ದೇವರ ಮನೆಗೆ ಹೋಗೋಣ ಬನ್ನಿಹೆಜ್ಜೆ-1
ಹೆಜ್ಜೆ – ಒಂದು
ಅರೆ ಶೀರ್ಷಿಕೆ ನೋಡಿ ಗಾಬರಿಯಾದಿರಾ? ನಾನು ನಿಮ್ಮನ್ನು ಕೈಲಾಸ, ವೈಕುಂಠಕ್ಕೆ ಹೋಗೋಣ ಅಂತ ಕರೀತಾ ಇಲ್ಲಾ ರೀ – ಬದಲಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಗ್ರ್ರಾಮ ‘ದೇವರ ಮನೆಗೆ’. ಈ ಊರಿಗೆ ದೇವರ ಮನೆ ಎಂಬ ಹೆಸರು ಬಂದಿದ್ದಾದರೂ ಹೇಗೆ ಅಂತೀರಾ? ದೇವತೆಗಳು ತಮಗೆ ದಣಿವಾದಾಗ, ಬೇಸರವಾದಾಗ ಈ ಚೆಲುವಾದ ನಿಸರ್ಗದ ಮಡಿಲಲ್ಲಿ ಕುಳಿತು ವಿರಮಿಸುತ್ತಿದ್ದರಂತೆ. ಹೌದು, ಈ ವನಸಿರಿಯ ಮುಂದೆ ನಿಂತರೆ ನಮಗೂ ಬರುವುದು ಇದೇ ಭಾವ. ಪಶ್ಚಿಮ ಘಟ್ಟದ ಸಾಲುಗಳು, ನಿತ್ಯ ಹರಿದ್ವರ್ಣ ಕಾನನಗಳೂ, ಝುಳು ಝುಳು ಹರಿಯುವ ಹಳ್ಳ ಕೊಳ್ಳಗಳು, ಅಲ್ಲಲ್ಲಿ ಭೋರ್ಗರೆಯುತ್ತಾ ಧುಮ್ಮಿಕ್ಕುವ ಜಲಪಾರಗಳು, ಪಕ್ಷಿಗಳ ಕಲರವ ಎಲ್ಲರ ಮನಸ್ಸನ್ನೂ ಸೂರೆಗೈಯ್ಯುವುದು. ವರ್ಷದ 365 ದಿನವೂ ಪ್ರವಾಸಿಗರು ಇಲ್ಲಿ ಬಂದು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವರು.
ಈ ನಿಸರ್ಗ ಸಿರಿಯ ಮಧ್ಯೆಯಿರುವ ಕಾಲಬೈರವೇಶ್ವರ ದೇಗುಲ ಭಕ್ತರನ್ನು ಕೈಬೀಸಿ ಕರೆಯುತ್ತಿರುವುದು. ಸುಮಾರು 1,400 ವರ್ಷಗಳ ಇತಿಹಾಸವುಳ್ಳ ಈ ಪ್ರಾಚೀನ ದೇಗುಲವನ್ನು ಬಲ್ಲಾಳ ರಾಯನ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿ ಕಟ್ಟಿದನೆಂಬ ಐತಿಹ್ಯ ಇದೆ. ಇದಕ್ಕೆ ಸಾಕ್ಷಿಯಾಗಿ ದೇಗುಲದ ಮುಂಭಾಗದ ಮೆಟ್ಟಿಲುಗಳ ಮೇಲೆ ಕೆತ್ತಲಾಗಿರುವ ‘ಶಿಲ್ಪಿ ವೆಂಕಣ್ಣನ ನಮಸ್ಕಾರಗಳು’ ಎಂಬ ನುಡಿಗಳನ್ನು ನಾವು ಕಾಣಬಹುದು. ಈ ದೇಗುಲದ ಸುತ್ತಮುತ್ತಲೂ ಹಚ್ಚ ಹಸಿರು ಹೊದಿಕೆ ಹೊದ್ದು ನಿಂತಿರುವ ಬೆಟ್ಟ ಗುಡ್ಡಗಳು ಹಾಗೂ ಮುಂಭಾಗದಲ್ಲಿ ಒಂದು ಪುಷ್ಕರಿಣಿ ಇದ್ದು, ಈ ದೈವ ಹಲವು ಗ್ರಾಮಸ್ಥರ ಮನೆದೇವರಾಗಿದೆ. ಈ ದೇಗುಲದ ಐತಿಹ್ಯ ಕುತೂಹಲ ಹುಟ್ಟಿಸುವಂತಿದೆ. ಒಮ್ಮೆ ಕೈಲಾಸದಲ್ಲಿ ಶಿವನು ತನ್ನ ವಾಹನವಾದ ನಂದಿಯನ್ನು ಭೂಲೋಕದಲ್ಲಿರುವ ಜನರ ಕಷ್ಟ ಸುಖ ವಿಚಾರಿಸಲು ಕಳುಹಿಸಿದನಂತೆ. ಭೂಲೋಕಕ್ಕೆ ಇಳಿದು ಬಂದ ನಂದಿ ಜನರ ನೋವು ನರಳಾಟವನ್ನು ಕಂಡು ದಿಗ್ಭ್ರಮೆಗೊಂಡು ಕೈಲಾಸಕ್ಕೆ ಹಿಂದಿರುಗುತ್ತಾನೆ. ಶಿವನ ಬಳಿ ಜನರ ಪರಿಸ್ಥಿತಿಯನ್ನು ಹೇಳಿದರೆ, ತನ್ನನ್ನು ಭೂಲೋಕಕ್ಕೆ ಕಳುಹಿಸಿ ಜನರ ಸಂಕಷ್ಟಗಳನ್ನು ಪರಿಹರಿಸು ಎಂದು ಆದೇಶ ನೀಡಬಹುದು, ಆಗ ತಾನು ತನ್ನ ಆರಾಧ್ಯ ದೈವವಾದ ಶಿವನಿಂದ ಅಗಲಬೇಕಾಗುವುದಲ್ಲ ಎಂಬ ಆತಂಕದಿಂದ, ‘ಪ್ರಭೂ, ಭೂಲೋಕದಲ್ಲಿ ಎಲ್ಲರೂ ಸುಖ ಶಾಂತಿಯಿಂದ ಇರುವರು’ ಎಂದು ಸುಳ್ಳಾಡುತ್ತಾನೆ. ಆದರೆ ಮುಕ್ಕಣ್ಣನಿಗೆ ತಿಳಿಯದ ವಿಷಯ ಯಾವುದು? ಅವನು ನಂದಿಯನ್ನು ಶಪಿಸುತ್ತಾನೆ, ‘ಇನ್ನು ಮುಂದೆ ಕೃಷಿಕರು ನಿನ್ನನ್ನು ನೊಗಕ್ಕೆ ಕಟ್ಟಿ ಭೂಮಿಯನ್ನು ಉಳುಮೆ ಮಾಡುವಂತಾಗಲಿ.’ ಅಲ್ಲಿಯ ತನಕ ರೈತರು ಮನುಷ್ಯರನ್ನೇ ನೊಗಕ್ಕೆ ಕಟ್ಟಿ ವ್ಯವಸಾಯ ಮಾಡುತ್ತಿದ್ದರಂತೆ. ಹೀಗೆ ಎತ್ತನ್ನು ನೊಗಕ್ಕೆ ಕಟ್ಟಿ ವ್ಯವಸಾಯ ಮಾಡುವ ಪದ್ಧತಿಯ ಹಿನ್ನೆಲೆ ಜಾನಪದರ ಕಥೆಗಳಲ್ಲಿ ಸುಂದರವಾಗಿ ಮೂಡಿಬಂದಿದೆ. ಈ ಶಾಪದಿಂದ ನೊಂದ ನಂದಿಯು, ಪರಶಿವನೂ ಜನರನ್ನು ಹರಸುತ್ತಾ, ತನ್ನ ಜೊತೆ ಅಲ್ಲಿಯೇ ನೆಸಬೇಕೆಂದು ಕೋರುತ್ತಾನೆ. ಭಕ್ತವತ್ಸಲನಾದ ಶಿವನು ಕಾಲಬೈರವನ ರೂಪದಲ್ಲಿ ದೇವರಮನೆಯಲ್ಲಿ ನೆಲಸುತ್ತಾನೆ.
ಕಾಲಬೈರವನ ದರ್ಶನ ಮಾಡಿ, ಪಂಚಕಜ್ಜಾಯದ ಪ್ರಸಾದವನ್ನು ಸವಿದು, ಪ್ರಕೃತಿಯ ಸೊಬಗನ್ನು ಕಾಣಲು ಹೊರಟೆವು. ಕಣ್ಣಿಗೆ ಕಾಣುವಷ್ಟು ದೂರ ಬೆಟ್ಟಗಳ ಸಾಲು ಸಾಲು, ಕೆಲವೆಡೆ ಹುಲ್ಲುಗಾವಲುಗಳಿದ್ದರೆ, ಇನ್ನೂ ಕೆಲವೆಡೆ ದಟ್ಟವಾದ ಮರಗಿಡಗಳು, ಮತ್ತೆ ಕೆಲವೆಡೆ ಶೋಲೆ ಅರಣ್ಯಗಳು. ಸುಮಾರು ಮುನ್ನೂರು ಅಡಿಗಳಷ್ಟು ಕೆಳಗೆ ಹರಿಯುತ್ತಿರುವ ಹೊಳೆ, ಬಣ್ಣ ಬಣ್ಣದ ರೆಕ್ಕೆಪುಕ್ಕಗಳನ್ನು ಪ್ರದರ್ಶಿಸುತ್ತಾ ಬಿಂಕದಿಂದ ಹಾರಾಡುವ ಹಕ್ಕಿಗಳು, ರಾಜಗಾಂಭೀರ್ಯದಿಂದ ಆಗಸದೆತ್ತರದಲ್ಲಿ ಹಾರಾಡುತ್ತಿದ್ದ ಹದ್ದುಗಳು ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದವು. ಒಂದು ಬೆಟ್ಟವನ್ನು ಹತ್ತಿದೆವು, ಪಕ್ಕದಲ್ಲಿದ್ದ ಮತ್ತೊಂದು ಬೆಟ್ಟ ಕೈಬೀಸಿ ಕರೆಯುತ್ತಿತ್ತು. ಅದನ್ನೂ ಹತ್ತಿದೆವು, ಮುಂದಿದ್ದ ಬೆಟ್ಟ, ‘ನನ್ನ ಬಳಿ ಬಾ, ನಿನಗೆ ಸುಂದರವಾದ ದೃಶ್ಯಗಳನ್ನು ತೋರಿಸುವೆ’ ಎಂದು ಆಹ್ವಾನಿಸುವಂತಿತ್ತು. ಮೊಮ್ಮಕ್ಕಳಾದ ತೇಜು, ಯಶು ಜಿಗಿಯುತ್ತಾ ಸಾಗುತ್ತಿದ್ದರೆ, ಮಗಳು ಅಪರ್ಣ, ಅಳಿಯ ಬಾಲು ವಾವ್! ವಾವ್! ಎಂದು ಉದ್ಗರಿಸುತ್ತಾ ಅಲ್ಲಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸುತ್ತಾ ಬೆಟ್ಟಗಳನ್ನು ಏರುತ್ತಿದ್ದರು. ಎಪ್ಪತ್ತು ದಾಟಿದ್ದ ನಾವು ಸಾವಧಾನವಾಗಿ ಕೋಲೂರುತ್ತಾ ಸಾಗಿದೆವು. ಬೆಟ್ಟ ಏರುವುದು ಸುಲಭ ಆದರೆ ಇಳಿಯುವಾಗ ನುಚ್ಚುಗಲ್ಲುಗಳ ಮೇಲೆ ಕಾಲಿಟ್ಟು ಜಾರಿ ಬಿದ್ದು ಸೊಂಟ ಮುರಿದುಕೊಂಡರೆ ಏನು ಗತಿ ಎಂಬ ಆತಂಕವೂ ಕಾಡುತ್ತಿತ್ತು. ಆದರೆ ಚಿಂತೆಯಿಲ್ಲ ಬಿಡಿ, ಎಲ್ಲಿಂದ ನಿಂತು ನೋಡಿದರೂ ಪ್ರಕೃತಿಯು ತನ್ನ ಚೆಲುವನ್ನು ವಿಭಿನ್ನ ಕೋನಗಳಲ್ಲಿ ಉಣಬಡಿಸುತ್ತಿದ್ದಳು. ಆಗಾಗ ಪ್ರಕೃತಿ ಮಾತೆ ಈ ಗಿರಿ ಶಿಖರಗಳಿಗೆ ಪ್ರವಾಸಿಗರ ದೃಷ್ಟಿ ತಾಗದಿರಲೆಂದು ಮಂಜಿನ ಮುಸುಕು ಹಾಸುವಳು, ಕೆಲವು ಬಾರಿ ಸೂರ್ಯನ ಪ್ರಖರ ಬಿಸಿಲಿನ ಕಿರಣಗಳು ದಟ್ಟವಾದ ಹೊಗೆಯಂತೆ ಕವಿದು, ಎಲ್ಲವೂ ಮಸುಕು ಮಸುಕಾಗುವುದೂ ಉಂಟು. ಬೆಟ್ಟದ ನೆತ್ತಿಯ ಮೇಲೆ ಕುಳಿತು, ಎಲ್ಲ ದೃಶ್ಯಗಳನ್ನು ನೋಡುತ್ತಾ ಮೌನಕ್ಕೆ ಜಾರಿದೆ. ನಾನು ಕಂಡ ನಿಸರ್ಗದ ಚೆಲುವೆಲ್ಲಾ ನನ್ನೊಳಗೆ ಇಳಿದಂತೆ ಭಾಸವಾಯಿತು, ಆ ದಿವ್ಯ ಮೌನದಲ್ಲಿ ಕಂಡ ಬೆಳಕಿನ ಕಿರಣವೊಂದು ನನ್ನ ಹೃದಯದಲ್ಲಿ ಮಿಂಚಿ ಮರೆಯಾದಂತೆನ್ನಿಸಿತ್ತು. ಮಕ್ಕಳು, ಮೊಮ್ಮಕ್ಕಳು ಹಿಂತಿರುಗಿ ಬಂದದ್ದು ಗೊತ್ತಾಗಲೇ ಇಲ್ಲ, ಯಜಮಾನರು ಎರಡೆರೆಡು ಬಾರಿ ಕರೆದ ಮೇಲೆ ಮೆಲ್ಲನೆ ಮೇಲೆದ್ದು ಅವರ ಜೊತೆ ಹೆಜ್ಜೆ ಹಾಕಿದೆ. ಮಗಳು ಹೇಳುತ್ತಿದ್ದಳು, ‘ಈ ವರ್ಷ ಮಳೆ ಇಲ್ಲ, ಬೆಳೆ ಇಲ್ಲ, ರೈತರು ಗೋಳಾಡುತ್ತಿದ್ದಾರೆ, ಅಂತೆಲ್ಲಾ ಮಾಧ್ಯಮಗಳಲ್ಲಿ ಬರುತ್ತಿದೆ, ಆದರಿಲ್ಲಿ ಎಲ್ಲಿ ನೋಡಿದರೂ ದಟ್ಟವಾದ ಹಸಿರು, ಹರಿಯುತ್ತಿರುವ ಹಳ್ಳ ಕೊಳ್ಳಗಳು, ಎಲ್ಲದೆಯೊ ನೀರಿನ ಸೆಲೆ, ನೀಲಾಕಾಶದಡಿ ಹಸಿರುಟ್ಟು ನಲಿಯುತಿಹಳು ವನದೇವತೆ.’ ವೈದ್ಯಳಾಗಿದ್ದ ಮಗಳು ಕವಿಯಂತೆ ಮಾತಾಡುತ್ತಿದ್ದುದನ್ನು ನೋಡಿ ಚೆಲುವಾದ ನಿಸರ್ಗ ಎಂತಹವರನ್ನೂ ಮರುಳು ಮಾಡುವುದು ಸುಳ್ಳಲ್ಲ ಎಂದೆನಿಸಿತ್ತು.
ಸಮುದ್ರ ಮಟ್ಟದಿಂದ ಎರಡು ಸಾವಿರ ಅಡಿ ಎತ್ತರವಿರುವ ಈ ಗಿರಿಶಿಖರಗಳಲ್ಲಿ ಚಾರಣ ಮಾಡುವ ಪ್ರವಾಸಿಗರ ಉತ್ಸಾಹಕ್ಕೆ ಕೊನೆ ಮೊದಲಿಲ್ಲ. ಹನ್ನೆರೆಡು ವರ್ಷಕ್ಕೊಮ್ಮೆ ನೀಲ ಕುರಂಜಿ ಪುಷ್ಪಗಳು ಅರಳಿದಾಗ ಈ ಬೆಟ್ಟ ಗುಡ್ಡಗಳು ಅಪ್ಸರೆಯಂತೆ ಕಂಗೊಳಿಸುವುವು. ಈ ವನಸಿರಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ, ಶ್ರೀಗಂಧದ ಪರಿಮಳವನ್ನು ಹೀರುತ್ತಾ, ಹಕ್ಕಿಗಳ ಇನಿದನಿಯನ್ನು ಆಲಿಸುತ್ತಾ ಮುನ್ನೆಡೆದೆವು. ಆಹಾ, ಇದೇ ದೇವರ ಮನೆ, ಆ ದೇವಾನುದೇವತೆಗಳು ಇಂತಹ ರಮಣೀಯವಾದ ತಾಣವನ್ನು ಬಿಟ್ಟು ಇನ್ನೆಲ್ಲಿ ಹೋಗಲು ಸಾಧ್ಯ?
(ಮುಂದುವರಿಯುವುದು)
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ದೇವರ ಮನೆ ಹೆಸರೇ ಆಕರ್ಷಕ ಅಷ್ಟೇ ಆಕರ್ಷಕವಾದ ಪ್ರವಾಸ ಕಥನ…ಮನಸ್ಸಿಗೆ ಮುದತಂದಿತು… ಚಿತ್ರ ಗಳು ಚೆನ್ನಾಗಿವೆ..ಮೇಡಂ..
ಐತಿಹ್ಯದ ಜೊತೆಗೆ ರಮಣೀಯವಾದ ಸ್ಥಳದ ವರ್ಣನೆ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಸಹೋದರಿಯರಾದ ಕೃಷ್ಣಪ್ರಭ ಹಾಗೂ ನಾಗರತ್ನ ಇವರಿಗೆ
ಲೇಖನವನ್ನು ಪ್ರಕಟಿಸಿದ ಹೇಮಮಾಲಾ ಮೇಡಂ ಗೆ ನನ್ನ ನಮನಗಳು
ತುಂಬಾ ಚೆನ್ನಾಗಿದೆ ಗಾಯತ್ರಿ.
Very nice madam
ಸೊಗಸಾಗಿದೆ ಲೇಖನ. ಪ್ರಕೃತಿಯಷ್ಟೇ ಸುಂದರ.
Absolutely ,the description was execelent
ಬಹಳ ಸೊಗಸಾದ ಪ್ರವಾಸ ಕಥನ…ಪ್ರಕೃತಿ ವರ್ಣನೆ ಪೊಗದಸ್ತಾಗಿದೆ!
ಸಹೃದಯ ಓದುಗರಿಗೆ ನನ್ನ ಹೃದಯಪೂರ್ವಕ ನಮನಗಳು
ಚಂದದ ದೇವರ ಮನೆಯ ಸುಂದರ ವರ್ಣನೆ, ನಿಸರ್ಗದ ವರ್ಣನೆ ಮನವನ್ನೂ ಹಸುರಾಗಿಸಿತು.