ಒಂದು ಬಾರಿ ದೆಹಲಿಗೆ ಹೋಗುವ ಒಬ್ಬ ಪ್ರಯಾಣಿಕ ವಿಮಾನದಲ್ಲಿ ತನಗೆ ನಿಗದಿಯಾದ ಸೀಟಿನಲ್ಲಿ ಕುಳಿತಿದ್ದನು. ಹಿಂದಿನ, ಮುಂದಿನ ಮತ್ತು ಆತನ ಪಕ್ಕದಲ್ಲಿದ್ದ ಸೀಟುಗಳ ಪ್ರಯಾಣಿಕರಿನ್ನೂ ಬಂದಿರಲಿಲ್ಲ. ಆತನು ಪ್ರಯಾಣದ ಸಮಯದಲ್ಲಿ ಒಂದುಗಂಟೆ ಏನಾದರೂ ಓದುವುದು, ಸ್ವಲ್ಪಕಾಲ ನಿದ್ರೆ ಮಾಡುವುದು ಎಂದು ನಿರ್ಧರಿಸಿಕೊಂಡಿದ್ದ. ಹೊರಡುವ ಸಮಯ ಸಮೀಪಿಸುತ್ತಿದ್ದಂತೆ ಹತ್ತು ಜನ ಸೈನಿಕರು ಅವನ ಹಿಂದಿನ, ಮುಂದಿನ ಸಾಲುಗಳಲ್ಲಿ ಮತ್ತು ಅವನ ಪಕ್ಕದಲ್ಲಿ ಇದ್ದ ಸೀಟುಗಳಲ್ಲಿ ಆಸೀನರಾದರು. ವಿಮಾನ ಹೊರಟಿತು. ಕಾಲ ಕಳೆಯುವ ಸಲುವಾಗಿ ಪಕ್ಕದಲ್ಲಿದ್ದ ಸೈನಿಕನನ್ನು “ಎಲ್ಲಿಗೆ ಹೊರಟಿದ್ದೀರಿ?” ಎಂದು ಪ್ರಶ್ನಿಸಿದ. “ನಾವೆಲ್ಲ ಆಗ್ರಾಕ್ಕೆ ಹೊರಟಿದ್ದೇವೆ. ಅಲ್ಲಿ ನಮಗೆ ಎರಡುವಾರ ವಿಶೇಷ ತರಬೇತಿಯಿದೆ. ನಂತರ ನಮ್ಮನ್ನು ಯಾವುದೋ ಮಿಷನ್ಗಾಗಿ ಕಳುಹಿಸುತ್ತಾರೆ” ಎಂದರು.
ಸ್ವಲ್ಪ ಹೊತ್ತಿನಲ್ಲಿಯೇ ವಿಮಾನದಲ್ಲಿ ಗಗನಸಖಿಯು ಊಟದ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಬಂದಳು. ಬೇಕಾದವರು ಮಾತ್ರ ಊಟ ಆರ್ಡರ್ ಮಾಡಿ ಹಣ ಪಾವತಿಸಬಹುದಿತ್ತು. ಪ್ರಯಾಣಿಕ ತನಗಾಗಿ ಊಟ ಬೇಕೆಂದು ಹೇಳಿದ. ಪಕ್ಕದಲ್ಲಿದ್ದ ಸೈನಿಕರು ತಮ್ಮತಮ್ಮಲ್ಲಿ ಮಾತನಾಡಿಕೊಂಡರು. ವಿಮಾನದಲ್ಲಿ ಊಟ ದುಬಾರಿಯದ್ದಾಗಿರುತ್ತದೆ. ಆಗ್ರಾ ತಲುಪಿದ ನಂತರ ಯಾವುದಾದರೂ ಪುಟ್ಟ ಹೋಟೆಲಿನಲ್ಲಿಯೋ ಅಥವಾ ಧಾಬಾದಲ್ಲಿಯೋ ಮಾಡೋಣವೆಂದು ತೀರ್ಮಾನಿಸಿದರು. ಆದರೆ ಆ ಪ್ರಯಾಣಿಕನು ಎದ್ದು ಹೋಗಿ ಗಗನಸಖಿಗೆ ಅವರೆಲ್ಲ ಸೈನಿಕರಿಗೂ ಊಟ ಕೊಡುವಂತೆ ಕೋರಿದನು. ಅದರ ಹಣವನ್ನು ತಾನೇ ಕೊಟ್ಟನು. ಎಲ್ಲರಿಗೂ ಊಟ ಬಂದಿತು. ಖುಷಿಯಾಗಿ ಎಲ್ಲರೂ ತಿಂದರು. ಗಗನಸಖಿ ಅಲ್ಲಿಗೆ ಬಂದು ಪ್ರಯಾಣಿಕನಿಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳಿದಳು. “ಸರ್, ನನ್ನ ತಮ್ಮನೊಬ್ಬ ಕಾರ್ಗಿಲ್‌ನಲ್ಲಿ ಮಿಲಿಟರಿ ಕರ್ತವ್ಯದಲ್ಲಿದ್ದಾನೆ. ನೀವು ಇವರಿಗೆಲ್ಲ ಊಟ ಆರ್ಡರ್ ಮಾಡಿದಾಗ ನನಗೆ ನನ್ನ ತಮ್ಮನ ನೆನಪಾಯಿತು. ಅವನಿಗೇ ಊಟ ನೀಡಿದಂತಾಯಿತು. ಧನ್ಯವಾದಗಳು” ಎಂದಳು. ಸೈನಿಕರೆಲ್ಲರೂ ಧನ್ಯವಾದಗಳನ್ನು ಹೇಳಿದರು.
ಆ ವಿಮಾನದಲ್ಲಿದ್ದ ಸಹಪ್ರಯಾಣಿಕರಿಗೆಲ್ಲ ಸೈನಿಕರಿಗೆ ಊಟ ಮಾಡಿಸಿದ ಪ್ರಯಾಣಿಕನ ಬಗ್ಗೆ ಅಭಿಮಾನ ಮೂಡಿತು. ಅವರೆಲ್ಲ ಒಟ್ಟಾಗಿ ತಮಗೆ ತೋಚಿದಷ್ಟು ಹಣವನ್ನು ಒಟ್ಟುಗೂಡಿಸಿ ಅವನಿಗೆ ಕೊಡುತ್ತಾ “ತಾವು ತೋರಿದ ಸಹೃದಯತೆಯಲ್ಲಿ ನಮ್ಮದೂ ಅಳಿಲ ಸೇವೆಯಿರಲಿ. ದಯವಿಟ್ಟು ಇದನ್ನು ತೆಗೆದುಕೊಳ್ಳಲೇಬೇಕು” ಎಂದು ಒತ್ತಾಯಿಸಿ ಕೊಟ್ಟರು. ಆ ಪ್ರಯಾಣಿಕನು ಆಗ್ರಾ ಬಂದು ಸೈನಿಕರು ಧನ್ಯವಾದ ಹೇಳಿ ಇಳಿಯುವ ಸಮಯದಲ್ಲಿ ತನಗೆ ಎಲ್ಲರೂ ಕೊಟ್ಟಿದ್ದ ಹಣವನ್ನೆಲ್ಲ ಅವರ ಕೈಗೆ ಇಡುತ್ತಾ “ಇದು ನಿಮ್ಮ ದಾರಿಯ ಇತರ ಖರ್ಚುಗಳಿಗಿರಲಿ. ಇದು ನೀವು ಸಲ್ಲಿಸುವ ದೇಶವನ್ನು ಕಾಯುವ ನಿಮ್ಮ ಸೇವೆಗೆ ಬಹಳ ಅಲ್ಪ ಕಾಣಿಕೆ ಬೇಡವೆನ್ನಬೇಡಿ” ಎಂದು ಕೊಟ್ಟುಬಿಟ್ಟನು. ಅವರೆಲ್ಲ ಪ್ರಯಾಣಿಕನಿಗೆ ವಂದಿಸಿ ಇಳಿದುಹೋದರು.
ತಮ್ಮ ಬದುಕನ್ನೇ ಇತರರ ಕ್ಷೇಮಕ್ಕಾಗಿ ಮುಡಿಪಾಗಿಟ್ಟಿರುವ ಅವರನ್ನು ಮತ್ತು ಅವರ ಕುಟುಂಬವರ್ಗದವರನ್ನು ಭಗವಂತ ನೂರ್ಕಾಲ ಸುಖವಾಗಿರಿಸಲಿ. ಎಂದು ಪ್ರಾರ್ಥಿಸುತ್ತ ಆ ಪ್ರಯಾಣಿಕ ದೆಹಲಿಯಲ್ಲಿ ಇಳಿದು ಹೋದ.
((ಶ್ರೀಮತಿ ಬಿ.ಆರ್. ನಾಗರತ್ನ ಅವರು ವಿವಿಧ ಸಂದರ್ಭಗಳಲ್ಲಿ ತಮಗೆ ವಾಟ್ಸಾಪ್ ನಲ್ಲಿ ಹರಿದು ಬಂದ ಪೋಸ್ಟ್ ಗಳಲ್ಲಿ ಆಯ್ಧ ಕೆಲವು ಕಥೆಗಳಿಗೆ ಸೂಕ್ತ ಶೀರ್ಷಿಕೆಯನ್ನು ಕೊಟ್ಟು , ಸಾಂದರ್ಭಿಕ ರೇಖಾಚಿತ್ರಗಳನ್ನು ರಚಿಸಿ ಕಥಾಸರಣಿಯನ್ನು ಸಿದ್ಧಪಡಿಸಿದ್ದರು. ಈ ಕಥಾಸರಣಿಯಲ್ಲಿ ಇದು ಕೊನೆಯ ಕಥೆ. ಲೇಖಕಿಯವರಿಗೆ ಧನ್ಯವಾದಗಳು -ಸಂಪಾದಕಿ))

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

ಎಂದಿನಂತೆ ಉತ್ತಮ ಸಂದೇಶ ನೀಡುವ ಚೆಂದದ ಕಥೆ. ಪೂರಕ ಚಿತ್ರ ಗಳು ಮನಸ್ಸಿಗೆ ಮುದ ನೀಡುತ್ತಿದ್ದವು. ಈ ಸರಣಿ ಮುಗಿಯಬಾರದಿತ್ತು.
ಮನ ಮುಟ್ಟಿದ ಕಥೆ
ಬಹಳ ಸುಂದರವಾದ ಕಥೆ. ಇಷ್ಟು ದಿನ ತುಂಬಾ ಸೊಗಸಾಗಿ ಮೂಡಿ ಬಂದವು ಎಲ್ಲಾ ಕಥೆಗಳು. ಪ್ರತಿಯೊಂದು ಕಥೆಯಲ್ಲಿಯೂ ಅದ್ಭುತವಾದ ಸಂದೇಶ ಇರುತಿತ್ತು. ಧನ್ಯವಾದಗಳು ಮೇಡಂ.
ಉತ್ತಮ ಮೌಲ್ಯಗಳನ್ನು ಹೊಂದಿದ, ಕಣ್ಣು ಒದ್ದೆಯಾಗಿಸಿದ ಈ ಕಥೆಯನ್ನು ಮೊದಲೊಮ್ಮೆ ಓದಿದ್ದರೂ, ಭಾವುಕಳಾದೆ. ಒಳ್ಳೆಯ ಸಂದೇಶ ಹೊತ್ತ ಚಂದದ ಕಥೆಗಳನ್ನು, ಸ್ವರಚಿತ ರೇಖಾಚಿತ್ರದೊಂದಿಗೆ ಸುರಹೊನ್ನೆ ಮೂಲಕ ನಮಗೆ ಒದಗಿಸಿದ ಹಿರಿಯ ಲೇಖಕಿ ನಾಗರತ್ನ ಮೇಡಂ ಅವರಿಗೆ ಪ್ರೀತಿಯಿಂದ ಕೃತಜ್ಞತೆಗಳು
ನಮಸ್ಕಾರ. …..ನನಗೆ ವಾಟ್ಸಪ್ನಲ್ಲಿ ಬಂದ ಕತೆಗಳಲ್ಲಿ ಕೆಲವು ನನ್ನನ್ನು ಬಹಳವಾಗಿ ಕಾಡಿ ದವು ಅವುಗಳನ್ನು ಸ್ವಲ್ಪ ಸಂಸ್ಕರಿಸಿ ಶ್ರೀ ಷಿಕೆ ಕೊಟ್ಟು.. ಅದಕ್ಕೆ ಪೂರಕವಾದ ರೇಖಾಚಿತ್ರ ಬರೆದು ಒಟ್ಟು ಗೂಡಿಸಿದೆ .. ಆ…ಎಂಬತ್ನಾಲಕ್ಕು ಕತೆ ಗಳನ್ನು ತಮ್ಮ ಪತ್ರಿಕೆ ಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ… ಸುರಹೊನ್ನೆಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳ ನ್ನು ಅರ್ಪಿಸುತ್ತಿದ್ದೇನೆ..ಹಾಗೇ ಅವುಗಳನ್ನು ಓದಿ..ಪ್ರತಿಕ್ರಿಯಿಸಿದ ಆತ್ಮೀಯ ಓದುಗರಿಗೆ ನನ್ನ ವಿನಯ ಪೂರ್ವ ಕ ವಂದನೆಗಳು…
ಅತ್ಯುತ್ತಮ ಸಂದೇಶಗಳನ್ನು ಸರಳವಾಗಿಯೂ ಮನಮುಟ್ಟುವಂತೆಯೂ ಸಣ್ಣ ಕಥೆಗಳಾಗಿ ಹೆಣೆದು ಸೂಕ್ತ ಚಿತ್ರದೊಂದಿಗೆ ಕಟ್ಟಿಕೊಟ್ಟ ಲೇಖಕಿಗೆ ಅಭಿನಂದನೆಗಳು. ಈ ಬಾರಿಯ ಕಥೆಯೂ ಸಹೃದಯತೆಯ ಸಂದೇಶವನ್ನು ಎಂದಿನಂತೆ ಸರಳವಾಗಿ ನಿರೂಪಿಸಿತು.
ತುಂಬಾ ಸೊಗಸಾದ ಲೇಖನ Madam
ನೀತಿಯುಕ್ತವಾಗಿದ್ದ ಪುಟ್ಟ ವಾಟ್ಸಾಪ್ ಕತೆಗಳು ಚೆನ್ನಾಗಿರುತ್ತಿದ್ದುವು. ಈ ಕಥಾ ಸರಣಿ ಮುಗಿದೇ ಹೋಯಿತೆ, ಶತಕವಾದರೂ ಪೂರೈಸಬಹುದಾಗಿತ್ತು ಅನಿಸಿತು.
ನಿಮ್ಮ ..ಸಾಹಿತ್ಯ ಸಹೃದಯಕ್ಕೆ ನನ್ನ ದೊಂದು ನಮನ …ಸುರಹೊನ್ನೆಯ ಸಂಪಾದಕರಾದ ಹೇಮಾರವರಿಗೆ.