ಕಲ್ಲಲಿ ಮೂಡಿದ ಕವನ…

Share Button
Shruthi

ಶ್ರುತಿ ಶರ್ಮಾ, ಕಾಸರಗೋಡು.

 

ಮೈಸೂರಿನ ರೂಪಾನಗರ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ, ವೀರಭಾವದಿಂದ ನಿಂತ ಆಂಜನೇಯನ ಏಳೂ ಕಾಲಡಿ ಎತ್ತರದ ಭವ್ಯ ಶಿಲ್ಪವು ಎಂಥವರ ಕಣ್ಣಲ್ಲೂ ಒಂದರೆ ಕ್ಷಣ ಅಚ್ಚರಿ, ಮೆಚ್ಚುಗೆಗಳನ್ನು ತರಿಸುತ್ತದೆ. ಅಷ್ಟು ಶಾಸ್ತ್ರೀಯತೆ, ಸಾಂಪ್ರದಾಯಿಕತೆ, ಕಾವ್ಯಾತ್ಮಕತೆಯಿಂದ ಕೂಡಿರುವ ವಿಗ್ರಹದ ಸೃಷ್ಟಿಕರ್ತನನ್ನು ಅರಸುತ್ತಾ ನಡೆದರೆ ಅದೇ ರೂಪಾನಗರದ 19 ನೇ ಕ್ರಾಸ್ ನ ಮನೆಯ ಅಂಗಳದಲ್ಲಿ ಶತ ಒಡ್ಡು-ಒರಟು ಕಲ್ಲುಗಳಿಗೆ ಹಸನ್ಮುಖತೆಯಿಂದಲೇ ಸವಾಲೊಡ್ಡುತ್ತಿರುವ ಶಿಲ್ಪಿಶ್ರೇಷ್ಠ ಬಡೆಕ್ಕಿಲ ಶ್ಯಾಮಸುಂದರ ಭಟ್ ಕಾಣಸಿಗುತ್ತಾರೆ!

ಸದಾ ನಗುಮೊಗದಿಂದಲೇ ಎಲ್ಲರೊಡನೆ ಬೆರೆಯುವ ಇವರು ಎಳವೆಯಿಂದಲೇ ಕಲ್ಲು, ಉಳಿಗಳೊಡನೆ ಸರಸವಾಡುತ್ತಾ ಕಲ್ಲುಗಳನ್ನು ಸುಂದರ ಮೂರ್ತಿಗಳನ್ನಾಗಿ ಪರಿವರ್ತಿಸುತ್ತಿದ್ದವರು. ಇವರು ಮೂಲತ: ದಕ್ಷಿಣ ಕನ್ನಡದವರು. ತಾಯಿ ಬಡೆಕ್ಕಿಲ ಸರಸ್ವತಿ ಭಟ್, ಹೆಸರಾಂತ ಲೇಖಕಿ, ಅಜ್ಜ ಸೇಡಿಯಾಪು ಕೃಷ್ಣ ಭಟ್ಟರು.

ಶ್ಯಾಮಸುಂದರ ಭಟ್ಟರು ಮೂರರ ಎಳವೆಯಲ್ಲೇ ಪೋಲಿಯೋ ಪೀಡಿತರಾಗಿದ್ದರೂ ಕೂಡಾ, ದೈಹಿಕ ಬಲಕ್ಕಿಂತ ಹಿರಿದು ಮನೋಧಾರ್ಡ್ಯ ಎಂದು ಸಾಧಿಸಿ ತೋರಿಸಿದಂಥವರು. ನಿಜಕ್ಕೂ ಕನ್ನಡಿಗರಾದ ನಾವು ಹೆಮ್ಮೆ ಪಡುವಂಥ ಸಾಧನೆ ಮಾಡಿದ ಭಟ್ಟರ ಕೈಯ್ಯಿಂದ ರೂಪು ಪಡೆದ ಶಿಲ್ಪಗಳು ಉತ್ತರ ಭಾರತ, ಕೇರಳ, ಕರ್ನಾಟಕ, ತಮಿಳ್ನಾಡು, ಆಂಧ್ರ… ಹೀಗೆ ಭಾರತದ ಉದ್ದಗಲಕ್ಕೂ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಿವೆ. ಬಹಳಷ್ಟು ಮೂರ್ತಿಗಳು ಆಸ್ಟ್ರೇಲಿಯಾ ಖಂಡವೊಂದಕ್ಕೇ ಸಾಗಿದೆ! ಹೊರದೇಶಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಪಡೆದಿರುವ ಇವರ ಕೈಯ್ಯಲ್ಲಿ ತಯಾರಾಗಿರುವ ಶಿಲ್ಪಗಳು ಸಾವಿರಕ್ಕೂ ಹೆಚ್ಚು.

Shyamasundara bhat

ಮನೆಯೇ ಪಾಠಶಾಲೆ

ಶ್ಯಾಮಸುಂದರ ಭಟ್ಟರು ಹೇಳುವಂತೆ ಮನೆಯಲ್ಲೇ ಇವರ ಅಕ್ಷ್ತರಾಭ್ಯಾಸ. 7 ನೇ ವಯಸ್ಸಿನಲ್ಲೇ ಕರಕುಶಲ ಕಲೆಗಳನ್ನು ಆಸಕ್ತಿಯಿಂದ ಅಭ್ಯಾಸ ಮಾಡುತ್ತಾ ಸಂತ ಪರಿಕಲ್ಪನೆಗಳನ್ನು ಕಾವ್ಯಾತ್ಮಕವಾಗಿ, ಕಲಾತ್ಮಕವಾಗಿ ತಯಾರು ಮಾಡುವ ಅಭ್ಯಾಸ ಇವರ ಅಜ್ಜನ ಮನೆ ಸೇಡಿಯಾಪಿನ ಪೂರ್ವಿಕರಿಂದ ಬಂದ ಬಳುವಳಿ. ಪ್ರಕೃತಿಯ ಪ್ರತಿ ಸೃಷ್ಟಿಯನ್ನೂ ಪುನರ್ಸೃಷ್ಟಿಸುವಾಗ ಅದರೊಳಗಿನ ಕಾವ್ಯಕ್ಕೆ ರೂಪು ಕೊಡುವಂಥವರು ಭಟ್ಟರು.

ತರಬೇತಿಯತ್ತ ಹೆಜ್ಜೆ

1976-77 ರಲ್ಲಿ ಶ್ರೀ ಗುರು ಆರ್. ಎಂ ಹಡಪದ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರಕಲೆ, ಮಣ್ಣಿನ ಆಕೃತಿಗಳು ಹಾಗೂ ಭಾವ ಶಿಲ್ಪಗಳ ತರಬೇತಿ, ಮುಂದೆ1977-80 ರ ಅವಧಿಯಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಲೆ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ, 1983 ರ ನಂತರ ಶ್ರೀ ವಾದಿರಾಜರ ಮಾರ್ಗದರ್ಶನದಲ್ಲಿ ಜ್ನಾನಾರ್ಜನೆ, ಮುಂದೆ ಪ್ರೊ. ಸಾ. ಕೃ ರಾಮಚಂದ್ರ ರಾಯರ ಬಳಿ ಅಭ್ಯಾಸ ಮುಂದುವರಿಸಿದರು.

ಸಾಕಷ್ಟು ಅನುಭವ, ಗುರುತಿಸುವಿಕೆ, ಅಭ್ಯಾಸ, ಭಾಗವಹಿಸುವಿಕೆ ಹಾಗೂ ಪ್ರದರ್ಶನಗಳೊಂದಿಗೆ ನಿರಂತರ ಸಾಧನೆಗೈಯುತ್ತಿರುವ ಭಟ್ಟರಿಗೆ ಸಂದ ಪುರಸ್ಕಾರಗಳು ನೂರಾರು. ಮೈಸೂರು ದಸರಾ ಮಹೋತ್ಸವದಲ್ಲಿ ಸತತ ನಾಲ್ಕು ವರ್ಷಗಳ ಪ್ರಶಸ್ತಿ ಮತ್ತು ಬಹುಮಾನಗಳು, ಶಾಸ್ತ್ರಿ ಫಔಂಡೇಷನ್ ವತಿಯಿಂದ ನಿರಂತರ ಸಾಧನೆಗಾಗಿರುವ ಪುರಸ್ಕಾರ, 2001ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬಿ. ಇ. ಎಂ. ಎಲ್ ನಿಂದ ನಿರಂತರ ಸಾಧನೆಗಾಗಿರುವ ಸನ್ಮಾನ, ಶಿಲ್ಪಕಲಾ ಅಕಾಡಮಿಯಿಂದ 2014 ರಲ್ಲಿ ಸನ್ಮಾನ, ಹೀಗೆ ಪಟ್ಟಿ ಮುಂದುವರೆಯುತ್ತದೆ.

Shyamsundar bhat

ಕಲಾಕೃತಿಗಳತ್ತ ಒಂದು ನೋಟ

ಸಾವಿರಕ್ಕೂ ಮಿಕ್ಕಿ ಕಲಾಕೃತಿಗಳನ್ನು ತಯಾರಿಸಿರುವ ಶ್ಯಾಮಸುಂದರ ಭಟ್ಟರು ತಮ್ಮ ಕೈಚಳಕವನ್ನು ಪ್ರಥಮ ಬಾರಿಗೆ ಒರೆ ಹಚ್ಚಿದ್ದು ಬರಿಯ ಏಳರ ಎಳವೆಯಲ್ಲಿ! ಕೆರೆ ಮಣ್ಣನ್ನು ಬಿಸಿನೀರ ಒಲೆಯಲ್ಲಿ ಬೇಯಿಸಿ ತಯಾರು ಮಾಡಿದ್ದ ಬುದ್ಧನ ಆ ಪ್ರತಿಮೆ ಅಷ್ಟು ಚಿಕ್ಕ ವಯಸ್ಸಿನಲ್ಲಿದ್ದ ಅವರ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತದೆ.

childhood work clay model-1970-vittal, D,K,at the age of 7 yrs

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯವರು ಶ್ರೀರಂಗಪಟ್ಟಣದ ಬಳಿ ಸ್ಥಾಪಿಸಿದ ಸಪ್ತರ್ಷಿ ವನದಲ್ಲಿ ಚಾಲುಕ್ಯ ಶೈಲಿಯಲ್ಲಿ 24 ಇಂಚಿನ ಸಪ್ತ ಋಷಿಗಳು, ಉಡುಪಿ ಅಷ್ಟಮಠಗಳಲ್ಲೊಂದರಲ್ಲಿರುವ ದಕ್ಷಿಣ ಕನ್ನಡ ಶೈಲಿಯಲ್ಲಿ 36 ಇಂಚಿನ ಕಡೆಗೋಲು ಕೃಷ್ಣ, 30 ಇಂಚಿನ ಮಧ್ವಾಚಾರ್ಯ ವಿಗ್ರಹ, ಶಿವಮೊಗ್ಗ ಜಿಲ್ಲೆಯ “ಪುಮ್ಯ ಬೆಟ್ಟ” ದ ಗಿರಿ ದೇವಾಲಯದ ಮೈಸೂರು ಶೈಲಿಯ ಗಣೇಶನ ವಿಗ್ರಹ, ತುಮಕೂರು ಬಳಿ ದೇವಸ್ಥಾನಕ್ಕೆ ಮೈಸೂರು ಶೈಲಿಯ ಲಕ್ಷ್ಮಿ ವಿಗ್ರಹ, ಮೈಸೂರಿನ ಗಾನ ಭಾರತಿ, ವೀಣೆ ಶೇಷಣ್ಣ ಭವನಕ್ಕೆ ಕಲ್ಲಿನಲ್ಲಿ ವಾಸ್ತವಿಕ ವೀಣೆ, ಹೀಗೆ ನೂರಾರು. ಹೊಯ್ಸಳ, ಪಾಲ, ಚಾಲುಕ್ಯ, ಮೈಸೂರು, ದಕ್ಷಿಣ ಕನ್ನಡ, ಗುಪ್ತ, ಕದಂಬ, ಚೋಳ, ಹೀಗೆ ಹಲವು ಶೈಲಿಗಳಲ್ಲಿ ಇವರ ಕೈಯ್ಯಲ್ಲಿ ರೂಪುಗೊಂಡ ಶಿಲ್ಪಗಳು ದೇಶದುದ್ದಗಲಕ್ಕೂ ಇದೆ. ನಾವು-ನೀವು ಕೈಜೋಡಿಸಿ ಕಣ್ಣು ಮುಚ್ಚಿ ಪ್ರಾರ್ಥಿಸುವಾ ಕಲ್ಲಿನ ರೂಪಗಳಲ್ಲಿ ಎಷ್ಟೋ ಭಟ್ಟರು ರೂಪು ಕೊಟ್ಟಂಥವು!

ಇವರ ನಿರಂತರ ಸಾಧನೆಗೆ ಸ್ಫೂರ್ತಿ, ಸಹಕಾರ ಕೊಡುವವರು ತಾಯಿ ಸರಸ್ವತಿ ಭಟ್, ಸಹಧರ್ಮಿಣಿ ಪೂರ್ಣಿಮಾ. ಶ್ಯಾಮಸುಂದರ ಭಟ್ ಅವರು ಪ್ರತಿ ಬಾರಿ ವಿಗ್ರಹಗಳನ್ನು ತಯಾರು ಮಾಡುವಾಗಲೂ ಅವಲೋಕಿಸಿ, ಅನುಭವಿಸಿ ಆನಂದಿಸುವುದೇ ಖುಷಿ ನೀಡುತ್ತದೆ, ಮಾತ್ರವಲ್ಲ ದೇವಾಲಯದಲ್ಲಿ ಮುಚ್ಚಿದ ಗರ್ಭಗುಡಿ ಅಥವಾ ದೂರದಿಂದ ದರ್ಶಿಸಲು ಸಾಧ್ಯವಾಗುವ ದೇವರ ರೂಪವನ್ನು ಅತ್ಯಂತ ನಿಕಟವಾಗಿ ನೋಡುವುದೇ ವಿಶಿಷ್ಟ ಅನುಭವ ಎಂದು ಮುಗುಳ್ನಗುತ್ತಾರೆ, ಪೂರ್ಣಿಮಾ.

ಕಲಾವಿದರ ವಿಳಾಸ:
ಬಡೆಕ್ಕಿಲ ಶ್ಯಾಮಸುಂದರ ಭಟ್
‘ಚಾಲುಕ್ಯ ಶಿಲ್ಪ’, 1566, 19 ನೇ ಕ್ರಾಸ್
ರೂಪಾನಗರ, ದಾಸನಕೊಪ್ಪಲು
ಮೈಸೂರು 570 026

ಮೊಬೈಲ್ : 09480601078

– ಶ್ರುತಿ ಶರ್ಮಾ, ಕಾಸರಗೋಡು.

4 Responses

  1. Niharika says:

    ಶಿಲ್ಪಿ ಅವರ ಪ್ರತಿಭೆ, ಸಾಧನೆ ನಿಜಕ್ಕೂ ಗ್ರೇಟ್ ! ನಿರೂಪಣೆ ಚೆನ್ನಾಗಿದೆ..

  2. YV Bhat says:

    Great. Superb

  3. ಹೀಗೆ ನಮಗರಿಯದ ಮಹಾನುಭಾವರನ್ನು ಅವರ ಅಮರ ಕೆಲಸಗಳನ್ನು
    ಪರಿಚಯಿಸುವುದು ಒಳ್ಳೆಯ ಕೆಲಸ
    ನಿಮ್ಮ ನಿರೂಪಣೆಯೂ ತುಂಬಾ ಚೆನ್ನಾಗಿದೆ
    ಶ್ಲಾಘನೀಯ ಕಾರ್ಯ

  4. savithri s bhat says:

    ಅದ್ಭುತ ಶಿಲ್ಪಿ ಕಲೆ ನಮ್ಮ ಗ್ರಾಮದ ದೇವಸ್ಟ್ಟಾ ನದ ದೇವಿಯ ಮೂರ್ತಿಯನ್ನೂ ಶ್ರೀಯುತ ಶ್ಯಾಮ ಸು೦ದರ ಅವರೇ ಕೆತ್ತಿರುತ್ತಾರೆ.ಬರವಣಿಗೆಯೂ ಸು೦ದರವಾಗಿದೆ.

Leave a Reply to YV Bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: