ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 1
ಕೈಬೀಸಿ ಕರೆಯುವ ಹಿಮಾಲಯ
ಅಗಾಧವಾದ ಹಿಮಾಲಯದ ತಪ್ಪಲಲ್ಲಿ ನೋಡಿ ಮುಗಿಯದಷ್ಟು ಸ್ಥಳಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ) ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಅಂತೆಯೇ ನನಗೂ ಆ ಕನಸಿತ್ತು. ಕನಸಿಗೆ ಪುಷ್ಟಿ ನೀಡುವಂತೆ 2016 ಮೇ ತಿಂಗಳಲ್ಲಿ ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಗೋಪಕ್ಕ ‘ಚಾರಧಾಮ ಯಾತ್ರೆಗೆ ಬರುತ್ತೀರ? ಸೆಪ್ಟೆಂಬರದಲ್ಲಿ ಹೋಗುವುದು’ ಎಂದು ಕೇಳಿದರು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಈ ಪ್ರಶ್ನೆ ಇತ್ತು! ಕೈಕಾಲು ಗಟ್ಟಿಯಾಗಿದ್ದಾಗಲೇ ಈ ಯಾತ್ರೆ ಮಾಡಿದರೆ ಒಳ್ಳೆಯದು ಎಂದು ಬರುತ್ತೇನೆ ಎಂಬ ಉತ್ತರ ಕೊಟ್ಟೆ. ಚಾರ್‌ಧಾಮಕ್ಕೆ ಹೋಗೋಣವೇ? ಎಂದು ಮನೆಯಲ್ಲಿ ಅನಂತನನ್ನು ಕೇಳಿದೆ. ಸೆಪ್ಟೆಂಬರ್ ತಿಂಗಳು ಕಛೇರಿಯಲ್ಲಿ ತುಂಬ ಕೆಲಸ. ಆಗುವುದೇ ಇಲ್ಲ. ನೀನು ಹೋಗಿ ಬಾ ಎಂದಾಗ ಜೊತೆಯಲ್ಲಿ ಬಂದಿದ್ದರೆ ಚೆನ್ನಾಗಿತ್ತು ಎಂದು ಅನಿಸಿತು. ತಂಡ ಚೆನ್ನಾಗಿರುವುದರಿಂದ ಒಬ್ಬಳೇ ಆದರೂ ಹೋಗುವುದೆಂದು ತೀರ್ಮಾನಿಸಿದೆ.
ಯಾತ್ರೆಗೆ ಪೂರ್ವ ತಯಾರಿ
ಈ ಯಾತ್ರೆಗೆ ರೈಲಲ್ಲಿ ಹೋಗುವುದಾದರೆ ಸುಮಾರು ನಾಲ್ಕೈದು ತಿಂಗಳು ಮೊದಲೆ ಟಿಕೆಟ್ ಕಾದಿರಿಸಬೇಕಾಗುತ್ತದೆ. ಹಾಗಾಗಿ ಮೇ ತಿಂಗಳಲ್ಲೇ 2016 ಸೆಪ್ಟೆಂಬರ 9 ಕ್ಕೆ ಬೆಂಗಳೂರಿನಿಂದ ದೆಹಲಿಗೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು, ದೆಹಲಿಯಿಂದ ಹರಿದ್ವಾರಕ್ಕೆ 11 ರಂದು ಜನ ಶತಾಬ್ದಿ ರೈಲಲ್ಲಿ ಮುಂಗಡ ಟಿಕೆಟ್ ಕಾದಿರಿಸಿದರು. ಅಷ್ಟು ಬೇಗ ಕಾದಿರಿಸಿದ್ದರೂ ನಮಗೆಲ್ಲರಿಗೂ ಒಂದೇ ಬೋಗಿಯಲ್ಲಿ ಸೀಟು ದೊರೆತಿರಲಿಲ್ಲ. ಇಂಥ ಯಾತ್ರೆಗೆ ತೆರಳಲು ಪೂರ್ವ ತಯಾರಿ ಎಂದರೆ ಮುಖ್ಯವಾಗಿ ದೇಹ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ನಡಿಗೆ, ಯೋಗ, ಸೈಕಲಿಂಗ್, ಇಂಥ ಯಾವುದಾದರೊಂದು ವ್ಯಾಯಾಮ ಇಟ್ಟುಕೊಂಡರೆ ಬಹಳ ಒಳ್ಳೆಯದು. ಆಗ ಅಲ್ಲಿ ನಡೆಯಲು ಕಷ್ಟ ಎನಿಸುವುದಿಲ್ಲ. ಆದರೆ ನಡೆಯಲಾರದವರೂ ಏನೂ ನಿರಾಶರಾಗಬೇಕಿಲ್ಲ. ಡೋಲಿ, ಕುದುರೆ ವ್ಯವಸ್ಥೆ ಬಹಳ ಚೆನ್ನಾಗಿದೆ.
ಎರಡುಪ್ರತಿ ಫೋಟೋ, ಗುರುತಿನ ಚೀಟಿ (ಲೈಸೆನ್ಸ್, ಮತದಾನ ಗುರುತುಪತ್ರ, ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದು), ಹಾಗೂ ಅದರ ನೆರಳಚ್ಚು ಪ್ರತಿ ಎರಡು ಇಟ್ಟುಕೊಂಡಿರಬೇಕು. ಅವಶ್ಯ ಔಷಧಿಗಳು, ಟಾರ್ಚ್, ಚಳಿಗೆ ಟೊಪ್ಪಿ, ಸ್ವೆಟರ್, ಮಳೆ ಅಂಗಿ, ಅವಶ್ಯ ಬಟ್ಟೆಗಳು. ನಮ್ಮ ಲಗೇಜ್ ಹಿತಮಿತದಲ್ಲಿದ್ದರೆ ಪ್ರವಾಸ ಬಲು ಸುಲಭ.
ಚಾರ್ಧಾಮ ಯಾತ್ರೆಯ ರೂವಾರಿ
ಸುಮಾರು ಮೂವತ್ತಕ್ಕೂ ಹೆಚ್ಚು ಸಲ ಹಿಮಾಲಯದ ಬೇರೆ ಬೇರೆ ಕಡೆ ಸುತ್ತಾಡಿ ಅನುಭವ ಇರುವ ವಿಠಲರಾಜು ಅವರು ನಮ್ಮ ಈ ಯಾತ್ರೆಯ ರೂವಾರಿಗಳು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸದಲ್ಲಿದ್ದು, ಈಗ ನಿವೃತ್ತರಾಗಿ ಇಂಥ ಯಾತ್ರೆಗೆ ಸದಭಿರುಚಿಯುಳ್ಳ ಜನರನ್ನು ಕರೆದುಕೊಂಡು ಹೋಗುವಲ್ಲಿ ಪ್ರವೃತ್ತರಾಗಿದ್ದಾರೆ. ಸರಳ ಸಜ್ಜನರೂ, ಪತಂಜಲಿ ಯೋಗ ಶಿಕ್ಷಕರೂ, ಉತ್ತಮ ವಾಗ್ಮಿಗಳೂ ಆಗಿರುವ ವಿಠಲರಾಜು ಅವರು ಅನವಶ್ಯಕ ಖರ್ಚು ಹೇರದೆ ಮಿತವ್ಯಯದಲ್ಲಿ ಈ ಯಾತ್ರೆಯನ್ನು ಸಂಘಟಿಸಿದ್ದಾರೆ. ಅವರಿಗೆ ಅನಂತಾನಂತ ಕೃತಜ್ಞತೆಗಳು.
ಯಾತ್ರೆ ಪ್ರಾರಂಭಕ್ಕೆ ವಿಘ್ನ
2016 ಸೆಪ್ಟೆಂಬರ 9 ರಂದು ಮಧ್ಯಾಹ್ನ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಡುವುದೆಂದು ನಿಗದಿ ಮಾಡಿದ್ದೆವು. ಆದರೆ, ಅದು ನೆರವೇರಲಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ತೀರ್ಪು ಬಂತು. ಕಾವೇರಿಕೊಳ್ಳದಲ್ಲಿ ನೀರಿನ ಕೊರತೆ ಇರುವುದರಿಂದ ಅದಕ್ಕೆ ಕರ್ನಾಟಕದ ಜನತೆ ವಿರೋಧ ವ್ಯಕ್ತಪಡಿಸಲೇಬೇಕಾದ ಅನಿವಾರ್ಯತೆ. ಆದರೂ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗಿ ನೀರು ಬಿಟ್ಟಿತು. ಇದರಿಂದ ಸಹಜವಾಗಿ ರೈತರ ಆಕ್ರೋಶ ಹೆಚ್ಚಿತು. ಅದರ ಅನುಗುಣವಾಗಿ ಸೆಪ್ಟೆಂಬರ 9 ರಂದು ಕರ್ನಾಟಕ ಬಂದ್ ಆಚರಿಸಲು ಕರೆಕೊಟ್ಟ ಕಾರಣ 9 ರಂದು ಬಸ್, ರೈಲು ಯಾವುದೂ ಇರಲಿಕ್ಕಿಲ್ಲವೆಂದು ನಮ್ಮ ಬೆಂಗಳೂರು ಪಯಣ 8 ನೇ ತಾರೀಕಿನಂದೇ ಕೈಗೊಳ್ಳಬೇಕಾಯಿತು. ಹಾಗಾಗಿ ನಾನು ೮ನೇ ತಾರೀಕು ರಾತ್ರೆ ತಂಗಿ ಸವಿತಳ ಮನೆ ಸೇರಿದೆ. ಕಾವೇರಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅತ್ಯಗತ್ಯ. ಇಲ್ಲದಿದ್ದರೆ ಹೀಗೆ ನಷ್ಟದ ಮೇಲೆ ನಷ್ಟವಾಗುತ್ತಲೇ ಇರುತ್ತದೆ. ನಾವು ನೀರನ್ನು ಮಿತವ್ಯಯದಲ್ಲಿ ಖರ್ಚು ಮಾಡಲು ಕಲಿತರೆ ನೀರಿನ ಸಮಸ್ಯೆ ಖಂಡಿತಾ ತಲೆದೋರದು.
ಹೊರಡುವ ಕಾತುರ
ಸೆಪ್ಟೆಂಬರ 9 ರಂದು ಬೆಳಗ್ಗೆಯೇ ಎಲ್ಲ ಕಡೆ ಬಂದ್. ಯಾವ ಅಂಗಡಿಮುಂಗಟ್ಟೂ ತೆರೆದಿರಲಿಲ್ಲ. ಸಂಜೆ ನಾವು ರೈಲು ನಿಲ್ದಾಣ ಸೇರಬೇಕು. ಯಾವ ಅಡೆತಡೆಯೂ ಬಾರದಿರಲಿ ಎಂದು ಹಾರೈಸಿಕೊಂಡೆವು. ರೈಲಲ್ಲಿ ರಾತ್ರೆ ಊಟಕ್ಕೆ ತಂಗಿ ಪುಳಿಯೋಗರೆ ಮೊಸರನ್ನ ತಯಾರಿಸಿದಳು. ತಂಗಿ ಗಂಡ ಭಾವ ರವಿಶಂಕರ ನಮ್ಮನ್ನು ಆರು ಗಂಟೆಯೊಳಗೆ ರೈಲುನಿಲ್ದಾಣಕ್ಕೆ ಕಾರಿನಲ್ಲಿ ಬಿಟ್ಟ. ದಾರಿಯಲ್ಲಿ ಯಾವ ಅಡೆತಡೆಯೂ ಇರಲಿಲ್ಲ. ಅಲ್ಲಲ್ಲಿ ಟಯರು ಸುಟ್ಟ ಅವಶೇಷ ಇತ್ತು. ಕೆಲವರು ಅವರವರ ನೆಂಟರ ಮನೆಯಲ್ಲಿದ್ದು, ಮತ್ತೆ ಕೆಲವರು ರಾತ್ರಿ ರೈಲಲ್ಲಿ ಬಂದು ರೈಲು ನಿಲ್ದಾಣದಲ್ಲೇ ಉಳಿದುಕೊಂಡಿದ್ದರು. ಅಂತಿಮವಾಗಿ ಎಲ್ಲರೂ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹತ್ತಿದೆವು. 7.30 ಕ್ಕೆ ಬೆಂಗಳೂರಿನಿಂದ ರೈಲು ಹೊರಟಿತು.
ನಮ್ಮ ಸೈನ್ಯ
ಈ ಯಾತ್ರೆಗೆ ನಾವು ಒಟ್ಟು 17 ಮಂದಿ ಹೊರಟಿದ್ದೆವು. ಚನ್ನಪಟ್ಟಣದಿಂದ ರಂಗಣ್ಣ, ಶಶಿಕಲಾ ದಂಪತಿಗಳು, ಬೆಂಗಳೂರಿನಿಂದ ಸವಿತ (ನನ್ನ ತಂಗಿ), ಸುನಂದ, ಮೈಸೂರಿನಿಂದ ವಿಠಲರಾಜು, ಗೋಪಿ, ಅನ್ನಪೂರ್ಣ, ಸೋಮಶೇಖರ್- ಸರಸ್ವತಿ ದಂಪತಿಗಳು, ರಂಗಪ್ರಸಾದ್-ಲತಾ ದಂಪತಿಗಳು, ಪೂರ್ಣಿಮಾ, ರುಕ್ಮಿಣಿಮಾಲಾ, ಶೋಭಾ, ಹೇಮಮಾಲಾ, ಸರೋಜ, ಗಾಯತ್ರಿ. ಎಲ್ಲರೂ ಮೈಸೂರಿನ
ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರು.
ರೈಲಿನಲ್ಲಿ ಅವ್ಯವಸ್ಥೆ
ಹದಿನೇಳು ಮಂದಿಗೂ ಒಂದೇ ಬೋಗಿಯಲ್ಲಿ ಸೀಟು ಸಿಕ್ಕಿರಲಿಲ್ಲ. ಮೂರು ಬೇರೆ ಬೇರೆ ಬೋಗಿಯಲ್ಲಿದ್ದೆವು. ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಹೋಗುವುದೇ ಹರಸಾಹಸ. ಅಷ್ಟು ಮಂದಿ ರೈಲಲ್ಲಿ. ನಿಂತು ಕೂಡ ಪ್ರಯಾಣಿಸುವವರಿದ್ದರು. ಹೆಸರಿಗೆ ಕಾದಿರಿಸಿದ ಬೋಗಿ. ಆದರೆ ಆ ಬೋಗಿಗೂ ಜನರು ಹತ್ತುತ್ತಿದ್ದರು. ಬೆಂಗಳೂರಿಂದ ದೆಹಲಿವರೆಗೂ ನಿಂತು, ನೆಲದಲ್ಲಿ ಕೂತು ಪ್ರಯಾಣಿಸುವವರಿದ್ದರು. ಅವರನ್ನು ನೋಡಿದರೆ ಪಾಪ ಅನಿಸುತ್ತದೆ. ರಾತ್ರಿ ಆದೊಡನೇ ಎಲ್ಲಿ ಸ್ಥಳವಿದೆಯೋ ಅಲ್ಲಿ ನೆಲದಲ್ಲಿ ಮಲಗುತ್ತಿದ್ದರು. ರಾತ್ರೆ ಪಾಯಿಖಾನೆಗೆ ಹೋಗಲು ಕಾಲಿಡಲೂ ಸ್ಥಳವಿರುತ್ತಿರಲ್ಲಿ. ಜನ ಹಾಗೆ ಎಲ್ಲೆಂದರಲ್ಲಿ ಮಲಗಿರುತ್ತಿದ್ದರು. ನಮ್ಮ ಸೀಟು ಕೆಳಗಡೆಯೂ ರಾತ್ರೆ ಯಾವ ಸಮಯದಲ್ಲೋ ಮಲಗಿರುತ್ತಿದ್ದರು. ರೈಲು ನಿಂತರೆ ಸಾಕು ಮೂಗುಮುಚ್ಚಿಯೇ ಕೂರಬೇಕು. ಪಾಯಿಖಾನೆಯಿಂದ ಅಸಾಧ್ಯ ವಾಸನೆ. ನಿದ್ರೆಯಲ್ಲೂ ಎಚ್ಚರವಾಗುತ್ತದೆ ಆ ವಾಸನೆಗೆ. ನಮ್ಮ ಸೀಟು ಇದ್ದುದು ಪಾಯಿಖಾನೆಗೆ ಹತ್ತಿರವೇ! ವಾಸನೆ ತಡೆಯಲಾರದೆ ಇದ್ದಾಗ ಅಬ್ಬ ಸಾಕಪ್ಪ ಸಾಕು ಈ ಪಯಣ ಎನ್ನುವಂತಾಗುತ್ತದೆ. ಸೆಖೆಯೂ ಸಾಕಷ್ಟು ಇತ್ತು.
ನಮ್ಮ ಬೋಗಿಯಲ್ಲಿ ಕಸದಬುಟ್ಟಿ ಇರಲಿಲ್ಲ. ಬೇರೆ ಕೆಲವು ಬೋಗಿಗಳಲ್ಲಿ ಇತ್ತಂತೆ. ತಿಂಡಿ ತಿಂದು, ಕಾಫಿ ಕುಡಿದು ತಟ್ಟೆ, ಲೋಟಗಳನ್ನು ರೈಲಿನ ಕಿಟಕಿಯಿಂದ ಹೊರಗೆ ಬೀಸಾಕುತ್ತಿದ್ದರು. ನಾವು ಒಂದು ತೊಟ್ಟೆಯಲ್ಲಿ ಹಾಕಿ ಸೀಟು ಕೆಳಗೆ ಇಡುತ್ತಿದ್ದೆವು. ಅದನ್ನು ಕಸಗುಡಿಸುವವರು ಬಂದಾಗ ತೆಗೆದುಕೊಂಡು ಹೋಗುತ್ತಿದ್ದರು. ಅವರು ಎಲ್ಲಿ ಬೀಸಾಡುತ್ತಾರೋ ಗೊತ್ತಿಲ್ಲ. ಜನರಿಗೆ ಸ್ವಚ್ಛತೆಯ ಪಾಟ ಕಲಿಸುವುದು ಬಹಳ ಕಷ್ಟದ ಕೆಲಸ. ಎಲ್ಲೆಂದರಲ್ಲಿ ಕಸ ಹಾಕುವುದೇ ಜನ್ಮಸಿದ್ಧ ಹಕ್ಕು ಎಂದು ತಿಳಿದವರೇ ಬಹಳ ಜನ.
ಕಾಲವನ್ನು ತಡೆಯೋರು ಯಾರೂ ಇಲ್ಲ!
ಎರಡು ದಿನವಿಡೀ ರೈಲುಪ್ರಯಾಣ. ರೈಲಿನಲ್ಲಿ ಕಾಲ ಕಳೆಯುವುದು ಅಂತ ದೊಡ್ಡ ಸಮಸ್ಯೆಯಲ್ಲ. ಕೈಬಾಯಿಗೆ ಕೆಲಸ ಕೊಟ್ಟರಾಯಿತು! ಪುಸ್ತಕ ಓದುತ್ತ, ಹರಟೆ ಹೊಡೆಯುತ್ತ, ತಂದ ತಿಂಡಿ ಮೆಲ್ಲುತ್ತ, ತೂಕಡಿಸುತ್ತ, ಕೂತು ಬೇಸರವಾದಾಗ ಇನ್ನೊಂದು ಬೋಗಿಗೆ ಹೋಗಿ ನಮ್ಮ ಸಹಯಾತ್ರಿಗಳಲ್ಲಿ ಮಾತಾಡುತ್ತ ಕಾಲ ನೂಕಿದೆವು. ಅಲ್ಲಿಗೆ ಹೋಗುವುದೂ ಹರಸಾಹಸ. ಅಷ್ಟು ಜನಸಂದಣಿ. ಇನ್ನೊಂದು ಬೋಗಿಯಲ್ಲಿದ್ದ ಅನ್ನಪೂರ್ಣ ಅವರು ಸೌತೆಕಾಯಿ, ಟೊಮೆಟೊ, ನೀರುಳ್ಳಿ ಹೆಚ್ಚಿ ಚುರುಮುರಿ ಮಾಡಿಕೊಟ್ಟರು. ಅದಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನು ತಂದಿದ್ದರು. ಬೆಳಗಿನ ತಿಂಡಿಗೆ ಸರೋಜ ಚಪಾತಿ ಕೊಟ್ಟರು. ಹೀಗೆ ತಿಂಡಿ ಹಂಚಿಕೊಳ್ಳುತ್ತ ಮಜವಾಗಿ ಕಾಲ ಕಳೆದೆವು.
ದೆಹಲಿ ತಲಪಿದ ರೈಲು
ಬೆಳಗ್ಗೆ (11-09-2016) 10.30 ಕ್ಕೆ ದೆಹಲಿ ತಲಪಿದೆವು. ಅಲ್ಲಿ ನನ್ನ ಬ್ಯಾಗಿಗೆ ರೂ. 200 ಕೊಟ್ಟು ಚಕ್ರ ಹಾಕಿಸಿದೆ. ಆ ಬ್ಯಾಗ್ ಕೊಳ್ಳಲೂ ಅಷ್ಟು ದುಡ್ಡು ಕೊಟ್ಟಿರಲಿಲ್ಲ! ರೈಲು ನಿಲ್ದಾಣದಲ್ಲಿ ಬ್ಯಾಗಿಗೆ ಜಿಪ್, ಚಕ್ರ ಹಾಕಲು, ಶೂಗೆ ಸೋಲ್ ಹಾಕಲು ತಯಾರಾಗಿ ಪರಿಕರ ಪ್ರದರ್ಶಿಸುತ್ತ ಸಾಕಷ್ಟು ಜನ ನಿಂತಿರುತ್ತಾರೆ. ಉದರನಿಮಿತ್ತಂ ಬಹುಕೃತ ವೃತ್ತಿಂ! ಅವರು ಹೇಳಿದ್ದೇ ರೇಟು. ನಾವು ನಮ್ಮ ಲಗೇಜು ಹೊತ್ತು ಒಂದನೇ ಪ್ಲಾಟ್‌ಫಾರ್ಮಿಗೆ ಬಂದೆವು. ಅಲ್ಲಿ ವಿಶ್ರಾಂತಿ ಕೋಣೆಯಲ್ಲಿ ಕೂತೆವು. ಹತ್ತೂವರೆಯಿಂದ 3 ಗಂಟೆವರೆಗೂ ಅಲ್ಲಿ ಕಾಲಹರಣ ಮಾಡಿದೆವು. ಹೊರಗೆ ಹೋಟೇಲಿನಿಂದ ಊಟ ಕಟ್ಟಿಸಿಕೊಂಡು ಬಂದು ಊಟ ಮಾಡಿದೆವು.
ಹರಿದ್ವಾರದತ್ತ ಪಯಣ
ದೆಹಲಿ- ಡೆಹರಾಡೂನ್ ಜನಶತಾಬ್ಧಿ ರೈಲು ಹತ್ತಿದೆವು. 3.15 ಕ್ಕೆ ಹೊರಡಬೇಕಾದದ್ದು 3.30 ಕ್ಕೆ ಹೊರಟಿತು. ರೈಲು ತುಂಬ ಜನ. ಲಗೇಜು ಇಡಲೂ ಸ್ಥಳವಿಲ್ಲ. ದೆಹಲಿಯಿಂದ ಹರಿದ್ವಾರ 258 ಕಿಮೀ ದೂರ. ಆ ರೈಲಲ್ಲಿ ಹೆಚ್ಚಿನವರೂ ಚಾರ್‌ಧಾಮ ಯಾತ್ರೆಗೆ ಹೋಗುವವರೇ ಇದ್ದದ್ದು. ಶಿರಡಿ, ರಾಯಚೂರಿನಿಂದ ಬಂದ ಪ್ರಯಾಣಿಕರು ತಮಟೆ ಬಾರಿಸುತ್ತ ಭಜನೆ, ಹಾಡು, ನೃತ್ಯ ಮಾಡುತ್ತ ಮನರಂಜನೆ ಒದಗಿಸಿದರು.
ನಮ್ಮವರೂ ಕೆಲವರು ಅವರ ಹಾಡಿಗೆ ಹೆಜ್ಜೆ ಹಾಕಿದರು. ಒಟ್ಟು ಐದು ಗಂಟೆ ಪ್ರಯಾಣ. ಆದರೆ ನಮ್ಮ ರೈಲು ಎರಡು ಗಂಟೆ ತಡ. ಹಾಗಾಗಿ ಏಳು ಗಂಟೆಗಳ ಕಾಲ ಸೆಖೆ ಅನುಭವಿಸುತ್ತ ರೈಲಲ್ಲಿ ಕೂರಬೇಕಾಯಿತು. ಶೌಚಾಲಯದಲ್ಲಿ ನೀರಿಲ್ಲ. ರೈಲು ನಿಂತಾಗ ವಾಸನೆಯಲ್ಲಿ ಮೂಗು ಬಿಡಲು ಸಾಧ್ಯವಿಲ್ಲ. ಕ್ಲೋರೋಫಾರಂ ಇಲ್ಲದೆಯೇ ಪ್ರಜ್ಞೆ ತಪ್ಪಿಸಲು ಸಾಧ್ಯವಾದೀತು!
ಅಂತೂ ರಾತ್ರೆ 10.30 ಕ್ಕೆ ರೈಲು ಹರಿದ್ವಾರ ತಲಪಿತು. ಅಲ್ಲಿ ರೈಲು ನಿಲ್ಲುವುದು ಐದೇ ನಿಮಿಷ. ಅಷ್ಟರಲ್ಲಿ ಸಾಮಾನು ಸರಂಜಾಮು ಇಳಿಸಿ ರೈಲಿಳಿಯಬೇಕಾದರೆ ಹರಸಾಹಸ ಪಡಬೇಕಾಯಿತು.
(….ಮುಂದುವರಿಯುವುದು)
– ರುಕ್ಮಿಣಿಮಾಲಾ, ಮೈಸೂರು
ಬಹಳ ಚೆನ್ನಾಗಿ ನಿಮ್ಮ ಪ್ರಯಾಣ ವಿವರಣೆ ನೀಡಿದ್ದೀರಿ .
ಓದಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದ
ಸರಳ ನಿರೂಪಣೆ ಇಷ್ಟವಾಯ್ತು.ಆದರೆ ನಮ್ಮ ಜನರಿಗೆ ನೈರ್ಮಲ್ಯದ ಬಗ್ಗೆ ಇರುವ ಅಸಡ್ಡೆ ನೋವುಂಟು ಮಾಡುವ ಸಂಗತಿ.
ಈ ಬರಹ ಸರಣಿಯನ್ನು ಹಿಂದೆ ಓದಬೇಕು ಅಂದುಕೊಂಡಿದ್ದೆ,ಓದಲಾಗಿರಲಿಲ್ಲ.ಇಲ್ಲಿ ಓದಲು ಸಿಕ್ಕಿರುವುದಕ್ಕೆ ಖುಷಿಯಾಯಿತು.
ಧನ್ಯವಾದ