ರಂಗವಲ್ಲಿ
ಮೂಡಣದ ಕೆಂಪು ರಂಗಿನಲಿ
ಮುಸುಕಿನ ಕನಸ ಗುಂಗಿನಲಿ;
ಕರೆಯುತಿದೆ ಚುಕ್ಕಿ ಸಾಲು
ಬರಿಯ ಬೆಳಗಲ್ಲದ ಇದು ಹೊಸ ಕವಲು!
ಬಂಧಗಳ ಕೂಡಿಸಿ ಬೆಸೆಯುವಾ ಲೋಕ
ನೇಸರಕೆ ನವವಧುವ ನೋಡುವಾ ತವಕ;
ಸಾಲು-ಸಾಲುಗಳು ಹೇಳುತಿವೆ ಸುಪ್ರಭಾತ
ಬರಿಯ ಸಾಲಲ್ಲ ಇದು ಪ್ರೇಮ ಸಂಕೇತ!
ತಿರುಗುವ ರೇಖೆ, ಮರುಗುವ ಮನ,
ತಮಸನು ಸರಿಸುತ ಬೆಳ್ಳನೆ ಬಣ್ಣ
ಹಾಡುತಿದೆ ಮೌನರಾಗ;
ಬರಿಯ ರಾಗವಲ್ಲ ಇದು ಅನುರಾಗ!
ಅಣ್ಣಯ್ಯ ಬರುತಾನೋ, ತಮ್ಮಯ್ಯ ಕರೀತಾನೋ..
ನೀರ ಚೆಲ್ಲಿ ಅಂಗಳದಿ ಕಾಯುತಿದೆ
ಬದುಕು ಬದಲಿಸಿದ ಬಣ್ಣ
ಬರಿಯ ಬಣ್ಣವಲ್ಲ ಇದು ಎನ್ನ ಜೀವನ!
– ಅಶೋಕ್ ಕೆ. ಜಿ. ಮಿಜಾರ್.