ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 2
ಹರಿದ್ವಾರದ ರಾಮಭವನ
ರೈಲಿಳಿದು ಲಗೇಜು ಹೊತ್ತು ಅನತಿ ದೂರದಲ್ಲೇ ಇದ್ದ ರಾಮಭವನ ವಸತಿಗೃಹಕ್ಕೆ ಬಂದೆವು. ನಾವು ಸವಿತ, ನಾನು, ಹೇಮಮಾಲಾ ಮೂರು ಮಂದಿ ಒಂದು ಕೋಣೆಯಲ್ಲಿ. ಮೂರು ಮಂಚಗಳಿತ್ತು. ಎರಡು ದಿನದಿಂದ ಸ್ನಾನವಿಲ್ಲದೆ ಮೈ ತುರಿಕೆ . ತಣ್ಣೀರು ಸ್ನಾನವಾಗಿ ಮಲಗಿದಾಗ 12.45.
ರಾಮಭವನದ ಹಿನ್ನೆಲೆ: ಪಂಡಿತ್ ಹರ್ ಗೋಲಾಲ್ ಶರ್ಮಾ ಇದರ ಕತೃ. (1882-1976) ಇದೊಂದು ನೋಂದಾಯಿತ ಸಂಸ್ಥೆ. ಇಲ್ಲಿ ಕಡಿಮೆ ದರದಲ್ಲಿ ಕೋಣೆ ದೊರೆಯುತ್ತದೆ. ವ್ಯವಸ್ಥೆ ಚೆನ್ನಾಗಿದೆ. ಮೂರು ಮಹಡಿಯಲ್ಲಿ ಸುಮಾರು 35 ಕೋಣೆಗಳಿವೆ.
ಗಂಗಾಸ್ನಾನ
ಬೆಳಗ್ಗೆ (12-09-2016) ಎದ್ದು ರಾಮಭವನದ ಎದುರು ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ ಕುಡಿದು, ಪಕ್ಕದಲ್ಲೇ ಇರುವ ಹೋಟೇಲಿನಲ್ಲಿ ಹೇಮಾಮಾಲಾ ಎರಡು ಪರೋಟ ಕೊಂಡು ನಾವೊಂದಷ್ಟು ಮಂದಿ ರುಚಿ ನೋಡಿದೆವು. 8.30 ಕ್ಕೆ ಎಲ್ಲರೂ ಗಂಗಾನದಿಯತ್ತ ಹೊರಟೆವು. ನಡೆದು ಹೋಗುವಷ್ಟೇ ದೂರದಲ್ಲಿ ಗಂಗಾನದಿ ಹಾಗೂ ಹರಿಕಾ ಪೌಡಿ ದೇವಾಲಯವಿದೆ. ಮೊದಲಿಗೆ ಮೊಸಳೆ ಮೇಲೆ ಕೂತಿರುವ ಗಂಗಾದೇವಿಯ ದೇವಾಲಯ ನೋಡಿದೆವು.
ಅಲ್ಲಿಂದ ಹೊರಟು ನದಿಗೆ ಇಳಿದೆವು. ಮೂರುಸಲ ಮುಳುಗು ಹಾಕಿದೆ. ನದಿಯಲ್ಲಿ ನಾನು ಮುಳುಗು ಹಾಕಿದ್ದು ಇದೇ ಪ್ರಥಮಸಲ! ಹಾಗಾಗಿ ಮೊದಲಬಾರಿಗೆ ಮುಳುಗು ಹಾಕಿದಾಗ ಉಸಿರುಕಟ್ಟಿತು. ತಲೆ ಮುಳುಗಲಿಲ್ಲ ಎಂದರು. ಮತ್ತೆ ಮೂಗು ಮುಚ್ಚಿ ಮುಳುಗು ಹಾಕಿದಾಗ ಸರಿ ಹೋಯಿತು. ನೀರಿನ ರಭಸ ಸಾಕಷ್ಟಿತ್ತು. ಕಬ್ಬಿಣದ ಸಲಾಕೆ ಹಾಕಿದಲ್ಲಿಂದ ದಾಟಿ ಮುಂದೆ ಹೋಗಬಾರದು. ಸಲಾಕೆ ಹಿಡಿದುಕೊಂಡು ಸ್ನಾನ ಮಾಡಬಹುದು. ಅಪಾಯವಿಲ್ಲ. ಎಲ್ಲರೂ ಗಂಗಾಸ್ನಾನ ಮಾಡಿ ನೀರಿನಿಂದ ಮೇಲೆ ಬಂದು ಬಟ್ಟೆ ಬದಲಾಯಿಸಿದೆವು. ಅಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ನಾವೇ ಅಂಗಡಿಮರೆಯಲ್ಲಿ ಒಬ್ಬರಿಗೊಬ್ಬರು ಅಡ್ಡ ನಿಂತು ಸುಧಾರಿಸಿದೆವು. ನದಿಗೆ ಗಂಗಾರತಿ ಮಾಡಿದೆವು.
ಹರ್ ಕೀ ಪೌರಿ (ಡಿ)
ದೇವಾಲಯಕ್ಕೆ ಹೋದೆವು. ಎಲ್ಲ ಕಡೆ ಪಂಡಿತರು ದುಡ್ಡು ಹಾಕಿ ದುಡ್ಡು ಹಾಕಿ ಎಂದು ಹೂಂಕರಿಸುತ್ತಿದ್ದದ್ದು ನೋಡುವಾಗ ಇರುವ ಭಕ್ತಿಯೂ ಹೋಗಿ ಇಲ್ಲಿಂದ ಹೊರಗೆ ಹೋದರೆ ಸಾಕಪ್ಪ ಎನಿಸುತ್ತದೆ. ನಮ್ಮ ಕಡೆಯ ದೇವಾಲಯದಲ್ಲಿದ್ದಂತೆ ದೇವರ ಮೂರ್ತಿ ಅಷ್ಟು ಭವ್ಯವೆನಿಸುವುದಿಲ್ಲ. ಬೊಂಬೆಗಳಂತೆ ಕಾಣುತ್ತದೆ.
ಭಾರತ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇಶ. ಧಾರ್ಮಿಕ ಕ್ಷೇತ್ರಗಳಿಂದ ಧಾರ್ಮಿಕ ನಂಬಿಕೆಗಳಿಂದ ಹರಿದ್ವಾರ ಪ್ರಸಿದ್ಧಿ ಪಡೆದಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ವಿಷ್ಣು ಹಾಗೂ ಶಿವನ ಆವಾಸ ಸ್ಥಾನ. ಪವಿತ್ರ ಪಾಪನಾಶಿನಿ ಗಂಗಾನದಿ ಅತ್ಯಂತ ಪ್ರಸಿದ್ಧ. ಹರಿದ್ವಾರ ಅಥವಾ ಹರದ್ವಾರ ಇದರ ಅರ್ಥ ದೇವರ ಮಹಾದ್ವಾರ ಎಂದಾಗಿದೆ. ಇದೊಂದು ಬಹುಮುಖ್ಯ ಯಾತ್ರಾ ಕೇಂದ್ರವಾಗಿದ್ದು, ಸುಂದರ ಪರ್ವತ ರಾಜ್ಯವಾದ ಉತ್ತರಖಂಡದಲ್ಲಿದೆ. ಈ ಸ್ಥಳವು ಉತ್ತರಖಂಡದ ಚಾರ್ ಧಾಮ ಯಾತ್ರಾ ಸ್ಥಳಗಳಿಗೆ ಹೋಗಲು ಹೆಬ್ಬಾಗಿಲು. ಈ ಸ್ಥಳವು ಸುಪ್ರಸಿದ್ಧ ರಾಜ ವಿಕ್ರಮಾದಿತ್ಯನ ಕಾಲದ್ದು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಬ್ರಹ್ಮ ಕುಂಡ್ ಎಂದು ಕರೆಯಲಾಗುವ ಹರ್ ಕೀ ಪೌರಿ ಇಲ್ಲಿಯ ಪ್ರಮುಖ ಮತ್ತು ಶೃದ್ಧಾಭಕ್ತಿಯ ಸ್ಥಳ. ಈ ಘಟ್ಟಗಳಲ್ಲಿರುವ ಹೆಜ್ಜೆಗುರುತುಗಳನ್ನು ಹಿಂದೂ ಭಗವಾನ್ ವಿಷ್ಣುವಿನ ಹೆಜ್ಜೆಗಳು ಎಂದು ನಂಬಲಾಗಿದೆ. ಅನೇಕ ಭಕ್ತರು ಮುಂಡನ, ಅಸ್ಥಿ ವಿಸರ್ಜನೆ ಮಾಡಲು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಇಲ್ಲಿ ಆಯೋಜಿಸಲಾಗುತ್ತದೆ. ಆಗ ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರು ಈ ಧಾರ್ಮಿಕ ಉತ್ಸವದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ.
ದೇವಾಲಯ ಎಲ್ಲ ಸುತ್ತಿ ಹೊರಗೆ ಬಂದು ದಾರಿಯಲ್ಲಿ ಪರೋಟ ತಿಂದು ಕೋಣೆ ಸೇರುವಾಗ ೧೧.೪೫. ಬಟ್ಟೆ ಒಗೆದು ಹಾಕಿ ವಿಶ್ರಾಂತಿ.
ಅನ್ನಪೂರ್ಣೆ ಸದಾಪೂರ್ಣೆಯರು
ಶಶಿಕಲಾ (52) ಸರಸ್ವತಿ (67) ಇಬ್ಬರೂ ಸಾಕ್ಷಾತ್ ಅನ್ನಪೂರ್ಣೇ ಸದಾಪೂರ್ಣೆಯರೇ. ಕ್ಷಿಪ್ರವಾಗಿ ಅನ್ನ ಸಾಂಬಾರ್ ತಯಾರಿಸಿ ನಮಗೆಲ್ಲ ಉಣಬಡಿಸಿದರು. ನಮ್ಮ ಈ ಯಾತ್ರೆಯಲ್ಲಿ ಎಲ್ಲಿಲ್ಲಿ ಅಡುಗೆ ಮಾಡಲು ಅವಕಾಶವಾಗಿದೆಯೋ ಅಲ್ಲೆಲ್ಲ ಇವರಿಬ್ಬರೂ ಸದಾ ಉತ್ಸಾಹದಿಂದ ಸ್ವಯಂಪ್ರೇರಣೆ ಯಿಂದಲೇ ಅಡುಗೆ ಮಾಡಿದ್ದರು. ನಗುನಗುತ್ತಲೇ ತಟ್ಟೆಗೆ ಊಟ ಹಾಕಿದ್ದರು. ನಮ್ಮ ಉದರದ ಯೋಗಕ್ಷೇಮ ನೋಡಿಕೊಂಡ ಕಾರಣ ಎಲ್ಲಿಯೂ ಯಾರಿಗೂ ಹೊಟ್ಟೆ ಕೆಡಲಿಲ್ಲ.
ಬಯೋಮೆಟ್ರಿಕ್ (ಫೋಟೋಮೆಟ್ರಿಕ್?)
ಊಟವಾಗಿ ಸಂಜೆ ಮೂರು ಗಂಟೆಗೆ ಹೊರಟು ರೈಲು ನಿಲ್ದಾಣದ ಎದುರು ಭಾಗದಲ್ಲಿರುವ ಟೂರಿಸ್ಟ್ ಆಫೀಸ್ ಗವರ್ನ್‌ಮೆಂಟ್ ಉತ್ತರಾಖಾಂಡ ಇಲ್ಲಿ ನಮ್ಮ ಬಯೋಮೆಟ್ರಿಕ್ ಕಾರ್ಡ್ ಮಾಡಿಸಿದೆವು. ಚಾರ್ ಧಾಮ ಯಾತ್ರೆಗೆ ಹೋಗುವವರು ಇದನ್ನು ಮಾಡಿಸಬೇಕಂತೆ. ನಮ್ಮ ಫೋಟೊ ತೆಗೆದು, ಧೃಡೀಕೃತ ವಿಳಾಸವಿರುವ ಗುರುತಿನ ಚೀಟಿ ತೋರಿಸಬೇಕು. ಆಗ ನಮಗೊಂದು ಕಾರ್ಡ್ ಕೊಡುತ್ತಾರೆ. ಅದನ್ನು ನಾಲ್ಕು ಕಡೆಯೂ ಹೋದಾಗ ತೋರಿಸಬೇಕು. ಎಲ್ಲರಿಗೂ ಆ ಕಾರ್ಡ್ ಉಚಿತವಾಗಿಯೇ ದೊರೆಯಿತು.
ಋಷಿಕೇಶದತ್ತ ಪಯಣ
ಎರಡು ಆಟೋರಿಕ್ಷಾಗಳಲ್ಲಿ (ಒಂಬತ್ತು ಮಂದಿ ಕೂರುವಂಥದು ರೂ. 2000/-) ನಾವು ಋಷಿಕೇಶದತ್ತ ಪಯಣ ಬೇಳೆಸಿದೆವು. ಹರಿದ್ವಾರದಿಂದ ಸುಮಾರು 24 ಕಿಮೀ. ದಾರಿಯಲ್ಲಿ ಬೃಹತ್ತಾದ ಆಂಜನೇಯ ದೇವಾಲಯ ನೋಡಿದೆವು. ಋಷಿಕೇಶ ತಲಪುವಾಗ ಮಳೆ ಸುರಿಯಿತು. ಮಳೆ ಅಂಗಿ ಕೋಣೆಯಲ್ಲಿ ಬ್ಯಾಗಿನಲ್ಲಿ ಬೆಚ್ಚಗೆ ಇತ್ತು! ನಾವು ರಿಕ್ಷಾ ಇಳಿಯುವಾಗಲೇ ಒಬ್ಬ ಮಳೆಅಂಗಿ ಹಿಡಿದು ನಮ್ಮನ್ನು ಸ್ವಾಗತಿಸಿದ್ದ. ಎಲ್ಲರೂ ತಲಾ ರೂ. 20 ಕೊಟ್ಟು ತೆಳ್ಳಗಿನ ಮಳೆ ಅಂಗಿಯನ್ನು ಕೊಂಡೆವು. ಕೆಲವರದು ಅದನ್ನು ಹಾಕಿಕೊಳ್ಳುವಾಗಲೇ ಪರ್ ಎಂದಿತು. ಆದರೂ ಮಳೆಯಿಂದ ನಮ್ಮ ಕ್ಯಾಮರಾ, ಮೊಬೈಲ್ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುವಲ್ಲಿ ನೆರವಾಯಿತು.
……….ಮುಂದುವರಿಯುವುದು
ಈ ಪ್ರವಾಸಕಥನದ ಭಾಗ 1 : ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 1
– ರುಕ್ಮಿಣಿಮಾಲಾ, ಮೈಸೂರು
ಪ್ರತ್ಯಕ್ಷ ಅನ್ನಪೂರ್ಣೆ ಸದಾಪೂರ್ಣೆಯರಿಗೆ ನನ್ನ ನಮನಗಳು.ಹರಿದ್ವಾರದ ಅನುಭವಗಳು ಓದಲು ಖುಷಿಯಾಯ್ತು.
ಧನ್ಯೋಸ್ಮಿ