‘ಮಾನಾ’ದಲ್ಲಿ ಖಾನಾ…
ಸೆಪ್ಟೆಂಬರ್ 06 ರಿಂದ 25, 2016 ರ ವರೆಗೆ 17 ಮಂದಿಯಿದ್ದ ನಮ್ಮ ತಂಡವು ಚಾರ್ ಧಾಮ್ ಯಾತ್ರೆ ಕೈಗೊಂಡಿತ್ತು. ಪ್ರಯಾಣದ ಭಾಗವಾಗಿ, 20 ಸೆಪ್ಟೆಂಬರ್ ನಂದು, ಬದರೀನಾಥ ಕ್ಷೇತ್ರದಿಂದ ಕೇವಲ 4 .ಕಿ.ಮೀ ದೂರದಲ್ಲಿರುವ ಮಾನಾ ಎಂಬ ಪುಟ್ಟ ಹಳ್ಳಿಗೂ ಭೇಟಿಕೊಟ್ಟಿದ್ದೆವು. ” ಇನ್ನು ಮುಂದೆ 5 ಕಿ.ಮೀ ದೂರದಲ್ಲಿರುವ ‘ವಸುಧಾರಾ ಫಾಲ್ಸ್’ ಗೆ ಚಾರಣ ಮಾಡುವುದಾಗಿಯೂ,ಇದು ಕಷ್ಟದ ಚಾರಣವೆಂದೂ, ಆಸಕ್ತಿ-ಶಕ್ತಿ-ಸಾಮರ್ಥ್ಯ ಇದ್ದವರು ಮಾತ್ರ ಬನ್ನಿ, ಬೇಡ ಎನಿಸಿದರೆ ಮಾನಾ ಹಳ್ಳಿಯನ್ನು ನೋಡಿಕೊಂಡು ಬಸ್ ನಲ್ಲಿ ವಿರಮಿಸಿ, ನಾವು ಚಾರಣ ಮುಗಿಸಿ ಬರುತ್ತೇವೆ” ಅಂದಿದ್ದರು ನಮ್ಮ ತಂಡದ ಕಪ್ತಾನರಾದ ಶ್ರೀ ವಿಠಲರಾಜ್ ಅವರು. ಹಾಗಾಗಿ, ತಂಡದಲ್ಲಿದ್ದ ಚುರುಕಾದ ಚಾರಣಾಸಕ್ತರು ವಸುಧಾರಾ ಫಾಲ್ಸ್ ನತ್ತ ಹೆಜ್ಜೆ ಹಾಕಿದರು. ನಾವು ಕೆಲವು ಜನ ನಿಧಾನಿಗರು ಮಾನಾ ಹಳ್ಳಿಯಲ್ಲಿ ಅಡ್ಡಾಡುತ್ತಾ ಕಾಲ ಕಳೆದೆವು.
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ‘ಮಾನಾ’ ಹಳ್ಳಿಗೆ ಭಾರತದ ಕೊನೆಯ ಹಳ್ಳಿ ಎಂಬ ಖ್ಯಾತಿಯಿದೆ. ಸಮುದ್ರ ಮಟ್ಟದಿಂದ ಸುಮಾರು 12000 ಅಡಿ ಎತ್ತರದಲ್ಲಿದೆ. ಹಗಲಿನ ವೇಳೆ ಸುಮಾರಾಗಿ ಚಳಿ ಇತ್ತು. ಇಲ್ಲಿಂದ ಮುಂದೆ ಸೇನಾ ವಲಯ ಮತ್ತು ಟಿಬೆಟ್/ಚೈನಾದ ಸರಹದ್ದು ಆರಂಭವಾಗುತ್ತದೆ. ತಾರಸಿ / ಕಲ್ಲು ಚಪ್ಪಡಿಗಳನ್ನು ಹೊದಿಸಿದ ಚಿಕ್ಕದಾದ ಸುಮಾರು 200 ಮನೆಗಳನ್ನು ಹೊಂದಿರಬಹುದಾದ ಊರು ಮಾನಾ. ಕಿರಿದಾದ ಕಾಲುದಾರಿಯಲ್ಲಿ ಸಾಗುವಾಗ ಅಲ್ಲಲ್ಲಿ ಉಣ್ಣೆಯ ಬಟ್ಟೆಗಳನ್ನು ನೇಯುವ ಮತ್ತು ಮಾರುವ ಮಹಿಳೆಯರು ಕಾಣ ಸಿಕ್ಕಿದರು. ಸುತ್ತಲೂ ಮಾಲೆಮಾಲೆಯಾಗಿ ಕಾಣಿಸುವ ಬೆಟ್ಟಗಳು. ಅಲ್ಲಲ್ಲಿ ಮೇಯುವ ಕುರಿಗಳು. ಕಿರಿದಾದ ಕಾಲುದಾರಿ. ಅತ್ತಿತ್ತ ಓಡಾಡುವ ಚೆಂದದ ಪುಟಾಣಿ ಮಕ್ಕಳು. ಆಧುನಿಕತೆ ಈಗ ತಾನೇ ಕಾಲಿಟ್ಟಂತೆ ಕಾಣಿಸುವ ಈ ಹಳ್ಳಿ, ನಮ್ಮನ್ನು ಅನಾಮತ್ತಾಗಿ ಕನಿಷ್ಟ ಮೂವತ್ತು ವರ್ಷದ ಹಿಂದಕ್ಕೆ ಒಯ್ಯುತ್ತದೆ. ಇಲ್ಲಿ ಚಳಿಗಾಲದ 6 ತಿಂಗಳು ಹಿಮಾವೃತವಾಗುವುದರಿಂದ ಇಡೀ ಹಳ್ಳಿಯ ಜನರು ಸುರಕ್ಷಿತ ಜಾಗಕ್ಕೆ ತೆರಳುತ್ತಾರೆ. ಇಲ್ಲಿನ ಜನರಲ್ಲಿ ಹೆಚ್ಚಿನವರು ‘ಭೂಟಿಯಾ’ ಎಂಬ ಜನಾಂಗದವರಂತೆ. ಹಿಂದಿ ಮತ್ತು ಗಢವಾಲಿ ಎಂಬ ಭಾಷೆಗಳಲ್ಲಿ ಮಾತನಾಡುತ್ತಾರೆ.
ಇಲ್ಲಿ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಹೇಳಲು ಕುಳಿತ ಗುಹೆ ಇದೆ. ಈ ಗುಹೆಯು ಕಿರಿದಾಗಿದ್ದು ತಲೆ ಬಾಗಿಸಿ ಒಳಗೆ ಹೋಗಬೇಕು.ಅಲ್ಲಿ ವ್ಯಾಸ ಮಹರ್ಷಿಯ ಪ್ರತಿಮೆಯಿದೆ. ಅಲ್ಲಿದ್ದ ಅರ್ಚಕರು ಸ್ಥಳ ಮಹಿಮೆ ವಿವರಿಸಿದರು. ಅನತಿ ದೂರದಲ್ಲಿ, ಗಣೇಶನು ಮಹಾಭಾರತ ಬರೆದನೆಂದು ನಂಬಲಾಗುವ ‘ಗಣೇಶ ಗುಹೆ’ ಇದೆ. ಅಲ್ಲಿ ಗಣೇಶನ ವಿಗ್ರಹಕ್ಕೆ ಪೂಜೆ ಸಲ್ಲುತ್ತದೆ. ಇನ್ನೂ ಸ್ವಲ್ಪ ಅಂತರದಲ್ಲಿ ಸರಸ್ವತಿ ನದಿಯ ಉಗಮ ಸ್ಥಳವಿದೆ. ಇಲ್ಲಿ ದ್ರೌಪದಿಗೆ ಸರಸ್ವತಿ ನದಿಯನ್ನು ದಾಟಲು ಕಷ್ಟವಾದಾಗ , ಭೀಮನು ನದಿಗೆ ಅಡ್ಡಲಾಗಿ ಬಂಡೆಯೊಂದನ್ನು ಸೇತುವೆಯ ಹಾಗೆ ತಂದಿರಿಸಿದನಂತೆ. ಆ ಜಾಗಕ್ಕೆ ಭೀಮ್ ಪುಲ್ ಎಂದು ಹೆಸರು. ಒಂದೆರಡು ಕಡೆ ಅಂಗಡಿಗಳ ಫಲಕದಲ್ಲಿ ‘ಹಿಂದುಸ್ತಾನ್ ಕೀ ಅಂತಿಮ್ ದೂಕಾನ್’ ಎಂಬ ಬರಹವನ್ನು ಕಂಡೆವು.
ಈ ಗುಹೆಯ ಪಕ್ಕದಲ್ಲಿರುವ ಅಂಗಡಿಯ ಫಲಕದಲ್ಲಿ ಭಾರತದ ಕೊನೆಯ ಚಾ ಅಂಗಡಿ ಎಂಬ ಬರಹವಿತ್ತು. ಅಂಗಡಿ ಮಾಲೀಕನ ಹೆಸರು ‘ಚಂದರ್ ಸಿಂಗ್’ . ಮಾನಾ ಹಳ್ಳಿಯ ನಿವಾಸಿ. ಆತನ ಅಂಗಡಿಯಿಂದ ಸ್ಥಳೀಯ ಭಾಷೆಯಲ್ಲಿ ‘ಮುಟ್ಟರಿ’ ಎಂದು ಕರೆಯಲ್ಪಡುವ ತಿಂಡಿಯನ್ನು ಖರೀದಿಸಿದೆ. ಇದು ನಮ್ಮ ಖಾರ ಶಂಕರಪೋಳೆಯ ರುಚಿ ಹೊಂದಿದೆ. ಅಲ್ಲಿನ ಚಳಿಗೆ ತಿನ್ನಲು ಹಿತವಾಗಿತ್ತು.
ಇನ್ನೊಂದು ಜ್ಯೂಸ್ ಮಾರುವ ಅಂಗಡಿಯಲ್ಲಿ ಗುಲಾಬಿ ಬಣ್ಣದ ‘ಬುರಾಂಸ’ ಜ್ಯೂಸ್ ಅನ್ನು ಕುಡಿದೆವು. ಇದು ನೋಡಲು ಮಲೆನಾಡಿನ ಪುನರ್ಪುಳಿ/ಕೋಕಮ್ ಜ್ಯೂಸ್ ನಂತೆಯೇ ಗುಲಾಬಿ ಬಣ್ಣ ಹೊಂದಿದೆ. ಆದರೆ ಪರಿಮಳ ಮತ್ತು ರುಚಿ ವಿಭಿನ್ನವಾಗಿದೆ. ಹಿಮಾಲಯ ಪ್ರದೇಶದಲ್ಲಿ ಬೆಳೆಯುವ ಕೆಂಬಣ್ಣದ ರೋಡೋಡೆಂಡ್ರೇನ್ ಎಂಬ ಹೂವಿನಿಂದ ತಯಾರಿಸುವ ಜ್ಯೂಸ್ ಇದು.
ಮಾನಾ ಹಳ್ಳಿಯ ಮುಖ್ಯದ್ವಾರದಲ್ಲಿ ‘ವೆಜ್ ಮೊಮೊ’ ಎಂಬ ಬೋರ್ಡ್ ಅನ್ನು ನೋಡಿದ್ದೆ. ಹಿಂತಿರುಗುವ ಮೊದಲು ಆ ಅಂಗಡಿಗೂ ಭೇಟಿ ಕೊಡಬೇಕೆಂದುಕೊಂಡು ಅಲ್ಲಿಗೆ ಹೋಗಿ ಅಂಗಡಿಯ ಮಾಲೀಕಳನ್ನು ಮಾತಿಗೆಳೆದೆ. ಆಕೆ ಮಹೇಶ್ವರಿ, ಚಮೋಲಿ ಜಿಲ್ಲೆಯವಳು. ವರ್ಷಕ್ಕೆ ಆರು ತಿಂಗಳು ‘ಮಾನಾ’ಕ್ಕೆ ಬಂದು ಹೋಟೆಲ್-ವ್ಯಾಪಾರ ಮಾಡುತ್ತಾರೆ.ಮಕ್ಕಳು ಚಮೋಲಿಯಲ್ಲಿ ಓದುತ್ತಿದ್ದಾರಂತೆ. ಆಕೆ ಮೊಮೋ ತಯಾರಿಸುವ ಶೈಲಿ ಸೊಗಸಾಗಿತ್ತು. ಮೊದಲನೆಯದಾಗಿ ಹೂರಣಕ್ಕೆ ಬೇಕಾಗುವ ತರಕಾರಿ ಪಲ್ಯ ತಯಾರಿಸಿಟ್ಟುಕೊಂಡಿದ್ದಳು. ಟೇಬಲ್ ಮೇಲೆ ಮೈದಾಹಿಟ್ಟಿನಿಂದ ದೊಡ್ಡದಾಗಿ ಚಪಾತಿ ಲಟ್ಟಿಸಿದಳು. ಒಂದು ಲೋಟದ ಅಂಚಿನಿಂದ ಲಟ್ಟಿಸಿದ ಚಪಾತಿಯ ಮೇಲೆ ಅಚ್ಚು ಹಾಕಿ ಹಲವಾರು ಪುಟ್ಟ ಪೂರಿಗಳನ್ನು ಕತ್ತರಿಸಿದಳು.ಪ್ರತಿ ಪೂರಿಯ ಮಧ್ಯೆ ಪಲ್ಯದ ಹೂರಣ ತುಂಬಿಸಿ, ಅಚ್ಚುಕಟ್ಟಾಗಿ ಮೊಮೊ ಆಕಾರ ಕೊಟ್ಟಳು.
ಹೀಗೆ ತಯಾರಿಸಿದ ಮೊಮೊ ಗಳನ್ನು ಹಬೆಯಲ್ಲಿ ಬೇಯಿಸಿದಳು. ಬೆಂದ ಮೊಮೊಗಳಿಗೆ ನೆಂಚಿಕೊಳ್ಳಲು ಮೆಣಸಿನ ಕಾಯಿ ಚಟ್ನಿ ಇತ್ತು. ಖಾರವಾದ ಚಟ್ನಿಯ ತಯಾರಿಕೆಯೂ ವಿಶಿಷ್ಟವಾಗಿತ್ತು. ಅವಳು ತಿಳಿಸಿದಂತೆ, ಮೆಣಸಿನಕಾಯಿಗಳನ್ನು ನೀರಿನಲ್ಲಿ ನೆನೆಸಿ, ಬೆಳ್ಳುಳ್ಳಿ, ಈರುಳ್ಳಿ, ಉಪ್ಪು ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ. ಕೆಲವು ದಿನಗಳ ವರೆಗೆ ಕೆಡುವುದಿಲ್ಲವಂತೆ. ನಾನು ಅರ್ಧ ಪ್ಲೇಟ್ – ಅಂದರೆ ನಾಲ್ಕು ಮೊಮೊಗಳನ್ನು 25 ರೂ ಕೊಟ್ಟು ಖರೀದಿಸಿ, ಬಿಸಿ ಚಹಾದ ಜೊತೆಗೆ ಹೊಟ್ಟೆಗಿಳಿಸಿದೆ. ಬಿಸಿಯಾಗಿ, ಖಾರವಾಗಿ ರುಚಿಯಾಗಿತ್ತು. ಆ ಮೇಲೆ ಬಂದ ಸ್ನೇಹಿತರಿಗೂ ಈ ಬಗ್ಗೆ ಹೇಳಿದೆ, ಅವರೂ ಕೆಲವು ಪ್ಲೇಟ್ ಮೊಮೊಗಳನ್ನು ಕೊಂಡರು.
ಮೈದಾದ ಬದಲು ಗೋಧಿಹಿಟ್ಟು ಬಳಸಿ, ಸ್ವಲ್ಪ ರೂಪಾಂತರಗೊಳಿಸಿ ,ನಮ್ಮ ರುಚಿಗೆ ತಕ್ಕಂತೆ ಸಿಹಿ ಮತ್ತು ಖಾರದ ವೈವಿಧ್ಯತೆ ಮಾಡಿದರೆ ಮನೆಮಂದಿಗೆ ಇಷ್ಟವಾಗಬಹುದು, ಪ್ರಯತ್ನಿಸಬೇಕು ಎನಿಸಿತು. ಹೀಗೆ ‘ಮಾನಾ’ದ ಮಹೇಶ್ವರಿಯ ಕೈರುಚಿ ಉಂಡುದಲ್ಲದೆ, ಆಕೆಯನ್ನು ಅಭಿನಂದಿಸಿ, ರೆಸಿಪಿಯನ್ನೂ ಕೇಳಿ ತಿಳಿದ ಖುಷಿ ನನಗಾಯಿತು. ಆಕೆಯೂ ಸಂತೋಷದಿಂದಲೇ ನಮ್ಮ ಬಗ್ಗೆ ವಿಚಾರಿಸಿ, ಪುನ: ಬನ್ನಿ ಎಂದು ಹಾರೈಸಿ ಬೀಳ್ಕೊಟ್ಟಳು.
.
– ಹೇಮಮಾಲಾ.ಬಿ
ಲಘು ಹಾಸ್ಯದೊಂದಿಗೆ ಆಸಕ್ತಿಕರವಾಗಿದೆ. ಚಂದದ ಬರಹ.
photos ಬಹಳ ಚೆನ್ನಾಗಿವೆ, ನಿಮ್ಮ ಬರೆಹ ಸಹ, ಇನ್ನಷ್ಟು ಬರೆಹ ಮೂಡಿಬರಲಿ
ಪ್ರವಾಸ ,ತಿಂಡಿ,ಮತ್ತು ಬರಹ ಇಷ್ಟವಾಯಿತು…..
ನಿಮ್ಮ ಪ್ರವಾಸದಲ್ಣಿನ ಮಾಹಿತಿಗಾಗಿ ಧನ್ಶವಾದಗಳು ನಿಮ್ಮ ಮುಂದಿನ ಪ್ರವಾಸವೂ ಸುಂದರವಾಗಿರಲಿ