ದೇವೀರಮ್ಮ

Share Button


ಮಹಿಷಾಸುರನನ್ನು ಸಂಹರಿಸಲು ರೌದ್ರಾವತಾರ ತಾಳಿದ್ದ ತಾಯಿ ಚಾಮುಂಡೇಶ್ವರಿಯು ಶಾಂತಿಯನ್ನು ಅರಸುತ್ತಾ ನಡೆದಳು ಚಂದ್ರದ್ರೋಣ ಪರ್ವತದ ಸಾಲುಗಳತ್ತ. ‘ಬಾ, ತಾಯಿ ನನ್ನ ಮಡಿಲಲ್ಲಿ ವಿಶ್ರಮಿಸು’ ಎಂದು ಪ್ರೀತಿಯಿಂದ ಉಲಿದವು ಗಿರಿಶಿಖರಗಳು. ಹಸಿರುಡುಗೆ ತೊಟ್ಟ ಬೆಟ್ಟ ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಕಾನನದಲ್ಲಿ ವಾಸಿಸುವ ಜೀವ ಜಂತುಗಳು ದೇವಿಗೆ ತಲೆಬಾಗಿ ವಂದಿಸಿದವು. ಅಲ್ಲಿಯೇ ತಪಗೈಯ್ಯುತ್ತಿದ್ದ ಐವರು ತಪಸ್ವಿಗಳು ಅಲ್ಲಿದ್ದ ಕೋಡುಗಲ್ಲಿನ ಮೇಲೆ ಕುಳಿತು ತಪಸ್ಸು ಮಾಡಲು ಕೋರಿದರು. ಮುನಿಗಳ ಅಣತಿಯಂತೆ ಎತ್ತರವಾದ ಬೆಟ್ಟದ ನೆತ್ತಿಯ ಮೇಲೆ ಕುಳಿತು ದೀರ್ಘಕಾಲ ತಪಗೈದಳು. ರಮಣೀಯವಾದ ನಿಸರ್ಗದ ಮಡಿಲಲ್ಲಿ ಶಾಂತಿ, ನೆಮ್ಮದಿಯನ್ನು ಪಡೆದ ತಾಯಿ ದೇವೀರಮ್ಮ ಎಂದೇ ಪ್ರಖ್ಯಾತಳಾಗುತ್ತಾಳೆ. ಶಾಂತಿಯನ್ನರಸುತ್ತಾ ಬಂದ ದೇವಿಗೆ ಭಕ್ತರ ಸಹವಾಸ ಸಾಕೆನ್ನಿಸಿತೇನೋ – ‘ನನ್ನ ಶಾಂತಿಗೆ ಭಂಗ ತರಬೇಡಿ, ನನಗೆ ಧ್ಯಾನ ಮಾಡಲು ಬಿಡಿ’ ಎಂದುಸುರುತ್ತಾ ದೇವಿಯು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನಭಾಗ್ಯವನ್ನು ಕರುಣಿಸಿರುವಳು. ಮಹಿಷನನ್ನು ವಧೆ ಮಾಡಿದ ನರಕ ಚತುರ್ದಶಿಯಂದು ದೇವಿ ತನ್ನ ಭಕ್ತರನ್ನು ಪ್ರೀತಿಯಿಂದ ಕರೆಯುವಳು –“ತಾಯ ಹೃದಯ ತಂದ, ತುಂಬು ಮಮತೆಯಿಂದ / ಬಾ ಇಲ್ಲಿ ಓ ಕಂದ ಎನುತಿಹಳು, ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು”.

‘ದೇವೀರಮ್ಮನಿಗೆ ಜಯವಾಗಲಿ’ ಎಂದು ಜೈಕಾರ ಹಾಕುತ್ತಾ ಭಕ್ತರು ದುರ್ಗಮವಾದ ಹಾದಿಯಲ್ಲಿ ಸಾಗುತ್ತಾರೆ. ಬಂಡೆಗಳನ್ನು ಏರುತ್ತಾ, ಜಾರುತ್ತಾ, ಧೋ ಎಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ, ಕಲ್ಲು ಮುಳ್ಳುಗಳಿಂದ ತುಂಬಿದ ಹಾದಿಯಲ್ಲಿ ನಡೆದು ದೇವಿಯ ದರ್ಶನ ಪಡೆಯುತ್ತಾರೆ. ಮೇಲೇರಿದಂತೆ ಮಂಜು ಮುಸುಕಿದ ಬೆಟ್ಟ ಗುಡ್ಡಗಳನ್ನು ಕಂಡಾಗ, ತಾವು ಸ್ವರ್ಗಲೋಕಕ್ಕೆ ಬಂದೆವೇನೋ ಎಂಬ ಭಾವದಿಂದ ಸಂಭ್ರಮಿಸುತ್ತಾರೆ. ದೇವೀರಮ್ಮನ ಬೆಟ್ಟದ ಐತಿಹ್ಯವನ್ನು ಕೇಳೋಣ ಬನ್ನಿ. ಹಿಂದೆ ಮಹಿಷೂರಿನಲ್ಲಿ, ಅಂದರೆ ಈಗಿನ ಮೈಸೂರು ನಗರ, ಬ್ರಹ್ಮನ ವರಪ್ರಸಾದದಿಂದ ಉನ್ಮತ್ತನಾಗಿ ಲೋಕ ಕಂಟಕನಾಗಿದ್ದ ಮಹಿಷಾಸುರನನ್ನು ವಧಿಸಲು ಹುಲಿಯ ಬೆನ್ನೇರಿ ಹೊರಡುವಳು ಚಾಮುಂಡೇಶ್ವರಿ. ಇವಳು ಸಾಮಾನ್ಯಳಲ್ಲ, ತ್ರಿಮೂರ್ತಿಗಳ ಶಕ್ತಿಯನ್ನೆಲ್ಲಾ ತನ್ನೊಡಲಲ್ಲಿರಿಸಿಕೊಂಡ ಶಕ್ತಿ ದೇವತೆ. ಒಂಭತ್ತು ದಿನಗಳ ಕಾಲ ಮಹಿಷನೊಡನೆ ಭೀಕರವಾದ ಕಾಳಗ ಮಾಡಿ ಹತ್ತನೆಯ ದಿನ ಅವನ ರುಂಡವನ್ನು ಚೆಂಡಾಡುತ್ತಾಳೆ. ರೌದ್ರಾವತಾರ ತಳೆದಿದ್ದ ಚಾಮುಂಡಿಯು ತನ್ನ ಮನಸ್ಸನ್ನು ಶಾಂತಗೊಳಿಸಲು ಪ್ರಶಾಂತವಾದ ಸ್ಥಳವನ್ನು ಅರಸಿ ಲೋಕ ಸಂಚಾರ ಹೊರಡುವಳು. ರಮಣೀಯವಾದ ಚಂದ್ರದ್ರೋಣ ಪರ್ವತ ಶ್ರೇಣಿಗಳನ್ನು ಕಂಡವಳು, ಅದೇ ಸೂಕ್ತವಾದ ಸ್ಥಳವೆಂದು ನಿರ್ಧರಿಸುತ್ತಾಳೆ. ಆ ಪವಿತ್ರವಾದ ಸ್ಥಳದಲ್ಲಿ – ರುದ್ರಮುನಿ, ಸೀತಾಳಯ್ಯ, ಮುಳ್ಳಯ್ಯ, ದತ್ತಾತ್ರೇಯ, ಅಜ್ಜಯ್ಯ ಎಂಬ ಐವರು ತಪಸ್ವಿಗಳು ಸಾಧನೆ ಮಾಡುತ್ತಿರುತ್ತಾರೆ. ದೇವಿಯು ಅವರನ್ನು ಭೇಟಿ ಮಾಡಿದಾಗ ಅವರು ದೇವಿಗಿರಿಯನ್ನು ತೋರಿಸಿ, ‘ತಾಯೆ ಜಗನ್ಮಾತೆ, ನೀನು ಇಲ್ಲಿ ನೆಲಸು’ ಎಂದು ಹರಸುತ್ತಾರೆ. ಮನಃಶ್ಯಾಂತಿಯನ್ನು ಅರಸುತ್ತಾ ಬಂದ ಚಾಮುಂಡೇಶ್ವರಿಯು ಅಲ್ಲಿಯೇ ದೀರ್ಘಕಾಲ ತಪಸ್ಸು ಮಾಡುತ್ತಾಳೆ. ಆ ದೇವಿಗಿರಿಯಲ್ಲಿ ತಪಗೈದ ಜಗನ್ಮಾತೆ ಶಾಂತಮೂರ್ತಿಯಾಗಿ ತನ್ನ ಭಕ್ತರನ್ನು ಹರಸಲು ದೀಪಾವಳಿಯ ಅಮವಾಸ್ಯೆಯಂದು ಬೆಟ್ಟದಿಂದ ಕೆಳಗಿಳಿದು ಬರುತ್ತಾಳೆ. ಅಂದಿನಿಂದ ಚಾಮುಂಡಿಯು ದೇವೀರಮ್ಮನೆಂದೇ ಪ್ರಖ್ಯಾತಳಾಗುವಳು.

ಸಮುದ್ರಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿರುವ ಚಂದ್ರದ್ರೋಣಪರ್ವತದ ಮಡಿಲಲ್ಲಿರುವ ದೇವಿಗಿರಿಯ ಮೇಲೆ ಈ ತಾಯಿ ನೆಲಸಿರುವಳು. ಚಿಕ್ಕಮಗಳೂರು ಜಿಲ್ಲೆಯಿಂದ ಮೂವತ್ತು ಕಿ.ಮೀ. ದೂರದಲ್ಲಿರುವ ದೇವೀರಮ್ಮನ ಬೆಟ್ಟ ಮಲ್ಲೇನಹಳ್ಳಿಯ ಬಿಂಡಿಗ ಗ್ರಾಮದಲ್ಲಿದೆ. ಬೆಟ್ಟದ ಮೇಲೆ ನೆಲೆಯಾದ ದೇವಿ ತನ್ನ ಭಕ್ತರನ್ನು ಹರಸಲು ದೀಪಾವಳಿಯ ಅಮವಾಸ್ಯೆಯಂದು ಕೆಳಗಿಳಿದು ಬರುವಳೆಂಬ ಪ್ರತೀತಿಯಿದೆ. ಬೆಟ್ಟದ ಕೆಳಗೆ ಇರುವ ದೇವಾಲಯವನ್ನು ಇತ್ತೀಚೆಗೆ ಸುಂದರವಾಗಿ ನವೀಕರಿಸಲಾಗುತ್ತಿದೆ. ಈ ದೇಗುಲವು ಹಸಿರು ಹೊದ್ದ ಚಂದ್ರದ್ರೋಣ ಪರ್ವತಶ್ರೇಣಿಗಳಿಂದ ಸುತ್ತುವರೆಯಲ್ಪಟ್ಟಿದೆ. ದೇವಾಲಯದ ಮುಂದೆ ಭತ್ತದ ಗದ್ದೆಗಳೂ, ಅಡಿಕೆ ತೋಟಗಳೂ ಇದ್ದು ಪ್ರಶಾಂತವಾದ ವಾತಾವರಣವನ್ನು ನಿರ್ಮಾಣ ಮಾಡಿವೆ. ದೇವೀರಮ್ಮನ ದೇಗುಲವನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ದರ್ಶಿಸಲು ಮನಸ್ಸು ಹಾತೊರೆಯುತ್ತದೆ. ಚಿಕ್ಕಮಗಳೂರು ಜಿಲ್ಲೆಯವರಿಗೆ ದೇವೀರಮ್ಮನ ಬೆಟ್ಟವೆಂದರೆ ವಿಶೇಷ ಶ್ರದ್ಧೆ, ಭಕ್ತಿ. ದೇವೀರಮ್ಮನ ದೇಗುಲಕ್ಕೆ ತೆರಳಲು ನಾಲ್ಕು ಮಾರ್ಗಗಳಿವೆ – ಮಲ್ಲೇನಹಳ್ಳಿ, ಮಾಣಿಕ್ಯಧಾರಾ, ಅರಿಶಿನಕೊಪ್ಪ ಹಾಗು ಮುತ್ತಿನಪುರ ಅಥವಾ ಫಲಾಹಾರಮಠದ ದಾರಿ. ಆದರೆ ಉತ್ಸಾಹೀ ತರುಣರು ಎಲ್ಲಾ ಕಡೆಯಿಂದ ಬೆಟ್ಟವನ್ನು ಹತ್ತುವರು. ಆನೆ ಸಾಗಿದ್ದೇ ಹಾದಿ ಎನ್ನುವ ಹಾಗೆ ಅವರು ಹತ್ತಿದ್ದೇ ದಾರಿ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಜನಸಾಗರವೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ಉಪವಾಸವಿದ್ದು ಬರಿಗಾಲಲ್ಲಿ ಬೆಟ್ಟ ಹತ್ತುತ್ತಿದ್ದರು.

ದೀಪಾವಳಿ ಹಬ್ಬದ ನರಕ ಚತುರ್ದಶಿಯಂದು ಬೆಳಗಿನ ಜಾವ ಪುರೋಹಿತರು ದೇವೀರಮ್ಮನ ಬೆಟ್ಟದ ತಪ್ಪಲಿನಲ್ಲಿರುವ ದೇವಿಯ ಉತ್ಸವ ಮೂರ್ತಿಯನ್ನು ಬೆಟ್ಟದ ನೆತ್ತಿಯ ಮೇಲಿರುವ ದೇಗುಲಕ್ಕೆ ಹೊತ್ತುಯ್ಯುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಾಲಯದಲ್ಲಿರುವ ದೇವಿಯ ದರ್ಶನ ಮಾಡಲು ಲಕ್ಷಗಟ್ಟಲೇ ಜನರು ಆಗಮಿಸುವರು. ಸಂಜೆ ಭಕ್ತರು ಅರ್ಪಿಸಿದ ಹರಕೆಯ ವಸ್ತುಗಳಾದ ಕಟ್ಟಿಗೆ, ಬೆಣ್ಣೆ, ತುಪ್ಪ, ಬಟ್ಟೆಗಳನ್ನು ಬೆಂಕಿಗೆ ಆಹುತಿ ನೀಡುವರು. ಸುತ್ತಮುತ್ತಲಿನ ಗ್ರಾಮಸ್ಥರು ಬೆಟ್ಟದ ಮೇಲಿನ ಬೆಳಕು ಕಂಡ ಮೇಲೆಯೇ ದೀಪಗಳನ್ನು ಹೊತ್ತಿಸಿ ದೀಪಾವಳಿ ಹಬ್ಬವನ್ನು ಆಚರಿಸುವರು. ಮೈಸೂರಿನ ರಾಜವಂಶಸ್ಥರು ನಾಡದೇವಿಯಾದ ಚಾಮುಂಡಿಯ ಅವತಾರವಾದ ದೇವೀರಮ್ಮನಿಗೆ ಉಡಿಯಕ್ಕಿ ಕಳುಹಿಸಿ, ದೇವಿರಮ್ಮನ ಬೆಟ್ಟದ ನೆತ್ತಿಯ ಮೇಲಿನ ಬೆಳಕು ಕಾಣಿಸಿದ ನಂತರವೇ ದೀಪಾವಳಿಯ ದೀಪಗಳನ್ನು ಬೆಳಗುವ ಸಂಪ್ರದಾಯವಿದೆ. ಮಾರನೆಯ ದಿನ ಬೆಟ್ಟದ ತಪ್ಪಲಿನಲ್ಲಿರುವ ದೇವಿರಮ್ಮನ ಗುಡಿಯಲ್ಲಿ ಜಾತ್ರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವರು,

ಐದು ವರ್ಷಗಳಿಂದ ದೇವೀರಮ್ಮನ ಬೆಟ್ಟ ಹತ್ತಲು ಮನಸ್ಸು ಹಂಬಲಿಸುತ್ತಿತ್ತು. ಕಾರಣಾಂತರಗಳಿಂದ ನನ್ನ ಯಾತ್ರೆಯನ್ನು ಮುಂದೂಡುತ್ತಲೇ ಬಂದೆ. 2024 ಅಕ್ಟೋಬರ್ ತಿಂಗಳಿನ ಹದಿನೈದರಂದು ಗೆಳತಿ ಅನ್ನಪೂರ್ಣಳಿಂದ ಅನಿರೀಕ್ಷಿತವಾದ ಫೋನ್ ಕರೆ ಬಂತು, ‘ಮೇಡಂ, ಈ ಬಾರಿ ನೀವು ದೇವೀರಮ್ಮನ ಬೆಟ್ಟ ಹತ್ತಲು ಬರಲೇಬೇಕು. ನನ್ನ ಮಗ ನವೀನ ಎಲ್ಲಾ ಸಿದ್ಧತೆಯನ್ನೂ ಮಾಡುತ್ತಾನೆ. ನಿಮ್ಮ ಜೊತೆ ಇಬ್ಬರು ಗೆಳತಿಯರನ್ನೂ ಕರೆತನ್ನಿ’ ಎಂದಾಗ ಸಂತೋಷ ಗರಿಗೆದರಿ ನರ್ತಿಸಿತ್ತು. ನಾಗೇನಹಳ್ಳಿಯ ವ್ಯಾಪ್ತಿಯಲ್ಲಿ ಬರುವ Silver Cloud (ಬೆಳ್ಳಿಮೋಡ) ಎಂದೇ ಹೆಸರು ಹೊತ್ತ ಕಾಫಿ ತೋಟದಿಂದ ನಮ್ಮ ಸಾಹಸ ಯಾತ್ರೆ ಆರಂಭ. ಅಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವಕುಮಾರಸ್ವಾಮಿ ಮತ್ತು ವಿದ್ಯಾ ದಂಪತಿಗಳ ಸೇವಾ ಮನೋಭಾವದ ಬಗ್ಗೆ ತಿಳಿಯೋಣ ಬನ್ನಿ. ದೇವೀರಮ್ಮನ ಬೆಟ್ಟಕ್ಕೆ ತೋಟದ ಮೂಲಕ ದಾರಿ ಮಾಡಲು ಗ್ರಾಮ ಪಂಚಾಯತ್ ಕಡೆಯಿಂದ ಕರೆ ಬಂದಾಗ, ತಮ್ಮ ಕಾಫಿ ಎಸ್ಟೇಟಿನ ಮಾಲೀಕರನ್ನು ಒಪ್ಪಿಸಿ ಯಾತ್ರಿಕರ ಪಯಣವನ್ನು ಸುಗಮಗೊಳಿಸಿರುವರು. ಪ್ರತಿವರ್ಷ ನರಕಚತುರ್ದಶಿಯಂದು ಬೆಟ್ಟ ಹತ್ತಲು ಹಂಬಲಿಸುವ ಭಕ್ತರ ನೆರವಿಗೆ ದಂಪತಿಗಳು ಡಾ. ನವೀನರ ಜೊತೆಗೂಡಿ ಎಲ್ಲಾ ಬಗೆಯ ಸೌಕರ್ಯಗಳನ್ನೂ ಒದಗಿಸುವರು. ಹತ್ತು ವರ್ಷಗಳಿಂದ ಈ ಮಾರ್ಗದಲ್ಲಿ ಪಯಣಿಸುವ ಭಕ್ತರ ನೆರವಿಗೆ ಇವರು ಸದಾ ಸಿದ್ಧ. ಇವರ ಸೇವಾ ಮನೋಭಾವವನ್ನು ದೇವೀರಮ್ಮನ ಭಕ್ತರು ಹಾಡಿ ಹೊಗಳುವರು. ಪ್ರತಿ ವರ್ಷ ನಲವತ್ತರಿಂದ ಅರವತ್ತು ಯಾತ್ರಿಗಳು ಇವರ ಎಸ್ಟೇಟಿನ ಮಾರ್ಗವಾಗಿ ದೇವೀರಮ್ಮನ ಬೆಟ್ಟ ಹತ್ತಿ ತಮ್ಮ ಹರಕೆ ತೀರಿಸಿಕೊಂಡಿರುವರು. ಬೆಟ್ಟದಿಂದ ಕೆಳಗಿಳಿದು ಬರುವ ದಣಿದ ಅತಿಥಿಗಳಿಗೆ ಇವರು ತುಂಬು ಹೃದಯದಿಂದ ಊಟ, ಉಪಹಾರ ನೀಡಿ ಸತ್ಕರಿಸುವರು. ಅಷ್ಟೇ ಅಲ್ಲ, ಮಾರ್ಗದರ್ಶಕರಾಗಿ ಭಕ್ತರ ಜೊತೆಗೂಡಿ ದಂಪತಿಗಳು ಬೆಟ್ಟ ಹತ್ತುವರು.

2024 ರಂದು ಅಕ್ಟೋಬರ್ 31, ಚತುರ್ದಶಿಯಂದು ಬೆಳ್ಳಿಮೋಡ ಕಾಫಿ ಎಸ್ಟೇಟಿನಿಂದ ಹೊರಟವರ ಗುಂಪು 20 ಕ್ಕೆ ಇಳಿದಿತ್ತು. ಕಾರಣ ರಾತ್ರಿಯಿಡೀ ಸುರಿದ ಮಳೆಯಿರಬಹುದು. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ಕು ಮಂದಿ ರೆಕ್ಕೆಪುಕ್ಕ ಇದ್ದ ಹಾಗೆ ಬೆಟ್ಟ ಏರುತ್ತಿದ್ದರು. ಬೆನ್ನಿಗೆ ಲ್ಯಾಪ್‌ಟಾಪ್ ಕಟ್ಟಿಕೊಂಡು ಸಾಗುವ ಸಾಫ್ಟ್ವೇರ್ ಹುಡುಗರು ಬೆಟ್ಟ ಹತ್ತುವುದರಲ್ಲಿ ನಿಸ್ಸೀಮರು. ಮಧ್ಯಮ ವಯಸ್ಕರು ಜತನದಿಂದ ಹೆಜ್ಜೆ ಹಾಕುತ್ತಿದ್ದರೆ, ಇಳಿ ವಯಸ್ಸಿನವರು ಎಲ್ಲಿ ಜಾರುವೆವೋ ಎಂಬ ಭಯ ಆತಂಕದಿಂದಲೇ ಬೆಟ್ಟ ಹತ್ತುತ್ತಿದ್ದರು. ನಮ್ಮ ತಂಡದಲ್ಲಿ ಹತ್ತೊಂಭತ್ತು ವಯಸ್ಸಿನ ಅನ್ವಿತಾ ಕಿರಿಯವಳು, ಎಪ್ಪತ್ತರ ಹರಯದ ನಾನು ಹಿರಿಯವಳು. ಬೆಳ್ಳಿಮೋಡ ಎಸ್ಟೇಟಿನಿಂದ ಪಿಕ್‌ಅಪ್ ವ್ಯಾನಿನಲ್ಲಿ ಎರಡೂವರೆಯಿಂದ ಮೂರು ಕಿ.ಮೀ ಸಾಗಿದೆವು. ನಂತರ ದೇಗುಲ ತಲುಪಲು ಮೂರು ಕಿ.ಮೀ. ಕಡಿದಾದ ಹಾದಿಯಲ್ಲಿ ಬೆಟ್ಟ ಏರಬೇಕಿತ್ತು. ತಲೆ ಎತ್ತಿ ನೋಡಿದರೆ ಎತ್ತರವಾದ ಬೆಟ್ಟದ ಕೋಡುಗಲ್ಲಿನ ಮೇಲೊಂದು ಕೇಸರಿ ಬಾವುಟ ಹಾರುತ್ತಿತ್ತು. ಅದೇ ದೇವೀರಮ್ಮನ ದೇಗುಲ ಎಂದು ಅವರು ಹೇಳಿದಾಗ ನಾನು ಬೆಚ್ಚಿಬಿದ್ದೆ. ನನ್ನಿಂದ ಬೆಟ್ಟ ಏರಲು ಸಾಧ್ಯವೇ ಎಂದು ಗಾಬರಿಯಾಗಿತ್ತು. ಇರಲಿ, ಸಾಧ್ಯವಾದಷ್ಟು ದೂರ ಹೋದರಾಯಿತು ಎಂಬ ಮನೋಭಾವದಿಂದ ಎಲ್ಲರ ಜೊತೆ ಹೊರಟೆ. ಅವರ ಹರಟೆ ನಗು ಸಾಂಕ್ರಾಮಿಕವಾಗಿತ್ತು.

ಕಾಫಿ ಎಸ್ಟೇಟಿನಲ್ಲಿ ಹುಲ್ಲಿನ ಮೇಲೆ ನರ್ತನ ಮಾಡುತ್ತಿದ್ದ ಅತಿಥಿಗಳು ಅಂದರೆ ಇಂಬಳಗಳು (ಜಿಗಣೆ) ನಮ್ಮ ನಿರೀಕ್ಷೆಯಲ್ಲಿದ್ದವು. ನಾವು ಕಾಲಿರಿಸಿದ್ದೇ ತಡ ಗಪ್ಪಂತ ನಮ್ಮ ಪಾದಕ್ಕೆ ಕಚ್ಚಿಕೊಂಡು ಬಿಡುತ್ತಿದ್ದವು. ಇವುಗಳನ್ನು ಎಂದೂ ಕಾಣದಿದ್ದ ಗೆಳತಿ ಅನೂಗೆ ಗಾಬರಿಯೋ ಗಾಬರಿ. ಕೀಳಲು ಹೋದರೆ ಅವು ನಮ್ಮ ಕೈಗೇ ಸುತ್ತಿಕೊಳ್ಳುತ್ತಿದ್ದವು, ಆಗ ಶರತ್ ಹೇಳಿದ ಮಾತು ಕೇಳಿ ನಕ್ಕೂ ನಕ್ಕೂ ಸಾಕಾಯಿತು, ‘ಇಂಬಳ ನಮ್ಮ ಕೆಟ್ಟ ರಕ್ತ ಮಾತ್ರ ಹೀರಿ ನಂತರ ಕೆಳಗೆ ಬಿದ್ದು ಹೋಗುತ್ತವೆ.’ ಅಂತೂ ಎಲ್ಲರ ಕಾಲಿಂದಲೂ ರಕ್ತದ ಹನಿಗಳು ಬೀಳುತ್ತಿದ್ದವು. ರಾತ್ರಿಯೆಲ್ಲಾ ಮಳೆ ಸುರಿದ ಕಾರಣ ಬೆಟ್ಟ ಹತ್ತುವುದೇ ಒಂದು ಸವಾಲಾಗಿತ್ತು. ಬೆಟ್ಟದ ಮೇಲಿದ್ದ ಜಿಗುಟು ಮಣ್ಣು, ಬೆಟ್ಟವನ್ನು ಜಾರು ಬಂಡೆಯನ್ನಾಗಿ ಮಾರ್ಪಡಿಸಿತ್ತು. ಅಲ್ಲಿ ಬೆಳೆದಿದ್ದ ಕುರುಚಲು ಹುಲ್ಲು ನಮಗೆ ಆಸರೆಯಾಗಿತ್ತು. ನಾನು ಒಂದು ಬಾರಿ ಜಾರಿ ಬಿದ್ದೆ, ತಕ್ಷಣವೇ ಸಾಫ್ಟ್ವೇರ್ ಹುಡುಗ ಶ್ರೀನಿವಾಸ ನನ್ನ ಕೈ ಹಿಡಿದು ನಿಧಾನವಾಗಿ ನಡೆಸಿದ. ಸೀನು, ಶರಾ, ಕಿರೂ, ಸಾಗೂ (ಶ್ರೀನಿವಾಸ, ಶರತ್, ಕಿರಣ್, ಸಾಗರ್) ಒಬ್ಬರಾದ ಮೇಲೊಬ್ಬರು ನನ್ನ ಕೈ ಹಿಡಿದು ಬೆಟ್ಟ ಹತ್ತಿಸಿದರು. ದೇವೀರಮ್ಮನೇ ಇವರನ್ನು ನನ್ನ ಬಳಿ ಕಳುಹಿಸಿದಳೇನೋ ಎಂಬ ಭಾವ ಮನದಲ್ಲಿ ಮೂಡಿತ್ತು. ಅವರಿಗೆ ವಂದನೆಗಳನ್ನು ತಿಳಿಸಿದಾಗ ಅವರು, ‘ನೀವು ಈ ಇಳಿವಯಸ್ಸಿನಲ್ಲಿ ಬೆಟ್ಟ ಹತ್ತುತ್ತಿರುವುದು ನಮಗೆಲ್ಲಾ ಸ್ಫೂರ್ತಿ’ ಎನ್ನುತ್ತಿದ್ದರು. ಅಂತೂ ಇಂತೂ ಮೂರು ಕಿ.ಮೀ. ಕ್ರಮಿಸಿ ದೇಗುಲದ ಮುಂದೆ ನಿಂತಾಗ ನಿಟ್ಟುಸಿರು ಬಿಟ್ಟೆ. ದೇಗುಲದ ಮುಂದಿದ್ದ ಕಲ್ಲುಬಂಡೆ ಗ್ರಾನೈಟ್ ಶಿಲೆಗೆ ಎಣ್ಣೆ ಬಳಿದ ಹಾಗೆ ಜಾರುತ್ತಿತ್ತು. ಬಂಡೆಯ ಮೇಲಿದ್ದ ಕಂಬಿಗಳನ್ನು ಹಿಡಿದು ಸರತಿಸಾಲಿನಲ್ಲಿ ಆಮೆಗತಿಯಲ್ಲಿ ನಡೆದು ದೇವಿಯ ದರ್ಶನವನ್ನು ಪಡೆದೆ. ದೇವಿಯ ಮುಂದೆ ನಿಂತಾಗ ಬೆಟ್ಟ ಹತ್ತಿದ ದಣಿವಾಲ್ಲಾ ಮಾಯವಾಗಿತ್ತು, ಮನಸ್ಸು ಉಲ್ಲಸಿತವಾಗಿತ್ತು. ಸರ್ವಾಲಂಕಾರಭೂಷಿತಳಾಗಿ ನಸುನಗುತ್ತಾ ಕುಳಿತಿದ್ದ ತಾಯಿ ದೇವೀರಮ್ಮ ಭಕ್ತರನ್ನೆಲ್ಲಾ ಹರಸುತ್ತಿದ್ದಳು. ‘ನಂಬಿರುವ ಭಕ್ತರ ರಕ್ಷೆಗಾಗಿ / ನಂಬದಿಹ ದುಷ್ಟರ ಶಿಕ್ಷೆಗಾಗಿ / ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ’ ಎಂದು ಗುನುಗುತ್ತಾ ದೇವಿಗೆ ಭಕ್ತಿಭಾವದಿಂದ ವಂದಿಸಿದೆ.

ದೇವಿಗೆ ನಮಿಸಿ ಕಣ್ಣು ತೆರೆದಾಗ ಅದ್ಭುತವಾದ ದೃಶ್ಯ ನಮ್ಮ ಮನ ಸೆಳೆದಿತ್ತು. ದೇಗುಲದ ಸುತ್ತಲೂ ಕಾಣುತ್ತಿದ್ದ ಚಂದ್ರದ್ರೋಣ ಪರ್ವತದ ಮನೋಹರ ದೃಶ್ಯಗಳು, ಬೆಟ್ಟಗಳ ನೆತ್ತಿಯ ಮೇಲೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಮೋಡಗಳ ಸಾಲು, ಮಂಜಿನ ಮುಸುಕು ಹೊದ್ದು ಮಲಗಿದ್ದ ಶಿಖರಗಳು, ಪಕ್ಷಿಗಳ ಕಲರವ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದಿದ್ದವು. ಚಾಮುಂಡೇಶ್ವರಿಯು ತಪಸ್ಸಿಗಾಗಿ ಈ ಸ್ಥಳವನ್ನು ಆಯ್ಕೆ ಮಾಡಿದ್ದ ರಹಸ್ಯ ಅರಿವಾಗಿತ್ತು. ಪ್ರಕೃತಿಯ ವಿಹಂಗಮ ನೋಟ ಕಣ್ಮನವನ್ನು ತಣಿಸುವಂತಿತ್ತು. ಕೆಳಗಿಳಿಯಲು ಮನಸ್ಸಿಲ್ಲ, ಆದರೆ ಉಳಿದವರಿಗೆ ದೇವಿಯ ದರ್ಶನ ಪಡೆಯಲು ಸ್ಥಳ ಕೊಡಬೇಕಲ್ಲ. ಮತ್ತೆ ಬೆಟ್ಟ ಇಳಿಯುವ ಸಾಹಸ, ಬೆಟ್ಟ ಏರುವಾಗ ಏದುಸಿರು, ಇಳಿಯುವಾಗ ಸ್ನಾಯುಗಳ ಸೆಳೆತ, ಬಿಗಿತದಿಂದ ಉಂಟಾದ ನೋವಿನಿಂದ ಚಡಪಡಿಸಿದೆ. ಇಳಿಜಾರಾದ ಬಂಡೆಯನ್ನು ನೋಡಿ ಭಯಬೀತಳಾಗಿ ಕೆಲವು ಕಡೆ ಬಂಡೆಯ ಮೇಲೆ ಕುಳಿತು ಮಕ್ಕಳ ಹಾಗೆ ಜಾರಿದೆ. ಅಲ್ಲಿದ್ದ ಕಲ್ಲು ಬಂಡೆಯ ಮೇಲೆ ಕುಳಿತು ಕಿತ್ತಳೆ ಹಣ್ಣು ಮೆಲ್ಲುತ್ತಾ ಸುತ್ತಲೂ ಇದ್ದ ವನಸಿರಿಯನ್ನು ಕಂಡು ಮಂತ್ರಮುಗ್ಧರಾದೆವು. ಕೆಳಗಿಳಿಯುವಾಗ ಎಲ್ಲರೂ ಮೌನಕ್ಕೆ ಶರಣಾಗಿದ್ದರು. ಮೈ ಮನದ ತುಂಬಾ ದೇವಿಯ ರೂಪವನ್ನು ತುಂಬಿಸಿ ಸಾಗುತ್ತಿದ್ದರು. ಬೆಟ್ಟದ ಬುಡ ತಲುಪಿದಾಗ ಒಮ್ಮೆ ತಲೆಯೆತ್ತಿ ನೋಡಿದೆ, ಎದೆ ಝಲ್ಲೆಂದಿತ್ತು, ಅಬ್ಬಾ ನಾನು ಅಷ್ಟು ಮೇಲೆ ಏರಿ ತಾಯಿಯ ದರ್ಶನ ಮಾಡಿದೆನೇ, ಅಥವಾ ಇದು ಹಗಲುಗನಸೇ ಎಂಬ ಭಾವ ಸುಳಿಯುತ್ತಿತ್ತು. ನನ್ನನ್ನು ನೋಡಿ ಗೆಳತಿ ಅನ್ನಪೂರ್ಣ ಸಂತಸದಿಂದ ಹೇಳಿದಳು, ‘ಅಂತೂ ನಿಮ್ಮ ಸಂಕಲ್ಪ ಪೂರ್ತಿಯಾಯಿತಲ್ಲಾ, ಐದು ವರ್ಷದಿಂದ ದೇವೀರಮ್ಮನ ಬೆಟ್ಟ ಏರಲು ಕನವರಿಸುತ್ತಿದ್ದಿರಿ.’ ಹಲವರು ಪ್ರತಿವರ್ಷ ಉತ್ಸಾಹದಿಂದ ಬೆಟ್ಟ ಏರಿ ತಾಯಿಯ ಆಶೀರ್ವಾದದಿಂದ ತಮ್ಮ ಸಂಕಷ್ಟಗಳಿಂದ ಪಾರಾಗುತ್ತಿದ್ದರು. ಕೆಲವರು ಬೆಟ್ಟವನ್ನು ಮೂರು ಬಾರಿ ಏರಿ ತಮ್ಮ ಹರಕೆ ಪೂರೈಸುತ್ತಿದ್ದರು. ನನಗೆ ನೆನಪಾಗಿದ್ದು ಮತ್ತೊಂದು ಸಿನೆಮಾ ಗೀತೆ, ‘ಎಂತಾ ಮರುಳಯ್ಯ ಇದು ಎಂತಾ ಮರುಳೋ’.

ನಾವು ಕಾಫಿ ಎಸ್ಟೇಟ್‌ಗೆ ಹಿಂತಿರುಗಿದ ಮೇಲೆ ಊರಿಗೆ ಹೊರಡಲು ನನ್ನ ಬ್ಯಾಗ್‌ಪ್ಯಾಕ್ ಹುಡುಕಿದೆ. ನನ್ನ ಬ್ಯಾಗಿನ ತುಂಬಾ ನಾಲ್ಕಾರು ನೀರಿನ ಬಾಟಲ್‌ಗಳನ್ನೂ, ಬಿಸ್ಕತ್ತು ಚಾಕೊಲೇಟ್‌ಗಳ ಪ್ಲಾಸ್ಟಿಕ್ ಕವರ್‌ಗಳನ್ನೂ ತುಂಬಿಸಿದ್ದರು. ಭಕ್ತರು ಬೆಟ್ಟದ ತುಂಬಾ ಚೆಲ್ಲಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ ನೋಡಿ ಬೇಸರವಾಗಿತ್ತು. ಆದರೆ ಹುಡುಗರು ಅಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ಕನ್ನು ಆರಿಸಿ ತಮ್ಮ ಬ್ಯಾಗುಗಳಲ್ಲಿ ತುಂಬಿಸಿ ತಂದಿದ್ದರು. ಅವರ ಪರಿಸರದ ಪ್ರೇಮವನ್ನು ನೋಡಿ ಮನಸ್ಸು ತುಂಬಿ ಬಂದಿತ್ತು. ಬಹುಶಃ ದೇವಿಯು ತನ್ನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವರ್ಷಕ್ಕೊಂದು ಬಾರಿ ಮಾತ್ರ ತನ್ನ ಭೇಟಿಗೆ ಅವಕಾಶ ನೀಡುತ್ತಾಳೇನೋ ಎಂಬ ಭಾವ ನನ್ನಲ್ಲಿ ಮೂಡಿತ್ತು.

ನಮ್ಮ ಪೂರ್ವಜರು ಕಟ್ಟಿದ ಗುಡಿಗಳೆಲ್ಲಾ ಬೆಟ್ಟದ ನೆತ್ತಿಯ ಮೇಲೆ ಅಥವಾ ನದಿ ದಂಡೆಗಳ ಮೇಲೆ ಇರುವುದಾದರೂ ಏಕೆ ಎಂಬುದು ಈಗ ಅರಿವಾಗತೊಡಗಿತ್ತು. ಸುಂದರವಾದ ಪ್ರಶಾಂತವಾದ ನಿಸರ್ಗದ ಮಡಿಲಲ್ಲಿರುವ ದೇಗುಲಗಳಿಗೆ ಭೇಟಿ ನೀಡಿದಾಗ ಎಂತಹ ನಾಸ್ತಿಕರ ಮನವೂ ದೇವರ ಸನ್ನಿಧಿಯಲ್ಲಿ ಅರಳುವುದರಲ್ಲಿ ಸಂಶಯವಿಲ್ಲ.

-ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

5 Responses

  1. ದೇವೀರಮ್ಮ ಬೆಟ್ಟದ ಸಂಪೂರ್ಣ ವಿವರ..ಅದರೊಂದಿಗೆ ತಮ್ಮ ಅನುಭವವನ್ನು ಸೊಗಸಾದ ನಿರೂಪಣೆಯೊಂದಿಗೆ ಅನಾವರಣಗೊಳಿಸಿರುವ ..ನಿಮಗೆ .. ನಮನಗಳು ಗಾಯತ್ರಿ ಮೇಡಂ

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ದೇವೀರಮ್ಮ ಗುಡಿಯ ಪೌರಾಣಿಕ ಹಿನ್ನೆಲೆ, ಚಾರಣದ ಅನುಭವ, ಪ್ರಕೃತಿ ಸೊಬಗು ಎಲ್ಲವನ್ನೂ ಬಹಳ ಚೆನ್ನಾಗಿ ವರ್ಣಿಸಿರುವಿರಿ. ತಮ್ಮ ಸಾಹಸಕ್ಕೆ ಶರಣುಗಳು ಮೇಡಂ.

  4. ಪದ್ಮಾ ಆನಂದ್ says:

    ಮೈಸೂರಿನ ಚಾಮುಂಡೇಶ್ವರಿ ಶಾಂತಿಯನ್ನರಸಿ ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ದೇವೀರಮ್ಮನಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿರುವುದರ ವಿವರಣೆ, ತಮ್ಮ ಚಾರಣದ ಅನುಭವವನ್ನು ಸೊಗಸಾಗಿ ಹಂಚಿಕೊಂಡ ಗಾಯತ್ರಿ ಮೇಡಂ ಅವರಿಗೆ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: