’ಸುಶಿ’ ತಿಂದ ಖುಷಿ
ಉದ್ಯೋಗ ನಿಮಿತ್ತವಾಗಿ ಕಳೆದ ವರ್ಷ ಮಾರ್ಚ್ ನಲ್ಲಿ ಚೀನಾದ ಶಾಂಘೈ ನಗರಕ್ಕೆ ಹೋಗಿದ್ದೆ. ಇದು ಚೀನಾಕ್ಕೆ ನನ್ನ ಪ್ರಥಮ ಭೇಟಿ. ಹಾಗಾಗಿ ಪ್ರತಿಯೊಂದು ವಸ್ತು-ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿಯುತ್ತಿದ್ದೆ.
ನಾನು ಅಪ್ಪಟ ಸಸ್ಯಾಹಾರಿ. ಚೀನಾ ದೇಶದಲ್ಲಿ ಮನುಷ್ಯರನ್ನು ಬಿಟ್ಟು ಉಳಿದ ಜೀವಜಗತ್ತನ್ನು ಭಕ್ಷಿಸುತ್ತಾರೆಂದು ಓದಿ ತಿಳಿದಿದ್ದೆ. ಹಾಗಾಗಿ ಚೀನಾದಲ್ಲಿರುವ ನಮ್ಮ ಸಂಸ್ಥೆಯವರಿಗೆ ನಾನು ಸಸ್ಯಾಹಾರಿಯೆಂದು ಮುಂಚಿತವಾಗಿ ತಿಳಿಸಿದ್ದೆ. ಅವರುಗಳು ತುಂಬಾ ಕಾಳಜಿಯಿಂದ ನನಗೆ ಅತಿಥಿ ಸತ್ಕಾರ ನೀಡಿದರು. ಅಲ್ಲಿದ್ದ ನಾಲ್ಕು ದಿನಗಳಲ್ಲಿ, ಪ್ರತಿ ಸಂಜೆ ಸಸ್ಯಾಹಾರಿ ಹೋಟೆಲ್ ನ್ನು ಹುಡುಕಿ ಕರೆದೊಯ್ಯುತ್ತಿದ್ದರು.
ನಾನು ತಿಂದ ಒಂದು ತಿಂಡಿಯ ಹೆಸರು ’ಸುಶಿ’. ಇದರಲ್ಲಿ ಹಲವಾರು ವೈವಿಧ್ಯಗಳಿರುತ್ತವೆಯಂತೆ. ನನಗಾಗಿ ಸಸ್ಯಾಹಾರದ ’ಸುಶಿ’ ತಯಾರಾಗಿ ಬಂತು. ನೋಡಲು ತುಂಬಾ ಚೆನ್ನಾಗಿತ್ತು.ಅಲಂಕಾರಿಕ ತಟ್ಟೆಯಲ್ಲಿ, ಸ್ವಲ್ಪ ಸೀಳಿದ ಹಸಿರು ಮೆಣಸಿನ ಕಾಯಿ, ಲೆಟ್ಟೂಸ್ ಎಲೆಗಳು ಹಾಗೂ ಸೋಯಾಬೀನ್ಸ್ ನಿಂದ ತಯಾರಿಸಿದ ಕೇಕ್ ನಂತಹ ವಸ್ತುವನ್ನು ಜೋಡಿಸಿದ್ದರು. ನೋಡಲು ತುಂಬಾ ಚೆನ್ನಾಗಿತ್ತು.
ಅದನ್ನು ತಿನ್ನುವ ಪದ್ಧತಿ ಇನ್ನೂ ಚೆನ್ನ. ನಮ್ಮಲ್ಲಿ ವೀಳ್ಯದೆಲೆಯಲ್ಲಿ ಬೀಡಾ ಕಟ್ಟುವಂತೆ, ಮೊದಲು ಲೆಟ್ಟೂಸ್ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಒಂದೆರಡು ಹಸಿರುಮೆಣಸಿನಕಾಯಿ ಸೀಳುಗಳನ್ನಿರಿಸಿ, ಅದರ ಜತೆಗೆ ಸೋಯಾ ತಿಂಡಿ ಇಟ್ಟು ಮಡಚಿ ತಿನ್ನುವುದು.
ರುಚಿ ಸುಮಾರಾಗಿತ್ತು. ಹಸಿರುಮೆಣಸಿನಕಾಯಿ ಖಾರವೇ ಇರಲಿಲ್ಲ. ಸೋಯ ಕೇಕ್ ನಂತೆ ಇದ್ದ ತಿಂಡಿಗೆ ತೀರಾ ಕಡಿಮೆ ಉಪ್ಪು ಹಾಕಿದ್ದರು. ಒಟ್ಟಿನಲ್ಲಿ ಎಲ್ಲವೂ ಸೇರಿ ಸಪ್ಪೆ. ತಿಂಡಿಯ ರುಚಿಗಿಂತಲೂ ಅದರ ಹೊಸತನಕ್ಕೆ ಮಾರುಹೋಗಿ 3-4 ಸುಶಿ ತಿಂದೆ. ನಾನು ಗಮನಿಸಿದಂತೆ ಚೀನಿಯರು ಅತಿಥಿ ಸತ್ಕಾರಕ್ಕೆ ಆದ್ಯತೆ ಕೊಡುತ್ತಾರೆ. ಸುಶಿ ತಿನ್ನುವ ನನ್ನ ಸಡಗರ ನೋಡಿ ಚೀನಾದ ಸಹೋದ್ಯೋಗಿಗಳಿಗೂ ಖುಷಿಯಾಯಿತು.
ಭಾರತ ಹಾಗೂ ಚೀನಾದ ಅಡುಗೆಯ ವೈವಿಧ್ಯತೆಗಳನ್ನು ಚರ್ಚಿಸುತ್ತಾ, ಇನ್ನೂ ಬಗೆಬಗೆಯ ಚೈನೀಸ್ ಅಡುಗೆಗಳನ್ನು ಸವಿದೆ.
ಹೇಮಮಾಲಾ. ಬಿ. ಮೈಸೂರು
good info
Very interesting article with nice photographs, caption and a tinge of humour.