ಕರುಣಾಳು ಬಾ ಬೆಳಕೆ
(ಸಬರಮತಿ ಆಶ್ರಮದಲ್ಲೊಂದು ಸುತ್ತು).
“ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು”– ಸ್ವಾತಂತ್ರ್ಯ ಹೋರಾಟಗಾರರು ಬಾಪೂ ಜೊತೆ ಧ್ವನಿಗೂಡಿಸುತ್ತಾ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ಬೇಸತ್ತ ಭಾರತೀಯರು, ತಮ್ಮ ತಾಯ್ನಾಡನ್ನು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ – ಸತ್ಯ ಅಹಿಂಸೆಯ ಮಾರ್ಗದಲ್ಲಿ ನಡೆಯಲು ಪಣ ತೊಟ್ಟಿದ್ದಾರೆ. ಸಬರಮತೀ ನದಿಯ ದಡದಲ್ಲಿ ಬಾಪೂ ಸ್ಥಾಪಿಸಿದ ‘ಸತ್ಯಾಗ್ರಹ ಆಶ್ರಮದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ‘ಬಯಲು ಉಪಾಸನಾ ಮಂದಿರದಲ್ಲಿ’ ಭಜನೆ ಮಾಡುತ್ತಿದ್ದಾರೆ. ಬ್ರಿಟಿಷರ ದುರಾಡಳಿತ, ಬಡತನ, ಜಾತಿಬೇಧ, ಅಸ್ಪೃಶ್ಯತೆ, ವರ್ಗಬೇಧಗಳಿಂದ ಕಂಗೆಟ್ಟ ಜನರಿಗೆ ಬಾಪೂ ಕಗ್ಗತ್ತಲೆಯಲ್ಲಿ ಕಾಣುತ್ತಿರುವ ಬೆಳಕಿನ ಕಿರಣವಾಗಿದ್ದಾರೆ.
ಅಕ್ಟೋಬರ್ 20, 2024 ರಂದು ನಾನು ಮಗಳ ಕುಟುಂಬದ ಜೊತೆ ಗುಜರಾತ್‌ಗೆ ಪ್ರವಾಸ ಹೋದಾಗ ನನ್ನ ಕಣ್ಣ ಮುಂದೆ ತೇಲಿ ಬಂದ ಚಿತ್ರಗಳಿವು. ಅಂದು ನಾವು ಸಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ವಿಭಿನ್ನವಾದ ಸ್ವಾತಂತ್ರ್ಯ ಸಂಗ್ರಾಮದ ಚಿತ್ರವನ್ನು ಕಣ್ತುಂಬಿಕೊಳ್ಳಲು ಹೊರಟಿದ್ದೆವು. ಇದು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬ್ರಿಟಿಷರು ಅನೈತಿಕ ಮಾರ್ಗದಲ್ಲಿ ನಡೆಸುತ್ತಿದ್ದ ಸಂಗ್ರಾಮದ ವಿರುದ್ಧ ಸತ್ಯ ಅಹಿಂಸೆಯೆಂಬ ಅಸ್ತ್ರಗಳೊಂದಿಗೆ ನೈತಿಕತೆಯ ನೆಲೆಗಟ್ಟಿನ ಮೇಲೆ ಗಾಂಧಿ ನಡೆಸುತ್ತಿದ್ದ ಸಂಗ್ರಾಮವಾಗಿತ್ತು. ಅಂದಿನ ಭಾರತದ ಚಿತ್ರವನ್ನು ಕಂಡ ಗಾಂಧೀಜಿಯವರು – ಭಾರತ ರಾಮರಾಜ್ಯವಾಗಬೇಕಾದರೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು, ಆರ್ಥಿಕ ಪ್ರಗತಿ, ಸಾಮಾಜಿಕ ಸುಧಾರಣೆ, ಅಸ್ಪೃಶ್ಯತೆಯ ನಿವಾರಣೆ, ಅನಕ್ಷರಸ್ಥರಿಗೆ ವಿದ್ಯಾಭ್ಯಾಸ ಅತ್ಯಗತ್ಯ ಎಂಬ ಸತ್ಯವನ್ನು ಮನಗಂಡರು. ಹೆಣ್ಣುಮಕ್ಕಳ ಶೋಚನೀಯ ಸ್ಥಿತಿಯನ್ನು ಕಂಡು ಹಲವು ಸಾಮಾಜಿಕ ಸುಧಾರಣೆಗಳನ್ನು ತಂದರು. ವರದಕ್ಷಿಣೆ, ಬಾಲ್ಯ ವಿವಾಹವನ್ನು ನಿಷೇಧಿಸಲು ಕರೆ ನೀಡಿದರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ತೆರೆಯಬೇಕೆಂದು ಆಗ್ರಹಿಸಿದರು.
ಸಬರಮತಿ ಆಶ್ರಮದ ಮಧ್ಯಭಾಗದಲ್ಲಿ ಕಪ್ಪು ಗ್ರಾನೈಟ್ ಶಿಲೆಯ ಗಾಂಧೀಜಿಯವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಾಂಧಿಯವರ ಮೂರ್ತಿಯನ್ನು ನೋಡುತ್ತಾ ಕೆಲವು ಪ್ರಶ್ನೆಗಳು ಮನದಲ್ಲಿ ಸುಳಿದವು – ಮೋಹನ್‌ದಾಸ ಕರಮಚಂದ ಗಾಂಧಿ ಮಹಾತ್ಮ ಗಾಂಧಿಯಾಗಿದ್ದು ಹೇಗೆ? ಗಾಂಧಿಯವರು ಗುಜರಾತಿನ ರಾಜಕೋಟ್‌ನ ಪೋರ್‌ಬಂದರ್‌ನಲ್ಲಿ ದಿವಾನರ ಮನೆತನದಲ್ಲಿ ಅಕ್ಟೋಬರ್ 2, 1869 ರಲ್ಲಿ ಜನಿಸಿದರು. ಅತ್ಯಂತ ಧಾರ್ಮಿಕ ಪರಿಸರದಲ್ಲಿ ಬೆಳೆದ ಮೋಹನದಾಸರು ಜೈನ ಧರ್ಮ ಹಾಗೂ ಹಿಂದೂ ಧರ್ಮದ ಮೌಲ್ಯಗಳಾದ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಸ್ತೇಯ, ಅಪರಿಗ್ರಹಗಳನ್ನು ಮೈಗೂಡಿಸಿಕೊಂಡೇ ಬೆಳೆದರು. ‘ಬಾರ್ಟ್ ಲಾ’ ಪದವಿ ಪಡೆಯಲು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಲಂಡನ್‌ಗೆ ತೆರಳಿದರು. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಥೋರೋ, ರಸ್ಕಿನ್, ಟಾಲ್‌ಸ್ಟಾಯ್ ಮೊದಲಾದ ಮಹಾನ್ ಲೇಖಕರ ಕೃತಿಗಳನ್ನು ಓದಿದರು. ಅಲ್ಲಿನ ವಾತಾವರಣ ಗಾಂಧಿಯವರಲ್ಲಿ ಹಲವು ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳನ್ನು ಮೂಡಿಸಿತು. 1891 ರಲ್ಲಿ ಭಾರತಕ್ಕೆ ಹಿಂದಿರುಗಿ, ವಕೀಲವೃತ್ತಿಯನ್ನು ಆರಂಭಿಸಿದರು. ಸತ್ಯ, ನೀತಿಯ ಮಾರ್ಗದಲ್ಲಿ ನಡೆದ ಮೋಹನದಾಸರಿಗೆ ಬಹಳ ಕಾಲ ವಕೀಲವೃತ್ತಿಯಲ್ಲಿ ಮುಂದುವರೆಯಲು ಮನಸ್ಸಾಗಲಿಲ್ಲ. 1893 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಿಂದ ಪರಿಚಿತ ವ್ಯಾಪಾರಿಯೊಬ್ಬರ ಕೇಸನ್ನು ನ್ಯಾಯಾಲಯದಲ್ಲಿ ನಡೆಸಲು ಕರೆ ಬಂದಾಗ ಗಾಂಧಿಯವರು ಮತ್ತೆ ಹೊರದೇಶಕ್ಕೆ ಪಯಣ ಬೆಳಸಿದರು. ಬ್ರಿಟಿಷರ ವಸಾಹತುವಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಮೋಹನದಾಸರಿಗೆ ತಮ್ಮ ಕಂದು ಬಣ್ಣದ ಚರ್ಮದ ಕಾರಣ ಸಾಕಷ್ಟು ಅವಮಾನ ಅನುಭವಿಸಬೇಕಾಗುತ್ತದೆ. ಆ ನೆಲದಲ್ಲಿ ನೆಲಸಿದ್ದ ಭಾರತೀಯರ ಶೋಚನೀಯ ಪರಿಸ್ಥಿತಿಯನ್ನು ಕಂಡು, ಅವರಿಗೆ ಸಾಮಾಜಿಕ ಹಕ್ಕುಗಳನ್ನು ಕೊಡಿಸಲು ಹೋರಾಟ ಆರಂಭಿಸುತ್ತಾರೆ. ಸಾವಿರಾರು ಭಾರತೀಯರನ್ನು ಸಂಘಟಿಸಿ ಸತ್ಯಾಗ್ರಹ ಚಳುವಳಿಗಳನ್ನು ಆರಂಭಿಸುತ್ತಾರೆ. ಭಾರತೀಯರು ಗೌರವ ಘನತೆಯಿಂದ ಬಾಳಲು ಸೂಕ್ತವಾದ ಸಮಾಜವನ್ನು ನಿರ್ಮಿಸಲು ಉಪವಾಸ ಸತ್ಯಾಗ್ರಹ, ಅಸಹಕಾರ ಚಳುವಳಿಗಳನ್ನು ಮಾಡುತ್ತಾರೆ. ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸಲಾರದೆ ಆಫ್ರಿಕನ್ನರೂ ಗಾಂಧಿಯವರ ಅನುಯಾಯಿಗಳಾಗುತ್ತಾರೆ. ತಮ್ಮ ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಹಲವಾರು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ಆರಂಭಿಸಿದ ಗಾಂಧಿಯವರು 1915ರಲ್ಲಿ ಭಾರತಕ್ಕೆ ಹಿಂದಿರುಗುತ್ತಾರೆ. ಮೋಹನದಾಸ ಕರಮಚಂದ ಗಾಂಧಿಯವರ ಅಹಿಂಸಾತ್ಮಕ ಹೋರಾಟವನ್ನು ಗಮನಿಸಿದ ರವೀಂದ್ರ ಟ್ಯಾಗೋರರು ಅವರನ್ನು ಮಹಾತ್ಮ ಗಾಂಧಿ ಎಂದು ಕರೆದರು. ಹೀಗೆ ಸಾಗಿತ್ತು ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮ ಗಾಂಧಿಯಾದ ಹಾದಿ.
ನಾವು ಮಹಾತ್ಮ ಗಾಂಧಿಯವರು ವಾಸಿಸುತ್ತಿದ್ದ ಕುಟೀರದ ಮುಂದೆ ನಿಂತಿದ್ದೆವು, ಸಬರಮತಿ ನದಿಯ ದಡದಲ್ಲಿ ನಿರ್ಮಿಸಲಾದ ಸರಳವಾದ ಮನೆ, ಪ್ರಶಾಂತವಾದ ವಾತಾವರಣದಲ್ಲಿ ನೆಲಸಿದ್ದ ಗಾಂಧಿಯವರ ಮುಂದೆ ಹತ್ತು ಹಲವು ಸವಾಲುಗಳು ಇದ್ದವು. ಅಂದು ಮಹಾತ್ಮರು ನುಡಿದ ಅಮೃತವಾಣಿ ಮನದಲ್ಲಿ ಪ್ರತಿಧ್ವನಿಸಿತು – ‘ನಮ್ಮ ಮನದ ಕಿಡಕಿಗಳು ಸದಾ ತೆರೆದಿರಲಿ, ವಿಶ್ವದ ಮೂಲೆ ಮೂಲೆಯಿಂದಲೂ ಚಿಂತನೆಗಳೂ, ಆಲೋಚನೆಗಳೂ, ವಿಚಾರಗಳೂ ನಮ್ಮೆಡೆಗೆ ಹರಿದು ಬರಲಿ, ಆದರೆ ಆ ಚಿಂತನೆಗಳಲ್ಲಿ ನಾವು ಕೊಚ್ಚಿ ಹೋಗದಿರಲಿ’. ಎಂತಹ ವಿಶಾಲ ಮನಸ್ಸಿನ ಧೀಮಂತ ವ್ಯಕ್ತಿ, ಜಗತ್ತಿನ ಉದಾತ್ತ ಸಿದ್ಧಾಂತಗಳನ್ನು ಅಪ್ಪಿಕೊಳ್ಳುತ್ತಲೇ, ಭಾರತೀಯ ಸಂಸ್ಕೃತಿ, ಧರ್ಮವನ್ನು ತಮ್ಮ ಉಸಿರಾಗಿಸಿಕೊಂಡರು. ತಮ್ಮ ಸೂಟು ಬೂಟುಗಳನ್ನು ಕಳಚಿ, ಸಾದಾ ಉಡುಪು ಧರಿಸಿದರು. ನಂತರದಲ್ಲಿ ತಾವೇ ಸ್ವತಃ ನೇಯ್ದ ಖಾದಿಯ ಪಂಚೆ ಹಾಗೂ ಮೇಲು ವಸ್ತ್ರ ಧರಿಸಿದರು. ಸ್ವಾತಂತ್ರ್ಯ ಹೋರಾಟ ನಡೆಸಲು ಕೌಟುಂಬಿಕ ಚೌಕಟ್ಟನ್ನು ತೊರೆದು ಆಶ್ರಮದಲ್ಲಿ ನೆಲಸುವುದು ಸೂಕ್ತ ಎಂದು ತೀರ್ಮಾನಿಸಿ, ಸಬರಿಮತಿ ನದೀ ತೀರದಲ್ಲಿ ಸತ್ಯಾಗ್ರಹ ಆಶ್ರಮವನ್ನು, ತಾವು ದಕ್ಷಿಣ ಆಫ್ರಿಕಾದಲ್ಲಿ ಗಳಿಸಿದ ಹಣದಿಂದ ನಿರ್ಮಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾದ ಈ ಆಶ್ರಮವು ಸಬರಿಮತಿ ಆಶ್ರಮವೆಂದೇ ಪ್ರಸಿದ್ಧಿಯಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಈ ಆಶ್ರಮಕ್ಕೆ ಬಂದು ಗಾಂಧಿಯವರ ಜೊತೆ ಸ್ವಾತಂತ್ರ್ಯ ಹೋರಾಟದ ರೂಪು ರೇಷೆಗಳನ್ನು ಚರ್ಚಿಸುತ್ತಿದ್ದರು. ಈ ಆಶ್ರಮದ ಪೌರಾಣಿಕ ಹಿನ್ನೆಲೆ ವಿಶೇಷವಾಗಿದೆ – ಒಂದಾನೊಂದು ಕಾಲದಲ್ಲಿ, ಈ ಸ್ಥಳ ದಧೀಚಿ ಮಹರ್ಷಿಯ ಆಶ್ರಮವಾಗಿತ್ತು. ಅಸುರರನ್ನು ಕೊಲ್ಲಲು ದೇವತೆಗಳಿಗೆ ವಜ್ರಾಯುಧದ ಅಗತ್ಯವಿತ್ತು. ಆಗ ಆ ಅಸ್ತ್ರವನ್ನು ತಯಾರಿಸಲು ತನ್ನ ಬೆನ್ನುಮೂಳೆಯನ್ನೇ ನೀಡಿದ ತ್ಯಾಗಮಯಿ ದಧೀಚಿ.
ಹತ್ತಿರದಲ್ಲಿದ್ದ ವಿನೋಬಾ ಕುಟೀರಕ್ಕೆ ಹೊರಟೆವು, ಇದನ್ನು ಮೀರಾಬೆನ್ ಕುಟೀರವೆಂದೂ ಕರೆಯಲಾಗುತ್ತದೆ. ವಿನೋಬಾಭಾವೆಯವರು ಕೆಲಕಾಲ ಇಲ್ಲಿ ತಂಗಿದ್ದು ಗಾಂಧಿಯವರ ಜೊತೆ ಸಾಕಷ್ಟು ಚರ್ಚೆಗಳನ್ನು ಮಾಡಿದ್ದರು. ನಂತರದಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಯ ಮಗಳಾದ ಮ್ಯಾಡಲೀನ್ ಗಾಂಧಿಯವರ ಸಿದ್ಧಾಂತಗಳಿಂದ ಆಕರ್ಷಿತಳಾಗಿ ಗಾಂಧಿಯವರ ಅನುಯಾಯಿಯಾಗುತ್ತಾಳೆ. ಗಾಂಧಿಯವರು ಅವಳಿಗೆ ಮೀರಾಬೆನ್ ಎಂದು ಮರುನಾಮಕರಣ ಮಾಡುತ್ತಾರೆ. ಒಮ್ಮೆ ಗಾಂಧಿಯವರು ವಿನೋಬಾರವರ ಜೊತೆ ಮಾತನಾಡುತ್ತಾ – ಈ ಆಶ್ರಮದ ಅಕ್ಕ ಪಕ್ಕ ಇರುವ ಕಟ್ಟಡಗಳು ಯಾವುವು ಗೊತ್ತೆ? ಒಂದು ಬದಿಯಲ್ಲಿ ಸಾಬರಮತಿ ಬಂಧೀಖಾನೆ ಮತ್ತೊಂದು ಬದಿಯಲ್ಲಿ ದೂದೇಶ್ವರ್ ಚಿತಾಗಾರ. ಈ ಆಶ್ರಮದಲ್ಲಿ ಇರುವವರ ಮುಂದೆ ಇರುವುದು ಎರಡೇ ಎರಡು ಆಯ್ಕೆ, ಒಂದು ಬ್ರಿಟಿಷರ ಕಬ್ಬಿಣದ ಸಲಾಕೆಗಳ ಹಿಂದೆ ಬಂಧಿಯಾಗುವುದು ಅಥವಾ ಮೈತ್ಯದೇವತೆಯ ಸಿಡಿಲಿನ ಆರ್ಭಟಕ್ಕೆ ಬಲಿಯಾಗುವುದು’ ಎಂದು ನಕ್ಕರು. ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಲು ಸಿದ್ಧರಿರಬೇಕು ಹಾಗೆಯೇ ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧರಿರಬೇಕು.
ಗಾಂಧಿಯವರು ‘ಈ ಆಶ್ರಮದ ಆತ್ಮ’ ಎಂದೇ ಕರೆಯುತ್ತಿದ್ದ ಮಗನ್‌ಲಾಲ್ ಗಾಂಧಿಯವರ ನಿವಾಸ ‘ಮಗನ್ ನಿವಾಸ’. ಇವರು ಆಶ್ರಮದ ಆಡಳಿತಾತ್ಮಕ ಕಾರ್ಯಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದರು. ಗಾಂಧಿಯವರು ಸಬರಿಮತಿ ನದೀ ತೀರದಲ್ಲಿದ್ದ 120 ಎಕರೆ ಪ್ರದೇಶದಲ್ಲಿ ಈ ಆಶ್ರಮವನ್ನು ಕಟ್ಟಿದರು. ಈ ಆಶ್ರಮದಲ್ಲಿ ವಾಸಮಾಡ ಬಯಸುವವರು ಕೆಲವು ನಿಬಂಧನೆಗಳನ್ನು ಪಾಲಿಸಬೇಕಾಗಿತ್ತು ಮಾಂಸ, ಮಧ್ಯ, ತಂಬಾಕು ಹಾಗೂ ಭಾಂಗ್ ಸೇವಿಸುವ ಹಾಗಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಸ್ವತಃ ಮಾಡಿಕೊಳ್ಳಬೇಕಾಗಿತ್ತು, ಅಡಿಗೆಗೆ ಬೇಕಾದ ಧಾನ್ಯಗಳನ್ನು ಬೀಸುವುದು, ನೀರು ತರುವುದು, ಆಶ್ರಮವನ್ನು ಸ್ವಚ್ಛ ಮಾಡುವುದು, ಮಲ ವಿಸರ್ಜನೆ ಮಾಡಿದ ಬಕೇಟುಗಳನ್ನು ಮಲಗುಂಡಿಗೆ ಸುರಿಯುವುದು, ಬಟ್ಟೆ ಒಗೆಯುವುದು ಇತ್ಯಾದಿ. ಈ ಆಶ್ರಮದ ಪ್ರಮುಖ ಉದ್ದೇಶಗಳು – ದಲಿತರ ಉದ್ದಾರ, ದಲಿತರ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಲು ಶಾಲೆಗಳು, ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು – ಹತ್ತಿ ಬೆಳೆಯುವುದು, ಹತ್ತಿಯಿಂದ ನೂಲನ್ನು ತೆಗೆಯುವುದು, ಬಟ್ಟೆ ನೇಯುವುದು, ಹಸು ಸಾಕಾಣಿಕೆ, ಸತ್ತ ಹಸುಗಳ ಚರ್ಮದಿಂದ ಚಪ್ಪಲಿ ತಯಾರಿಸುವುದು. ಭಾರತವನ್ನು ದಾಸ್ಯದ ಸಂಕೋಲೆಗಳಿಂದ ಬಿಡಿಸುವುದರ ಜೊತೆ ಜೊತೆಗೇ ಭಾರತವನ್ನು ಸಶಕ್ತ ರಾಷ್ಟ್ರವನ್ನಾಗಿ ಮಾಡುವುದು ಗಾಂಧೀಜಿಯವರ ಗುರಿಯಾಗಿತ್ತು. ಗಾಂಧೀಜಿಯವರ ಅಮೃತವಾಣಿಯೊಂದು ಆಶ್ರಮದಲ್ಲಿ ಪ್ರತಿಧ್ವನಿಸುತ್ತಿತ್ತು – “ಸತ್ಯವೇ ದೇವರು, ಸತ್ಯದ ಮಾರ್ಗ ಎಂದಿಗೂ ಅಹಿಂಸಾತ್ಮಕ ಮಾರ್ಗವೇ”.
ಸಬರಮತಿ ಆಶ್ರಮವು ಸತ್ಯ ಅಹಿಂಸೆಯ ಮಾರ್ಗದಲ್ಲಿ ಹೋರಾಟ ಮಾಡಲು ದಾರಿ ತೋರುವ ಮಾದರಿ ಆಶ್ರಮವಾಗಿದೆ. ಹಲವು ದೇಶಗಳಿಗೆ ಸ್ಪೂರ್ತಿ ನೀಡುತ್ತಾ, ವಿಶ್ವದಲ್ಲಿ ಶಾಂತಿ ಮೂಡಿಸಲು ಕಟಿಬದ್ಧವಾಗಿ ನಿಂತಿದೆ. ಈ ಆಶ್ರಮವನ್ನು 1963 ರಲ್ಲಿ ಚಾರ್ಲ್ಸ್ ಕೊರಿಯರ್ ಎಂಬ ವಾಸ್ತು ಶಿಲ್ಪಿಯು ಮೂಲ ಕುಟೀರಗಳಿಗೆ ಚ್ಯುತಿ ಬಾರದಂತೆ ಪುನರ್ ರಚನೆ ಮಾಡಿದ್ದಾನೆ. ಸರಳವಾದ ಕಟ್ಟಡಗಳು, ಪ್ರಶಾಂತವಾದ ವಾತಾವರಣ ಎಲ್ಲರಲ್ಲೂ ಗಾಂಧಿತತ್ವಗಳನ್ನು ಪಸರಿಸುತ್ತಿವೆ. ಈ ಆಶ್ರಮದ ಹೃದಯ, ‘ಹೃದಯಕುಂಜ್; ಇಲ್ಲಿ ಗಾಂಧಿಯವರು ನೂಲುತ್ತಿದ್ದ ಚರಕ, ಅವರು ಉಪಯೋಗಿಸುತ್ತಿದ್ದ ಬರೆಯುವ ಮೇಜು, ಲೇಖನಿ, ಕನ್ನಡಕ, ಧರಿಸುತ್ತಿದ್ದ ಉಡುಪು, ಚಪ್ಪಲಿ ಎಲ್ಲವನ್ನೂ ಓರಣವಾಗಿ ಜೋಡಿಸಿದ್ದಾರೆ. ಗಾಂಧಿಯವರ ಹಸ್ತಾಕ್ಷರಗಳಲ್ಲಿ ಬರೆದ ಕೆಲವು ಪತ್ರಗಳನ್ನು ಗೋಡೆಗಳ ಮೇಲೆ ತೂಗುಹಾಕಿದ್ದಾರೆ. ಅವರು ಪ್ರಕಟಿಸಿದ ಪುಸ್ತಕಗಳನ್ನು ಕಪಾಟುಗಳಲ್ಲಿ ಇಡಲಾಗಿದೆ. ಅವರು ‘ಹರಿಜನ್, ಯಂಗ್ ಇಂಡಿಯಾ, ನವ್‌ಜೀವನ್’ ಎಂಬ ವಾರ್ತಾಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ಅವರ ಆತ್ಮ ಚರಿತ್ರೆಯ ಹೆಸರು, ‘ಸತ್ಯ ಶೋಧನೆಗೆ ನನ್ನ ಪ್ರಯೋಗಗಳು’. ಸುಮಾರು ಐವತ್ತು ಸಾವಿರ ಪುಟಗಳಿರುವ ಗಾಂಧಿಯವರ ಬರವಣಿಗೆಗಳ ಸಂಗ್ರಹವನ್ನು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಒಮ್ಮೆ ಇಲ್ಲಿ ಕಣ್ಣುಮುಚ್ಚಿ ನಿಂತರೆ ಗಾಂಧಿಯವರು ನೆಲದ ಮೇಲೆ ಕುಳಿತು ಚರಕ ನೂಲುತ್ತಿರುವ ಚಿತ್ರ, ಮತ್ತೊಮ್ಮೆ ಭಜನೆಗಳನ್ನು ಹಾಡುತ್ತಿರುವ ಸಂತನ ಚಿತ್ರ, ಎಲ್ಲರಿಗೂ ಸತ್ಯ ಅಹಿಂಸೆಯ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ದಾರ್ಶನಿಕನ ಚಿತ್ರ, ಸ್ವಾತಂತ್ರ್ಯ ಸಂಗ್ರಾಮದ ಮಂಚೂಣಿಯಲ್ಲಿದ್ದ ನಾಯಕರೊಂದಿಗೆ ಗಂಭೀರವಾಗಿ ಚರ್ಚಿಸುತ್ತಿರುವ ದೃಶ್ಯಗಳು ಕಣ್ಣ ಮುಂದೆ ತೇಲಿಬರುವುವು. 1930 ರಲ್ಲಿ ಸಬರಮತಿ ಆಶ್ರಮದಿಂದ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆಂದು ಹೊರಟ ಗಾಂಧಿಯವರು, ಸ್ವಾತಂತ್ರ್ಯ ಪಡೆಯುವವರೆಗೂ ಇಲ್ಲಿಗೆ ಹಿಂತಿರುಗುವುದಿಲ್ಲ ಎಂದು ಶಪಥ ಮಾಡಿದರು. ಮುಂದೆ ಮಹಾರಾಷ್ಟ್ರದ ವಾರ್ಧಾದಲ್ಲಿ ಆಶ್ರಮವನ್ನು ಸ್ಥಾಪಿಸಿದರು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ದೇಶ ವಿಭಜನೆಯಾಗಿ, ಮಾನಸಿಕ ಆಘಾತಕ್ಕೆ ಬಲಿಯಾದರು. 1948 ಜನವರಿ 30 ರಂದು ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರು.
ಆಶ್ರಮದಿಂದ ಹಿಂದಿರುಗುವಾಗ ಮನಸ್ಸು ಭಾರವಾಗಿತ್ತು, ಹಲವು ವಿಚಾರಗಳು ನನ್ನ ಮನಸ್ಸನ್ನು ಕೊರೆಯುತ್ತಿದ್ದವು. “ನಮ್ಮ ಅಂತರಂಗದಲ್ಲಿದ್ದ ಆಸೆಯ ಕಸ ಗುಡಿಸಲೆಂದು ಬುದ್ಧ ಬಂದ, ಅಜ್ಞಾನದ ಅಂಧಕಾರ ಕಳೆಯಲೆಂದು ಶಂಕರ ಬಂದ, ಅಸ್ಪೃಶ್ಯತೆಯ ಮೈಲಿಗೆಯನ್ನು ತೊಳೆಯಲೆಂದು ಬಸವ ಬಂದ, ಮೋಹದ ರಾಡಿ ಕಳೆಯಲೆಂದು ಮಹಾವೀರ ಬಂದ. ಒಬ್ಬರೇ, ಇಬ್ಬರೇ, ನೂರಾರು ಶರಣರು, ಸಂತರು ಈ ಭುವಿಯಲ್ಲಿ ಅವತರಿಸಿ ಬಂದರು. ಆದರೂ ನಮ್ಮ ಅಂತರಂಗ ಹಸನಾಗಲಿಲ್ಲ” (ಸಿದ್ದೇಶ್ವರ ಸ್ವಾಮಿಗಳು) ಈ ಮಾತುಗಳು ಅಕ್ಷರಶಃ ಸತ್ಯ – ಅಸ್ಪೃಶ್ಯತೆಯ ಮೈಲಿಗೆಯನ್ನು ತೊಳೆಯಲು, ಅಜ್ಞಾನದ ಅಂಧಕಾರ ಕಳೆಯಲು, ಸತ್ಯ ಅಹಿಂಸೆಯ ಮಾರ್ಗ ತೋರಲು ಬಂದ ಬಾಪೂವನ್ನು ನಾವು ಸಹಿಸಲಿಲ್ಲ, ಅವರು ತೋರಿದ ಮಾರ್ಗವನ್ನು ಅನುಸರಿಸಲಿಲ್ಲ. ಬದಲಿಗೆ ನಮ್ಮ ರಾಷ್ಟ್ರಪಿತನನ್ನೇ ಗುಂಡಿಟ್ಟು ಕೊಂದೆವು.
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಮೇಡಂ ಲೇಖನ ಮನ ಕಲಕುವಂತಿದೆ. ಮಹಾತ್ಮಾ ಗಾಂಧಿಯವರನ್ನು ಎದುರಿಗೆ ನೋಡಿ ಅವರ ವಿಚಾರ ಗಳನ್ನು ಆಯಾ ಅರಿತಂತೆ ಆಯಿತು. ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ನನಗೂ ಆದಷ್ಟು ಬೇಗನೆ ಸಬರಮತಿ ಗೆ ಹೋಗುವ ಮನಸಾಗಿದೆ.
ಧನ್ಯವಾದಗಳು.
ಇಂದಿನ ಪೀಳಿಗೆ ಮರೆತಿರುವ ಹಲವಾರು ವಿಷಯಗಳ ಕುರಿತ ಸುದೀರ್ಘ ಲೇಖನ.ಬಹಳ ಖುಷಿ ಅನಿಸಿತು ಓದಿ.ಗಾಂಧೀಜಿಯವರು ಸಾಧಿಸಿದ ಮಹತ್ಕಾರ್ಯಗಳನ್ನು ಮತ್ತೊಮ್ಮೆ ನೆನಪಿಸಿದ ತಮಗೆ ಅಭಿನಂದನೆಗಳು ಮೇಡಂ
ಲೇಖನ ತುಂಬಾ ಅರ್ಥಗರ್ಭಿತವಾಗಿ, ಭಾವನಾತ್ಮಕವಾಗಿ ಮೂಡಿಬಂದಿದೆ. ಲೇಖಕರು ಕಣ್ಣ ಮುಂದೆ ಕಂಡಿದ್ದಲ್ಲದೆ, ಅದರ ಹಿಂದಿರುವ ವಿಚಾರಗಳನ್ನು ಸರಳವಾಗಿ ವಿವರಿಸಿದ್ದಾರೆ. ನಾವು ಈ ಆಶ್ರಮಕ್ಕೆ ಆಕ್ರt 23 ರಲ್ಲಿ ಭೇಟಿ ನೀಡಿದ್ದೆವು. ಆದರೆ ನಮಗೆ ಹೊಳೆಯದ ಎಷ್ಟೋ ವಿಚಾರಗಳು ಲೇಖನದಲ್ಲಿ ಮೂಡಿಬಂದಿವೆ. ಅದಕ್ಕೇ ಅಲ್ಲವೇ ಹೇಳುವುದು ” ರವಿ ಕಾಣದ್ದನ್ನು ಕವಿ ಕಂಡ”ಎಂದು..
ಲೇಖಕರು ಅಭಿನಂದನೆಗಳು. ಅವರ ಹೋಗೋನು ಬಾರಾ ಕೃತಿಯ ಓದು ನಡೆದಿದೆ.
ಮನ ಕಲಕಿದ ಬರೆಹ , ದರ್ಶನ ಮಾಡಿಸಿದ್ದಕ್ಕೆ
ಒಳಗೊಂದು ಬೆಳಕು ಮೂಡಿಸಿದ್ದಕ್ಕೆ ಧನ್ಯವಾದ
ಲೇಖನ ತುಂಬಾ ಚೆನ್ನಾಗಿದೆ, ನಾವು ಸದ್ಯದಲ್ಲಿಯೇ ಸಬರಮತಿ ಆಶ್ರಮ ನೋಡಲು ಹೊರಟಿದ್ದೇವೆ, ನಿಮ್ಮ ಬರಹ ನಮಗೆ ಸ್ಪೂರ್ತಿ ನೀಡಿದೆ.
ನಾನೂ ಸಬರಮತಿ ನೋಡಿ ಬಂದಿದ್ದೆನಾದರೂ ಗಮನಿಸಿದ ಅಂಶಗಳು ಮತ್ತೆ ಮತ್ತೇ ನೆನಪಿಗೆ ಕಣ್ಮುಂದೆ ಬಂದು ನಿಂತಂತೆ ಭಾಸವಾಗುವಂತೆ ಮಾಡಿದ ನಿಮ್ಮ ನಿರೂಪಣೆ ಅಚ್ಚುಕಟ್ಟಾಗಿ ಮೂಡಿದೆ. ನಿಮಗೆ ನನ್ನ ನಮನಗಳು ಮೇಡಂ..
ಚಂದದ ಚಿತ್ರಗಳನ್ನು ಹಾಕಿ ಲೇಖನವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ ಸುರಹೊನ್ನೆಯ ಸಂಪಾದಕರಾದ ಹೇಮಮಾಲಾರವರಿಗೆ ವಂದನೆಗಳು
ಸುರೇಶ್, ಬಸವರಾಜು, ಮಂಜುರಾಜು, ಸುನೀತಾ ಹಾಗೂ ಉಷಾ ತಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ವಂದನೆಗಳು
ಧನ್ಯವಾದಗಳು.
Nice
ಹಲವಾರು ವರ್ಷಗಳ ಹಿಂದೆ ಬಾಪೂಜಿಯವರ ಸರಳವಾದ ಸಬರಮತಿ ಆಶ್ರಮವನ್ನು ಕಂಡಾಗ, ಅದರೊಳಗೆ ಅಡ್ಡಾಡಿದಾಗ ಭಾವೋದ್ವೇಗಕ್ಕೆ ಒಳಗಾದ ನೆನಪು ಇನ್ನೂ ಮಾಸಿಲ್ಲ! ಸೊಗಸಾದ ಲೇಖನ… ಧನ್ಯವಾದಗಳು ಮೇಡಂ.
ಮಹಾತ್ಮ ಗಾಂಧೀಜಿಯವರ ಕುರಿತಾಗಿ ಎಷ್ಟು ಬರೆದರೂ, ಎಷ್ಟು ಓದಿದರೂ ಇನ್ನೂ ಮತ್ತಷ್ಟು ಹೊಸ ವಿಚಾರಗಳು ತೆರೆದುಕೊಳ್ಖುತ್ತಾ ಹೋಗುತ್ತದೆ. ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ಲೇಖನ.