ಗೋಪುರಗಳ ನಾಡಿನಲ್ಲಿ…ಹೆಜ್ಜೆ 17
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ!
ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು ನೆಲದಲ್ಲಿ ಇರಿಸಲಾಗದ ಕಾರಣ, ಆತನ ಎದುರು ಪುಟ್ಟ ಬಾಲಕನ ರೂಪದಲ್ಲಿದ್ದ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ‘’ತಾನು ಸಂಧ್ಯಾವಂದನೆ ಮಾಡಿ ಬರುವಷ್ಟು ಸಮಯ ಜೋಪಾನವಾಗಿ ಕೈಯಲ್ಲಿರಿಸಿಕೊ, ನೆಲದಲ್ಲಿ ಇಡಬೇಡ’’ ಅಂದಿದ್ದ. ಆದರೂ, ಗಣಪತಿಯು ರಾವಣನು ಬರುವ ಮೊದಲು ಉದ್ದೇಶಪೂರ್ವಕವಾಗಿ ಅವಸರಿಸಿ, ಆತ್ಮಲಿಂಗವನ್ನು ಭೂಮಿಯ ಮೇಲಿರಿಸಿದಾಗ, ಅದು ಅಲ್ಲಿಯೇ ಸ್ಥಾಪಿತಗೊಂಡು ‘ಗೋಕರ್ಣ’ ಕ್ಷೇತ್ರವಾಯಿತು ಎಂಬ ಕಥೆಯನ್ನು ಕೇಳಿದ್ದೇವಲ್ಲವೇ?
ಶ್ರೀರಂಗಂ ಕ್ಷೇತ್ರದಲ್ಲಿಯೂ ಇದನ್ನೆ ಹೋಲುವ ಕತೆಯಿದೆ. ಇಲ್ಲಿ ರಾವಣನ ಬದಲು ಅವನ ತಮ್ಮನಾದ ವಿಭೀಷಣನು ಗಣಪತಿಯ ಕಿತಾಪತಿಗೆ ಒಳಗಾದವನು. ವಿಭೀಷಣನು ತನಗೆ ಶ್ರೀರಾಮನು ಕೊಟ್ಟ ಇಕ್ಷ್ವಾಕು ವಂಶದವರು ಪೂಜಿಸುತ್ತಿದ್ದ ‘ಶ್ರೀರಂಗನಾಥನನ್ನು’ ಕೊಟ್ಟನಂತೆ. ಅದನ್ನು ಶ್ರೀಲಂಕೆಗೆ ಒಯ್ಯುವ ಮಾರ್ಗದಲ್ಲಿ, ಸಂಧ್ಯಾವಂದನೆ ಸಮಯವಾಯಿತು, ಆ ಸಮಯಕ್ಕೆ ಬಾಲಕ ಗಣಪತಿ ಬಂದ. ಗೋಕರ್ಣ ಕತೆಯ ಹಾಗೆ ಇಲ್ಲಿಯೂ ಆಯಿತು. ರಂಗನಾಥನು ‘ಶ್ರೀರಂಗಂ’ನಲ್ಲಿ ನೆಲೆಯೂರಿದೆ. ದು:ಖಿತನಾದ ವಿಭೀಷಣನು ದೇವರ ಬಳಿ ನಿವೇದಿಸಿಕೊಂಡಾಗ, ಶ್ರೀರಂಗನು ತಾನು ಇಲ್ಲಿಯೇ ನೆಲೆಯಾಗುವೆನೆಂದೂ, ಆದರೆ ತನ್ನ ದೃಷ್ಟಿಯು ದಕ್ಷಿಣದ ಶ್ರೀಲಂಕಾ ಕಡೆಗೆ ಇರುವುದೆಂದು ತಿಳಿಸಿದನಂತೆ. ಹೀಗೆ ಶ್ರೀರಂಗಂ ದೇವಾಲಯದಲ್ಲಿರುವ ವಿಗ್ರಹದ ದೃಷ್ಟಿ ದಕ್ಷಿಣಾಭಿಮುಖವಾಗಿ ಇದೆ. ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ವಿಭೀಷಣನು ಶ್ರೀರಂಗಂನಲ್ಲಿ ನಡೆಯುವ ರಾತ್ರಿಯ ಪೂಜೆಯಲ್ಲಿ ಪಾಲ್ಗೊಳ್ಳುತ್ತಾನೆಂಬ ನಂಬಿಕೆ ಈಗಲೂ ಇದೆ.
ಇನ್ನು, ಗಣಪತಿಯ ಮೇಲೆ ಕುಪಿತನಾದ ವಿಭೀಷಣನು ಸುಮ್ಮನಿರುತ್ತಾನೆಯೇ ? ತುಂಟ ಬಾಲಕನನ್ನು ಅಟ್ಟಿಸಿಕೊಂಡು ಬಂದ. ಅಲ್ಲಿಂದ ಓಡೋಡಿ ಬಂದ ಗಣಪತಿಯು, ಅಂದಾಜು 5 ಕಿಮೀ ದೂರದಲ್ಲಿರುವ ಬೆಟ್ಟದಲ್ಲಿ ಬಂದು ನೆಲೆಸಿದನಂತೆ. ಈಗ ಅಲ್ಲಿಗೆ ‘ಉಚ್ಚಿ ಪಿಳ್ಳೈಯಾರ್ ‘ ದೇವಾಲಯ ಅಥವಾ ರಾಕ್ ಫೋರ್ಟ್ ಟೆಂಪಲ್ ಅನ್ನುತ್ತಾರೆ.
ಉಚ್ಚಿ ಪಿಳ್ಳೈಯಾರ್ , ರಾಕ್ ಫೋರ್ಟ್ ಗಣಪತಿ ದೇವಾಲಯ
ತಿರುಚಿನಾಪಳ್ಳಿ ಅಥವಾ ತ್ರಿಚ್ಚಿ ಎಂದು ಈಗ ಕರೆಯಲ್ಪಡುವ ಜಾಗದಲ್ಲಿ, ಎತ್ತರವಾದ ಬಂಡೆಯ ಮೇಲೆ ಗಣಪತಿಯ ದೇವಾಲಯವಿದೆ. ಇದನ್ನು 7 ನೇ ಶತಮಾನದಲ್ಲಿ ಕಟ್ಟಲಾಯಿತು. ಮೊದಲು ಪಲ್ಲವ ರಾಜರು ಆಮೇಲೆ ಮಧುರೈಯ ನಾಯ್ಕರು ಕೊನೆಗೆ ವಿಜಯನಗರದ ರಾಜರುಗಳ ಕಾಲದಲ್ಲಿ ದೇವಾಲಯವು ನಿರ್ಮಾಣಗೊಂಡಿತು.ಈ ದೇವಾಲಯವನ್ನು ತಲಪಲು ಅಂದಾಜು 300 ಮೆಟ್ಟಲುಗಳನ್ನು ಏರಬೇಕು. ದೇವಾಲಯದ ಕೆಳಹಂತದಲ್ಲಿ ‘ಮನ್ನಿಕಾ ವಿನಾಯಕರ್ ‘ ಗುಡಿಯಿದೆ. ಬೆಟ್ಟದ ತುದಿಯಲ್ಲಿ ‘ಉಚ್ಚಿ ಪಿಳ್ಳೈಯಾರ್ ಅಂದರೆ ಎತ್ತರದಲ್ಲಿರುವ ವಿನಾಯಕನ ಮಂದಿರವಿದೆ.
ಆಗಲೆ ಸಂಧ್ಯಾಸಮಯವಾಗಿತ್ತು. ಕೆಲವರಿಗೆ ಮಂಡಿನೋವು, ಸೊಂಟನೋವು ಇತ್ಯಾದಿ ಸಮಸ್ಯೆಗಳಿದ್ದುವು. ಬೆಳಗಿನಿಂದಲೇ ಸುತ್ತಾಟ, ಪ್ರಯಾಣವೂ ಸುಸ್ತು ಮಾಡಿಸಿತ್ತು. ಹಾಗಾಗಿ, ಮೆಟ್ಟಲುಗಳನ್ನು ಹತ್ತಿಕೊಂಡು ಮೇಲೆ ಹೋಗಲು ಸಾಧ್ಯವೇ ಎಂಬ ಅಳುಕು ಕಾಡತೊಡಗಿತ್ತು. ‘ಅಷ್ಟೇನು ಕಷ್ಟವಿಲ್ಲ, ನಿಧಾನಕ್ಕೆ ಹತ್ತಿ, ಮೇಲ್ಗಡೆ ಹೋದ ಮೇಲೆ ಕಾಣಿಸುವ ದೃಶ್ಯಾವಳಿಗಳು, ತಂಗಾಳಿ ನಿಮ್ಮ ಸುಸ್ತನ್ನು ಅಡಗಿಸುತ್ತವೆ. ಆರಾಮವಾಗಿ ಹೋಗಬಹುದು, ಅದು ನೋಡಲೇಬೇಕಾದ ಸ್ಠಳ’ ಎಂದು ಟ್ರಾವೆಲ್ಸ್4ಯು ನವರು ಭರವಸೆ ಕೊಟ್ಟರು. ನನಗೆ ಗೊತ್ತಿದ್ದ ಹಾಗೆ ಬಹುತೇಕ ಎಲ್ಲರೂ, ಮೆಟ್ಟಿಲುಗಳನ್ನೇರಿ, ವಿದ್ಯುದ್ದೀಪಗಳ ಬೆಳಕಿನಲ್ಲಿ ಕಂಡ ತಿರುಚಿನಾಪಳ್ಳಿ ನಗರ ಹಾಗೂ ಸುತ್ತಲಿನ ಕಾವೇರಿ ನದಿಯ ದೃಶ್ಯಗಳನ್ನು ಕಣ್ತುಂಬಿಸಿಕೊಂಡೇ ಬಂದರು. ಶ್ರೀಮತಿ ಅಂಬಿಕಾ ಅವರು ಸುಶ್ರಾವ್ಯವಾಗಿ ಭಜನೆ ಹಾಡನ್ನು ಹಾಡಿದೆವು. ನಾವು ದನಿಗೂಡಿಸಿದೆವು.
ರಾಕ್ ಫೋರ್ಟ್ ಗಣಪತಿ ಬೆಟ್ಟದ ಸಮೀಪದಲ್ಲಿ ಕೆಲವು ಪ್ರಸಿದ್ಧ ಹೋಲ್ ಸೇಲ್ ಸೀರೆ ಅಂಗಡಿಗಳಿದ್ದುವು. ನಮ್ಮ ತಂಡದ ಕೆಲವರು ತಮಗಾಗಿ, ಬಂಧುಗಳಿಗಾಗಿ ಸೀರೆ ವ್ಯಾಪಾರ ಮಾಡಿದರು. ಅಲ್ಲಿಂದ, ನಮಗೆ ಉಳಕೊಳ್ಳಲು ವ್ಯವಸ್ಥೆ ಮಾಡಿದ್ದ ‘ಹೋಟೆಲ್ ಮಾಯಾಸ್’ ತ್ರಿಚ್ಚಿ ಅಲ್ಲಿಗೆ ನಡೆದುಕೊಂಡು ಹೋಗಬಹುದೆಂದೂ ಬೇಕಿದ್ದರೆ ರಿಕ್ಷಾ ಮಾಡಿಕೊಳ್ಳಿರೆಂದೂ ತಿಳಿಸಿದ್ದರು. ಎಂಟು ಜನರಿದ್ದ ನಮ್ಮ ತಂಡ ನಿಧಾನವಾಗಿ ನಡೆಯುತ್ತಾ ಹೊರಟೆವು. ಯಾಕೋ ದಾರಿ ಸವೆಯುತ್ತಿಲ್ಲ, ಆಗಲೇ ಕತ್ತಲಾಗಿದೆ, ಬೆಟ್ಟ ಹತ್ತಿ ಇಳಿದು ಸುಸ್ತಾಗಿದೆ ಎಂದು ರಿಕ್ಷಾ ಹತ್ತಿಕೊಂಡೆವು. ರಿಕ್ಷಾ ಕೇವಲ 100 ಅಡಿ ದೂರ ಹೋದಾಗ ನಮ್ಮ ಹೋಟೆಲ್ ನ ಬೋರ್ಡ್ ಕಾಣಿಸಿ ನಮ್ಮನ್ನು ಅಣಕಿಸಿದಂತಾಯಿತು. ರಿಕ್ಷಾ ಹತ್ತಿದ್ದ ತಪ್ಪಿಗೆ ಚಾಲಕನು ಕೇಳಿದಷ್ಟು ಹಣ ಕೊಟ್ಟು ಪೆಚ್ಚುನಗೆ ನಕ್ಕೆವು.
ದೋಸಾಗೋಪುರ
ಅಂದು ಶಾಪಿಂಗ್ ಗೆ ಸಮಯ ಇದ್ದುದರಿಂದ ತಂಡದವರು ರಾತ್ರಿಯ ಊಟಕ್ಕೆ ಒಟ್ಟಾಗಿ ಸೇರಲಿಲ್ಲ. ನಾವು ಉಳಕೊಂಡಿದ್ದ ‘ಹೋಟೇಲ್ ಮಾಯಾಸ್’ ನ ರೆಸ್ಟಾರೆಂಟ್ ನಲ್ಲಿ ಬೇಕಿದ್ದ ಆಹಾರ ಪಡೆದುಕೊಂಡು ರೂಮ್ ಸಂಖ್ಯೆ ತಿಳಿಸಿದರಾಯಿತು ಎಂದಿದ್ದರು. ಯಾತ್ರೆಯುದ್ದಕ್ಕೂ ಹಲವು ಬಾರಿ ಇಡ್ಲಿ-ದೋಸೆ ತಿಂದಿದ್ದೆವಾದುದರಿಂದ ನಮ್ಮ ತಂಡ ಅಂದು ನೂಡಲ್ಸ್, ರೋಟಿ ತರಿಸಿ ತಿಂದೆವು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನನ್ನ ದೃಷ್ಟಿ ಅಚಾನಕ್ ಆಗಿ ಪಕ್ಕದ ಟೇಬಲ್ ಕಡೆಗೆ ಹೋಯಿತು. ಏನಾಶ್ಚರ್ಯ, ಅಲ್ಲಿ ಒಂದು ‘ದೋಸಾಗೋಪುರ’ವಿತ್ತು! ಅಯ್ಯೋ, ಇದು ನನ್ನ ಕಣ್ಣಿಗೆ ಮೊದಲೇ ಬೀಳಬಾರದಿತ್ತೆ , ನಾನೂ ಅದನ್ನೇ ತರಿಸಬಹುದಿತ್ತು, ಇನ್ನು ದೋಸೆ ತಿನ್ನುವಷ್ಟು ಹಸಿವಿಲ್ಲ ಎಂದು ಹಳಹಳಿಸಿಕೊಂಡೆ!
ಇದುವರೆಗೆ ಪೂರ್ಣಚಂದ್ರ, ಅರ್ಧಚಂದ್ರ, ಸಿಲಿಂಡರ್, ಜೋಕರ್ ನ ಟೋಪಿ, ಆಯತ, ಚೌಕ, ತ್ರಿಕೋನ ಮೊದಲಾದ ಜ್ಯಾಮಿತಿಯ ಆಕಾರದ ದೋಸೆಗಳನ್ನು ನೋಡಿದ್ದೆ. ಪುಟ್ಟ ಮಕ್ಕಳನ್ನು ರಂಜಿಸಲು ನಕ್ಷತ್ರ, ಮಿಕಿ ಮೌಸ್, ಚಿಟ್ಟೆ, ಮೊಲ, ಬಾತುಕೋಳಿ ಇತ್ಯಾದಿ ವಿನ್ಯಾಸದಲ್ಲಿ ದೋಸೆ ಸೃಷ್ಟಿಸುವ ಅಮ್ಮಂದಿರನ್ನೂ ನೋಡಿದ್ದೇನೆ. ಕೊರೊನಾ ಸಮಯದಲ್ಲಿ ಮಾಸ್ಕ್ , ಗ್ಲೌಸ್ ಆಕಾರದ ದೋಸೆಗಳನ್ನೂ ಫೇಸ್ ಬುಕ್ ಗೋಡೆಯಲ್ಲಿ ಕಂಡಿದ್ದೇನೆ. ಆದರೆ ‘ ದೇವಸ್ಥಾನದ ವಿಮಾನವುಳ್ಳ ಗೋಪುರ’ದ ಶೈಲಿಯ ದೋಸೆಯನ್ನು ನೋಡಿರಲಿಲ್ಲ, ಇದಕ್ಕಾಗಿ ‘ಗೋಪುರಗಳ ನಾಡಿಗೇ’ ಬರಬೇಕಾಯಿತು!
ಪಕ್ಕದ ಟೇಬಲ್ ನವರು ‘ಗೋಪುರ ದೋಸೆ’ ತಿನ್ನಲು ಆರಂಭಿಸುವ ಮೊದಲು ಫೊಟೊ ಕ್ಲಿಕ್ಕಿಸೋಣ ಎಂದು ಚಂಗನೆ ನೆಗೆದು ಆ ಟೇಬಲ್ ಬಳಿ ಹೋಗಿ ‘ದೋಸಾಗೋಪುರ’ದ ಫೊಟೊ ಕ್ಲಿಕ್ಕಿಸಿದೆ. ನನ್ನ ಆತುರದ ಕುತೂಹಲವನ್ನು ಗಮನಿಸಿದ ಆ ಟೇಬಲ್ ನಲ್ಲಿದ್ದ ಗ್ರಾಹಕರು ”ದಕ್ಷಿಣ ಭಾರತದಲ್ಲಿ ದೋಸೆ ಕಾಣದವರೂ ಇರುತ್ತಾರೆಯೇ….ಇವಳು ಅನ್ಯಗ್ರಹಜೀವಿಯೇ” ಎಂಬ ಅನುಮಾನ, ಆಶ್ಚರ್ಯಭಾವ ಸೂಸುತ್ತಾ ಮುಸಿಮುಸಿ ನಕ್ಕು, ‘ನೀವು ಎಲ್ಲಿಯವರು’ ಎಂದು ತಮಿಳಿನಲ್ಲಿ ಕೇಳಿದರು. ನನಗೆ ತಮಿಳು ಭಾಷೆ ಬಾರದ ಕಾರಣ , ಇಂಗ್ಲಿಷ್ ನಲ್ಲಿ ‘ಹಲವಾರು ಕಡೆ ದೋಸೆ ತಿಂದಿದ್ದರೂ, ಇಷ್ಟು ಚೆಂದದ ದೋಸೆ ಎಲ್ಲೂ ನೋಡಿರಲಿಲ್ಲ, ನಿಮ್ಮೂರು ಬಲು ಚೆಂದ, ನಿಮ್ಮೂರ ಆಹಾರ ಬಲುರುಚಿ, ಆಹಾರದ ಪ್ರೆಸೆಂಟೇಶನ್ ಇನ್ನೂ ಚೆಂದ, ಇಲ್ಲಿ ದೋಸೆಯಲ್ಲಿಯೂ ಗೋಪುರವನ್ನು ಸೃಷ್ಟಿಸಿದ್ದಾರೆ, ಅಡುಗೆಯವರ ಕ್ರಿಯಾಶೀಲತೆಗೆ ಮೆಚ್ಚುಗೆ’ ಎಂದು ಹೊಗಳಿ ನನಗಾದ ಮುಜುಗರಕ್ಕೆ ತೇಪೆ ಹಚ್ಚಿದೆ!
ನಮ್ಮ ದಕ್ಷಿಣ ಭಾರತ ಪ್ರವಾಸ ಬಹುತೇಕ ಕೊನೆಯ ಹಂತಕ್ಕೆ ಬಂದಿತ್ತು. ಒಂದು ವಾರದಲ್ಲಿ ಹಲವಾರು ಕಲಾತ್ಮಕವಾದ, ಎತ್ತರೆತ್ತರದ ಶಿಲಾಗೋಪುರಗಳನ್ನು ನೋಡಿದ್ದರೂ , ಯಾಕೋ ‘ಗೋಪುರ’ ಎಂಬ ಪದ ನನ್ನ ಸ್ಮೃತಿಗೆ ತಟ್ಟಿರಲಿಲ್ಲ. ಆದರೆ ತಟ್ಟೆಯಲ್ಲಿ ‘ಗೋಪುರ ದೋಸೆ’ವನ್ನು ನೋಡಿದ ತಕ್ಷಣ, ನಾನು ಬರೆಯಲಿರುವ ಪ್ರವಾಸಕಥನಕ್ಕೆ ತಕ್ಕುದಾದ ಶೀರ್ಷಿಕೆ ಥಟ್ ಅಂತ ಹೊಳೆಯಿತು! ಯುರೇಕಾ! ನಾನು ಬರೆಯಲಿರುವ ಪ್ರವಾಸಕಥನಕ್ಕೆ ‘ಗೋಪುರಗಳ ನಾಡಿನಲ್ಲಿ’ ಎಂಬ ಶೀರ್ಷಿಕೆ ಕೊಡುವೆ ಅಂತ ಮನಸ್ಸಿನಲ್ಲಿ ನಿರ್ಧರಿಸಿದೆ!
ಅನಂತರ ವಿಶ್ರಾಂತಿ. ಆ ದಿನದ ಪ್ರವಾಸ ಅಲ್ಲಿಗೆ ಕೊನೆಯಾಯಿತು.
ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ : https://www.surahonne.com/?p=39772
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಸೂಪರ್. ದೋಸಾ ಗೋಪುರದ ಕಥೆ ಚೆನ್ನಾಗಿದೆ.
ಪೌರಾಣಿಕ ಕಥೆಯಾದ ಗಣಪತಿಯ ಕಿತಾಪತಿಯಿಂದ ಪ್ರರಂಭವಾದ ಲೇಖನ ಗೋಪುರದ ದೋಸೆಯೊಡನೆ ಮುದದಲ್ಲಿ ವಿಶ್ರಾಂತಿ ಪಡೆಯಿತು. ಚೆನ್ನಾದ ನಿರೂಪಣೆ.
ಪ್ರವಾಸದ ಕಥನ ಎಂದಿನಂತೆ ಓದಿ ಸಿಕೊಂಡು ಹೋಯಿತು.. ಈ ಪ್ರವಾಸ ಕಥನಕ್ಕೆ..ಇಟ್ಟಿರುವ ಶೀರ್ಷಿಕೆಯ ಹಿನ್ನಲೆ…ತಿಳಿದು ನಿಮ್ಮ ಸೃಜನಶೀಲಯ ಬಗ್ಗೆ.. ಹೆಮ್ಮೆ ಎನಿಸಿತು..ಗೆಳತಿ ಹೇಮಾ..
ಬರಹವೊಂದರ ಶೀರ್ಷಿಕೆ ಹೋಟೇಲಿನ ಪ್ಲೇಟಿನಿಂದ ಬಂದುದು ನಿಜಕ್ಕೂ ಅದ್ಭುತ! ನೋಡಿದಾಗಲೇ ಬಾಯಲ್ಲಿ ನೀರೂರಿಸುವ ದೋಸೆನ್ನು ತಿನ್ನಲಾದರೂ ಈ ದೋಸೆಯ ನಾಡಿಗೆ… ಅಲ್ಲಲ್ಲ…ಗೋಪುರಗಳ ನಾಡಿಗೆ ಹೋಗೋಣ ಅಲ್ವಾ??
ಬರಹವನ್ನು ಮೆಚ್ಚಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು