ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 20

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಒಂದು ಪ್ರಶ್ನೆ ಕೇಳಲಾ?”
“ಕೇಳು.”
“ಅಷ್ಟು ಶ್ರೀಮಂತರು ಮಗಳನ್ನು ಯಾಕೆ ಹೆಚ್ಚು ಓದಿಸಲಿಲ್ಲ ಬಿ.ಇ., ಎಂ.ಬಿ.ಬಿ.ಎಸ್……”
“ನಾನೂ ಇದೇ ಪ್ರಶ್ನೆ ಕೇಳಿದೆ. ಅವರ ಉತ್ತರ ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ.”
“ಏನು ಉತ್ತರ ಹೇಳಿದ್ರು?”
“ಬಿ.ಇ., ಎಂ.ಬಿ.ಬಿ.ಎಸ್ ಅಲ್ಲ. ಎಂ.ಎಸ್.ಸಿ., ಎಂ.ಬಿ.ಎ ಮಾಡಿಸುವುದಕ್ಕೂ ರೆಡಿ ಇರಲಿಲ್ಲ. ಯಾರಾದರೂ ಫಾರಿನ್‌ನಲ್ಲಿರುವ ಹುಡುಗ ಒಪ್ಪಿ ಕರೆದುಕೊಂಡು ಹೋದರೇಂತ ಭಯವಾಯ್ತು. ನನ್ನ ಮಕ್ಕಳು ನನ್ನೆದುರಿಗೇ ಸುಖವಾಗಿರಬೇಕು. ಅದಕ್ಕೆ ಏನಾದರೂ ಮಾಡ್ತೀನಿ” ಅಂದ್ರು.
“ಮಗನನ್ನೂ ಓದಿಸಲ್ವಾ?”
“ಗೊತ್ತಿಲ್ಲ. ನನಗೆ ‘ಕೆಲಸ ಬಿಟ್ಟು ಬಿಸಿನೆಸ್ ಮಾಡಿ ಬಂಡವಾಳ ನಾನು ಕೊಡ್ತೀನಿ” ಅಂದ್ರು. ರೇಖಾ “ಆತುರದ ನಿರ್ಧಾರ ಬೇಡ. ಯೋಚಿಸೋಣ” ಅಂದಿದ್ದಾಳೆ. ನೀನು ನಮ್ಮ ಕಡೆ ಯಾರು ಯಾರಿಗೆ ಸೀರೆ-ಷರ್ಟ್ ತೆಗೆಯಬೇಕು ಹೇಳು. ನಾನು ಲಿಸ್ಟ್ ಮಾಡಿಕೊಳ್ತೇನೆ.”

“ನಿಮ್ಮನೆಯಲ್ಲಿ ನಿಮ್ಮ ಅಮ್ಮ, ಸುಮಿ ಮತ್ತು ನಿನ್ನ ತಮ್ಮನಿಗೆ. ನಮ್ಮ ಮನೆಯಲ್ಲಿ ಅಪ್ಪ-ಅಮ್ಮ, ಇಬ್ಬರು ಚಿಕ್ಕಪ್ಪಂದ್ರು-ಚಿಕ್ಕಮ್ಮಂದ್ರು, ದೇವಕಿ ಅತ್ತೆ-ಅವರ ಗಂಡಂಗೆ, ಇನ್ಯಾವ ನೆಂಟರಿದ್ದಾರೋ ನನಗೆ ಗೊತ್ತಿಲ್ಲ. ನಿಮ್ಮ ತಂದೆ ಕಡೆಯವರು ಯಾರಾದರೂ ಇದ್ದಾರಾ?”
“ನಮ್ತಂದೆಗೆ ಒಬ್ಬ ತಮ್ಮ, ತಂಗಿ ಇದ್ದಾರೆ. ಅವರ ಜೊತೆ ಕಾಂಟ್ಯಾಕ್ಟ್ ಇಲ್ಲ.”
“ಈ ಲಿಸ್ಟ್ ನಲ್ಲಿರುವವರಿಗೆ ನಾನು ಬಟ್ಟೆ ತೆಗೆಯಬೇಕಲ್ವಾ?”
“ನನಗೆ ಗೊತ್ತಿಲ್ಲ ನಾಗರಾಜ. ನಿಮ್ಮಮ್ಮ ಏನಂತಾರೋ ಏನೋ?’
“ನಾನು 10,000 ಉಡುಗೊರೆಗೆ ತೆಗೆದಿಟ್ಟಿದ್ದೇನೆ.”
“ರೇಖಾಗೆ ಸೀರೆಗಳು………”
“ನಾನು ರೇಖಾ ಬೆಂಗಳೂರಿಗೆ ಹೋಗಿ ಅಮ್ಮನಿಗೆ ಸುಮಿಗೆ ನಮ್ಮ ನಟರಾಜಗೆ, ರೇಖಾಗೆ, ಅವಳ ತಾಯಿ-ತಂದೆ, ತಮ್ಮಂಗೆ ಬಟ್ಟೆ ತಂದಾಯ್ತು, ಅಮ್ಮನಿಗೆ ಗೊತ್ತಿಲ್ಲ.”
“ತುಂಬಾ ಧೈರ್ಯ ಬಂದಹಾಗಿದೆ.”
“ಬರಲೇ ಬೇಕಲ್ಲಾ ವರು. ನಾನು ಈಗಲೂ ಅಮ್ಮನಿಗೆ ಹೆದರುತ್ತಾ ಕುಳಿತಿದ್ರೆ ರೇಖಾ ಮನೆ ಬಿಟ್ಟು ಹೋಗ್ತಾಳಷ್ಟೆ.”
“ಹಾಗೆಂದು ರೇಖಾ ಎದುರಿಗೆ ಅತ್ತೇನ್ನ ಬೈಯ್ಯಬೇಡ.”
“ಖಂಡಿತಾ ಇಲ್ಲ ವರು” ಈಗ ಹೇಳು ಇನ್ಯಾರಿಗೆ ತೆಗೆಯಬೇಕು?”
“ನೀನು ಇಲ್ಲಿ ಯಾರಿಗೂ ತೆಗೆಯಬೇಡ. ನಾನು, ನೀನು ಹೋಗಿ ಬೇರೆ ಕಡೆ ತೆಗೆಯೋಣ.”
“ಓ.ಕೆ. ಹೊರಡೋಣವಾ?”

ಅವನು ಆಟೋ ಕೂಗಿದ. ಸರಸ್ವತಿಪುರಂನ ಸಂದುಗೊಂದಿಗಳಲ್ಲಿ ನುಗ್ಗಿ ಒಂದು ದೊಡ್ಡ ಮನೆಯ ಮುಂದೆ ಆಟೋ ನಿಂತಿತು. ಕೆಳಗಡೆ ಬಟ್ಟೆ ಅಂಗಡಿಯಿತ್ತು. ಮೇಲೆ ಮನೆಯವರಿದ್ದರು.
ಇವರು ಅಂಗಡಿ ಪ್ರವೇಶಿಸುವ ವೇಳೆಗೆ ರೇಖಾ ಮನೆಯವರು ಕಾರ್‌ನಲ್ಲಿ ಬಂದಿಳಿದರು.
ನಂತರ ರೇಖಾ ಅವಳ ತಾಯಿ ಸಿಂಪಲ್ಲಾಗಿರುವ ಕಾಂಜೀವರಂ ಸೀರೆಗಳನ್ನು, ಮೈಸೂರು ಸಿಲ್ಕ್ ಸೀರೆ ತೆಗೆಸಿದರು.
ಮೈಸೂರು ಸಿಲ್ಕ್ ಪಾರ್ವತಿ ಅತ್ತೆಗೆ ‘ಬಾಟಲ್‌ ಗ್ರೀನ್‌ಗೆ ಸಣ್ಣ ಜರಿಬಾರ್ಡರಿದ್ದ ಸೀರೆ ಆರಿಸಿದಳು ವರು.”
“ಉಳಿದವರಿಗೆ?”
“ಮೈಸೂರು ಸಿಲ್ಕ್ ಬೇಡ. ಸಿಂಪಲ್ ಆಗಿರುವ ಕಾಂಜೀವರಂ ಸಾಕು. ಎಲ್ಲರಿಗೂ ಒಂದೇ ತರಹ ಆರಿಸಿ. ನಮ್ಮ ತಂದೆ ಮಾತ್ರ ಪಂಚೆ ಉಡುವುದು. ಉಳಿದವರು ಹಬ್ಬ ಹರಿದಿನಗಳಲ್ಲಿ ಉಡ್ತಾರಷ್ಟೆ.”
ಒಂದೇ ಬೆಲೆಯ ಗಾಢಿಯಲ್ಲದ ನಾಲ್ಕು ಸೀರೆ ಆರಿಸಿದಳು ರೇಖಾ. ಪ್ಯಾಂಟ್ ಷರಟು ಆರಿಸುವ ಜವಾಬ್ದಾರಿ ಗಂಡಸರಿಗೆ ಬಿತ್ತು.
“ವಾರುಣಿ ನೀವೊಂದು ಸೀರೆ ಆರಿಸಿ.”
“ನನಗ್ಯಾಕೆ? ಖಂಡಿತಾ ಬೇಡ.”
“ಸೀರೇನೆ ತೊಗೋಬೇಕೂಂತಿಲ್ಲ. ಡ್ರೆಸ್ ತೆಗೆದುಕೊಳ್ಳಿ.”
“ನಾಗರಾಜನ ತಂಗಿ ಸುಮಿಗೆ ಡ್ರೆಸ್ ಕೊಡಿ. ಸೀರೆ ಬೇಡ.”
“ಓ, ನಾನವಳನ್ನು ಮರೆತಿದ್ದೆ. ನೀವೀಗ 3 ಡ್ರೆಸ್ ಆರಿಸಿ ನಿಮಗೆ, ನಿಮ್ಮ ತಂಗಿಗೆ, ಸುಮಾಗೆ.”
ವಾರಿಣಿ ಆರಿಸಿದಳು.
“ಮಕ್ಕಳಿಗೆ ಕ್ಯಾಷ್ ಕೊಡ್ತೀನಿ.”
ವರು ಮಾತಾಡಲಿಲ್ಲ.

ರೇಖಾ ತಾಯಿ ಬಿಲ್ ಹಾಕಿಸಲು ಹೋದಾಗ ವರು ರೇಖಾ ಅಲ್ಲೇ ಇದ್ದ ಸೋಫಾದಲ್ಲಿ ಕುಳಿತರು. ಬಿಸಿಬಿಸಿ ಬಾದಾಮಿ ಹಾಲು ಬಂತು.
“ವಾರಿಣಿ ಒಂದು ಪ್ರಶ್ನೆ ಕೇಳಲಾ- ತಪ್ಪು ತಿಳಿಯಬಾರದು.”
“ಖಂಡಿತಾ ಇಲ್ಲ ಕೇಳಿ.”
“ನಾಗರಾಜ್ ನಿಮಗೆ ಪ್ರಪೋಸ್ ಮಾಡಿದ್ರಾ?”
“ಇಲ್ಲ. ಅವರ ತಾಯಿಗೆ ನನ್ನನ್ನು ಸೊಸೆ ಮಾಡಿಕೊಳ್ಳುವ ಮನಸ್ಸಿತ್ತು. ಆದರೆ ನಾನು ಒಪ್ಪಲಿಲ್ಲ……….”
“ಯಾಕೆ?”
“ನಾಗರಾಜ ತುಂಬಾ ಒಳ್ಳೆಯವನು. ತಂದೆ ಹೋದಮೇಲೆ ತುಂಬಾ ಕಷ್ಟಪಟ್ಟಿದ್ದಾನೆ. ನಮ್ಮ ತಂದೆ ನಿವೃತ್ತ ಉಪಾಧ್ಯಾಯರು ನನಗೆ ತಮ್ಮ, ತಂಗಿ ಇದ್ದಾರೆ. ನನಗೆ ಜವಾಬ್ಧಾರಿಯಿದೆ. ಜೊತೆಗೆ ನನಗೆ ನೆಂಟರಲ್ಲಿ ಮದುವೆಯಾಗಲು ಮನಸ್ಸಿರಲಿಲ್ಲ. ಪುನಃ ಮದುವೆಯ ನಂತರ ನಾಗರಾಜನ ಜವಾಬ್ದಾರಿ ಹೆಚ್ಚಾಗುವುದು ಬೇಕಿರಲಿಲ್ಲ. ನಾವು ಒಳ್ಳೆಯ ಸ್ನೇಹಿತರು…..”
“ನಿಮ್ಮ ನೇರವಾದ ಉತ್ತರ ನನಗಿಷ್ಟವಾಯ್ತು. ನಮ್ಮತ್ತೆ ಹೇಗೆ? ತುಂಬಾ ಜೋರೂಂತ ಕೇಳಿದ್ದೇನೆ.”
“ಅವರಿಗೆ ಬೇಸರವಿದೆ. ಸ್ವಂತಮನೆ ಬಿಟ್ಟರೆ ಬೇರೆ ಆಸ್ತಿ ಪಾಸ್ತಿಗಳಿಲ್ಲ. ನಮ್ಮ ಮಾವನ ಪೆನ್ಷನ್‌ನಲ್ಲಿ ಬದುಕಬೇಕು. ಮಕ್ಕಳನ್ನು ತುಂಬಾ ಓದಿಸಬೇಕೂಂತಿದ್ರು. ಮಕ್ಕಳಿಗೆ ಆದಷ್ಟು ಬೇಗ ಕೆಲಸಕ್ಕೆ ಸೇರುವ ಹಂಬಲ. ಮಗಳು ಪಿ.ಯು.ಸಿ. ದಾಟಲಿಲ್ಲ. ಅಸಹಾಯಕತೆ ಜೋರಿಗೆ ಕೆಲವೊಮ್ಮೆ ಕಾರಣವಾಗತ್ತೆ ಅನ್ನಿಸತ್ತೆ.”
“ನನಗೂ ತಾಯಿ-ಮಗನ್ನ ದೂರ ಮಾಡುವ ಮನಸ್ಸಿಲ್ಲ. ಆದಷ್ಟು ಹೊಂದಿಕೊಳ್ತೀನಿ ನೋಡೋಣ.”
“ನಿಮಗೆ ಅವರು ಹೊಸ ಅತ್ತೆ. ಅವರಿಗೆ ನೀವು ಹೊಸ ಸೊಸೆ. ಇಬ್ಬರ ಮನಸ್ಥಿತಿಯೂ ಮುಖ್ಯ. ಚಿಕ್ಕವಳೂಂತ ಅವರು ತಪ್ಪುಗಳನ್ನು ಕ್ಷಮಿಸಬೇಕು. ದೊಡ್ಡವರು ಒಂದು ಮಾತು ಹೇಳಿದರೆ ತಪ್ಪಿಲ್ಲಾ ಅನ್ನುವ ಔದಾರ್ಯ ನಿಮ್ಮಲ್ಲಿರಬೇಕು.”
“ನೀವು ಒಳ್ಳೆಯ ಸೊಸೆ ಆಗ್ತೀರ ಅನ್ನಿಸತ್ತೆ……….”
ಅವಳ ಮಾತು ಕೇಳಿ ವರು ನಕ್ಕಳು.

“ಅಪ್ಪ ನಾಗರಾಜ್‌ಗೆ ಬಿಸಿನೆಸ್ ಮಾಡು ಅಂತಿದ್ದಾರೆ. ನೀವೇನಂತೀರಾ?”
“ಕೊಂಚ ತಾಳ್ಮೆಯಿಂದ ಯೋಚಿಸಿ ಯಾವುದು ಸುಲಭವೋ ಅಂತಹ ಬಿಸಿನೆಸ್ ಆರಂಭಿಸಬೇಕು. ಅನುಭವಾನೂ ಮುಖ್ಯ.”
“ನಾನೂ ಅದೇ ಹೇಳಿದೆ.”
ಅಲ್ಲೇ ಹತ್ತಿರದ ಮೆಸ್ ಒಂದರಲ್ಲಿ ಊಟ ಮಾಡಿದರು. ಬಾಳೆಎಲೆಯ ಊಟ ತುಂಬಾ ರುಚಿಯಾಗಿತ್ತು. “ಆಂಟಿ ಜೊತೆ ಬರಬೇಕು” ಎಂದುಕೊಂಡಳು ವರು.
ಮಾನಸ ಮದುವೆಗೆ ವರು ತಾಯಿ-ತಂದೆ ಹೋಗಿ ಬಂದರು. ನಂತರ ರಾಗಿಣಿ ಮದುವೆ. ಶೋಭಾ ಮಗನ ಜೊತೆ ಒಂದು ದಿನ ಮುಂಚಿತವಾಗೇ ಬಂದರು. ವರು ಅವರ ಸೀರೆಗಳಿಗೆ ಬ್ಲೌಸ್ ಹೊಲಿಸಿದ್ದಳು. ಚಂದ್ರಾವತಿ ತಮ್ಮ ಬಟ್ಟೆ ಪ್ಯಾಕ್ ಮಾಡಿಕೊಂಡಿದ್ದರು. ಕೃತಿಕಾ, ಸಿಂಧು, ಬಿಂದಿಯಾ, ಮಲ್ಲಿ ಹೊರಟಿದ್ದರು. ರಾಮಗೋಪಾಲ ತೇಜಸ್ವಿ ಮಾತ್ರ ಹೊರಟಿದ್ದರು.
“ನೀನು ಒಬ್ಬಳೇ ಇರ‍್ತೀಯಾಮ್ಮ?” ಚಂದ್ರಾ ಆಂಟಿ ಕೇಳಿದರು.
“ಇಲ್ಲ ನಮ್ತಂದೆ ಬರ‍್ತಾರೆ ಆಂಟಿ. ನಾಗರಾಜನ ಮದುವೆ ಇದೆಯಲ್ಲಾ. ಅತ್ತೆ ‘ನಾಲ್ಕು ದಿನ ಬಂದು ಹೋಗು’ ಅಂತ ಕರೆದಿದ್ದರು. ಬೆಳಗ್ಗೆಯೆಲ್ಲಾ ಅಕ್ಕನ ಮನೆಯಲಿರ‍್ತಾರೆ. ರಾತ್ರಿ ಇಲ್ಲಿಗೆ ಬರ‍್ತಾರೆ.”
ತಿರುಪತಿಗೆ ಹೊರಡುವ ಹಿಂದಿನ ದಿನ ಆರ್.ಜಿ. ಹೇಳಿದ. “ನೀವು ಬಂದಿದ್ದರೆ ಚೆನ್ನಾಗರ‍್ತಿತ್ತು. ನಾನು ಒಂಟಿಯಾಗಿಬಿಟ್ಟೆ.”
“ಯಾಕೆ ಹಾಗಂತೀರಾ? ತೇಜಸ್ವಿ ಕಂಪನಿ ಕೊಡ್ತಾರೆ……….”
“ಏನೋ ಆದರೂ ಬೇಜಾರು…………”
“ಮದುವೆಗೆ ಹೊರಟಿದ್ದೀರಾ…….. ಸಂತೋಷವಾಗಿ ಹೋಗಿಬನ್ನಿ. ತಿರುಪತಿಯಲ್ಲಿ ನೋಡುವ ಸ್ಥಳಗಳು ತುಂಬಾ ಇದೆ. ನೋಡ್ಕೊಂಡು ಬನ್ನಿ.”
“ನಾನು ಎಷ್ಟು ಹೇಳಿದರೂ ನೀವು ಬರ‍್ತಿಲ್ಲವಲ್ಲಾ?”
“ನಾನು ಬಂದರೂ ರಾಗಿಣಿ ಜೊತೆ ಇರಬೇಕಾಗತ್ತೆ. ನಿಮಗೆ ಕಂಪನಿ ಕೊಡಕ್ಕಾಗಲ್ಲ. ದಯವಿಟ್ಟು ನನ್ನನ್ನು ಒತ್ತಾಯಮಾಡಬೇಡಿ.”
ಅವನು ಸುಮ್ಮನಾದ.

ತಂದೆಯ ಜೊತೆ ಮೂರು ದಿನ ಇರುವ ಅವಕಾಶ ಸಿಕ್ಕಾಗ ಅವಳು ನಾಗರಾಜನ ಮದುವೆ ವಿವರಗಳನ್ನು ಹೇಳಿದಳು.
“ನಾಗರಾಜ ಅಂತಹ ಮನೆ ಸಿಗಲು ಪುಣ್ಯ ಮಾಡಿದ್ದ ಅನ್ನಿಸ್ತಿದೆ. ಆದರೆ ಅತ್ತೆ ರೇಖಾನ್ನ ಹೇಗೆ ನೋಡಿಕೊಳ್ಳುತ್ತಾರೋ ಎನ್ನುವ ಭಯಾನೂ ಕಾಡ್ತಿದೆ.”
“ಅಕ್ಕ ತಗ್ಗಿದ್ದಾಳೆ. ನೆನ್ನೆ ಆ ಹುಡುಗಿ ಅವಳ ತಂದೆ-ತಾಯಿ ಬಂದು ಸೀರೆ, ಸುಮಿಗೆ, ನಟೂಗೆ ಬಟ್ಟೆಕೊಟ್ಟುಹೋಗಿದ್ದಾರೆ. ಅವರು ನಿಮ್ಮ ಮನೆ ತುಂಬಾ ಹಳೆಯದು. ಬಿಚ್ಚಿಸಿ ಕಟ್ಟಿಸೋಣ. ಅದೂವರೆಗೂ ನೀವು ನಮ್ಮ ಹೊಸಮನೆಯಲ್ಲಿರಿ” ಅಂದ್ರಂತೆ. ಅವರ ಹೊಸಮನೆ ಜೆ.ಪಿ.ನಗರದಲ್ಲಿದೆಯಂತೆ. ಅಕ್ಕ ತುಂಬಾ ಖುಷಿಯಾಗಿದ್ದಾಳೆ.
“ಸುಮಿಗೊಂದು ಬೇಗ ಮದುವೆಯಾದರೆ ಅತ್ತೆಗೆ ಸಮಾಧಾನವಾಗತ್ತೆ.”
“ಕಂಕಣಬಲ ಕೂಡಿಬಂದರೆ ಅದೂ ಆಗತ್ತೆ ಬಿಡು” ಎಂದರು ಶ್ರೀನಿವಾಸರಾವ್.”

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :  https://surahonne.com/?p=44217
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

7 Comments on “ಕನಸೊಂದು ಶುರುವಾಗಿದೆ: ಪುಟ 20

  1. ಕನಸೊಂದು ಶುರುವಾಗಿದೆ ಧಾರಾವಾಹಿ.ಓದಿಸಿಕೊಂಡುಹೋಗುತ್ತಿದೆ..ಮಾನವೀಯ ಸಂಬಂಧ ಗಳು..ಕಟುಂಬದ ಒಳಗಿನ..ಲಘು ಬಿಗಿಗಳ ಅನಾವರಣವಾಗುತ್ತಾ ಸಾಗುತ್ತಿದೆ ಮೇಡಂ

  2. ಕಾದಂಬರಿಯ ಸಕಾರಾತ್ಮಕ ಬೆಳವಣಿಗೆಗಳು ಮನಸ್ಸಿಗೆ ಹಿತವೆನ್ನಿಸುತ್ತಲೇ ವರೂಳ ಮುಂದಿನ ಬದುಕಿನ ಹಜ್ಜೆಗಳ ಕುರಿತಾದ ಕುತೂಹಲ ಹೆಚ್ಚಾಗುತ್ತಲೇ ಇದೆ.

  3. ಕಾದಂಬರಿಯನ್ನು ಸೂಕ್ತ ಚಿತ್ರಗಳ ಸಹಿತ ಪ್ರಕಟಿಸುತ್ತಿರುವ ಸಂಪಾದಕಿ ಹೇಮಮಾಲಾ ಇವರಿಗೂ, ಪ್ರತಿ ಕಂತನ್ನೂ ಓದಿ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿಸುತ್ತಿರುವ ಆತ್ಮೀಯ ಗೆಳತಿಯರಿಗೂ, ನಮನಗಳು.

  4. ಪ್ರತಿ ಕಂತಿನಲ್ಲೂ ಕುತೂಹಲವನ್ನು ಹುಟ್ಟು ಹಾಕುತ್ತಾ ಸಾಗುತ್ತಿರುವ ಕನಸಿನ ಮಾಲೆಯು ಸುಂದರವಾಗಿದೆ ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *