ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 22

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದುವೆ ಸಂಭ್ರಮ ಮುಗಿದು ಎಲ್ಲರೂ ವಾಪಸ್ಸಾದರು. ವಾರುಣಿ ತನ್ನ ಓದಿನಲ್ಲಿ ಮುಳುಗಿದಳು. ಸಿಂಧು, ಕೃತಿಕಾರಿಗೆ ಅವಳ ಬಗ್ಗೆ ಒಂದು ತರಹ ಅಸಹನೆಯಿತ್ತು. ಕುವೆಂಪುನಗರದಿಂದ ಬರ‍್ತಿದ್ದ ಬಕುಳಾ ಎನ್ನುವವಳು ಅವಳಿಗೆ ಕೊಂಚ ಹತ್ತಿರವಾಗಿದ್ದಳು. ಬಕುಳಾ ಇದ್ದುದರಿಂದ ಆರ್.ಜಿ. ದೂರವೇ ಉಳಿದಿದ್ದ.

ಹದಿನೈದು ದಿನ ಕಳೆದಿದ್ದವು. ಒಂದು ಸೋಮವಾರ ಬೆಳಿಗ್ಗೆ ಶ್ರೀನಿವಾಸರಾವ್ ಮಗಳಿಗೆ ಫೋನ್ ಮಾಡಿದರು. “ವರು ನಾವು ಇವತ್ತು ಬರ‍್ತಿದ್ದೇವಮ್ಮ…..”
“ಏನು ವಿಷಯ ಅಪ್ಪ?”
“ನಿಮ್ಮತ್ತೆ ನಮ್ಮಿಬ್ಬರನ್ನು ಬರಕ್ಕೆ ಹೇಳಿದ್ದಾರೆ. ನಮ್ಮ ಜೊತೆ ಶರು, ಶಂಕರಾನೂ ಹೊರಟಿದ್ದಾರೆ……..”
“ಯಾಕೆ ಬರಹೇಳಿದ್ದಾರೆ?”
“ನಿನಗೆ ಮೆಸೇಜ್ ಮಾಡಿದ್ದೇನೆ ನೋಡು.”
ಅವಳು ಮೆಸೇಜ್ ನೋಡಿದಳು.

“ನಿಮ್ಮತ್ತೆ ಶರೂನ್ನ ನಟೂಗೆ ತಂದುಕೋಬೇಕೂಂತ ಇದ್ದಾರೆ. ಇವಳೂ ಕುಣೀತಿದ್ದಾಳೆ.
“ಮೊದಲನೇ ಸೊಸೆ ಕೆಲಸಕ್ಕೆ ಹೋಗ್ತಾಳೆ. ನನ್ನ ಜೊತೆ ಮನೆಯಲ್ಲಿರುವ ಸೊಸೆ ಬೇಕು. ಶರೂಗೆ ಹೊಂದಿಕೊಳ್ಳುವ ಗುಣವಿದೆ. ನಟ್ಟೂನೂ ಒಪ್ಪಿದ್ದಾನೆ. ಈಗ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಳ್ಳೋಣ. ಸುಮಿಗೆ ಹುಡುಗನ್ನ ನೋಡಿ ಇಬ್ಬರ ಮದುವೆ ಮಾಡೋಣ” ಅಂತ ಹೇಳ್ತಿದ್ದಾರೆ. ನನಗಂತೂ ಕೈ, ಕಾಲೇ ಆಡ್ತಿಲ್ಲ.”
“ಏನು ವಿಷಯ ವರು?”
ವರು ತಂದೆ ಮಾಡಿದ್ದ ಮೆಸೇಜ್ ತೋರಿಸಿದಳು.
“ನಿನಗೇನನ್ನಿಸತ್ತೆ?”
“ಶರೂಗೆ ಓದಿನಲ್ಲೂ ಆಸಕ್ತಿ ಇಲ್ಲ. ಕೆಲಸ ಮಾಡುವುದಕ್ಕೂ ಆಸಕ್ತಿ ಇಲ್ಲ. ಜೊತೆಗೆ ನೆಂಟರಲ್ಲಿ ಮದುವೆ ನನಗಿಷ್ಟವಿಲ್ಲ. ರೇಖಾ ತುಂಬಾ ಶ್ರೀಮಂತಳು. ಇವಳು ಸೊಸೆಯಾಗಿ ಹೋದರೆ ಅವಳಿಗೆ ಹೋಲಿಸಿಕೊಂಡು ಗಲಾಟೆ ಮಾಡಿದರೆ ಏನ್ಮಾಡೋದು?”
“ನಿಮ್ಮ ತಂದೆಗೆ ನೇರವಾಗಿ ಇಲ್ಲಿಗೇ ಬರಲು ಮೆಸೇಜ್ ಮಾಡು.”
“ಯಾಕೆ ಆಂಟಿ?”
“ಅವರು ಇವತ್ತು ಇಲ್ಲೇ ಇರಲಿ. ಸಾಯಂಕಾಲ ನೀವು ಬೇಕಾದರೆ ನಿಮ್ಮತ್ತೆ ಮನೆಗೆ ಹೋಗಿ……..”

