ಕಾಶಿಯಾತ್ರೆ.. ಗಂಗಾರತಿ.. ಭಾಗ -2/3
ಮಣಿಕರ್ಣಿಕಾ ಘಾಟ್ ನ ಪಕ್ಕದಲ್ಲಿ ದೋಣಿಯಿಂದಿಳಿದು, ಮೆಟ್ಟಿಲುಗಳನ್ನು ಹತ್ತಿ, ವಾರಣಾಸಿಯ ಗಲ್ಲಿಗಳಲ್ಲಿ ನಡೆಯಲಾರಂಭಿಸಿದೆವು. ವಾರಣಾಸಿ ಭಾರತದ ಪುರಾತನ ನಗರಿ . ಹಳೆಯ ಕಟ್ಟಡಗಳ ನಡುವೆ ಎಲ್ಲೆಲ್ಲೂ ಗಲ್ಲಿಗಳೇ ಕಾಣಿಸುತ್ತಿದ್ದುವು. ಪೂಜಾ ಪರಿಕರಗಳು, ಬಟ್ಟೆಬರೆ ಮತ್ತು ಅಲಂಕಾರಿಕ ವಸ್ತುಗಳನ್ನು ಮಾರುವ ಪುಟ್ಟ ಅಂಗಡಿಗಳು ಎಲ್ಲಾ ಗಲ್ಲಿಗಳಲ್ಲಿಯೂ ಇದ್ದುವು. ಇಕ್ಕಟ್ಟಿನ ಗಲ್ಲಿಗಳಲ್ಲಿ ಕಾಶಿ ವಿಶ್ವನಾಥನ ಮಂದಿರದೆಡೆಗೆ ನಡೆಯುವವರ ಮಧ್ಯೆ ಬೈಕ್ ಸವಾರರು, ಹಸು-ಎತ್ತುಗಳೂ ಓಡಾಡುತ್ತಿದ್ದುವು. ಇಷ್ಟು ಜನ ಯಾತ್ರಿಕರು ಬರುವ ಜಾಗದಲ್ಲಿ, ರಸ್ತೆಯ ನಿರ್ಮಾಣದ ಬಗ್ಗೆ ಯಾಕೆ ಗಮನ ಹರಿಸಲಿಲ್ಲವೋ ಅರ್ಥವಾಗಲಿಲ್ಲ. ಅಂದು ಶಿವನಿಗೆ ವಿಶೇಷವಾದ ಸೋಮವಾರವಾದುದರಿಂದ ಜನಸಂದಣಿಯೂ ಜಾಸ್ತಿ ಇತ್ತು.
ಟ್ರಾವೆಲ್ಸ್ ನವರ ಪರಿಚಯದ ಒಬ್ಬರ ಅಂಗಡಿಯಲ್ಲಿ ನಮ್ಮ ಚಪ್ಪಲಿಗಳನ್ನಿಟ್ಟೆವು. ಯಾವುದೋ ಗಲ್ಲಿಗಳಲ್ಲಿ ಎಡಕ್ಕೋ/ಬಲಕ್ಕೋ ತಿರುಗುತ್ತಾ ವಿಶ್ವನಾಥನ ಮಂದಿರಕ್ಕೆ ಹೋಗುವವರ ಸರದಿ ಸಾಲಿನಲ್ಲಿ ನಿಂತೆವು. ಟ್ರಾವೆಲ್ಸ್ ನ ಶಾಂತಕುಮಾರ್ ಅವರು ಸ್ಥಳೀಯ ಅರ್ಚಕರೊಬ್ಬರನ್ನು ನಮಗೆ ಪರಿಚಯಿಸಿ, ‘ಇವರು ನಿಮಗೆ ಸಹಾಯ ಮಾಡುತ್ತಾರೆ. ಯಾರಿಗಾದರೂ ವಿಶೇಷ ಪೂಜೆ/ಸೇವೆ ಮಾಡಿಸಬೇಕಾಗಿದ್ದಲ್ಲಿ ಇವರಿಗೆ ತಿಳಿಸಿ, ಮೊದಲು ವಿಶ್ವನಾಥನ ದರ್ಶನ ಮಾಡಿ, ಆಮೇಲೆ ವಿಶಾಲಾಕ್ಷಿ ಮತ್ತು ಅನ್ನಪೂರ್ಣೇಶ್ವರಿಯ ದೇವಾಲಯಕ್ಕೂ ಭೇಟಿ ಕೊಟ್ಟು ಬನ್ನಿ, ಎಲ್ಲರೂ ಒಟ್ಟಿಗೆ ವಾಪಾಸು ಹೋಗೋಣ’ ಎಂದರು.
ಸುಮಾರು ಒಂಭತ್ತು ಗಂಟೆಗೆ ನಮ್ಮ ತಂಡದ 30 ಮಂದಿ ವಿಶ್ವನಾಥನ ದರ್ಶನಕ್ಕೆಂದು ಸರದಿ ಸಾಲಿನಲ್ಲಿ ನಿಂತೆವು. ಅಮ್ಮ ಮತ್ತು ನಾನು ಅಲ್ಲಿಯೇ ಇದ್ದ ಹೂವು-ಪ್ರಸಾದ-ವಿಭೂತಿ ಇದ್ದ ತಟ್ಟೆಯೊಂದನ್ನು ಖರೀದಿಸಿದೆವು . ಕ್ಯೂ ಮುಂದುವರಿದಾಗ ಒಂದೆಡೆ ಅಭಿಷೇಕಕ್ಕಾಗಿ ಹಾಲನ್ನು ಸಣ್ಣ ಲೋಟಗಳಲ್ಲಿ ಮಾರುತ್ತಿದ್ದರು. ಅಮ್ಮ ಒಂದು ಲೋಟ ಹಾಲನ್ನೂ ಕೊಂಡರು . ಅದು ತುಳುಕದಂತೆ ಹಿಡಿದುಕೊಳ್ಳುವ ಸಲುವಾಗಿ ತನ್ನ ಕೈಯಲ್ಲಿದ್ದ ಪರ್ಸ್ ಅನ್ನು ನನ್ನ ಕೈಗೆ ಕೊಟ್ಟರು. ಇನ್ನೂ ಮುಂದುವರಿದು, ಅಲ್ಲಲ್ಲಿ ಸುರಕ್ಷತಾ ತಪಾಸಣೆಯ ಕಿರಿಕಿರಿ ಅನುಭವಿಸಿ, ಕಾಶಿ ವಿಶ್ವನಾಥ ಶಿವಲಿಂಗದ ಹತ್ತಿರ ಬರುತ್ತಿದ್ದಂತೆ ಜನ ಜಂಗುಳಿ ಇನ್ನಷ್ಟು ಜಾಸ್ತಿಯಾಯಿತು..
ಕಾಶಿಯಲ್ಲಿ ಶಿವಲಿಂಗವು ಆಯತಾಕಾರದ ಬೆಳ್ಳಿಯ ಪೀಠದಲ್ಲಿದೆ. ಅಭಿಷೇಕದ ಹಾಲು ಮತ್ತು ಜನರು ಭಕ್ತಿಯಿಂದ ಹಾಕುತ್ತಿರುವ ಹೂವಿನ ಹಾರಗಳಿಂದ ಶಿವಲಿಂಗವನ್ನಿರಿಸಿದ ಬೆಳ್ಳಿಯ ಕಟಾಂಜನ ತುಂಬಿ ಹೋಗುತ್ತದೆ. ಅರ್ಚಕರು ಆಗಾಗ ಹೂವಿನ ಹಾರಗಳನ್ನು ತೆಗೆಯುತ್ತಾ ಇರುತ್ತಾರೆ. ಜನವೋ ಜನ. ನೂಕು ನುಗ್ಗಲು. ಒಟ್ಟಿನಲ್ಲಿ ಶಿವಲಿಂಗದ ದರ್ಶನವಾಯಿತು.
ಅಲ್ಲಿಂದ ಹೊರಬಂದು ಇನ್ನು ಯಾವ ಕಡೆಗೆ ಹೋಗಬೇಕು ಅಂತ ಅತ್ತಿತ್ತ ನೋಡುತ್ತಿರುವಾಗ ಅಲ್ಲಿದ್ದ ಪೋಲೀಸ್ ಒಬ್ಬರು ‘ಜಲ್ದಿ ಜಾನಾ….ಜಲ್ದಿ..’ ಅನ್ನುತ್ತಾ ನನ್ನನ್ನು ತಳ್ಳಿಯೇ ಬಿಟ್ಟರು. ಸಾವರಿಸಿಕೊಂಡು ನೋಡುವಾಗ ನನ್ನ ಪಕ್ಕದಲ್ಲಿಯೇ ಇದ್ದ ಅಮ್ಮ ಕಾಣಿಸಲಿಲ್ಲ!
ಅಷ್ಟು ಕಡಿಮೆ ಅವಧಿಯಲ್ಲಿ ಅವರು ಎಲ್ಲಿ ಮರೆಯಾಗಲು ಸಾಧ್ಯ ಎಂದು ಗಲಿಬಿಲಿಗೊಂಡು ನನ್ನ ದೃಷ್ಟಿ ಹಾಯುವಷ್ಟೂ ದೂರ ಸುತ್ತುಮುತ್ತಲು ನೋಡಿದೆ. ಒಂದು ಕಡೆ ಗಲ್ಲಿಯಲ್ಲಿ ಹೋದರೆ ವಿಶಾಲಾಕ್ಷಿ ದೇವಸ್ಥಾನಕ್ಕೆ ದಾರಿಯಿತ್ತು. ತಂಡದ ಇತರರೊಂದಿಗೆ ಅಲ್ಲಿಗೆ ಹೋಗಿರಬಹುದೇ ಎಂದು ಅಲ್ಲಿಯೂ ಹಣಿಕಿ ನೋಡಿದೆ. ಹೋಟೆಲ್ ನಿಂದ ಹೊರಡುವ ಮೊದಲು ಟ್ರಾವೆಲ್ಸ್ ನವರು ‘ ‘ಪ್ರತಿಯೊಬ್ಬರೂ ಹೋಟೆಲ್ ನ ಕಾರ್ಡ್ ಇಟ್ಟುಕೊಳ್ಳಲೇ ಬೇಕು’ ಎಂದು ಎಚ್ಚರಿಕೆ ಕೊಟ್ಟಿದ್ದರೂ, ಅಮ್ಮ ಅಭಿಷೇಕಕ್ಕಾಗಿ ಹಾಲಿನ ಲೋಟವನ್ನು ಹಿಡಿದುಕೊಳ್ಳುವಾಗ ಪರ್ಸ್ ಅನ್ನು ನನ್ನ ಕೈಗೆ ಕೊಟ್ಟಿದ್ದರು! ಹಣ ಮತ್ತು ಹೋಟೆಲ್ ನ ಕಾರ್ಡ್ ಅದರಲ್ಲಿತ್ತು!
ಅಪರಿಚಿತ ಊರಿನಲ್ಲಿ, ಹಣ ಮತ್ತು ಹೋಟೆಲ್ ನ ವಿಳಾಸ ಇಲ್ಲದೆ, ಸರಿಯಾಗಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡಲು ಬಾರದ ಅಮ್ಮ ವಿಪರೀತ ಜನದಟ್ಟಣೆಯ ಗಲ್ಲಿಗಳಲ್ಲಿ ಗಾಬರಿಗೊಂಡು ನನ್ನನ್ನು ಹುಡುಕುತ್ತಿರಬಹುದು ಎಂಬ ತಳಮಳವಾಯಿತು. ಅರ್ಧ ಗಂಟೆ ಕಾಲ ಅತ್ತಿತ್ತ ಹುಡುಕಿದರೂ ಅಮ್ಮ ಕಾಣಿಸಲಿಲ್ಲ.
ವಯಸ್ಸಾದ ಮಾತಾಪಿತರನ್ನು ಕಾಶಿ ತೋರಿಸುತ್ತೇವೆಂದು ಕರೆತಂದು, ಅವರನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು ಹೋಗುವ ಮಕ್ಕಳಿರುತ್ತಾರೆಂದು ಎಲ್ಲೋ ಓದಿದ ನೆನಪು. ಆದರೆ, ನಿಜವಾಗಿಯೂ ಕಾಶಿಯಾತ್ರೆಯ ಸಡಗರದಲ್ಲಿ ಹೊರಟ ನನ್ನ ತಾಯಿ ಇಲ್ಲಿ ಆಕಸ್ಮಿಕವಾಗಿ ಕಾಣೆಯಾದರೆ ಎಂಬ ಕಲ್ಪನೆಯಿಂದ ಭಯವಾಯಿತು. ಸುರಕ್ಷತೆಯ ದೃಷ್ಟಿಯಿಂದ ಮೊಬೈಲ್ ಫೋನ್ ಅನ್ನು ನಿಷೇಧಿಸಿದ್ದೇನೋ ಸರಿ, ಆದರೆ ಇಂತಹ ಪರಿಸ್ಥಿತಿಯಲ್ಲಿ ಕನಿಷ್ಟ ಮೊಬೈಲ್ ಫೋನ್ ಅವರ ಬಳಿ ಇದ್ದರೆ ನನಗೆ ಅನುಕೂಲವಾಗುತ್ತಿತ್ತು ಎಂದು ಪರಿತಪಿಸಿದೆ.
ಈ ಆತಂಕದಲ್ಲಿ ನನಗೆ ವಿಶಾಲಾಕ್ಷಿಯೂ ಬೇಡ, ಅನ್ನಪೂರ್ಣೆಯೂ ಬೇಡ, ಕನಿಷ್ಟ ಚಪ್ಪಲಿ ಇಟ್ಟ ಅಂಗಡಿಗೆ ಹಿಂತಿರುಗಿದರೆ ಅಲ್ಲಿ ಟ್ರಾವೆಲ್ಸ್ ನವರ ಸಹಾಯ ಕೇಳಬಹುದು, ಅವರು ಏನಾದರೂ ದಾರಿ ತೋರಿಸಿಯಾರು, ಅಮ್ಮನಿಗೆ ತಂಡದ ಇತರರು ಯಾರಾದರೂ ಕಾಣಸಿಕ್ಕಿದರೆ ಅವರ ಜೊತೆಗೆ ಬರಬಹುದು……ಇತ್ಯಾದಿ ಆಶಾಭಾವನೆಯಿಂದ ನಾನೊಬ್ಬಳೇ ಗಲ್ಲಿಯಲ್ಲಿ ನಡೆಯುತ್ತಾ ಇದ್ದೆ. ಈ ಗೊಂದಲದಲ್ಲಿ ನನಗೇ ದಾರಿ ತಪ್ಪಿತು. ತಂಡದ ಇತರರು ಯಾರೂ ಕಾಣಿಸಲಿಲ್ಲ.
ಒಬ್ಬ ಪೋಲೀಸರ ಬಳಿ, “ಮೈನ್ ರೋಡ್ ಕೋ ಕೈಸಾ ಜಾನಾ” ಎಂದಾಗ ‘ಗೇಟ್ ನಂಬರ್ ಕಿತನಾ’ ಅಂದರು! ಇನ್ನಷ್ಟು ಗಲಿಬಿಲಿಯಾಯಿತು. ನಾವು ಯಾವ ಗೇಟ್ ನಲ್ಲಿ ಬಂದೆವೆಂದು ನನಗೆ ಗೊತ್ತಿರಲಿಲ್ಲ! ‘ ‘ಗೇಟ್ ನಂಬರ್ ಪತಾ ನಹೀ, ಹಮ್ ಮಣಿಕರ್ಣಿಕಾ ಘಾಟ್ ಕೆ ಪಾಸ್ ಆಯೆ’ ಅಂದೆ. ‘ ಅಚ್ಚಾ ಐಸೇ ಜಾಯಿಯೇ’ ಎಂದು ದಾರಿ ತೋರಿಸಿದರು. ಆಮೇಲೆ ಗೊತ್ತಾದುದೇನೆಂದರೆ ದೇವಾಲಯಕ್ಕೆ ಬರಲು ನಾಲ್ಕು ಗೇಟುಗಳಿವೆಯಂತೆ, ನಾವು ಬಂದ ಗೇಟಿನಲ್ಲಿಯೇ ಹಿಂತಿರುಗುವುದು ಅನುಕೂಲ. ಎದುರು ಕಾಣಸಿಕ್ಕಿದ ಎಲ್ಲಾ ಪೋಲೀಸರ ಬಳಿಯೂ “ನನ್ನ ಅಮ್ಮ ಕಾಣಿಸುತ್ತಿಲ್ಲ… ಹಸಿರು ಸೀರೆ ಉಟ್ಟ 68 ರ ವಯಸ್ಸಿನ ಮಹಿಳೆಯೊಬ್ಬರು ನನ್ನ ಬಗ್ಗೆ ವಿಚಾರಿಸಿದರೆ ಚಪ್ಪಲಿ ಇಟ್ಟ ಅಂಗಡಿ ಕಡೆ ಹೋಗಿದ್ದಾಳೆ ಎಂದು ತಿಳಿಸುವಿರಾ” ಅಂತ ಹಿಂದಿ ಭಾಷೆಯಲ್ಲಿ ವಿನಂತಿ ಮಾಡುತ್ತಾ ಮುಂದೆ ಹೋದೆ. ಅಷ್ಟರಲ್ಲಿ ಟ್ರಾವೆಲ್ಸ್ ನ ಶಾಂತಕುಮಾರ್ ಕಾಣಸಿಕ್ಕಿ ‘ದರ್ಶನ ಆಯ್ತಾ’ ಅಂದರು. ಅಮ್ಮ ಕಾಣಿಸುವುದಿಲ್ಲ ಎಂದು ನನ್ನ ದುಗುಡ ತೋಡಿಕೊಂಡೆ. ‘ಸರಿ, ನೀವು ಮುಂದೆ ಹೋಗಿ, ನಾನು ಅವರನ್ನು ಕರಕ್ಕೊಂಡು ಬರ್ತೇನೆ’ ಅಂತ ಮುನ್ನಡೆದರು.
ಅಂತೂ ನಾನು ಚಪ್ಪಲಿ ಇರಿಸಿದ ಅಂಗಡಿಗೆ ತಲಪಿದಾಗ ಅಲ್ಲಿ ಅಮ್ಮ ಮತ್ತು ಸಹಯಾತ್ರಿಗಳಿಬ್ಬರು ಆಗಲೇ ಬಂದು ತಲಪಿದ್ದರು!. ವಿಶ್ವನಾಥನ ಸನ್ನಿಧಿಯಲ್ಲಿ ಗುಂಪಿನಿಂದ ಬೇರ್ಪಟ್ಟ ಅಮ್ಮನಿಗೂ ಭಯವಾಗಿತ್ತಂತೆ. ಆದರೆ ತಂಡದ ಇನ್ನಿಬ್ಬರು ಮಹಿಳೆಯರು ಅಲ್ಲಿಯೇ ಇದ್ದುದರಿಂದ ಅವರ ಜೊತೆಗೆ ವಿಶಾಲಾಕ್ಷಿ ಮತ್ತು ಅನ್ನಪೂರ್ಣೆಯರ ದರ್ಶನವನ್ನೂ ಮಾಡಿ ಆಗಲೇ ಬಂದೆವು ಅಂತ ಖುಷಿಯಲ್ಲಿ ತಿಳಿಸಿದರು. ನನ್ನನ್ನು ಆಚೆಗೆ ದಬ್ಬಿದ ಪೋಲೀಸಪ್ಪನಿಂದಾಗಿ ಅಮ್ಮ ಕಳೆದುಹೋದ ಘಟನೆ ಮತ್ತು ಹುಡುಕಾಟಗಳಿಂದಾಗಿ ನನಗೆ ವಿಶಾಲಾಕ್ಷಿ ಮತ್ತು ಅನ್ನಪೂರ್ಣೆಯರ ದರ್ಶನ ತಪ್ಪಿ ಹೋಯಿತು. ಪುನ: ಸರದಿ ಸಾಲಿನಲ್ಲಿ ನಿಲ್ಲಲು ಉತ್ಸಾಹವಿರಲಿಲ್ಲ . ಒಟ್ಟಿನಲ್ಲಿ ಮನಸ್ಸಿಗೆ ನಿರಾಳವಾಯಿತು!
ನಮ್ಮ ತಂಡದ ಇಬ್ಬರು ಪುರುಷರು ಕೂಡ ಇದೇ ರೀತಿ ‘ತಪ್ಪಿಸಿಕೊಂಡಿದ್ದರು’. ಅವರೂ ಪೋಲೀಸರ ಸಹಾಯ ಪಡೆದು ಸ್ವತಂತ್ರವಾಗಿ ಅಂಗಡಿಯ ಬಳಿ ಬಂದು ಸೇರಿದರು. ಅಂತೂ ಕಾಶಿಯಲ್ಲಿ ಯಾರನ್ನೂ ಬಿಟ್ಟು ಹೋಗಿಲ್ಲ ಎಂದು ಖಾತ್ರಿ ಆದ ಮೇಲೆ ಶಾಂತಕುಮಾರ್ ‘ಹೊರಡೋಣ’ ಅಂದರು! ಕಾಶಿ ವಿಶ್ವನಾಥನ ದರ್ಶನ ಮಾಡಿದ ಸಂತಸದ ಜೊತೆಗೆ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಬೇಸರಿಸುತ್ತಾ ಹೋಟೆಲ್ ಗೆ ವಾಪಸ್ಸಾದೆವು.
……..ಮುಂದುವರಿಯುವುದು
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ : http://surahonne.com/?p=15314
– ಹೇಮಮಾಲಾ.ಬಿ
(ಚಿತ್ರಕೃಪೆ: ಅಂತರ್ಜಾಲ)
ನಿಜ ಇಷ್ಟು ದೊಡ್ಡ ಪ್ರವಾಸಿಸ್ಥಳವಾದ ಕಾಶಿಯ ಗಲ್ಲಿಗಳನ್ನು ನೋಡಿ ಇಲ್ಲಿಯ ರಸ್ತೆಗಳ ಬಗ್ಗೆಯಾರೂ ಯೋಚಿಸಿಲ್ಲ ಎನಿಸಿತ್ತು.ಇದೇ ರಸ್ತೆಯಲ್ಲಿಯೇ ಸತ್ಯಹರಿಶ್ಚಂದ್ರ ತಮ್ಮನ್ನೇ ಮಾರಾಟಮಾಡಿಕೊಳ್ಳಲು ಓಡಾಡುತ್ತಿದ್ದುದು ಎಂಬ ಕಲ್ಪನೆಯೂ ಬಂದಿತ್ತು.
Likith Nagesh Thumba chennagi tilisiddiri vishwanathana darshana nice
ಅಮ್ಮ ಕಳೆದುಹೋದರು ಅಂತ ಓದುತ್ತಿರುವಾಗ ನಿಮ್ಮೊಂದಿಗೆ ನಂಗೂ ಗಾಬರಿಯಾಯ್ತು. ಸಿಕ್ಕಿದ್ರು ಅಂದಾಗ ನಿರಾಳವಾಯ್ತು. ಯಾಕಂದ್ರೆ ೪ ವರ್ಷದ ಹಿಂದೆ ಕಾಶಿಯ ಇಕ್ಕಟ್ಟಿನ ಗಲ್ಲಿಗಳ ಅನುಭವ ನಮಗೂ ಆಗಿತ್ತು