ಮಗುವಿನ ಕೋರಿಕೆ
ಕಲ್ಲಾಗಿ ನಿಂತಿರುವ ಕರಿಯ ಆನೆ
ನಿಜ ಆನೆ ಕಂಡರೆ ಹೆದರುವೆನು ನಾನೆ
ದೇವಾಲಯದೊಳು ಕೈಮುಗಿದು ದೇವಗೆ
ಬೇಗನೆ ಬರುವೆನಾ ನಿನ್ನ ಬಳಿಗೆ||
,
ನಾನಿನ್ನು ತೆರಳುವೆ ಖುಷಿಯಿಂದ ಶಾಲೆಗೆ
ನಾನಿನ್ನು ತೆರಳುವೆ ಖುಷಿಯಿಂದ ಶಾಲೆಗೆ
ನಿನಗಿಲ್ಲಿಯೇ ನಿಲುವ ಶಿಕ್ಷೆ ಏಕೆ..?
ಆಟ ಪಾಠದಲಿ ನನ್ನ ಜಯಭೇರಿಗೆ
ನೀನೂ ಸಲಿಸುವೆಯಾ ದೇವನಿಗೆ ಕೋರಿಕೆ..?
,
ನಾ ಕೊಡುವೆ ನಿನಗೊಂದು ಸಿಹಿಮುತ್ತು
ನಾ ಕೊಡುವೆ ನಿನಗೊಂದು ಸಿಹಿಮುತ್ತು
ಸ್ನೇಹ ಸಂಬಂಧದ ಕಾಣಿಕೆಯಿದು ಗೊತ್ತಾ..?
ಗಣಪಗೆ ನೀ ಕೊಟ್ಟಿರುವೆ ನಿನ್ನ ಶಿರವ
ಗುಣನಿಧಿಯೆ ನೀ ಕೊಡು ನನಗೆ ವರವ||
.
ನಾರಿಕೇಳವ ನಾ ನಿನಗೆ ಅರ್ಪಿಸುವೆ
ನಾರಿಕೇಳವ ನಾ ನಿನಗೆ ಅರ್ಪಿಸುವೆ
ನನ್ನೊಡನೆ ಆಟಕೆ ನೀ ಬರುವೆಯಾ..?
ದಪ್ಪನೆಯ ಕಾಲುಗಳ ಬಳಿಯಲಿ
ಸುತ್ತಿ ಆಡುವಾ ಆಸೆ ಮನದಲಿ||
.
ಬರುವ ಭಕ್ತರಿಗೆ ನೀನು ಸ್ವಾಗತವ
ಬರುವ ಭಕ್ತರಿಗೆ ನೀನು ಸ್ವಾಗತವ
ಕೋರುವೆ ತೋರದೆ ಭೇದಭಾವ
ಒಳಗಿರುವ ಪೂಜಾರಿ ಕಾಣಿಕೆಯು
ಸಿಗದೆ ಕೊಡಲಾರ ನನಗೆ ಅಪ್ಪ ಕಜ್ಜಾಯ||
.
ಹಣೆಕತ್ತಿನ ಚಿನ್ನದ ಅಲಂಕಾರ ಬಲು ಸೊಗಸು
ಹಣೆಕತ್ತಿನ ಚಿನ್ನದ ಅಲಂಕಾರ ಬಲು ಸೊಗಸು
ಅದಮುಟ್ಟಿ ನೋಡಿದರೆ ನೀ ತೋರೆ ಮುನಿಸು
ಬಿಳಿಕೋರೆದಂತ ಹೆಗಲಮೇಲಿನಪಟ್ಟೆ
ನೋಡಿ ನಾನೂ ಕೂಡ ಆಸೆಪಟ್ಟೆ||
.
ಕಾಯುತಿಹಳಲ್ಲಿ ನನ್ನ ಮಾತೆ
ಕಾಯುತಿಹಳಲ್ಲಿ ನನ್ನ ಮಾತೆ
ನಿನ್ನ ನೋಡುತ ನಾನು ಮೈಮರೆತೆ
ದೇವನಲಿ ಬೇಡುವೆ ನಿನಗೂ ಕೊಡುಜೀವ
ಇದುವೇ ಪುಟ್ಟ ಮಗುವಿನ ಮನದ ಭಾವ||
– ಅನಿತಾ ಜಿ.ಕೆ.ಭಟ್.
ಮುಗ್ಧ ಕೋರಿಕೆ . nice
Beautiful ❤️
ಮುಗ್ಧ ಮಗುವಿನ ಅನಿಸಿಕೆ ಕವನದಲ್ಲಿ ಚೆನ್ನಾಗಿ ಒಡಮೂಡಿದೆ.
ಮುದ್ದು ಮಗುವಿನ ಮುಗ್ಧ ಕೋರಿಕೆ ಸೊಗಸಾಗಿ ಮೂಡಿಬಂದಿದೆ..