ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 10
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಎರಡನೆಯ ದಿನ..16/09/2024
ಮಧ್ಯಾಹ್ನದ ಸಮಯ ನಾವು ನಿನ್ಹ್ ಬಿನ್ಹ್ (Ninnh Binh) ಪ್ರಾಂತ್ಯದ ‘ ಹೊವಾ ಲು’ (Hoa Lu) ತಲಪಿದೆವು. ಕ್ರಿ.ಶ 968 – 1010 ರ ಅವಧಿಯಲ್ಲಿ ಈ ಸ್ಥಳವು ವಿಯೆಟ್ನಾಂನ ರಾಜಧಾನಿಯಾಗಿತ್ತು. ದಿನ್ಹ್, ಲಿ ಮತ್ತು ಲೈ ವಂಶದ ರಾಜರುಗಳು ಇಲ್ಲಿ ಆಡಳಿತ ನಡೆಸಿದರು. ಪ್ರಾಚೀನ ದೇವಾಲಯಗಳು, ನದೀ ಮುಖಜ ಭೂಮಿ, ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ‘ ಹೊವಾ ಲು’ ವಿಯೆಟ್ನಾಂನ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ವಿಶಿಷ್ಟ ವಾಸ್ತು ವಿನ್ಯಾಸದ ‘ಹೊವಾ ಲು’ ಕಮಾನು ದ್ವಾರ ನಮ್ಮ ಗಮನ ಸೆಳೆಯುತ್ತದೆ. ಇದನ್ನು ಹಾಂಗ್ ಲಾಂಗ್ (Hoang Long) ನದಿಯ ದಡದಲ್ಲಿ ಕಟ್ಟಲಾಗಿದೆ. ಇಲ್ಲಿಯ ವಿಶಾಲವಾದ ಸ್ಥಳವನ್ನು ಟ್ರಾಂಗ್ ಆನ್ ಸಂಕೀರ್ಣ (Trang An Landscape Complex) ಎಂದು ಕರೆಯಲಾಗುತ್ತಿದೆ.
ನಾವು ಬಸ್ಸಿನಿಂದ ಇಳಿಯುತ್ತಿದ್ದಂತೆ ‘ ನಾನ್ ಲಾ ಟೋಪಿ’ ಹಾಗೂ ಕರಕುಶಲ ವಸ್ತುಗಳನ್ನು ಮಾರುವವರು ಮುತ್ತಿಕೊಂಡರು. ಮಹಿಳಾ ಫೊಟೊಗ್ರಾಫರ್ ಗಳು ತಮ್ಮ ಬಳಿ ಫೊಟೊ ತೆಗೆಸಿಕೊಳ್ಳಿ ಎಂದೂ, ನಾವು ಪಗೋಡಾಗಳಿಗೆ ಭೇಟಿ ಕೊಟ್ಟು ಬರುವಾಗ ಪ್ರಿಂಟ್ ಹಾಕಿಸಿ ಇಟ್ಟಿರುತ್ತೇವೆಂದೂ ಪೀಡಿಸಿದರು. ಒತ್ತಾಯಕ್ಕೆ ಕಟ್ಟುಬಿದ್ದು, ನಾವು ಒಂದು ಫೊಟೊ ತೆಗೆಸಿಕೊಂಡೆವು . ಕಮಾನು ದ್ವಾರದ ಒಳ ಹೊಕ್ಕಾಗ ವಿಶಾಲವಾದ ಉದ್ಯಾನವನ ಕಾಣಿಸಿತು. ಪಕ್ಕದಲ್ಲಿ ನೂರಾರು ಸೈಕಲ್ ಗಳನ್ನು ಇರಿಸಿದ್ದರು. ಆಸಕ್ತರು ಸೈಕಲ್ ಸವಾರಿ ಮಾಡುತ್ತಾ ನಿನ್ಹ್ ಬಿನ್ಹ್ ಪ್ರದೇಶದ ಹಳ್ಳಿಗಳು, ಹಸಿರು ಗದ್ದೆಗಳು, ಹೋಂಗ್ ಲಾಂಗ್ ನದೀ ತೀರ, ತಾವರೆ ಹೂಗಳಿರುವ ಕೊಳಗಳು ಹಾಗೂ ಪರ್ವತ ಶ್ರೇಣಿಯ ಕಡಿದಾದ ಬಂಡೆಗಳ ಸೊಬಗನ್ನು ವೀಕ್ಷಿಸ್ತುತ್ತಾ ಸುತ್ತಾಡಲು ಅವಕಾಶವಿತ್ತು. ನೂರಾರು ಜನರು ಅತ್ತಿತ್ತ ಸೈಕಲ್ ಸವಾರಿ ಮಾಡುತ್ತಾ ಹೋಗುವುದು ಕಂಡು, ನನಗೂ ಸೈಕಲ್ ಸವಾರಿ ಮಾಡಲು ಬರಬೇಕಿತ್ತು ಅನಿಸಿತ್ತು.
ಐತಿಹಾಸಿಕ ಹಿನ್ನೆಲೆ, ರಾಜವಂಶದ ಪಳೆಯುಳಿಕೆಗಳು ಹಾಗೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯ ಹೊಂದಿರುವ ಟ್ರಾಂಗ್ ಆನ್ ಸಂಕೀರ್ಣವನ್ನುಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿದೆ. ಕ್ರಿ.ಶ 968-980 ಅವಧಿಯಲ್ಲಿ, ರಾಜ್ಯಭಾರ ಮಾಡಿದ ‘ದಿನ್ಹ್ ಟೀನ್ ಹೊವಾಂಗ್’ (King Dinh Tien Hoang) ಎಂಬವನು ಇಲ್ಲಿಯ ಮೊದಲ ರಾಜ. ಈ ರಾಜನಿಗೆ ದಿನ್ಹ್ ಬೊ ಲಿನ್ಹ್ ಎಂಬ ಹೆಸರೂ ಇತ್ತು. 1010 ರಲ್ಲಿ, ರಾಜ ಲೈ ಥಾಯ್ (King Ly Thai) ರಾಜಧಾನಿಯನ್ನು ‘ಥಾಂಗ್ ಲಾಂಗ್’ ಗೆ ವರ್ಗಾಯಿಸಿದ. ಇದು ಈಗಲೂ ವಿಯೆಟ್ನಾಂನ ರಾಜಧಾನಿಯಾಗಿದ್ದು ‘ಹನೋಯ್’ ಎಂದು ಮರುನಾಮಕರಣಗೊಂಡಿದೆ.
‘ಹೊವಾ ಲು’ ವಿನಲ್ಲಿ ರಾಜರಿಗಾಗಿ ಕಟ್ಟಿರುವ ದೇವಾಲಯಗಳಿವೆ. ಇವುಗಳಲ್ಲಿ ಮುಖ್ಯವಾದುದು ದಿನ್ಹ್ ದೊರೆಗಾಗಿ ಕಟ್ಟಲಾದ ‘ದಿನ್ಹ್ ಟೀನ್ ಹೊವಾಂಗ್’ ದೇವಾಲಯ (Dinh Tien Hoang Temple). ಇದನ್ನು ವಿಯೆಟ್ನಾಂನ 17 ನೆ ಶತಮಾನದ ವಾಸ್ತುಶಿಲ್ಪದ ಪ್ರಕಾರ ಕಟ್ಟಲಾಗಿದೆ. ದಿನ್ಹ್ ಬೊ ಲಿನ್ಹ್ ಅಥವಾ ದಿನ್ಹ್ ಟೀನ್ ಹೋಂಗ್ ಒಬ್ಬ ಸಾಮಾನ್ಯ ರೈತನ ಮಗನಾಗಿದ್ದ. ಬಹಳ ಧೈರ್ಯಶಾಲಿ ಯೋಧ ಹಾಗೂ ಸಂಘಟನಾ ಚತುರನಾಗಿದ್ದ. ಆತ ಆಗಿನ ಕಾಲದಲ್ಲಿ ಅಲ್ಲಿ ದಂಗೆಯೆದ್ದಿದ್ದ ಜನರನ್ನು ಮಣಿಸಿ, ಜನರನ್ನು ಒಗ್ಗೂಡಿಸಿ, ಸ್ವಯಂಘೋಷಿತ ಚಕ್ರವರ್ತಿಯಾದ. ಉತ್ತಮ ರಾಜತಾಂತ್ರಿಕನೆಂದು ಖ್ಯಾತನಾಗಿದ್ದರೂ, ಕೆಲವು ಸರ್ವಾಧಿಕಾರಿ ಧೋರಣೆಯಿಂದಾಗಿ ಆತನ ಬಗ್ಗೆ ಕುಟುಂಬದಲ್ಲಿಯೂ, ರಾಜ್ಯದಲ್ಲಿಯೂ ಶತ್ರುಗಳಿದ್ದರು. ಲಭ್ಯ ಮಾಹಿತಿ ಪ್ರಕಾರ ಕ್ರಿ.ಶ. 979 ರಲ್ಲಿ ಒಬ್ಬ ಅತೀಂದ್ರಿಯ ದಾರ್ಶನಿಕನು ರಾಜನ ಪತ್ನಿಯ ಮೂಲಕ ಅವನ ಆಹಾರದಲ್ಲಿ ವಿಷಪ್ರಾಶನ ಮಾಡಿಸಿದನಂತೆ. ಆಗ ಚಕ್ರವರ್ತಿಯ ಉತ್ತರಾಧಿಕಾರಿಗಳು ತೀರಾ ಚಿಕ್ಕವರಾಗಿದ್ದ ಕಾರಣ, ದಿನ್ಹ್ ಟೀನ್ ಹೋಂಗ್ ನ ಮರಣದ ಒಂದು ವರ್ಷದೊಳಗೆ ದಿನ್ಹ್ ರಾಜವಂಶ ಕೊನೆಯಾಯಿತು.
ವಿಶಾಲವಾದ ಉದ್ಯಾನವನದಲ್ಲಿರುವ ಈ ದೇವಾಲಯವು ಮೂರು ವಿಭಾಗಗಳಾಗಿ ಇದೆ. ಹೊರಗಿನ ಸ್ವಾಗತ ಕಮಾನು ಮೊದಲ ಗೇಟ್ ಆಗಿದೆ. ಅನಂತರ ಸ್ವಲ್ಪ ದೂರದ ನಡೆಯುವ ಕಾಲುದಾರಿ . ಆಮೇಲೆ ಸಿಗುವ ಸಿಗುವ ಆಯತಾಕಾರದ ಕಲ್ಲಿನ ಡ್ರ್ಯಾಗನ್ ಕೆತ್ತನೆಯುಳ್ಳ ಕಲ್ಲು ಚಪ್ಪಡಿ ( Dragon Bed) ಮತ್ತು ‘ದಿನ್ಹ್ ಟೀನ್ ಹೊವಾಂಗ್’ ನ ಪ್ರತಿಮೆಯುಳ್ಳ ಮುಖ್ಯ ಗುಡಿ . ಇದು ಇಂಗ್ಲಿಷ್ ನ ‘ ಐ’ ಆಕಾರವನ್ನು ಹೋಲುತ್ತದೆ. ಡ್ರ್ಯಾಗನ್ ಬೆಡ್ ಇರುವ ಸ್ಥಳದಲ್ಲಿ ರಾಜನು ಆಸ್ಥಾನಿಕರನ್ನು ಉದ್ದೇಶಿಸಿ ಸಭೆ ನಡೆಸುತ್ತಿದ್ದನಂತೆ. ಡ್ರ್ಯಾಗನ್ ಬೆಡ್ ಎಂದು ಕರೆಯಲ್ಪಡುವ ಶಿಲ್ಪದ ಮೇಲೆ ಇರಿಸಲಾಗಿದ್ದ ಬಣ್ಣಬಣ್ಣದ ಇಕ್ಸೋರಾ ಅಥವಾ ಕಿಸ್ಕಾರ ಹೂಗಳು ನಮ್ಮೂರನ್ನು ನೆನಪಿಸಿದುವು. ಮುಖ್ಯಗುಡಿಯ ಹೊರಗೆ , ಪಗೋಡಾಗಳಲ್ಲಿ ಇರುವಂತಹ ಧೂಪದ್ರವ್ಯಗಳನ್ನು ಉರಿಸಿರುವುದನ್ನು ಕಂಡೆವು. ಗುಡಿಯ ಒಳಗಡೆ ಕಿಂಗ್ ‘ದಿನ್ಹ್ ಟೀನ್ ಹೊವಾಂಗ್’ ಮತ್ತು ಪುತ್ರರ ಚಿನ್ನದ ಬಣ್ಣದ ವಿಗ್ರಹಗಳೂ ಇದ್ದುವು. ವಿಗ್ರಹಗಳ ಮುಂದೆ ಹಣ್ಣುಗಳನ್ನಿರಿಸಲಾಗಿತ್ತು. ಪಕ್ಕದ ಕೋಣೆಯಲ್ಲಿ ರಾಜಮನೆತನದವರು ಬಳಸುತ್ತಿದ್ದ ಕೆಲವು ಹಳೆಯ ಪಾತ್ರೆಗಳೂ ಇದ್ದುವು.
ಇದೇ ಆವರಣದಲ್ಲಿ, ಇತರ ರಾಜರುಗಳಿಗಾಗಿ ಕಟ್ಟಲಾದ, ಇದೇ ಮಾದರಿಯ ಸ್ವಲ್ಪ ಚಿಕ್ಕದಾದ ಕಿಂಗ್ ಲೆ ಡೈ ಹನ್ , ಕಿಂಗ್ ಲೆ ಟೆಂಪಲ್, ಕಿಂಗ್ ಲೆ ಡೈ ಮೊದಲಾದ ಮಂದಿರಗಳಿವೆ. ನಮ್ಮ ಮಾರ್ಗದರ್ಶಿ ಹೇಳಿದ ಪ್ರಕಾರ, ಕಿಂಗ್ ದಿನ್ಹ್ ಟೀನ್ ಹೊವಾಂಗ್ ನ ಮರಣವು ವಿಷಪ್ರಾಶನದಿಂದ ಆದ ಕಾರಣ, ಮುಂದಿನ ‘ಲೈ ‘ ವಂಶದವರ ಆಡಳಿತದ ಕಾಲದಲ್ಲಿ, ರಾಜನಿಗಾಗಿ ಸಿದ್ಧಪಡಿಸಿದ ಆಹಾರವನ್ನು ‘ಜೇಡ್ ಸ್ಪಟಿಕದಿಂದ ಮಾಡಲಾದ ತಟ್ಟೆಯ ಮೇಲೆ ಆಹಾರವನ್ನಿರಿಸಿ, ಬೆಳ್ಳಿಯ ಚಾಪ್ ಸ್ಟಿಕ್ ನಿಂದ ಕೆದಕಿ ಪರೀಕ್ಷಿಸುತ್ತಿದ್ದರು. ಆಹಾರದಲ್ಲಿ ವಿಷವಿದೆಯಾದರೆ ಚಾಪ್ ಸ್ಟಿಕ್ ಗಳ ಬಣ್ಣ ಬದಲಾಗುತ್ತಿತ್ತು. ಈಗಲೂ ‘ಥಾನ್ ಹೊವಾ’ (Thanh Hoa) ಎಂಬಲ್ಲಿರುವ ದೇವಾಲಯದಲ್ಲಿ ಅಂದಿನ ರಾಜರು ವಿಷ ಪರೀಕ್ಷೆಗೆಂದು ಬಳಸಿದ ಜೇಡ್ ಕಲ್ಲಿನ ತಟ್ಟೆ ಮತ್ತು ಚಾಪ್ ಸ್ಟಿಕ್ ಗಳನ್ನು ಸಂರಕ್ಷಿಸಿ ಇಡಲಾಗಿದೆ. ಹೀಗೆ ‘ಲೈ’ ವಂಶದ ರಾಜನ ಮೂಲಕ ವಿಯೆಟ್ನಾಂನಲ್ಲಿ ಆಹಾರ ಸೇವಿಸಲು ಚಾಪ್ ಸ್ಟಿಕ್ಸ್ ಬಳಸುವ ಅಭ್ಯಾಸ ಆರಂಭವಾಯಿತು ಎನ್ನುತ್ತಾರೆ. ಪಕ್ಕದ ಕೊರಿಯಾ, ಚೀನಾ ಮೊದಲಾದ ದೇಶಗಳಿಂದ ಬಂದ ವರ್ತಕರ ಮೂಲಕ ಚಾಪ್ ಸ್ಟಿಕ್ಸ್ ಬಳಸಿ ಆಹಾರ ಸೇವಿಸುವ ಪದ್ಧತಿ ರೂಢಿಗೆ ಬಂತು ಎಂಬ ವಾದವೂ ಇದೆ. ಅಲ್ಲಿಯ ಹೋಟೆಲ್ ಗಳಲ್ಲಿ ಚಮಚ, ಫೋರ್ಕ್ ಇರುವಂತೆ ಚಾಪ್ ಸ್ಟಿಕ್ಸ್ ಇರುತ್ತವೆ. ಸ್ಥಳೀಯ ಜನರು ಚಾಪ್ ಸ್ಟಿಕ್ಸ್ ಮೂಲಕವೆ ಆಹಾರ ಸೇವಿಸುತ್ತಾರೆ.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41593
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು. ಚಾಪ್ಸ್ ಷ್ಟಿಕ್ ದಂತಕಥೆಯು ಪೂರಕ ಚಿತ್ರ ಗಳು ಮುದ ತಂದಿತು.ಗೆಳತಿ ಹೇಮಾ ಪ್ರವಾಸ ಮಾಡುವಾಗ ನಿಮಗಿರುವ ಸೂಕ್ಷ್ಮ ಅವಲೋಕನದ ಅರಿವಾಗುವಂತಿರುತ್ತದೆ ನಿಮ್ಮ ಲೇಖನ
ಪ್ರೀತಿಯ ಓದುವಿಕೆ, ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು .
ಚಾಪ್ ಸ್ಟಿಕ್ ಗಳ ಬಳಕೆಯ ಉಗಮ, ಆಹಾರದಲ್ಲಿ ವಿಷವಿದೆಯೇ ಇಲ್ಲವೇ ಪರಿಶೀಲಿಸುವ ಕುತೂಹಲಭರಿತ ವಿಷಯಗಳನ್ನೊಳಗೊಂಡ ಪ್ರವಾಸ ಕಥನ ಎಂದಿನಂತೆ ಸೊಗಸಾಗಿ ಮೂಡಿ ಬಂದಿದೆ.
ಪ್ರೀತಿಯ ಓದುವಿಕೆ, ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಬ್ಯೂಟಿಫುಲ್. ಹೊಸ ಹೊಸ ವಿಚಾರಗಳು ತಿಳಿಯುತ್ತಿವೆ ಈ ಪ್ರವಾಸ ಕಥನದಿಂದ.
ಪ್ರೀತಿಯ ಓದುವಿಕೆ, ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಚಾಪ್ ಸ್ಟಿಕ್ಸ್ ಬಳಕೆಯ ಹಿಂದೆ ಇರುವ ನಿಗೂಢ ರಹಸ್ಯವು ಬಹಳ ಕುತೂಹಲಕಾರಿಯಾಗಿದೆ. ಬಹಳಷ್ಟು ಮಾಹಿತಿಗಳನ್ನು ಹೊತ್ತ ವಿಯೆಟ್ನಾಂ ಪ್ರವಾಸ ಕಥನವು ಚೆನ್ನಾಗಿದೆ.
ಪ್ರೀತಿಯ ಓದುವಿಕೆ, ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ನೀವು ಸಂದರ್ಶಿಸುವ ಸ್ಥಳದ ಬಗ್ಗೆ ಬಹಳ ಮಾಹಿತಿ ಕಲೆ ಹಾಕುತ್ತೀರಿ. ಉತ್ತಮ ಲೇಖನ