ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 3
ಶ್ರೀಕೃಷ್ಣ ಬಾಲಲೀಲೆ -2
ತಾಯಿ ಯಶೋದೆ ಮಗು ಕೃಷ್ಣ ಮಲಗಿರಲು
ಮನೆಯ ಊಳಿಗದವರೆಲ್ಲ
ಬೇರೆ ಬೇರೆ ಕೆಲಸದಿ ನಿರ್ಗಮಿಸಿರಲು
ಮೊಸರ ಕಡೆದು ಬೆಣ್ಣೆ ತೆಗೆಯುವ ಕಾಯಕಕೆ ಅಣಿಯಾಗಿ
ಕೃಷ್ಣನೆಲ್ಲ ಅದ್ಭುತ ಕಾರ್ಯಗಳ
ನೆನೆ ನೆನೆದು ಹಾಡಾಗಿ ಹಾಡುತಿರೆ
ಹುಟ್ಟಿದ ಏಳನೇ ದಿನವೇ ಪೂತನಿ ಸಂಹಾರ
ಮೂರನೆಯ ತಿಂಗಳಲಿ ಶಕಟಾಸುರ ವಧೆ
ಹಾಲು ಕುಡಿವ ಬಾಯಲ್ಲಿ ವಿಶ್ವರೂಪ ದರ್ಶನ
ತೃಣಾವರ್ತ ದೈತ್ಯ ಸಂಹಾರ
ವೆಲ್ಲವ ನೆನೆ ನೆನೆದು
ಭಾವಪರವಶಳಾಗಿ ತನ್ಮಯಳಾಗಿರೆ
ನಿದ್ರೆಯಿಂ ಎಚ್ಚೆತ್ತ ಕೃಷ್ಣ ಮಂಚದಿಂದೆದ್ದು ಬಂದು
ಸ್ತನ್ಯಪಾನಕೆ ಪೀಡಿಸೆ
ಕೃಷ್ಣಗೆ ಸ್ತನ್ಯಪಾನ ಮಾಡಿಸುತ್ತಿರಲು
ಒಲೆಯ ಮೇಲಿಟ್ಟ ಹಾಲು ಉಕ್ಕುತಿರೆ
ಮಗುವ ತೊಡೆಯಿಂದಿಳಿಸಿದುದಕೆ
ಕೆರಳಿ ಮೊಸರಿನ ಗಡಿಗೆಗೆ ಕಲ್ಲೆಸೆದ ಕೃಷ್ಣ
ಚೆಲ್ಲಿದ ಮೊಸರು ಬೆಣ್ಣೆಯ
ಬಾಚಿಕೊಂಡು ತಿನ್ನುತ
ಬಳಿಗೆ ಬಂದ ಮಂಗನಿಗೂ ತಿನಿಸುತ
ಮರದ ಒರಳಿನ ಮೇಲೆ ಕುಳಿತಿದ್ದ
ಕೃಷ್ಣನ ಒರಳಿಗೆ ದಾರದಿಂ
ಕಟ್ಟು ಹಾಕಿದ ಯಶೋದೆಯ
ಕಾರ್ಯವದೊಂದು ವಿಪರ್ಯಾಸ
ಬ್ರಹ್ಮ ರುದ್ರಾದಿ ದೇವತೆಗಳೆಲ್ಲರ ನಿಯಮಿಸಿ
ಜಗವ ಅಂಕೆಯಲ್ಲಿಟ್ಟು ನಡೆಸುವ
ಭಗವಂತನು
ಯಶೋದೆಯು ಕಟ್ಟು ಹಾಕಿದ
ಮರದ ಒರಳನೆಳೆದುಕೊಂಡು
ಅವಳಿ ಮತ್ತಿಯ ಮರಗಳ ನಡುವಿನ
ಕಿಂಡಿಗೆ ಸಿಲುಕಿ ಬಲವಾಗಿ ಎಳೆಯೆ
ಆ ಬೃಹತ್ ಮರಗಳು ಮಹಾ
ಶಬ್ಧದಿಂ ಧರೆಗುರುಳಿ
ಶಾಪಗ್ರಸ್ತ ಕುಬೇರ ಸುತರಾದ
ನಳಕೂಬರ ಮಣಿಗ್ರೀವರ
ನೂರು ವರುಷಗಳ ಶಾಪವಿಮುಕ್ತಿಯಾಗಿ
ಶ್ರೀಕೃಷ್ಣ ಸ್ವಾಮಿಗೆ ನಮಿಸಿದರು
ಕೃಷ್ಣನ ಬಾಲ್ಯಲೀಲೆಗಳು ಅದ್ಭುತ ಅನಂತ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :

-ಎಂ. ಆರ್. ಆನಂದ, ಮೈಸೂರು


ಕಾವ್ಯ ಭಾಗವತ ದಲ್ಲಿ ಕೃಷಿ ನ ಲೀಲೆಯ ಅನಾವರಣ ಸೊಗಸಾಗಿ ಮೂಡಿಬರುತ್ತಿದೆ…ಸಾರ್ ಚಿತ್ರ ವೂ ಪೂರಕವಾಗಿದೆ
Nice