಕೊಟ್ಟು.. ” ನಡುವೆ ಬಾಯಿ ಹಾಕಿದ ವಿಲಿಯಂಸ್ ಕಾರಿನ ವ್ಯವಸ್ಥೆಯ ಬಗೆಗಿದ್ದ ತಮ್ಮ ರೊಚ್ಚನ್ನು ಪರೋಕ್ಷವಾಗಿ ಹೊರಹಾಕುತ್ತ ನುಡಿದರು ..

” ಅರೆರೆ.. ವಿಲಿಯಂಸ್.. ಈ ಕಥೆಯ ವಿಲಿಯಂಸ್ ಮತ್ತು ನೀವೂ ಇಬ್ಬರೂ ಒಂದೆ ಅಲ್ಲಾ ಬೇರೆ ಬೇರೆ ಅಂದಿದ್ದೆನಲ್ಲಾ?” ಎಂದ ತಕ್ಷಣ ಮತ್ತೆ ಗೊಳ್ಳೆಂಬ ನಗು ಸಭಾಂಗಣದಲ್ಲಿ, ವಿಲಿಯಂಸ್ ಸಹ ಸೇರಿದಂತೆ.

” ಅದಿರಲಿ.. ವಿಲಿಯಂಸ್ ಹೇಳಿದ ಒಂದು ಮುಖ್ಯವಾದ ಮಾತು ಇಲ್ಲಿ ಗಮನಾರ್ಹ.. ಈಗಿನ ಕಾರ್ಪೋರೇಟ್ ಜಗದಲ್ಲಿ ವೆಚ್ಚ ನಿಯಂತ್ರಣದ ಸಲುವಾಗಿ, ಕಾಸ್ಟ್ ಕಂಟ್ರೊಲಿಂಗಿನ ಹೆಸರಲ್ಲಿ ಎಲ್ಲೆಡೆಯೂ ಈ ತರದ ವ್ಯವಸ್ಥೆಗಳೆ ಜಾರಿಯಲ್ಲಿರುತ್ತವೆ.. ಬಂಡವಾಳ ಹೂಡಿ ಕಾರುಗಳಂತಹ ಆಸ್ತಿ ಖರೀದಿಸಿ ಅವನ್ನು ನೋಡಿಕೊಂಡು ಹೆಣಗಾಡುವ ವೆಚ್ಚಕ್ಕಿಂತ ಈ ಭೋಗ್ಯದ ರೀತಿಯ ಲೀಸ್ಡ್ ಕಾರುಗಳು ಸುಲಭ. ಸ್ವಲ್ಪ ಹೆಚ್ಚು ವೆಚ್ಚ ತಗುಲಿದರು ಒಟ್ಟಾರೆ ಉಸ್ತುವಾರಿಕೆ ಸುಲಭ.. ನಮ್ಮ ಕಥೆಯಲ್ಲು ಇದೇನೂ ಭಿನ್ನವಿಲ್ಲದ ಕಾರಣ, ವಿಲಿಯಂಸ್ ವಿವರಣೆ ನಮಗೆ ಸೂಕ್ತವಾಗಿಯೆ ಹೊಂದುತ್ತದೆಂದು ಭಾವಿಸಬಹುದು..”

” ಈಗ ಕಥೆಯ ಮುಖ್ಯ ಭಾಗಕ್ಕೆ ಬರೋಣ… ಈ ಕಥೆಯ ವಿಲಿಯಂಸ್ ಪಕ್ಕಾ ಕಟ್ಟುನಿಟ್ಟಿನ ಮನುಷ್ಯ.. ಕೆಲಸದ ಪ್ರಕಾರ ನಿಗದಿಯಾಗಿದ್ದ ಸಮಯದಲಷ್ಟೆ ಬಳಸುವವ… ಕೆಲವೊಮ್ಮೆ ರಜೆಯ ದಿನಗಳು ಬಂದಾಗ ಕೂಡ ಕಾರನ್ನ ಸ್ವಂತಕ್ಕೆ ಬಳಸದೆ ಹಾಗೆ ನಿಲ್ಲಿಸಿಕೊಳ್ಳುವ ಗುಣ.. ತುಂಬಾ ಶಿಸ್ತಿನ ಸ್ವಭಾವ. ಆದರೆ ಅಷ್ಟೆ ಮಾನವೀಯ ಕಾಳಜಿಯ ವ್ಯಕ್ತಿ…”

“ಹೈಲೀ ಪ್ರಿನ್ಸಿಪಲ್ಡ್ ಬಟ್ ಪ್ರಾಕ್ಟಿಕಲ್ ಮ್ಯಾನ್ ಲೈಕ್ ಯೂ, ಸರ್..” ಎಂದ ವಿಲಿಯಂಸ್ ಮಾತಿಗೆ ಈ ಬಾರಿ ಯಾರೂ ನಗದಿದ್ದರು ಕೆಲವು ಮುಖಗಳ ಮೇಲೆ ಕಂಡೂ ಕಾಣದಂತೆ ಹಾದುಹೋದ ಮಂದಹಾಸದ ಮುಗುಳ್ನಗೆಯನ್ನೆ ಗಮನಿಸುತ್ತ ನಾನು ಮುಂದುವರೆಸಿದೆ..

“ಹೀಗಿರುವಾಗ ಎಂದಿನಂತೆ ಆ ಸಲವೂ ಒಂದೆರಡು ರಜೆ ದಿನಗಳು ಬಂದಾಗ ವಾರದಕೊನೆಯೂ ಸೇರಿ ನಾಲ್ಕು ದಿನಗಳ ಒಟ್ಟು ರಜೆಯಿತ್ತು..”

” ವಾಹ್ ಏ ನೈಸ್ ವೀಕೆಂಡ್ ಟ್ರಿಪ್..!” ವಿಲಿಯಂಸ್ ಮತ್ತೆ ನುಡಿದರು.

” ಆಫ್ ಕೋರ್ಸ್.. ಆದರೆ ನಮ್ಮ ವಿಲಿಯಂಸ್ ಯಾವ ರಜೆಯಲ್ಲೂ ಅದನ್ನು ಬಳಸಿದವರೆ ಅಲ್ಲ.. ಈ ಬಾರಿಯೂ ಅವರದಕ್ಕೆ ಹೊರತಾಗಿರಲಿಲ್ಲ.. ಆದರೆ ಈ ಸಾರಿ ಒಂದು ವಿಚಿತ್ರ ನಡೆಯಿತು.. ರಜೆಗೆ ಒಂದು ದಿನ ಮೊದಲು ಆ ಲೀಸ್ ಡ್ರೈವರು ಬಂದವನೆ ಕೇಳಿದ – ‘ಸಾರ್ ನೀವು ಹೇಗೂ ರಜೆಯಲ್ಲಿ ಕಾರು ಬಳಸುವುದಿಲ್ಲ, ಆ ರಜೆಯ ಒಂದು ದಿನ ನಾನು ನನ್ನ ಕುಟುಂಬದ ಜತೆ ಒಂದು ಟ್ರಿಪ್ಪು ಹೋಗಿ ಬರಬೇಕೆಂದುಕೊಂಡಿದ್ದೇನೆ, ನೀವು ಅನುಮತಿ ಕೊಟ್ಟರೆ.. ನೀವು ಹೇಗೂ ಕಾರು ಬಳಸುವುದಿಲ್ಲವಲ್ಲ ? ಅನ್ನೊ ಕಾರಣಕ್ಕೆ..’ ಅಂತ ಕೇಳಿದ..” ಎಂದು ಹೇಳಿ ನಿಲ್ಲಿಸಿದೆ.

ನಾನು ಮಾತು ನಿಲ್ಲಿಸುತ್ತಿದ್ದಂತೆ ‘ಗುಜುಗುಜು’ ಕೇಳಿಬಂತು.. ಅದು ಸ್ವಲ್ಪ ಕಡಿಮೆಯಾಗುವ ಹೊತ್ತಿಗೆ ಮತ್ತೆ ಜುಬೇದಾಳ ದನಿ ಕೇಳಿಸಿತು – “ಒಳ್ಳೆ ಇಂಟ್ರೆಸ್ಟಿಂಗ್ ಸಿಚುಯೇಶನ್.. ಒಬ್ಬ ಜವಾಬ್ದಾರಿ ಇರೊ ಅಧಿಕಾರಿಯಾಗಿ ಯಾವ ತರಹ ರೆಸ್ಪಾಂಡ್ ಮಾಡ್ತಾರೆ ಅನ್ನೋದ್ ಒಳ್ಳೆ ಕೇಸ್ ಇನ್ ಪಾಯಿಂಟ್ ಆಗುತ್ತೆ..”

” ರೈಟ್ .. ನಾನು ಶುರುವಿನಲ್ಲಿ ಹೇಳಿದ್ದ ನಿರ್ಧಾರ ಮಾಡಲು ಕಷ್ಟವಾಗೊ ಎಷ್ಟೊ ಸಂಧರ್ಭಗಳು ಇರುತ್ತವೆ ಎಂದಿದ್ದೆನಲ್ಲವೆ? ಇದು ಅಂತದ್ದೇ ಒಂದು ಅಂದುಕೊಳ್ಳೋಣ… ಇಲ್ಲಿ ಹುಟ್ಟಿಕೊಳ್ಳುವ ಸಂದಿಗ್ದಗಳನ್ನು ನಿಭಾಯಿಸೋದು ಅಷ್ಟು ಸುಲಭವಲ್ಲ.. ಮೊದಲಿಗೆ ಆ ಡ್ರೈವರನ ವಿಷಯ – ಕಾರು ಅವನ ಬಳಿಯೆ ಇರುವಾಗ ಅವನು ಯಾರಿಗೂ ಗೊತ್ತಾಗದ ರೀತಿಯಲ್ಲಿ, ಯಾವ ರೀತಿಯಲ್ಲಾದರೂ ಮಿಸ್ ಯೂಸ್ ಮಾಡಬಹುದು, ಏನು ಬೇಕಾದರು ಕಥೆ ಕಟ್ಟಿ ಏಮಾರಿಸಬಹುದು.. ಆದರೆ ಇಲ್ಲಿ ಬಂದು ನಿಜಾಯತಿಯಿಂದ ಅನುಮತಿ ಕೇಳುತ್ತಿರುವುದು ವಿಶೇಷ ಗುಣವಲ್ಲವೆ ? ಅನುಮತಿಸುವ ಮೂಲಕ ಅದಕ್ಕೆ ಪ್ರೋತ್ಸಾಹ ನೀಡಬೇಕೊ, ಬೇಡವೊ ? ಎನ್ನುವ ಸಂದಿಗ್ದ ಒಂದೆಡೆಯಾದರೆ ಕಂಪನಿಗೆ ಸೇರಿದ ವಸ್ತುವನ್ನು ಅವನಿಗೆ ಕೊಟ್ಟರೆ ಅದು ನೀತಿ, ನಿಯಮಾವಳಿಯನ್ನು ಮುರಿದಂತಲ್ಲವೆ ? ಎನ್ನುವ ಮತ್ತೊಂದು ಸಂದಿಗ್ದ.. ಹೇಗೂ ಬಳಸದೆ ಇರುವ ಕಾರನ್ನು ತಾನು ಬಳಸುವ ಬದಲು ಅವನಿಗೆ ಬಳಸಲು ನೀಡಿದರೇನು ತಪ್ಪು? ಎನ್ನುವ ವಾದವೂ ಸೇರಿಕೊಂಡು ತೀರಾ ಸಂದಿಗ್ದಕರ ಪರಿಸ್ಥಿತಿ  ಹುಟ್ಟಿಕೊಂಡಂತಾಗಲಿಲ್ಲವೆ ? ಈ ಪರಿಸ್ಥಿತಿಯಲ್ಲಿ ಅವನ ನಿರ್ಧಾರ ಏನಾಗಿರಬೇಕೆಂದು ನೀವೆ ಹೇಳಿ…” ಎಂದು ಮಾತು ನಿಲ್ಲಿಸಿದೆ..

ಸುಮಾರು ಹೊತ್ತು ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಕೆಲವರು ಡ್ರೈವರನಿಗೆ ಅನುಮತಿ ಕೊಡುವುದೆ ಸರಿಯೆಂದರೆ ಮತ್ತೆ ಕೆಲವರು ಅದು ಸರಿಯಲ್ಲ, ಸಲ್ಲದು ಎನ್ನುವ ನಿಲುವು. ಕೊನೆಗೆ ಐದಾರು ಜನರು ಮಾತಾಡಿದ ಮೇಲೆ ಒಟ್ಟಾರೆ ಅನುಮತಿ ಕೊಡುವುದೆ ಸರಿಯೆನ್ನುವುದು ಹೆಚ್ಚು ಜನರ ಅಭಿಪ್ರಾಯವೆಂದಾದಾಗ ನಾನು ಮತ್ತೆ ಮಾತು ಮುಂದುವರೆಸಿದೆ.

” ವಿಲಿಯಂಸ್ ಕೂಡ ಕೊನೆಗೆ ಇದೇ ರೀತಿ ನಿಮ್ಮ ಹಾಗೆ ಅಭಿಪ್ರಾಯ ಪಟ್ಟು ಅನುಮತಿ ಕೊಟ್ಟುಬಿಟ್ಟ… ಅದು ಹಾಗೆ ನಡೆದು ಮುಗಿದಿದ್ದರೆ ಎಲ್ಲಾ ಸರಿಯಿರುತ್ತಿತ್ತೇನೊ? ಡ್ರೈವರನ ಕಾರ್ಯ ನಿಷ್ಠೆ ಹೆಚ್ಚಿದಂತಾಗುತ್ತಿತು, ಜತೆಗೆ ತೀರಾ ದುರುಪಯೋಗ ಅನ್ನುವ ಹಾಗೂ ಇರುತ್ತಿರಲಿಲ್ಲ.. ಆದರೆ, ಅವನ ಕುಟುಂಬದ ಜತೆ ಅವನು ಹೋಗಿದ್ದ ದಿನವೆ ಕಾರು ಅಪಘಾತಕ್ಕೊಳಗಾಗಿ ತೀವ್ರತರದ ಗಾಯಗಳಾಗಿ ಅವರೆಲ್ಲ ಚಿಕಿತ್ಸೆ ಪಡೆಯಬೇಕಾಗಿ ಬಂತು.. ಕಾರೂ ಸಹ ತೀವ್ರ ತರದಲ್ಲಿ ಜಖಂಗೊಂಡಿದ್ದರಿಂದ , ಲೀಸಿನ ಕಂಪನಿ, ವಿಲಿಯಂಸಿನ ಕಂಪನಿ, ಡ್ರೈವರನ ಕುಟುಂಬ, ಇನ್ಶೂರೆನ್ಸಿನ ಕಂಪನಿ- ಎಲ್ಲರೂ ಭಾಗಿಗಳಾಗಿ ಬರಬೇಕಾಯ್ತು. ಅವರಲ್ಲಿ ಎದುರಿಸಿದ ಮೊದಲ ಪ್ರಶ್ನೆ ಈ ಪ್ರಯಾಣಕ್ಕೆ ಅನುಮತಿ ಕೊಟ್ಟದ್ದು ಯಾರು? ಅದು ಡ್ರೈವರನ ಸ್ವಂತ ನಿರ್ಧಾರವೆ ಅಥವಾ ಮೊದಲೆ ಅನುಮತಿ ಪಡೆದೆ ಹೋಗಿದ್ದನೆ ? ಎನ್ನುವುದು.. ತನ್ನ ಕುಟುಂಬದ ಉಪಯೋಗಕ್ಕೆ ಬಳಸಿಕೊಂಡಿದ್ದೆ ಆದಲ್ಲಿ ಅದು ನಿಗದಿತ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದ ಪ್ರಕ್ರಿಯೆಯಾಗುವ ಕಾರಣ – ಇನ್ಶೂರೆನ್ಸ್ ಇತ್ಯಾದಿಗಳ ನಿಭಾವಣೆ ಸುಲಭವಾಗುವುದಿಲ್ಲ. ಅಂದರೆ ಇದು ಹಣಕಾಸಿನ ಪರಿಗಣನೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಂಪನಿಗೂ ದೊಡ್ಡ ತಲೆನೋವಿನ ಕೆಲಸ. ಫಲಿತ ಏನೇ ಇರಲಿ, ಇದರ ಮೂಲ ಜವಾಬ್ದಾರಿ ಅಧಿಕಾರಿಯದಾದ ಕಾರಣ ಅದು ಹೇಗೆ ಅನುಮತಿ ಕೊಟ್ಟರೆಂಬುದು ಶಿಸ್ತುಪಾಲನೆಯ ವಿಷಯವಾಗಿಬಿಡುತ್ತದೆ – ಅದೂ ತನ್ನ ಕುಟುಂಬದವರಾರೂ ಜತೆಗಿರದ ಹೊತ್ತಲಿ. ಕೆಳಗಿನ ಸ್ತರದ ನೌಕರನಾಗಿ ಅನುಮತಿ ಕೇಳಿದ ಡ್ರೈವರನಿಗಿಂತ ಮಿಕ್ಕವರ ಪಾತ್ರವೆ ಹೆಚ್ಚು ಗಹನತೆಯದಾಗಿಬಿಡುವ ಸಂಧರ್ಭ, ಸನ್ನಿವೇಶ.. ಒಂದು ವೇಳೆ ಏನೂ ಆಗದೆ ಎಲ್ಲಾ ಸುಲಲಿತವಾಗಿ ನಡೆದುಹೋಗಿದ್ದಿದ್ದರೆ, ಯಾರ ಅರಿವಿಗೂ ಬರದಂತೆ, ಯಾವ ತೊಡಕು ತೊಂದರೆಯೂ ಇರದಂತೆ ಎಲ್ಲಾ ಮುಗಿದು ಹೋಗಿರುತ್ತಿತ್ತು. ಆದರೆ ಈ ಒಂದು ಅಪಘಾತದ ಅನಿರೀಕ್ಷಿತ ತಿರುವು ಎಲ್ಲವನ್ನು ಬುಡಮೇಲು ಮಾಡಿ ಹೊಸತರದ ಅನಿಶ್ಚಿತತೆ, ಸಂದಿಗ್ಧಗಳನ್ನು ಹುಟ್ಟುಹಾಕಿ ಬಿಟ್ಟಿತ್ತು ಎಲ್ಲರಲ್ಲೂ…”

Confusion

ಈಗ ಎಲ್ಲರ ಮುಖದ ಮೇಲಿದ್ದ ಅರೆಬರೆ ಗೊಂದಲ, ಪ್ರಶ್ನಾರ್ಥಕಗಳನ್ನು ಗಮನಿಸುತ್ತ ನಾನು ಮತ್ತಷ್ಟು ನೇರವಾಗಿ ವಿವರಿಸುವುದು ವಾಸಿಯೆನಿಸಿ ಅದೇ ವಾದ ಸರಣಿಯನ್ನು ಇನ್ನಷ್ಟು ಹಿಗ್ಗಿಸುತ್ತಾ ನುಡಿದೆ,”ಅಪಘಾತದ ಹಿನ್ನಲೆ ಇರದಿದ್ದಾಗ ನೀವೆಲ್ಲರು ಹೆಚ್ಚು ಕಡಿಮೆ ವಿಲಿಯಂಸಿನ ನಿರ್ಧಾರಕ್ಕೆ ಸಹಮತ ಕೊಟ್ಟಿದ್ದಿರಿ. ಈಗ ಈ ಅಪಘಾತದ ಸಾಧ್ಯತೆ ಗೊತ್ತಾದ ಮೇಲೆ ನಿಮಗೆ ಅಲ್ಲಿರುವ ‘ಹೆಚ್ಚುವರಿ ರಿಸ್ಕಿನ’ ಅರಿವಾಗಿದೆಯಲ್ಲವೆ ? ಈ ಹೆಚ್ಚುವರಿ ತಿಳುವಳಿಕೆಯ ಅನುಕೂಲ ಪಡೆದ ಮೇಲೆ ನಿಮ್ಮ ಮೂಲ ನಿರ್ಧಾರದಲ್ಲೇನಾದರು ಬದಲಾವಣೆ ಇರುತ್ತಿತ್ತಾ ? ಅಥವಾ ಮೊದಲಿನ ನಿರ್ಧಾರಕ್ಕೆ ಬದ್ಧರಾಗಿಯೆ ಉಳಿಯುತ್ತಿದ್ದಿರಾ ? ಯಾವುದೇ ನಿರ್ಧಾರವೆ ಆದರು ಅದರ ಸಮರ್ಥನೆಯನ್ನು, ಜಸ್ಟಿಫಿಕೇಷನ್ನನ್ನು ಹೇಗೆ ಮಾಡುತ್ತಿದ್ದಿರಿ ಎನ್ನುವುದು ನಿಜಕ್ಕು ನಾಯಕತ್ವದ ಸತ್ವಕ್ಕೆ ಸಂಬಂಧಿಸಿದ ವಿಷಯ.. ಸೋ ಯುಸ್ ಯುವರ್ ವೋನ್ ಕಾನ್ಷಿಯಸ್ ಅಂಡ್ ಕಮ್ ಟು ಎ ಡಿಸಿಶನ್.. ಆಗ ನಿಮಗೂ ಅರ್ಥವಾಗುತ್ತದೆ, ನಾನು ಏಕೆ ನಿರ್ಧಾರ ಕೈಗೊಳ್ಳುವ ಕೆಲಸ ಸುಲಭವಲ್ಲ ಎಂದು ಹೇಳಿದೆನೆಂದು.. ಅದರ ಜತೆಗೆ ಮತ್ತೊಂದು ತಾತ್ವಿಕ ಪ್ರಶ್ನೆ ಸಹ – ಈ ಕೇಸಿನ ಕೊನೆಯಲ್ಲಿ ಲೀಡರಶಿಪ್ ದೃಷ್ಟಿಯಿಂದ ಮತ್ತು ವೈಯಕ್ತಿಕವಾಗಿ ತಮ್ಮನ್ನು ಕಾಪಾಡಿಕೊಳ್ಳುವ ಪರಿಗಣನೆಯಿಂದ ಹೇಳುವುದಾದರೆ ವಿಲಿಯಂಸ್ ಯಾವ ನಿಲುವು ತೆಗೆದುಕೊಳ್ಳಬೇಕು ? ಡ್ರೈವರನಿಗೆ ತಾವು ಅನುಮತಿ ಕೊಟ್ಟಿದ್ದು ನಿಜವೆಂದು ಸತ್ಯ ಹೇಳಬೇಕೊ ? ಅವನು ಕಾರನ್ನು ವೈಯಕ್ತಿಕ ಬಳಕೆಗೆ ಕೊಂಡೊಯ್ದ ವಿಷಯ ತನಗೆ ಗೊತ್ತಿರಲಿಲ್ಲವೆಂದು ಸುಳ್ಳು ಹೇಳಿ ತಮ್ಮನ್ನು ಪಾರು ಮಾಡಿಕೊಳ್ಳಬೇಕೊ ? ಯಾವುದು ಸರಿಯಾದ ಪ್ರಾಕ್ಟಿಕಲ್ ದಾರಿ? ಇವೆರಡು ಅಲ್ಲದ ಮತ್ತಾವುದಾದರು ಸಾಧ್ಯತೆಗಳೂ ಇರಬಹುದೆ ? ಹೀಗೆ ಎಲ್ಲವನ್ನು ಮಥನ ಮಾಡಿ, ಚಿಂತನೆ ನಡೆಸಿ – ದೆನ್ ಯು ವಿಲ್ ಅಂಡರ್ ಸ್ಟ್ಯಾಂಡ್ ದಿ ಡೈಲೆಮ ಆಫ್ ಯುವರ್ ಬಾಸಸ್ ಅಂಡ್ ಲೀಡರ್ಸ್ ಬೆಟರ್ ಅಂಡ್ ದಿ ಡಿಫಿಕಲ್ಟಿ ದೇ ಗೋ ಥ್ರೂ..”

ಹೀಗೆ ಹೇಳಿ ನಾನು ಕಥೆ ನಿಲ್ಲಿಸುತ್ತಾ ನುಡಿದೆ, ” ದಿಸ್ ಇಸ್ ವೇರ್ ದ ಸ್ಟೋರಿ ಎಂಡ್ಸ್.. ಇಲ್ಲಿದೆ ನೋಡಿ ನಿಮ್ಮ ಹೋಂವರ್ಕ್.. ಈ ಅಪಘಾತದ ಹಿನ್ನಲೆಯನ್ನು ಪರಿಗಣಿಸಿ, ನೀವು ವಿಲಿಯಂಸ್ ಆಗಿದ್ದರೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಿರಿ ಎಂದು ಯೋಚಿಸಿ …” ಎಂದು ನನ್ನ ಮಾತು ಮುಗಿಸಿದೆ.

ಆ ಹೊತ್ತಿಗೆ ಸರಿಯಾಗಿ ಟೀ ಬ್ರೇಕ್ ಆದ ಕಾರಣ ಎಲ್ಲರು ಅಲ್ಲಿಂದ ಹೊರಬಂದರು. ನನ್ನ ಹಿಂದೆಯೆ ಬಂದ ವಿಲಿಯಂಸ್ ಕುತೂಹಲದಿಂದ, ” ಮಿಸ್ಟರ್. ಭಾಗವತ್. ನನಗೇನೊ ಇದು ನಿಮ್ಮ ಡ್ರೈವರನ ಕಥೆಯೆ ಅನಿಸಿತು, ಹೌದಾ ?” ಎಂದು ಕೇಳಿದ. ನಾನು ನಗುತ್ತ ” ಅದೆಲ್ಲ ಆಫ್ ದಿ ರೆಕಾರ್ಡ್.. ನಿನಗೂ ಗೊತ್ತು, ಅಫಿಶಿಯಲ್ ಆಗಿ ಏನೂ ಹೇಳುವಂತಿಲ್ಲಾ” ಎಂದೆ.

” ನಾವೀಗ ಬ್ರೇಕ್ ಟೈಮಿನಲ್ಲಿದ್ದೀವಿ.. ಅಫಿಶಿಯಲ್ ಅಲ್ಲ..ಪರವಾಗಿಲ್ಲ ನನಗೆ ಮಾತ್ರ ಹೇಳಿ ವೈಯಕ್ತಿಕವಾಗಿ ” ಅಂದ.

ನಾನು ಮುಗುಳ್ನಕ್ಕು , ” ಹೌದು ಆಗಾಗ ನನ್ನ ಡ್ರೈವರನಿಗೆ ನಾನೀ ರೀತಿಯ ಅನುಮತಿ ಕೊಡಬೇಕಾಗುತ್ತದೆ.. ಡಿಸ್ಕ್ರಿಶನ್ ಬೇಸಿಸ್ ಮೇಲೆ..” ಎಂದೆ.

” ಹಾಗಾದ್ರೆ ಈ ಆಕ್ಸಿಡೆಂಟ್ ಆಗಿದ್ದು ನಿಜವಿರಬೇಕಲ್ಲಾ? ಹೇಗೆ ಡೀಲ್ ಮಾಡಿದ್ರಿ ?”

ನಾನು ಜೋರಾಗಿ ನಕ್ಕೆ..” ನೋ ವಿಲಿಯಂಸ್.. ನನಗೆ ಯಾವಾಗಲೂ ಆ ರೀತಿಯ ಸಂಧರ್ಭ ಬಂದಿರಲೆ ಇಲ್ಲ..ಅದಕ್ಕೆ ಅವಕಾಶ ಆಗದ ಹಾಗೆಯೆ ನಾನೆಲ್ಲಾ ನಿರ್ಧಾರ ಕೈಗೊಳ್ಳುವುದು ”

“ಮತ್ತೆ ಈ ಕಥೆ..? ಪ್ಲೀಸ್ ಟೆಲ್ ಮೀ ದ ಸೀಕ್ರೇಟ್ ಹೌ ಯೂ ಮ್ಯಾನೇಜ್ ಇಟ್”

ನಾನು ಅವನನ್ನೆ ಆಳವಾಗಿ ದಿಟ್ಟಿಸಿದೆ…” ವಿಲಿಯಂಸ್…ಇವರೆಲ್ಲ ನಮ್ಮ ಭವಿಷ್ಯದ ಸೂಪರ್ ಮ್ಯಾನೇಜರುಗಳು..ಇವರೆಲ್ಲ ಪುಸ್ತಕದ ಬದನೆಕಾಯಿಗಳ ಹಾಗೆ ರೂಲ್ಸ್ ಬುಕ್ ಅನುಕರಿಸೊ ಯಂತ್ರಗಳು ಆಗಬಾರದಲ್ಲವಾ? ನಮ್ಮ ತರಬೇತಿಗಳಲ್ಲಿ ಕೊಡೊ ಥಿಯರಿ ಮಾತ್ರ ಸಾಲದು, ಪ್ರಾಕ್ಟಿಕಲ್ ಸಿಚುಯೇಶನ್ ಗೊತ್ತಾಗಬೇಕು..ಕಾನ್ಫ್ಲಿಕ್ಟ್ ಮ್ಯಾನೇಜ್ಮೆಂಟ್, ರಿಸ್ಕ್ ಮ್ಯಾನೇಜ್ಮೆಂಟ್, ನೇಗೋಶಿಯೆಶನ್ ಸ್ಕಿಲ್ಲ್ಸ್ ಇವೆಲ್ಲ ಕ್ಲಾಸ್ ರೂಮಿನ ತರಬೇತಿಯಿಂದ ಬರುವುದಿಲ್ಲವಲ್ಲಾ? ಆ ಅಪಘಾತದ ಚಿಂತನೆ ಅವರನ್ನು ಬೇರೆಲ್ಲಾ ತರದ ಕೋನಗಳಲ್ಲು ಚಿಂತಿಸುವಂತೆ ಮಾಡಲಿ ಎಂದು ಆ ಟ್ವಿಸ್ಟ್ ಕೊಟ್ಟೆ ಅಷ್ಟೆ..” ಎನ್ನುತ್ತ ಕಾಫಿ ಲೋಟವನ್ನು ಕೈಗೆತ್ತಿಕೊಂಡೆ..”ಅಂಡ್ ಆಸ್ ಫಾರ್ ಆಸ್ ಹೌ ಐ ಮ್ಯಾನೇಜ್ ಇಟ್ – ದಟ್ ಇಸ್ ಮೈ ಜಡ್ಜ್ ಮೆಂಟ್ ಅಂಡ್ ಟ್ರೇಡ್ ಸೀಕ್ರೆಟ್.. ಅದು ನನ್ನದಾಗಿಯೆ ಇರಲಿ. ಲೆಟ್ ಅಸ್ ನಾಟ್ ಸ್ಪೂನ್ ಫೀಡ್ ಎವೆರಿಥಿಂಗ್ ” ಎಂದೆ ಕಿರುನಗುತ್ತ.

“ಸ್ಮಾರ್ಟ್ ಟ್ರಿಕ್” ಎಂದು ತಾನೂ ಕಾಫಿ ಕೈಗೆತ್ತಿಗೊಂಡ ವಿಲಿಯಂಸ್ ಮೆಚ್ಚುಗೆಯ ನೋಟದಲ್ಲಿ ನನ್ನನ್ನು ದಿಟ್ಟಿಸುತ್ತ.

 

– ನಾಗೇಶ ಮೈಸೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: