ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 1
ಒಂದು ಕೈಚೀಲ ಮತ್ತು ಇನ್ನೊಂದು ಬೆನ್ನುಚೀಲ ಹಿಡಿದುಕೊಂದು ಒಬ್ಬೊಬ್ಬರಾಗಿ ಮೈಸೂರಿನ ರೈಲ್ವೇ ಸ್ಟೇಷನ್ ಪ್ಲಾಟ್ ಫ಼ಾರ್ಮ್ ಗೆ ಬರತೊಡಗಿದರು. ಪರಸ್ಪರ ಕುಶಲೋಪರಿ ಮಾತನಾಡುತ್ತಾ ಇರುವಷ್ಟರಲ್ಲಿ ಯೈ. ಎಚ್. ಎ. ಐ ಬಳಗದ 24 ಮಂದಿಯ ಜತೆಯಾದೆವು. ಅಂದು ಸೆಪ್ಟೆಂಬರ್ 19, ಸಂಜೆ 0630 ಘಂಟೆ ಸಮಯ. ನಾವೆಲ್ಲಾ ಕಾಯುತ್ತಿದ್ದುದು ಮೈಸೂರಿನಿಂದ ಹೊರಡುವ ‘ಹಂಪಿ ಎಕ್ಸ್ ಪ್ರೆಸ್ಸ್’ಗಾಗಿ. ಈ ಕಾರ್ಯಕ್ರಮದ ರೂವಾರಿಯಾಗಿದ್ದ ಶ್ರೀ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ವೈದ್ಯನಾಥನ್ ಅವರ ನೇತೃತ್ವದಲ್ಲಿ, ನಾವೆಲ್ಲರೂ ಆಂಧ್ರಪ್ರದೇಶದ ‘ಯಾಗಂಟಿ, ಅಹೋಬಲ ಮತ್ತು ಬೆಲಂ ಕೇವ್ಸ್’ ಗಳನ್ನು ನೋಡಿ ಬರಲು ಉತ್ಸುಕರಾಗಿದ್ದೆವು.
ಸ್ವಲ್ಪ ತಡವಾಗಿಯೇ ಬಂದ ರೈಲು ಹೊರಟಿತು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದುದರಿಂದ ಬೋಗಿ ತುಂಬಾ ನಮ್ಮ ಬಳಗವೇ ಇದ್ದಂತಿತ್ತು. ರೈಲು ಅದರ ಪಾಡಿಗೆ ಹಳಿಯ ಮೇಲೆ ಓಡುತ್ತಿದ್ದರೆ, ನಮ್ಮ ತಂಡದ ಕೆಲವು ಹಾಸ್ಯಪ್ರಿಯರಿಂದಾಗಿ ಬೋಗಿಯೊಳಗೂ ಅವಿರತವಾಗಿ ‘ರೈಲು’ ಓಡುತ್ತಿತ್ತು! ರಾತ್ರಿಯೂಟವಾಗಿ ಚಪಾತಿ-ದಾಲ್ ಸೇವಿಸಿ, ವಿರಮಿಸಿದೆವು. ನಿಗದಿತ ಸಮಯದ ಪ್ರಕಾರ ಮುಂಜಾನೆ 4 ಘಂಟೆಗೆ ನಾವು ಇಳಿಯಬೇಕಾದ ‘ಗುತ್ತಿ’ ಸ್ಟೇಷನ್ ತಲಪಬೇಕಾಗಿತ್ತು, ಆದರೆ 6 ಘಂಟೆಗೆ ತಲಪಿದೆವು.
ಗುತ್ತಿಯಲ್ಲಿ ಇಳಿದು, ಅಲ್ಲಿಂದ ಜೀಪ್ ನಲ್ಲಿ ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ, ಯಾಗಂಟಿ ತಲಪಿದೆವು. ಯಾಗಂಟಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಪುಟ್ಟ ಊರು. ಅಲ್ಲಿ ಹೋಟೆಲ್ ಒಂದರಲ್ಲಿ ಉಪಾಹಾರ ಸೇವಿಸಿ ಅಲ್ಲಿನ ದೇವಾಲಯಗಳಿಗೆ ಭೇಟಿ ಕೊಟ್ಟೆವು.
ಯಾಗಂಟಿಯಲ್ಲಿ ಪ್ರಸಿದ್ಧವಾದ ಉಮಾ ಮಹೇಶ್ವರ ದೇವಾಲಯವಿದೆ. ಸ್ಥಳ ಪುರಾಣದ ಪ್ರಕಾರ ಅಗಸ್ತ್ಯ ಋಷಿಗಳು ತಮ್ಮ ದಕ್ಷಿಣ ದೇಶದ ಪ್ರಯಾಣದ ಸಂದರ್ಭದಲ್ಲಿ ಯಾಗಂಟಿಯಲ್ಲಿ ಒಂದು ವಿಷ್ಣುವಿನ ಮಂದಿರವನ್ನು ಕಟ್ಟಿಸಲು ಬಯಸಿದರು. ಅವರಿಗೆ ಇಲ್ಲಿನ ಗುಹೆಯಲ್ಲಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವೊಂದು ದೊರೆಯಿತು. ಅದೇ ವಿಗ್ರಹವನ್ನು ಪೂಜಿಸಿ ಪ್ರತಿಸ್ಠಾಪಿಸಬೇಕೆಂದು ಸಂಕಲ್ಪ ಮಾಡಿದರು. ಆದರೆ ಆ ಮೂರ್ತಿಯ ಕಾಲಿನ ಬೆರಳು ಮುರಿದಿದ್ದುರಿಂದ ಬೇಸರಗೊಂಡ ಅಗಸ್ತ್ಯರು ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು.
ಅಗಸ್ತ್ಯರ ತಪಸ್ಸಿಗೆ ಶಿವ ಪ್ರತ್ಯಕ್ಶನಾಗಿ, ಈ ಸ್ಥಳವು ಕೈಲಾಸವನ್ನು ಹೋಲುವುದರಿಂದ ಇಲ್ಲಿ ಶಿವಪೂಜೆಯೇ ಸೂಕ್ತವೆಂದನಂತೆ. ಆಗ ಅಗಸ್ತ್ಯರು ಶಿವನು ಪಾರ್ವತಿಯೊಂದಿಗೆ ಇಲ್ಲಿ ನೆಲೆಸಬೇಕೆಂದು ಬೇಡಿಕೊಂಡರು. ಶಿವನು ಒಪ್ಪಿ ಉಮಾ-ಮಹೇಶ್ವರನಾಗಿ ನೆಲೆಗೊಂಡ. ಶಿವನೊಟ್ಟಿಗೆ ನಂದಿಯೂ ಬಂತು. ಹಾಗಾಗಿ, ಯಾಗಂಟಿಯಲ್ಲಿ ಶಿವ, ಪಾರ್ವತಿ ಮತ್ತು ನಂದಿಯು ಮುಖ್ಯವಾಗಿ ಪೂಜಿಸಲ್ಪಡುತ್ತಾರೆ.
ಇನ್ನೊಂದು ಕತೆಯ ಪ್ರಕಾರ ಇಲ್ಲಿ ಚಿಟ್ಟೆಪ್ಪ ಎಂಬ ಭಕ್ತರೊಬ್ಬರು ಶಿವನನ್ನು ಆರಾಧಿಸುತ್ತಿದ್ದರಂತೆ. ಆಗ ಶಿವನು ಹುಲಿಯ ರೂಪದಲ್ಲಿ ಪ್ರತ್ಯಕ್ಷನಾದನು. ಶಿವನೆ ಹುಲಿಯ ರೂಪದಲ್ಲಿದ್ದನೆಂದು ಗೊತ್ತಾದ ಚಿಟ್ಟೆಪ್ಪ ಸಂತೋಷಾತಿರೇಕದಿಂದ ‘ನೇಕಂಟಿ ಶಿವನು‘, ನಾ ಕಂಡೆ ಶಿವನನ್ನು ಎಂದು ಉದ್ಗರಿಸಿದನಂತೆ. ನೇಕಂಟಿ ಎಂಬ ಪದವು ಕಾಲಾನಂತರದಲ್ಲಿ ‘ಯಾಗಂಟಿ’ ಯಾಗಿ ಈ ಸ್ಥಳದ ಹೆಸರಿಗೆ ಕಾರಣವಾಯಿತು.
