ಭೂಮಿಯ ಮೇಲಿನ ಸ್ವರ್ಗ ಭೂತಾನ್
ಪುಟ – ಒಂದು

Share Button

ಆನಂದದ ಹುಡುಕಾಟದಲ್ಲಿದ್ದೀರಾ? ಶಾಂತಿ, ನೆಮ್ಮದಿ, ಸಂತೃಪ್ತಿಯನ್ನು ಅರಸುತ್ತಿದ್ದೀರಾ? ಬದುಕಿನ ಜಂಜಾಟಗಳನ್ನು ಬದಿಗೊತ್ತಿ ವಿಶ್ರಾಂತಿ ಪಡೆಯಲು ಬಯಸುತ್ತಿದ್ದಿರಾ? ಹಾಗಿದ್ದಲ್ಲಿ ಬನ್ನಿ, ಹಸಿರನ್ನೇ ಉಸಿರಾಗಿಸಿಕೊಂಡಿರುವ ನಾಡಿಗೆ – ಹಿಮಾಲಯದ ಪೂರ್ವದಲ್ಲಿ ನೆಲೆಯಾಗಿರುವ ಭೂತಾನಿಗೆ. ಇಲ್ಲಿ ನಿಸರ್ಗ ಸಂಭ್ರಮದಿಂದ ನಲಿಯುವಳು, ಪಶುಪಕ್ಷಿಗಳು ಉಲ್ಲಾಸದಿಂದ ಬದುಕುವುವು, ಗಿಡ ಮರಗಳು ಉತ್ಸಾಹದಿಂದ ಬಾಗಿ ಬಳುಕುವುವು. ನಾಡಿನ ಸಂಸ್ಕೃತಿ ಪ್ರಕೃತಿಯೊಂದಿಗೆ ಹಾಸುಹೊಕ್ಕಾಗಿ ಬೆರೆತಿದೆ. ಬೌದ್ಧ ಧರ್ಮ ಇಲ್ಲಿನ ನಿವಾಸಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಹಿಂಸೆ ಶಾಂತಿ ಬೋಧಿಸುತ್ತಿದೆ. ಎಲ್ಲಿ ನೋಡಿದರೂ ತಂಗಾಳಿಯಲ್ಲಿ ನರ್ತಿಸುತ್ತಿರುವ ಬೌದ್ಧ ಧರ್ಮದ ಸಂಕೇತಗಳಾದ ರಂಗು ರಂಗಿನ ಪ್ರಾರ್ಥನಾ ಪತಾಕೆಗಳು. ಈ ಪತಾಕೆಗಳು – ‘ಎಲ್ಲೆಡೆ ಹರಡಲಿ ಶಾಂತಿ, ಕರುಣೆ, ಜ್ಞಾನ, ಜೀವನೋತ್ಸಾಹ’ ಎಂಬ ಸಂದೇಶವನ್ನು ಸಾರುತ್ತಿವೆ. ಇವರ ಧ್ಯೇಯ – ‘ಈ ಭೂಮಿಯ ಮೇಲೆ ವಾಸಿಸುವರೆಲ್ಲರೂ ಶಾಂತಿ, ಸಮೃದ್ಧಿ ಹಾಗೂ ಆನಂದದಿಂದ ಬಾಳಲಿ’.

