ಕಾರಿರುಳ ರಾತ್ರಿಯಲಿ ಸಣ್ಣ ಹಣತೆಯ ಬೆಳಕಲ್ಲಿ ಸಾಗಿರುವೆ
ಸಾಗುವ ಹಾದಿ ಸರಿಯಾಗಿದೆಯೋ ಆ ಭಗವಂತನೇ ಬಲ್ಲ
ಆಗಾಗ ಸಿಗುವ ಗುಣಿ ತಗ್ಗುಗಳು
ಕಾಲಿಗೆ ಎಡತಾಕುವ ಎದ್ದ ಕಲ್ಲುಗಳು
ಪ್ರತಿ ಹೆಜ್ಜೆಗೂ ಅವ್ಯಕ್ತ ಭಯ ಆವರಿಸಿದೆ
ಮುಂದಿನ ಪಯಣ ಗೊಂದಲದ ಗೂಡಾಗಿ ಅಸ್ಪಷ್ಟವಾಗಿದೆ
ನೆಚ್ಚಿಕೊಂಡ ದೀಪದ ಬೆಳಕು ಕಾಲ ಮುಂದಿನ ದಾರಿ ಮಾತ್ರ ತೋರಿದೆ
ಮುಂಬರುವ ದಿಣ್ಣೆ ಕುಳಿಗಳ ನೋಡಲು ಪ್ರಕಾಶ ಸಾಕಾಗದೆ ಹೋಗಿದೆ
ಜೀವನದ ಸಾಗುವಿಕೆಯೆಲ್ಲಾ ಹೀಗೆ ಕಳೆದಿರುವೆ
ದಾಟಿ ಬಂದಿರುವ ನಿಲ್ದಾಣಗಳನೆಲ್ಲಾ ಕಣ್ಣ ತುಂಬಿಕೊಂಡಿರುವೆ
ಮೊದಲಾದರೂ ಹೊಳೆಯುವ ಕೈ ಬೆಳಕು ನನ್ನ ಬಳಿ ಎಲ್ಲಿತ್ತು?
ಇದೇ ಪುಟ್ಟ ಹಣತೆ ಬೀಳಿಸದೆ ಇಷ್ಟು ದೂರ ಕರೆದುಕೊಂಡು ಬಂದಿತ್ತು
ಪ್ರಣತಿಯ ನಂಬಿದ ಬದುಕು ಎಡವದೆ ಮುಂದೆ ಸಾಗಲಿ
ಭಗವಂತನ ಕರುಣೆಯೆಂಬ ಎಣ್ಣೆ ಬಳಸಿಕೊಂಡು ಸದಾ ಬೆಳಗುತಿರಲಿ
ಪರಿಶ್ರಮವೆಂಬ ಹತ್ತಿಯಿಂದ ಬತ್ತಿ ಹೊಸೆದಿರುವೆ
ನಿಷ್ಠೆಯೆಂಬ ಕೈಗಳನ್ನು ದೀಪದ ಸುತ್ತ ಆರದಂತೆ ಹಿಡಿದಿರುವೆ
ಅನಾರೋಗ್ಯವೆಂಬ ಗಾಳಿ ಬೀಸಿ ಜೀವನದ ದೀಪವ ಆರಿಸದಿರಲಿ
ಭರವಸೆಯ ಬೆಳಕು ಮೈ ಮನಗಳಲಿ ತುಂಬಿರಲಿ
-ಕೆ.ಎಂ ಶರಣಬಸವೇಶ


ಬಹಳ ಅರ್ಥಪೂರ್ಣ ಕವನ
ಚಂದದ ಕವನ
ಬದುಕಿನ ಏರಿಳಿತಗಳನ್ನೆಲ್ಲಾ ಚಿತ್ರಿಸಿರುವ ಕವನ
ಕೊನೆಯಲ್ಲಿ ಭರವಸೆಯ ಬೆಳಕು ಮೂಡಿಸಿರುವ ಕವನ
ವಂದನೆಗಳು
ಉತ್ತಮ ಆಶಯ ಹಾಗೂ ಆಶಾಭಾವವನ್ನು ಹೊತ್ತ ಚಂದದ ಕವನ
ಸರಳ ಸುಂದರ ಕವನ..ಮತ್ತೆ ಮತ್ತೆ ಮೆಲಕು ಹಾಕುವಂತಿದೆ
ಅರ್ಥಪೂರ್ಣವಾದದ್ದು. ಪ್ರಣತಿ…… ಎಣ್ಣೆ…… ಬತ್ತಿ…… ಅಬ್ಬಾ! ಎಂತಹ ಹೋಲಿಕೆ. ಕವನದ ತುಂಬಾ ಭಾವ ಅಡಗಿದೆ.
ಕವನದಲ್ಲಿ ಹೊಂಬೆಳಕು ಮೂಡಿದೆ.
ಅತ್ಯಂತ ಸಂಕ್ಷಿಪ್ತವಾಗಿ ಜೀವನಾರ್ಥವನ್ನು ಬಿತ್ತರಿಸಿದೆ ಈ ಕವನ
ಚಂದದ ಉಪಮೆಗಳ ಸುಂದರ ಕವನ ಅರ್ಥಪೂರ್ಣವಾಗಿದೆ.
ಅರ್ಥಪೂರ್ಣ ಕವನ . ಚೆನ್ನಾಗಿದೆ
ಓದಿ ಪ್ರತಿಕ್ರಿಯೆ ನೀಡಿದ ಎಲ್ಲಾ ಹಿರಿಯರಿಗೆ ವಂದನೆಗಳು. ನಿಮ್ಮ ಈ ಪ್ರೋತ್ಸಾಹವೇ ಬರೆಯಲು ಸ್ಪೂರ್ತಿ ತುಂಬಿದೆ.
ಬರಹಕ್ಕೆ ತಕ್ಕ ಅಂದದ ಚಿತ್ರವನ್ನು ಆಯ್ಕೆ ಮಾಡಿ ಪ್ರಕಟಿಸಿದ ಹೇಮಾ ಮಾಲಾ ಮೇಡಂ ಗೆ ಧನ್ಯವಾದಗಳು