ಜೂನ್ ನಲ್ಲಿ ಜೂಲೇ : ಹನಿ 13

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ನುಬ್ರಾ ಕಣಿವೆಯ ಸಾಂಸ್ಕೃತಿಕ ಕಾರ್ಯಕ್ರಮ

ನಾವು ನಾಲ್ವರೂ ಒಂಟೆ ಸವಾರಿಯನ್ನು ದೂರದಿಂದ ನೋಡಿದೆವಷ್ಟೆ. ನೀರಿನ ಝರಿಯ ಪಕ್ಕ ಕುಳಿತುಕೊಂಡು ಪ್ರಕೃತಿ ವೀಕ್ಷಣೆ ಮಾಡುತ್ತಾ ಕಾಲ ಕಳೇದೆವು.  ತಂಡದಲ್ಲಿದ್ದ  ಎಳೆಯ ಜೋಡಿಗಳು ಒಂಟೆಸವಾರಿ ಮಾಡಿ ಬಂದರು. ಸ್ವಲ್ಪ ದೂರದಲ್ಲಿ  ಲಡಾಖಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗುತ್ತದೆ ಎಂಬ ಫಲಕವಿತ್ತು.  ಅದನ್ನು ನೋಡಲೆಂದು  ಟಿಕೆಟ್ ಕೊಂಡೆವು. ಟೆಂಟ್ ಒಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಟಿಕೆಟ್ ಕೊಡುತ್ತಿದ್ದ ಮಹಿಳೆಯ ಹೆಸರು ‘ಅಮೋ’. ಆಕೆ ಸ್ಥಳೀಯ ಸಾಂಪ್ರದಾಯಿಕ ಉಡುಗೆಯಾದ ‘ಕುಂಟೋಪ್ ‘ ಅನ್ನು ಧರಿಸಿದ್ದಳು. 30-40 ಕೂರಬಹುದಾದ  ಟೆಂಟ್ ನಲ್ಲಿ ಜನರು ಸೇರುತ್ತಿದ್ದಂತೆ, ನಿರೂಪಕರೊಬ್ಬರು ಅಲ್ಲಿ ಪ್ರದರ್ಶಿತವಾಗಲಿರುವ ನೃತ್ಯಗಳ ಬಗ್ಗೆ  ವಿವರಿಸಿದರು.

ಮೊದಲನೆಯದಾಗಿ ‘ಬೇಸಿಗೆ ನೃತ್ಯ’ . ಲಡಾಖಿನಲ್ಲಿ  ಬೇಸಿಗೆ ಸಮಯದಲ್ಲಿ ಮಾತ್ರ ಜೀವನ ಸುಲಭ. ಆಗ  ಕೃಷಿ ಕೆಲಸಗಳು ಆರಂಭವಾಗುತ್ತವೆ, ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದಿಂದಾಗಿ ಪ್ರವಾಸಿಗರು ಬರುತ್ತಿದ್ದಾರೆ, ಹೀಗಾಗಿ    ಇಡೀ ವರ್ಷಕ್ಕೆ ಆಗುವಷ್ಟು ಆದಾಯವನ್ನು ಬೇಸಿಗೆಯಲ್ಲಿ ದುಡಿಯುವ ಅನಿವಾರ್ಯತೆಯುಳ್ಳ ಲಡಾಖಿಗಳು  ‘ಬೇಸಿಗೆಯನ್ನು ಸಂತೋಷದಾಯಕವಾಗಿರಿಸು ‘ ಎಂದು  ದೇವರಲ್ಲಿ ಪ್ರಾರ್ಥಿಸುವ ಹಾಡಿಗೆ ನಾಲ್ವರು ಮಹಿಳೆಯರು ನೃತ್ಯ ಮಾಡಿದರು. ಇದರಲ್ಲಿ ರಾಜನ ಸ್ತುತಿಯೂ ಇದೆಯಂತೆ. ಹಾಡನ್ನು ನೃತ್ಯಗಾತಿಯರೇ ಹಾಡಿದರು. ಹಿಮ್ಮೇಳದಲ್ಲಿ ನಮ್ಮ ‘ತಬಲಾ’ವನ್ನು ಹೋಲುವ ‘ತಮಾ’ ಎಂಬ ಲಯವಾದ್ಯವನ್ನು ಕೋಲಿನಿಂದ ಬಡಿಯುತ್ತಿದ್ದರು. ಕೆಲವೊಮ್ಮೆ ಎಡದ ಕೈಯಲ್ಲಿರುವ ಕೋಲಿನಿಂದ ಬಲದಲ್ಲ್ರಿರುವ ತಬಲಾಕ್ಕೆ ಹಾಗೂ ಬಲದ ಕೈಯಲ್ಲಿರುವ ಕೋಲಿನಿಂದ ಎಡದಲ್ಲಿರುವ ತಬಲಾಕ್ಕೆ ಬಡಿಯುತ್ತಿದ್ದುದು ವಿಶೇಷವೆನಿಸುತ್ತಿತ್ತು.

ಅನಂತರ, ಅದೇ ಕಲಾವಿದರು, ತಮ್ಮ ವೇಷಭೂಷಣಗಳನ್ನು ಸ್ವಲ್ಪ ಬದಲಾಯಿಸಿ ಕೈಯಲ್ಲಿ ಹೂಗುಛ್ಚವನ್ನು ಹಿಡಿದುಕೊಂಡು ನೃತ್ಯ ಮಾಡಿದರು. ಇದು  ‘ಹೂಗಳ ಕಣಿವೆ’ ಎಂಬ ಖ್ಯಾತಿಯ ನುಬ್ರಾ ಶೈಲಿಯ ನೃತ್ಯವಂತೆ.  ಆಮೇಲೆ,  ಇನ್ನೊಂದು ರೀತಿಯ ಉಡುಗೆ ಧರಿಸಿ  ಜಂಸ್ಕರ್ ಕಣಿವೆಯ ಪ್ರಸಿದ್ಧ ‘ಹೊಸವರುಷ’ದ  ಸ್ವಾಗತ ಗೀತೆಯನ್ನು ಹಾಡುತ್ತಾ ನರ್ತಿಸಿದರು.  ಕೊನೆಯದಾಗಿ, ನುಬ್ರಾ ಕಣಿವೆಗೆ ಬಂದ ನಮಗೆಲ್ಲಾ ವಂದಿಸುತ್ತಾ ಕಾರ್ಯಕ್ರಮವನ್ನು ಮುಗಿಸಿದರು. ಲಡಾಖಿ ಭಾಷೆ ಅರ್ಥವಾಗದ ಕಾರಣ ಹಾಡುಗಳ ಭಾವ ತಿಳಿಯಲಿಲ್ಲ.  ನೃತ್ಯದ  ಲಾಲಿತ್ಯ, ಮುದ್ರೆ, ಹಾಡುಗಾರಿಕೆ ಹಾಗೂ ಹಿಮ್ಮೇಳ ವಾದ್ಯಗಳಲ್ಲಿಯೂ  ಏಕತಾನತೆಯಿದ್ದಂತೆ ಅನಿಸಿತು. 

ಆದರೆ ನಿರೂಪಕನ ವಿವರಣೆ ಅರ್ಥಪೂರ್ಣವಾಗಿತ್ತು. ಲಡಾಖಿನ ಹಿಮಬೆಟ್ಟಗಳಲ್ಲಿ, ಬದುಕು ಬಹಳ ಕಷ್ಟಕರವಾದರೂ, ಜನರು ಬಹಳ ಸುಖಿಗಳಾಗಿರುವುದಕ್ಕೆ ಮುಖ್ಯ ಕಾರಣ ಸಾಮೂಹಿಕವಾಗಿ ಬದುಕುವುದು, ಕೃಷಿ ಕೆಲಸಗಳಲ್ಲಿ ಪರಸ್ಪರ ಸಹಕರಿಸುವುದು, ಯಾಕ್ ಮೃಗಗಳನ್ನು ಮೇಯಿಸುತ್ತಾ,  ಹೈನುಗಾರಿಕೆ ಉತ್ಪನ್ನಗಳನ್ನು ತಯಾರಿಸುತ್ತಾ, ಜತೆಯಾಗಿ ಹಾಡು ಹೇಳಿಕೊಂಡು  ನೃತ್ಯ ಮಾಡಿಕೊಂಡು ಅಲ್ಪತೃಪ್ತರಾಗಿ ಬದುಕುವುದು ಇವರ ಅನಿವಾರ್ಯತೆ ಹಾಗೂ ಸಂತೋಷದ ಮೂಲವೂ ಕೂಡ. ಇತ್ತೀಚೆಗೆ ಈ ಪರಸ್ಪರ ಅವಲಂಬನೆ ಕಡಿಮೆಯಾಗಿ ವಾಣಿಜ್ಯೀಕರಣ ಉಂಟಾಗುತ್ತಿದೆ ಎಂದೂ ತಿಳಿಸಿದರು.

ಅನಂತರ ನಮ್ಮ ಟೆಂಟ್ ಗೆ ಹಿಂತಿರುಗಿದೆವು.  ರಾತ್ರಿ ಎಂಟು ಗಂಟೆಗೆ ಇನ್ನೂ ಸೂರ್ಯನ ಬೆಳಕಿತ್ತು. ರಾತ್ರಿಯೂಟಕ್ಕೆ ಎಂದಿನಂತೆ ರೋಟಿ, ದಾಲ್, ಸಬ್ಜಿ, ಅನ್ನ,  ಕಸ್ಟಾರ್ಡ್ ಸಿಹಿ ಇತ್ತು. ಊಟ ಮಾಡಿ ಟೆಂಟ್ ಗೆ ಮರಳಿದೆವು. ನಾವು ಅಂದುಕೊಂಡಷ್ಟು ಚಳಿ ಇರಲಿಲ್ಲ. ಒಟ್ಟಿನಲ್ಲಿ ಟೆಂಟ್ ವಾಸ ಎಲ್ಲರಿಗೂ ಖುಷಿ ಕೊಟ್ಟಿತು.  ಇಲ್ಲಿಗೆ ಲೇಹ್ ನಲ್ಲಿ ನಮ್ಮ ಮೂರನೇ ದಿನದ ಚಟುವಟಿಕೆಗಳು ಸಂಪನ್ನಗೊಂಡುವು.


ಮುಂದುವರಿಯುವುದು..

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ :   https://surahonne.com/?p=37321
-ಹೇಮಮಾಲಾ, ಮೈಸೂರು

5 Responses

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..
    ನಿರೂಪಣೆ ಸೊಗಸಾಗಿ ಮೂಡಿಬಂದಿದೆ ಗೆಳತಿ.. ಹೇಮಾ ಧನ್ಯವಾದಗಳು.

  2. ಲಡಾಖಿನ ಸ್ಥಳೀಯ ಜನಪದ ಕೃತಿಗಳ ಪರಿಚಯ ಮಾಡಿಕೊಟ್ಟ ಹೇಮಾ ರವರಿಗೆ ವಂದನೆಗಳು

  3. ನಯನ ಬಜಕೂಡ್ಲು says:

    Beautiful

  4. ಶಂಕರಿ ಶರ್ಮ says:

    ಗೊಬ್ರ ಕಣಿವೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಣೆಯು ತುಂಬಾ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಹೇಮಾರಿಗೆ…

  5. Padma Anand says:

    ಸುಂದರ ಚಿತ್ರಗಳೊಂದಿಗೆ ಲಡಾಖಿನ ಸ್ಥಳೀಯ ಸೊಗಡಿನಿಂದೊಳಗೊಂಡ ಕಾರ್ಯಕ್ರಮಗಳ ವಿವರಣೆ ಸೊಗಸಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: