2011 ರ ಡಿಸೆಂಬರ್ ತಿಂಗಳಿನಲ್ಲಿ, ಹಿಮಾಲಯದ ನಿಸರ್ಗ ಸಿರಿಯ ಮಡಿಲಿನಲ್ಲಿರುವ ನೇಪಾಳದ ಕಟ್ಮಂಡುವಿಗೆ ಹೋಗಿದ್ದೆವು. ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು. ಪಶುಪತಿನಾಥ ದೇವಾಲಯ ಮತ್ತು ಇನ್ನೂ ಕೆಲವು ಸ್ಥಳಗಳನ್ನು ವೀಕ್ಷಿಸಿದೆವು.
ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ ನದಿ ದಂಡೆಯ ಮೇಲೆ ಇರುವ ಈ ದೇವಸ್ಥಾನವು ಸುಮಾರು ಕ್ರಿ.ಶ. 400 ರ ಆಸುಪಾಸಿನಲ್ಲಿ ಕಟ್ಟಲ್ಪಟ್ಟಿತು ಎಂಬ ನಂಬಿಕೆ. ನೇಪಾಳದ ‘ಲಿಂಚ್ಚಾವಿ’ ಮನೆತನದ ದೊರೆಯಾದ ‘ಸುಪಾಸ್ ಪಡೆವ’ ನ ಕಾಲದಲ್ಲಿ ಇದನ್ನು ಕಟ್ಟಲಾಯಿತು. ದಂತಕಥೆಗಳ ಪ್ರಕಾರ ಒಮ್ಮೆ ಶಿವನು ಕೃಷ್ಣ ಮೃಗದ ರೂಪ ತಾಳಿ ಬಾಗ್ಮತಿ ನದೀ ತೀರದಲ್ಲಿ ವಿಹರಿಸುತ್ತಿದ್ದನು. ಅವನು ತನ್ನ ದೈವರೂಪಕ್ಕೆ ಮರಳಿ ತಮ್ಮನ್ನು ಕಾಪಾಡಾಬೇಕೆಂಬ ಹಂಬಲದಿಂದ ದೇವತೆಗಳು ಬೆಂಬೆತ್ತಿದರು. ದೇವತೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ಮೃಗ ರೂಪಿಯಾದ ಶಿವನು ಓಡಿದಾಗ ಮೃಗದ ಒಂದು ಕೋಡು ಮುರಿದು ಬಿತ್ತು. ಅದು ಪಶುಪತಿನಾಥ ಶಿವಲಿಂಗವಾಯಿತು. ಕಾಲಾನಂತರದಲ್ಲಿ ದನಗಾಹಿಯೊಬ್ಬ ತನ್ನ ಹಸುವೊಂದು, ಭೂಮಿಗೆ ಹಾಲು ಸುರಿಸುವುದನ್ನು ನೋಡಿ ಅಚ್ಚರಿಗೊಂಡು ಭೂಮಿಯನ್ನು ಅಗೆದಾಗ ಅಲ್ಲಿ ಶಿವಲಿಂಗ ದೊರಕಿತು. ಈ ಜಾಗದಲ್ಲಿ, ಇಂದಿನ ಪಶುಪತಿನಾಥ ದೇವಾಲಯವಿದೆ.
.
ನಾವು ಅಲ್ಲಿಗೆ ತಲಪಿದಾಗ ತಾಪಮಾನ 2-3 ಡಿಗ್ರಿ ಇದ್ದಿರಬಹುದು. ಅಂಥಹ ಚಳಿಯಲ್ಲಿ ಬರಿಗಾಲಿನಲ್ಲಿ ದೇವಸ್ಥಾನದ ಒಳ ಹೊಕ್ಕೆವು. ಅಲ್ಲಿ ಛಾಯಾಗ್ರಹಣ ನಿಷಿದ್ಧವಾಗಿತ್ತು. ಅಷ್ಟಾಗಿ ಜನ-ಜಂಗುಳಿಯಿದ್ದಿರಲಿಲ್ಲ, ಹಾಗಾಗಿ ನಮಗೆ ಅನುಕೂಲವಾಯಿತು. ಸುತ್ತಲೂ ಮರದ ಶಿಲ್ಪದಿಂದ ಕೂಡಿದ ಪ್ರಾಂಗಣ. ಗರ್ಭಗುಡಿಗೆ ನಾಲ್ಕು ಬಾಗಿಲುಗಳು. ಇಲ್ಲಿ ಶಿವಲಿಂಗಕ್ಕೆ ನಾಲ್ಕು ಮುಖಗಳು. ಪ್ರದಕ್ಷಿಣಾಕಾರವಾಗಿ ಸಾಗುವಾಗ, ನಾಲ್ಕೂ ಬಾಗಿಲುಗಳಿಂದ, ತೀರಾ ಸನಿಹದಿಂದ ಶಿವಲಿಂಗವನ್ನು ನೋಡಲು ಸಾಧ್ಯವಾಗುತ್ತದೆ.
ಬಹುಶ: ಅಲ್ಲಿ ಅರ್ಚನೆ ಚೀಟಿ ಮಾಡಿಸುವ ಪದ್ಧತಿ ಇಲ್ಲ, ಅಥವಾ ಇದ್ದರೂ ನಮಗೆ ಗೊತ್ತಾಗಲಿಲ್ಲ . ನಮ್ಮ ತಂಡ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದ ಅರ್ಚಕರು ಕನ್ನಡದಲ್ಲಿ ಪ್ರತಿಕ್ರಿಯಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯವೆಂದು ಗೊತ್ತಾಯಿತು. ಪಶುಪತಿನಾಥನ ಸನ್ನಿಧಿಯಲ್ಲಿ ಪೂಜೆ ಮಾಡುವ ಅಧಿಕಾರ ಅವರಿಗೆ ತಲೆತಲಾಂತರದಿಂದ, ಬಂದುದಂತೆ. ಅವರ ವೇಷ-ಭೂಷಣವೂ ವಿಭಿನ್ನವಾಗಿತ್ತು. ಅರಶಿನ ಬಣ್ಣದ ಪಂಚೆಯುಟ್ಟು, ಅದೇ ಬಣ್ಣದ ಉತ್ತರೀಯವನ್ನು ತಲೆಗೂ ಹೊದ್ದು, ರುದ್ರಾಕ್ಷಿ ಮಾಲೆಯನ್ನು ತಲೆಗೆ ’ರಿಂಗ್’ ನಂತೆ ಸುತ್ತಿದ್ದರು. ಕತ್ತಿಗೆ ರುದ್ರಾಕ್ಷಿ ಹಾರ. ಕೈಗಳಿಗೂ ರುದ್ಕ್ರಾಕ್ಷಿ ಹಾರದ ’ಬ್ರೇಸ್ ಲೆಟ್’. ಶಂಕರಾಚಾರ್ಯನ್ನೂ, ಬೌದ್ಧರ ಲಾಮಾರನ್ನೂ ಏಕಕಾಲಕ್ಕೆ ನೆನಪಾಯಿತು.
ಪೂಜೆಯ ಆಚರಣೆಯೂ ವಿಭಿನ್ನವಾಗಿತ್ತು. ಹಾಲು ತುಂಬಿಸಿದ್ದ ಒಂದು ಬೆಳ್ಳಿಯ ಚೊಂಬನ್ನು ನಮಗೆ ಸ್ಪರ್ಶಿಸಲು ಹೇಳಿದರು. ನಮ್ಮ ಹೆಸರು-ಗೋತ್ರವನ್ನೂ ಕೇಳಿ , ತಾವು ಉಚ್ಛರಿಸಿದರು. ಆಮೇಲೆ ಹಾಲನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಮಗೆ ಗಂಧ ಪ್ರಸಾದ, ಕಲ್ಲು ಸಕ್ಕರೆ ಕೊಟ್ಟರು. ಜತೆಗೆ, ಶಿವಲಿಂಗದ ಮೇಲೆ ಶೋಭಿಸುತ್ತಿದ್ದ ಒಂದು ರುದ್ರಾಕ್ಷಿ ಹಾರವನ್ನು ನಮ್ಮ ಕೊರಳಿಗೆ ಆಶೀರ್ವಾದಪೂರ್ವಕವಾಗಿ ಹಾಕಿದರು. ಅನಿರೀಕ್ಷಿತವಾಗಿ, ರುದ್ರಾಕ್ಷಿ ಹಾರ ನನ್ನ ಕೊರಳಿಗೆ ಬಿದ್ದಾಗ ಧನ್ಯತಾ ಭಾವ ಮೂಡಿತು.
ಪಶುಪತಿನಾಥ ದೇವಾಲಯದ ಇನ್ನೊಂದು ಆಕರ್ಷಣೆ 501 ಶಿವಲಿಂಗಗಳಿಗೆ ಪ್ರದಕ್ಷಿಣೆ ಬರುವುದು. ಒಂದು ಆವರಣದಲ್ಲಿ, 501 ಶಿವಲಿಂಗಗಳನ್ನು ಸಾಲಾಗಿ ಜೋಡಿಸಿದ್ದಾರೆ. ಭಕ್ತರು ’ಓಂ ನಮ: ಶಿವಾಯ’ ಎಂದು ಸ್ತುತಿಸುತ್ತಾ, ಪ್ರತಿಯೊಂದು ಶಿವಲಿಂಗವನ್ನೂ ಸ್ಪರ್ಶಿಸುತ್ತಾ, ಸಾಲಾಗಿ ಹೋಗುವರು. ಅಲ್ಲಿ ಕೆಲವು ಸಾಧುಗಳು ಕುಳಿತಿದ್ದರು. ಭಕ್ತರ ಹಣೆಗೆ ಅರಶಿನ ಅಥವಾ ಕುಂಕುಮದ ಬೊಟ್ಟು ಇಡುವವರು ಇಬ್ಬರಿದ್ದರು. ರುದ್ರಾಕ್ಷಿಯನ್ನು ಹಂಚಿದವರೊಬ್ಬರು. ಅರಶಿನ- ಕುಂಕುಮದ ದಾರವನ್ನು ಕೈಗೆ ಕಟ್ಟಿದವರು ಇನ್ನೊಬ್ಬರು. ಈ ಸಾಧುಗಳು ತಮ್ಮ ಮುಂದೆ ಇರಿಸಲಾದ ತಟ್ಟೆಗೆ ದಕ್ಷಿಣೆ ಹಾಕಲು ಅಕಸ್ಮಾತ್ತಾಗಿ ನಾವು ಮರೆತರೆ, ಗದರುವ ಧ್ವನಿಯಲ್ಲಿ ನಮ್ಮ ಗಮನ ಸೆಳೆಯುತ್ತಿದ್ದರು!
.
ದೇವಸ್ಥಾನದ ಸನಿಹದಲ್ಲಿ ಹರಿಯುವ ಬಾಗ್ಮತಿ ನದಿ ತೀರದಲ್ಲಿ, ಹಿಂದುಗಳು ಅಂತ್ಯಕ್ರಿಯೆಯನ್ನು ನಡೆಸುತ್ತಾರೆ. ಉರಿಯುತ್ತಿರುವ ಚಿತೆಗಳು ಮತ್ತು ಅಂತ್ಯಕ್ರಿಯೆಯ ವಸ್ತುಗಳಿಂದ ಹಾಗೂ ನದಿಯ ಆಸುಪಾಸು ತೀರಾ ಕಲುಷಿತಗೊಂಡಿದೆ.ನೇಪಾಳೀಯರ ಪಾಲಿಗೆ ಬಾಗ್ಮತಿ ನದಿಯು ನಮ್ಮ ಗಂಗಾನದಿಯಂತೆ ಪವಿತ್ರ,ಪೂಜನೀಯ.
.
ಆಸ್ತಿಕರಿಗಾಗಿ,ಇಲ್ಲಿ ವಿವಿಧ ಗಾತ್ರದ ರುದ್ರಾಕ್ಷಿ ಹಾರಗಳು,ಶಿವಲಿಂಗಗಳು ಮಾರಾಟಕ್ಕೆ ಲಭ್ಯ. ಕೇವಲ ಗಂಡಕಿ ನದಿಯಲ್ಲಿ ಸಿಗುವ ಪವಿತ್ರ ‘ಸಾಲಿಗ್ರಾಮ’ವೂ ಲಭಿಸುತ್ತದೆ.
ಕಟ್ಮಂಡು ಕಣಿವೆಯಲ್ಲಿ…ನಮೋ ಪಶುಪತಿನಾಥ!
good feature writing with background information and nice picture.
ಧನ್ಯವಾದಗಳು.
ಅಲ್ಲಿನ ವಿವರ ಚೆನ್ನಾಗಿದೆ. ದಕ್ಷಿಣೆ ಹಾಕಲು ಮರೆತರೆ ಗದರುವುದು ನಮ್ಮಲ್ಲಿ ಇಲ್ಲ. ಪುರಿಯ ಪ್ರಸಿದ್ದ ಜಗನ್ನಾಥ ಕ್ಷೇತ್ರದಲ್ಲಿ ಜೋಡಿಸಿರುವ ಅವಳಿ ಬೆತ್ತದಿಂದ ನೆತ್ತಿಗೆ ಹೊಡೆದು ಆಶೀರ್ವಾದ ಮಾಡಿದೆ ನೂರು ರೂ ಕೊಡು ಅಂತ ಪಂಡಾ ನನಗೆ ದಬಾಯಿಸಿದ್ದ .ನೆತ್ತಿಯ ನೋವು ತಡೆಯದೆ ವಾಪಾಸ್ ಗದರಿಸಿದ್ದೆ .ವಾಚಾಮಗೋಚರವಾಗಿ ನನ್ನ ಬೈದ .ನನ್ನ ಹಿಂದೆ ಇದ್ದ ಮಹಿಳೆ ಅದನ್ನು ಕೇಳಿ ಹೆದರಿಯೇ ಅವನ ಬೆತ್ತದಿಂದ ಹೊಡೆಸಿಕೊಂಡು 200rs ಕೊಟ್ಟಿದ್ದರು .ಮರೆಯಲಾಗದ ಕಹಿ ನೆನಪು .
ನೇಪಾಲದ ಪಶುಪತಿನಾಥನ ಅರ್ಚಕರಾದ ಶ್ರೀ ರಾಮ ಕಾರಂತರು ನನ್ನೂರಿನವರು, ಬಾಲ್ಯ ಸ್ನೇಹಿತರು .
ಧನ್ಯವಾದಗಳು.
ಪುರಿಯ ‘ಆಶೀರ್ವಾದ ಪದ್ಧತಿ’ ನಿಜಕ್ಕೂ ವಿಚಿತ್ರ!. ಇಂತಹ ಸಂಪ್ರದಾಯಗಳನ್ನು ಯಾಕಾದರೂ ಜಾರಿಗೆ ತರುತ್ತಾರೋ.
Good article to understand our neighbouring country culture and tradition.
ಅತ್ಯುತ್ತಮ ಮಾಹಿತಿ ,ಅಲ್ಲಿನ ಅರ್ಚಕರಿಗೂ …ನಮ್ಮ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗೆ ಸಂಬಂಧವಿದೆ .ನಾವೂ..ಅವ್ರ ಮನೆಗೆ ಹೋಗಿದ್ದೆವು.
ಪಶುಪತಿನಾಥ ನಿಮ್ಮೆಲ್ಲಾ ಇಷ್ಟಾರ್ಥಗಳ ನೆರವೇರಿಸಲಿ …
ಮಾಹಿತಿಪೂರ್ಣ ಬರಹ. ನೇಪಾಳ ಖಂಡಿತವಾಗಿಯೂ ನೋಡಲೇ ಬೇಕಾದ ಜಾಗವೆಂದೆನಿಸಿತು.
ಧನ್ಯವಾದಗಳು 🙂