ಲುಂಬಿನಿ…ಗೌತಮ ಬುದ್ಧನ ಜನ್ಮಸ್ಥಳ
26 ಫೆಬ್ರವರಿ 2017 ರಂದು ನೇಪಾಳದ ಕಟ್ಮಂಡುವಿಗೆ ವಿದಾಯ ಹೇಳಿ ಭಾರತಕ್ಕೆ ಮರಳುವ ದಾರಿಯಲ್ಲಿ ‘ಲುಂಬಿನಿ’ಯನ್ನು ವೀಕ್ಷಿಸಿ, ಸಂಜೆ ಭಾರತದ ಸೋನಾಲಿ ಬಾರ್ಡರ್ ನಲ್ಲಿ ವಿಶ್ರಾಂತಿ ಎಂದು ನಮ್ಮ ಪ್ರವಾಸದ ಆಯೋಜಕರು ತಿಳಿಸಿದಾಗ ರೋಮಾಂಚನವಾಯಿತು.
‘ಲುಂಬಿನಿ’ ಎಂಬ ಹೆಸರಿನಲ್ಲಿಯೇ ಅದೆಷ್ಟು ಆಕರ್ಷಣೆಯಿದೆ! ಬೌದ್ಧ ಧರ್ಮವನ್ನು ಹುಟ್ಟುಹಾಕಿದ ಗೌತಮ ಬುದ್ಧನ ಹುಟ್ಟೂರು! ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಊರು! ಲುಂಬಿನಿಯು ಭಾರತ-ನೇಪಾಳದ ಗಡಿಯಲ್ಲಿರುವ ಸೋನಾಲಿ ಬಾರ್ಡರ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.
ಕಪಿಲವಸ್ತುವಿನ ರಾಜನಾಗಿದ್ದ ಶಾಕ್ಯ ವಂಶದ ದೊರೆ ಶುದ್ಧೋಧನನ ರಾಣಿ ಮಾಯಾದೇವಿಯು, ಬಸುರಿಯಾಗಿದ್ದಾಗ ತನ್ನ ತವರಿಗೆ ಹೋಗುವ ದಾರಿಯಲ್ಲಿ ಲುಂಬಿನೀ ವನದಲ್ಲಿ, ವೈಶಾಖ ಶುದ್ಧ ಪೂರ್ಣಿಮೆಯಂದು, ತೇಜೋವಂತನಾಗಿದ್ದ ಗಂಢು ಶಿಶುವಿಗೆ ಜನ್ಮ ಕೊಟ್ಟಳು. ‘ಸಿದ್ಧಾರ್ಥ’ ಎಂಬ ಹೆಸರಿನ ಈ ರಾಜಕುಮಾರನಿಗೆ ಸಂನ್ಯಾಸಿ ಯೋಗವಿದೆ ಅರಿತುದದರಿಂದ, ಪ್ರಪಂಚದ ದು:ಖ, ಕಷ್ಟಗಳಾವುವೂ ಆತನ ಕಣ್ಣಿಗೆ ಬೀಳದಂತೆ ಶುದ್ಧೋಧನನನು ಎಚ್ಚರಿಕೆ ವಹಿಸಿದ್ದ. ಆದರೂ, ತನ್ನ ಯೌವನದ ದಿನಗಳಲ್ಲಿ ಅದೊಂದು ದಿನ ಅಕಸ್ಮಾತ್ ಆಗಿ ವೃದ್ಧ, ರೋಗಿ ಮತ್ತು ಮರಣವನ್ನು ಕಣ್ಣಾರೆ ಕಂಡು ವ್ಯಾಕುಲನಾದ ಸಿದ್ಧಾರ್ಥನು ವಿರಕ್ತನಾಗಿ ಅರಮನೆಯನ್ನೂ, ಸಂಸಾರವನ್ನೂ ಬಿಟ್ಟು ಮನುಷ್ಯನ ದು:ಖಕ್ಕೆ ಮೂಲ ಕಾರಣವನ್ನು ಹುಡುಕಲು ಹೊರಟ. ಧ್ಯಾನಬಲದಿಂದ ‘ಬುದ್ಧ’ನಾದ. ಬೌದ್ಧ ಧರ್ಮವನ್ನು ಸ್ಥಾಪಿಸಿದ. ಬುದ್ಧನ ಜೀವಿತಾವಧಿ ಕ್ರಿಸ್ತಪೂರ್ವ 583 – 480 ( 80 ವರ್ಷ).
ಈಗಿನ ಲುಂಬಿನಿಯ ಪರಿಸರ ಸ್ವಚ್ಛವಾಗಿ ಉತ್ತಮ ನಿರ್ವಹಣೆಯಲ್ಲಿದೆ. ವಿಶಾಲವಾದ ಉದ್ಯಾನದ ಮಧ್ಯದಲ್ಲಿ, ಶ್ವೇತವರ್ಣದ ಮಾಯಾದೇವಿಯ ಅರಮನೆ ಇದೆ. ಇದರ ಮಧ್ಯಭಾಗದಲ್ಲಿ ಆಕೆ ಬುದ್ಧನಿಗೆ ಜನ್ಮ ಕೊಟ್ಟ ಸ್ಥಳಕ್ಕೆ ಗಾಜಿನ ಚೌಕಟ್ಟನ್ನು ಹಾಕಿ ಇರಿಸಿದ್ದಾರೆ. ಸುತ್ತಲೂ ಹಳೆಯ ಇಟ್ಟಿಗೆಗಳ ಆವರಣವಿದೆ.
ಪುಷ್ಕರಿಣಿಯ ಪಕ್ಕದಲ್ಲಿ ಅಶೋಕ ಚಕ್ರವರ್ತಿಯು ಕ್ರಿಸ್ತ ಪೂರ್ವ 249 ರಲ್ಲಿ, ಇಲ್ಲಿಗೆ ಬಂದಿದ್ದಾಗ ಬರೆಸಿದ ಶಿಲಾಶಾಸನವಿದೆ. ಪಾಲಿ ಭಾಷೆಯಲ್ಲಿರುವ ಈ ಶಾಸನದಲ್ಲಿ, ಗೌತಮ ಬುದ್ಧನು ಈ ಸ್ಥಳದಲ್ಲಿ (ಲುಂಬಿನಿಯಲ್ಲಿ) ಜನಿಸಿದನೆಂಬ ಉಲ್ಲೇಖವಿದೆ. ಹೀಗೆ, ಈ ಸ್ಥಳಕ್ಕೆ ಐತಿಹಾಸಿಕ ಪ್ರಾಮುಖ್ಯತೆಯೂ ಇದೆ.
ಅಲ್ಲಿಂದ ಹೊರಬಂದಾಗ ಶುಭ್ರವಾದ ವಿಶಾಲವಾದ ಪುಷ್ಕರಿಣಿ ಕಾಣಿಸುತ್ತದೆ. ಪಕ್ಕದಲ್ಲಿ ಹಲವಾರು ಸ್ತೂಪಗಳಿವೆ. ಉದ್ಯಾನದಲ್ಲಿದ್ದ ಅರಳಿಮರಗಳಿಗೆ ಬಣ್ಣಬಣ್ಣದ ಪತಾಕೆಗಳನ್ನು ಕಟ್ಟಿದ್ದರು.
ನಾವು ಹೋಗಿದ್ದ ಸಮಯದಲ್ಲಿ ಅಲ್ಲಿ ಯಾವುದೇ ಪೂಜೆ, ಆಚರಣೆ, ಅಲಂಕಾರ, ಗದ್ದಲ ಇರಲಿಲ್ಲ. ಬಹುಶ: ಇಲ್ಲಿ ಯಾವುದೇ ರೀತಿ ಪೂಜೆ, ಅಚರಣೆಯ ಪದ್ಧತಿ ಇಲ್ಲ ಎನಿಸಿತು. ಉದ್ಯಾನದ ಹುಲ್ಲುಹಾಸಿನಲ್ಲಿ ಆಲ್ಲಲ್ಲಿ ಕೆಂಪು ಉಡುಗೆ ತೊಟ್ಟಿದ್ದ ಬೌದ್ಧ ಧರ್ಮೀಯರು ಶಾಂತವಾಗಿ ಧ್ಯಾನವನ್ನೋ, ಮಂತ್ರಪಠನವನ್ನೋ ಮಾಡುತ್ತಿದ್ದರು. ಒಟ್ಟಿನಲ್ಲಿ, ಶಾಂತವಾದ, ಸ್ವಚ್ಛವಾದ, ಹಸಿರಾದ ಲುಂಬಿನಿಯ ಪರಿಸರ ಇಷ್ಟವಾಯಿತು.
– ಹೇಮಮಾಲಾ.ಬಿ
(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಿತವಾದ ಬರಹ)
ಬುದ್ಧನ ಜನ್ಮ ಸ್ಥಳ ವಿಕ್ಷಿಸಿದ ನೀವೇ ಧನ್ಯರು, ಲೇಖನ ಇಷ್ಟವಾಯಿತು.
ಧನ್ಯವಾದಗಳು..
ನಿಮ್ಮ ಲೇಖನ ಇಷ್ಟವಾಯಿತು