ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 6
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹೋಟೆಲ್ ಮಸಾಲಾ ಆರ್ಟ್ , ಹನೋಯ್
ಆಗ ಸಮಯ ಮಧ್ಯಾಹ್ನ ಒಂದು ಗಂಟೆ ಆಗಿತ್ತು. ನಮ್ಮ ನಿಗದಿತ ವೇಳಾಪಟ್ಟಿಯದ್ದ ಪ್ರಕಾರ, ವಿಯೆಟ್ನಾಂನಲ್ಲಿ ಮೊದಲ ದಿನದ ಸ್ಥಳವೀಕ್ಷಣೆ ಮುಗಿದಿತ್ತು. ನಮ್ಮ ಮಾರ್ಗದರ್ಶಿ ಟೀನ್ ಜಾನ್ . ಇದೀಗ ಊಟದ ಸಮಯ, ನಾನು ನಿಮ್ಮನ್ನು ಇಂಡಿಯನ್ ರೆಸ್ಟಾರೆಂಟ್ ‘ ಮಸಾಲಾ ಆರ್ಟ್’ ಗೆ ಕರೆದೊಯ್ಯುವೆ. ಅಲ್ಲಿ ಸಸ್ಯಾಹಾರವಿರುತ್ತದೆ. ನಿಮಗೆ ಯಾವುದಾದರೂ ಆಹಾರ ವಸ್ತುವಿನ ಅಲರ್ಜಿ ಇದೆಯೇ, ಎಂದು ಕೇಳಿದ. ಹನೋಯ್ ನಗರದ ಮುಖ್ಯರಸ್ತೆಯೊಂದರಲ್ಲಿ ಇರುವ ‘ಮಸಾಲಾ ಆರ್ಟ್’ ಹೋಟೆಲ್ ನಲ್ಲಿ ನಮಗಾಗಿ ಊಟದ ಮೇಜು ಕಾದಿರಿಸಿದ್ದರು. ಆ ರೆಸ್ಟಾರೆಂಟ್ ನ ಮಾಲಿಕರು ನಮ್ಮನ್ನು ನಗುಮುಖದಿಂದ ಸ್ವಾಗತಿಸಿದರು. ತಾವೇ ಖುದ್ದಾಗಿ ಊಟದ ತಟ್ಟೆ, ಚಮಚ, ಫೋರ್ಕ್ ಇತ್ಯಾದಿ ಸಿದ್ಧಪಡಿಸಿ ಯಾವ ಊರಿನವರೆಂದು ಮಾತನಾಡಿಸಿದರು. ನಮ್ಮ ಊರಿನಲ್ಲಿ ಪಕ್ಕದ ಬೀದಿಯವರನ್ನೂ ಮಾತನಾಡಿಸದೇ ಇದ್ದರೂ, ನಮಗೆ ಪರದೇಶದಲ್ಲಿ ಭಾರತೀಯರನ್ನು ಕಂಡಾಗ ‘ಸ್ವದೇಶಿ ಪ್ರೇಮ’ ಥಟ್ಟೆಂದು ಉಕ್ಕಿ ಬರುತ್ತದೆ. ಖುಷಿಯಿಂದಲೇ ಪರಸ್ಪರ ಪರಿಚಯಿಸಿಕೊಂಡೆವು. ಅವರ ತಂಡದಲ್ಲಿ ಪಂಜಾಬ್ ಹಾಗೂ ಉತ್ತರಪ್ರದೇಶದವರಿದ್ದರು. ವಿಯೆಟ್ನಾಮೀಸ್ ಸಹಾಯಕರೂ ಇದ್ದರು. ಇಲ್ಲಿ ಹೋಟೆಲ್ ಆರಂಭಿಸಿ ಎರಡು ವರ್ಷಗಳಾದವೆಂದು ತಿಳಿಸಿದರು. ರೆಸ್ಟಾರೆಂಟ್ ಅಚ್ಚುಕಟ್ಟಾಗಿ, ಸ್ವಚ್ಚವಾಗಿ ಇತ್ತು. ಊಟಕ್ಕೆ ಬಫೆ ವ್ಯವಸ್ಥೆಯಿತ್ತು.
ಸಸ್ಯಾಹಾರ ವಿಭಾಗದಲ್ಲಿ ಹಸಿ ತರಕಾರಿ ಸಲಾಡ್ , ತಂದೂರಿ ರೋಟಿ, ಉತ್ತರ ಭಾರತೀಯ ಅಡುಗೆಗಳಾದ ಸಬ್ಜಿ, ಪನೀರ್, ಬಾಸ್ಮತಿ ಅನ್ನ, ದಾಲ್, ಹರಬರಾ ಮಿರ್ಚಿ , ಹಪ್ಪಳ, ಇದ್ದುವು. ನಾವು ‘ದಹೀ ಮಿಲೇಗಾ? ಅಚಾರ್ ಹೈ ? ‘ ಎಂದು ಕೇಳಿ ಮೊಸರು, ಉಪ್ಪಿನಕಾಯಿಯನ್ನೂ ಕೇಳಿ ಪಡೆದೆವು. ಮೇಲಿಂದ ಖೀರ್ ಪಾಯಸ, ಐಸ್ ಕ್ರೀಂ ಕೂಡ ಇದ್ದುವು. ನಮಗೆ ಚೆನ್ನಾಗಿ ಹಸಿವಾಗಿತ್ತು. ಊಟ ರುಚಿಯಾಗಿತ್ತು. ಚೆನ್ನಾಗಿ ಉಂಡೆವು. ಮಾಲೀಕರು ಬಂದು ‘ಖಾನಾ ಕೈಸಾ ಲಗಾ’ ಎಂದು ವಿಚಾರಿಸಿದರು . ‘ಬಹುತ್ ಅಚ್ಚಾ ಥಾ, ಶುಕ್ರಿಯಾ’ ಎಂದು ಹೇಳಿ, ಸಣ್ಣ ಮೊತ್ತದ ‘ಭಾರತೀಯ ರೂಪಾಯಿ’ ಹಣವನ್ನೇ ಟಿಪ್ಸ್ ಆಗಿ ಇರಿಸಿ ಬಂದೆವು.
ಆಮೇಲೆ ಗೈಡ್ ನಮ್ಮನ್ನು ಹನೋಯ್ ನಲ್ಲಿ ನಾವು ಉಳಕೊಳ್ಳಲಿರುವ ಹೋಟೆಲ್ ‘ಬೆಬಿಲೋನ್ ಗ್ರಾಂಡ್’ ಗೆ ಬಿಡುವುದಾಗಿ ತಿಳಿಸಿದ. ಕಾರಿನಲ್ಲಿ ಮಾತನಾಡುತ್ತಾ, ನೀವು ಊಟದ ನಂತರ ವಿಶ್ರಾಂತಿ ಪಡೆಯುವುದಾದರೆ ನಿಮ್ಮಿಷ್ಟ. ಶಾಪಿಂಗ್ ಮಾಡಬೇಕಿದ್ದರೆ ಹೋಟೆಲ್ ನ ಸಮೀಪದಲ್ಲಿ ಮಾರ್ಕೆಟ್ ಇದೆ. ಆಸಕ್ತಿಯಿದ್ದರೆ, ಸಂಜೆ 0600 ಗಂಟೆಗೆ ಥಿಯೇಟರ್ ಒಂದರಲ್ಲಿ ವಿಯೆಟ್ನಾಂನ ಪ್ರಸಿದ್ಧ ಜಾನಪದ ಕಲೆಯಾದ ‘ವಾಟರ್ ಪಪೆಟ್ ಶೋ‘ ಇರುತ್ತದೆ. ಅದನ್ನು ನೋಡಬಹುದು. ಆದರೆ ಇದು ನಮ್ಮ ಟೂರ್ ಪ್ಲಾನ್ ನಲ್ಲಿ ಇಲ್ಲ, ಹಾಗಾಗಿ ನೀವು ಟಿಕೆಟ್ ಖರೀದಿಸಬೇಕಾಗುತ್ತದೆ, 50 ನಿಮಿಷದ ಈ ಕಾರ್ಯಕ್ರಮದ ಟಿಕೆಟ್ ನ ಬೆಲೆ 150,000 ವಿಯೆಟ್ನಾಂ ಡಾಂಗ್ (ಸುಮಾರು ರೂ.450/-). ಬೇಕಿದ್ದರೆ ವ್ಯವಸ್ಥೆ ಮಾಡುವೆ, ಟಿಕೆಟ್ ಹಣವನ್ನು ನಗದು ರೂಪದಲ್ಲಿ ಕೊಡಬೇಕಾಗುತ್ತದೆ ಎಂದ. ಹಾಗಾದರೆ ನಾವು ಒಂದೆರಡು ತಾಸು ವಿರಮಿಸಿ, ‘ವಾಟರ್ ಪಪೆಟ್ ಶೋ’ ನೋಡಲು ಬಯಸುತ್ತೇವೆ ಎಂದು ತಿಳಿಸಿದೆವು.
ಭಾರತೀಯ ಕರೆನ್ಸಿ ಆಗದೇ ಎಂದರೆ, ಅದನ್ನು ವಿನಿಮಯ ಮಾಡಲು ಕಷ್ಟವಾಗುತ್ತದೆ. ಬ್ಯಾಂಕ್ ನಲ್ಲಿ ಕೊಟ್ಟರೆ ವಿನಿಮಯ ದರ ಕಡಿಮೆಯಾಗುತ್ತದೆ, ಅಲ್ಲದೆ ನಮಗೆ ಸಿಕ್ಕಿದ ವಿದೇಶಿ ಹಣದ ಮೂಲ ತಿಳಿಸಬೇಕಾಗುತ್ತದೆ. ಅಮೆರಿಕನ್ ಡಾಲರ್ ಇದ್ದರೆ ಕೊಡಿ, ಅಥವಾ ನಿಮ್ಮ ಹೋಟೇಲ್ ನ ಪಕ್ಕದಲ್ಲಿಯೇ ಇರುವ ಎ.ಟಿ.ಎಮ್ ನಿಂದ ಸ್ಥಳೀಯ ಕರೆನ್ಸಿ ಪಡೆದುಕೊಳ್ಳಿ. ಇಲ್ಲವಾದರೆ ನೀವು ಉಳಕೊಳ್ಳುವ ಹೋಟೆಲ್ ನವರ ಬಳಿ ‘ಡಾಂಗ್’ ಕೇಳಿ ಪಡೆದುಕೊಳ್ಳಿ, ಆಮೇಲೆ ಅವರಿಗೆ ನಿಮ್ಮಲ್ಲಿರುವ ಕಾರ್ಡ್ ಮೂಲಕ ಪಾವತಿಸಬಹುದು ಎಂದ. ಆಗಲಿ ಎಂದು ಇಬ್ಬರ ಟಿಕೆಟ್ ಗಾಗಿ 10 ಡಾಲರ್ ಕೊಟ್ಟೆವು. ನಾವು ಹೊರಡುವ ಮೊದಲು ಈಗಾಗಲೇ ವಿಯೆಟ್ನಾಂ ಪ್ರವಾಸ ಮಾಡಿ ಬಂದಿದ್ದ ಒಂದಿಬ್ಬರ ಅಭಿಪ್ರಾಯ ಕೇಳಿದ್ದೆವು. ಅವರು ವಿಯೆಟ್ನಾಂನಲ್ಲಿ ಭಾರತೀಯ ರೂಪಾಯಿಯನ್ನು ಆರಾಮವಾಗಿ ಸ್ವೀಕರಿಸುತ್ತಾರೆಂದೂ, ಡೆಬಿಟ್/ ಕ್ರೆಡಿಟ್ /ಫಾರೆಕ್ಸ್ ಕಾರ್ಡ್ ಗಳನ್ನೂ ಉಪಯೋಗಿಸಲು ಸಾಧ್ಯವಾಗುತ್ತದೆ ಎಂಬ ಮಾಹಿತಿ ಕೊಟ್ಟಿದ್ದ ಕಾರಣ, ಕಡಿಮೆ ಡಾಲರ್ ಒಯ್ದಿದ್ದೆವು. ಆದರೆ ನಾವು ಅಂದುಕೊಂಡಷ್ಟು ಸುಲಭವಾಗಿ ಭಾರತೀಯ ಕರೆನ್ಸಿ ಚಲಾವಣೆ ಆಗುವುದಿಲ್ಲ ಎಂದು ಮೊದಲ ದಿನವೇ ನಮ್ಮ ಅನುಭವಕ್ಕೆ ಬಂದಿತ್ತು.
ಭಾರತೀಯ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರವಿರುವಂತೆ, ವಿಯೆಟ್ನಾಂನ ನೋಟುಗಳಲ್ಲಿ ‘ಹೊ ಚಿ ಮಿನ್ಹ್’ ಅವರ ಚಿತ್ರವಿರುತ್ತದೆ.
ಆಮೇಲೆ ಗೈಡ್ ನಮ್ಮನ್ನು, ಹೋಟೆಲ್ ಬೆಬಿಲೋನ್ ಗ್ರಾಂಡ್ ಗೆ ತಲಪಿಸಿ, ತಾನು ಸಂಜೆ 0530 ಗಂಟೆಗೆ ಬಂದು ಥಿಯೇಟರ್ ಗೆ ಕರೆದೊಯ್ಯುವೆ ಎಂದು ಹೇಳಿ ಹೊರಟು ಹೋದ. ನಾವು ಹೋಟೆಲ್ ನಲ್ಲಿ ಚೆಕ್ ಇನ್ ಆದೆವು. ನಮಗೆ ಕೊಡಲಾದ ಕೋಣೆ ವಿಶಾಲವಾಗಿ ಅನುಕೂಲಕರವಾಗಿತ್ತು. ನಾವು ಸ್ನಾನ ಮುಗಿಸಿ, ಸ್ವಲ್ಪ ಕಾಲ ವಿರಮಿಸಿದೆವು. ರೂಮಿನಲ್ಲಿ ಕಾಫಿ/ಚಹಾ ಮಾಡಲು ವ್ಯವಸ್ಥೆಯಿತ್ತು. ಕೆಟಲ್ ನಲ್ಲಿ ನೀರು ಕುದಿಸಿ ಚಹಾ ಕುಡಿದು ಸಿದ್ಧರಾದೆವು .
ನಮ್ಮ ಮೊಬೈಲ್ ಸ್ವಯಂಚಾಲಿತವಾಗಿ ವಿಯೆಟ್ನಾಂ ಸಮಯ ತೋರಿಸುತ್ತಿತ್ತು.ಇಲ್ಲಿಯ ಸಮಯ ಭಾರತಕ್ಕಿಂತ ಒಂದುವರೆ ಗಂಟೆ ಮುಂದೆ. ಹಾಗಾಗಿ ನನ್ನ ಕೈಗಡಿಯಾರದಲ್ಲಿ ಭಾರತದ ಸಮಯ ತೋರಿಸುತ್ತಿತ್ತು. ಹಾಗೆಯೇ ಇರಲಿ, ತೊಂದರೆಯೇನಿಲ್ಲ ಎಂದು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಮೊಬೈಲ್ ಸಂಖ್ಯೆಗೆ ಹತ್ತು ದಿನಗಳ ಅಂತರಾಷ್ಟ್ರೀಯ ರೋಮಿಂಗ್ ಹಾಕಿಸಿಕೊಂಡಿದ್ದ ಕಾರಣ ಭಾರತಕ್ಕೆ ಫೋನ್ ನಲ್ಲಿ ಮಾತನಾಡಲು ಸಾಧ್ಯವಾಗಿತ್ತು. ಹೈಮವತಿ ಕೂಡ ತನ್ನ ಮೊಬೈಲ್ ಸಿಮ್ ಗೆ ಅಂತರಾಷ್ಟ್ರೀಯ ರೋಮಿಂಗ್ ಪ್ಯಾಕ್ ಹಾಕಿದ್ದರೂ, ಅದೇಕೋ ಅವರ ಸಿಮ್ ಕೆಲಸ ಮಾಡುತ್ತಿರಲಿಲ್ಲ. ಹೋಟೆಲ್ ನ ವೈ-ಫ಼ೈ ಸಂಪರ್ಕ ಚೆನ್ನಾಗಿ ಸಿಗುತ್ತಿದ್ದುದರಿಂದ ಇಬ್ಬರಿಗೂ ವಾಟ್ಸಾಪ್ ನಲ್ಲಿ ಸಂಪರ್ಕ ಮಾಡಲು ಅನುಕೂಲವಾಗಿತ್ತು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=41439
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಗುತ್ತಿದೆ ಗೆಳತಿ.. ಹೇಮಾ
ಧನ್ಯವಾದಗಳು
ಬಹಳ ಸುಂದರವಾಗಿದೆ.
ಧನ್ಯವಾದಗಳು
ಮತ್ತೆ ವಿಯೆಟ್ನಾಂ ಪ್ರವಾಸವನ್ನು ನೆನಪಿಸಿಕೊಳ್ಳುವಂತೆ ಮಾಡಿದ ಹೇಮಮಾಲ ಮೇಡಂ ಗೆ ವಂದನೆಗಳು
ಚಂದದ ನಿರೂಪಣೆ
ಧನ್ಯವಾದಗಳು
ಸೊಗಸಾದ ಊಟ…ನೋಟ! ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನವು ವಿಯೆಟ್ನಾಂ ಪ್ರವಾಸಿಗರಿಗೆ ಕೈಪಿಡಿಯಂತಿದೆ. ಧನ್ಯವಾದಗಳು ಮಾಲಾ ಅವರಿಗೆ.
ಧನ್ಯವಾದಗಳು
ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಾ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ತಿಳಿಸುತ್ತಾ ಸಾಗಿದೆ, ಪ್ರವಾಸೀಕಥನ.