ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 7
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ತಾಂಗ್ ಲಾಂಗ್ ಥಿಯೇಟರ್ – ವಾಟರ್ ಪಪೆಟ್ ಶೋ
ಸಂಜೆ 05 30 ಗಂಟೆಗೆ ಮಾರ್ಗದರ್ಶಿ ಟೀನ್ ಜಾನ್ ‘ವಾಟರ್ ಪಪೆಟ್ ಶೋ’ ವೀಕ್ಷಿಸಲು ಟಿಕೆಟ್ ಸಮೇತವಾಗಿ ಬಂದಿದ್ದ. ‘ತಾಂಗ್ ಲಾಂಗ್ ‘ಎಂಬಲ್ಲಿ ಸಂಜೆ ಆರುವರೆಗೆ ಶೋ ಆರಂಭವಾಗುವುದಿತ್ತು. ನಾವು ಸುಸಜ್ಜಿತವಾದ ಹಾಲ್ ಥಿಯೇಟರ್ ನ ಒಳಗಡೆ ಹೋಗುತ್ತಿದ್ದಂತೆ, ಸ್ಥಳೀಯ ಸಾಂಪ್ರದಾಯಿಕ ಉಡುಪಾದ, ತುಂಬುತೋಳಿನ ‘ಆಸೋಯ್’ ತೊಟ್ಟ ಚೆಂದದ ತರುಣಿಯರು ತೊಟ್ಟ ಲಲನೆಯರು ಸ್ವಾಗತ ಕೋರಿದರು.
‘ವಾಟರ್ ಪಪೆಟ್ ಶೋ’ ಸುಮಾರಾಗಿ ಕರ್ನಾಟಕದ ‘ಬೊಂಬೆಯಾಟ’ವನ್ನು ಹೋಲುತ್ತದೆ. ಅಂದಾಜು ಸಾವಿರ ವರ್ಷಗಳ ಹಿಂದೆ, ವಿಯೆಟ್ನಾಂನ ‘ಕೆಂಪು ನದಿಯ’ ಸದಾ ನೀರು ತುಂಬಿರುವ ಡೆಲ್ಟಾ ಪ್ರದೇಶದಲ್ಲಿ, ಭತ್ತದ ಕೃಷಿಯೊಂದಿಗೆ ಥಳಕು ಹಾಕಿ ಹುಟ್ಟಿಕೊಂಡ ಜಾನಪದ ಕಲಾಪ್ರಕಾರವಿದು. 12 ನೆಯ ಶತಮಾನದಲ್ಲಿ, ಜನಸಾಮಾನ್ಯ ತಮ್ಮ ರಾಜರನ್ನು ರಂಜಿಸಲೆಂದು ಈ ಕಲಾಪ್ರಕಾರವನ್ನು ಅಭಿವೃದ್ಧಿಪಡಿಸಿದರು. 1969 ರಲ್ಲಿ ಈ ಕಲೆಯನ್ನು ಪೋಷಿಸಲೆಂದು ‘ತಾಂಗ್ ಲಾಂಗ್ ವಾಟರ್ ಪಪೆಟ್ ಥಿಯೇಟರ್ ‘ಅನ್ನು ಸ್ಥಾಪಿಸಲಾಯಿತು. 2010 ರಲ್ಲಿ ವಾಟಾರ್ ಪಪೆಟ್ ಶೋ ವನ್ನು ವಿಯೆಟ್ನಾಂ ನ ಸಾಂಸ್ಕೃತಿಕ ಪರಂಪರೆ ಎಂದು ಯುನೆಸ್ಕೋ ಗುರುತಿಸಿತು.
ವಾಟರ್ ಪಪೆಟ್ ಶೋ ವಿಯೆಟ್ನಾಂನ ಕಲೆ , ಸಂಸ್ಕೃತಿ, ಕೃಷಿ, ಚರಿತ್ರೆಗಳ ಹೆಮ್ಮೆಯ ಪ್ರತೀಕವಾಗಿದೆ. ಒಳಾಂಗಣದಲ್ಲಿ ಅಂದಾಜು 15 x 30 ಅಡಿಯ ಪುಟ್ಟ ಕೊಳವನ್ನು ರಚಿಸಿ, ಆ ಕೊಳದಲ್ಲಿ 3-4 ಅಡಿ ನೀರು ತುಂಬಿಸಿರುತ್ತಾರೆ. ಇಳಿಬಿಟ್ಟ ಪರದೆಯ ಹಿಂಭಾಗದಲ್ಲಿರುವ ಬೊಂಬೆಯಾಟದ ಕಲಾವಿದರು ಪಪೆಟ್ ಗಳನ್ನು ಕುಣಿಸುತ್ತಾರೆ. ವೇದಿಕೆಯ ಎರಡೂ ಬದಿ ಆಸೀನರಾದ ಕಲಾವಿದರು ಸಂಗೀತವಾದ್ಯಗಳನ್ನು ನುಡಿಸುತ್ತಾರೆ, ಹಾಡುತ್ತಾರೆ ಅಥವಾ ಕಥನವನ್ನು ನಿರೂಪಿಸುತ್ತಾರೆ. ಕೃಷಿ ಕಾರ್ಯಕ್ರಮಗಳು, ನೃತ್ಯಗಳು, ರಾಜವಂಶದ ಚರಿತ್ರೆ, ವಿಯೆಟ್ನಾಂನ ಸಂಪ್ರದಾಯಗಳು, ಸ್ಥಳೀಯ ಜನರು ಶ್ರೇಷ್ಠವೆಂದು ಪರಿಗಣಿಸುವ ಡ್ರ್ಯಾಗನ್, ಯೂನಿಕಾರ್ನ್ , ಫೀನಿಕ್ಸ್ ಎಂಬ ಕಾಲ್ಪನಿಕ ಪ್ರಾಣಿಗಳು ಹಾಗೂ ಆಮೆ ಇವೆಲ್ಲವೂ ಈ ‘ಪಪೆಟ್ ಶೋ’ನಲ್ಲಿ ಬಿಂಬಿಸಲ್ಪಡುತ್ತವೆ.
ಭಾಷೆ ಅರ್ಥವಾಗದಿದ್ದರೂ ಸೊಗಸಾದ ಹಿಮ್ಮೇಳ, ಹಾಡುಗಾರಿಕೆ ಹಾಗೂ ಧ್ವನಿ ಬೆಳಕುಗಳ ಸಂಯೋಜನೆಯಿಂದ ಬಹಳ ಸೊಗಸಾಗಿದ್ದ ಈ ಕಾರ್ಯಕ್ರಮ ಇನ್ನಷ್ಟು ಸಮಯ ಇರಬಾರದಿತ್ತೇ ಅನಿಸಿತ್ತು. ವಿಯೆಟ್ನಾಂಗೆ ಹೋದವರು ತಪ್ಪದೇ ನೋಡಬಹುದಾದ ಕಾರ್ಯಕ್ರಮವಿದು.
ರಾತ್ರಿಯೂಟಕ್ಕೆ ಹೋಟೇಲ್ ‘ಇಂಡಿಯಾ ಗೇಟ್’ ಎಂಬಲ್ಲಿಗೆ ಕರೆದೊಯ್ದರು. ನಮಗಾಗಿ ಮೇಜನ್ನು ಕಾದಿರಿಸಿದ್ದರು. ಟೊಮೆಟೋ ಸೂಪ್, ರೋಟಿ, ದಾಲ್, ಅನ್ನ, ಪನೀರ್, ತರಕಾರಿ ಸಬ್ಜಿ ಇದ್ದ ಊಟ ಚೆನ್ನಾಗಿ ಇತ್ತು. ಈ ಹೋಟೆಲ್ ನ ಮಾಲಿಕರು ದೆಹಲಿಯವರು. ಸ್ವದೇಶೀಯರೆಂಬ ಅಭಿಮಾನದಿಂದ ಮಾತನಾಡಿಸಿದರು. ಹೋಟೆಲ್ ಬಹುತೇಕ ಖಾಲಿ ಇತ್ತು. ಇಲ್ಲಿ ಭಾರತದ ಆಹಾರಕ್ಕೆ ಬೇಡಿಕೆ ಕಡಿಮೆ ಇರಬಹುದೇನೋ ಎಂದು ಹೈಮವತಿ , ನಾನು ಮಾತನಾಡಿಕೊಂಡೆವು. ಹೋಟೆಲ್ ನ ಮಾಲಿಕರ ಬಳಿ , ಸ್ಥಳೀಯ ಜನರು ಭಾರತದ ಆಹಾರವನ್ನು ಇಷ್ಟಪಡುತ್ತಾರೆಯೇ ಎಂದು ಕೇಳಿದೆ. ‘ನಹೀಂ, ಇನ್ ಲೋಗೋಂ ನೂಡಲ್ಸ್ ಖಾತೇ ಹೈ , ಹಮಾರಾ ಏಕ್ ಕಟೋರಿ ಸಬ್ಜಿ ಯೆ ಪಚಾಸ್ ಲೋಗೋಂ ಕೊ ಬಸ್ ಹೈಂ, ವೊ ಐಸೆ ಖಾತೇ ಹೈಂ ‘ ಎಂದು ಅಭಿನಯಪೂರ್ವಕವಾಗಿ ತಿಳಿಸಿದರು. ಅವರು ತೋರಿಸಿದ್ದೇನೆಂದರೆ, ರೋಟಿಯನ್ನು ತುಂಡುಮಾಡಿ ಸಬ್ಜಿಯಲ್ಲಿ ಒಮ್ಮೆ ಮುಳುಗಿಸಿ ತಿನ್ನುತ್ತಾರೆ. ನಮ್ಮ ಹಾಗೆ ರೋಟಿಯೊಂದಿಗೆ ಪಲ್ಯವನ್ನು ಸೇರಿಸಿ ತರಕಾರಿ ಸಮೇತವಾಗಿ ತಿನ್ನಲು ಇಲ್ಲಿಯವರಿಗೆ ಗೊತ್ತಾಗುವುದಿಲ್ಲ, ಹಾಗಾದರೆ ನಿಮ್ಮ ವ್ಯಾಪಾರ ಹೇಗೆ ಎಂದಾಗ, ಟೂರಿಸ್ಟ್ ಬುಕಿಂಗ್ ಸದಾ ಇರುತ್ತದೆ ಎಂದರು. ಮಲೇಶ್ಯಾ,ಕೊರಿಯಾದವರು ಭಾರತೀಯ ಆಹಾರ ಇಷ್ಟಪಡುತ್ತಾರೆ ಎಂದರು. ಅವರಿಗೆ ಧನ್ಯವಾದ ಅರ್ಪಿಸಿ, ಹೋಟೆಲ್ ಬೆಬಿಲೋನ್ ಗೆ ವಾಪಸ್ಸಾದೆವು.
ಆಮೇಲೆ ಬೇರೆ ದಿನಗಳಲ್ಲಿ ನಾವು ಗಮನಿಸಿದ ಹಾಗೆ ಅಲ್ಲಿಯ ರೆಸ್ಟಾರೆಂಟ್ ಗಳಲ್ಲಿ ಮುಂಚಿತವಾಗಿ ಕಾಯ್ದಿರಿಸಿ ಬರುವ ಅಭ್ಯಾಸ ಹೆಚ್ಚು. ಹಾಗಾಗಿ ಎಲ್ಲಿಯೂ ಜನದಟ್ಟಣೆ ಕಾಣಿಸುವುದಿಲ್ಲ. ಅಂಗಡಿಗಳಲ್ಲಿ, ರಸ್ತೆಗಳಲ್ಲಿ, ಮನೆಗಳ ಮುಂದೆ ಇರುವ ಫುಟ್ ಪಾತ್ ನಂತಹ ಸ್ಥಳಗಳಲ್ಲಿ ಪುಟ್ಟ ಸ್ಟೂಲ್ ಹಾಕಿರುತ್ತಾರೆ. ಊಟ -ಉಪಾಹಾರದ ಸಮಯದಲ್ಲಿ, ಸ್ಥಳೀಯರು ಆ ಸ್ಟೂಲ್ ಗಳಲ್ಲಿ ಕುಳಿತುಕೊಂಡು ಜನರು ಕೈಯಲ್ಲಿ ಬೌಲ್ ಹಿಡಿದುಕೊಂಡು , ಚಾಪ್ ಸ್ಟಿಕ್ ನಲ್ಲಿ ಆಹಾರ ಸೇವಿಸುವ ದೃಶ್ಯ ಸರ್ವೇಸಾಮಾನ್ಯವಾಗಿ ಕಾಣಿಸುತ್ತದೆ. ನಾವು ನೋಡಿದ ರಸ್ತೆಗಳೆಲ್ಲ ಸ್ವಚ್ಛವಾಗಿದ್ದುವು.
ಮೊದಲೇ ತಿಳಿಸಿದ್ದಂತೆ, ಟೀನ್ ಜಾನ್ ನಮಗೆ ಒಂದು ದಿನದ ಮಾರ್ಗದರ್ಶಿ. ಆತನಿಗೆ ವಿದಾಯ ಹೇಳುವ ಸಮಯ ಬಂತು. ‘ ವಿ ಆರ್ ವೆರಿ ಹಾಪಿ ವಿತ್ ಯುವರ್ ಸರ್ವಿಸ್, ಥ್ಯಾಂಕ್ಯೂ ವೆರಿ ಮಚ್, ಬಟ್ ವಿ ಡೋಂಟ್ ಹ್ಯಾವ್ ಮಚ್ ಡಾಲರ್ಸ್, ವಿ ಕ್ಯಾನ್ ಗಿವ್ ಟಿಪ್ಸ್ ಇನ್ ರೂಪಿಸ್ ಒನ್ಲಿ, ಒಕೆ?’ ಎಂದು ಹೇಳಿ ಸ್ವಲ್ಪ ಹಣವನ್ನು ಆತನ ಕೈಗಿರಿಸಿದೆವು. ‘ ಇಟ್ ಈಸ್ ಫೈನ್, ಐ ಅಟೆಂಡ್ ಮೆನಿ ಇಂಡಿಯನ್ ಟೂರಿಸ್ಟ್ಸ್, ಐ ವಿಲ್ ಮ್ಯಾನೇಜ್, ಎಂಜಾಯ್ ಯುವರ್ ಸ್ಟೇ ಇನ್ ವಿಯೆಟ್ನಾಂ’ ಎಂದು ಹೇಳಿ ನಗುನಗುತ್ತಾ, ವಿನಯಪೂರ್ವಕವಾಗಿ ನಡುಬಾಗಿಸಿ ವಂದಿಸಿ ಹೊರಟ.
ನಾವು ರೂಮ್ ಸೇರಿಕೊಂಡೆವು. ಅಲ್ಲಿಗೆ ವಿಯೆಟ್ನಾಂನಲ್ಲಿ ನಮ್ಮ ಮೊದಲ ದಿನ ಸಂಪನ್ನವಾಯಿತು. ಪ್ರಯಾಣದ ದಣಿವಿಗೆ ತುಂಬಿದ ಹೊಟ್ಟೆಯೂ ಜೊತೆಗೂಡಿ ಇಬ್ಬರಿಗೂ ಸೊಗಸಾದ ನಿದ್ರೆ ಆವರಿಸಿತು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41467
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ಸೊಗಸಾಗಿ ಮೂಡಿಬರುತ್ತಿದೆ..ಗೆಳತಿ ಅದಕ್ಕೆ ಪೂರಕ ಚಿತ್ರ ಗಳು ಮುದ ಕೊಡುತ್ತವೆ..ಶುಭವಾಗಲಿ..
Beautiful
ಚಂದದ ಅನುಭವ ಕಥನ
ನೀರಿನಲ್ಲಿ ಬೊಂಬೆಯಾಟ ಬಹಳ ಕುತೂಹಲಕಾರಿಯಾಗಿದೆ. ಸೂಕ್ತ ಚಿತ್ರಗಳು ಲೇಖನದ ಮೆರಗನ್ನು ಹೆಚ್ಚಿಸಿವೆ …ಧನ್ಯವಾದಗಳು ಮಾಲಾ ಅವರಿಗೆ.
ಚಂದದ ನಿರೂಪಣೆಯಿಂದೊಡಗೂಡಿದ ಪ್ರವಾಸ ಕಥನ ಮುದ ನೀಡಿತು.