‘ಟುರ್ ಟುಕ್’ ಎಂಬ ಗಡಿನಾಡು
ಭಾರತದ ಜಮ್ಮು-ಕಾಶ್ಮೀರ ರಾಜ್ಯದ ತುತ್ತತುದಿಯಲ್ಲಿ ಹಿಮಾಲಯದ ಸೆರಗಿನಲ್ಲಿ, ವರ್ಷದಲ್ಲಿ ಆರು ತಿಂಗಳಿಗೂ ಹೆಚ್ಚಿನ ಕಾಲ ಹಿಮಚ್ಛಾದಿತವಾಗಿರುವ ದುರ್ಗಮವಾದ ಪ್ರದೇಶ ಲಡಾಕ್. ಇತ್ತೀಚಿನ ದಿನಗಳಲ್ಲಿ ಸಾರಿಗೆ ಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದರಿಂದ ಬಹಳಷ್ಟು ಪ್ರವಾಸಿಗರು ಲಡಾಕಿಗೆ ಭೇಟಿ ಕೊಡುತ್ತಾರೆ. ಲಡಾಕಿನ ಪ್ರಮುಖ ನಗರಗಳಲ್ಲೊಂದಾದ ಲೇಹ್ ನಿಂದ ಸುಮಾರು 205 ಕಿ.ಮೀ ಪ್ರಯಾಣಿಸಿದಾಗ ‘ನುಬ್ರಾ ಕಣಿವೆ’ ಎಂಬ ಬಲು ಸುಂದರವಾದ ಪ್ರವಾಸಿತಾಣ ಲಭಿಸುತ್ತದೆ. ಈ ದಾರಿಯಲ್ಲಿ ಕಾಣಸಿಗುವ ಪ್ರಕೃತಿ ಸೌಂದರ್ಯ ಅನುಪಮ.
ಲೇಹ್ ನಿಂದ ನುಬ್ರಾ ಕಣಿವೆಗೆ ಹೋಗುವ ದಾರಿಯಲ್ಲಿ, ಸಮುದ್ರ ಮಟ್ಟದಿಂದ 17982 ಅಡಿ ಎತ್ತರದಲ್ಲಿರುವ ‘ಕರ್ದೂಂಗ್ಲಾ ಪಾಸ್’ ಎಂಬ ಜಗತ್ತಿನ ಅತ್ಯಂತ ಎತ್ತರದ ವಾಹನಸಂಚಾರಿ ರಸ್ತೆಯಲ್ಲಿ ಕ್ರಮಿಸಬೇಕು, ಅಲ್ಲಿ ನಯನ ಮನೋಹರವಾದ ಸೊಬಗಿದೆ, ಹಾಗೆಂದು ಯಾವಾಗ ಹಿಮ ಬೀಳುತ್ತದೆ, ಮಳೆ ಸುರಿಯುತ್ತದೆ, ಚಳಿಗಾಳಿ ಬೀಸುತ್ತದೆ, ಸುಡುಬಿಸಿಲು ರಾಚುತ್ತದೆ ಎಂದು ಅಂದಾಜಿಸಲಾಗದು. ಮಳೆ ಬಂದಾಗ ಎತ್ತರದ ಬೆಟ್ಟಗಳಿಂದ ಬಂಡೆಗಳು ಉರುಳಿ ಬೀಳುತ್ತವೆ. ಒಟ್ಟಿನಲ್ಲಿ ಸದಾ ಅಪಾಯದ ನೆರಳಿನಲ್ಲಿರುವ ಜಾಗವಿದು. ಈ ಪ್ರದೇಶದಲ್ಲಿ ಸೈನಿಕರು ಓಡಾಡುತ್ತಿರುತ್ತಾರೆ. ಒಂದು ಕೆಫೆ ಇದೆ. ಮಿಕ್ಕಂತೆ ಪ್ರಕೃತಿಯದೇ ರಾಜ್ಯಭಾರ. ನಮ್ಮ ಅಕ್ಕಪಕ್ಕ ಮೋಡಗಳು ಓಡಾಡುತ್ತಿರುವ ಅನುಭವ ಕೊಡುವ ಕರ್ದೂಂಗ್ಲಾ ಪಾಸ್ ನಲ್ಲಿ ಸ್ವಲ್ಪ ಸಮಯ ಕಳೆಯುವುದು ರೋಮಾಂಚನವನ್ನುಂಟುಮಾಡುತ್ತದೆ.
ಕರ್ದೂಂಗ್ಲಾ ಪಾಸ್ ಅನ್ನು ಹತ್ತಿ ಇಳಿದು ಬೆಟ್ಟಗಳ ಶ್ರೇಣಿಯ ಇನ್ನೊಂದು ಮಗ್ಗುಲಿನ ಕಡೆಗೆ ಪ್ರಯಾಣಿಸಿದಾಗ ‘ನುಬ್ರಾ ಕಣಿವೆ’ ಸಿಗುತ್ತದೆ. ಕಣಿವೆಯುದ್ದಕ್ಕೂ ನೂರಾರು ಬೆಟ್ಟಗಳು, ಅಲ್ಲಲ್ಲಿ ಕಾಣಸಿಗುವ ಪುಟ್ಟ ಹಳ್ಳಿಗಳು, ಗೋಧಿ, ಬಾರ್ಲಿ, ಸಾಸಿವೆ ಬೆಳೆದಿದ್ದ ಹೊಲಗಳು, ಮೇಯುತ್ತಿರುವ ಯಾಕ್ ಮೃಗಗಳು ,ಚಿಕ್ಕ ದೊಡ್ಡ ಸ್ತೂಪಗಳು ,ಬೀಸಿ ಬರುವ ತಂಗಾಳಿಗೆ ಪಟಪಟನೇ ಬಡಿಯುವ ಬೌದ್ಧ ಧರ್ಮದ ಪತಾಕೆಗಳು, ಬೈಕ್ ನಲ್ಲಿ ತಮ್ಮ ಸರಂಜಾಮುಗಳನ್ನು ಹೇರಿಕೊಂಡು ಸಾಹಸಯಾನ ಮಾಡುವ ಯುವಕ ಯುವತಿಯರು, ಹಿಮಾಚ್ಛಾದಿತ ಗಿರಿಕಂದರಗಳ ನಡುವೆ ಶಾಂತವಾಗಿ ಹರಿಯುತ್ತಿದ್ದ ಶಾಯಕ್ ನದಿ, ….ಇವನ್ನೆಲ್ಲಾ ಕಣ್ತುಂಬಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿದಾಗ , ಈ ಭಾಗದಲ್ಲಿರುವ ಭಾರತದ ಕೊನೆಯ ಹಳ್ಳಿಯಾದ ‘ಟುರ್ ಟುಕ್ ‘ ಅನ್ನು ತಲಪುತ್ತೇವೆ..
1971 ರ ಮೊದಲು, ‘ಟುರ್ ಟುಕ್’ ಹಳ್ಳಿಯು ಈಗ ಪಾಕಿಸ್ತಾನಕ್ಕೆ ಸೇರಿದ ‘ಬಾಲ್ತಿಸ್ತಾನ್’ ಭಾಗವಾಗಿತ್ತು. ಇದು ಈಗ ಇದು ಭಾರತೀಯ ಸೇನೆಯ ವಶದಲ್ಲಿರುವ ಹಳ್ಳಿ . ಇಲ್ಲಿ ಒಟ್ಟು 1200 ರಷ್ಟು ಜನರಿದ್ದಾರಂತೆ. ಸ್ಥಳೀಯರು ‘ಬಾಲ್ತಿ’ ಎಂಬ ಭಾಷೆಯನ್ನು ಮಾತನಾಡುತ್ತಾರೆ.
ಜೂನ್ 27, 2018 ರಂದು ನಮ್ಮ ತಂಡವು ಟುರ್ ಟುಕ್ ಹಳ್ಳಿಗೆ ಭೇಟಿ ಕೊಟ್ಟಿತ್ತು .ಪ್ರವಾಸಿಗರು ತಮ್ಮ ಗುರುತಿನ ಚೀಟಿಯನ್ನು ಗೇಟಿನಲ್ಲಿರುವ ಸೇನಾ ಅಧಿಕಾರಿ ಕೈಯಲ್ಲಿ ಕೊಟ್ಟ ಮೇಲೆ ಅವರು ಪರಿಶೀಲಿಸಿ, ಡ್ರೈವರ್ ನ ಲೈಸನ್ಸ್ ಅನ್ನು ತಾವು ಇಟ್ಟುಕೊಂಡು ತಲೆ ಲೆಕ್ಕ ಹಾಕಿ ಒಳಗೆ ಬಿಟ್ಟರು. ಗೇಟಿನ ಪಕ್ಕದಲ್ಲಿಯೇ ಸೇನೆಯವರು ನಿರ್ವಹಿಸುತ್ತಿದ್ದ ಪುಟ್ಟ ಕ್ಯಾಂಟೀನ್ ಇತ್ತು. ಅಡುಗೆಕೋಣೆಯೊಳಗೆ ಇಣುಕಿದಾಗ ಅಲ್ಲಿದ್ದ ಯೋಧರೊಬ್ಬರು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿ ಸಂತೋಷಪಟ್ಟರು. ಅವರು ಬೆಳಗಾವಿಯವರಂತೆ. ಅಲ್ಲಿದ್ದ ಸ್ಪೀಕರ್ ನಲ್ಲಿ ಕನ್ನಡ ಹಾಡೊಂದು ತೇಲಿ ಬಂತು. ಅಷ್ಟರಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಕೆಲವು ಯುವಕರು ಕನ್ನಡ ಹಾಡಿನ ಲಯಕ್ಕೆ ನರ್ತಿಸಲಾರಂಭಿಸಿದರು. ಹಾಸನ ಮತ್ತು ಅರಸೀಕೆರೆಯಿಂದ ಬಂದಿದ್ದ ಆ ತಂಡದಲ್ಲಿ ಯುವಕರೂ, ಯುವತಿಯರೂ ಇದ್ದರು. ಒಟ್ಟಿನಲ್ಲಿ, ಕರ್ನಾಟಕದ 10-12 ಮಂದಿ ಅಪರಿಚಿತರು, ಭಾರತ-ಪಾಕಿಸ್ತಾನದ ಗಡಿಯಲ್ಲಿರುವ ಸೇನಾ ಕ್ಯಾಂಟೀನ್ ನಲ್ಲಿ ಪರಿಚಯ ಮಾಡಿಕೊಂಡ ಸಡಗರದ ಕ್ಷಣ ಅದಾಗಿತ್ತು. ಯೋಧರು ತಯಾರಿಸಿಕೊಟ್ಟ ಬಿಸಿಬಿಸಿಯಾದ ‘ಮೋಮೋ’ ರುಚಿಯಾಗಿತ್ತು. ಅವರಿಗೆ ಧನ್ಯವಾದ ಸಮರ್ಪಿಸಿ, ಮುಂದುವರಿದೆವು.
ಅನತಿ ದೂರದಲ್ಲಿ ಒಂದು ಶಾಲೆ ಇತ್ತು. ಅಲ್ಲಿದ್ದ ಫಲಕದ ಪ್ರಕಾರ ‘ತ್ಯಾಕ್ಷಿ’ ಹಳ್ಳಿಯಲ್ಲಿರುವ ಆ ಶಾಲೆಯನ್ನು 1969ರಲ್ಲಿ ಪಾಕಿಸ್ತಾನವು ಆರಂಭಿಸಿತ್ತು. ಆಮೇಲೆ 1971 ರಲ್ಲಿ ಸೇನೆಯು ಹಳ್ಳಿಯನ್ನು ಭಾರತದ ವಶಕ್ಕೆ ಕೊಟ್ಟಿತು. ಹೀಗಾಗಿ, ಪಾಕಿಸ್ತಾನದ ಸರಕಾರವು ನಿರ್ಮಿಸಿ, ಭಾರತದ ಸರಕಾರವು ನಿರ್ವಹಿಸುತ್ತಿರುವ ಶಾಲೆಯೆಂಬ ಹೆಗ್ಗಳಿಕೆಯನ್ನು ‘ತ್ಯಾಕ್ಷಿ’ ಶಾಲೆಯು ಪಡೆದಿದೆ.
ಆಮೇಲೆ ಸುಮಾರು ಅರ್ಧ ಗಂಟೆ ಪ್ರಯಾಣಿಸಿ, ಭಾರತ -ಪಾಕಿಸ್ತಾನದ ಸೀಮಾರೇಖೆಯನ್ನು ತಲಪಿ, ಭಾರತದ ಭಾಗದಲ್ಲಿ ಕಂಗೊಳಿಸುತಿದ್ದ ರಾಷ್ಟ್ರಧ್ವಜಕ್ಕೆ ವಂದಿಸಿ ಸಂಭ್ರಮಿಸಿದೆವು. ಕೇವಲ ಹತ್ತಾರು ಅಡಿ ದೂರದಲ್ಲಿ, ತಂತಿಯ ಬೇಲಿಯಾಚೆಗಿನ ಸ್ಥಳ ಪಾಕಿಸ್ತಾನ! ಇಲ್ಲಿ ಭಾರತ ಮತ್ತು ಪಾಕಿಸ್ತಾನದ ಸರಹದ್ದನ್ನು ಸೂಚಿಸುವ ಎಚ್ಚರಿಕೆಯ ಬರಹಗಳಿವೆ. ಎತ್ತ ನೋಡಿದರೂ ಹಿಮದ ಚಾದರ ಹೊದ್ದ ಒಣಬೆಟ್ಟಗಳು….ಆಗಾಗ ಓಡಾಡುತ್ತಿರುವ ಸೇನಾ ವಾಹನಗಳು… ಇವಿಷ್ಟು ಬಿಟ್ಟರೆ ನಿಗೂಢ ಮೌನ ಮತ್ತು ಅಸಹನೀಯ ಚಳಿಯು ಈ ಹಿಮ ಕಣಿವೆಯನ್ನಾಳುತ್ತವೆ.
ಸದಾ ಉಭಯ ರಾಷ್ಟ್ರಗಳ ಸೇನಾ ಕಣ್ಗಾವಲಿನ ಈ ಪ್ರದೇಶದಲ್ಲಿ ಜೀವಿಸಲು ಬೇಕಾದ ಮೂಲದ್ರವ್ಯಗಳು ಅಖಂಡ ಧೈರ್ಯ ಮತ್ತು ಅಪ್ಪಟ ದೇಶಪ್ರೇಮ. ಜೈ ಜವಾನ್!
– ಹೇಮಮಾಲಾ.ಬಿ
(20/09/2018 ರ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಬರಹ)
ಲೇಖನ ಚೆನ್ನಾಗಿತ್ತು ನಾವಂತೂ ನೋಡೋಕಾಗಲ್ಲ ನಿಮ್ಮ ಬರವಣಿಗೆಯಿಂದ ಕಣ್ಮುಂದೆ ಕಂಡಹಾಗಿತ್ತು.
Ishtu details kotiiddakke Thanks. Tumba chennagidhe