ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 2
ನಾವು ಸೆಪ್ಟೆಂಬರ್ 11, 2019 ರಂದು ಸೌದಿ ಅರೇಬಿಯಾ ವಿಮಾನದಲ್ಲಿ ಬೆಂಗಳೂರಿನಿಂದ ಜೆಡ್ಡಾ ಮಾರ್ಗವಾಗಿ ಜೊಹಾನ್ಸ್‌ಬರ್ಗ್‌ಗೆ ಹೊರಟೆವು. ಸುಮಾರು ಹದಿನಾಲ್ಕು ಗಂಟೆಗಳ ಕಾಲ ವಿಮಾನ ಪಯಣ. ಜೆಡ್ಡಾದಲ್ಲಿ ಆರು ಗಂಟೆಗಳ ಕಾಲ ಕಾಯಬೇಕಿತ್ತು. ನಮ್ಮ ಸಹಪ್ರಯಾಣಿಕರಲ್ಲಿ ಹೆಚ್ಚು ಜನ ಹಜ್ ಯಾತ್ರೆಗೆ ಹೊರಟವರು. ಯಾವುದೇ ಭಿಡೆ ಇಲ್ಲದೆ ವಿಮಾನದಲ್ಲಿ ಅವರ ಓಡಾಟ, ಗಟ್ಟಿಯಾದ ಮಾತುಕತೆ – ಗಮನಿಸಿದರೆ ಅವರು ವಿಮಾನದಲ್ಲಿ ಪಯಣ ಮಾಡುತ್ತಿದ್ದೇವೆ ಎಂಬುದನ್ನೇ ಮರೆತಂತಿತ್ತು. ಜೆಡ್ಡಾದಿಂದ ಮೆಕ್ಕಾಗೆ ಎಂಟು ಗಂಟೆಗಳ ಕಾಲ ಬಸ್ ಪ್ರಯಾಣ ಎಂದು ಸಂಭ್ರಮದಿಂದ ಮಾತಾಡಿಕೊಳ್ಳುತ್ತಿದ್ದರು.
ಇನ್ನು ಜೆಡ್ಡಾ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗಳನ್ನು ಮರೆಯುವಂತೆಯೇ ಇಲ್ಲ. ಪ್ರಯಾಣಿಕರು ತಮ್ಮ ಜಾಕೆಟ್, ಬೆಲ್ಟ್, ಶೂ, ಮೊಬೈಲ್, ಲ್ಯಾಪ್ ಟಾಪ್, (ಕೆಲವು ಕಡೆ ಸರ, ಬಳೆಗಳನ್ನೂ ತೆಗೆದಿಡಲು ಹೇಳುತ್ತಾರೆ) – ಎಲ್ಲವನ್ನೂ ಟ್ರೇನಲ್ಲಿ ಇಟ್ಟು ಸ್ಕ್ಯಾನ್ ಮಾಡಲು ಇಡಬೇಕು. ಆದರೆ ಗಿರಿಜಕ್ಕ ತನ್ನ ಕುತ್ತಿಗೆಗೆ ನೇತು ಹಾಕಿಕೊಂಡಿದ್ದ ಮೊಬೈಲ್ ತೆಗೆದಿಡಲು ಮರೆತುಬಿಟ್ಟಿದ್ದಳು. ಅವಳು ಸೆಕ್ಯುರಿಟಿ ಚೌಕಟ್ಟಿನಲ್ಲಿ ಹಾದು ಹೋಗುವಾಗ ಟ್ರೀಂ, ಟ್ರೀಂ ಎಂಬ ಸದ್ದಾಯಿತು. ತಕ್ಷಣ ಅಲ್ಲಿದ್ದ ಅಧಿಕಾರಿಗಳು ಅವಳು ಆತಂಕವಾದಿಯೇನೋ ಎನ್ನುವ ಹಾಗೆ ದೀರ್ಘ ತಪಾಸಣೆ ಮಾಡಿದರು. ಅವಳ ಬೆಳ್ಳಿಯ ಕರಡಿಗೆ (ಲಿಂಗಾಯಿತರು ಅದರಲ್ಲಿ ತಾವು ಪೂಜಿಸುವ ಇಷ್ಟಲಿಂಗವನ್ನು ಇಡುತ್ತಾರೆ). ಮೊಬೈಲ್ ಎಲ್ಲಾ ತೆಗೆಸಿದರು. ಎಲ್ಲಾ ತಪಾಸಣೆ ನಡೆದ ನಂತರ ಅವರು ಕರಡಿಗೆ, ಮೊಬೈಲ್ ಕೊಡಲು ನಿರಾಕರಿಸಿದರು. ಅಕ್ಕ, ನನ್ನ ದೇವರನ್ನು ಕೊಡಿ ಎಂದು ಕೂಗುತ್ತಿದ್ದಳು. ಅವರು, ಇಲ್ಲ, ಕೊಡಲ್ಲ ನೀವು ಇಲ್ಲಿಂದ ಹೋಗಿ ಅಲ್ಲಿದ್ದವರೆಲ್ಲಾ ನಿಂತಲ್ಲಿಯೇ ನಿಂತು ತಮಾಷೆ ನೋಡುತ್ತಿದ್ದರು. ನಾವು ಗಾಂಧಿ ನಾಡಿನಿಂದ ಬಂದವರಲ್ಲವೇ? ಸತ್ಯಾಗ್ರಹಿಗಳಂತೆ ಅವರು ನಮ್ಮ ವಸ್ತುಗಳನ್ನು ಕೊಡುವ ತನಕ ಅಲ್ಲಿಂದ ಕದಲಿಲ್ಲ.
ನಾವು ಜೊಹಾನ್ಸ್‌ಬರ್ಗ್‌ನ ಓ.ಆರ್. ತಾಂಬೋ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದಾಗ ಮುಂಜಾನೆ 8 ಗಂಟೆ. ಓ.ಆರ್. ತಾಂಬೋ – ಅಪರ್‌ಥೇಡ್ ವಿರುದ್ಧ ಹೋರಾಡಿದ ಮಹಾನಾಯಕ ಹಾಗೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು.
ಜೊಹಾನ್ಸ್‌ಬರ್ಗ್ ಪ್ರಿಟೋರಿಯಾದಿಂದ ಸುಮಾರು ಐವತ್ತೈದು ಕಿಮೀ ದೂರದಲ್ಲಿದೆ. ಇಲ್ಲಿನ ವಿಶಾಲವಾದ ರಸ್ತೆಗಳೂ, ರಸ್ತೆಯ ಎರಡೂ ಬದಿಯಲ್ಲಿದ್ದ ಗಗನಚುಂಬಿ ಕಟ್ಟಡಗಳೂ, ವೇಗವಾಗಿ ಚಲಿಸುತ್ತಿದ್ದ ಐಷಾರಾಮಿ ಕಾರುಗಳೂ -ಇಲ್ಲಿನ ಶ್ರೀಮಂತಿಕೆಯ ವೈಭವವನ್ನು ಪ್ರದರ್ಶಿಸುತ್ತಿದ್ದರೆ, ಊರ ಹೊರಗಿನ ಮೈದಾನದಲ್ಲಿದ್ದ ನೂರಾರು ಷೆಡ್‌ಗಳು – ನಿರುದ್ಯೋಗಿಗಳ, ಹಸಿದವರ ಬದುಕಿನ ಬವಣೆಯನ್ನು ತೋರುತ್ತಿದ್ದವು. ನಾವು ಮನೆ ತಲುಪಿದಾಗ ಅಲ್ಲಿನ ರಕ್ಷಣಾ ವ್ಯವಸ್ಥೆ ನೋಡಿ ದಂಗಾದೆವು. ಆ ವಸತಿ ಸಮುಚ್ಛಯದ ಮುಖ್ಯದ್ವಾರದಲ್ಲಿ ಒಬ್ಬ ಬಂದೂಕುಧಾರಿ ಮನೆಯ ಬೀಗದ ಕೈ ಅಥವಾ ಕೋಡ್ ನಂಬರ್ ತಿಳಿಸಿದರೆ ಮಾತ್ರ ಗೇಟನ್ನು ತೆರೆಯುತ್ತಾನೆ. ಸುತ್ತ ಎತ್ತರವಾದ ಕೋಟೆಯಂತಹ ಕಾಪೌಂಡ್, ಅದರ ಮೇಲೆ ಕರೆಂಟ್ ಹಾಯಿಸಿದ ತಂತಿಬೇಲಿ. ಎಲ್ಲಿಯೂ ಬಿಡಿ ಬಿಡಿಯಾದ ಮನೆಗಳೇ ಕಾಣಲಿಲ್ಲ. ಎಲ್ಲ ಮನೆಗಳೂ ಏಳು ಸುತ್ತಿನ ಕೋಟೆಯೊಳಗೆ ಇದ್ದಂತೆ ಕಂಡವು.
ಅಲ್ಲಿ ನಾವು ಭೇಟಿ ಮಾಡಿದ ಮೊದಲ ಸ್ಥಳ ಪೊಲೀಸ್ ಠಾಣೆ. ನಮ್ಮ ಪಾಸ್‌ಪೋರ್ಟ್ ಕಾಪಿಯ ಮೇಲೆ ಅವರ ಸಹಿ ಮತ್ತು ಸೀಲ್ ಹಾಕಿಸಿಕೊಂಡು ಬಂದೆವು. ಕಾರಣ ಪ್ರವಾಸಿಗರ ಪಾಸ್‌ಪೋರ್ಟ್‌ನ್ನು ಯಾವಾಗ ಬೇಕಾದರೂ ಪೊಲೀಸ್ ಅಧಿಕಾರಿಗಳು ತಪಾಸಣೆ ಮಾಡಬಹುದು. ಪಾಸ್‌ಪೋರ್ಟ್ ಇಲ್ಲದಿದ್ದರೆ ದಂಡ ಹಾಕಬಹುದು ಅಥವಾ ಜೈಲಿಗೂ ಕಳುಹಿಸಬಹುದು. ಆದರೆ ಪಾಸ್‌ಪೋರ್ಟ್ ಪಿಕ್‌ಪಾಕೆಟ್ ಆಗುವ ಆತಂಕ ಇದ್ದುದರಿಂದ ಈ ವ್ಯವಸ್ಥೆ.
ಸಂಜೆ ತರಕಾರಿ ಹಾಗೂ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಮಾಲ್‌ಗೆ ಹೋದೆವು. ದಾರಿಯಲ್ಲಿ ಹಾದು ಹೋಗುವಾಗ ‘ಟ್ರ್ರಾಫಿಕ್ ಸಿಗ್ನಲ್’ ಬಳಿ ವಿಚಿತ್ರವಾದ ವ್ಯವಸ್ಥೆ ಕಂಡೆವು. ಒಮ್ಮೆ ಒಂದು ರಸ್ತೆಯಿಂದ ಒಂದು ವಾಹನ ಚಲಿಸಿದರೆ ಎರಡನೇ ವಾಹನ – ಪಕ್ಕದ ರಸ್ತೆಯಿಂದ. ಮೂರನೆಯದು- ಇನ್ನೊಂದು ಬದಿಯಿಂದ ಹಾಗೂ ನಾಲ್ಕನೆಯದು ಮತ್ತೊಂದು ರಸ್ತೆಯಿಂದ ಚಲಿಸುತ್ತಿದ್ದವು. ಮಾಲ್ ಬಳಿ ಒಬ್ಬ ಬಂದೂಕುಧಾರಿ ನಿಂತಿದ್ದ. ಇಲ್ಲಿನ ಎಲ್ಲಾ ಮಾಲ್‌ಗಳು ಹಾಗೂ ಪ್ರವಾಸೀ ತಾಣಗಳ ಮುಂದೆ ಗನ್ ಹಿಡಿದ ಪೊಲೀಸರು ಗಸ್ತು ತಿರುಗುತ್ತಲೇ ಇರುತ್ತಾರೆ. ಮಾರ್ಕೆಟ್‌ನಲ್ಲಿ ತರಕಾರಿಗಳ ಗಾತ್ರ ಅಲ್ಲಿನ ಜನರ ಗಾತ್ರದೊಂದಿಗೆ ಪೈಪೋಟಿ ನಡೆಸುವಂತಿದ್ದವು. ಬೆಳ್ಳುಳ್ಳಿ ಈರುಳ್ಳಿಯಷ್ಟು, ಈರುಳ್ಳಿ ಮೋಸಂಬಿಯಷ್ಟು, ಎಲೆಕೋಸು ಒಂದು ದೊಡ್ಡ ಕುಂಬಳಕಾಯಿಯಷ್ಟು ಹೀಗೆ ಎಲ್ಲವೂ ಬೃಹತ್ತಾದ ಗಾತ್ರ ಹೊಂದಿದ್ದವು. ಮಾರ್ಕೆಟ್ಟಿನಿಂದ ಹಿಂದಿರುಗಿದ ಬಳಿಕ ವಾಗೀಶ ಎಚ್ಚರಿಕೆ ನೀಡುತ್ತಿದ್ದ. ‘ಯಾರೂ ಕಾಂಪೌಂಡಿನಿಂದ ಹೊರಗೆ ಹೋಗಬೇಡಿ. ಎಲ್ಲಿಗೆ ಹೋದರೂ ಕಾರಿನಲ್ಲಿಯೇ ಹೋಗಬೇಕು. ಒಂಟಿಯಾಗಿ ಎಲ್ಲೂ ತಿರುಗಾಡಲು ಹೋಗಬೇಡಿ. ಆಯುಧಗಳನ್ನು ಕೊಳ್ಳಲು -ಮುಕ್ತ ಅವಕಾಶ ಇರುವುದರಿಂದ ಇಲ್ಲಿ ಕೊಲೆ, ಸುಲಿಗೆ ಹೆಚ್ಚು. ಈಗಂತೂ ನಮಗೆ ಯಾರನ್ನು ನೋಡಿದರೂ ದರೋಡೆಗಾರ ಅಥವಾ ಕೊಲೆಗಾರನಂತೆಯೇ ಕಾಣುತ್ತಿದ್ದರು. ಇಲ್ಲಿ ಪ್ರವಾಸಿಗರು ಸಾರ್ವಜನಿಕ ಸಾರಿಗೆಯನ್ನು ಬಳಸುವುದೇ ಇಲ್ಲ.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32402
-ಡಾ.ಗಾಯತ್ರಿದೇವಿ ಸಜ್ಜನ್
ಈಗಿನ ಪರಿಸ್ಥಿತಿಯಲ್ಲಿ ಇನ್ನು ನಮ್ಮ ಪ್ರವಾಸ ಕನಸಿನ ಮಾತೇ ಸರಿ. ಅಂದುಕೊಂಡಿರುವ ನನಗೆಈ ಪ್ರವಾಸ ಕಥನ ಬಹಳ ಮುದನೀಡುತ್ತಿದೆ.ಧನ್ಯವಾದಗಳು ಮೇಡಂ.
ವಂದನೆಗಳು
ಪ್ರತಿಯೊಂದು ವಿಚಾರ ವನ್ನು ಉಲ್ಲೇಖಿಸಿದ ರೀತಿ ತುಂಬಾ ಚೆನ್ನಾಗಿದೆ, ನಾವು ಅಲ್ಲೆ ಇದ್ದು ಎಲ್ಲವನ್ನು ನೋಡಿದ್ದೇವೋ ಏನೋ ಅನ್ನುವ ಭಾವ ಬರುತ್ತದೆ ಮನಸಿಗೆ ಓದುತ್ತಾ ಹೋದಂತೆ
ನಾವೂ ನಿಮ್ಮೊಂದಿಗೆ ಸುತ್ತಾಡಿದೆವು ಮೇಡಂ.. ಸೊಗಸಾದ ನಿರೂಪಣೆಯ ಪ್ರವಾಸ ಕಥನ ಇಷ್ಟವಾಯ್ತು.
ಮುಂದಿನ ಸಂಚಿಕೆಗಾಗಿ ಕಾಯುವಂತೆ ಮಾಡಿರುವ ಪ್ರವಾಸ ಕಥನ. ಚೆನ್ನಾಗಿ ಮೂಡಿಬರುತ್ತಿದೆ.