ಕುಮಾರ ವ್ಯಾಸನ ಹುಟ್ಟೂರಾದ ‘ಕೋಳಿವಾಡ’
ಜನವರಿ 20, 2016 ರಂದು, ಇಬ್ಬರು ಗೆಳತಿಯರೊಡಗೂಡಿ, ಹುಬ್ಬಳ್ಳಿಯಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು 25 ಕಿ.ಮೀ ಸಾಗಿರಬಹುದು. ಅಷ್ಟರಲ್ಲಿ ‘ಕುಮಾರ ವ್ಯಾಸನ ಹುಟ್ಟೂರಾದ ಕೋಳಿವಾಡ’ಕ್ಕೆ ಹೋಗುವ ರಸ್ತೆಯ ಕಮಾನು ಕಾಣಿಸಿತು. ತಲೆಯಲ್ಲಿ ಮಿಂಚಿನ ಸಂಚಾರವಾಯಿತು!
“ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!” ಎಂದು ಕುವೆಂಪುರವರು ಬರೆದ ಸಾಲನ್ನು, ಪ್ರೌಢಶಾಲೆಯ ಕನ್ನಡ ಅಧ್ಯಾಪಕರು ಹಾಡಿದ್ದು, ಮನದಾಳದಲ್ಲಿ ಎಲ್ಲೋ ಅವಿತಿತ್ತು. ಕುಮಾರ ವ್ಯಾಸನ ಹುಟ್ಟೂರಿನ ಪಕ್ಕ ಸಾಗುತ್ತಿರುವಾಗ ಇದು ನೆನಪಾಗಿ, ‘ಕೋಳಿವಾಡ’ಕ್ಕೆ ಹೋಗಿ ಅಲ್ಲಿ ಏನಿದೆಯೋ ನೋಡೋಣ ಎಂದು ತತ್ಕ್ಷಣವೇ ಒಮ್ಮತದ ನಿರ್ಧಾರಕ್ಕೆ ಬಂದೆವು.
ಅಲ್ಲಿಂದ ಕೋಳಿವಾಡಕ್ಕೆ ಕೇವಲ 6 ಕಿ.ಮಿ. ದೂರವಿತ್ತು. ಇದು ನಮ್ಮ ಪ್ರಯಾಣದ ಪಟ್ಟಿಯಲ್ಲಿ ಇರದಿದ್ದರೂ ಅನಿರೀಕ್ಷಿತವಾಗಿ ಲಭ್ಯವಾದ ಅವಕಾಶವನ್ನು ಬಿಡುವುದುಂಟೆ..ಕಾರನ್ನು ಈ ರಸ್ತೆಯಲ್ಲಿ ತಿರುಗಿಸಿ , ‘ಕೋಳಿವಾಡ’ಕ್ಕೆ ತಲಪಿದೆವು. ಒಂದೆರಡು ಕಡೆ ವಿಚಾರಿಸಿ ಆ ಹಳ್ಳಿಯ ಗಲ್ಲಿಗಳ ಮೂಲಕ ನಡೆದು ಕುಮಾರ ವ್ಯಾಸನ ವಂಶಸ್ಥರು ವಾಸವಾಗಿರುವ ಮನೆಗೆ ತಲಪಿದೆವು. ಕುಮಾರ ವ್ಯಾಸನ ವಂಶದ ಹದಿನೈದನೆಯ ತಲೆಮಾರಿನವರಾದ ಶ್ರೀ ದತ್ತಾತ್ರೇಯ ಪಾಟೀಲರು ಎಲ್ಲಿಗೋ ಹೊರಟಿದ್ದೆವು. ನಮ್ಮನ್ನು ಕಂಡು ಸಹೃದಯದಿಂದ ಮಾತನಾಡಿಸಿ ಕೆಲವು ವಿಚಾರಗಳನ್ನು ಹಂಚಿಕೊಂಡರು. ಪ್ರತಿವರ್ಷ ಜನವರಿ 23 ರಂದು ತಮ್ಮ ಮನೆಯಲ್ಲಿ ಕುಟುಂಬದವರೆಲ್ಲರೂ ಸೇರಿ ಕುಮಾರವ್ಯಾಸನ ಜಯಂತಿಯನ್ನು ಆಚರಿಸುತ್ತಾರಂತೆ. ನಮ್ಮನ್ನೂ ಆಮಂತ್ರಿಸಿದರು.
ಹಂಪೆ ನೋಡಲು ಹೊರಟ ನಮಗೆ ಸಿಕ್ಕ ಈ ಅಪರೂಪದ ಅವಕಾಶದಿಂದ ಬಹಳಷ್ಟು ಸಡಗರ ಪಟ್ಟೆವು. ಪೂರ್ವ ನಿರ್ಧಾರಿತವಾಗಿದ್ದ, ಪ್ರಸಿದ್ಧತಾಣಗಳನ್ನು ವೀಕ್ಷಿಸುವುದು ಒಂದು ಬಗೆಯಾದರೆ, ಅನಿರೀಕ್ಷಿತವಾಗಿ ಪ್ರವಾಸಿತಾಣವೇ ಅಲ್ಲದ, ಆದರೆ ಬಹಳ ಪ್ರಾಮುಖ್ಯತೆಯುಳ್ಳ ಜಾಗಕ್ಕೆ ಭೇಟಿ ಕೊಟ್ಟಾಗ ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು.
ಮನೆಯವರಿಗೆ ಧನ್ಯವಾದ ಅರ್ಪಿಸಿ ಬೀಳ್ಕೊಂಡಾಗ ಧನ್ಯತಾ ಭಾವ ಹೊಂದಿ, ಅದೇ ಗಲ್ಲಿಗಳಲ್ಲಿ ನಡೆದು ಹಿಂದಿರುಗಿದೆವು. ಇಂತಹ ಅದ್ಭುತ ಕವಿಯ ಊರು ಮುಲಭೂತ ಸೌಲಭ್ಯಗಳನ್ನೂ ಹೊಂದಿಲ್ಲ ಎನ್ನುವುದು ಕಣ್ಣಿಗೆ ರಾಚುವ ಸತ್ಯ. ಅದಕ್ಕಾಗಿ ಖೇದವೆನಿಸಿತು.
ಕುಮಾರವ್ಯಾಸ ತನ್ನ ಪ್ರಸಿದ್ಧ ಕೃತಿಯಾದ ‘ಕರ್ಣಾಟ ಭಾರತ ಕಥಾಮಂಜರಿ’ ಯನ್ನು ಗದುಗಿನ ವೀರನಾರಾಯಣ ದೇವಸ್ಥಾನದ ಒಂದು ಕಂಬದ ಬುಡದಲ್ಲಿ ಕುಳಿತು ಬರೆದನೆಂಬ ಮಾಹಿತಿಯನ್ನಾಧರಿಸಿ, ಹುಬ್ಬಳ್ಳಿಯಿಂದ ಹಂಪೆಗೆ ಹೋಗುವ ಮಾರ್ಗದಲ್ಲಿ ಗದುಗಿನ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಗದಗದ ಪೇಟೆಯೊಳಗೆ ಇರುವ ಈ ದೇವಸ್ಥಾನ ಸೊಗಸಾಗಿದೆ. ಅಲ್ಲಿ “ಕುಮಾರವ್ಯಾಸ ” ಬರೆಯಲು ಕುಳಿತುಕೊಳ್ಳುತ್ತಿದ್ದ ಜಾಗ ಎಲ್ಲಿ ಎಂದು ವಿಚಾರಿಸಿದೆವು. ಅದನ್ನು ಪ್ರಾಂಗಣದ ಎಡಭಾಗದಲ್ಲಿರುವ ಎರಡನೆಯ ಕಂಬದ ಮೇಲೆ “ಕುಮಾರ ವ್ಯಾಸನ ಕಂಬ” ಎಂಬ ಗುರುತಿದೆ. ಹೀಗೆ ನಮ್ಮ ದಿನ ಸಂಪನ್ನಗೊಂಡಿತು.
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.(ವಿಕಿಪಿಡಿಯ)
-ಹೇಮಮಾಲಾ.ಬಿ
ನಿಮ್ಮ ಉನ್ನತ ಆಲೋಚನೆ ಪ್ರಶಂಸನಾರ್ಹ.ನಿಮ್ಮ ಈ ಅನುಭವ,ಅನಿಸಿಕೆ,ಹಾಗೂ ಸಾಹಿತ್ಯಪ್ರೀತಿಗೆ ಅಭಿನಂದನೆಗಳು.
ಒಳ್ಳೆಯ ಅನುಭವವನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.
ಒಳ್ಳೇ ಕೆಲಸ. ’ವೇದಪಾರಾಯಣದ ಫಲ. ಗಂಗಾದಿ ತೀರ್ಥಸ್ನಾನ ಫಲ’ ಸಿಕ್ಕಿದಂತಾಯ್ತು.
ಕುಮಾರ ವ್ಯಾಸನ ಹುಟ್ಟೂರನ್ನು ನೋಡುವ ಅವಕಾಶ ನಿಮಗೆ ಲಭಿಸಿತಲ್ಲಾ ನಿಮಗೊ೦ದು ಚಪ್ಪಾಳೆ
ಓದಿ ಮನಸ್ಸೆಲ್ಲಾ ರೋಮಾಂಚನಗೊಂಡ ಅನುಭವವಾಯಿತು
ಧನ್ಯವಾದ..ನನಗೆ ಈ ಭೇಟಿ ಬಹಳ ಧನ್ಯತಾ ಭಾವವನ್ನುಂಟುಮಾಡಿತ್ತು.