ಜೂನ್ ನಲ್ಲಿ ಜೂಲೇ : ಹನಿ 5
ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
‘ಚೈನೀಸ್ ಬೌಲ್’
ನಾವಿದ್ದ ಹೋಟೆಲ್ ನ ಪಕ್ಕದಲ್ಲಿಯೇ ಲೇಹ್ ನ ಜಿಲ್ಲಾಧಿಕಾರಿಗಳ ಬಂಗಲೆಯಿತ್ತು. ಎದುರುಗಡೆ ಒಂದು ಬೌದ್ಧರ ಮೊನಾಸ್ಟ್ರಿ ಇತ್ತು. ಹಸಿರು ಮರಗಳು ಕಡಿಮೆ. ಹಲವಾರು ಕಟ್ಟಡಗಳು ಮತ್ತು ಒಂದು ಶಾಲೆ ಆಸುಪಾಸಿನಲ್ಲಿಯೇ ಇದ್ದುವು. ಓಣಿಯಂತಹ ದಾರಿಯಲ್ಲಿ ನಡೆದಾಗ ಮುಖ್ಯರಸ್ತೆ ಸಿಕ್ಕಿತು. ಹಲವಾರು ರೆಸ್ಟಾರೆಂಟ್ ಗಳು ಕಾಣಿಸಿದರೂ, ಅಲ್ಲಿ ಮಾಂಸಾಹಾರ ಇರುವುದು ಖಾತ್ರಿ ಎನಿಸಿತ್ತು. ಒಂದಿಬ್ಬರಲ್ಲಿ ಸಸ್ಯಾಹಾರಿ ಹೋಟೆಲ್ ಇದೆಯೇ ಎಂದು ಕೇಳಿದಾಗ, ಸ್ವಲ್ಪ ಮುಂದೆ ಎಡಗಡೆಯ ‘ಚಾಂಗ್ ಸ್ಪಾ’ ರಸ್ತೆಯಲ್ಲಿ ಮಹಡಿ ಮೇಲೆ ‘ಚೈನೀಸ್ ಬೌಲ್’ ಎಂಬ ಹೋಟೆಲ್ ಇದೆ , ಅಲ್ಲಿ ಸಸ್ಯಾಹಾರ ಮಾತ್ರ ಸಿಗುತ್ತದೆ ಎಂದರು. ಇನ್ನೂ ಸ್ವಲ್ಪ ನಡೆದು, 15-20 ಮೆಟ್ಟಿಲನ್ನೇರಿ ‘ಚೈನೀಸ್ ಬೌಲ್’ ತಲಪಿದೆವು.
ಒಟ್ಟು ನಾವು ಸುಮಾರು ಒಂದುವರೆ ಕಿ.ಮೀ ನಡೆದಿರಬಹುದು. ಅಲ್ಲಿವರೆಗೂ ಸಹಜವಾಗಿಯೇ ಇದ್ದ ನನಗೆ ಮೆಟ್ಟಲುಗಳನ್ನೇರಿದಾಗ ಇದ್ದಕ್ಕಿದ್ದಂತೆ ವಿಪರೀತ ಸುಸ್ತು ಆಗಿ, ತಲೆ ಟನ್ ಭಾರ ಇರುವಂತೆ ಅನಿಸಿ, ಬವಳಿ ಬಂದಂತಾಗಿ, ಊಟದ ಮೇಜಿಗೆ ತಲೆಯಿಟ್ಟು ಸಾವರಿಸಿಕೊಳ್ಳಲು ಪ್ರಯತ್ನಿಸಿದೆ. ವೃತ್ತಿಯಿಂದ ವೈದ್ಯರಾದ ನಮ್ಮ ಭಾವನವರಿಗೆ ನನ್ನ ಸಮಸ್ಯೆ ಗೊತ್ತಾಗಿ, ಅವರು ಹೋಟೆಲ್ ನ ಪರಿಚಾರಿಕೆಗೆ ಕೂಡಲೇ ತುಸು ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸ, ಸಕ್ಕರೆ ಮತ್ತು ಉಪ್ಪು ಹಾಕಿ ತರಲು ಹೇಳಿದರು. ಆಕೆ ತಂದ ಪಾನಕವನ್ನು ಕುಡಿದ ತಕ್ಷಣವೇ ನಾನು ಮೊದಲಿನ ಉತ್ಸಾಹ ಪಡೆದೆ. ಪರ್ವತವ್ಯಾಧಿಗಳ ಪುಟ್ಟ ಝಲಕ್ ಆದ ದಿಢೀರ್ ‘ಕಡಿಮೆ ರಕ್ತದೊತ್ತಡ’ದ ಅನುಭವವಾಯಿತು!
‘ಚೈನೀಸ್ ಬೌಲ್’
ಹೋಟೆಲ್ ನ ಹೆಸರು ‘ಚೈನೀಸ್ ಬೌಲ್’ ಆದರೂ, ನಮಗೆ ಅಚ್ಚರಿಯಾಗುವಂತೆ ಅಲ್ಲಿ ಅಪ್ಪಟ ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಸಸ್ಯಾಹಾರಿ ತಿನಿಸುಗಳಿದ್ದುವು. ಭಾವ, ಮತ್ತು ಅಕ್ಕ ದೋಸೆ, ಇಡ್ಲಿ ತರಿಸಿ ತಿಂದರು. ಭಾರತಿ ತರಕಾರಿ ಹಾಕಿದ ಸೂಪ್ ಮತ್ತು ನಿಂಬೆಹಣ್ಣಿನ ಪಾನಕ ತರಿಸಿದರು . ಎಲ್ಲವೂ ರುಚಿಯಾಗಿಯೂ ಇದ್ದುವು, ದರವೂ ತೀರಾ ಹೆಚ್ಚೇನಲ್ಲ. ನಮ್ಮಲ್ಲಿಯ ಹೋಟೆಲ್ ನ ದರದಂತೆಯೇ ಇದ್ದುವು. ಒಟ್ಟಿನಲ್ಲಿ ಎಲ್ಲರಿಗೂ ಲೇಹ್ ನ ಇಡ್ಲಿ ಮತ್ತು ದೋಸೆ ಇಷ್ಟವಾಯಿತು.
ಅಷ್ಟರಲ್ಲಿ ನನ್ನ ಬಿ.ಪಿ. ಸಹಜವಾಗಿದ್ದುದರಿಂದ, ನನಗೆ ಅಲ್ಲಿನ ಸ್ಥಳೀಯ ತಿನಿಸನ್ನು ಪ್ರಯತ್ನಿಸಬೇಕು ಅನಿಸಿತ್ತು. ಲಡಾಕ್ ನ ಪರ್ವತ ಪ್ರದೇಶಗಳಲ್ಲಿ ‘ತುಕ್ಪಾ ( Thukpa)’ ಎಂಬ ಹೆಸರಿನ ನೂಡಲ್ಸ್ ಸೂಪ್ ಮತ್ತು ‘ಪೋಚಾ (Po Cha)’ ಎಂಬ ಹೆಸರಿನ ಬೆಣ್ಣೆ ಮತ್ತು ಉಪ್ಪು ಹಾಕಿದ ಚಹಾ ಪ್ರಸಿದ್ಧ ಎಂದು ಓದಿದ್ದೆ. ಸದ್ಯಕ್ಕೆ ‘ ತುಕ್ಪಾ ‘ದ ರುಚಿ ನೋಡೋಣ ಎಂದು ಅದನ್ನೂ ಆಯ್ಕೆ ಮಾಡಿದೆ. ನೂಡಲ್ಸ್ ಅಥವಾ ಪಾಸ್ತಾವನ್ನು ನೀರಿನಲ್ಲಿ ಬೇಯಿಸಿ, ಮಸಾಲೆ ಹಾಕಿ ಆಯ್ಕೆಗೆ ತಕ್ಕಂತೆ ತರಕಾರಿ ಅಥವಾ ಮಾಂಸವನ್ನು ಸೇರಿಸಿ ಕುದಿಸಿದರೆ ‘ ತುಕ್ಪಾ ‘ ಸಿದ್ಧವಾಗುತ್ತದೆ. ಸಾರಿನಲ್ಲಿ ಹಾಕಿರುವ ನೂಡಲ್ಸ್ ನಂತೆ ಕಾಣಿಸುವ ‘ತುಪ್ಕಾ’ವನ್ನು ಬಿಸಿಬಿಸಿಯಾಗಿ ಸೂಪ್ ನಂತೆ ಕುಡಿಯುವ/ತಿನ್ನುವ ಕ್ರಮ. ಅಲ್ಲಿನ ಹಿಮ-ಚಳಿ ಹವೆಗೆ , ಬಿಸಿಯಾದ ಉಪ್ಪು-ಖಾರ ರುಚಿಯ ಆಹಾರ ಚೆನ್ನಾಗಿಯೇ ಇದೆ ಅನಿಸಿತು.
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=36798
ಮುಂದುವರಿಯುವುದು..
-ಹೇಮಮಾಲಾ, ಮೈಸೂರು
ಲಡಾಕ್ ಪ್ರವಾಸ ಕಥನ ಸರಳ ಸುಂದರ ನಿರೂಪಣೆ ಯಿಂದ ಕೂಡಿ ಬರುತ್ತಿದೆ..ಧನ್ಯವಾದಗಳು ಗೆಳತಿ ಹೇಮಾ ಅವರಿಗೆ.
ಹೊಸ ರುಚಿಯ ಅನುಭವ! ಚೆನ್ನಾಗಿದೆ!
ಬಹಳ ಸುಂದರ. ಈ ಪ್ರವಾಸ ಕಥನ ಕೇವಲ ಓದಿಗಾಗಿ ಮಾತ್ರ ವಲ್ಲ, ಆ ಜಾಗಗಳನ್ನು ಭೇಟಿ ನೀಡುವಾಗ ಉತ್ತಮ ಗೈಡ್ ಕೂಡ ಆಗ ಬಲ್ಲುದು.
ಲಡಾಖ್ ನನಗೂ ಇಷ್ಟದ ಜಾಗ. ಕಥನ ಚೆನ್ನಾಗಿದೆ
ಚಂದದ ಚಿತ್ರಗಳೊಂದಿಗೆ, ಪ್ರವಾಸದನುಭವ ಲೇಖನ ಬಹಳ ಚೆನ್ನಾಗಿದೆ. ಜೂಲೇ…!!
ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.