ಜೂನ್ ನಲ್ಲಿ ಜೂಲೇ : ಹನಿ 14
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಭಾರತದ ಕೊನೆಯ ಹಳ್ಳಿ ಟುರ್ ಟುಕ್ ಹಳ್ಳಿಯತ್ತ ಪಯಣ
27 ಜೂನ್ 2018 ರಂದು, ಬೆಳಗ್ಗೆ ಬೇಗನೇ ಎದ್ದು ಹೋಟೆಲ್ ನ ಸುತ್ತುಮುತ್ತ ಸ್ವಲ್ಪ ಅಡ್ಡಾಡಿದೆವು. ಆರು ಗಂಟೆಗೆ ನಮ್ಮಲ್ಲಿಯ ಎಂಟು ಗಂಟೆಯ ಬೆಳಕಿತ್ತು. ಸಣ್ಣ ವಾಕಿಂಗ್ ಮುಗಿಸಿ, ಟೆಂಟ್ ಗೆ ಬಂದು ಸ್ನಾನ ಮಾಡಿ, ಹೊರಡಲು ಸಿದ್ಧರಾದೆವು. ಅ ಹೋಟೆಲ್ ನಲ್ಲಿಯೂ ಪೂರಿ-ಭಾಜಿ, ಅವಲಕ್ಕಿ ಒಗ್ಗರಣೆ, ಬ್ರೆಡ್ ನ ಉಪಾಹಾರವಿತ್ತು. ಆ ದಿನದ ನಿಗದಿತ ವೇಳಾಪಟ್ಟಿ ಪ್ರಕಾರ ನಾವು ದಿಸ್ಕಿಟ್ ಎಂಬಲ್ಲಿರುವ ಪ್ರಸಿದ್ಧ ಮೊನಾಸ್ಟ್ರಿಗೆ ಭೇಟಿ ಕೊಡಬೇಕಿತ್ತು. ಆಮೇಲೆ ಮರಳಿ ಪ್ರಯಾಣಿಸಿ ಸಂಜೆಯ ಮೊದಲು ಲೇಹ್ ನ ಹೋಟೆಲ್ ತಲಪಬೇಕಿತ್ತು. ನಮ್ಮ ತಂಡದಲ್ಲಿದ್ದ ದಿಲ್ಲಿಯ ಮೋಹಿತ್ ಮತ್ತು ತನು ಅವರು ಹೋಟೆಲ್ ಮಾಲೀಕರ ಬಳಿ ಇತರ ಪ್ರೇಕ್ಷಣೀಯ ಜಾಗಗಳ ಬಗ್ಗೆ ವಿಚಾರಿಸಿದ್ದರಂತೆ. ಆತ ತಿಳಿಸಿದ ಪ್ರಕಾರ ‘ಟುರ್ ಟುಕ್’ ಎಂಬ ಹೆಸರಿನ ಹಳ್ಳಿಯು ಈ ಭಾಗದಲ್ಲಿ ಕೊನೆಯ ಹಳ್ಳಿಯಾಗಿದ್ದು, ಪಾಕಿಸ್ತಾನದ ಗಡಿಯಲ್ಲಿದೆ. ಇದು ಸೇನಾವಲಯಕ್ಕೊಳಪಡುವುದರಿಂದ ಪೂರ್ವಾನುಮತಿ ಮೇರೆಗೆ ಹೋಗಬಹುದು. ಈ ಭೇಟಿಯು ನಿಗದಿತ ವೇಳಾಪಟ್ಟಿಯಲ್ಲಿ ಇಲ್ಲದಿರುವುದರಿಂದ ನಾವು ಡ್ರೈವರ್ ಗೆ ಒಟ್ಟು ರೂ. 4000/- ಹೆಚ್ಚುವರಿ ಕೊಟ್ಟರೆ, ಆತ ‘ಟುರ್ ಟುಕ್ ‘ ಹಳ್ಳಿಗೆ ಕರೆದೊಯ್ಯುವನಂತೆ. ಆದರೆ ವಾಪಸ್ ಲೇಹ್ ಗೆ ತಲಪುವಾಗ ಸ್ವಲ್ಪ ತಡವಾಗಬಹುದು. ಈ ಯೋಜನೆಗೆ ನಿಮ್ಮೆಲ್ಲರ ಅಭಿಪ್ರಾಯ ಏನೆಂದು ಕೇಳಿದರು. ಮೊನಾಸ್ಟ್ರಿಗಳನ್ನು ಈಗಾಗಲೇ ನೋಡಿದ್ದುದರಿಂದ ಹಾಗೂ ಪಾಕಿಸ್ತಾನದ ಗಡಿಗೆ ಹೋಗುವುದು ಎಂಬ ಆಲೋಚನೆ ಥ್ರಿಲ್ ಅನಿಸಿ, ನಾವೆಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದೆವು.
ಈ ಹೋಟೆಲ್ ನಲ್ಲಿದ್ದ ಸಿಬ್ಬಂದಿಯವರು ಉತ್ತರಾಖಂಡದ ನೈನಿತಾಲ್ ನವರು. ಆರು ತಿಂಗಳು ಇಲ್ಲಿ ದುಡಿದು, ಚಳಿಗಾಲದಲ್ಲಿ ವಾಪಸ್ಸಾಗುತ್ತಾರಂತೆ. ಅವರಿಗೆ ಧನ್ಯವಾದ ಹೇಳಿ, ನುಬ್ರಾ ಕಣಿವೆಯಿಂದ ಹೊರಟೆವು. ನಿನ್ನೆ ಬಂದ ದಾರಿಯಲ್ಲಿಯೇ ಸ್ವಲ್ಪ ದೂರ ಕ್ರಮಿಸಿ, ಆಮೇಲೆ ‘ಟುರ್ ಟುಕ್ ‘ ಕಡೆಗೆ ವ್ಯಾನ್ ಚಲಿಸಿತು. ಕಣಿವೆಯುದ್ದಕ್ಕೂ ಅಲ್ಲಲ್ಲಿ ಹಲವಾರು ಹಳ್ಳಿಗಳು, ಗೋಧಿ, ಬಾರ್ಲಿ, ಸಾಸಿವೆ ಬೆಳೆದಿದ್ದ ಹೊಲಗಳು ಕಾಣಸಿಕ್ಕಿದುವು. ನಾವಿದ್ದ ಹೋಟೆಲ್ ನಿಂದ ಮೂರು ಗಂಟೆ ಪ್ರಯಾಣಿಸಿದಾಗ ಟುರ್ ಟುಕ್ ಹಳ್ಳಿಯ ಗೇಟ್ ಬಳಿ ತಲಪಿದ್ದೆವು.
‘ಟುರ್ ಟುಕ್’ ಹಳ್ಳಿ
ಇದು ಸೇನೆಯ ವಶದಲ್ಲಿರುವ ಹಳ್ಳಿ . ಇಲ್ಲಿ ಒಟ್ಟು 1200 ರಷ್ಟು ಜನರಿದ್ದಾರಂತೆ. ಸ್ಥಳೀಯರು ‘ಬಾಲ್ತಿ’ ಎಂಬ ಭಾಷೆಯನ್ನು ಮಾತನಾಡುತ್ತಾರೆ. ಪ್ರವಾಸಿಗರು ತಮ್ಮ ಗುರುತಿನ ಚೀಟಿಯನ್ನು ಗೇಟಿನಲ್ಲಿರುವ ಸೇನಾ ಅಧಿಕಾರಿ ಕೈಯಲ್ಲಿ ಕೊಟ್ಟ ಮೇಲೆ ಅವರು ಪರಿಶೀಲಿಸಿ, ಡ್ರೈವರ್ ನ ಲೈಸನ್ಸ್ ಅನ್ನು ತಾವು ಇಟ್ಟುಕೊಂಡು ತಲೆ ಲೆಕ್ಕ ಹಾಕಿ ಒಳಗೆ ಬಿಟ್ಟರು. ಗೇಟಿನ ಪಕ್ಕದಲ್ಲಿಯೇ ಸೇನೆಯವರು ನಿರ್ವಹಿಸುತ್ತಿದ್ದ ಪುಟ್ಟ ಕ್ಯಾಂಟೀನ್ ಇತ್ತು. ನಾವು ಅಲ್ಲಿ ‘ಮೋಮೋ ‘ ಮತ್ತು ಕಾಫಿ ತೆಗೆದುಕೊಳ್ಳಲ್ಲು ಕೂಪನ್ ಪಡೆದುಕೊಂಡು ಅಡುಗೆಕೋಣೆಯೊಳಗೆ ಇಣುಕಿದಾಗ ಅಲ್ಲಿದ್ದ ಯೋಧರೊಬ್ಬರು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿ ಸಂತೋಷಪಟ್ಟರು. ಅವರು ಬೆಳಗಾವಿಯವರಂತೆ. ಅಲ್ಲಿದ್ದ ಸ್ಪೀಕರ್ ನಲ್ಲಿ ಕನ್ನಡ ಹಾಡೊಂದು ತೇಲಿ ಬಂತು. ಅಷ್ಟರಲ್ಲಿ , ಬೈಕ್ ಚಲಾಯಿಸಿಕೊಂಡು ಬಂದ ಕೆಲವು ಯುವಕರು ಕನ್ನಡ ಹಾಡಿನ ಲಯಕ್ಕೆ ನರ್ತಿಸಲಾರಂಭಿಸಿದರು. ಹಾಸನ ಮತ್ತು ಅರಸೀಕೆರೆಯಿಂದ ಬಂದಿದ್ದ ಆ ತಂಡದಲ್ಲಿ ಯುವಕರೂ, ಯುವತಿಯರೂ ಇದ್ದರು. ಒಟ್ಟಿನಲ್ಲಿ, ಕರ್ನಾಟಕದ 10-12 ಮಂದಿ ಅಪರಿಚಿತರು, ಭಾರತ-ಪಾಕಿಸ್ತಾನದ ಗಡಿಯಲ್ಲಿರುವ ಸೇನಾ ಕ್ಯಾಂಟೀನ್ ನಲ್ಲಿ ಪರಿಚಯ ಮಾಡಿಕೊಂಡು, ಕನ್ನಡದ ಹಾಡು ಕೇಳುತ್ತಾ ಕುಣಿದ ಸಡಗರದ ಕ್ಷಣ ಅದಾಗಿತ್ತು. ಯೋಧರು ತಯಾರಿಸಿಕೊಟ್ಟ ಬಿಸಿಬಿಸಿಯಾದ ‘ಮೋಮೋ’ ರುಚಿಯಾಗಿತ್ತು. ಅವರಿಗೆ ಧನ್ಯವಾದ ಸಮರ್ಪಿಸಿ, ಮುಂದುವರಿದೆವು. ಅಲ್ಲಿ ಫೊಟೊ ತೆಗೆಯಲು ಅವಕಾಶವಿರಲಿಲ್ಲ.
ಅನತಿ ದೂರದಲ್ಲಿ ಒಂದು ಶಾಲೆ ಇತ್ತು. ಅಲ್ಲಿದ್ದ ಫಲಕದ ಪ್ರಕಾರ ‘ತ್ಯಾಕ್ಷಿ’ ಹಳ್ಳಿಯಲ್ಲಿರುವ ಆ ಶಾಲೆಯನ್ನು 1969 ರಲ್ಲಿ ಪಾಕಿಸ್ತಾನವು ಆರಂಭಿಸಿತು. ಯಾಕೆಂದರೆ ಆಗ ‘ಹಳ್ಳಿಯು ಪಾಕಿಸ್ತಾನದ ವಶದಲ್ಲಿತ್ತು. ಆಮೇಲೆ 1971 ರಲ್ಲಿ ಸೇನೆಯು ಹಳ್ಳಿಯನ್ನು ಭಾರತದ ವಶಕ್ಕೆ ಕೊಟ್ಟಿತು. ಹಾಗಾಗಿ, ಪಾಕಿಸ್ತಾನದ ಸರಕಾರವು ನಿರ್ಮಿಸಿ, ಭಾರತದ ಸರಕಾರವು ನಿರ್ವಹಿಸುತ್ತಿರುವ ಶಾಲೆಯೆಂಬ ಹೆಗ್ಗಳಿಕೆಯನ್ನು ‘ತ್ಯಾಕ್ಷಿ’ ಶಾಲೆಯು ಪಡೆದಿದೆ.
ಆಮೇಲೆ ಸುಮಾರು ಅರ್ಧ ಗಂಟೆ ಪ್ರಯಾಣಿಸಿ, ಭಾರತ -ಪಾಕಿಸ್ತಾನದ ಗಡಿಯಲ್ಲಿರುವ ಕೊನೆಯ ಹಳ್ಳಿ ‘ಟುರ್ ಟುಕ್’ ತಲಪಿದಾಗ ರೋಮಾಂಚನವಾಯಿತು. ಇಲ್ಲಿ ಹರಿಯುತ್ತಿರುವ ಶೋಯಕ್ ನದಿಯ ದಂಡೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ಸರಹದ್ದನ್ನು ಸೂಚಿಸುವ ಬರಹಗಳಿವೆ. ಎತ್ತ ನೋಡಿದರೂ ಹಿಮದ ಚಾದರ ಹೊದ್ದ ಒಣಬೆಟ್ಟಗಳು….ಆಗಾಗ ಓಡಾಡುತ್ತಿರುವ ಸೇನಾ ವಾಹನಗಳು… ಇವಿಷ್ಟು ಬಿಟ್ಟರೆ ನಿಗೂಢ ಮೌನ ಮತ್ತು ಅಸಹನೀಯ ಚಳಿಯು ಈ ಹಿಮ ಕಣಿವೆಯನ್ನಾಳುತ್ತವೆ.
ಸದಾ ಉಭಯ ರಾಷ್ಟ್ರಗಳ ಸೇನಾ ಕಣ್ಗಾವಲಿನ ಈ ಪ್ರದೇಶದಲ್ಲಿ ಜೀವಿಸಲು ಬೇಕಾದ ಮೂಲದ್ರವ್ಯಗಳು ಅಖಂಡ ಧೈರ್ಯ ಮತ್ತು ಅಪ್ಪಟ ದೇಶಪ್ರೇಮ. ಜೈ ಜವಾನ್! ಅಲ್ಲಿದ್ದ ಯೋಧರನ್ನು ಮಾತನಾಡಿಸಿ, ಧ್ವಜಸ್ತಂಭದ ಬಳಿ ಫೊಟೊ ಕ್ಲಿಕ್ಕಿಸಿದೆವು. ತಂತಿಯ ಬೇಲಿಯಾಚೆಗಿನ ಸ್ಥಳ ಪಾಕಿಸ್ತಾನ! ಶೋಯಕ್ ನದಿಯ ನೀರು ಭಾರತದಿಂದ ಪಾಕಿಸ್ತಾನಕ್ಕೆ ನಿರಾತಂಕವಾಗಿ ಹರಿಯುತ್ತಿತ್ತು. ಹಿಮಗಾಳಿ ಯಾರಪ್ಪಣೆಗೂ ಎಂದು ಕಾಯದೆ ಸದಾ ಅತ್ತಿಂದಿತ್ತ ಇತ್ತಿಂದತ್ತ ಬೀಸುತ್ತಿರುತ್ತದೆ. ನಾವು ಮಾತ್ರ ಭಾರತೀಯರು, ಪಾಕಿಸ್ತಾನಿಗಳು ಎಂದು ಬದ್ಧವೈರಿಗಳಂತೆ ಇದ್ದೇವೆ…ಇದೇ ನಮಗೂ ಪ್ರಕೃತಿಗೂ ಇರುವ ವ್ಯತ್ಯಾಸ ಅಲ್ಲವೆ?
(ಮುಂದುವರಿಯುವುದು..)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37379
-ಹೇಮಮಾಲಾ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು…ಈಸಾರಿಯ ಭಾರತದ ಕೊನೆಯ ಹಳ್ಳಿಯ ಪರಿಚಯ ಚಿತ್ರ ಸಹಿತ ಮಾಹಿತಿ.. ಕುತೂಹಲ ಕಾರಿಯಾಗಿತ್ತು..ಧನ್ಯವಾದಗಳು ಗೆಳತಿ ಹೇಮಾ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು..
ಓದುವಾಗ ಮನಸಿಗೆ ಒಂದು ರೀತಿಯ ಹಿತವನ್ನು ನೀಡುವಂತಹ ಬರಹ. ಬಹಳ ಸುಂದರ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಮಾಹಿತಿ ಕುರಿತು ಬರಹ ಸೂಪರ್ ಮಾಲಾ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಹಕ್ಕಿಯ ಕೂಗಿನಂತಹ ವಿಚಿತ್ರ ಹೆಸರಿನ ಹಳ್ಳಿ, ಪಾಕಿಸ್ತಾನದ ಗಡಿ, ಯೋಧರ ಆದರೋಪಚಾರ ಹಾಗೂ ಕನ್ನಡದ ಸುಗಂಧದ ಜೊತೆಗೂಡಿದ ಪ್ರವಾಸ ಕಥನ ಖುಷಿಕೊಟ್ಟಿತು.
ನಿಜಕ್ಕೂ ಸರಣಿಯ ಈ ಸಂಚಿಕೆಯ ಲೇಖನ ಭಾವಪರವಶವಾಗುವಂತೆ ಇದೆ. ಅತೀ ಸುಂದರ