ಯಾಗಂಟಿ ದೇವಾಲಯವನ್ನು 15 ನೆಯ ಶತಮಾನದಲ್ಲಿ ವಿಜಯನಗರ ದೊರೆಯಾದ ಹರಿಹರ ಬುಕ್ಕರಾಯರ ಕಾಲದಲ್ಲಿ ಕಟ್ಟಲಾದುದೆಂದು ಇತಿಹಾಸವಿದೆ. ಇಲ್ಲಿ ಒಂದು ಸುಂದರವಾದ ಪುಷ್ಕರಿಣಿ ಇದೆ. ದೇವಾಲಯದ ಪಕ್ಕದಲ್ಲಿ ಪರ್ವತಗಳ ಮಧ್ಯೆ ಗುಹಾದೇವಾಲಯಗಳಿವೆ. ಹಚ್ಚ ಹಸಿರಿನ ಕಾಡಿನ ನಡುವೆ ಕೆಂಬಣ್ಣದ ಕಲ್ಲಿನಲ್ಲಿ ನೈಸರ್ಗಿರ್ಕವಾಗಿ ಮೂಡಿ ಬಂದ ಈ ಗುಹೆಗಳು ಮನೋಹರವಾಗಿವೆ. ಸುಮಾರು 100 ಮೆಟ್ಟಿಲುಗಳನ್ನು ಹತ್ತಿ ಮೇಲೇರಿದಾಗ ಅಗಸ್ತ್ಯ ಗುಹೆ ಸಿಗುತ್ತದೆ, ಇಲ್ಲಿ ಅಗಸ್ತ್ಯರು ಶಿವನನ್ನು ಕುರಿತು ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಅವರು ಪೂಜಿಸಿದ ಶಿವಲಿಂಗಕ್ಕೆ ನಾವೂ ಹಾಲೆರೆದೆವು.
ಎರಡನೆಯ ಗುಹೆಗೆ ವೆಂಕಟೇಶ್ವರ ಗುಹೆ ಎಂಬ ಹೆಸರು. ಬಹಳ ಸೊಗಸಾಗಿದೆ. ಪಕ್ಕದಲ್ಲಿಯೇ ವೀರಬ್ರಹ್ಮ ಗುಹೆಯಿದೆ. ಇದು ಎತ್ತರ ಕಡಿಮೆಯಿರುವದರಿಂದ ನಾವು ತಲೆ-ಬೆನ್ನು ಬಾಗಿಸಿಯೇ ಗುಹೆಒಳಗೆ ಹೋಗಬೇಕು. ಸಂತ ವೀರಬ್ರಹ್ಮೇಂದ್ರ ಸ್ಮಾಮಿಯು ಇಲ್ಲಿ ಕಾಲಜ್ಞಾನವನ್ನು ಬರೆದರೆಂದು ನಂಬಿಕೆ.
ಯಾಗಂಟಿ ಕ್ಷೇತ್ರದಲ್ಲಿರುವ ನಂದಿಯ ವಿಗ್ರಹವು ಬೆಳೆಯುತ್ತದೆಯಂತೆ. ನಂಬಿಕೆಯ ಪ್ರಕಾರ ಕಲಿಯುಗದ ಅಂತ್ಯದಲ್ಲಿ ಆ ಕಲ್ಲಿನ ನಂದಿಗೆ ಜೀವ ಬಂದು ಕೂಗಿಕೊಳ್ಳುತ್ತದೆ. ಅಧ್ಯಯನದ ಪ್ರಕಾರ ಆ ನಂದಿಯ ವಿಗ್ರಹವನ್ನು ಕೆತ್ತಿದ ಕಲ್ಲಿಗೆ ಹಿಗ್ಗುವ ಗುಣವಿದ್ದು, ಇದು 20 ವರ್ಷಗಳಲ್ಲಿ ಒಂದು ಇಂಚಿನಷ್ಟು ಬೆಳೆದಿದೆಯಂತೆ.
ಇಲ್ಲಿನ ಇನ್ನೊಂದು ವೈಶಿಷ್ಟ್ಯವೇನೆಂದರೆ ಈ ಉರಲ್ಲಿ ಕಾಗೆಗಳು ಇಲ್ಲದಿರುವುದು. ಇದಕ್ಕೆ ಹಿನ್ನೆಲೆಯಾಗಿ ಪ್ರಚಲಿತವಿರುವ ಕಥೆಯೇನೆಂದರೆ, ಇಲ್ಲಿ ಅಗಸ್ತ್ಯರು ತಪಸನ್ನಾಚರಿಸುತ್ತಿದ್ದಾಗ ಕಾಗೆಗಳು ಕಾಟ ಕೊಡುತ್ತಿದ್ದವಂತೆ. ಇದರಿಂದ ಸಿಟ್ಟಾದ ಅವರು ಕಾಗೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಶಾಪವಿತ್ತರಂತೆ.
ಒಟ್ಟಾರೆಯಾಗಿ ಬಹಳ ಸರಳ ಸುಂದರವಾದ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಯಾಗಂಟಿಯು ಆಸ್ತಿಕರಿಗೆ ತೀರ್ಥಕ್ಷೇತ್ರವಾದರೆ, ಆಸಕ್ತರಿಗೆ ಸಣ್ಣ ಚಾರಣವನ್ನೂ ಒದಗಿಸುತ್ತದೆ. ಪ್ರವಾಸಿಗರಾಗಿ ಹೋಗುವವರಿಗೆ ನಿಸರ್ಗ ಸಿರಿಯ ಜತೆಗೆ ಜೀವನದಲ್ಲಿ ಒಮ್ಮೆಯಾದರು ನೊಡಲೇಬೇಕು ಎಂಬ ಅನುಭೂತಿಯನ್ನು ಮೊಗೆದು ಕೊಡುವ ಸ್ಥಳ ‘ಯಾಗಂಟಿ’. ಸುಮಾರು 2 ಗಂಟೆಗಳ ಕಾಲ ಯಾಗಂಟಿಯಲ್ಲಿ ಕಳೆದು, ನಮ್ಮ ಮುಂದಿನ ಗಮ್ಯ ಸ್ಥಾನವಾಗಿದ್ದ ಅಹೋಬಲದ ಕಡೆಗೆ ಪ್ರಯಾಣಿಸಿದೆವು.
…..ಮುಂದಿನ ಭಾಗದಲ್ಲಿ ‘ನವನಾರಸಿಂಹರಿಗೆ ನಮೋ ನಮ:’
– ಹೇಮಮಾಲಾ.ಬಿ
SUPER AGIDE
ತುಂಬಾ ಒಳಯಾ ಮಾಹಿತಿ
ಈ ಯಾಗಂಟಿ ಗುಹೆಯಂತೆಯೇ ಅಜಂತಾ ಗುಹೆಯ ಕಥೆಯೂ ಹೋಲುತ್ತದೆ.ಅಲ್ಲಿ ಕೂಡಾ ಒಂದು ಕಾಗೆಯೂ ನೋಡಲು ಸಿಗುವುದಿಲ್ಲ. ಇಲ್ಲಿಯೂ ಒಂದು ಹುಲಿಯನ್ನುಬೇಟೆಯಾಡುತ್ತಾ ಸ್ಮಿತ್ ಎನ್ನುವವನು ಓಡಿಸಿ ಕೊಂಡು ಹೋಗುತ್ತಾನೆ.ಅಹುಲಿ ದೊಡ್ಡ ಗಿಡದ ಪೊದೆಯಲ್ಲಿ ನುಸುಳುತ್ತದೆ.ಸ್ಮಿತ್ ಹಿಂಬಾಲಿಸುತ್ತಾನೆ.ಆಗ ಅದರೊಳಗೆ ಈ ಮುಚ್ಚಿಹೋಗಿದ್ದ ಅಜಂತಾ ಗುಹೆಗಳು ಗೋಚರವಾದವು. ಎಂದು ಹೇಳುತ್ತಾರೆ.ಎಷ್ಟೊಂದು ಪ್ರಚಲಿತ ಕಥೆಗಳು ಒಂದಕ್ಕೊಂದು ಹೋಲುತ್ತವೆಯಲ್ಲವೆ?