ಜಮ್ಮು ಕಾಶ್ಮೀರ : ಹೆಜ್ಜೆ 3
ಗುಲ್‌ಮಾರ್ಗ್‌ನಿಂದ ನಾವು ನೇರವಾಗಿ ಹತ್ತು ಕಿ.ಮೀ. ದೂರದಲ್ಲಿರುವ ಬೂಟಾಪತ್ರಿಯನ್ನು ನೋಡಲು ಹೊರಟೆವು. ಇದು ಭಾರತದ ಅಂಚಿನಲ್ಲಿರುವ ಕೊನೆಯ ಗ್ರಾಮ, ಇದರಾಚೆ ಇರುವುದು ಪಾಕಿಸ್ತಾನ. ಹೆಚ್ಚಿನ ಔಷಧೀಯ ಸಸ್ಯಗಳು ಇಲ್ಲಿ ದೊರೆಯುತ್ತವೆಯಾದ್ದರಿಂದ ಈ ಸ್ಥಳವನ್ನು ಬೂಟಾಪತ್ರಿಯೆಂದು ಕರೆಯಲಾಗುವುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್ ಮುಂತಾದ ಯಾವುದೇ ಕ್ರೀಡೆಗಳಿಲ್ಲ, ಇಲ್ಲಿರುವುದು – ಹಚ್ಚಹಸಿರುಟ್ಟ ಬೆಟ್ಟಗುಡ್ಡಗಳು, ನಳನಳಿಸುವ ಬಣ್ಣಬಣ್ಣದ ಹೂಗಳು, ದೇವದಾರು ವೃಕ್ಷಗಳಿರುವ ದಟ್ಟವಾದ ಅರಣ್ಯಗಳು, ವಿಶಾಲವಾದ ಹುಲ್ಲುಗಾವಲು, ಎಲ್ಲೆಲ್ಲೂ ಝುಳುಝುಳು ಹರಿಯುವ ಹಳ್ಳಕೊಳ್ಳಗಳು. ಇಲ್ಲಿನ ಶಾಂತವಾದ ವಾತಾವರಣ, ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳು ಪ್ರವಾಸಿಗರನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುವುವು.
ಈ ಪ್ರದೇಶವು ಭಾರತ ಹಾಗೂ ಪಾಕ್ ನಡುವಿನ ಗಡಿ ನಿಯಂತ್ರಣಾ ರೇಖೆಯಿಂದ ಕೇವಲ ಐದು ಕಿ.ಮೀ. ದೂರದಲ್ಲಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. 1990 ರಿಂದ 2022 ರವರೆಗೆ ಸುಮಾರು 32 ವರ್ಷಗಳ ಕಾಲ ಇಲ್ಲಿ ಯಾರೂ ಹೆಜ್ಜೆಯಿಡುವಂತಿರಲಿಲ್ಲ. 2022 ಮೇ ತಿಂಗಳಿನಿಂದ ಪ್ರವಾಸಿಗರಿಗೆ ಬೂಟಾಪತ್ರಿಯನ್ನು ನೋಡಲು ಪರವಾನಗಿ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡಲು ಪ್ರವಾಸಿಗರು ಚೆಕ್‌ಪೋಸ್ಟ್‌ನಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಅನುಮತಿ ಪಡೆಯಬೇಕು. ಮುಂಜಾನೆ ಹತ್ತು ಗಂಟೆಯಿಂದ ಮಧ್ಯಾನ್ಹ ಮೂರು ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುವುದು, ಸಂಜೆ ಐದು ಗಂಟೆಯವರೆಗೆ ಮಾತ್ರ ಪ್ರವಾಸಿಗರು ಅಲ್ಲಿ ಸುತ್ತಾಡಲು ಅವಕಾಶ ನೀಡುವರು. ಈ ಪ್ರದೇಶವು ನಾಗಿನ್ ಕಣಿವೆಯಲ್ಲಿದೆ, ಬಹುಶಃ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಈ ಕಣಿವೆಗೆ ನಾಗಿನ್ ಕಣಿವೆಯೆಂಬ ಹೆಸರು ಬಂದಿರಬಹುದಲ್ಲವೇ? ನಾವು ಸಾಗುವ ಹಾದಿಯುದ್ದಕ್ಕೂ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಕೋನಿಫೆರಸ್ ಜಾತಿಯ ಮರಗಳು, ಪರಿಮಳ ಬೀರುತ್ತಿದ್ದ ಬಿಳಿ, ಹಳದಿ, ಗುಲಾಬಿ, ನೀಲ ವರ್ಣದ ಪುಷ್ಪಗಳು ಹಾಗೂ ಎಲ್ಲೆಡೆ ಹರಿಯುವ ಸ್ಫಟಿಕದಷ್ಟೇ ಶುಭ್ರವಾದ ತೊರೆಗಳು ನಮ್ಮನ್ನು ಆಕರ್ಷಿಸಿದ್ದವು. ಅಲ್ಲಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸುತ್ತಿದ್ದೆವು. ನಾವು ಸೆಲ್ಫೀ ತೆಗೆದುಕೊಳ್ಳುತ್ತಿರುವಾಗ, ‘ಚಾಯ್ ಕುಡಿಯಿರಿ ಮಾಜೀ’ ಎಂಬ ಧ್ವನಿ ಕೇಳಿಬಂತು. ನಾವು ಹಿಂತಿರುಗಿ ನೋಡಿದಾಗ ಕಂಡದ್ದು, ಅಲ್ಲಿದ್ದ ಮೈದಾನದಲ್ಲಿ ಒಂದು ಪುಟ್ಟ ಟೆಂಟ್ ಹಾಕಿಕೊಂಡು ಚಾಯ್ ದುಕಾನ್ ನಡೆಸುತ್ತಿದ್ದ ವಯಸ್ಸಾಗಿದ್ದ ವ್ಯಕ್ತಿಯನ್ನು. ಅವನಿಗೆ ನಾಲ್ವರು ಹೆಣ್ಣು ಮಕ್ಕಳೆಂದೂ, ಅವರಿಗೆ ನಿಕಾ ಮಾಡಲು ಹಣ ಹೊಂದಿಸಬೇಕಾಗಿರುವುದರಿಂದ ತಾನು ಅಲ್ಲಿ ಚಾಯ್ ಅಂಗಡಿ ನಡೆಸುತ್ತಿದ್ದುದ್ದಾಗಿ ಹೇಳಿದಾಗ, ನಾವು ಚಹಾ ಕುಡಿಯಲೇ ಬೇಕಾಯಿತು. ಅವನು ಮಾಡಿದ ಚಹಾ ಕುಡಿದ ಮೇಲೆ ಅದರ ಅದ್ಭುತವಾದ ಪರಿಮಳ, ಬಣ್ಣ, ರುಚಿಗೆ ಮಾರುಹೋಗಿ ಅವನಿಗೆ ದುಪ್ಪಟ್ಟು ಹಣ ನೀಡಿದೆವು. ಅಂತಹ ಸ್ಥಳದಲ್ಲಿ ಚಹಾ ಮಾಡಲು ಅಷ್ಟೊಂದು ವಸ್ತುಗಳನ್ನು ಹೊತ್ತು ತಂದು ಅಂಗಡಿ ನಡೆಸುತ್ತಿದ್ದವನನ್ನು ಕಂಡು ಭೇಷ್ ಎನ್ನಲೇಬೇಕಲ್ಲವೆ?
ಈ ಹಾದಿಯಲ್ಲಿ ಸದಾ ಮಿಲಿಟರಿ ವಾಹನಗಳು ಗಸ್ತು ತಿರುಗುತ್ತಿದ್ದವು. ನಾವು ಬೂಟಾಪತ್ರಿಯನ್ನು ತಲುಪಿದಾಗ ಮಧ್ಯಾನ್ಹ ಎರಡು ಗಂಟೆಯಾಗಿತ್ತು. ನಾವು ಕಾರಿನಿಂದ ಇಳಿಯುತ್ತಿದ್ದ ಹಾಗೆಯೇ ಕುದುರೆಯ ಮಾಲೀಕರು ನಮ್ಮನ್ನು ಸುತ್ತುವರೆದರು. ಇವರೆಲ್ಲಾ ಅಲೆಮಾರಿಗಳು, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ಇಲ್ಲಿ ಠಿಕಾಣಿ, ಚಳಿಗಾಲದ ಆರು ತಿಂಗಳು ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಗೈಡ್‌ಗಳಾಗಿ, ಊಟ, ಉಪಹಾರ, ಚಹಾ ಸರಬರಾಜು ಮಾಡುತ್ತಾ, ಕುದುರೆ ಸವಾರಿ ಮಾಡಿಸುತ್ತಾ ತಮ್ಮ ಜೀವನ ನಿರ್ವಹಣೆಗೆ ಆದಾಯ ಗಳಿಸುತ್ತಾರೆ. ನಾವೂ ಕುದುರೆ ಏರಿ ಬೂಟಾಪತ್ರಿಯ ಬೆಟ್ಟ ಗುಡ್ಡಗಳನ್ನೇರಿ ಹೊರಟೆವು. ಬೆಟ್ಟದ ನೆತ್ತಿಯ ಮೇಲೊಂದು ಪುಟ್ಟ ಶಿವನ ದೇಗುಲವಿದ್ದು, ಶಿವ ಎಲ್ಲರನ್ನೂ ಕಾಯುತ್ತಿರುವಂತೆ ತೋರುತ್ತಿತ್ತು. ಸುತ್ತಮುತ್ತಲೂ ಈ ಅಲೆಮಾರಿ ಜನರು ವಾಸಿಸುತ್ತಿದ್ದ ಶೆಡ್‌ಗಳು ಇದ್ದವು. ಈ ಮನೆಗಳನ್ನು ಮರದ ಹಲಗೆ ಹಾಗೂ ಮಣ್ಣಿನಿಂದ ನಿರ್ಮಿಸಿದ್ದರು, ಅಲ್ಲಿನ ಮೈದಾನಗಳಲ್ಲಿ ಅರಳಿದ್ದ ಬಣ್ಣ ಬಣ್ಣದ ಹೂಗಳ ಜೊತೆ ಸ್ಪರ್ಧೆಗಿಳಿದಂತೆ, ಮನೆಗಳ ಗೋಡೆಗಳಿಗೆ ಬಳಿದ ಢಾಳಾದ ರಂಗು ರಂಗಿನ ಪಟ್ಟೆಗಳು ಎದ್ದು ಕಾಣುತ್ತಿದ್ದವು. ಆ ಹುಲ್ಲುಗಾವಲಿನ ಮಧ್ಯೆ ಮುಗಿಲೆತ್ತರಕ್ಕೆ ನೀರಿನ ಕಾರಂಜಿಯೊಂದು ಚಿಮ್ಮುತ್ತಿತ್ತು. ಎಲ್ಲಿ ನೋಡಿದರೂ ಹಸಿರು, ಝರಿಗಳು ಹರಿಯುವ ಸದ್ದು, ಪಕ್ಷಿಗಳ ಕಲರವ ಕೇಳುತ್ತಿತ್ತು. ನಾವು ಮೌನವಾಗಿ ನಿಂತು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದೆವು. ಹಳ್ಳದ ಮಧ್ಯೆಯಿದ್ದ ಬಂಡೆಯ ಮೇಲೆ ಕುಳಿತು ತಣ್ಣನೆಯ ನೀರಿನಲ್ಲಿ ಕಾಲು ಅಲ್ಲಾಡಿಸುತ್ತಾ ಸಂಭ್ರಮಿಸುತ್ತಿದ್ದೆವು. ಚಳಿಗಾಲದಲ್ಲಿ ಈ ಹಳ್ಳ ಸಂಪೂರ್ಣವಾಗಿ ಹೆಪ್ಪುಗಟ್ಟುವುದಂತೆ. ಆ ಹಳ್ಳದ ಬದಿಯಲ್ಲಿ ಸುಮಾರು ಎಂಟು ನೂರರಿಂದ ಒಂದು ಸಾವಿರ ಕುರಿಗಳು ಮೇಯುತ್ತಿದ್ದವು. ಆಗ ಅಲ್ಲಿಗೆ ಬಂದ ಸ್ಥಳೀಯನೊಬ್ಬನು ಅಲ್ಲಿದ್ದ ಹಳದಿ ವರ್ಣದ ಪುಷ್ಪವೊಂದನ್ನು ಕಿತ್ತು, ಈ ಗಿಡದ ವಿಶೇಷ ನೋಡಿ ಎಂದನು. ಆ ಸಸ್ಯದಿಂದ ಬಿಳಿಯ ಹಾಲಿನಂತಹ ದ್ರವ ಒಸರುತ್ತಿತ್ತು, ಈ ಹೂವಿಗೆ ‘ದೂದ್‌ವಾಲಾ ಫೂಲ್’ ಎಂದು ಹೆಸರಿಸಿದ್ದರು.
ಇದ್ದಕ್ಕಿದ್ದಂತೆ ಇಬ್ಬರು ಸಶಸ್ತ್ರ ಸೈನಿಕರು ನಮ್ಮೆಡೆಗೆ ಓಡಿ ಬಂದರು, ನಾವು ಗಾಬರಿಯಿಂದ ಅವರನ್ನು ನೋಡಿದೆವು, ಅವರು ನಮ್ಮ ಜೊತೆ ನಿಂತಿದ್ದ ಪ್ರವಾಸಿಗರೊಬ್ಬರ ಮೊಬೈಲು ಕಸಿದು, ಅವರು ತೆಗೆದಿದ್ದ ಫೋಟೋಗಳನ್ನು ಡಿಲಿಟ್ ಮಾಡಿದರು. ಕಾರಣ ಸ್ಫಷ್ಠ, ಮಿಲಿಟರಿ ವಸತಿಗಳ ಫೋಟೋ ತೆಗೆಯುವಂತಿಲ್ಲ, ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದರಿಂದ, ಛಾಯಾಗ್ರಹಣ ನಿಷೇಧಿಸಲಾಗಿತ್ತು. ಈ ಮಾಹಿತಿಯನ್ನು ನಮ್ಮ ಗೈಡ್ ಮೊದಲೇ ತಿಳಿಸಿದ್ದರೂ ಕೆಲವು ತಲೆಹರಟೆ ಹುಡುಗರು ಮೊಬೈಲಿನಲ್ಲಿ ಫೋಟೋ ತೆಗೆದಿದ್ದರು. ನಾವು ಕನ್ನಡ ಮಾತಾಡುತ್ತಿದ್ದುದನ್ನು ಕೇಳಿದ ಸೈನಿಕರೊಬ್ಬರು ನಮ್ಮನ್ನು ಕನ್ನಡದಲ್ಲಿಯೇ ಮಾತನಾಡಿಸಿದರು. ಅವರು ಹುಬ್ಬಳ್ಳಿಯವರಂತೆ, ನಾವು ಸಂಭ್ರಮದಿಂದ ಅವರೊಂದಿಗೆ ಫೋಟೋ ತೆಗೆಸಿಕೊಂಡೆವು. ತಾಯ್ನಾಡನ್ನು ರಕ್ಷಿಸಲು ಹಗಲೂ ರಾತ್ರಿ, ಮಳೆ, ಚಳಿ, ಹಿಮಪಾತವನ್ನು ಲೆಕ್ಕಿಸದೆ, ಆ ದುರ್ಗಮ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದ ವೀರ ಯೋಧ, ನಮ್ಮ ಪಾಲಿಗೆ ಒಬ್ಬ ಮಹಾನ್ ವ್ಯಕ್ತಿ ಆಗಿದ್ದರು. ನಮ್ಮ ಬಳಿ ಇದ್ದ ಬೆಳ್ಳುಳ್ಳಿ ಕಾರವನ್ನು ಅವರಿಗೆ ನೀಡಿದಾಗ, ಮೊದಲು ಸಂಕೋಚದಿಂದ ಬೇಡ ಅಂದವರು, ಬಳಿಕ ಇಡೀ ಪ್ಯಾಕೆಟ್ ತೆಗೆದುಕೊಂಡು ಹೋದರು. ನಮಗೆ ಖುಷಿಯೋ ಖುಷಿ.
ನಾವು ಅಲ್ಲಿಂದ ಮುಂದೆ ಸಾಗಿದಾಗ ಕಂಡದ್ದು ಬಯಲಿನಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬರು. ಪಕ್ಕದಲ್ಲಿದ್ದ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದಿತ್ತು, ಮೇಡಂ, ಮಕ್ಕಳನ್ನು ಶಾಲಾ ಆವರಣದಲ್ಲಿ ಕುಳ್ಳಿರಿಸಿ, ಪಾಠ ಹೇಳಿಕೊಡುತ್ತಿದ್ದರು. ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿದ್ದ ಮೂವತ್ತರಿಂದ ಮೂವತ್ತೈದು ಮಕ್ಕಳಿಗೆ ಒಬ್ಬ ಮೇಡಂ ಮಾತ್ರ, ಜೊತೆಗೆ ಈ ಮಕ್ಕಳಿಗೆ ಇಲ್ಲಿ ಆರು ತಿಂಗಳು ಮಾತ್ರ ಶಾಲೆ. ಚಳಿಗಾಲದಲ್ಲಿ ಇವರು ಅಲ್ಲಿಂದ ಬೆಚ್ಚನೆಯ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಶಾಲೆಯ ಕಟ್ಟಡ ಕುಸಿದಿದ್ದ ಹಾಗೆ, ಮಾನವರ ಮಧ್ಯೆ ಇದ್ದ ಮಾನವೀಯತೆಯ ಕೊಂಡಿ ಕಳಚಿತ್ತು. ಜಾತಿ ಧರ್ಮದ ನಡುವೆ ಸಂಘರ್ಷಗಳು ನಡೆಯುತ್ತಲೇ ಇದ್ದವು. ಈ ಸುಂದರವಾದ ಪ್ರಕೃತಿಯ ಮಡಿಲಲ್ಲಿ ನೆಲಸಿರುವ ಜನರು ಭಯೋತ್ಪಾದಕರಾಗಲು ಹೇಗೆ ತಾನೆ ಸಾಧ್ಯ ಎಂಬ ವಿಚಾರ ನನ್ನ ಹೃದಯವನ್ನು ಕಲಕುತ್ತಿತ್ತು. ಅಂದು ವಿಶಿಷ್ಟವಾದ ಪ್ರಕೃತಿಯ ತಾಣವನ್ನು ಕಂಡು ಮನದಲ್ಲಿ ಆಲೋಚನೆಯ ತರಂಗಗಳು ಏಳುತ್ತಿದ್ದವು. ಒಂದೇ ನೆಲದಲ್ಲಿ ಹುಟ್ಟಿ ಬೆಳೆದವರು ನಾವು, ಬ್ರಿಟಿಷರು ನಮ್ಮ ನಾಡನ್ನು ವಿಭಜಿಸಿದ ನಂತರ ನಾವು ಆಜನ್ಮ ವೈರಿಗಳಾದದ್ದು ಹೇಗೆ? ನೆರೆಹೊರೆಯವರಾದ ನಾವು ಒಬ್ಬರಿಗೊಬ್ಬರು ಸಹಕಾರವನ್ನು ನೀಡುತ್ತಾ ಬಾಳಿದರೆ ಎರಡೂ ದೇಶಗಳೂ ಪ್ರಗತಿ ಪಥದತ್ತ ದಾಪುಗಾಲಿಡುತ್ತಾ ಸಾಗಬಹುದಲ್ಲವೇ? ನಮ್ಮ ಧರ್ಮವನ್ನು ಪಾಲಿಸೋಣ, ಬೇರೆಯವರ ಧರ್ಮವನ್ನು ಗೌರವಿಸೋಣ ಎಂಬ ತತ್ವವನ್ನು ಎಲ್ಲರೂ ಪಾಲಿಸಿದರೆ ಕಾಶ್ಮೀರ ಸ್ವರ್ಗವಾಗುವುದರಲ್ಲಿ ಸಂದೇಹವೇ ಇಲ್ಲ.
(ಮುಂದುವರಿಯುವುದು)
ಈ ಬರಹದ ಹಿಂದಿನ ಹೆಜ್ಜೆ ಇಲ್ಲಿದೆ: https://www.surahonne.com/?p=39006
– ಡಾ. ಎಸ್. ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ
ಕುತೂಹಲ ಭರಿತವಾದುದಷ್ಟೇ ಅಲ್ಲ ಮಾಹಿತಿಪೂರ್ಣವಾದ ಲೇಖನ.. ಮೇಡಂ
ದೇಶದಂಚಿನ, ವಿಶೇಷವಾದ ಸುಂದರ ಬೂಟಾಪತ್ರಿಯನ್ನು ಕಣ್ಮುಂದೆ ತಂದ ಚಂದದ ಲೇಖನ…ಧನ್ಯವಾದಗಳು ಮೇಡಂ.
ಮಾಹಿತಿಪೂರ್ಣ
ವಂದನೆಗಳು ಪ್ರೀತಿಯ ಓದುಗರಿಗೆ