“ಬೇಡ ಆಂಟಿ. ನಿಮಗೆ ಈ ತೊಂದರೆ ಬೇಡ…….”
“ನೋಡು ವರು. ನಾನು ಯಾವ ಉದ್ದೇಶವೂ ಇಲ್ಲದೆ ಈ ಮಾತು ಹೇಳ್ತಿಲ್ಲ. ಇದರಿಂದ ಖಂಡಿತಾ ಒಳ್ಳೆಯದಾಗತ್ತೆ. ಮೊದಲು ನಿಮ್ಮ ತಂದೆಗೆ ಫೋನ್ ಮಾಡು.”
ಅವಳು ರಿಂಗ್ ಮಾಡಿದಳು.
“ಕೊಡು. ನಾನೇ ಮಾತಾಡ್ತೀನಿ……..”
“ಅಪ್ಪ ಚಂದ್ರ ಆಂಟಿ ನಿಮ್ಮ ಜೊತೆ ಮಾತನಾಡಬೇಕಂತೆ.”
“ಕೊಡಮ್ಮ.”
“ನಮಸ್ಕಾರ. ಇವತ್ತು ಸಾಯಂಕಾಲ ನಮ್ಮ ಮನೆಯಲ್ಲಿ ಭಜನೆ ಕಾರ್ಯಕ್ರಮವಿದೆ. ತುಂಬಾ ವರ್ಷಗಳ ನಂತರ ನಮ್ಮನೆಯಲ್ಲಿ ಸಾಯಿಬಾಬಾನ ಭಜನೆ ನಡೆಯುತ್ತಿದೆ. ದಯವಿಟ್ಟು ನಿಮ್ಮ ಕುಟುಂಬ ಬರಬೇಕು. ಬೆಳಿಗ್ಗೆಯೇ ಬಂದರೆ ನಿಮ್ಮ ಮನೆಯವರಿಂದ ನನಗೆ ಸಹಾಯವಾಗತ್ತೆ.”
“ಆಗಲೀಮ್ಮ ಖಂಡಿತಾ ಬರ‍್ತೀನಿ.”
ಚಂದ್ರಾವತಿ ಕಾಲ್ ಕಟ್ ಮಾಡಿದರು.

“ನಿಮ್ಮ ತಂದೆ ನಿನ್ನ ಹತ್ತಿರ ಮಾತನಾಡದೆ ಮೆಸೇಜ್ ಮಾಡಿದ್ದಾರೆ ಅಂದ್ರೆ ಅವರು ಮನೆಯಲ್ಲಿ ನಿನ್ನ ತಂಗಿ ವಿಚಾರ ಹೇಳಿಲ್ಲ ಅನ್ನಿಸತ್ತೆ. ಅದಕ್ಕೆ ಭಜನೆ ಕಾರ್ಯಕ್ರಮಕ್ಕೇಂತ ಕರೆದೆ.”
“ಭಜನೆ ಕಾರ್ಯಕ್ರಮ….?”
“ಇದೆ. 71/2-8 ಗಂಟೆಗೆ ಮುಗಿಯುತ್ತದೆ. ಆಮೇಲೆ ಕುಳಿತು ಮಾತಾಡೋಣ. ನೀನು ಸಾಯಂಕಾಲ ಬರುವ ಹೊತ್ತಿಗೆ ನಿನ್ನ ತಂಗಿ ಮನಸ್ಸು ಬದಲಾಗಿರುತ್ತದೆ ನೋಡೋಣ.”
“ಮ್ಯಾಜಿಕ್ ಮಾಡ್ತೀರಾ?”
“ಹಾಗೇ ಅಂದುಕೋ…..”
ಸುಮಾರು ಒಂದು ಗಂಟೆಯ ಹೊತ್ತಿಗೆ ಶ್ರೀನಿವಾಸ್‌ರಾವ್ ಕುಟುಂಬ ಬಂತು. ಊಟದ ನಂತರ ಶರು ಕೇಳಿದಳು. “ಅಕ್ಕ ಬರಲ್ವಾ?”
“ಅವಳು ಸಾಯಂಕಾಲಾನೇ ಬರೋದು.”
“ಶಾರದಾ ಎಲ್ಲಿ?”
“ಮಲಗಿದ್ದಾಳೆ.”
“ಮಲಗಿದ್ದಾಳಾ?”
“ಹುಂ. ಊಟದ ನಂತರ ಅವಳಿಗೆ ಒಂದು ಟ್ಯಾಬ್ಲೆಟ್ ಕೊಡಬೇಕು. ಅದನ್ನು ತೆಗೆದುಕೊಂಡ ತಕ್ಷಣ ನಿದ್ರೆ ಹೋಗ್ತಾಳೆ.
“ಶಾರದಾಗೆ ಹುಷಾರಿಲ್ವಾ? ಟ್ಯಾಬ್ಲೆಟ್ ಯಾಕೆ ಕೊಡ್ತಿದ್ದೀರಾ?”
“ನೀನು ಅವಳನ್ನು ಗಮನಿಸಿಲ್ಲಾಂತ ಕಾಣತ್ತೆ. ಅವಳು ನಾರ‍್ಮಲ್ ಹುಡುಗಿ ಅಲ್ಲಮ್ಮ. ಏನೋ ತನ್ನ ಪಾಡಿಗೆ ತಾನಿರ‍್ತಾಳೆ. ಹೊಸಬರ ಜೊತೆ ಸೇರಲ್ಲ. ಮಾತಾಡಲ್ಲ. ಅಷ್ಟು ತಿಳಿವಳಿಕೆಯೂ ಇಲ್ಲ.”
“ಯಾಕೆ ಆಂಟಿ?”
“ನಮ್ಮದು ಲೇಟ್ ಮ್ಯಾರೇಜ್. ಮಗುವಾಗಿದ್ದು ತಡವಾಗಿ. ಹುಟ್ಟಿದಾಗಲಿಂದ ಹೀಗೇನೇ………”
“ಹೌದಾ?”
“ನೆಂಟರಲ್ಲಿ ಮದುವೆಯಾದರೆ ಹೀಗಾಗುತ್ತೆ ಎಂದು ಗೊತ್ತಿದ್ದು ನಾವು ಮದುವೆಯಾಗಿದ್ದು ತಪ್ಪು. ಮಗು ಮಾಡಿಕೊಂಡಿದ್ದು ಇನ್ನೊಂದು ತಪ್ಪು. ನಮ್ಮ ತಪ್ಪಿನಿಂದ ಇವಳು ಸಫರ್ ಮಾಡುವಂತಾಯ್ತು…..”

“ಆಂಟಿ ನೆಂಟರಲ್ಲಿ ಮದುವೆ ಆಗಬಾರದಾ?”
“ಹೌದಮ್ಮ. ನನ್ನನ್ನು ನೋಡಿದರೆ ನಿನಗೆ ಅರ್ಥವಾಗಿರಬೇಕು. ನನಗೆ ಹಣಕಾಸಿನ ಕೊರತೆ ಇಲ್ಲ. ಆದರೆ ಇಂತಹ ಮಗಳಿರುವಾಗ ನಾನು ಹೇಗೆ ನೆಮ್ಮದಿಯಿಂದ ಇರಲು ಸಾಧ್ಯ? ನಾನು ಹೋದ ಮೇಲೆ ಗತಿ ಏನು ಎನ್ನುವ ಚಿಂತೆ ನನ್ನನ್ನು ಕಾಡ್ತಾಯಿದೆ.”
“ನೀವು ಹೇಳಿದ್ದು ಕೇಳಿ ನನಗೆ ಗಾಬರಿಯಾಗ್ತಿದೆ. ಮೊದಲನೆಯದಾಗಿ ನಮಗೆ ಮೊದಲನೇ ಮಗಳು ವರೂನ್ನ ಬಿಟ್ಟು ಶರು ಮದುವೆ ಮಾಡಲು ಇಷ್ಟವಿಲ್ಲ. ನಮ್ಮಕ್ಕನ ಸ್ವಭಾವ ನನಗೆ ಗೊತ್ತು. ಅವಳು ಖಂಡಿತಾ ದೊಡ್ಡ ಸೊಸೆಗೆ, ಚಿಕ್ಕ ಸೊಸೆಗೆ ಭೇದ ಮಾಡ್ತಾಳೆ. ನಟ್ಟು ಒಳ್ಳೆಯ ಕೆಲಸದಲ್ಲಿಲ್ಲ. ಹಗಲು ಕಂಡ ಬಾವಿಗೆ ಇರುಳು ಯಾಕೆ ಬೀಳಬೇಕು?”
“ಅಪ್ಪ ನಟ್ಟುನ್ನ ಮದುವೆ ಆಗಬೇಡ ಅನ್ನು ಒಪ್ತೀನಿ. ಆದ್ರೆ ವರುಗಿಂತ ಮೊದಲು ಮದುವೆಮಾಡಲ್ಲಾಂತ ಹೇಳಬೇಡ.”
“ಯಾಕೆ ಹೇಳಬಾರದು?”
“ಅಕ್ಕ ಬುದ್ಧಿವಂತೆ. ಅವಳು ಇವತ್ತಲ್ಲ ನಾಳೆ ಒಳ್ಳೆಯ ಕೆಲಸಕ್ಕೆ ಸೇರ‍್ತಾಳೆ. ಆದರೆ ನನ್ನ ತಲೆಗೆ ಓದು ಹಿಡಿಯುತ್ತಿಲ್ಲ. ಈಗ ಬೀದಿಗೆರಡು ಕಂಪ್ಯೂಟರ್ ಸೆಂಟರ್‌ಗಳಿವೆ. ನನಗೆ ಯಾರು ಕೆಲಸ ಕೊಡ್ತಾರೆ? ಅದಕ್ಕೆ ನಾನು ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿರೋಣಾಂತ ಇದ್ದೀನಿ.”
ಮಗಳಿಂದ ಅಂತಹ ಅಂತಹ ಉತ್ತರ ನಿರೀಕ್ಷಿಸದಿದ್ದ ಶ್ರೀನಿವಾಸರಾವ್ ಶಕುಂತಲ ಪೆಚ್ಚಾದರು.

“ಶರು ನಾನೊಂದು ಮಾತು ಹೇಳಲಾ?”
“ಹೇಳಿ ಆಂಟಿ.”
“ನನಗೆ ಒಂದು ವರ್ಷ ಟೈಂ ಕೊಡು. ಅಷ್ಟರಲ್ಲಿ ನಿಮ್ಮಕ್ಕನ ಓದು ಮುಗಿಯತ್ತೆ. ನೀವು ಮನೇನೂ ಬಿಡಬೇಕು. ಈ ಗೊಂದಲಗಳಲ್ಲಿ ನಿನ್ನ ಮದುವೆ ಕಷ್ಟ. ನಾನೇ ಒಳ್ಳೆಯ ಹುಡುಗನ್ನ ಹುಡುಕ್ತೀನಿ. ಎಂತಹ ಹುಡಗಬೇಕು ಹೇಳು.”
“ನನ್ನ ಓದಿಗೆ ಒಬ್ಬ ಗ್ರಾಜುಯೇಟ್ ಸಾಕು. ಆದ್ರೆ ತುಂಬಾ ಅನುಕೂಲವಾಗಿರಬೇಕು. ಮನೆಯಲ್ಲಿ ಅಡಿಗೆಯವರು ಆಳು-ಕಾಳು ಎಲ್ಲಾ ಇರಬೇಕು. ನಾನು ರಾಣಿ ತರಹ ಇರಬೇಕು.”
“ಹುಡುಗ ಹೇಗಿದ್ರೂ ಪರವಾಗಿಲ್ವಾ?”
“ಲಕ್ಷಣವಾಗಿರಬೇಕು. ಕುರುಡ, ಕುಂಟನ್ನ ನಾನು ಮಾಡಿಕೊಳ್ಳಲ್ಲ. ನಟ್ಟೂನ್ನಂತೂ ಖಂಡಿತಾ ಮಾಡಿಕೊಳ್ಳಲ್ಲ.”
“ಮತ್ತೆ ನಿಮ್ಮತ್ತೆಗೆ ಏನು ಹೇಳೋದು?”
“ನಾನು ಶಂಕರೂ ಇಲ್ಲೇ ಇರ‍್ತೀವಿ. ನೀವಿಬ್ಬರೂ ಬೆಳಿಗ್ಗೆ ಹೋಗಿ ಅತ್ತೆಗೆ ಹೇಳಿ ಬನ್ನಿ.”
“ಏನಂತ ಹೇಳೋದು?”
“ವರು ಓದು ಮುಗಿದು, ಅವಳ ಮದುವೆ ಆದ ಮೇಲೆ ಶರು ಮದುವೆ. ನಾವು ಮನೆ ಬಿಡಬೇಕು. ವರು ಓದು ಮುಗಿಯಬೇಕು. ಶಂಕರೂನ್ನ ಓದಿಸಬೇಕು. ಈ ಜವಾಬ್ದಾರಿಗಳು ಇರುವಾಗ ಸಧ್ಯದಲ್ಲಿ ಮದುವೆ ಮಾಡಕ್ಕಾಗಲ್ಲಾಂತ ಹೇಳಿ.”
“ಅವರು ಎಂಗೇಜ್‌ಮೆಂಟ್ ಮಾಡಿಕೊಳ್ಳೋಣಾಂದ್ರೆ……….”
“ಬೇಡಕ್ಕ. ಅವನಿಗೆ ಬೇರೆ ಒಳ್ಳೆಯ ಸಂಬಂಧ ಬರಬಹುದು ಮಾಡಿ. ಮೊದಲು ಸುಮಿ ಮದುವೆ ಮಾಡಿ ಅಂತ ಹೇಳಿ.”
ಅವಳ ಮಾತು ಕೇಳಿ ಶಕುಂತಲಾ ಬೆರಗಾದರು.
“ಆಂಟಿ ದಯವಿಟ್ಟು ಈ ವಿಚಾರ ಅಕ್ಕನಿಗೆ ಹೇಳಬೇಡಿ.”
“ಆಗಲಿ” ಎಂದರು ಎಲ್ಲರೂ.

ಭಜನೆ ಕಾರ್ಯಕ್ರಮಕ್ಕೆ ಹುಳಿಯವಲಕ್ಕಿ ಸಿದ್ಧವಾಯಿತು. ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಮನೆ ಶಾಂತವಾಗಿರುವುದನ್ನು ನೋಡಿ ವರೂಗೆ ಸಮಾಧಾನವಾಯಿತು.
ಮರುದಿನ ಬೆಳಿಗ್ಗೆ ತಿಂಡಿ ತಿಂದುಕೊಂಡು ರಾವ್ ದಂಪತಿಗಳು ಪಾರ್ವತಿಯನ್ನು ಭೇಟಿ ಮಾಡಿದರು. ಪಾರ್ವತಿ ತುಂಬಾ ಕೂಗಾಡಿದರು.

“ಅವರಿಬ್ರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿರುವಾಗ ನೀನು ಯಾಕೆ ಬೇಡಾಂತೀಯಾ?”
“ಅಕ್ಕ ಶರೂಗೆ ಏನು ತಿಳಿವಳಿಕೆಯಿದೆ? ನಿನ್ನ ದೊಡ್ಡ ಸೊಸೆ ಶ್ರೀಮಂತಳು. ನೀನು ಅವಳಿಗೆ ಏನೂ ಹೇಳಕ್ಕಾಗಲ್ಲ. ನೀನು ಅವರಿಬ್ಬರ ನಡುವೆ ಭೇದ ಮಾಡಲ್ಲಾಂತ ಯಾವ ಗ್ಯಾರಂಟಿ?”
ನಾನು ವರು ನಾಗರಾಜನ್ನ ಮದುವೆಯಾಗೋದು ಯಾಕೆ ಬೇಡಾಂದೆ ಹೇಳು. ರಕ್ತ ಸಂಬಂಧಿಗಳು ಮದುವೆಯಾಗಬಾರದೂಂತ. ನಮಗೆ ನಮ್ಮದೇ ಸಮಸ್ಯೆಗಳಿವೆ. ವರು ಓದು ಮುಗಿಯಬೇಕು. ನಾವು ಮನೆ ಬಿಡಬೇಕಾದರೆ ಬೇರೆ ಮನೆಗೆ ಹೋಗಲು ಅಡ್ವಾನ್ಸ್ ಹೊಂದಿಸಿಕೊಳ್ಳಬೇಕು. ಈ ತಾಪತ್ರಯಗಳಲ್ಲಿ ಇವಳ ಮದುವೆಗೆ ಏನು ಅವಸರ?”
“ಹೌದು ಅತ್ತಿಗೆ. ನಾವು ಮದುವೆ ಮಾಡುವ ಸ್ಥಿತಿಯಲ್ಲಿಲ್ಲ. ಸುಮಿ ಮದುವೆ ಬಗ್ಗೆ ಯೋಚನೆ ಮಾಡುವುದು ಬಿಟ್ಟು ನೀವು ಯಾಕೆ ನಟು ಮದುವೆ ಮಾಡಕ್ಕೆ ಹಾತೊರೆಯುತ್ತಿದ್ದೀರಾ?”
ಪಾರ್ವತಮ್ಮ ಮಾತಾಡಲಿಲ್ಲ.
“ಅಕ್ಕ, ನೀನು ಏನಂದುಕೊಂಡರೂ ಚಿಂತೆಯಿಲ್ಲ. ನಾನು ಶರೂನ್ನ ಈ ಮನೆಗೆ ಕೊಡಲ್ಲ. ನಾನು ಈ ವಿಚಾರ ಫೋನ್‌ನಲ್ಲಿ ಹೇಳಬಹುದಿತ್ತು. ಮನೆಯವರಿಗೆಲ್ಲಾ ಗೊತ್ತಾಗೋದು ಬೇಡಾಂತ ಸುಮ್ಮನಾದೆ. ನಾವಿನ್ನು ಬರ‍್ತೀವಿ.”
ಪಾರ್ವತಮ್ಮ ಊಟಕ್ಕಿರಿ ಎಂದು ಕೂಡ ಹೇಳಲಿಲ್ಲ. ಮುಖ ಊದಿಸಿಕೊಂಡೇ ಕಳಿಸಿದರು.
ಗಂಡ-ಹೆಂಡತಿ ಚಂದ್ರಾವತಿ ಮನೆಗೆ ಬಂದು ನಡೆದ ವಿಚಾರ ಹೇಳಿದರು.
“ವರು ಬರ‍್ತಾಳೆ. ಅವಳ ಜೊತೆ ಊಟ ಮುಗಿಸಿಕೊಂಡು ಸಾಯಂಕಾಲ ಹೊರಡಿ.”
ಅವರು ಒಪ್ಪಿದರು. ಊಟ ಮಾಡಿ ಆಟೋ ಹಿಡಿದು ರೈಲ್ವೇ ಸ್ಟೇಷನ್ ತಲುಪಿದರು.

ಮದುವೆ ಕ್ಯಾನ್ಸಲ್ ಆಗಿದ್ದು ವಾರುಣಿಗೆ ಸಂತೋಷ ತಂದಿತ್ತು ನಿಜ. ಆದರೆ ಶರುವಿನ ನಿಜವಾದ ಮುಖ ಬಯಲಾಗಿ ಅವಳ ಎಂತಹ ಸ್ವಾರ್ಥಿ ಎಂದು ಅರಿವಾಗಿತ್ತು. ತಂದೆ-ತಾಯಿ ಎದುರು ಅವಳು ಏನೂ ಮಾತಾಡಿರಲಿಲ್ಲ.
ರಾತ್ರಿ ಊಟಕ್ಕೆ ಕುಳಿತಾಗ ಚಂದ್ರಾವತಿ ಕೇಳಿದರು. “ನಾನು ಕೊಟ್ಟ ಮಾತು ಉಳಿಸಿಕೊಂಡೆ ಅಲ್ವಾ?”
“ಹೌದು ಆಂಟಿ. ಅವಳ ಮನಸ್ಸು ಹೇಗೆ ಬದಲಾಯ್ತು ಅಂತ ಅಪ್ಪ ಹೇಳಿದರು.”
“ನಿನ್ನ ತಂಗಿ ತುಂಬಾ ಸ್ವಾರ್ಥಿ ಅನ್ನಿಸಿತು”.
ಅವಳು ಉತ್ತರಿಸದೆ ಸುಮ್ಮನೆ ನಕ್ಕಳು.
“ನೀನು ನಿನ್ನ ಕುಟುಂಬದ ಬಗ್ಗೆ ಎಷ್ಟು ಪ್ರೀತಿ ತೋರಿಸ್ತಿದ್ದೀಯ, ನಿನ್ನ ತಂದೆ-ತಾಯಿ ಕಷ್ಟಪಡ್ತಾರೇಂತ ಒದ್ದಾಡ್ತೀಯ. ತಮ್ಮ-ತಂಗೀನ್ನ ಮುಂದೆ ತರುವ ಕನಸು ಕಾಣ್ತಿದ್ದೀಯ. ಆದರೆ ನಿನ್ನ ತಂಗಿ ನಿನ್ನ ಸಂಸಾರದ ಜವಾಬ್ದಾರಿ ಹಂಚಿಕೊಳ್ಳುವುದಕ್ಕೂ ಸಿದ್ಧಳಿಲ್ಲವಲ್ಲಾ…..”
“ಎಲ್ಲರ ಸ್ವಭಾವ ಒಂದೇ ತರಹ ಇರಲ್ಲ ಅಲ್ವಾ ಆಂಟಿ?”
“ನಿನ್ನದೂ ನಿಮ್ಮ ಅಮ್ಮನ ತರಹ ಸ್ವಭಾವ ಅನ್ನಿಸತ್ತೆ.”
“ಅಮ್ಮ ‘ಹಿಂದೆ ಬಂದರೆ ಸಾಯಬೇಡ: ಮುಂದೆ ಬಂದರೆ ಒದೆಯಬೇಡ’ ಎನ್ನುವ ಸ್ವಭಾವ. ನಾನು ಅಷ್ಟು ಸಾಧು ಅಲ್ಲ. ನಾನಾಗಿ ಯಾರ ತಂಟೆಗೂ ಹೋಗಲ್ಲ. ಆದರೆ ನನ್ನ ತಂಟೆಗೆ ಯಾರಾದರೂ ಬಂದರೆ ಮಾತ್ರ ಸುಮ್ಮನಿರಲ್ಲ. ಗ್ರಹಚಾರ ಬಿಡಿಸಿ ಬಿಡ್ತೀನಿ.”
“ಅದಕ್ಕೆ ನನಗೆ ನೀನು ಇಷ್ಟವಾಗೋದು.”
“ಏನೋ ಆಂಟಿ. ನಿಮ್ಮಂತಹವರ ಆಶ್ರಯ ಸಿಕ್ಕಿರೋದ್ರಿಂದ ನಾನು ನನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು.”
“ನಾನು ಯಾವಾಗಲೂ ನಿನ್ನ ಜೊತೆ ಇರ‍್ತೀನಿ ವರು” ಎಂದರು ಚಂದ್ರಾವತಿ. ಇಬ್ಬರ ಕಣ್ಣುಗಳೂ ತುಂಬಿ ಬಂದಿದ್ದವು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :  https://surahonne.com/?p=44332
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

3 Comments on “ಕನಸೊಂದು ಶುರುವಾಗಿದೆ: ಪುಟ 22

  1. ಒಂದೊಳ್ಳೆಯ ತಿರುವು ಪಡೆದುಕೊಂಡ ಕಾದಂಬರಿ ಓದುವ ಸುಖದೊಂದಿಗೆ ಸಮಾಧಾನವನ್ನೂ ನೀಡಿತು.

  2. ಕನಸೊಂದು ಶುರವಾಗಿದೆ..ಧಾರಾವಾಹಿ..ಓದಿಸಿಕೊಂಡು ಹೋಗುತ್ತಿದೆ ಯಾರ್ಯಾರ ಕನಸು.. ಈಡೇರುತ್ತದೆಯೋ ಕುತೂಹಲ ವನ್ನು ಉಳಿಸಿಕೊಂಡು ಸಾಗುತ್ತಿದೆ..ಮೇಡಂ…

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *