ಅಕ್ಕ- ತಂಗಿಯರ ಕೊಳ
ದಕ್ಷಿಣದ ಬದರಿ ಎಂದು ಕರಯಲ್ಪಡುವ ಮೇಲುಕೋಟೆಯಲ್ಲಿ ಆಸಕ್ತರಿಗೆ ಕುತೂಹಲ ಮೂಡಿಸುವ ವಿಶೇಷಗಳು ಸಾಕಷ್ಟಿವೆ. ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣ ದಾಟಿ ಪಾಂಡವಪುರ ದಾರಿಯಾಗಿ ಸುಮಾರು 55 ಕಿ.ಮೀ ಪ್ರಯಾಣಿಸಿದರೆ ಮೇಲುಕೋಟೆ ತಲಪಬಹುದು. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸಕ್ಕೆ ತಕ್ಕುದಾದ ಜಾಗ ಇದು.ಮೇಲುಕೋಟೆಯ ಬೆಟ್ಟದ ಮೇಲೆ , ಯೋಗನರಸಿಂಹನ ದೇವಾಲಯವಿದೆ. ಇದನ್ನು ತಲಪಲು ಸುಮಾರು 350 ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿನ ಯೋಗನರಸಿಂಹನನ್ನು ಪ್ರಹ್ಲಾದನೇ ಸ್ಥಾಪಿಸಿದನೆಂಬ ಪ್ರತೀತಿ.
ಬೆಟ್ಟದ ಮೇಲೆ ನಿಂತರೆ ಕೆಳಗಿನ ದೃಶ್ಯ ಸುಮನೋಹರ. ಒಂದು ಕಡೆಯಲ್ಲಿ ವಿಶಾಲವಾದ ಪುಷ್ಕರಿಣಿ ಅಥವಾ ಕಲ್ಯಾಣಿ. ಇದಕ್ಕೆ ನಾಲ್ಕೂ ಕಡೆಯಿಂದ ಮೆಟ್ಟಿಲುಗಳಿವೆ. ಸುತ್ತಲೂ ಕಲ್ಲಿನ ಮಂಟಪವೂ ಇದೆ. ಇಲ್ಲಿ ಆಗಾಗ್ಗೆ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತದೆ. ನಾನೇನು ಕಡಿಮೆ ಎಂಬಂತೆ ದೂರದಲ್ಲಿ ಕಾಣಿಸುವ, ನೈಸರ್ಗಿಕವಾಗಿ ರಚನೆಗೊಂಡ ವಿಶಾಲವಾದ ‘ತೊಣ್ಣೂರು ಕೆರೆ’. ಇವಲ್ಲದೆ, ಹೆಸರು ಗೊತ್ತಿಲ್ಲದ ಇನ್ನೂ ಕೆಲವು ಚಿಕ್ಕ-ಪುಟ್ಟ ಕೊಳಗಳು.
ಆ ಅಜ್ಜಿಯನ್ನು ಮಾತನಾಡಿಸಿದಾಗ ಅವರು ಹೇಳಿದ ಸ್ವಾರಸ್ಯಕರವಾದ ಕಥೆ ಹೀಗಿತ್ತು. “1000 ವರ್ಷಗಳ ಹಿಂದೆ ಇಲ್ಲಿ ಚೆಲುವರಸ ಎಂಬ ಚೋಳ ರಾಜನಿದ್ದ. ಅವನಿಗೆ ಇಬ್ಬರು ಪತ್ನಿಯರು, ಅವರು ಅಕ್ಕ-ತಂಗಿಯರು ಕೂಡ. ಒಂದು ದಿನ ರಾಜ ಇಬ್ಬರೂ ಪತ್ನಿಯರಿಗೂ ಒಂದಷ್ಟು ದುಡ್ಡು ಕೊಟ್ಟು ಲೋಕ ಮೆಚ್ಚುವ ಕೆಲಸ ಮಾಡಿಸಿರಿ ಅಂದನಂತೆ. ಅಕ್ಕ ತಂಗಿಯರಿಬ್ಬರೂ ಕೊಳ ಕಟ್ಟಿಸಲು ಮುಂದಾದರು. ಜಕ್ಕಣಾಚಾರಿಯನ್ನು ಕರೆಸಿದರು. ಅಕ್ಕ ಕೆಲಸಗಾರರನ್ನು ಚೆನ್ನಾಗಿ ನೊಡಿಕೊಳ್ಳಲಿಲ್ಲ, ದೇವರ ನೇಮವನ್ನೂ ಸರಿಯಾಗಿ ಮಾಡಲಿಲ್ಲ. ಹಾಗಾಗಿ ಸ್ವಾಮಿಗೆ ಕೋಪ ಬಂತು. ಅಕ್ಕ ಕಟ್ಟಿಸಿದ ಕೊಳದ ನೀರು ಕಪ್ಪಾಗಿತ್ತು. ಆದರೆ ತಂಗಿ, ಶ್ರದ್ಧಾ-ಭಕ್ತಿಯಿಂದ ಸ್ವಾಮಿಯನ್ನು ಪೂಜಿಸಿ ಕೊಳ ಕಟ್ಟಿಸಿದಳು, ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಳು. ಕೊಳದ ನೀರು ಎಳನೀರಿನಂಗಿತ್ತು. ಆ ಕೊಳದ ನೀರನ್ನು ತೀರ್ಥ, ಪೂಜೆಗೆ ಬಳಸುತ್ತಾರೆ. ಆಮೇಲೆ ಅಕ್ಕನಿಗೆ ಪಶ್ಚಾತ್ತಾಪವಾಗಿ ಸ್ವಾಮಿಯನ್ನು ಬೇಡಿಕೊಂಡಾಗ ಆತನು, ಅಕ್ಕನ ಕೊಳದ ನೀರನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬಟ್ಟೆಬರೆಗಳನ್ನು ತೊಳೆಯಲು ಉಪಯೋಗಿಸಿವಂತೆಯೂ ಆ ಮೂಲಕ ಆಕೆಯ ಪಾಪ ಪರಿಹಾರವಾಗುತ್ತದೆಯೆಂದೂ ಅನುಗ್ರಹಿಸಿದನಂತೆ. ಹೀಗೆ ಅಕ್ಕನ ಕೆರೆಯ ನೀರು ಬಟ್ಟೆಬರೆ ತೊಳೆಯಲು ಉಪಯೋಗವಾಗುತ್ತದೆ.”
ಎರಡು ಕೊಳಗಳ ನೀರು ಸುಮಾರಾಗಿ ಒಂದೇ ತರಹ ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದರೆ ತಂಗಿಯ ಕೊಳದ ನೀರು ಹೆಚ್ಚು ಪಾರದರ್ಶಕವಾಗಿ ಕಾಣುತ್ತಿತ್ತು. ಅಕ್ಕನ ಕೊಳದನೀರು ಸ್ವಲ್ಪ ಹಸಿರಿನ ಛಾಯೆ ಹೊಂದಿತ್ತು. ಪ್ರಸ್ತುತ ಯಾವುದೇ ಕೋಟೆಗಳು ಇರದ ಇಲ್ಲಿಗೆ ಮೇಲುಕೋಟೆ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. ‘ಮೇಲುಕೊಳ’ ಎಂದಿದ್ದರೆ ಅನ್ವರ್ಥನಾಮವಾಗುತ್ತಿತ್ತು.
ಅಜ್ಜಿಯ ಕಥೆ ಚೆನ್ನಾಗಿತ್ತು. ಈಗಿನ ಕಾಲದಲ್ಲಿ ಸ್ಥಳಪುರಾಣ ಗೊತ್ತಿರುವವರು ಕಡಿಮೆ, ಗೊತ್ತಿದ್ದರೂ ಅನುಕ್ರಮವಾಗಿ ಕಥೆ ಹೇಳಲು ಯಾರಿಗೂ ವ್ಯವಧಾನವಿಲ್ಲ. ಮೇಲಾಗಿ ಆ ಎರಡೂ ಕೊಳಗಳು ಶುಭ್ರವಾಗಿದ್ದವು. ಸಾಮಾನ್ಯವಾಗಿ ದೇವಸ್ಥಾನಗಳ ಪರಿಸರದಲ್ಲಿ ಭಕ್ತಿಗೆ ಸಾಕ್ಷಿಯಾಗಿ ಅಲ್ಲಲ್ಲಿ ಬಿದ್ದಿರುವ ತೆಂಗಿನ ಚಿಪ್ಪು, ಹೂವಿನ ಹಾರ, ಕರ್ಪೂರ-ಅಗರಬತ್ತಿಯ ಪಳೆಯುಳಿಕೆಗಳು ಕಾಣಲಿಲ್ಲ. ಇದು ಅಜ್ಜಿಯ ಪ್ರಭಾವವೇ ಇರಬೇಕು. ನಮಗೆ ಕಥೆ ಹೇಳುತ್ತ ನಡುನಡುವೆ ಇತರರನ್ನೂ ಗಮನಿಸುತ್ತಾ-ಗದರಿಸುತ್ತಾ ಇದ್ದ ಅಜ್ಜಿಯ ವೈಖರಿ ನನಗಂತೂ ತುಂಬಾ ಹಿಡಿಸಿತು. ಆಕೆ ಬೇಡವೆಂದರೂ ಸ್ವಲ್ಪ ಭಕ್ಷೀಸು ಕೊಟ್ಟು ಥಾಂಕ್ಸ್ ಹೇಳಿ ಹೊರಟೆವು.
ಮೇಲುಕೋಟೆಯಲ್ಲಿ ಶತಮಾನಗಳಷ್ಟು ಹಳೆಯದಾದ ಸಂಸ್ಕೃತ ಸಂಶೋಧನಾ ಕೇಂದ್ರವಿದೆ. ಅಪೂರ್ಣಗೊಂಡ ರಾಜಗೋಪುರವಿದೆ. ದಂತ ಕಥೆಯ ಪ್ರಕಾರ 30 ಅಡಿ ಎತ್ತರದ ಈ ರಾಜಗೋಪುರವನ್ನು ಒಂದೆ ರಾತ್ರಿಯಲ್ಲಿ ನಿರ್ಮಿಸುವೆನೆಂದು ಜಕ್ಕಣಾಚಾರಿ ಸವಾಲು ಸ್ವೀಕರಿಸಿದ್ದನಂತೆ. ಅವನು ಕಾರ್ಯನಿರತನಾಗಿದ್ದಾಗ ಕೆಲವರು ಅಸೂಯೆಯಿಂದ ಮಧ್ಯರಾತ್ರಿ ಆಗುತ್ತಿದ್ದಂತೆ, ಬೆಳಗಾಯಿತು, ಅವಧಿ ಮುಗಿಯಿತು ಎಂದು ಘೋಷಿಸಿದರಂತೆ. ಅವರ ಕುತಂತ್ರದಿಂದ ಅವಮಾನಿತನಾದ ಜಕ್ಕಣಾಚಾರಿ ಕೆಲಸವನ್ನು ಅರ್ಧಕ್ಕೇ ಕೈಬಿಟ್ಟನಂತೆ.
ಲೇಖನ ಇಷ್ಟವಾಯಿತು. ನಾನೂ ಮೇಲುಕೋಟೆಗೆ ಹೋಗಬೇಕು ಅಂದುಕೊಂಡಿದ್ದೇನೆ – ನೀಹಾರಿಕಾ
ಉತ್ತಮವಾದ ಚಿತ್ರಗಳೊಂದಿಗಿನ ಬರಹವು ಮೇಲುಕೋಟೆಗೆ ಹೋದ ಅನುಭವವನ್ನೇ ಕೊಟ್ಟಿತು. ಇಷ್ಟವಾದ ಲೇಖನ!
Wonderful narration! Very nice and informative one Hema!!
– Jennifer
good historical data and nice pictures
ಅಕ್ಕತಂಗಿಯರ ಕೊಳ ಹೆಸರು ಕಂಡು ನೋಡಿದೆ .ಬರೆದು ಮಾಹಿತಿ ಕೊಟ್ಟಿದ್ದಕ್ಕೆ ನಮಗೂ ತಿಳಿಯಿತು .ಇತ್ತೀಚಿಗೆ ಚಿತ್ರದುರ್ಗಕ್ಕೆ ಕಾರ್ಯ ನಿಮಿತ್ತ ಹೋಗಿದ್ದಾಗ ಅಲ್ಲಿ ಕೋಟೆ ಗೆ ಹೋಗಿದ್ದೆವು. ಅಲ್ಲಿ ಒಂದು ಅಕ್ಕತಂಗಿಯರ ಕೊಳ ಇತ್ತು .ಕೋಟೆಯ ನಾಯಕ ವೀರ ಮದಕರಿ ನಾಯಕರ ಮ ಡದಿಯರಿಬ್ಬರು ಕೋಟೆ ಶತ್ರು ವಶವಾಗುತ್ತದೆ ಎನ್ನುವ ದಾರುಣ ಘಳಿಗೆಯಲ್ಲಿ ಪರಸ್ಪರ ಕೈ ಕೈ ಹಿಡಿದು ನೀರುಪಾಲಾದ ಕೆರೆ . ಅಲ್ಲೂ ಅದೇ ಹೆಸರು ;ಇಲ್ಲೂ ಅದೇ ಹೆಸರು.