ಜೂನ್ ನಲ್ಲಿ ಜೂಲೇ : ಹನಿ 10
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಪ್ರಯಾಣ ಮುಂದುವರಿದು ಸನಿಹದಲ್ಲಿದ್ದ ಲೇಹ್ ತಲಪಿತು. ಇನ್ನು ಲೇಹ್ ನ ಅರಮನೆಯ ಕಡೆ ಹೋಗುವುದು ಎಂದ ಡ್ರೈವರ್. ಲೇಹ್ ನ ಆರಮನೆಯನ್ನು ದೂರದಿಂದ ನೋಡಿದೆವು, ಹೆಚ್ಚು-ಕಡಿಮೆ ಮೊನಾಶ್ತ್ರಿಯನ್ನೇ ಹೋಲುವ ಕಟ್ಟಡ ಅದು. ಅಲ್ಲಿ ಈಗ ಯಾರೂ ವಾಸವಾಗಿಲ್ಲ. ಈಗಾಗಲೇ ಸಾಕಷ್ಟು ಸುತ್ತಾಡಿದ್ದ ನಮಗೆ ಪುನ: ಒಂದಿಷ್ಟು ಮೆಟ್ಟಲುಗಳನ್ನೇರಿ ಅರಮನೆ ನೋಡುವ ಉತ್ಸಾಹವಿರಲಿಲ್ಲ. ಕೆಲವರು ಮಾರ್ಕೆಟ್ ಕಡೆ ನಮ್ಮನ್ನು ಬಿಡಿ ಎಂದರು. ಹಾಗಾಗಿ ಲೇಹ್ ಅರಮನೆಯನ್ನು ಹೊರಗಿನಿಂದಲೇ ನೋಡಿ ಹೋಟೆಲ್ ಗ್ಯಾಲಕ್ಸಿಯ ಹತ್ತಿರ ಬಂದೆವು.
ಲೇಹ್ ನ ಮಾರ್ಕೆಟ್ ರಸ್ತೆ ಬಹಳ ಸೊಗಸಾಗಿದೆ. ಅಗಲವಾದ ಅ ರಸ್ತೆಯ ಮಧ್ಯೆ ವಾಹನಗಳಿಗೆ ನಿರ್ಬಂಧವಿದೆ. ಹಾಗಾಗಿ ಗ್ರಾಹಕರು ಮಳಿಗೆಗಳ ಸುತ್ತಾ ಆರಾಮವಾಗಿ ಅಡ್ಡಾಡಬಹುದು. ರಸ್ತೆಯ ಮಧ್ಯೆ ಅಲ್ಲಲ್ಲಿ ಕಟ್ಟೆ ಇರುವುದರಿಂದ ಸುಸ್ತಾದಾಗ ಕೂರಬಹುದು. ಏನಾದಾರೂ ತಿನ್ನುತ್ತಾ ಕುಳಿತಿದ್ದ ಬಹಳ ಮಂದಿಯನ್ನು ನೋಡಿದೆವು. ಇನ್ನು ಖರೀದಿ ಮಾಡಲು ವಿಶೇಷ ವಸ್ತುಗಳೇನೂ ಇಲ್ಲ, ದಿಲ್ಲಿ, ಜಮ್ಮುವಿನಂತಹ ಜಾಗಗಳಿಂದ ಬಂದ ವಸ್ತುಗಳು, ಸ್ಥಳೀಯ ಟಿಬೆಟಿಯನ್ ಅಂಗಡಿಗಳಲ್ಲಿ ಬೆಚ್ಚಗಿನ ಉಡುಪುಗಳು, ಕಲಾತ್ಮಕ ವಸ್ತುಗಳೌ, ಬೌದ್ಧರ ಪೂಜಾ ವಸ್ತುಗಳು …ಇತ್ಯಾದಿ ಲಭ್ಯವಿದ್ದುವು. ಕೆಲವು ಮಂದಿ ಕನ್ನಡ ಮಾತಾನಾಡುವವರೂ ಕಾಣಸಿಕ್ಕಿದರು. ವಿದೇಶೀ ಪ್ರವಾಸಿಗರಿದ್ದರು. ಅವರೆಲ್ಲರ ಹಿತದೃಷ್ಟಿಗೆ ತಕ್ಕಂತೆ ಜರ್ಮನಿ ಕೆಫೆ, ಕಾಫಿ ಡೇ, ಇಟಾಲಿಯನ್ ರೆಸ್ಟಾರೆಂಟ್ ಗಳೂ ಇದ್ದುವು. ಒಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಲೇಹ್ ಬದಲಾಗುತ್ತಿರುವುದು ಎದ್ದು ಕಾಣಿಸುತ್ತದೆ.
ಅಲ್ಲಿಗೆ ಅಂದಿನ ದಿನದ ಸುತ್ತಾಟ ಮುಗಿಸಿ, ಹೋಟೆಲ್ ಗ್ಯಾಲಕ್ಸಿ ಗೆ ಬಂದೆವು. ಆ ವೇಳೆಗೆ ಸವಿತಕ್ಕನಿಗೆ ತಲೆನೋವು ಹಾಗೂ ಭಾರತಿಗೆ ಸುಸ್ತು ಶುರುವಾಗಿತ್ತು. ಅವರಿಬ್ಬರೂ ಊಟ ಬೇಡ ಎಂದು ಹಣ್ಣು, ಶರ್ಬತ್ತು ಕುಡಿದು ಮಲಗಿದರು. ಭಾವ ಮತ್ತು ನಾನು ಸ್ವಲ್ಪ ಊಟ ಮಾಡಿದೆವು. ಅಡಿಗೆ ಚೆನ್ನಾಗಿಯೇ ಇತ್ತು. ನಮಗೆ ಯಾಕೋ ಸೇರಲಿಲ್ಲ . ಅನ್ನ, ದಾಲ್, ಪಲ್ಯ, ಚಪಾತಿ, ಸಿಹಿ ಇದ್ದರೂ ಬೇಡವೆನಿಸಿ, ಮೊಸರನ್ನು ಕೇಳಿ, ನಿಂಬೆಹಣ್ಣು ಉಪ್ಪಿನಕಾಯಿಯ ಜೊತೆಗೆ ಊಟ ಮಾಡಿದಾಗ ರುಚಿಸಿತು. ಹೋಟೆಲ್ ನ ಮಾಲಿಕ ಗಿರಿ ಪುನ: ನಮ್ಮನ್ನು ವಿಚಾರಿಸಿದರು. ದಿನವಿಡೀ ಸುತ್ತಾಡಿ ಬಂದ ನಮ್ಮನ್ನು ನೋಡಿಡ ಹೋಟೆಲ್ ಮಾಲಿಕ ಗಿರಿ ಅವರು ‘ಆಪ್ ಅರಾಮ್ ಹೈ ನಾ…..ಖಾನಾ ಖಾಯಿಯೇ… ನಿಂಬೂ ಪಾನೀ ಪೀಲಿಯೇ ….ಅಬ್ ಸೋ ಜಾಯಿಯೇ, ಕಲ್ ಸಬ್ ಕುಚ್ ಠೀಕ್ ಹೋಗಾ’ ಎಂದರು.
ಟಿಬೆಟ್ /ಲಡಾಖಿ ನ ‘ಪೋಚಾ’
26 ಜೂನ್ 2017 ರಂದು, ಲಡಾಖ್ ನಲ್ಲಿ ನಮ್ಮ ಮೂರನೆಯ ದಿನ ಆರಂಭವಾಯಿತು. ನಮ್ಮ ಮನೆಗಳ ಹಿತ್ತಲಲ್ಲಿ ಪೇರಳೇ ಮರ ಇರುವಂತೆ ಇಲ್ಲಿ ಅಪ್ರಿಕೋಟ್ ಹಾಗೂ ಸೇಬಿನ ಮರಗಳಿರುತ್ತವೆ. ಬೆಳಗ್ಗೆ 0430 ಗಂಟೆಗೆ ರೂಮಿನ ಕಿಟಿಕಿಯ ಪಕ್ಕ ಇದ್ದ ಆಪ್ರಿಕೋಟ್ ಹಣ್ಣಿನ ಮರದಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿ ಎಚ್ಚರವಾಯಿತು. ಸೂರ್ಯ ಆಗಲೇ ಉದಯಿಸಿದ್ದ.
ಸ್ನಾನ ಮುಗಿಸಿ , ತಿಂಡಿಗಾಗಿ ಊಟದ ಹಾಲ್ ಗೆ ಹೋದಾಗ ಪೂರಿ-ಭಾಜಿ, ಬ್ರೆಡ್- ಜಾಮ್ ಇದ್ದುವು. ಲಡಾಖ್ ನಲ್ಲಿ ಬೆಣ್ಣೆ ಬೆರೆಸಿದ ಉಪ್ಪು ಚಹಾ ಪ್ರಸಿದ್ಧ ಎಂದು ಓದಿದ್ದೆ . ಇದನ್ನು ‘ಗುರ್ ಗುರ್ ಚಾಯ್ ‘ ಅಥವಾ ‘ಪೋಚಾ’ ಎಂತಲೂ ಕರೆಯುತ್ತಾರೆ. ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ‘ಬೆಣ್ಣೆ ಚಹಾ’ ಕುಡಿದರೆ, ಚಳಿಗೆ ಶುಷ್ಕವಾಗುವ ಚರ್ಮಕ್ಕೆ ಹಾಗೂ ಗಂಟಲಿಗೆ ಹಿತವೆನಿಸುತ್ತದೆ ಹಾಗೂ ಸುಸ್ಸ್ತು ಕಡಿಮೆಯಾಗುತ್ತ ದೆಯಂತೆ. ಪ್ರಯತ್ನಿಸೋಣ ಎಂದು ಅಡುಗೆಯವರ ಬಳಿ ನನಗೆ ಸ್ಥಳೀಯ ಚಹಾ ಕೊಡಿರೆಂದೆ ಕೇಳಿದೆ.
‘ಪೋಚಾ’ ವನ್ನು ಸಾಂಪ್ರದಾಯಿಕವಾಗಿ ತಯಾರಿಸುವ ವಿಧಾನ ಹೀಗೆ:
4 ಲೋಟ ನೀರನ್ನು ಕುದಿಯಲು ಸೌದೆ ಒಲೆಯಲ್ಲಿ ಇಟ್ಟು , ಅದಕ್ಕೆ 2 ಚಮಚ ಚಹಾ ಪುಡಿ ಹಾಕೊ ಕುದಿಸಿ ಡಿಕಾಕ್ಷನ್ ಅನ್ನು ಸೋಸಿಟ್ಟುಕೊಳ್ಳಬೇಕು. ಇದಕ್ಕೆ ಒಂದು ಚಮಚ ಯಾಕ್ ಮೃಗದ ಹಾಲಿನಿಂದ ತಯಾರಿಸಿದ ಬೆಣ್ಣೆ ಮತ್ತು ಒಂದು ಚಮಚ ಉಪ್ಪು ಸೇರಿಸಿ, ಬಿದಿರಿನಿಂದ ತಯಾರಿಸಿದ ‘ಗುರ್ ಗುರ್ ‘ ಎಂಬ ಹೆಸರಿನ ಸಿಲಿಂಡರ್ ಆಕಾರದ ಪಾತ್ರೆಗೆ ಹಾಕಿ, ಹಿಡಿಕೆಯುಳ್ಳ ಉದ್ದದ ಸೌಟಿನ ಮೂಲಕ ಚೆನ್ನಾಗಿ ಕಡೆಯಬೇಕು. ( ಕೆಲವು ಹಳೆಯ ಮನೆಗಳಲ್ಲಿ ಮೊಸರು ಕಡೆಯಲು ಈ ರೀತಿಯ ಸಿಲಿಂಡರ್ ಗಳನ್ನು ನೋಡಿದ ನೆನಪಿದೆ) . ಕಡೆದ ಚಹಾವನ್ನು ಪುನ: ಪಾತ್ರೆಗೆ ಸುರಿದು, ಒಂದು ಕಪ್ ಯಾಕ್ ಮೃಗದ ಹಾಲು ಸೇರಿಸಿ ಬಿಸಿ ಮಾಡಿದರೆ, ‘ಪೋಚಾ’ ಕುಡಿಯಲು ಸಿದ್ದ. ಮನೆಗೆ ಬಂದ ಅತಿಥಿಗೆ ಆಗಾಗ ಧಾರಾಳವಾಗಿ ಕುಡಿಯಲು ‘ಪೋಚಾ’ ಕೊಡುವುದು ಲಡಾಖಿ ಸಂಸ್ಕೃತಿಯ ಭಾಗ.
ಬದಲಾದ ಕಾಲಗತಿಯಲ್ಲಿ, ಗ್ಯಾಸ್ ಸ್ಟವ್ ಮೇಲೆ ಚಹಾ ಕುದಿಸಿ, ಸೋಸಿ, ಪ್ಯಾಕೇಟ್ ನಲ್ಲಿ ಸಿಗುವ ಮಾಮೂಲಿ ಬೆಣ್ಣೆ, ಉಪ್ಪು ಹಾಕಿ, ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿ, ಸಾದಾ ಹಾಲು ಸೇರಿಸಿ, ಪುನ : ಬಿಸಿ ಮಾಡಿ ‘ಬಟರ್ ಟೀ’ ತಯಾರಿಸುತ್ತಾರೆ. ಹೀಗೆ ತಯಾರಿಸಿದ ‘ಬಟರ್ ಟೀ’ ಯನ್ನು ತಂದು ನನಗೆ ಕೊಟ್ಟರು . ರುಚಿ ಸುಮಾರಾಗಿತ್ತು. ಸಿಹಿ ಚಹಾ ಕುಡಿದು ಅಭ್ಯಾಸವುಳ್ಳ ನಾಲಿಗೆಗೆ ಇದರ ರುಚಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ.
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37129
ಮುಂದುವರಿಯುವುದು..
-ಹೇಮಮಾಲಾ, ಮೈಸೂರು
ಸುಂದರವಾಗಿದೆ
ಎಂದಿನಂತೆ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು ಲಡಾಕಿನಲ್ಲಿ ಮಾಡುವ ಚಹಾದ ವಿವರಣೆ ಚೆನ್ನಾಗಿ ಮೂಡಿಬಂದಿದೆ… ಧನ್ಯವಾದಗಳು ಗೆಳತಿ ಹೇಮಾ
ಉತ್ತಮ ಮಾಹಿತಿಗಳನ್ನು ಒಳಗೊಂಡ ಸೊಗಸಾದ ಪ್ರವಾಸ ಕಥನ …ಧನ್ಯವಾದಗಳು.
ಆಸಕ್ತಿದಾಯಕ ಪೋಚಾ ವಿವರಣೆಯೊಂದಿಗಿನ ಪ್ರವಾಸ ಕಥನ ಮುದ ನೀಡಿತು.
ಪ್ರವಾಸಕಥನವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.