ನಾಗಾಲ್ಯಾಂಡಿನ ಹಾರ್ನ್‌ಬಿಲ್ ಫೆಸ್ಟಿವಲ್
ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಐದು ಕಿ.ಮೀ. ದೂರದಲ್ಲಿರುವ ಕಿಸಾಮ ಹೆರಿಟೇಜ್ ವಿಲೇಜ್ ನೋಡಲು ಉತ್ಸಾಹದಿಂದ ಹೊರಟೆವು. ದಾರಿಯಲ್ಲಿ ನಮ್ಮ ಗೈಡ್ ಈ ಪ್ರವಾಸೀ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ. ನಾಗಾ ಪದದ ಮೂಲ ಬರ್ಮೀ ಭಾಷೆಯ ನಾ-ಕಾ ಎಂಬ ಸ್ವರಗಳಿಂದ ಬಂದಿದೆ. ಅಂದರೆ ಮೂಗಿಗೆ ಆಭರಣ ತೊಟ್ಟವರು. ಮತ್ತೆ ಕೆಲವರು ಪುಟ್ಟದಾದ ಮೂಗನ್ನು ಹೊಂದಿರುವ ಜನಾಂಗ ಎಂದೂ ವಾದ ಮಂಡಿಸುವರು. ಗ್ರೀಕ್ ವಿದ್ವಾಂಸರೊಬ್ಬರ ವಿವರಣೆ ಹೀಗಿದೆ – ನಾಗಾ ಪದದ ಮೂಲ ನಂಗಾ. ನಾಗಾಗಳು ಕಾಡಿನಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದುದರಿಂದ, ಇವರು ಅನಾಗರೀಕ ಕಾಡು ಜನ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವರು. ನಾನು ನಾಗಾಲ್ಯಾಂಡ್ ಎಂದರೆ ಸರ್ಪಗಳ ಬೀಡೆಂದೇ ಭಾವಿಸಿದ್ದೆ. ಆದರೆ ನನ್ನ ಊಹೆ ಹುಸಿಯಾಗಿತ್ತು. ನಾಗಾಲ್ಯಾಂಡಿನ ಒಂದೊಂದು ನಗರವೂ ಒಂದೊಂದು ಕತೆಯನ್ನು ಹೇಳುತ್ತವೆ. ಹುಟ್ಟು ಹೋರಾಟಗಾರರಾದ ನಾಗಾಗಳು ಸ್ವತಂತ್ರರಾಗಲು ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಲೇ ಇರುವರು. ನಾಗಾ ಬುಡಕಟ್ಟುಗಳ ನಡುವಿನ ಹೋರಾಟ, ಭಾರತದೊಂದಿಗೆ ಯುದ್ಧ ಹಾಗೂ ಬ್ರಿಟಿಷರೊಂದಿಗೆ ಹೋರಾಟ ನಿರಂತರವಾಗಿ ನಡೆಯುತ್ತಲೇ ಇತ್ತು. ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ನಾಗಾಲ್ಯಾಂಡನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1947 ರಲ್ಲಿ ಭಾರತವು ಸ್ವತಂತ್ರ ರಾಷ್ಟ್ರವಾದಾಗ ನಾಗಾಗಳ ಪ್ರತ್ಯೇಕವಾದೀ ಹೋರಾಟ ಪುನಃ ಆರಂಭವಾಯಿತು. ಕೊನೆಗೂ1963 ರ ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್ ಅಧಿಕೃತವಾಗಿ ಭಾರತಕ್ಕೆ ಸೇರ್ಪಡೆಯಾಯಿತು.
ಇನ್ನು ನಾಗಾಲ್ಯಾಂಡಿನ ರಾಜಧಾನಿಯಾದ ಕೊಹಿಮಾ ಎಂದರೆ ಇಲ್ಲಿನ ಅರಣ್ಯಗಳಲ್ಲಿ ವಿಶಿಷ್ಟವಾದ ಪರಿಮಳ ಬೀರುತ್ತಾ ಅರಳುವ ಪುಷ್ಪ ಎಂದು ಗೈಡ್ ತಿಳಿಸಿದ. ಕಿಸಾಮಾದಲ್ಲಿ ಹಬ್ಬಗಳ ರಾಜನಾದ ಹಾರ್ನ್‌ಬಿಲ್ ಫೆಸ್ಟಿವಲ್ಲನ್ನು ವರ್ಷಕ್ಕೊಮ್ಮೆ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. 1963 ಡಿಸೆಂಬರ್‌ನಲ್ಲಿ ಭಾರತಕ್ಕೆ ಸೇರ್ಪಡೆಯಾದ ಈ ನಾಡಿನ ನೆನಪಿಗಾಗಿ, ಪ್ರತಿವರ್ಷ ಡಿಸೆಂಬರ್ ಒಂದರಿಂದ ಹತ್ತರವರೆಗೆ ಈ ಹಬ್ಬವನ್ನು ಆಚರಿಸುವರು. ನಾಗಾಲ್ಯಾಂಡಿನಲ್ಲಿರುವ ಹದಿನೇಳು ಬುಡಕಟ್ಟಿನ ಜನರೂ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಂಗೀತ, ನೃತ್ಯ, ಕ್ರೀಡೆಗಳು, ಉಡುಗೆ ತೊಡುಗೆ, ಆಹಾರ ಪದ್ಧತಿಯನ್ನು ಬಿಂಬಿಸುವ ಈ ಅಭೂತಪೂರ್ವ ಸಂಪ್ರದಾಯಗಳ ವರ್ಣರಂಜಿತ ಹಬ್ಬವೇ ಹಾರ್ನ್‌ಬಿಲ್ ಫೆಸ್ಟಿವಲ್. ಹಾರ್ನ್‌ಬಿಲ್ ಪಕ್ಷಿ ಈಶಾನ್ಯ ರಾಜ್ಯಗಳ ಮೂಲನಿವಾಸಿ. ಹಾರ್ನ್‌ಬಿಲ್ ಶೌರ್ಯ ಹಾಗೂ ಧೃಢತೆಯ ಸಂಕೇತವಾಗಿ ನಿಲ್ಲುವುದು. ಈ ಹಕ್ಕಿಗೆ ರಂಗು ರಂಗಿನ ರೆಕ್ಕೆ ಪುಕ್ಕಗಳಿದ್ದು, ನಾಗಾಗಳ ಶಿರಸ್ತ್ರಾಣಕ್ಕೆ ಆಭೂಷಣ ಪ್ರಾಯವಾಗಿದೆ. ಈ ಚೆಂದದ ಹಕ್ಕಿಯ ಬೇಟೆ ಅವ್ಯಾಹತವಾಗಿ ಸಾಗಿದ್ದು, ಇದರ ಸಂತತಿ ಕ್ಷೀಣ ಸುತ್ತಾ ಬಂದು ಅಳಿವಿನಂಚಿನಲ್ಲಿರುವ ಹಕ್ಕಿಗಳ ಪಟ್ಟಿಗೆ ಸೇರಿದೆ. ಇದರಿಂದ ಎಚ್ಚೆತ್ತ ನಾಡಿನ ಪ್ರಜೆಗಳು, ಹಾರ್ನ್‌ಬಿಲ್ ಸಂರಕ್ಷಿಸುವ ಪಣ ತೊಟ್ಟು, ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಈ ರಾಷ್ಟ್ರೀಯ ಹಬ್ಬಕ್ಕೆ ಹಾರ್ನ್‌ಬಿಲ್ ಫೆಸ್ಟಿವಲೆಂದೇ ಹೆಸರಿಸಿದ್ದಾರೆ. ಈ ನಾಡಿನ ಬುಡಕಟ್ಟುಗಳ ಹೆಸರನ್ನು ಕೇಳೋಣ ಬನ್ನಿ ಅಂಗಾಮಿ, ಅವೋ, ಚಾಕ್‌ಸಾಂಗ್, ಚಾಂಗ್, ಚಿರ್, ಖಿಯಾಮ್ನಿಯುಗನ್, ಕೊನ್ಯಾಕ್, ಲೋಥಾ, ಮಕ್‌ವಾರೆ, ಫೋಮ್, ರೇಂಗ್ಮಾ, ಸ್ಯಾಂಗ್‌ಚಾಮ್, ಸೆಮಾ, ಟಿಕಿಟ್, ಯಿಮ್‌ಚುಂಗರ್, ಝೆಲಿಯಾಂಗ್, ಕುಕಿ. ಇವರ ಸಂಸ್ಕೃತಿ, ಸಂಪ್ರದಾಯಗಳು, ಉಡುಗೆ, ಜೀವನಶೈಲಿ ಎಲ್ಲವೂ ಭಿನ್ನ ಬಿನ್ನವಾಗಿದ್ದು, ವರ್ಷಕ್ಕೊಮ್ಮೆ ಒಂದೇ ಸೂರಿನಡಿ ಸೇರಿ, ತಮ್ಮ ತಮ್ಮ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಅನಾವರಣಗೊಳಿಸುವರು. ಇವರ ಮುಖ್ಯ ಕಸುಬು ಬೇಟೆ, ವ್ಯವಸಾಯ, ಮೀನುಗಾರಿಕೆ ಅರಣ್ಯ ಉತ್ಪನ್ನಗಳ ಸಂಗ್ರಹ ಇತ್ಯಾದಿ. ಇವರು ಮರಗೆಲಸ ಹಾಗೂ ಬಿದಿರಿನ ನೇಯ್ಗೆಯಲ್ಲಿ ಸಿದ್ಧಹಸ್ತರು. ನಾಗಾಗಳ ಕೃಷಿಪದ್ಧತಿಯನ್ನು ಜುಮಾ ಕೃಷಿ ಎನ್ನುವರು. ಬೆಟ್ಟಗಳ ಇಳಿಜಾರು ಪ್ರದೇಶಕ್ಕೆ ಬೆಂಕಿ ಹಾಕಿ, ನಂತರ ಆ ಸ್ಥಳವನ್ನು ಮೆಟ್ಟಿಲು ಮೆಟ್ಟಿಲಾಗಿ ಕಡಿದು ಭತ್ತ ಬೆಳೆಯುವರು. ಇವರ ಪ್ರಮುಖ ಸಂಗೀತ ವಾದ್ಯಗಳು ಕೊಳಲು ಹಾಗೂ ಭಾರಿ ಗಾತ್ರದ ಡೊಳ್ಳು. ಮರದ ಕೋಲುಗಳನ್ನು ಲಂಬವಾಗಿ ಹಿಡಿದು ಡೊಳ್ಳು ಬಾರಿಸುವುದನ್ನು ನೋಡುವುದೇ ಸೊಗಸು. ಪುರುಷರು ಬಣ್ಣದ ಬಣ್ಣದ ಶಾಲನ್ನು ಹೊದ್ದರೆ, ಸ್ತ್ರೀಯರು ಮೇಚಲೆ (ಸ್ಕರ್ಟ್) ಯನ್ನು ಧರಿಸುವರು. ಪ್ರಾಣಿಗಳ ಎಲುಬಿನಿಂದ, ಹಂದಿಗಳ ಹಲ್ಲುಗಳಿಂದ ಹಾಗೂ ದಪ್ಪನೆ ಮಣ ಗಳಿಂದ ಮಾಡಿದ ಸರ, ಪದಕ, ಬಳೆ, ಕಡಗಗಳನ್ನು ಹೆಣ್ಣು ಗಂಡೆಂಬ ಬೇಧವಿಲ್ಲದೆ ಧರಿಸುವರು.
ಹಾರ್ನ್‌ಬಿಲ್ ಫೆಸ್ಟಿವಲ್ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ನಾಗಾ ಯೋಧರ ಮೂರ್ತಿಗಳನ್ನು ನಿಲ್ಲಿಸಲಾಗಿದ್ದು, ಪಕ್ಕದಲ್ಲಿ ಒಂದು ದೊಡ್ಡದಾದ ಮರದ ಮೇಲೆ ಹಾರ್ನ್‌ಬಿಲ್ ಪಕ್ಷಿಗಳ ಆಕೃತಿಗಳನ್ನು ಇಡಲಾಗಿದೆ. ಇಲ್ಲಿ ಎಲ್ಲಾ ಬುಡಕಟ್ಟು ಜನಾಂಗವರ ವಿಭಿನ್ನ ಸಂಸ್ಕೃತಿಯ ಪ್ರತಿಬಿಂಬವಾಗಿ ನಿಲ್ಲುವ ವಿಶಿಷ್ಟ ಶೈಲಿಯ ಕುಟೀರಗಳನ್ನು ನಿರ್ಮಿಸಿರುವರು. ಇವರೇ ತಯಾರಿಸಿದ ಕರಕುಶಲ ವಸ್ತುಗಳಿಂದ ಕುಟೀರಗಳನ್ನು ಅಲಂಕರಿಸಿರುವರು. ಕುಟೀರದೊಳಗೆ ಬಣ್ಣ ಬಣ್ಣದ ಭರ್ಜಿಗಳು, ಬೇಟೆಯಾಡಲು ಬಳಸುತ್ತಿದ್ದ ಆಯುಧಗಳು, ವಿಶಿಷ್ಟವಾದ ಶಿರಸ್ತ್ರಾಣಗಳನ್ನು ನೋಡಬಹುದು. ಇವರ ಸಮುದಾಯದ ಕೇಂದ್ರಗಳಾಗಿದ್ದ ಮೊರಂಗ್ ಗಳಲ್ಲಿ ಯುವಜನತೆಗೆ ಹಿರಿಯರು ತಮ್ಮ ಬುಡಕಟ್ಟಿನ ಸಂಸ್ಕೃತಿ, ಪರಂಪರೆಗಳನ್ನು ಪರಿಚಯಿಸುತ್ತಾ ತಮ್ಮ ಕುಲಕಸುಬುಗಳಾದ ಬಿದಿರಿನ ನೇಯ್ಗೆ, ಕಮ್ಮಾರಿಕೆ, ಮರದ ಕೆತ್ತನೆ ಕೆಲಸ ಇತ್ಯಾದಿಗಳನ್ನು ಕಲಿಸಿಕೊಡುತ್ತಿದ್ದರು.
ಕುಟೀರಗಳ ಒಳಹೊಕ್ಕ ನಮಗೆ ಹಲವು ಶತಮಾನಗಳ ಹಿಂದೆ ಬದುಕಿದ್ದ ನಾಗಾ ಜನರ ಮಧ್ಯೆ ನಡೆದಾಡುತ್ತಾ, ಅವರ ಪರಂಪರೆ, ಜೀವನಶೈಲಿಯನ್ನು ಪ್ರತ್ಯಕ್ಷ ಕಂಡ ಅನುಭವವಾಗಿತ್ತು. ಮುಂಜಾನೆ ಬೇಟೆಯಾಡಲು ಹೊರಟ ಮನೆಯ ಯಜಮಾನ ಮರಳಿ ಮನೆಗೆ ಬರುವನೋ ಇಲ್ಲವೋ, ಅಥವಾ ಯಾರದೋ ಬೇಟೆಗೆ ಬಲಿಯಾಗುವನೋ ಎಂಬ ಆತಂಕದಲ್ಲೇ ಬದುಕು ಸಾಗಿಸುತ್ತಿದ್ದ ಹೆಣ್ಣುಮಕ್ಕಳು, ಸಮುದಾಯದವರೊಂದಿಗೆ ಸೇರಿ ಮಾಡುತ್ತಿದ್ದ ಸಂಗೀತ ನೃತ್ಯದಲ್ಲಿ ನೆಮ್ಮದಿ ಕಂಡುಕೊಳ್ಳುತ್ತಿದ್ದಿರಬಹುದು. ಹೊರ ಜಗತ್ತಿನ ಪರಿಚಯವೇ ಇಲ್ಲದ ಈ ಸಮುದಾಯಗಳನ್ನು ಪಶ್ಚಿಮ ದೇಶಗಳಿಂದ ಬಂದಿಳಿದ ಕ್ರಿಶ್ಚಿಯನ್ನರು ಸುಲಭವಾಗಿ ತಮ್ಮ ಧರ್ಮಕ್ಕೆ ಮತಾಂತರಿಸಿದರು. ಇಂದು ನಾಗಾಲ್ಯಾಂಡಿನಲ್ಲಿ ತೊಂಭತ್ತೊಂಭತ್ತು ಭಾಗ ಕ್ರಿಶ್ಚಿಯನ್ನರಿದ್ದಾರೆ.
ಹಾರ್ನ್‌ಬಿಲ್ ಫೆಸ್ಟಿವಲ್ಲನ್ನು ಡೊಳ್ಳು ಹೊಡೆಯುವುದರ ಮೂಲಕವೇ ಆರಂಭಿಸಲಾಗುವುದು. ನಾಗಾಗಳು ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ ಮಾಡುವ ನೃತ್ಯಗಳು ಹಾಗೂ ಅವರ ವಾದ್ಯ ಸಂಗೀತ ಎಲ್ಲರ ಮನಸೆಳೆಯುವುದು. ನೃತ್ಯ ಸಂಗೀತದ ಜೊತೆ ಜೊತೆಗೇ ಆಧುನಿಕ ಶೈಲಿಯ ಕಲಾ ಪ್ರಾಕಾರಗಳನ್ನೂ ಆಯೋಜಿಸುವರು. ಪ್ರವಾಸಿಗರನ್ನು ರಂಜಿಸಲು. ಕೆಲವು ದೇಸೀ ಕ್ರೀಡೆಗಳನ್ನೂ ಏರ್ಪಡಿಸುವರು. ಇವರು ತಯಾರಿಸುವ ರುಚಿರುಚಿಯಾದ ಭಕ್ಷ್ಯ ಭೋಜಗಳು ಹಾಗೂ ಅಕ್ಕಿಯಿಂದ ತಯಾರಿಸಲಾಗುವ ಮದ್ಯವೂ ಇಲ್ಲಿ ಲಭ್ಯ. ಈ ಕಲಾವಿದರ ಸಾಹಸ ಮನೋಭಾವ, ಮುಗ್ಧತೆ, ಪ್ರಾಮಾಣ ಕತೆ ಹಾಗೂ ಆತ್ಮ ವಿಶ್ವಾಸ ಇವರ ಕಲಾಪ್ರಾಕಾರಗಳಲ್ಲಿ ಕಂಡು ಬರುವುದು. ಮೂಲೆಗುಂಪಾಗಿದ್ದ ಬುಡಕಟ್ಟು ಜನಾಂಗದವರ ಕಲಾ ಪ್ರೌಢಿಮೆಯನ್ನು ಮುಖ್ಯವಾಹಿನಿಗೆ ತರಲು ಈ ಹಬ್ಬವನ್ನು 2000 ನೇ ಸಾಲಿನಲ್ಲಿ ಆರಂಭಿಸಲಾಯಿತು. ಇವರ ಸಂಗೀತ ನೃತ್ಯಗಳೆಲ್ಲ ವ್ಯವಸಾಯ, ಬೇಟೆಯ ಸುತ್ತ ಸುತ್ತವುದು. ತಮ್ಮ ಐತಿಹಾಸಿಕ ಮತು ಪೌರಾಣಿಕ ಕಥೆಗಳಲ್ಲಿ ಮಿಂಚಿ ಮರೆಯಾದ ಶೂರರ ಬದುಕಿನ ಮೇಲೆ ಆಧಾರಿತವಾದ ನೃತ್ಯಗಳನ್ನು ಪ್ರದರ್ಶಿಸುವರು. ಇವರ ಉಡುಪುಗಳ ಮೇಲೆ ಪಾರಂಪರಿಕ ರೂಪಕಗಳಾದ ಎತ್ತಿನ ಕೊಂಬು, ಪಕ್ಷಿಯ ಚಿತ್ರ, ಹೂವು ಹಾಗೂ ಮರದ ಚಿತ್ರಗಳ ಸುಂದರವಾದ ಕಸೂತಿಯಿರುವುದು. ನಾಗಾಲ್ಯಾಂಡಿನ ಹಾರ್ನ್‌ಬಿಲ್ ಫೆಸ್ಟಿವಲ್ಲನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನರು ಆಗಮಿಸುವರು.
ಹಾರ್ನ್‌ಬಿಲ್ ಫೆಸ್ಟಿವಲ್ ನಡೆಯುವ ಸಮಯದಲ್ಲಿ ಒಮ್ಮೆ ನಾಗಾಲ್ಯಾಂಡಿಗೆ ಭೇಟಿ ನೀಡಬೇಕೆಂಬ ಆಶಯ ಹೊತ್ತು ಹಿಂದಿರುಗುವಾಗ ನಾಗಾಲ್ಯಾಂಡಿನ ಬಂಡುಕೋರರ ಅಂತರಾಳದ ಕೂಗು ಕೇಳಿ ಬಂತು, ನಮ್ಮ ಬುಡಕಟ್ಟುಗಳ ಸಂಸ್ಕೃತಿಯನ್ನು ಸಂಪ್ರದಾಯಗಳನ್ನು ಕಾಪಾಡಲು, ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ನಮಗೆ ಸ್ವಾತಂತ್ರ್ಯ ನೀಡಿ. ನಾಗಾಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು, ಭಾರತ ದೇಶದೊಂದಿಗೆ ಶಾಂತಿ, ಸಾಮರಸ್ಯದಿಂದ ಜೊತೆಗೂಡಿ, ಪ್ರಗತಿ ಪಥದತ್ತ ನಡೆದರೆಷ್ಟು ಚೆನ್ನ ಅಲ್ಲವೇ?
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ನಾಗಾಲ್ಯಾಂಡಿನ…ಹಾರ್ನ್ಬಿಬೆಲ ಫೆಸ್ಟಿವಲ್… ಪರಿಚಯಾತ್ಮಕ ಲೇಖನ ಮುದ ಕೊಟ್ಟಿತು…ಗಾಯತ್ರಿ ಮೇಡಂ
ಧನ್ಯವಾದಗಳು ನಾಗರತ್ನ ಮೇಡಂಗೆ
ಚಂದದ ಲೇಖನ ಮೇಡಂ
ನಾಗಲ್ಯಾಂಡಿನ ಹಾರ್ನ್ ಬಿಲ್ ಹಬ್ಬ, ವಿಚಿತ್ರ ಹೆಸರಿನ
ಬುಡಕಟ್ಟು ಜನಾಂಗಗಳು, ಅಲ್ಲಿಯ ಸಂಸ್ಕೃತಿ ಇತ್ಯಾದಿಗಳ ಕುರಿತ ವಿವರಣಾತ್ಮಕ ಲೇಖನವು ಚೆನ್ನಾಗಿದೆ ಗಾಯತ್ರಿ ಮೇಡಂ.
ಸಹೃದಯ ಓದುಗರಿಗೆ ವಂದನೆಗಳು