ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 44

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಿಷಯ ತಿಳಿದೊಡನೆ ಪಾರ್ವತಿ ಅತ್ತೆ ಶಕುಂತಲಾಗೆ ಫೋನ್ ಮಾಡಿದರು. “ಶಕ್ಕು, ವರು ಮದುವೆ ಸೆಟ್ಲ್ ಆಯಿತಂತೆ.”
“ಹೌದು ಅತ್ತಿಗೆ.”
“ಆರ್.ಜಿ.ನೇ ಅಂತೆ ಹುಡುಗ.”
“ನಿಮ್ಮ ಮುಂದಿನ ಪ್ರಶ್ನೆ ನನಗೆ ಗೊತ್ತು. ನಟ್ಟುನೇ ಧೈರ್ಯಮಾಡಿ ಬೇರೆ ಜಾತಿಯವನನ್ನು ಮದುವೆಯಾಗಲಿಲ್ವಾ? ಕೆಲವು ಸಲ ನಾವು ಸುಖವಾಗಿರಬೇಕಾದ್ರೆ ಶಾಸ್ತ್ರ, ಸಂಪ್ರದಾಯ ಕೈ ಬಿಡಬೇಕು” ಅನ್ನಿಸತ್ತೆ.
ಶರು ಮಾತ್ರ ತುಂಬಾ ಹೊಟ್ಟೆ ಉರಿದುಕೊಂಡಳು.

ಧರ್ಮ ಅವನ ಹೆಂಡತಿ ಹಾಸನದಲ್ಲಿ ಸೆಟ್ಲ್ ಆಗುತ್ತಾರೆಂದು ಕೇಳಿ ಅವಳಿಗೆ ಸಂಕಟವಾಗಿತ್ತು. ಕೀರ್ತಿ ಜೋರಾಗಿದ್ದ. “ನೀನು ಮೂರು ಹೊತ್ತು ದೊಡ್ಮನೆಯಲ್ಲಿ ಇರೋದಲ್ಲ. ತೋಟದ ಮನೆಗೆ ಬಂದು ಕೆಲಸ ಮಾಡು” ಎಂದು ಕೆಲಸ ಮಾಡಿಸುತ್ತಿದ್ದ. ಧರ್ಮನ ಹೆಂಡತಿಯಾಗುವ ದಿವ್ಯಾಳನ್ನು ನೋಡಿದ ಮೇಲೆ ತುಂಬಾ ಬೇಜಾರಾಗಿತ್ತು. ಅವಳು ಮದುವೆಗೆ ಮೊದಲೇ ಕಂಡಿಷನ್ಸ್ ಹಾಕಿ ತನ್ನ ದಾರಿ ಸುಗಮಮಾಡಿಕೊಂಡಿದ್ದಳು. ತಂದೆ-ತಾಯಿ ಮೈಸೂರಿಗೆ ಶಿಫ್ಟ್ ಆಗುತ್ತಿರುವುದರಿಂದ ಅವರಿಂದ ತನಗೆ ಯಾವ ರೀತಿಯ ಸಪೋರ್ಟ್ ಸಿಗುವುದಿಲ್ಲವೆಂದು ಅವಳಿಗೆ ಅರಿವಾಗಿತ್ತು.

“ಎಂಗೇಜ್‌ಮೆಂಟ್” ಸರಳವಾಗಿ ಚೆನ್ನಾಗಿ ಆಯಿತು. ಗೋಪಿ-ವರು ಇಬ್ಬರೂ ಒಂದೇ ತರಹದ ಹೃದಯದಾಕಾರದ ಉಂಗುರ ಆರಿಸಿದ್ದರು. ರಮಾ ಸೊಸೆಗೆ ಒಂದೆಳೆ ಸರ, ಒಂದು ಜೊತೆ ಬಳೆ, ಒಂದು ಜೊತೆ ಹವಳದ ಓಲೆ ಕೊಟ್ಟರು. ಅವಳೇ ಆರಿಸಿದ್ದ ಕಾಂಜೀವರಂ ಸೀರೆ ಕೂಡ ಸಿಂಪಲ್ಲಾಗಿತ್ತು. ವರೂಗೆ ದಿವ್ಯಾ ತುಂಬಾ ಇಷ್ಟವಾದಳು. ರೇಖಾ-ನಾಗರಾಜ ಸಂಭ್ರಮದಿಂದ ಓಡಾಡಿದರು. ಸುಮಿಯೂ ಖುಷಿಖುಷಿಯಾಗಿದ್ದಳು. ಅವಳ ಮದುವೆಯೂ ಸೆಟ್ಲ್ ಆಗಿತ್ತು. ಸರ್ಕಾರಿ ನೌಕರಿಯಲ್ಲಿರುವ ಹುಡುಗನ ಕೈ ಹಿಡಿದು ಅವಳು ಮೈಸೂರಿನಲ್ಲೇ ನೆಲೆಸುವವಳಿದ್ದಳು.
ಶರೂಗೆ ತಾನೊಬ್ಬಳೇ ಪೆದ್ದಿ ಅನ್ನಿಸಿತ್ತು. ತಾನೂ ಓದಿ ಕೆಲಸದಲ್ಲಿದ್ದಿದ್ದರೆ ತನ್ನನ್ನು ಗುರುತಿಸುತ್ತಿದ್ದರೇನೋ” ಎಂದುಕೊಂಡಳು.

“ವರು ಒಂದು ಒಳ್ಳೆಯ ನ್ಯೂಸ್.”
“ಏನು ಚಿಕ್ಕಮ್ಮ?”
“ಬೆಂಗಳೂರು ಮನೆ ಒಡೆಸಿ ಮೂರು ಡೂಪ್ಲೆಕ್ಸ್ ಹೌಸ್ ಕಟ್ತಾರಂತೆ. ಕೆಳಗಡೆ ೩ ರೂಮು, ಮೇಲೆ ೨ ರೂಮು. ನೀವು ಒಂದು ಮನೆಯಲ್ಲಿರಿ” ಅಂತ ಅನಿಕೇತ್ ಹೇಳಿದ.
“ಅಲ್ಲೇ ಆಫೀಸ್ ಓಪನ್ ಮಾಡ್ತೀನಿ ಅಂತಿದ್ರು ನೀಲಾ ಆಂಟಿ.”
“ನಂದಾ ಒಪ್ಪಲಿಲ್ಲವಂತೆ” ‘ಇದು ಫ್ಯಾಮಿಲಿ ಏರಿಯಾ ಕಂಪನಿಗೆ ಸರಿಹೋಗಲ್ಲ. ಬೇರೆ ಏರಿಯಾ ನೋಡಿದರಾಯ್ತು’ ಅಂದಳಂತೆ.”
“ಒಳ್ಳೆಯದಾಯ್ತು. ನೀವು ಅದೇ ಏರಿಯಾದಲ್ಲಿದ್ರೆ ನಮಗೂ ಖುಷಿ.”
“ಮಗು ಅದೇ ಶಾಲೆಯಲ್ಲಿ ಓದುವಂತಾಯ್ತು” ಎಂದು ಶೋಭಾ ಸಂಭ್ರಮಿಸಿದರು.

ಮರುದಿನ ವಾರುಣಿಯ ತಾಯಿ-ತಂದೆ ಊರಿಗೆ ಹೊರಟಾಗ ಚಂದ್ರಾವತಿ ಹೇಳಿದರು. “ನೀವು ಬೇರೆ ಮನೆ ಹುಡುಕಬೇಡಿ. ಮಹಡಿ ಮೇಲಿನ ಮನೆಯಲ್ಲಿ ನೀವೇ ಇರಬೇಕು. ಅದಕ್ಕೋಸ್ಕರ ನಾನು ಬೇರೆ ಯಾರಿಗೂ ಬಾಡಿಗೆಗೆ ಕೊಟ್ಟಿಲ್ಲ……….”
“ನೀವು ವಿಶ್ವಾಸದಿಂದ ಹೇಳ್ತಿರುವಾಗ ನಾವು ಬೇಡ ಅನ್ನಲ್ಲ. ಕ್ಯಾಟರಿಂಗ್ ಸರ್ವೀಸ್ ಬೇಡ. ಊಟ ಚೆನ್ನಾಗಿರಲ್ಲ ಅಂತಲ್ಲ. ಸೋಮಾರಿತನ ಜಾಸ್ತಿಯಾಗುತ್ತದೇಂತ.”
“ಆಗಲಿ ಸಧ್ಯಕ್ಕೆ ೧೫,೦೦೦ ಬಾಡಿಗೆ ಕೊಡಿ. ನಿಮ್ಮನೆ ಮದುವೆ ಸಂಭ್ರಮ ಮುಗಿದ ಮೇಲೆ ಅಡ್ವಾನ್ಸ್ ಕೊಡಿ. ನೀವೇ ಅಡಿಗೆ ಮಾಡಿಕೊಳ್ಳುವುದಾದರೆ ನನ್ನ ಅಭ್ಯಂತರವೇನಿಲ್ಲ. ನೀವು ಪಾತ್ರೆ ಪಡಗ ಏನೂ ತರಬೇಡಿ. ಗ್ಯಾಸ್‌ಸ್ಟೌವ್ ಕೂಡ ಇದೆ.”
“ತರಲ್ಲ. ನಮ್ಮ ಶೋಭಾ-ಶಿವು ಬೆಂಗಳೂರಿನಲ್ಲೇ ಇರ‍್ತಾರಂತೆ. ಅವರು ಉಪಯೋಗಿಸಿಕೊಳ್ತಾರೆ.”
“ಶಂಕರೂ ಬಗ್ಗೆ ಯೋಚಿಸಬೇಡಿ. ಅವನ ರಿಸಲ್ಟ್ ಬರಲಿ. ಒಳ್ಳೆಯ ಶಾಲೆಗೆ ಸೇರಿಸೋಣ.”

ವಾರದಲ್ಲಿ ರಾವ್ ದಂಪತಿಗಳು ಮೈಸೂರಿಗೆ ಶಿಫ್ಟ್ ಆದರು. ಅದೇ ವಾರ ಶಂಕರೂ ರಿಸಲ್ಟ್ ಬಂತು. ಎಸ್.ಎಸ್.ಎಲ್.ಸಿಯಲ್ಲಿ ಅವನಿಗೆ ೯೨% ಬಂದಿತ್ತು. ಸೈನ್ಸ್ನಲ್ಲಿ ೯೫, ಮ್ಯಾಥ್ಸ್ನಲ್ಲಿ ೯೯ ನಂಬರ್ ಬಂದಿತ್ತು. ಅವನಿಗೆ ಸದ್ವಿದ್ಯಾ ಜೂನಿಯರ್ ಕಾಲೇಜ್‌ನಲ್ಲಿ ಸೀಟು ಸಿಕ್ಕಿತು. ಚಂದ್ರಾವತಿಯವರ ಪರಿಚಿತ ಆಟೋದಲ್ಲಿ ಅವನು ಕಾಲೇಜಿಗೆ ಹೋಗಲು ತೀರ್ಮಾನಿಸಿದ.
“ನಾನೇ ಮನೆಯಲ್ಲಿ ಪಾಠ ಹೇಳ್ತೀನಿ. ಆದ್ದರಿಂದ ನೀನು ಟ್ಯೂಷನ್ಸ್ಗೆ ಅಲೆಯುವ ತಂಟೆ ಇರಲ್ಲ. ನಿನಗೆ ನನ್ನ ಪಾಠದಿಂದ ಪ್ರಯೋಜನವಿಲ್ಲ ಅನ್ನಿಸಿದರೆ ಹೇಳು. ಟ್ಯೂಷನ್‌ಗೆ ಸೇರಿಸ್ತೀನಿ.”
“ಅಪ್ಪ, ನೀವು ಪಾಠ ಮಾಡಿದ್ದರಿಂದಲೇ ನನಗೆ ಒಳ್ಳೆಯ ಮಾರ್ಕ್ಸ್ ಬಂದಿದ್ದು. ನನ್ನ ಜೊತೆ ಓದ್ತಿದ್ದ ಅಭಿಷೇಕ್, ಭಾಸ್ಕರ ಎಲ್ರೂ ಟ್ಯೂಷನ್‌ಗೆ ಹೋಗ್ತಿದ್ರು. ಆದ್ರೆ ಅವರಿಗೆ ನನಗಿಂತ ಕಡಿಮೆ ನಂಬರ್ ಬಂದಿದೆ.”
“ಸರಿಯಪ್ಪ” ಎಂದರು ರಾವ್.

ಮದುವೆಗೆ ಇನ್ನೂ ಎರಡು ತಿಂಗಳಿತ್ತು. ಅಷ್ಟರಲ್ಲಿ ಅನಿಕೇತ್ ಮದುವೆಗೆ ಹೋಗಬೇಕಿತ್ತು. ಈ ಮಧ್ಯೆ ಧರ್ಮ-ದಿವ್ಯಾ ಮದುವೆ ಹಾಸನದಲ್ಲಿ ನಡೆಯಿತು. ಮೈಸೂರಿನವರು ಬೆಳಿಗ್ಗೆ ಹೋಗಿ ಸಾಯಂಕಾಲ ವಾಪಸ್ಸಾದರು. ಸಮಯ ಸಿಕ್ಕಾಗ ವರು ದಿವ್ಯಾಗೆ ಹೇಳಿದಳು. “ತಪ್ಪು ತಿಳಿಯಬೇಡಿ. ನಿಮ್ಮ ರಿಸೆಪ್ಷನ್‌ಗೆ ಬರಕ್ಕಾಗಲ್ಲ. ಹೊಸದಾಗಿ ಕೆಲಸಕ್ಕೆ ಸೇರಿರುವುದರಿಂದ ರಜ ಸಿಗುವುದು ಕಷ್ಟ.”
“ನಮ್ಮ ರಿಸೆಪ್ಷನ್ ಕ್ಯಾನ್ಸಲ್ ಆಯಿತು. ನಿಮ್ಮ ಮದುವೆಯ ನಂತರ ನಮ್ಮ ಊರಿನವರಿಗೆ ಊಟ ಕೊಡ್ತಾರೆ. ಹೊಸದಾಗಿ ಕೆಲಸಕ್ಕೆ ಸೇರಿರುವುದರಿಂದ ರಜ ಸಿಗುವುದು ಕಷ್ಟಾಂತ ನನಗೆ ಗೊತ್ತು.”

ಶರು ಒಂದು ವಾರ ಬಿಟ್ಟುಕೊಂಡು ಮೈಸೂರಿಗೆ ಬಂದಳು. ತಂದೆಯ ಮನೆಯನ್ನು ನೋಡಿ ಅವಳಿಗೆ ಒಂದು ತರಹವಾಯಿತು. ತಂದೆ-ತಾಯಿ, ಶಂಕರು, ವರು ಎಲ್ಲಾ ಆರಾಮವಾಗಿದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿರುವಂತಾಯಿತಲ್ಲಾ ಎಂದು ನೊಂದುಕೊಂಡಳು. ನಿರ್ಮಲಾ ಕುಟುಂಬ ಕೂಡ ಬೆಂಗಳೂರಿಗೆ ಶಿಫ್ಟ್ ಆಗುತ್ತಿದೆ ಎನ್ನುವುದು ತಿಳಿದು ಅವಳಿಗೆ ತುಂಬಾ ಸಂಕಟವಾಗಿತ್ತು. ಯಾವುದೋ ಮಾತಿಗೆ ಅವಳು ಒಂದು ದಿನ ವಾರುಣಿಯನ್ನು ದೂರಿದಳು. “ವರು, ನಿನಗೆ ಆರ್.ಜಿ. ಮನೆಯವರ ಬಗ್ಗೆ ಗೊತ್ತಿತ್ತಲ್ವಾ? ನೀನು ಯಾಕೆ ನನಗೇನೂ ಹೇಳಲಿಲ್ಲ?”
“ಅಂತಹ ವಿಚಾರ ಹೇಳುವಂತಹದ್ದು ಏನಿದೆ? ಆಗಲೂ ಅವರು ಚೆನ್ನಾಗಿದ್ರು. ಈಗಲೂ ಚೆನ್ನಾಗಿದ್ದಾರೆ……..”
“ಹೌದು. ಎಲ್ಲರೂ ಚೆನ್ನಾಗಿದ್ದಾರೆ ನನ್ನೊಬ್ಬಳನ್ನು ಬಿಟ್ಟು. ಬರುವ ಸೊಸೆಯರೆಲ್ಲಾ ಹಳ್ಳಿ ಬೇಡಾಂದ್ರು ಮಾವ ಸುಮ್ಮನೆ ಇದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿರುವಂತಾಯಿತು.”
“ಅವರೆಲ್ಲಾ ಒಳ್ಳೆಯ ಜನ. ಮದುವೆಗೆ ಮೊದಲು ಅವರು ನಿನಗೆ ಹೇಳಿದ್ರು ತಾನೆ? ನಿನ್ನ ಅಭಿಪ್ರಾಯ ಕೇಳಿದ್ರು ತಾನೆ? ನೀನೇ ಕುಣಿಯುತ್ತಾ ಮದುವೆ ಮಾಡಿಕೊಂಡೆ” ಶಕುಂತಲಾ ಹೇಳಿದರು.
“ಮದುವೆ ಸೆಟ್ಲ್ ಆದಾಗಲಿಂದ ಇದುವರೆಗೂ ನೀನು ನನಗೆ ಒಂದು ಫೋನ್ ಮಾಡಿದ್ದೆಯಾ? ನಿನಗೆ ಅಹಂಕಾರ ತುಂಬಿತ್ತು. ಬೆಂಗಳೂರಿನಲ್ಲಿದ್ದುಕೊಂಡೂ ಓದಲಿಲ್ಲ. ಓದಬೇಕು, ಕೆಲಸಕ್ಕೆ ಸೇರಬೇಕು ಅನ್ನುವ ಆಸೆಯೇ ನಿನಗೆ ಇರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮುಂದೆ ಓದುವ ಯೋಚನೆ ಮಾಡು” ಎಂದಳು ವಾರುಣಿ.
“ಓದುತ್ತೀನೀಂತ ನೀನು ಇಲ್ಲಿಗೆ ಬಂದ್ರೆ ನಿನಗೆ ಜಾಗವಿಲ್ಲಮ್ಮ. ನೀನು ಕರೆಸ್ಪಾಂಡೆನ್ಸ್ನಲ್ಲೇ ಓದಬೇಕು” ಶ್ರೀನಿವಾಸರಾವ್ ಸ್ಪಷ್ಟವಾಗಿ ಹೇಳಿದರು.
ಶರು ಸುಮ್ಮನಾದಳು.

ಆರ್.ಜಿ. ತಾನಿದ್ದ ಮನೆಯನ್ನು ತುಂಬಾ ಇಷ್ಟಪಟ್ಟಿದ್ದರಿಂದ ರಘುಪತಿ ಅದನ್ನೇ ಕೊಂಡರು. ಅವರ ಅಣ್ಣಂದಿರು ಹೇಳಿದರು. “ಬಾಳಿ ಬದುಕಿರುವ ಮನೆಯದು. ಹವನ, ಹೋಮ ಅಗತ್ಯವಿಲ್ಲ. ನಿನಗೆ ಬೇಕಾದವರನ್ನು ಕರೆದು ಸತ್ಯನಾರಾಯಣ ಪೂಜೆ ಮಾಡು.”
“ಆಗಲಿ ಅಣ್ಣ. ನೀನು ಹೇಳಿದಂತೆ ಮಾಡ್ತೀನಿ.”
“ಮೈಸೂರಿನಲ್ಲಿರವವರು ಮಾತ್ರ ಬರಲಿ ತುಂಬಾ ಜನ ಬೇಡ” ಎಂದರು ರಮಾ.

ಮನೆಮನೆಯವರೆ ಆಗಿದ್ದರಿಂದ ರಘುಪತಿಯ ದೂರದ ಸಂಬಂಧಿ ಶ್ರೀಧರನ ಕುಟುಂಬದವರು ೪ ಮಂದಿ, ಚಂದ್ರಾವತಿ, ವರು ಮನೆಯಿಂದ ಮಲ್ಲಿಯೂ ಸೇರಿ ೬ ಜನ, ನಾಗರಾಜನ ಮನೆಯಿಂದ ನಾಲ್ಕು ಜನರನ್ನು ಮಾತ್ರ ಆಹ್ವಾನಿಸಿದರು. ರಮಾ-ರಘುಪತಿ, ಆರ್.ಜಿ. ಮನೆ ಕೆಲಸದವರು ಎಲ್ಲರೂ ಸೇರಿ ೨೫ ಜನರಿಗೆ ಹೊರಗಿನಿಂದ ಊಟ ಬಂತು. ಶಕುಂತಲ ತಾವೇ ಸತ್ಯನಾರಾಯಣ ಪ್ರಸಾದ ತಯಾರಿಸಿದರು.
ಎಲ್ಲರಿಗೂ ಹಾಲ್‌ನಲ್ಲಿ ಎಲೆ ಹಾಕಲಾಯಿತು.
“ನಾಗರಾಜ, ವರು ಒಂದು ರೌಂಡ್ ಬಡಿಸಿ ನೀವೂ ಊಟಕ್ಕೆ ಕುಳಿತುಕೊಳ್ಳಿ. ನಾನು ನಿಮ್ಮಪ್ಪ ಬಡಿಸ್ತೀವಿ” ಎಂದರು ಶಕುಂತಲ.
“ಸಾಧ್ಯವೇ ಇಲ್ಲ. ನೀವೆಲ್ಲಾ ಒಂದು ರೌಂಡ್ ಬಡಿಸಿ ಊಟಕ್ಕೆ ಕುಳಿತುಕೊಳ್ಳಿ. ನಾನು, ನಮ್ಮನೆಯವರು ಬಡಿಸ್ತೇವೆ. ಪೂಜೆಯ ಫಲ ನಮಗೆ ಸಿಗುವುದು ಬೇಡವಾ?” ಎಂದರು ರಘುಪತಿ.
ಆರ್.ಜಿ., ನಾಗರಾಜ ಮಾಡಿದ ಅಡುಗೆಗಳನ್ನು ತಂದು ಟೇಬಲ್ ಮೇಲಿಟ್ಟು ಸೌಟುಗಳನ್ನು ತಂದಿತ್ತರು. ನಾಗರಾಜ, ಆರ್.ಜಿ., ರಘುಪತಿ, ರಾವ್ ಒಂದು ರೌಂಡ್ ಬಡಿಸಿದರು. ಆರ್.ಜಿ ಮನೆಯ ಕೆಲಸದ ಹೂವಮ್ಮ, ಮಲ್ಲಿ ಎಲ್ಲರನ್ನೂ ಕೂಡಿಸಲಾಯಿತು. ರಘುಪತಿ, ರಮಾ ಬಡಿಸಿದರು. ವರು ಊಟವಾಗುತ್ತಿದ್ದಂತೆ ಉಳಿದ ಅಡುಗೆಗಳನ್ನು ಚಿಕ್ಕ ಪಾತ್ರೆಗಳಿಗೆ ಬಗ್ಗಿಸಿ, ಪಾತ್ರೆಗಳನ್ನು ತೊಳೆಯಲು ಹಾಕಿದಳು. ಮಲ್ಲಿ ಎಲೆಗಳನ್ನು ಎತ್ತಿ ಊಟ ಮಾಡಿದ ಜಾಗ ಒರೆಸಿದಳು.
ಬಂದವರೆಲ್ಲಾ ಹೊರಟರು.

“ಆಂಟಿ ನೀವು ಹೊರಡಿ. ನಾನು ವರೂನ್ನ ಕರೆದುಕೊಂಡು ಬಂದುಬಿಡ್ತೀನಿ” ಎಂದ ಆರ್.ಜಿ.
ಎಲ್ಲರೂ ನಗುತ್ತಾ ಜಾಗ ಖಾಲಿ ಮಾಡಿದರು.
“ಅಪ್ಪಾ-ನೀವು ಕೂತ್ಕೊಳ್ಳಿ. ನಾವು ಬಡಿಸ್ತೀವಿ.”
“ಬೇಡಪ್ಪ. ನಾವು ಬಡಿಸ್ಕೋತೇವೆ. ನೀವು ಆರಾಮವಾಗಿರಿ” ಎಂದರು ರಘುಪತಿ.
ವರು-ಆರ್.ಜಿ ಸೋಫಾದಲ್ಲಿ ಕುಳಿತರು.
“ನಿಮ್ಮನ್ನೊಂದು ಕೇಳಲಾ?”
“ಕೇಳು.”
“ನನಗೆ ನಿಮ್ಮನ್ನು ಆರ್.ಜಿ. ಅಂತ ಕರೆಯಲು ಇಷ್ಟವಿಲ್ಲ.”
“ಗೋಪಿ ಅಂತ ಕೂಗು.”
“ಅದೂ ಇಷ್ಟವಿಲ್ಲ…….”
“ಡಿಯರ್, ಡಾರ‍್ಲಿಂಗ್, ಮೈಲವ್” ಅಂತ ಕೂಗು.
“ನಾನು ಹಾಗೆ ಕೂಗಿದರೆ ದೇವರೇಗತಿ. ನಾನು ‘ರಾಮ್’ ಅಂತ ಕೂಗಲಾ?”
“ಯಾರೂ ನನ್ನ ಹಾಗೆ ಕರೆಯಲ್ಲ. ತುಂಬಾ ಖುಷಿಯಾಗ್ತಿದೆ.”
“ತುಂಬಾ ದಿನಗಳಿಂದ ನನಗೆ ಈ ರೀತಿ ಕರೆಯಬೇಕು ಅನ್ನಿಸ್ತಿತ್ತು. ಚಂದ್ರಾವತಿ ಆಂಟಿ ಅವರ ಗಂಡನ್ನ ರಾಮ್ ಅಂತ ಕರೆಯುತ್ತಿದ್ರಂತೆ. ಅದಕ್ಕೆ ನಾನು ಸುಮ್ಮನಾದೆ. ನಮ್ಮನೆಯಲ್ಲಿ ನಾವು ನಾವೇ ಇರುವಾಗ ನಾನು ‘ರಾಮ್’ ಅಂತ ಕರೆಯುತ್ತೇನೆ.”
ಅವನು ಅವಳ ಮೂಗೆಳೆದ.
“ಹೋಗಿ ಅಪ್ಪ. ಅಮ್ಮಂಗೆ ಬಡಿಸು. ನಾನು ದೊಡ್ಡಪ್ಪಂಗೆ ಫೋನ್ ಮಾಡಿ ಬರ‍್ತೇನೆ.”

ಅವಳು ಅಡಿಗೆ ಮನೆಯತ್ತ ನಡೆದಳು. ಗೋಪಾಲ್ ವಾಪಸ್ಸು ಬಂದಾಗ ಅವಳು ಬಾಯಿ ಮೇಲೆ ಬೆರಳಿಟ್ಟು “ಬನ್ನಿ ಇಲ್ಲಿ” ಎಂದು ಸನ್ನೆ ಮಾಡಿದಳು.
ರಘುಪತಿ ಹೆಂಡತಿಗೆ “ನೀನು ಏನೂ ಊಟ ಮಾಡಲಿಲ್ಲ. ಇರು ನಾನು ಹೋಳಿಗೆ ತಿನ್ನಿಸ್ತೇನೆ” ಎಂದು ತುಪ್ಪದಲ್ಲಿ ಅದ್ದಿ ಹೋಳಿಗೆ ತಿನ್ನಿಸಿದರು.
“ರಘು ನೀವೂ ಅಷ್ಟೆ. ಪುಳಿಯೋಗರೆ ಒಬ್ಬಟ್ಟಲ್ಲೇ ಹೊಟ್ಟೆ ತುಂಬಿಸಿಕೊಂಡರೆ ಹೇಗೆ? ಒಂದು ತುತ್ತಾದರೂ ಮೊಸರನ್ನ ತಿನ್ನಬೇಕು. ಹೊಟ್ಟೆ ತಣ್ಣಗಿರತ್ತೆ” ಎನ್ನುತ್ತಾ ರಮಾ ಗಂಡನಿಗೆ ಮೊಸರನ್ನ ತಿನ್ನಿಸಿದರು.
“ಇವರಿಬ್ಬರೂ ಯಾಕೆ ಇಷ್ಟು ಹೊತ್ತು ಊಟ ಮಾಡ್ತಿದ್ದಾರೆ ಅಂದುಕೊಳ್ತಿದ್ದೆ.”
“ಸುಮ್ಮನಿರಿ, ಕಣ್ಣು ಹಾಕಬೇಡಿ.”
“ವರು ನಾವೂ ಹೀಗೆ ಇರಬೇಕು. ಬದುಕಿರುವವರೆಗೂ ಇದೇ ರೀತಿ ಪ್ರೀತಿಸ್ತಿರಬೇಕು ಏನಂತೀಯಾ?”
“ಅಮೆನ್” ಎನ್ನುತ್ತಾ ವರು ಅವನ ಎದೆಗೆ ಒರಗಿದಳು.
ಅವನ ತೋಳುಗಳು ಅವಳನ್ನು ಬಳಸಿದವು.
“ಈ ಕ್ಷಣ ಅನಂತವಾಗಲಿ” ಅವರ ಹೃದಯಗಳು ಬಯಸಿದವು.

(ಮುಗಿಯಿತು)

ಒಟ್ಟು 44 ಕಂತುಗಳಲ್ಲಿ ಹರಿದು ಬಂದ ‘ಕನಸೊಂದು ಶುರುವಾಗಿದೆ’ ಕಾದಂಬರಿಯು ಇಂದಿನ ಸಂಚಿಕೆಯಲ್ಲಿ ಮುಕ್ತಾಯವಾಗಿದೆ. ಸೊಗಸಾದ ಕಾದಂಬರಿಯನ್ನು ಸುರಹೊನ್ನೆಯ ಓದುಗರ ಕೈಗಿತ್ತ ಹಿರಿಯ ಸಾಹಿತಿ ಶ್ರೀಮತಿ ಸಿ.ಎನ್ .ಮುಕ್ತಾ ಅವರಿಗೆ ಅನಂತ ಧನ್ಯವಾದಗಳು. – ಸಂಪಾದಕಿ.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :  https://surahonne.com/?p=45234

ಸಿ.ಎನ್. ಮುಕ್ತಾಮೈಸೂರು

7 Comments on “ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 44

  1. ಕಾದಂಬರಿ ಬಹಳ ಸೊಗಸಾಗಿ ಮೂಡಿ ಬಂತು. ಧನ್ಯವಾದಗಳು ಮೇಡಂ.

  2. ಬದುಕು ಬವಣೆಗಳ ಅನಾವರಣ.. ಕನಸಿನ ಲೋಕದಲ್ಲೇ ವಿಹರಿಸದೆ…ವಾಸ್ತವಿಕ ಬದುಕಿನತ್ತ..ಹೊರಳಿದ ಚಿಂತನೆ… ಸ್ವ ಸಾಮರ್ಥ್ಯ ಬದುಕಿನ ಬುನಾದಿ …ಸಂಬಂಧಗಳಲ್ಲಿನ ಪಕ್ಷಿನೋಟ..ಎಲ್ಲವುಗಳನ್ನು ಒಳಗೊಂಡು ಅದಕ್ಕೊಂದು… ಸೊಗಸಾದ ತೋರಣ ಕಟ್ಟಿ.. ಕನಸೊಂದು ಶುರುವಾಗಿದೆ.. ಕಾದಂಬರಿ ಮೂಲಕ ಉಣಬಡಿಸಿದ…ಕಾದಂಬರಿ ಗಾರ್ತಿ ಮುಕ್ತಾ ಮೇಡಂ ರವರಿಗೆ..ಹೃತ್ಪೂರ್ವಕವಾದ ಧನ್ಯವಾದಗಳು… ಆ ಧಾರಾವಾಹಿಯ ಪ್ರತಿ ಕಂತಿನಲ್ಲಿ ಪೂರಕ ಚಿತ್ರ ಹಾಕಿ ಪ್ರಕಟಿಸಿದ ಸಂಪಾದಕರಿಗೂ..ಹೃತ್ಪೂರ್ವಕವಾದ ಧನ್ಯವಾದಗಳು..

  3. ತುಂಬಾ ಸೊಗಸಾಗಿ ಮೂಡಿ ಬಂದ ಕಾದಂಬರಿ. ವರು ಪಾತ್ರ ತುಂಬಾ ಚೆನ್ನಾಗಿದೆ.

    ಸುಜಾತಾ ರವೀಶ್

  4. ಇಷ್ಟು ದಿನ ಹಂತ ಹಂತವಾಗಿ ಪ್ರಕಟ ಗೊಂಡ ಕಾದಂಬರಿ ಬಹಳ ಸೊಗಸಾಗಿತ್ತು. ಕುಟುಂಬ, ಬಾಂಧವ್ಯ, ಒಳಜಗಳಗಳು ಹೀಗೆ ಏನೇ ಇದ್ದರೂ ಕೊನೆಯಲ್ಲಿ ಪ್ರೀತಿಯೊಂದಿಗೆ ಕೊನೆಗೊಂಡಿತು ಕಥೆ. ಬಹಳ ಸುಂದರವಾಗಿ ಮೂಡಿ ಬಂತು ಕಾದಂಬರಿ.

  5. ಅತ್ಯಂತ ಸುಂದರವಾಗಿ ಮೂಡಿಬಂದ ಕಾದಂಬರಿ ಓದುವಾಗ ಅಪಾರವಾದ ಸುಖ, ಸಂತಸ, ಕಾತುರ, ಕೌತುಕಗಳೊಂದಿಗೆ ಕೆಲವೊಮ್ಮೆ ಭಾವೋದ್ವೇಗಕ್ಕೂ ಒಳಗಾಗುವಂತೆ ಮಾಡಬಿಡುತಿತ್ತು. ಸುಖಾಂತ ಕಂಡ ಕಾದಂಬರಿ ಸಮಾಧಾನವನ್ನು ತಂದಿತಾದರೂ ಮುಗಿದೇ ಹೋಯಿತಲ್ಲಾ ಎಂದನಿಸಿದ್ದಂತೂ ಸುಳ್ಳಲ್ಲ.

    ಖ್ಯಾತ ಲೇಖಕಿ ಸಿ ಎನ್ ಮುಕ್ತಾ ಮೇಡಂ ಅವರಿಗೂ, ಪ್ರಕಟಿಸಿದ “ಸುರಹೊನ್ನೆ” ಸಂಪಾದಕಿ ಆತ್ಮೀಯ ಹೇಮಮಾಲಾ ಅವರಿಗೂ ಅಭಿನಂದನೆಗಳು.

  6. ಕನಸೊಂದು ಸುರುವಾಗಿ, ಹಂತ ಹಂತವಾಗಿ, ಪ್ರತಿ ಗುರುವಾರದಂದು ಸುರಹೊನ್ನೆ ಪ್ರಿಯರ ಕನಸಿನೊಂದಿಗೆ ವಿಹರಿಸುತ್ತಾ, ಕಷ್ಟ ಕಾರ್ಪಣ್ಯ, ಸುಖ ಸಂತೋಷಗಳ ಸಮ್ಮಿಲನದೊಂದಿಗೆ ಸುಖಾಂತ್ಯ ಕಂಡ ಧಾರವಾಹಿಯು ಸಾಮಾಜಿಕ ಕಥಾಪ್ರಿಯಯರ ಮನಗೆದ್ದಿದೆ! ನಮ್ಮೆಲ್ಲರ ಮನಮೆಚ್ಚಿನ, ಹೆಮ್ಮೆಯ ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

  7. ಸೊಗಸಾದ ಕಾದಂಬರಿ . ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *