ಈಗಿನ ಮಕ್ಕಳಿಗೆ ಬೇಸಿಗೆ ಶಿಬಿರಗಳಲ್ಲಿ ಅತ್ಯಂತ ಜನಪ್ರಿಯ ಆಯ್ಕೆ ಸ್ವಿಮ್ಮಿಂಗ್ ಕ್ಯಾಂಪ್. ಸಾವಿರಾರು ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಈಜುಕೊಳಗಳಲ್ಲಿ, ನುರಿತ ತರಬೇತಿದಾರರ ಮೇಲುಸ್ತುವಾರಿಯಲ್ಲಿ, ತಲೆಗೆ ಟೋಪಿ, ಕಣ್ಣಿಗೆ ಗಾಗಲ್ಸ್, ಸಿಂಥೆಟಿಕ್ ಸ್ವಿಮ್ ಸೂಟ್ ಗಳನ್ನು ಧರಿಸಿ, ಸ್ಟೈಲ್ ಆಗಿ ಈಜುವುದು, ಅದನ್ನು ಅಪ್ಪ- ಅಮ್ಮಂದಿರು ಸಂಭ್ರಮದಿಂದ ವಿಡಿಯೋ ಮಾಡಿಕೊಂಡು, ತಮ್ಮ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಡುವುದು, ಈಗ ಒಂದು ಫ್ಯಾಷನ್.
ಆದರೆ ನಮ್ಮ ಕಾಲದ ಈಜಾಟವೇ ಬೇರೆ. ರಜೆಯಲ್ಲಿ ಊರಿಗೆ ಹೋದರೆ, ನಮ್ಮದೇ ವಯಸ್ಸಿನ 8 – 10 ಹುಡುಗರು ಗುಂಪು ಕಟ್ಟಿಕೊಂಡು, ವಯಸ್ಸಿನಲ್ಲಿ ದೊಡ್ಡವರಾದ ಹುಡುಗರ ಜೊತೆ ಒಂದು ಚಡ್ಡಿ, ಒಂದು ಬನೀನನ್ನು ಒಂದು ಟವಲ್ ನಲ್ಲಿ ಸುತ್ತಿಕೊಂಡು, ಸುಮಾರು 11 ಗಂಟೆಗೆ ಈಜಾಡಲು ಹೋಗುತ್ತಿದ್ದೆವು. ಈಜಾಡಿ ವಾಪಸ್ ಬರುವಾಗ ಒದ್ದೆಯಾದ ಬನೀನು, ಚಡ್ಡಿಗಳನ್ನು ತಲೆಯ ಮೇಲೆ ಹಾಕಿಕೊಂಡು, ಮನೆ ತಲುಪುವಷ್ಟರಲ್ಲಿ ಒಣಗಿಸಿಕೊಂಡು ಬಿಡುತ್ತಿದ್ದೆವು.
ಊರಿನಲ್ಲಿ ಎಲ್ಲಾ ಭಾವಿಗಳೂ ಈಜಾಡಲು ಸೂಕ್ತವಾಗಿರಲಿಲ್ಲ ಕೆಲವು ಭಾವಿಗಳಲ್ಲಿ ಜೊಂಡು ಬೆಳೆದಿರುತ್ತಿತ್ತು. ಕೆಲವು ಭಾವಿಗಳಲ್ಲಿ ಬುರುದೆ(ಕೆಸರು) ಇರುತ್ತಿತ್ತು, ಕೆಲವು ಕಡೆ ಅಪಾಯಕಾರಿ ಕಲ್ಲುಬಂಡೆಗಳಿರುತ್ತಿದ್ದವು. ಆದ್ದರಿಂದ ಎಲ್ಲರೂ ಮಠದೈನೋರ (ಮಠದ ಅಯ್ಯನವರ) ಕಪಿಲೆಗೆ, ಇಲ್ಲದಿದ್ದರೆ ನಮ್ಮ ಅಜ್ಜಿಯವರ ಕಟ್ಟೆ ಬಾವಿಗೆ ಹೋಗುತ್ತಿದ್ದೆವು. ಈಜು ಕಲಿತವರು, ಹೋದ ತಕ್ಷಣ ಮೇಲಿನಿಂದಲೇ ಹಾರುತ್ತಿದ್ದರು. ಸ್ವಲ್ಪ ಭಯ ಇದ್ದವರು ಸ್ವಲ್ಪ ಕೆಳಗೆ ಇಳಿದು ಹಾರುತ್ತಿದ್ದರು,. ಅರೆಬರೆ ಕಲಿತವರು ಹಾಗೇ ಮೆತ್ತಗೆ ನೀರಿಗೆ ಬೀಳುತ್ತಿದ್ದರು. ಇನ್ನೂ ಈಜು ಕಲಿಯದೇ ಇದ್ದವರು, ಈಜು ಬುರುಡೆಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಹಾಗೇ ಮೆತ್ತಗೆ ನೀರಿಗೆ ಇಳಿಯುತ್ತಿದ್ದೆವು. ಈಜು ಬುರುಡೆಗಳೆಂದರೆ (ನಗರಗಳ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಕೊಡುವ ರಬ್ಬರ್ ಟ್ಯೂಬ್ ತರಹ) ಒಣಗಿದ ಕುಂಬಳಕಾಯಿ, (ತೂತು ಇರಬಾರದು), ಅಥವಾ ಒಣಗಿದ ಒಂದು ಜಾತಿಯ ಹಗುರ ಮರ. ಇವುಗಳನ್ನು ಬಿಗಿಯಾಗಿ ತೆಂಗಿನ ನಾರಿನ ಹಗ್ಗದಲ್ಲಿ ಕಟ್ಟಿ ನಂತರ ಅವುಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ತರಹ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಅದನ್ನು ಸೊಂಟಕ್ಕೆ ಕಟ್ಟಿಕೊಂಡು ನೀರಿನಲ್ಲಿ ಈಜಲು ಹೋದರೆ ನಾವು (ಈಜು ಬರದವರು) ಮುಳುಗುತ್ತಿದ್ದೆವು, ಆದರೆ ಈಜು ಬುರುಡೆಗಳು ನಮ್ಮನ್ನು ಮುಳುಗದಂತೆ ತೇಲಿಸುತ್ತಿದ್ದವು. ಆಗ ಸೊಂಟದಲ್ಲಿ ಹಗ್ಗ ಬಿಗಿಯುತ್ತಿತ್ತು. ದೊಡ್ಡ ಹುಡುಗರು ನಮ್ಮನ್ನ “ತಲೆ ಮೇಲೆ ಎತ್ರೋ, ಕಾಲು ಬಡಿರೋ” , ಎಂದು ಹೇಳುತ್ತಿದ್ದರು. ಸ್ವಲ್ಪ ದಿನದಲ್ಲಿ ದೇಹವನ್ನು ಸಮಾನಾಂತರವಾಗಿ ಮಾಡಿಕೊಂಡು, ಕಾಲು ಬಡಿಯುವುದನ್ನು ಕಲಿಯುತ್ತಿದ್ದೆವು. ಕಾಲು ಬಡಿಯುವುದು ಕಲಿತರೆ,ಈಜು ಬಂದ ಹಾಗೆ ಎನ್ನುತ್ತಿದ್ದರು. ಆಮೇಲೆ ಯಾರಾದರೂ ದೊಡ್ಡವರ ಸಹಾಯದಿಂದ, ಈಜು ಬುರುಡೆ ಇಲ್ಲದೆ, ನಮ್ಮನ್ನು ನೀರಿಗೆ ಇಳಿಸಿ ಕೈ ಹಿಡಿದುಕೊಂಡು ಅಥವಾ ಹೊಟ್ಟೆ ಮತ್ತು ತೊಡೆ ಭಾಗಕ್ಕೆ ಅಂಗೈಗಳಿಂದ ಆಧಾರಕೊಟ್ಟು ನಮ್ಮನ್ನು ಭೂಮಿಗೆ ಸಮಾನಾಂತರವಾಗಿ ಹಿಡಿದು ಕಾಲುಗಳನ್ನು ಬಡಿಸುತ್ತಿದ್ದರು. ಸ್ವಲ್ಪ ದಿನದಲ್ಲಿ ನಮಗೆ ಇದು ಅಭ್ಯಾಸವಾಗಿ ನಿಧಾನಕ್ಕೆ ದಡದ ಹತ್ತಿರವೇ ಈಜು ಬುರುಡೆಯ ಸಹಾಯವಿಲ್ಲದೆ, ದೊಡ್ಡವರ ಸಹಾಯವಿಲ್ಲದೆ, ಕಾಲು ಬಡಿದು, ಕೈನಲ್ಲಿ ನೀರನ್ನು ಹಿಂದಕ್ಕೆ ತಳ್ಳಿ, ಅಲ್ಲೇ ಸುತ್ತುತ್ತಿದ್ದೆವು. ನಂತರ ಬಾವಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಿ ಅಲ್ಲಿದ್ದ ಪಂಪ್ಸೆಟ್ಟಿನ ಪೈಪನ್ನು ಹಿಡಿದು ನಿಂತು ಸುಧಾರಿಸಿಕೊಂಡು, ಮತ್ತೆ ವಾಪಸ್ ಬರುತ್ತಿದ್ದೆವು. (ನಮ್ಮ ಸಾರಿಗೆ ಬಸ್ ಗಳು ಗುರಿ ಮುಟ್ಟಿ ಬರುವ ಹಾಗೆ). ಈ ಹಂತದಿಂದ ಮುಂದೆ ಭಯವಿಲ್ಲದೆ ಎಲ್ಲಿಂದ ಬೇಕಾದರೂ ನೀರಿಗೆ ಹಾರುವುದು, ಈಜುವುದು ನಡೆಯುತ್ತಿತ್ತು. ಮೇಲಿನಿಂದ ಹಾರುವಾಗ ಭಯ ಆಗುತ್ತಿತ್ತು. ಆಗ ಕಣ್ಣು ಮುಚ್ಚಿಕೊಂಡು, ಕೈ ಮುಗಿದು ದೇವರಲ್ಲಿ ಪ್ರಾರ್ಥನೆ ಮಾಡ್ತಾ ಹಾರುತ್ತಿದ್ದೆವು. ಇನ್ನೇನು ನೀರಿಗೆ ಬೀಳಬೇಕು ಅನ್ನುವಾಗ ಕಣ್ಣು ತೆರೆದರೆ ಸಮುದ್ರದಲ್ಲಿ ಬೀಳುತ್ತಿದ್ದೇವೆ ಅನ್ನುವಷ್ಟು ಭಯ ಆಗುತ್ತಿತ್ತು. ಆಮೇಲೆ ನೀರಿನಲ್ಲಿ ಕಣ್ಣು ಬಿಟ್ಟು ಆಚೀಚೆ ನೋಡುತ್ತಿದ್ದೆವು. ಅಷ್ಟರಲ್ಲಿ ನೀರಿನಿಂದ ಮೇಲೆ ಬಂದುಬಿಡುತ್ತಿದ್ದೆವು. ಮೂಗಿನಲ್ಲೆಲ್ಲಾ ನೀರು ಹೋಗಿ, ನೀರು ಸಮೇತ ಗೊಣ್ಣೆ ಹೊರ ಬರುತ್ತಿತ್ತು. ಅದನ್ನು ಒರೆಸಿಕೊಳ್ಳುತ್ತಾ ಗಾಬರಿಯಿಂದ ಕಣ್ಣು ಬಿಟ್ಟುಕೊಂಡು ಕೈಕಾಲು ಬಡಿಯುತ್ತಾ ದಡ ಮುಟ್ಟುತ್ತಿದ್ದೆವು. ಆದರೆ ನಮ್ಮ ನುರಿತ ಈಜುಗಾರರು ನೀರಿನಲ್ಲಿ ಹಾರಿ ನೀರಿನ ಒಳಗಡೆ ಎರಡು ಮೂರು ಸುತ್ತು ಸುತ್ತಿ ಆಮೇಲೆ ನೀರಿನಿಂದ ಮೇಲೆ ಬರುತ್ತಿದ್ದರು. ಆಗ ನೀರಿನ ಒಳಗಿನಿಂದಲೇ ನಮ್ಮ ಕಾಲುಗಳನ್ನು ಹಿಡಿದು ಎಳೆದು ಗಾಬರಿ ಎಬ್ಬಿಸುತ್ತಿದ್ದರು.. ಹಾರುವಾಗ ನಮ್ಮ ನಿಕ್ಕರ್(ಪಟಾಪಟಿ ಚೆಡ್ಡಿ) ನಲ್ಲಿ ಗಾಳಿ ತುಂಬಿಕೊಂಡು, ಅದು ಹೊರ ಹೋಗಲು ಜಾಗ ಇಲ್ಲದೆ, ಚೆಡ್ಡಿ ಬಲೂನಿನಂತೆ ಗುಂಡಗಾಗುತ್ತಿತ್ತು. ಇದರಿಂದ ಸ್ವಲ್ಪ ದಿನಗಳ ನಂತರ ನಮ್ಮ ನಿಕ್ಕರ್ ನ ಹಿಂಭಾಗ ಹರಿದು ಹೋಗಿರುತ್ತಿತ್ತು. ಅದನ್ನು ಮನೆಗೆ ಬಂದ ಮೇಲೆ ರಿಪೇರಿ ಮಾಡಿಸಿಕೊಳ್ಳುತ್ತಿದ್ದೆವು
ಒಮ್ಮೆ ನಮ್ಮ ಜಯ್ಯಣ್ಣ ಕಾಕಾ, ನಮ್ಮನ್ನೆಲ್ಲ ಈಜುಕಲಿಸಲು ಕರೆದುಕೊಂಡು ಹೋದರು. ನಮ್ಮ ಅಣ್ಣ (ದೊಡ್ಡಪ್ಪನವರ ಮಗ) ಈಜು ಬರುತ್ತಿದ್ದರೂ ಹೆದರಿಕೆಯಿಂದ, ಎಷ್ಟು ಕರೆದರೂ ನೀರಿಗೆ ಇಳಿಯುತ್ತಿರಲಿಲ್ಲ. ಆಗ ಜಯಣ್ಣ ಕಾಕಾ ಅವನನ್ನು ಕರೆದುಕೊಂಡು ಬರಲು ಮೇಲಕ್ಕೆ ಬರುವಷ್ಟರಲ್ಲಿ, ಇವನು ಓಡಲು ಶುರು ಮಾಡಿದ. ಇವರಿಗೆ ಸಿಟ್ಟು ಬಂದು ಅವನನ್ನು ಅರ್ಧ ಮೈಲು ಓಡಿಸಿಕೊಂಡು ಹೋಗಿ ಹಿಡಿದುಕೊಂಡು ಬಂದು ಮೇಲಿನಿಂದಲೇ ಎತ್ತಿ ನೀರಿನೊಳಗೆ ಹಾಕಿದರು. ಆಗ ನಮ್ಮ ಅಣ್ಣ ಅಳುತ್ತಿದ್ದರೂ, ಅವನಿಗೆ ಭಯ ದೂರವಾಗಿ, ಈಜಾಡಲು ಶುರು ಮಾಡಿದ.
ಈ ಘಟನೆಯ ನಂತರ ಅವನು ಹೊಲಕ್ಕೆ ಹೋದಾಗಲೆಲ್ಲ ಬಾವಿಗೆ ಹಾರುವುದು, ಸ್ವಲ್ಪ ಹೊತ್ತು ಈಜುವುದು, ಒದ್ದೆ ಬಟ್ಟೆಗಳನ್ನು ಹಾಗೇ ಬಿಸಿಲಿನಲ್ಲಿ ನಿಂತು ಮೈಮೇಲೆ ಒಣಗಿಸಿಕೊಳ್ಳುವುದು, ಹೀಗೆ ದಿನಕ್ಕೆ ನಾಲ್ಕೈದು ಬಾರಿ ಮಾಡುತ್ತಿದ್ದ. ಒಮ್ಮೆ ಶೀತ ಮುಚ್ಚಿಕೊಂಡು ಜ್ವರ ಹೆಚ್ಚಾಗಿ ಸನ್ನಿವಾತ ಆಯ್ತು 107 – 108 ಡಿಗ್ರಿ ಜ್ವರ ಬಂತು. ಮೈ ಮೇಲೆ ಎಚ್ಚರ ತಪ್ಪಿ ಏನೇನೋ ಬಡಬಡಿಸುತ್ತಿದ್ದ. ಆ ಕುಗ್ರಾಮದಲ್ಲಿ ಯಾವ ವೈದ್ಯಕೀಯ ಸೌಲಭ್ಯಗಳೂ ಇರಲಿಲ್ಲ. ಇದ್ದವರು ಒಬ್ಬರೇ ಡಾಕ್ಟರ್ ನಾಗೇಶ್ವರ್ ರಾವ್. ಎಲ್ ಎಂ ಪಿ. ಅವರೇ ತಮಗೆ ತಿಳಿದ ಗುಳಿಗೆ, ಔಷಧಿ, ಇಂಜೆಕ್ಷನ್ ಗಳನ್ನು ಕೊಟ್ಟು ವೈದ್ಯಕೀಯ ಚಿಕಿತ್ಸೆ ಮಾಡಿ 3-4 ದಿನಗಳಲ್ಲಿ ಸ್ವಲ್ಪ ಜ್ವರ ಇಳಿದು ಅವನಿಗೆ ಪ್ರಜ್ಞೆ ಬಂದಾಗ, ಈ ಡಾಕ್ಟರ್ “ಈಜಾಡೋಕೆ ಹೋಗೋಣ ಬರ್ತಿಯೇನೋ” ಅಂತ ಕೇಳುತ್ತಿದ್ದರು. ಅದರ ನಂತರ ದೊಡ್ಡವರು, ಮಕ್ಕಳಿಗೆಲ್ಲಾ ಎಚ್ಚರಿಕೆ ನೀಡಿ ಈ ರೀತಿ ಪದೇ ಪದೇ ನೀರಿನಲ್ಲಿ ಮುಳುಗಿ ಒದ್ದೆ ಬಟ್ಟೆಗಳಲ್ಲಿ ಇರಬಾರದೆಂದು ತಿಳಿಸಿದರು.
ಇನ್ನೊಮ್ಮೆ ಹೆಚ್ಚು ಜನರು ಇರಲಿಲ್ಲ ನಮ್ಮ ದೊಡ್ಡಪ್ಪನವರಿಗೆ ಊಟ ತಂದು ಕೊಟ್ಟ ನಮ್ಮ ದೊಡ್ಡಮ್ಮ ಜೊತೆಗೆ ಒಂದಿಬ್ಬರು ಹುಡುಗರು ಮಾತ್ರ ಇದ್ದರು. ಆಗಿನ್ನು ನನಗೆ ಈಜು ಬರುತ್ತಿರಲಿಲ್ಲ ಈಜು ಬುರುಡೆ ಕಟ್ಟಿಕೊಂಡು ನೀರಿನಲ್ಲಿ ಹಾರಿಬಿಟ್ಟೆ. ಹೇಗೂ ಈಜು ಬುರುಡೆ ಇದೆ. ಅದು ತೇಲಿಸುತ್ತದೆ ಅಂತ ಧೈರ್ಯ. ಆದರೆ ನಾನು ಹಾರಿದ ತಕ್ಷಣ, ಸರಿಯಾಗಿ ಕಟ್ಟಿಕೊಳ್ಳದಿದ್ದರಿಂದ, ಈಜು ಬುರುಡೆ ಬಿಚ್ಚಿಕೊಂಡು ನನ್ನಿಂದ ಬೇರೆಯಾಗಿ, , ಅದು ತೇಲುತ್ತಿತ್ತು, ಆದರೆ ನಾನು ಮುಳುಗಲು ಪ್ರಾರಂಭಿಸಿದೆ. ಅದನ್ನು ನೋಡಿ, ಅಲ್ಲೇ ನಮ್ಮ ಮೇಲೆ ನಿಗಾ ಇರಿಸಿದ್ದ ನಮ್ಮ ದೊಡ್ಡಮ್ಮ, “ಹುಡುಗ ಓತು, ಓತು” (ಹುಡುಗ ಹೋಯಿತು ಹೋಯಿತು) ಅಂತ ಕಿರುಚಿಕೊಂಡು, ನೀರಿನಲ್ಲಿ ನನ್ನ ಹತ್ತಿರದಲ್ಲಿ ಇದ್ದವರಿಗೆ ನನ್ನನ್ನು ದಡ ಸೇರಿಸಲು ಹೇಳಿದರು. ಯಾರೋ ಪುಣ್ಯಾತ್ಮರು ನನ್ನ ಕೈ ಹಿಡಿದು ದಡ ಸೇರಿಸಿದರು. ಇಲ್ಲದಿದ್ದರೆ ಈ ಲೇಖನ ಬರೆಯಲು ನಾನೇ ಇರುತ್ತಿರಲಿಲ್ಲ. ಹೀಗೆ ನಮ್ಮ ಬೇಸಿಗೆ ಈಜಾಟ.
ಆದರೆ ಈಗ ಯಾವ ಭಾವಿಗಳಲ್ಲೂ ನೀರಿಲ್ಲ. ಯಾವ ಹಳ್ಳದಲ್ಲೂ ನೀರಿಲ್ಲ. 800 – 1000 ಅಡಿ ಆಳಕ್ಕೆ ಕೊರೆದ ಕೊಳವೆ ಭಾವಿಗಳಲ್ಲೇ ನೀರಿಲ್ಲ. ನಗರ, ಪಟ್ಟಣ ಪ್ರದೇಶದ ಸಿರಿವಂತರ ಮಕ್ಕಳು ಸಮ್ಮರ್ ಕ್ಯಾಂಪ್ ಗಳಲ್ಲಿ ಹಣಕೊಟ್ಟು ಈಜು ಕಲಿಯಬಹುದು. ಆದರೆ ಗ್ರಾಮೀಣ ಭಾಗದ ಮಕ್ಕಳು ಈಜು ಕಲಿಯುವುದು ಹೇಗೆ.

–ಟಿ ವಿ ಬಿ ರಾಜನ್, ಬೆಂಗಳೂರು


ಸೊಗಸಾದ ಲೇಖನ. ಬಾಲ್ಯದ ನೆನಪುಗಳು ಮರುಕಳಿಸಿದವು.
ಸವಿನೆನಪುಗಳು ಸದಾ ಮಧುರ. ಚೆಂದದ ಬರಹ.
ಚಂದದ ಲೇಖನ ಸಾರ್.. ಆಪ್ತ ವಾಗಿತ್ತು..ನಿಮ್ಮ ಅನುಭವಗಳ ಅಭಿವ್ಯಕ್ತಿ… ಸರಳ ಸುಂದರವಾಗಿರುತ್ತದೆ…
Very good article, nature was at its best during our younger days. Now we see only concrete structures everywhere.
ಬಾಲ್ಯದ ನೆನಪುಗಳನ್ನು ಹೊತ್ತು ತಂದಿರುವ ಲೇಖನ ಸೊಗಸಾಗಿದೆ
ಲೇಖಕರ ಲೇಖನಗಳು ತಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ತಮ್ಮ ಅನುಭವದ ಲೇಖನಗಳನ್ನು ಪತ್ರಿಕೆ ಪ್ರಕಟ ಪಡಿಸುತ್ತಿದೆ. ಈ ಎಲ್ಲಾ ಲೇಖನಗಳು ಬಹುಶಹ ಲೇಖಕರು ಸ್ವತಃ ಅನುಭವದಿಂದ ಕೂಡಿದಂತಹ ಲೇಖನಗಳಾಗಿದ್ದು ಅತ್ಯಂತ ಉತ್ಕೃಷ್ಟ ಲೇಖನಗಳಾಗಿವೆ ಲೇಖಕರಿಗೆ ಹಾಗೂ ಪತ್ರಿಕೆಗೆ ಧನ್ಯವಾದಗಳು
ಸುಂದರವಾದ ಬರಹ
ಕೌತುಕಮಯ ಅನುಭವಗಳೊಂದಿಗೆ ಈಜಾಟದ ಮೋಜನ್ನು ವಿವರಿಸಿರುವ ಲೇಖನ ಮುದ ನೀಡಿತು.
Superb article taking us to our younger days of swimming in open wells. Presentation needs special appreciation
Very good narration of the olden days swimming training in rural Village, very humorous and enjoying episodes, I too underwent all these events I. addition we were trying swimming at jinagi halla in addition to washing everyday clothes, a great experience to recall the childhood events and enjoying at our ripe age. Thanks for author to recall our sweet memories ❤️ ♥️
Thanks to all for encouraging remarks
ಕನಸೊಂದು ಸುರುವಾಗಿ, ಹಂತ ಹಂತವಾಗಿ, ಪ್ರತಿ ಗುರುವಾರದಂದು ಸುರಹೊನ್ನೆ ಪ್ರಿಯರ ಕನಸಿನೊಂದಿಗೆ ವಿಹರಿಸುತ್ತಾ, ಕಷ್ಟ ಕಾರ್ಪಣ್ಯ, ಸುಖ ಸಂತೋಷಗಳ ಸಮ್ಮಿಲನದೊಂದಿಗೆ ಸುಖಾಂತ್ಯ ಕಂಡ ಧಾರವಾಹಿಯು ಸಾಮಾಜಿಕ ಕಥಾಪ್ರಿಯಯರ ಮನಗೆದ್ದಿದೆ! ನಮ್ಮೆಲ್ಲರ ಮನಮೆಚ್ಚಿನ, ಹೆಮ್ಮೆಯ ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಚಿಕ್ಕಂದಿನಲ್ಲಿ, ಅಜ್ಜನ ಮನೆಯಲ್ಲಿ, ನನಗೆ ಈಜು ಕಲಿಸಲು ಪ್ರಯತ್ನಿಸಿ ಸೋತು ಸುಣ್ಣವಾದ ನನ್ನತ್ತಿಗೆಯ ನೆನಪಾಗಿ ಈಗಲೂ ನಗು ಬರುವುದರ ಜೊತೆಗೆ ನಾನು ಈಜು ಕಲಿತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಪರಿತಪಿಸುವಂತಾಗಿದೆ! ಅಂತೂ, ಲೇಖನ ನಮ್ಮನ್ನೂ ಚೆನ್ನಾಗಿ ಈಜಿಸಿಕೊಂಡು…ಅಲ್ಲಲ್ಲ…ಓದಿಸಿಕೊಂಡು ಹೋಯ್ತು!!