ನಿಸರ್ಗ ಅಂಕುರ್ ಆಯುರ್ವೇದ ಸಂಘ (2023)ದ ಅಡಿಯಲ್ಲಿ, ಆಯುರ್ವೇದ ವೈದ್ಯರಾದ ಡಾ. ಅಶೋಕ್ ವಾಲಿಯವರ ನೇತೃತ್ವದಲ್ಲಿ, ಭೂತಾನಿನಲ್ಲಿ ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆಯ ಸಮ್ಮೇಳನಕ್ಕೆ ನಾನು ಸಹ್ಯಾದ್ರಿ ಕಾಲೇಜಿನ ರಸಾಯನ ಶಾಸ್ತ್ರದ ಪ್ರೊಫೆಸರ್ ಡಾ.ಲತಾ ಜೊತೆಗೆ ಹೊರಟಿದ್ದೆ. ನನ್ನ ಅಕ್ಕ ಗಿರಿಜ, ಧರ್ಮಪ್ಪ ಭಾವನವರೂ ಭೂತಾನ್ ಪ್ರವಾಸಕ್ಕೆ ನನ್ನ ಜೊತೆಗೂಡಿದರು. ನಾನು ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್, ಆದರೆ ಹೊರಟಿದ್ದು ಔಷಧೀಯ ಸಸ್ಯಗಳ ಸಮ್ಮೇಳನಕ್ಕೆ. ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಅಂತೀರಾ? ಪ್ರವಾಸ ಎಂದರೆ ತುದಿಗಾಲಲ್ಲಿ ನಿಲ್ಲುವವಳು ನಾನು, ಹೇಗೋ ಒಂದು ದಾರಿ ಹುಡುಕಿದ್ದೆ. ಯೋಗವನ್ನು ನಿತ್ಯ ಅಭ್ಯಾಸ ಮಾಡುತ್ತಿದ್ದ ನಾನು ಯೋಗ ಮತ್ತು ಆಯುರ್ವೇದ ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಸಮ್ಮೇಳನದ ಅಧ್ಯಕ್ಷರಿಗೆ ಕಳುಹಿಸಿ, ಅವರ ಒಪ್ಪಿಗೆ ಪಡೆದು ಸಮ್ಮೇಳನಕ್ಕೆ ಹೊರಟಿದ್ದೆ.

ಮೇ 25 ರಂದು, ಮುಂಜಾನೆ ಐದು ಗಂಟೆಗೆ ಬೆಂಗಳೂರಿನಿಂದ ಏರ್ ಏಶ್ಯಾದಲ್ಲಿ ನಮ್ಮ ಪ್ರವಾಸ ಆರಂಭ. ಹೊಸದಾಗಿ ಆರಂಭವಾಗಿದ್ದ ಎರಡನೇ ಟರ್ಮಿನಲ್‌ನಿಂದ ನಮ್ಮ ವಿಮಾನ ಹೊರಡಲಿತ್ತು. ನಡುರಾತ್ರಿ ಎರಡು ಗಂಟೆಗೇ ವಿಮಾನ ನಿಲ್ದಾಣದಲ್ಲಿ ಹಾಜರಿರಬೇಕೆಂಬ ಸೂಚನೆ ನೀಡಲಾಗಿತ್ತು. ಕೊಲ್ಲಾಪುರ, ಗೋವಾ, ಪುಣೆಯಿಂದ ಸುಮಾರು ಮೂವತ್ತೊಂದು ಪ್ರತಿನಿಧಿಗಳು ಆಗಮಿಸಿದರು. ನಾವೂ ಅವರ ಜೊತೆಗೂಡಿ ಬೋರ್ಡಿಂಗ್ ಪಾಸ್ ಪಡೆದೆವು. ಎರಡನೇ ಟರ್ಮಿನಲ್ ಅನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ನಿಲ್ದಾಣದೊಳಗಿದ್ದ ಎಲ್ಲ ಕಂಬಗಳನ್ನೂ ಹೊಂಬಣ್ಣದ ಬೊಂಬುಗಳಿಂದ ಸಿಂಗರಿಸಲಾಗಿದ್ದು, ಅವುಗಳಿಗೆ ಅಲಂಕಾರಿಕ ಸಸ್ಯಗಳನ್ನು ತೂಗು ಹಾಕಲಾಗಿತ್ತು. ಸುತ್ತಲಿದ್ದ ಗೋಡೆಗಳ ಮೇಲೆಲ್ಲಾ ಲಂಬವಾಗಿ ಹೂಕುಂಡಗಳನ್ನು ಜೋಡಿಸಿದ್ದರು. ಇನ್ನು ಮೇಲ್ಛಾವಣಿಯಿಂದ ತೂಗು ಬಿದ್ದ ದೀಪಗಳಿಗೂ ಹೂ ಬಳ್ಳಿಗಳಿಂದ ಅಲಂಕರಿಸಿದ್ದರು. ಅಲ್ಲಲ್ಲಿ ಅಲಂಕಾರಿಕ ಸಸ್ಯಗಳ ಪಾತಿಗಳೂ, ಮಧ್ಯೆ ಮಧ್ಯೆ ನೆಟ್ಟಿದ್ದ ಮರಗಿಡಗಳೂ, ಅವುಗಳ ಮಧ್ಯೆ ನಿಲ್ಲಿಸಿದ್ದ ಹುಲಿ, ಸಿಂಹ, ಆನೆಗಳ ಕಲಾಕೃತಿಗಳು ನಮ್ಮನ್ನು ಬನ್ನೇರುಘಟ್ಟ ಆಭಯಾರಣ್ಯಕ್ಕೆ ಕರೆದೊಯ್ದಿದ್ದವು. ಸದಾ ಗಿಜಿ ಗಿಜಿ ಎನ್ನುವ ಬೆಂಗಳೂರಿನ ವಿಮಾನ ನಿಲ್ದಾಣ ಇಂದು ನಮ್ಮ ಮುಂದೆ ಪ್ರಕೃತಿ ನಲಿದಾಡುತ್ತಿದ್ದ ತಾಣವಾಗಿ ನಿಂತಿತ್ತು. ಇದೇನು ವಿಮಾನ ನಿಲ್ದಾಣವೋ ಅಥವಾ ಲಾಲ್‌ಬಾಗ್ ತೋಟವೂ ಎನ್ನಿಸಿದ್ದು ಸುಳ್ಳಲ್ಲ.

ವಿಮಾನವೇರಿ ಕುಳಿತವಳಿಗೆ ಹಾಗೇ ಜೊಂಪು ಹತ್ತಿತ್ತು. ಆಗ ನಾನೊಂದ ಕನಸ ಕಂಡೆ – ಭೂತಾನಿನ ಪಾರಂಪರಿಕ ಉಡುಪು ಧರಿಸಿದ್ದ ಇಬ್ಬರು ನನ್ನ ಮುಂದೆ ನಿಂತಿದ್ದರು. ಗಂಡು ಮಂಡಿಯ ತನಕ ಬರುವ ಒಂದು ಉಡುಗೆ ಧರಿಸಿದ್ದರೆ, ಹೆಣ್ಣು ಒಂದು ಲುಂಗಿ ಹಾಗೂ ಒಂದು ಸ್ಯಾಟಿನ್ ಬ್ಲೌಸ್ ಧರಿಸಿದ್ದಳು. ಇಬ್ಬರ ಮುಖವೂ ಗುಂಡಾಗಿತ್ತು, ಪುಟ್ಟದಾದ ಕಣ್ಣುಗಳು, ಪುಟ್ಟ ಮೂಗು, ರೇಷಿಮೆಯಂತೆ ನುಣುಪಾದ ಚರ್ಮ, ಮುಖದ ಮೇಲಿನ ಸ್ನೇಹಭಾವ ನನ್ನನ್ನು ಆಕರ್ಷಿಸಿತ್ತು. ಇಬ್ಬರೂ ತಮ್ಮ ತಾಯ್ನಾಡಿನ ಕಥೆಯನ್ನು ಹೇಳತೊಡಗಿದರು –“ಅಕ್ಕಾ ಕೇಳವ್ವಾ ನಮ್ಮ ಚೆಲುವಾದ ನಾಡಿನ ಕಥೆಯನ್ನು. ಹಿಮಾಲಯದ ಮಡಿಲಲ್ಲಿರುವ ನಮ್ಮ ಭೂಮಿಯು ಎತ್ತರದಲ್ಲಿರುವುದರಿಂದ (ಭೂ + ಸ್ಥಾನ) ಭೂತಾನ್ ಎಂದು ಖ್ಯಾತಿ ಪಡೆದಿದೆ. ನಾವು ‘ಡ್ರುಕ್ಯಾಲ್’ (Drukyal) ಎಂದು ಕರೆಯುತ್ತಿದ್ದೆವು, ಕಾರಣ ಡ್ರುಕ್ಪಾ ಜನಾಂಗದವರು ನೆಲಸಿದ್ದ ನಾಡಿದು. ಡ್ರುಕ್ಪಾ ಎಂದರೆ ಡ್ರಾಗನ್. ರಭಸವಾಗಿ ನುಗ್ಗುವ ಬಿರುಗಾಳಿ ಡ್ರಾಗನ್‌ನಂತೆ ಗರ್ಜಿಸುವ ಸದ್ದು ಮಾಡುತ್ತಿದ್ದುದರಿಂದ ಡ್ರುಕ್ಯಾಲ್ ಎಂದು ಈ ನಾಡಿಗೆ ನಾಮಕರಣ ಮಾಡಲಾಗಿತ್ತು. ನಮ್ಮ ದೇಶದ ರಾಷ್ಟ್ರೀಯ ಚಿಹ್ನೆ – ಡ್ರಾಗನ್. ಈ ನಾಡಿನಲ್ಲಿ ಹಲವು ಬುಡಕಟ್ಟು ಜನಾಂಗದವರು ವಾಸವಾಗಿದ್ದರು. ಅವರ ಆರಾಧ್ಯ ದೈವ ಪ್ರಕೃತಿ ಮಾತೆ. ಆದರೆ ಇವರೆಲ್ಲ ತಮ್ಮ ತಮ್ಮ ಅಧಿಕಾರವನ್ನು ಚಲಾಯಿಸಲು ಪದೇ ಪದೇ ಯುದ್ಧ ಮಾಡುತ್ತಿದ್ದರು. ಒಳಜಗಳದಿಂದ ಬೇಸತ್ತಿದ್ದ ಎಲ್ಲ ಬುಡಕಟ್ಟು ಜನರನ್ನೂ ಒಟ್ಟುಗೂಡಿಸಿ ಭೂತಾನ್ ರಾಷ್ಟ್ರವನ್ನು ಕಟ್ಟಿದ ಕೀರ್ತಿ, ಸುಮಾರು ಐದು ಶತಮಾನಗಳ ಹಿಂದೆ ಟಿಬೆಟ್ ನಿಂದ ಬಂದ ಶಡ್ರಂಗ್ ನುವಾಂಗ್ ನಾಂಗ್ಯೆಲ್ (Shabdrung Ngawang Nangyal) ಎಂಬ ರಾಜನಿಗೆ ಸಲ್ಲುವುದು. ಅದೇ ಸಮಯದಲ್ಲಿ ಟಿಬೆಟ್ ನಿಂದ ಬಂದ ಶೆಪ್ತೊಂಡಾ ಫಾ (Shepthonda Pha) ಎಂಬ ಲಾಮಾ ಬೌದ್ಧ ಧರ್ಮವನ್ನು ಪ್ರಸಾರ ಮಾಡಿದನು. ಇಂದು ನಾವೆಲ್ಲರೂ ಬುದ್ಧನ ಅನುಯಾಯಿಗಳಾಗಿ ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ” ಎಂದು ಹೇಳುತ್ತಾ ತಲೆ ಬಾಗಿ ವಂದಿಸಿ ಅಲ್ಲಿಂದ ಮಾಯವಾಗಿದ್ದರು.

ಇವರ ಕಥೆಯನ್ನು ಅಲಿಸುತ್ತಾ ಹಾಗೇ ನಿದ್ರೆಗೆ ಜಾರಿದ್ದೆ. ಡಾರ್ಜಿಲಿಂಗ್ ಜಿಲ್ಲೆಯ ಬಾಗ್ದೋಗ್ರಾ ಬಳಿ ಇರುವ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗಲೇ ನನಗೆ ಎಚ್ಚರವಾಗಿದ್ದು. ಗಡಿಬಿಡಿಯಿಂದ ನಮ್ಮ ಲಗೇಜನ್ನು ಹೊತ್ತು ನಮಗಾಗಿ ಕಾದಿರಿಸಿದ್ದ ವಾಹನದಲ್ಲಿ ಕುಳಿತು ರಸ್ತೆಯ ಮಾರ್ಗದಲ್ಲಿ 300 ಕಿ.ಮೀ. ದೂರದಲ್ಲಿದ್ದ ಭೂತಾನಿನ ರಾಜಧಾನಿ ತಿಂಪುಗೆ ಪಯಣಿಸಿದೆವು. ಭೂತಾನಿನಲ್ಲಿ ವಿಮಾನ ನಿಲ್ದಾಣವಿದ್ದರೂ ಪ್ರಯಾಣ ದರ ತುಸು ಹೆಚ್ಚೇ, ಜೊತೆಗೆ ಬೆಂಗಳೂರಿನಿಂದ ನೇರವಾದ ವಿಮಾನ ಸಂಪರ್ಕವಿಲ್ಲ. ಇಮ್ಮಿಗ್ರೇಷನ್ ಕಛೇರಿಯಲ್ಲಿ ಸಾರ್ಕ್ ಒಕ್ಕೂಟದ ರಾಷ್ಟ್ರಗಳಿಗೆ ವೀಸಾದ ಅಗತ್ಯವಿಲ್ಲ, ನಮ್ಮ ‘ಓಟರ್ ಐ.ಡಿ’ ತೋರಿಸಿದರೆ, ಭೂತಾನಿನಲ್ಲಿ ತಿರುಗಾಡಲು ಅನುಮತಿ ನೀಡುತ್ತಾರೆ. ಆದರೆ ಭೂತಾನಿನ ಪೊಲೀಸರು ಮೂರು ನಾಲ್ಕು ಕಡೆ ತಪಾಸಣೆ ಮಾಡುತ್ತಾರೆ. ಪ್ರವಾಸಿಗರು ದಿನವೊಂದಕ್ಕೆ 1,200 ರೂ ಪ್ರವಾಸಿ ಶುಲ್ಕ ತೆರಬೇಕು. ನಾವು ಐದು ದಿನ ಭೂತಾನಿನಲ್ಲಿ ತಂಗಬೇಕಾದ್ದರಿಂದ 6,000 ರೂಗಳನ್ನು ನೀಡಿ ಪರ್ಮಿಟ್ ಪಡೆದೆವು. ಪಾಶ್ಚಿಮಾತ್ಯರಿಗೆ ದಿನವೊಂದಕ್ಕೆ 200 ರಿಂದ 250 ಡಾಲರ‍್ಸ್ ಪ್ರವಾಸಿ ಶುಲ್ಕ ವಿಧಿಸಿರುವರು. ಹಾಗಾಗಿ ಭೂತಾನ್ ಪ್ರವಾಸ ತುಸು ದುಬಾರಿಯೇ. ಇಲ್ಲಿನ ಪ್ರವಾಸೀ ತಾಣಗಳಿಗೆ ಭೇಟಿ ನೀಟಲು ಸ್ಥಳಿಯರ ವಾಹನಗಳನ್ನೇ ಬಳಸುವುದು ಕಡ್ಡಾಯ, ಜೊತೆಗೆ ಸರ್ಕಾರದಿಂದ ಲೈಸೆನ್ಸ್ ಪಡೆದ ಗೈಡ್‌ಗಳನ್ನು ನೇಮಿಸಿಕೊಳ್ಳಬೇಕು. ಪ್ರತಿ ಹಂತದಲ್ಲೂ ಡ್ರೈವರ್ ಹಾಗೂ ಗೈಡ್‌ಗಳ ಜೊತೆಯಿರುವ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸುವರು. ಪರಕೀಯರು ಒಳಗೆ ನುಸುಳದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಾರೆ.

(ಮುಂದುವರಿಯುವುದು)

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

  1. ನೀವು ಪ್ರವಾಸದ ಅನುಭವವನ್ನು ಅಭಿವ್ಯಕ್ತಿ ಸುವ ರೀತಿ ಬಹಳ ಸೊಗಸಾಗಿ ರುತ್ತದೆ ಗಾಯತ್ರಿ ಮೇಡಂ..ಭೂತಾನ್ ಪ್ರವಾಸದ ಪ್ರಾರಂಭದ ಅನುಭವ…ಮುಂದೆ ಏನು ಎಂಬ ಕುತೂಹಲ…

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. Hema Mala says:

    ಎಂದಿನಂತೆ ಚೆಂದದ ಬರವಣಿಗೆ..ಹೊಸ ಪ್ರವಾಸಕಥನಕ್ಕೆ ಸ್ವಾಗತ..

  4. ಶಂಕರಿ ಶರ್ಮ says:

    ನಿಮ್ಮ ಭೂತಾನ್ ಪ್ರವೇಶವು ಅಲ್ಲಿಯ ನಿವಾಸಿಗಳ ಸ್ವಾಗತದೊಂದಿಗೆ ಆಯ್ತಲ್ಲಾ…! (ಕನಸಾದ್ರೂ ತೊದ್ರೆ ಇಲ್ಲ!)ನಾವೂ ಕುತೂಹಲದಿಂದ ಕಾಯುತ್ತಿದ್ದೇವೆ…ಮುಂದಿನ ಪುಟ ತೆರೆಯಲು…

  5. ಭೂತಾನ್ ಪ್ರವಾಸದ ಮೊದಲ ಹೆಜ್ಜೆಯನ್ನು ಪ್ರಕಟಿಸಿದ ಹೇಮಮಾಲ ಮೇಡಂ ವಂದನೆಗಳು
    ಶಂಕರಿ ಶರ್ಮಾ ಮೇಡಮ್ ಅವರ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: