ಪರಾಗ

ಅವರವರ ಭಾವಕ್ಕೇ . . .

Share Button

ಹೊರಡೀ ರಾಘು, ಏನು ಅತೀ ಆಡ್ತೀರಿ, ರಾಘವೇಂದ್ರ ಸ್ವಾಮಿಗಳಿಗೇನೂ ಬೇರೆ ಕೆಲ್ಸಾನೇ ಇಲ್ಲ, ನೀವು ಕೊತ್ತಂಬರೀ ಸೊಪ್ಪು ತರೋದಕ್ಕೆ ಹೋದ್ರೂ ನಿಮ್ಮನ್ನ ಕಾಯೋದೆ ಕೆಲ್ಸಾನಾ. . .
ಎಂದಿನಂತೆ ಮುಸಿ ಮುಸಿ ನಗುತ್ತಾ ಸುಮ ಛೇಡಿಸಿದಳು.

ರಾಘವೇಂದ್ರ, ದೇವರ ಮನೆಯಲ್ಲಿದ್ದ ಧ್ಯಾನಮುದ್ರೆಯ ರಾಯರ ಫೋಟೋಗೆ ಕೈ ಮುಗಿದು, ಸುಮಳ ಮಾತಿಗೆ ಒಂದಿನಿತೂ ಬೇಸರಿಸದೆ ಹೇಳಿದರು.
ಅದೆಲ್ಲಾ ಗೊತ್ತಿಲ್ಲಾ, ಮನೆಯಿಂದ ಹೊರ ಹೋಗುವಾಗಲೆಲ್ಲಾ ನಮ್ಮ ರಾಯರಿಗೆ ಕೈ ಮುಗಿದೇ ನಾನು ಹೋಗುವುದು, ಅವರೇ ನನ್ನ ಕಾಯ್ವ ಕಲ್ಪತರು – ಎನ್ನುತ್ತಾ ಚಪ್ಪಲಿ ಮೆಟ್ಟಿ ಹೊರ ಹೊರಟರು.
ಹೌದು, ರಾಘವೇಂದ್ರರಿಗೆ ರಾಯರಲ್ಲಿ ಅಪಾರ ನಂಬಿಕೆ. ಯಾವ ಮಂತ್ರ, ತಂತ್ರ, ಪೂಜೆ, ಪುನಸ್ಕಾರಗಳು ತಿಳಿಯದಿದ್ದರೂ ಗುರುವಾರಗಳಂದು ತಪ್ಪದೇ ರಾಯರ ಮಠಕ್ಕೆ ಹೋಗುವುದು ಮತ್ತು ಪ್ರತೀ ಬಾರಿ ಮನೆಯಿಂದ ಹೊರ ಹೊರಟಾಗ ರಾಯರ ಫೋಟೋಗೆ ಕೈ ಮುಗಿಯುವುದು ತಪ್ಪುತ್ತಿರಲಿಲ್ಲ. ಸುಮ ಆಗಾಗ್ಗೆ ರೇಗಿಸುವುದನ್ನೂ ನಿಲ್ಲಿಸುತ್ತಿರಲಿಲ್ಲ.

ಫೋನ್‌ ರಿಂಗಾಯಿತು. ರಾಘುವಿನ ಅಕ್ಕ ಗೌರಕ್ಕನ ಮಗಳು ಕಮಲು ಕರೆ ಮಾಡಿದ್ದಳು.
ಸುಮಕ್ಕ, ಅಮ್ಮನಿಗೆ ಮುಂದಿನ ತಿಂಗಳು ಹತ್ತನೇ ತಾರೀಖಿಗೆ ಎಂಭತ್ತು ವರ್ಷಗಳು ತುಂಬುತ್ತಿದೆ, ಏನಾದರೂ ಸಮಾರಂಭವನ್ನು ಹಮ್ಮಿಕೊಳ್ಳೋಣವೆಂದರೆ ಖಂಡಿತಾ ಬೇಡ ಎನ್ನುತ್ತಿದ್ದಾರೆ. ಆದರೆ ಅವರಿಗೆ ನಮ್ಮನ್ನೆಲ್ಲಾ ಮಂತ್ರಾಲಯಕ್ಕೆ ಕರೆದೊಯ್ಯಬೇಕಂತೆ. ನೀವಿಬ್ಬರೂ ದಂಪತಿಯೂ ಬರಬೇಕಂತೆ, ಅದು ಅವರ ಆಸೆಯಂತೆ, ಬರುತ್ತೀರಾ? ಹೋಗಿ ಬರೋಣ . .
ಅಯ್ಯೋ ಅನಾಯಾಸವಾಗಿ ಗೌರಕ್ಕ, ನಿಮ್ಮೆಲ್ಲರೊಂದಿಗೆ ಮಂತ್ರಾಲಯಕ್ಕೆ ಹೋಗುವ ಅವಕಾಶ ತಪ್ಪಿಸಿಕೊಳ್ಳುವುದುಂಟೆ? ಖಂಡಿತಾ ಬರುತ್ತೀವಿ – ಸುಮಾ ಹೇಳಿದಳು.
ರಾಘುವನ್ನು ಒಂದು ಮಾತು . . .
ಅವರನ್ನೇನು ಕೇಳುವುದು, ರಾಘವೇಂದ್ರ ಸ್ವಾಮಿಗಳು ಅವರ ಆರಾಧ್ಯ ದೈವ, ಖುಷಿಯಾಗಿ ಬಂದೇ ಬರುತ್ತಾರೆ, ಹೋಗಿ ಬರೋಣ ಬಿಡು. ಈಗಂತೂ ಹೇಗೂ ರಿಟೈರ್‌ ಆಗಿರುವುದರಿಂದ ಬೇರೆ ಯಾವ ಯೋಚನೆಯೂ, ಅಡೆತಡೆಯೂ ಇಲ್ಲ, ಬರುತ್ತೇವೆ ಬಿಡು.

ಗೌರಕ್ಕ, ಅವರ ಇಬ್ಬರು ಹೆಣ್ಣು ಮಕ್ಕಳು ಕಮಲಾ, ಗೀತಾ, ಇಬ್ಬರು ಅಳಿಯಂದಿರು ಶ್ರೀಧರ, ರಮೇಶ, ಸುಮಾ, ರಾಘು ಎಲ್ಲರೂ ಒಂಭತ್ತನೆಯ ತಾರೀಖು ರಾತ್ರಿ ಏಳು ಗಂಟೆಗೆ ಹೊರಡುವ ಕರ್ನಾಟಕ ಎಕ್ಸಪ್ರೆಸ್‌ ರೈಲಿನಲ್ಲಿ ಉತ್ಸಾಹದಿಂದ ಹೊರಟರು. ಕುರುಕಲು ತಿಂಡಿ, ಹರಟೆ, ಗೌರಕ್ಕನ ಬಾಲ್ಯದ ಕಥೆಗಳು ಹೀಗೆ ಪ್ರಯಾಣ ಉಲ್ಲಾಸದಾಯಕವಾಗಿತ್ತು. ಬೆಳಗಿನ ಝಾವ ಮೂರು ಗಂಟೆಯ ವೇಳೆಗೆ ಮಂತ್ರಾಲಯಂ ರೋಡ್‌ ತಲುಪಿದ ರೈಲು ಇವರನ್ನೆಲ್ಲಾ ಇಳಿಸಿ ಮುಂದೆ ಹೋಯಿತು. ಅಲ್ಲಿಂದ ಮತ್ತೊಂದು ಟ್ಯಾಕ್ಸಿ ಮಾಡಿಕೊಂಡು ಮಂತ್ರಾಲಯ ತಲುಪಿದ್ದಾಯಿತು. ಎಲ್ಲರಲ್ಲೂ ಏನೋ ಧನ್ಯತಾ ಭಾವ, ಪೂಜ್ಯ ಭಾವ.

ಕಮಲಾ ಮೊದಲೇ ಬುಕ್‌ ಮಾಡಿದ್ದ ಲಾಡ್ಜಿಗೆ ಹೋಗಿ ಕೆಲಕಾಲ ವಿರಮಿಸಿ, ಪ್ರಾತಃವಿಧಿಗಳನ್ನು ಪೂರೈಸಿ ರಾಯರ ದರ್ಶನಕ್ಕೆ ಹೊರಟಿದ್ದಾಯಿತು. ರಾಘು – ನಾನು ನದೀ ಸ್ನಾನ ಮಾಡಲೇಬೇಕು, ನಾನು ಹರಸಿಕೊಂಡದ್ದಾಗಿದೆ, ಉರುಳು ಸೇವೆ ಮಾಡುತ್ತೇನೆ – ಎಂದರು.
ಈ ವಯಸ್ಸಿನಲ್ಲಿ ಅದೆಲ್ಲಾ ಬೇಡ, ನಾಲ್ಕಾರು ಹೆಚ್ಚಿಗೆ ನಮಸ್ಕಾರ ಮಾಡಿಬಿಡು ಸಾಕು – ಗೌರಕ್ಕ ಹೇಳಿದರು.
ಇಲ್ಲ, ಮಂತ್ರಾಲಯಕ್ಕೆ ಹೊರಡುವುದೆಂದುಕೊಂಡ ಕ್ಷಣದಲ್ಲೇ ನಾನು ಹರಸಿಕೊಂಡು ಬಿಟ್ಟೆ – ರಾಘು ಪಟ್ಟು ಬಿಡಲಿಲ್ಲ.
ಸರಿ, ನಾನು ಬರುತ್ತೇನೆ ನಡೆಯಿರಿ – ಎನ್ನುತ್ತಾ ಸುಮಾ ರಾಘುವನ್ನು ಹಿಂಬಾಲಿಸಿದಳು.

ನಾವುಗಳು ಪ್ರಸಾದ ಪ್ಯಾಕ್‌ ಮಾಡುವಲ್ಲಿ ಕುಳಿತಿರುತ್ತೇವೆ. ನಿಮ್ಮ ಸೇವೆ ಆದ ನಂತರ ಬಂದು ಕರೆಯಿರಿ, ಎಲ್ಲರೂ ಒಟ್ಟಿಗೆ ದರ್ಶನಕ್ಕೆ ಹೋಗೋಣ – ಗೌರಕ್ಕ ಹೇಳಿದರು.
ರಾಘು ಮತ್ತು ಸುಮ ಇಬ್ಬರೂ ತುಂಗಭದ್ರಾ ನದಿಯಲ್ಲಿ ಮಿಂದು ಬಂದರು. ಸುಮಳಿಗೆ ಗಾಭರಿ, ಆತಂಕ ʼಇವರ ಕೈಲಿ ಆಗುತ್ತಾ?ʼ ಅಂತ.
ರಾಘುವಿನ ಮುಖದಲ್ಲಿ ಅಚಲ ವಿಶ್ವಾಸ. ಇಬ್ಬರೂ ನದಿಯಲ್ಲಿ ಮುಳುಗು ಹಾಕಿ ಎದ್ದು ಹಾಗೇ ಒದ್ದೆ ಬಟ್ಟೆಯಲ್ಲಿ ಬಂದಿದ್ದರು.
ರಾಘವೇಂದ್ರ ಎರಡು ನಿಮಿಷ ಕೈ ಮುಗಿದು ಎಂದಿನಂತೆ ರಾಯರನ್ನು ಧ್ಯಾನಿಸಿ ಉರುಳು ಸೇವೆಗೆ ತೊಡಗಿಯೇಬಿಟ್ಟರು. ಬಾಯಲ್ಲಿ ʼಓಂ, ರಾಘವೇಂದ್ರಾಯ ನಮಃʼ ಎಂದುಕೊಳ್ಳುತ್ತಾ ಯಾವ ಅಡೆತಡೆಯೂ ಇಲ್ಲದೆ ಉರುಳು ಸೇವೆಯನ್ನು ಮಾಡಿ ಮುಗಿಸಿದರು. ಅವರಿಂದ ಪ್ರೇರಣೆಗೊಂಡು ಸುಮಾ, ನಾನು ಮಾಡುತ್ತೇನೆಂದು ತಾನೂ ಉರಳು ಸೇವೆಗೆ ತೊಡಗಿದಳು.
ಖಂಡಿತಾ ಮಾಡು, ಒಳ್ಳೆಯದಾಗುತ್ತೆ – ರಾಘು ಹುರಿದುಂಬಿಸಿದರು. ಅನಾಯಾಸವಾಗಿ ಸುಮಳೂ ಪೂರೈಸಿದಳು. ಮಿಕ್ಕವರೆಲ್ಲಾ ಇವರುಗಳಿಗಾಗಿ ಕಾದಿದ್ದರು. ಎಲ್ಲರೂ ಒಟ್ಟಿಗೇ ಒಳಗೆ ಹೋಗಿ ದೇವರ, ರಾಯರ ದರ್ಶನ ಪಡೆದು ಹೊರ ಬಂದರು. ತೀರ್ಥ, ಮಂತ್ರಾಕ್ಷತೆ ಪಡೆದರು.

ಸುಮಾ ಹೇಳಿದಳು – ಗೌರಕ್ಕಾ, ನಾನೂ ಉರುಳು ಸೇವೆ ಮಾಡಿದೆ?
ಕಮಲಾ – ಯಾಕೋ ಸುಮಕ್ಕ ನಿಮಗೂ ರಾಘು ಮಾಮನ ಗಾಳಿ ಬೀಸಿ ಬಿಟ್ಟಿತಾ?
ಗೌರಕ್ಕ – ಹೆಂಗಸರು ಉರುಳು ಸೇವೆ ಮಾಡಬಾರದು, ಅವರು ಹೆಜ್ಜೆ ನಮಸ್ಕಾರ ಮಾಡಬಹುದು, ಎನ್ನುತ್ತಾರಲ್ಲಾ – ಸಂಶಯ ವ್ಯಕ್ತಪಡಿಸಿದರು.
ಭಕ್ತಿ, ಶ್ರದ್ಧೆ ಮುಖ್ಯ, ಯಾರು ಯಾವ ರೀತಿಯ ಸೇವೆಯನ್ನಾದರೂ ಮಾಡಬಹುದು – ರಾಘು ಹೇಳಿದರು.
ಹಲವಾರು ಹೆಂಗಸರುಗಳೂ ಉರಳುಸೇವೆ ಮಾಡುತ್ತಿದ್ದರಲ್ಲಾ ಗೌರಕ್ಕಾ, ಇವರನ್ನು ನೋಡಿ ನನಗೂ ಮನಸ್ಸಾಯಿತು – ಸುಮ ಹೇಳಿದಳು.
ಇರಲಿ ಬಿಡು, ನನಗೂ ನಿಖರವಾಗಿ ಗೊತ್ತಿಲ್ಲ, ಹಾಗೆ ಕಿವಿಯ ಮೇಲೆ ಬಿದದ್ದು ನೆನಪಿಗೆ ಬಂತು, ಹೇಳಿದೆ ಅಷ್ಟೆ – ಗೌರಕ್ಕ ಹೇಳಿದರು.
ಹಾಗೆ ನಿಷಿದ್ಧ ಆದ್ರೆ, ಇಲ್ಲಿ ಎಲ್ಲಿಯಾದರೂ ಬೋರ್ಡಾದರೂ ಹಾಕಬೇಕಿತ್ತು, ಅದೇನೂ ಇಲ್ಲವಲ್ಲ, ಹಾಗಾಗಿ ಮಾಡಬಹುದು ಅನ್ನಿಸುತ್ತೆ, ಇರಲಿ ಈಗ ಆ ವಿಷಯ ಬಿಡೋಣ – ಕಮಲ ಹೇಳಿದರು.

ಎಲ್ಲರಿಗೂ ಒಂದು ರೀತಿಯ ಭಕ್ತಿ ಭಾವದ ತೃಪ್ತಿ ಮನೆ ಮಾಡಿತ್ತು. ರಾಘು ಸ್ವಲ್ಪ ಜಾಸ್ತಿಯೇ ಭಕ್ತಿ ಪರವಶರಾಗಿ ಎಲ್ಲರಿಂದ ಸ್ವಲ್ಪ ದೂರ, ಪ್ರಾಕಾರದ ಕಟ್ಟೆಯ ಮೇಲೆ ಹೋಗಿ ಕುಳಿತಿದ್ದರು. ಅವರ ಮೊಗದಲ್ಲಿ ಹರಕೆ ಪೂರೈಸಿದ, ಅವರ ಆರಾಧ್ಯ ದೈವದ ದರುಶನ ಪಡೆದು ಪುನೀತರಾದ ಧನ್ಯಾತಾ ಭಾವ ಮನೆ ಮಾಡಿತ್ತು. ಒಂದು ರೀತಿಯ ಸಾತ್ವಿಕ ದೈವೀ ಕಳೆ ಗೋಚರಿಸುತಿತ್ತು.

ರಿಟೈರ್‌ ಆದ ನಂತರ ದಿನಾ ಶೇವ್‌ ಮಾಡಿಕೊಳ್ಳಲು ಸೋಮಾರಿತನದಿಂದಲೋ, ಫ್ಯಾಷನ್‌ ಎಂದೋ ಗಡ್ಡ ಬಿಟ್ಟಿದ್ದ ರಾಘು, ಒದ್ದೆ ಪಂಚೆ ಉಟ್ಟು, ಮೇಲೆ ಒದ್ದೆಯದೇ ಶಲ್ಯವನ್ನು ಹೊದ್ದು ಕುಳಿತಿದ್ದರು.
ಆ ಕಡೆ ಇಬ್ಬರು ಹುಡುಗಿಯರು ಇವರನ್ನು ನೋಡು ನೋಡುತ್ತಾ ಮಾತುಗಳನ್ನಾಡಿಕೊಂಡು ನಂತರದಲ್ಲಿ ಬಂದು ಇವರ ಕಾಲಿಗೆರಗಿದರು. ರಾಘುವಿಗೆ ಏನೂ ಮಾಡಲು ತೋಚದೆ “ರಾಯರು ಒಳ್ಳೆಯದು ಮಾಡಲಿ” ಎಂದು ಹಾರೈಸಿದರು. ಅಷ್ಟರಲ್ಲೇ ಮತ್ತೊಬ್ಬರು, ಮಗದೊಬ್ಬರು, ಹೀಗೆ ಹಿರಿಯರು, ಕಿರಿಯರೆನ್ನದೆ ಹತ್ತು ಹನ್ನೆರಡು ಮಂದಿ ಬಂದು ನಮಸ್ಕರಿಸತೊಡಗಿದರು. ರಾಘು ಗಾಭರಿಯಾಗಿಬಿಟ್ಟರು. ಇನ್ನೂ ಜನರ ದಂಡು ಜಾಸ್ತಿಯಾಗುವ ಮೊದಲೇ ಎದ್ದು ಈ ಕಡೆ ಬಂದು ಬಿಟ್ಟರು.

ಸುಮಾ, ಕಮಲಾ ಎಲ್ಲಾ ರೇಗಿಸಿದ್ದೇ ರೇಗಿಸಿದ್ದು. ಗೀತಾ ಅಂತೂ – ರಾಘು ಮಾಮ, ನನಗೂ ನಿಮ್ಮ ಜೊತೆ ಈ ಗೆಟಪ್ಪಿನಲ್ಲಿ ಒಂದು ಫೋಟೋ ಬೇಕು – ಎನ್ನುತ್ತಾ ಫೋಟೋ ತೆಗೆಸಿಕೊಂಡಳು. ಗೌರಕ್ಕ, ಎಲ್ಲರನ್ನೂ ಗದರಿಸಿ ಸುಮ್ಮನಾಗಿಸಿದರು,
ಮಧ್ಯಾನ್ಹ ಊಟದ ನಂತರ ಕೆಲಕಾಲ ವಿಶ್ರಮಿಸಿಕೊಂಡು ಮಂತ್ರಾಲಯ ದರ್ಶನಕ್ಕೆ ಹೊರಟಿದ್ದಾಯಿತು. ಭವ್ಯ ಆಂಜನೇಯನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ನಂತರ ಬಿಚ್ಚೋಲೆ ಕಡೆ ಹೊರಟಿದ್ದಾಯಿತು.

ಪವಿತ್ರ ತುಂಗಭದ್ರಾ ನದಿಯ ದಂಡೆಯ ಮೇಲಿರುವ ಬಿಚ್ಚೋಲೆ, ರಾಘವೇಂದ್ರ ಸ್ವಾಮಿಗಳು ತಮ್ಮ ಪಟ್ಟ ಶಿಷ್ಯ ಅಪ್ಪಣ್ಣಾಚಾರ್ಯರೊಡನೆ ಇದ್ದು ತಪಸ್ಸುಗೈದ ಪವಿತ್ರ ಸ್ಥಳ. ಅಲ್ಲಿ ರಾಯರು ವಾಸಿಸುತ್ತಿದ್ದ ಮನೆಯೂ ಇದೆ. ಎಲ್ಲವನ್ನೂ ನೋಡಿಕೊಂಡು ಪುನೀತರಾಗಿ ಹಿಂದಿರಿಗಿ ಬಂದರು. ಆಗ ಅಲ್ಲೇ ಮರದ ನೆರಳಿನಲ್ಲಿದ್ದ ಕಟ್ಟೆಯ ಮೇಲೆ ಇಟ್ಟುಕೊಂಡಿದ್ದ ಸೀಬೇ ಹಣ್ಣುಗಳನ್ನು ಕೊಂಡರು ರಾಘು. ಹೊರಬಂದು ಲಾಡ್ಜಿಗೆ ಹಿಂದಿರುಗಲು ಹೊರಟಿದ್ದಾಯಿತು. ಒಂದೆರಡು ಕಿ.ಮೀ. ಬಂದಿರಲಿಲ್ಲ, ಸುಮಳ ಫೋನ್‌ ರಿಂಗಾಯಿತು, ಯಾವುದೋ ಅಪರಿಚಿತ ನಂಬರ್‌, ಎತ್ತಿದರೆ – ರಾಘವೇಂದ್ರ ನಿಮ್ಮವರಾ? – ಯಾರೋ ಅಪರಿಚಿತರು ಕೇಳಿದರು.
ಹೌದು, ಅವರು ನಮ್ಮೆಜಮಾನರು.
ಗುರುಗಳ ಮನೆಯ ಮುಂದೆ ಸೀಬೇಹಣ್ಣು ಮಾರುತ್ತಿದವನು ನಾನು, ಇಲ್ಲಿ ಹಣ್ಣು ಕೊಂಡ ಹಿರಿಯರೊಬ್ಬರು ತಮ್ಮ ಪರ್ಸ್‌, ಫೋನ್‌ ಎಲ್ಲ ಬಿಟ್ಟು ಹೋಗಿದ್ದಾರೆ. ಆ ಪರ್ಸಿನಲ್ಲಿ ಈ ನಂಬರ್‌ ಬರೆದ ಚೀಟಿಯಿತ್ತು, ಅದಕ್ಕೇ ಕಾಲ್‌ ಮಾಡಿದೆ.
ಒನ್‌ ಸೆಕೆಂಡ್‌ – ಎಂದ ಸುಮ, ಇತ್ತ ತಿರುಗಿ, – ರಾಘು, ನಿಮ್ಮ ಫೋನ್‌ ಪರ್ಸ್‌ ಎಲ್ಲಿ? – ಕೇಳೀದಳು. ಜೋಬುಗಳನ್ನು ಮುಟ್ಟಿ ನೋಡಿಕೊಂಡ ರಾಘು – ಅಯ್ಯೋ ಅಲ್ಲೇ ಸೀಬೇ ಹಣ್ಣಿನವನ ಹತ್ತಿರ ಬಿಟ್ಟು ಬಂದು ಬಿಟ್ಟೆ – ಎನ್ನಬೇಕೆ?
ಇತ್ತ ತಿರುಗಿದ ಸುಮ ಪೋನಿನಲ್ಲಿ – ಹೌದು, ಅದು ನಮ್ಮವರದ್ದೇ, ಮರೆತಿದ್ದಾರೆ, ಈಗ ಹಿಂದಿರುಗಿ ಬರುತ್ತೇವೆ, ದಯವಿಟ್ಟು ಅಲ್ಲೇ ಇರಿ – ಎಂದು ಹೇಳಿ ಫೋನ್‌ ಇಟ್ಟಳು.

ಕಾರನ್ನು ಹಿಂದಕ್ಕೆ ತಿರುಗಿಸಲಾಯಿತು. ಅವರು ಸಂಜೆಯಾಗಿದ್ದರಿಂದ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದವರು ಇವರಿಗಾಗಿ ಕಾದು ಪರ್ಸ್‌, ಫೋನ್ ಎಲ್ಲವನ್ನೂ ಹಿಂತಿರುಗಿಸಿ, ಎರಡೆರಡು ಸಲ, – ಎಲ್ಲಾ ಸರಿಯಾಗಿದೆಯಾ ನೋಡಿಕೊಳ್ಳಿ – ಎಂದರು. ʼಇರುತ್ತೆ ಬಿಡಿʼ – ಎಂದುಬಿಟ್ಟ ರಾಘವೇಂದ್ರರು, ಸ್ವಲ್ಪ ದುಡ್ಡು ಕೊಡಲು ಹೋದರೆ – ಖಂಡಿತಾ ಬೇಡಿ – ಎನ್ನುತ್ತಾ ಹೊರಟೇ ಬಿಟ್ಟರು.

ಎಲ್ಲರೂ ನಡೆದ ಘಟನೆಯ ಬಗ್ಗೆಯೇ ಮಾತನಾಡಿಕೊಳ್ಳುತ್ತಾ ಹಿಂದಿರುಗಿದರು. ಮಧ್ಯದಲ್ಲೇ ಮತ್ತೆರಡು ಬಾರಿ ಫೋನ್‌ ಮಾಡಿ – ಸರ್‌ ಸರಿಯಾಗಿ ನೋಡಿಕೊಳ್ಳಲಿಲ್ಲ, ಪರ್ಸಿನಲ್ಲಿ ಎಲ್ಲಾ ಸರಿಯಾಗಿದೆ ತಾನೆ? – ಎಂದು ಆ ಪರ್ಸ್‌ ಹಿಂದಿರುಗಿಸಿದವರು ಕೇಳಿದಾಗ, ಎಲ್ಲರಿಗೂ ಅವರ ಸಜ್ಜನಿಕೆಗೆ ಬೆರಗಾಗುವಂತಾದರೆ, ರಾಘು ಮಾತ್ರ – ನೋಡಿದೆಯಾ ಸುಮಾ, ನೀನು ನನ್ನ ರೇಗಿಸುತ್ತಿದ್ದೆಯಲ್ಲಾ, ನನ್ನ ಮೇಲೆ ರಾಯರ ದಯೆ ಹೇಗಿದೆ? – ಎಂದು ಮೀಸೆ ತಿರುವಿದರು, ಅಲ್ಲಾ ಗಡ್ಡ ನೀವಿಕೊಂಡರು.

ಅಲ್ಲಿಂದ ಹಿಂದಿರುಗಿದ ಗುಂಪು ರಾತ್ರಿ ಬಸ್ಸಿಗೆ ಹೊರಡುವ ಮುಂಚೆ ಮತ್ತೊಮ್ಮೆ ರಾಯರ ದರ್ಶನ ಪಡೆಯೋಣವೆಂದು ಮಂದಿರದೆಡೆಗೆ ನಡೆಯಿತು.

ಬೇಗ ನಮಸ್ಕಾರ ಮಾಡಿ ಹಿಂದಿರುಗುವುದು ತಾನೇ, ಎನ್ನುತ್ತಾ ಅಲ್ಲೇ ದೇವಸ್ಥಾನದ ಪಕ್ಕದಲ್ಲಿ, ಚಪ್ಪಲಿಯ ಸ್ಟಾಂಡಿನಲ್ಲಿ ಬಿಡದೇ, ಹಾಗೆಯೇ ರಾಶಿ ರಾಶಿ ಬಿಟ್ಟಿದ್ದ ಚಪ್ಪಲಿಗಳೊಂದಿಗೆ ತಮ್ಮ ಚಪ್ಪಲಿಗಳನ್ನು ಬಿಟ್ಟು ಒಳಹೋಗಿ ನಮಸ್ಕರಿಸಿ ಹೊರಬಂದು ಎಲ್ಲರೂ ಚಪ್ಪಲಿ ಮೆಟ್ಟಿಕೊಂಡರೆ, ಎರಡು ತಿಂಗಳ ಮುಂಚೆ ತಾನೆ, ʼಅಮ್ಮಾ ಕಾಲುನೋವುʼ, ಎಂದು ಅವಸ್ಥೆ ಪಡುವುದನ್ನು ನೋಡಲಾಗದೆ ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಮಗಳು ತೆಗೆಸಿಕೊಟ್ಟಿದ್ದ ಸುಮಳ ʼಸ್ಕೆಚರ್ಸ್‌ʼ ಚಪ್ಪಲಿಗಳು ಕಾಣೆಯಾಗಿದ್ದವು. ಅಷ್ಟು ರಾಶಿ ಚಪ್ಪಲಿಗಳಿದ್ದರೂ ಇದೊಂದು ಜೊತೆ ಚಪ್ಪಲಿ ಸಿಗಲೇ ಇಲ್ಲ, ಇರಲೇ ಇಲ್ಲ.

ಸುಮಾ ಪೆಚ್ಚು ಮುಖ ಹಾಕಿಕೊಂಡರೆ, ರಾಘು ಮತ್ತೊಮ್ಮೆ ಗಡ್ಡ ನೀವಿಕೊಳ್ಳುತ್ತಾ ತುಟಿಯಂಚಿನಲ್ಲಿ ಪರಿಹಾಸ್ಯದ ನಗೆ ಸೂಸುತ್ತಿದ್ದರು.

ಪದ್ಮಾ ಆನಂದ್, ಮೈಸೂರು

One comment on “ಅವರವರ ಭಾವಕ್ಕೇ . . .

  1. ಮಂತ್ರಾಲಯಕ್ಕೆ ಹೋಗಿ ಬಂದಷ್ಟೇ ಖುಶಿಯಾಯಿತು ಮೇಡಂ. ಅವರವರ ಭಾವಕ್ಕೆ ತಕ್ಕಂತೆ ದೇವರು.. ನಂಬಿಕೆ ಮುಖ್ಯ.ಚಂದದ ಬರಹ..

Leave a Reply to C.N.Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *