ರಾಜಸ್ಥಾನದ ‘ಕುಲ್ ಧಾರಾ’ ಹಳ್ಳಿಯೂ …ಅತೀಂದ್ರಿಯ ವಿದ್ಯಮಾನಗಳೂ …
ನಡುರಸ್ತೆಯಲ್ಲಿಯೇ ನಿದ್ರಿಸುವ ನಾಯಿಯೊಂದು ಇಂದೇಕೋ ಬೆಳಗ್ಗೆಯೇ ವಿಚಿತ್ರವಾಗಿ “ಓವೂವೂಔಔ..” ಎಂದು ಊಳಿಟ್ಟಿತು, ಕೂಡಲೇ ಇತರ ಹಿರಿ-ಕಿರಿಯ ಬೀದಿ ನಾಯಿಗಳು ಕೋರಸ್ ನಲ್ಲಿ ದನಿಗೂಡಿಸಲಾರಂಭಿಸಿದವು. ಏನಾಯಿತು ಎಂದು ನೋಡಲು ನಾನು ಬಾಗಿಲು ತೆರೆದಾಗ, ಆಗ ತಾನೆ ಬಂದಿದ್ದ ನಮ್ಮ ಸಹಾಯಕಿಯು ಕಿರುಚುತ್ತಿರುವ ನಾಯಿಗಳನ್ನು ನೋಡುತ್ತಾ ಪ್ರಶ್ನಾರ್ಥಕವಾಗಿ ನಿಂತಿದ್ದಳು.
ನಾಯಿಗಳ ವಿಚಿತ್ರ ಊಳಿಡುವಿಕೆಗಿಂತಲೂ ಭಯ-ಭಕ್ತಿ ತುಳುಕುತ್ತಿದ್ದ ಆಕೆಯ ಮುಖವೇ ಅಚ್ಚರಿಯನ್ನುಂಟು ಮಾಡಿತು . ನಾಯಿಗಳು ಕೆಲವೊಮ್ಮೆ ಹಾವನ್ನು ಕಂಡಾಗ ಈ ತರ ಊಳಿಡುತ್ತವೆ. ಕೆಲವೊಮ್ಮೆ ಪೂಜಾಸಮಯದ ಶಂಖದ್ವನಿಗೂ ‘ದನಿ’ ಸೇರಿಸುವುದಿದೆ! ಆದರೆ ಆಕೆ ದೃಢದನಿಯಲ್ಲಿ “ಮಾರಿ ಹೋಗ್ತೀರೋದು ಕಂಡಾಗೆಲ್ಲ ಅವ್ಗಳು ಹಿಂಗೇ ಕೂಗೋದು… ನಮಗೆ ಕಾಣಲ್ಲ….ಆದ್ರೆ ನಾಯಿಗಳಿಗೆ ಗೊತ್ತಾಗುತ್ತೆ .” ಅಂದಳು, ಅದು ಅವಳ ನಂಬಿಕೆ, ಅವರವರ ಅನುಭಾವ, ತರ್ಕಕ್ಕೆ ನಿಲುಕದ್ದು. ಆದರೆ ಹೀಗೊಂದು ನಂಬಿಕೆ ಇದೆ ಎಂದು ಗೊತ್ತಾಯಿತು.
ಯಾಕೋ ನನಗೆ ಇದ್ದಕ್ಕಿದ್ದಂತೆ, ರಾಜಸ್ಥಾನದ ‘ಕುಲ್ ಧಾರಾ’ ಹಳ್ಳಿ ನೆನಪಾಯಿತು. 2013 ರಲ್ಲಿ ಅಲ್ಲಿಗೆ ಹೋಗಿದ್ದೆವು, ಇದು Haunted village ಎಂದು ಗುರುತಿಸಲ್ಪಟ್ಟ ಹಳ್ಳಿ. ಹಿಂದೆ ಇದು ವ್ಯವಸ್ಥಿತವಾಗಿ ರೂಪಿತವಾದ ಗ್ರಾಮವಾಗಿತ್ತಂತೆ. ಈಗ ನಿರ್ಜನವಾಗಿದ್ದು ದೆವ್ವಗಳು ಓಡಾಡುತ್ತವೆ ಎಂಬ ಬಿರುದು ಹೊತ್ತಿದೆ. ಇಲ್ಲಿ ರಾತ್ರಿಯಾಗುತ್ತಿದ್ದಂತೆ ದೆವ್ವ-ಅತೀಂದ್ರಿಯ ಶಕ್ತಿಗಳ ಇರುವಿಕೆಯ ಅನುಭವವಾಗುತ್ತದೆಯಂತೆ. ಉದಾ: ಯಾರೋ ಅದೃಶ್ಯ ವ್ಯಕ್ತಿಗಳು ಪಿಸುಗುಟ್ಟಿದಂತಾಗುವುದು, ಓಡಾಡುವುದು, ಅಳುವುದು, ನಿಲ್ಲಿಸಿದ್ದ ವಾಹನಗಳ ಗಾಜಿನ ಮೇಲೆ ಮಕ್ಕಳ ಹಸ್ತದ ಛಾಯೆ ಮೂಡಿರುವುದು, ಪ್ರಾಣಿಗಳು ಕಾಣಿಸದಿದ್ದರೂ ಅವುಗಳು ಊಳಿಡುವಿಕೆ ಕೇಳಿ ಬರುವುದು ಇತ್ಯಾದಿ.
ಒಟ್ಟಾರೆಯಾಗಿ ನಂಬಲು ಕಷ್ಟವಾದ, ಆದರೆ ಪೂರ್ತಾ ನಂಬದಿರಲು ಸಾಧ್ಯವಾಗದ ವಿದ್ಯಮಾನಗಳು ಇಲ್ಲಿ ಸಂಭವಿಸುತ್ತದೆಯಂತೆ. ಇದೇ ಕಾರಣದಿಂದಲೇ ಪ್ರವಾಸಿತಾಣವಾಗಿದೆ ‘ಕುಲ್ ಧಾರಾ’ ಹಳ್ಳಿ. ಪ್ರವಾಸಿಗಳಿಗೆ ಹಗಲಿನಲ್ಲಿ ಇಲ್ಲಿಗೆ ಭೇಟಿಗೆ ಅವಕಾಶವಿದೆ. ಸಂಜೆ 6 ಘಂಟೆಯ ನಂತರ ಇಲ್ಲಿ ಯಾರೂ ಇರುವುದಿಲ್ಲ. ಧೈರ್ಯ ಮಾಡಿ ರಾತ್ರಿ ಅಲ್ಲಿ ಇದ್ದವರು ಬದುಕಲಿಲ್ಲವಂತೆ. ಧೈರ್ಯವಂತರ ತಂಡವೊಂದು ಈ ಶಬ್ದಗಳ ಮೂಲವನ್ನು ಹುಡುಕಲು ಪ್ರಯತ್ನಿಸಿತಾದರೂ ಸರಿಯಾದ ಉತ್ತರ ಲಭಿಸಲಿಲ್ಲವಂತೆ.
ಸ್ಥಳೀಯರಾದ ಮಾರ್ಗದರ್ಶಿ ತಿಳಿಸಿದ ಪ್ರಕಾರ ‘ಕುಲ್ ಧಾರಾ’ ದ ಹಿನ್ನೆಲೆ ಹೀಗಿದೆ:
ಸುಮಾರು 600 ವರ್ಷಗಳ ಹಿಂದೆ ಇಲ್ಲಿನ ಸುತ್ತುಮುತ್ತಲಿನ 80 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಪಲಿವಾಲ್ ಬ್ರಾಹ್ಮಣ ಸಮುದಾಯದವರು ವಾಸವಾಗಿದ್ದರು. ಈ ಪ್ರಾಂತದ ಅಂದಿನ ರಾಜ ದುಷ್ಟನಾಗಿದ್ದು, ಪಲಿವಾಲ್ ಸಮುದಾಯದ ಮುಖ್ಯಸ್ಥನ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದೂ ಇಲ್ಲವಾದಲ್ಲಿ ಇಡೀ ಹಳ್ಳಿಯನ್ನು ನಾಶಮಾಡುವುದಾಗಿ ಹೆದರಿಸಿದನಂತೆ.
ಇದರಿಂದ ನೊಂದ ಸಮುದಾಯದ ಹಿರಿಯರೆಲ್ಲರೂ ಚರ್ಚಿಸಿ, ತಮ್ಮ ಘನತೆಗೆ ಧಕ್ಕೆಯಾಗಬಾರದು ಮತ್ತು ರಾಜನಿಗೆ ಶರಣಾಗಬಾರದು ಎಂದು ನಿರ್ಧರಿಸಿ, ಸುತ್ತುಮುತ್ತಲಿನ ಎಲ್ಲಾ ಹಳ್ಳಿಗಳ ಜನರೂ ರಾತ್ರೋರಾತ್ರಿ ಏಕಕಾಲದಲ್ಲಿ ಊರನ್ನು ಖಾಲಿಮಾಡಿ ಎಲ್ಲಿಗೋ ಹೋದರಂತೆ. ಹಾಗೆ ಹೋಗುವಾಗ ಇಲ್ಲಿ ಯಾರೊಬ್ಬರೂ ನೆಲೆಸಲಾರದಂತೆ ಶಪಿಸಿದರಂತೆ .
ಈಗಲೂ ಯಾರೊಬ್ಬರೂ ಈ ಹಳ್ಳಿಯಲ್ಲಿ ನೆಲೆಸುವುದಿಲ್ಲ. ಹಿಂದೆ ಇಲ್ಲೊಂದು ಸುಸಜ್ಜಿತವಾದ ಊರು ಇದ್ದುದಕ್ಕೆ ಕುರುಹಾಗಿ, ಬಹಳಷ್ಟು ಮನೆಗಳು, ರಸ್ತೆಗಳು, ದೇವಾಲಯ ಇತ್ಯಾದಿಗಳ ಅವಶೇಷಗಳು ಕಾಣಸಿಗುತ್ತವೆ. ಕಣ್ಣು ಹಾಯಿಸಿದಷ್ಟೂ ದೂರ ಮುರಿದ ಗೋಡೆಗಳು, ಇಟ್ಟಿಗೆಗಳ ರಾಶಿ ಕಾಣಿಸುತ್ತವೆ. ಒಂದೆರಡು ಮನೆಯನ್ನು ನವೀಕರಿಸಿ ಪ್ರವಾಸಿಗಳಿಗೆ ಆಕರ್ಷಣೆಯಾಗಿ ಪರಿವರ್ತಿಸಿದ್ದಾರೆ.
– ಹೇಮಮಾಲಾ.ಬಿ
ಎಲ್ಲೋ ಒಂದೆರಡು ಪಾಳು ಬಿದ್ದ ಮನೆಗಳ ಕಥೆ ಕೇಳಿದ್ದು ನೆನಪಿದೆ…. ಆದರೆ ಊರಿಗೆ ಊರೇ ಈ ತರ ಪಾಳುಬಿದ್ದದ್ದು ಆಶ್ಚರ್ಯ…. ಅದೂ ಈ ಆಧುನಿಕ ಕಾಲದಲ್ಲಿ.. ಬಹುಶಃ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣವಿರಬಹುದೇನೋ…
As per my knowledge, usually in deserts people settle wherever they find water. When natural resources drain out, people abandon that village, move on and settle in another location where they get water. This is how those abandoned villages form.