ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 4
ಪೋಖ್ರಾದಿಂದ ಜೋಮ್ ಸಮ್ ನ ಕಡೆಗೆ …..
ಬಸ್ಸು ನಗರವನ್ನು ಬಿಟ್ಟು, ಹಳ್ಳಿಗಳ ಕಡೆಗೆ ತಿರುಗಿತು. ಇಕ್ಕಟ್ಟಾದ, ಧೂಳುಮಯವಾದ ರಸ್ತೆಗಳು. ಅಲ್ಲಲ್ಲಿ ಕಾಣಸಿಗುತ್ತಿದ್ದ ಸಣ್ಣ ಹಳ್ಳಿಗಳು, ಭತ್ತದ ಹೊಲಗಳು, ಕ್ಯಾಬೇಜು-ಕಾಲಿಫ್ಲವರ್ ಬೆಳೆದ ಹೊಲಗಳು ಹಸಿರು ಬೆಟ್ಟಗಳು, ನದಿಗಳು, ಕಣಿವೆಗಳು… ನೋಡಿದಷ್ಟೂ ಮುಗಿಯದು. ಬೆಳಗ್ಗೆ 09 ಗಂಟೆಯ ವೇಳೆಗೆ ‘ಲೂಮ್ಲಿ’ ಎಂಬ ಹಳ್ಳಿ ತಲಪಿದೆವು. ಒಂದೇ ಬೀದಿಯುಳ್ಳ ಹತ್ತಿಪ್ಪತ್ತು ಸಣ್ಣ ಮನೆಗಳುಳ್ಳ ಹಳ್ಳಿ ಅದು.
ಅಲ್ಲಿನ ಹೋಟೆಲ್ ಒಂದರ ಒಳಹೊಕ್ಕು, ನಮ್ಮ ಟ್ರಾವೆಲ್ಸ್ ನ ಅಡುಗೆಯವರು ತಯಾರಿಸಿ ಕೊಟ್ಟಿದ್ದ ಇಡ್ಲಿ-ಚಟ್ನಿಯನ್ನು ತಿಂದೆವು. ಕೆಲವರು ಆ ಹೋಟೆಲ್ ನಲ್ಲಿ ಚಹಾ-ಕಾಫಿ, ಕ್ಯಾಬೇಜು ಪಕೋಡ, ನೀರಿನ ಬಾಟಲ್ ಇತ್ಯಾದಿ ಖರೀದಿಸಿದೆವು. ತಿಂಡಿಯ ನಂತರ ಬಸ್ಸು ಪುನ: ಹೊರಟಿತು. ಇನ್ನು ಮುಂದಿನ ದಾರಿ ಬಹಳ ಕಷ್ಟಕರವಾಗಿತ್ತು. ಬಹಳ ಕಿರಿದಾದ ರಸ್ತೆ. ಒಂದೆಡೆ ಪರ್ವತ, ಇನ್ನೊಂದೆಡೆ ಪ್ರಪಾತ. ಅಲ್ಲಲ್ಲಿ ಕಾಣಸಿಗುತ್ತಿದ್ದ ‘ಕಾಲಿಗಂಡಕಿ’ ನದಿ ಅಥವಾ ಅದರ ಉಪನದಿಗಳು. ರಸ್ತೆಯಲ್ಲಿ ಉಬ್ಬು-ತಗ್ಗುಗಳು ಹೇಳತೀರದಷ್ಟು. ಆಗಿಂದಾಗ್ಗೆ ಬಸ್ಸು ಎಡಕ್ಕೂ ಬಲಕ್ಕೂ ದೋಣಿಯಂತೆ ವಾಲುತಿತ್ತು.
ಪ್ರತಿ ಸಾರಿ ಬ್ರೇಕ್ ಹಾಕಿದಾಗಲೂ, ಮುಗ್ಗರಿಸುತ್ತಿದ್ದೆವು. ಇದ್ದಕ್ಕಿದ್ದಂತೆ ಬಸ್ಸು ಕುದುರೆಯಂತೆ ನೆಗೆದು ತಲೆಗೆ ಬಸ್ಸಿನ ಮಾಡು ತಗಲಿ ಫಟ್ ಅಂತ ಬಲವಾದ ಏಟು ಸಿಗುತ್ತಿತ್ತು. ಹಲವಾರು ಬಾರಿ ಪ್ರಪಾತದ ಅಂಚಿನಲ್ಲಿ ಬಸ್ಸು ನಿಂತಾಗ ಜೀವ ಬಾಯಿಗೆ ಬಂದಂತಾಯಿತು. ನನ್ನ ಪಕ್ಕ ಕುಳಿತಿದ್ದ ಜಯಂತಿ ಎಂಬ ಹೆಸರಿನ ನೇಪಾಳಿ ಚೆಲುವೆಯಂತೂ, ಬಸ್ ಬ್ರೇಕ್ ಹಾಕಿದಾಗಲೆಲ್ಲ ತಾರಕ ಸ್ವರದಲ್ಲಿ ಕಿರುಚುತ್ತಿದ್ದಳು. ಡ್ರೈವರ್ ನ ಸಹಾಯಕ
ಆಗಾಗ್ಗೆ ಬಂದು ನೇಪಾಳಿ ಭಾಷೆಯಲ್ಲಿ, ಕಿರುಚಬೇಡಿ, ಡ್ರೈವರ್ ಗೆ ಗೊಂದಲವಾಗುತ್ತದೆ ಎಂದು ಗದರಿಸಿದ್ದೂ ಆಯಿತು.
‘ತೋತಾಪಾನಿ’ ಎಂಬ ಹಳ್ಳಿಯಲ್ಲಿ ಊಟಕ್ಕೆ ಬಸ್ಸನ್ನು ನಿಲ್ಲಿಸಿದರು. ತಂದಿದ್ದ ಚಿತ್ರಾನ್ನ ತಿಂದೆವು. ಅಲ್ಲಿದ್ದ ಪುಟ್ಟ ಹೋಟೆಲ್ ನಲ್ಲಿ `ಚಹಾ ಕುಡಿದೆವು. ಬಸ್ಸು ಪುನ: ಹೊರಟಿತು. ಕಾಲುದಾರಿಯ ಚಾರಣಕ್ಕೆ ತಕ್ಕುದಾಗಿದ್ದ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ನಾವು, ಬಸ್ಸಿನೊಳಗೇ ಇದ್ದುಕೊಂಡು, ಸೈಕಲ್ ನಂತೆ ಹೊಯ್ದಾಡುತ್ತಾ, ದೋಣಿಯಂತೆ ತುಯ್ದಾಡುತ್ತಾ, ಕುದುರೆಯಂತೆ ನೆಗೆಯುತ್ತಾ ಧೂಳೆಬ್ಬಿಸಿಕೊಂಡು, ಬೇನಿ, ಲೇತೆ, ದಾನಾ, ಕೊವಾಂಗ್ ಮೊದಲಾದ ಹಳ್ಳಿಗಳ ಮೂಲಕ , ಗಿರಿಕಂದರಗಳನ್ನು ದಾಟಿ ಹೋದೆವು. ನಿಜಕ್ಕೂ ಈ ಪ್ರಯಾಣ ಸುಸ್ತು ಹೊಡೆಸಿತ್ತು. ನನ್ನ ಅಮ್ಮ ಹಾಗೂ ಇತರ ಹಿರಿಯ ಸಹಯಾತ್ರಿಗಳು ಬಾರದೆ ಇರುವ ನಿರ್ಧಾರ ತೆಗೆದುಕೊಂಡಿದ್ದು ಒಳ್ಳೆಯದೇ ಆಯಿತು, ನಮಗೆ ಮುಕ್ತಿನಾಥದ ಹೋಗುವ ದಾರಿಯಲ್ಲಿಯೇ ‘ಮುಕ್ತಿ’ ಲಭಿಸಿದರೂ ಆಚ್ಚರಿಯೇನಿಲ್ಲ ಅಂದುಕೊಂಡೆವು.
ಡ್ರೈವರ್ ರಾಜಕುಮಾರನ ಚಾಣಾಕ್ಷತನವನ್ನು ಮೆಚ್ಚಲೇಬೇಕು. ರಸ್ತೆ ಅತಿ ಕೆಟ್ಟದಾಗಿದ್ದರೂ, ನಮ್ಮನ್ನು ಸುರಕ್ಷಿತವಾಗಿ ಗಮ್ಯ ಸ್ಥಾನವನ್ನು ತಲಪಿಸಿದ್ದ. ಪೋಖ್ರಾದಿಂದ ಜೋಮ್ ಸಮ್ ಗೆ 157 ಕಿ.ಮೀ ದೂರ.ಇ ದನ್ನು ಕ್ರಮಿಸಲು ಹೆಚ್ಚು ಕಡಿಮೆ 8 ಗಂಟೆ ಬೇಕಾಯಿತು. ಸಂಜೆ 5 ರ ಸುಮಾರಿಗೆ ಜೋಮ್ ಸಮ್ ತಲಪಿದೆವು.
ಜೋಮ್ ಸಮ್ ನ ‘ನೀರು ಗೆಸ್ಟ್ ಹೌಸ್ ‘ ನಲ್ಲಿ ನಮ್ಮ ಅಂದಿನ ವಾಸ್ತವ್ಯ. ಚಳಿಯನ್ನು ತಡೆಯಲು ಸಾಧ್ಯವಾಗುವಂತೆ ಕಟ್ಟಿಸಿದ ಹೋಟೆಲ್ ವಸತಿ ಅದು. ಹೊರಗಿನ ಗೋಡೆಯನ್ನು ಇಟ್ಟಿಗೆಯಿಂದಲೂ, ಒಳಗಿನ ಗೋಡೆಯನ್ನು ಕಟ್ಟಿಗೆಯಿಂದಲೂ ಕಟ್ಟಿದ ಚೊಕ್ಕವಾಗಿದ್ದ ವಸತಿ ಅದು. ಮಹಡಿ ಮೇಲೆಯೂ ರೂಮುಗಳಿದ್ದುವು. ಹಳೆಯ ಕಲಾತ್ಮಕ ವಸ್ತುಗಳನ್ನು ಜೋಡಿಸಿದ್ದ ವಸತಿ ಚಿಕ್ಕದಾದರೂ ಚೊಕ್ಕವಾಗಿತ್ತು. ಪುಟ್ಟ ಹಾಲ್ ನ ಮಧ್ಯದಲ್ಲಿ ಹೀಟರ್ , ಕಾಫಿ ವೆಂಡಿಂಗ್ ಮೆಶಿನ್ ಇತ್ತು. ಹೋಟೆಲ್ ನಡೆದುತ್ತಿದ್ದವರ ಹೆಸರು ‘ಜಂಗ’ . ನಮ್ಮ ಕೋರಿಕೆಯ ಮೇರೆಗೆ ರಾತ್ರಿ ಊಟಕ್ಕೆ ಅನ್ನ, ದಾಲ್, ರೋಟಿ, ಮೊಸರು ಕೊಡಬಹುದು ಎಂದ. ಅಲ್ಲಿದ್ದ ಸಹಾಯಕನ ಹೆಸರು ಮನೋಹರ. ನಾವು ಕೆಲವರು ನೇಪಾಳಿ ರೂ. 60/- ಕೊಟ್ಟು ವೆಂಡಿಂಗ್ ಮೆಶಿನ್ ನ ಕಾಫಿ ಕುಡಿದೆವು.
(ಮುಂದುವರಿಯುವುದು)
ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 3 : http://52.55.167.220/?p=13831
– ಹೇಮಮಾಲಾ.ಬಿ
ಎನೂ ಹೇಳಲು ಪದಗಳೇ ಸಿಗುತ್ತಿಲ್ಲ
ಪ್ರವಾಸ ಕಥನ ಚೆನ್ನಾಗಿ ಬರುತ್ತಿದೆ Waiting for the next episode.