ವೀರರಾಣಿ ಅಬ್ಬಕ್ಕ….ಚೌಟ ಅರಮನೆ
ಹದಿನಾರನೆಯ ಶತಮಾನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ‘ಉಳ್ಳಾಲ’ದ ಹೆಮ್ಮೆಯ ರಾಣಿಯಾಗಿ ಅಜರಾಮರಳಾದವಳು ‘ತುಳುನಾಡಿನ ವೀರರಾಣಿ ಅಬ್ಬಕ್ಕ’ . ಪೋರ್ಚುಗೀಸರಿಗೆ ತಲೆಬಾಗದೆ ಕೊನೆಯುಸಿರಿರುವ ವರೆಗೂ ಹೋರಾಡಿದ ಖ್ಯಾತಿ ಇವಳದು.
ಈಕೆ ಮೂಡುಬಿದಿರೆಯ ಜೈನಧರ್ಮದ ‘ಚೌಟ’ ಅರಸು ಮನೆತನದವಳು. ಈಕೆಯ ತವರು ಮನೆಯೆಂದು ಗುರುತಿಸಲ್ಪಡುವ ‘ಚೌಟ ಅರಮನೆಯು’ ಮೂಡುಬಿದಿರೆಯ ಜೈನ ಬಸದಿಯ ಸಮೀಪದಲ್ಲಿದೆ. ಹಿಂದೆ ಅಲ್ಲಿ ಇದ್ದ ಅರಮನೆಯ ಕುರುಹಾಗಿ ಈಗ ಅಲ್ಲಿ ಒಂದು ಹೆಂಚು ಹೊದಿಸಿದ ಮನೆ, ಆನೆಬಾಗಿಲು ಮತ್ತು ಕಾವಲುಗೋಪುರ ಇವೆ.
ಅಬ್ಬಕ್ಕ ಹುಟ್ಟಿದುದು 1525 ರಲ್ಲಿ. ಆಗಿನ ಕಾಲದ ಚೌಟರ ವಂಶದಲ್ಲಿದ್ದ ‘ಅಳಿಯಸಂತಾನ’ ಪದ್ಧತಿಯಂತೆ, ಅಬ್ಬಕ್ಕ ತನ್ನ ಮಾವ ತಿರುಮಲರಾಯನ ಊರಾದ ಉಳ್ಳಾಲದ ರಾಣಿಯಾಗಿ ನೇಮಕಗೊಂಡಳು. ತನ್ನ ರಾಜತಾಂತ್ರಿಕತೆ ಮತ್ತು ಶೌರ್ಯದಿಂದಾಗಿ ಪದೇ ಪದೇ ಕಾಡುತ್ತಿದ್ದ ಪೋರ್ಚುಗೀಸರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ರಾಣಿಯಾಗಿದ್ದಳು ಅಬ್ಬಕ್ಕ. ರಾಣಿಯಾಗಿದ್ದರೂ ತೀರಾ ಸಾಮಾನ್ಯ ಪ್ರಜೆಯಂತೆ ಬದುಕುತ್ತಿದ್ದ ಈಕೆ ಜನಾನುರಾಗಿಯಾಗಿದ್ದಳು.
ಮಂಗಳೂರಿನ ಬಂಗರಸ ಲಕ್ಷ್ಮಪ್ಪನೊಂದಿಗೆ ಅಬ್ಬಕ್ಕ ರಾಣಿಯ ವಿವಾಹವಾದರೂ, ಈ ಮದುವೆ ಹೆಚ್ಚು ದಿನ ಬಾಳಲಿಲ್ಲ ಹಾಗೂ ಆತ ಅಬ್ಬಕ್ಕಳ ವಿರುದ್ಧವಾಗಿ ಪಿತೂರಿ ನಡೆಸುತ್ತಿದ್ದ.
ಆಗಿನ ಕಾಲದಲ್ಲಿ ಪಶ್ಚಿಮ ಕರಾವಳಿಯ ಉಳ್ಳಾಲವು ಪ್ರಮುಖ ಬಂದರಾಗಿತ್ತು ಹಾಗೂ ಅರಬ್ ರಾಷ್ತ್ರಗಳಿಗೆ ಸಂಬಾರ ವಸ್ತುಗಳನ್ನು, ಅದರಲ್ಲೂ ಮುಖ್ಯವಾಗಿ ಕಾಳುಮೆಣಸನ್ನು ರಫ್ತು ಮಾಡುವ ಬಂದರಾಗಿತ್ತು. ಹೀಗಾಗಿ, ಉಳ್ಳಾಲವನ್ನು ವಶಪಡಿಸಿಕೊಳ್ಳುವುದು ಪೋರ್ಚುಗೀಸರಿಗೆ ವಾಣಜ್ಯ ದೃಷ್ಟಿಯಿಂದ ಲಾಭದಾಯಕವಾಗಿತ್ತು. ಪೋರ್ಚುಗೀಸರೊಂದಿಗೆ 1570 ರಲ್ಲಿ ನಡೆದ ಇನ್ನೊಂದು ಯುದ್ದದಲ್ಲಿ, ತನ್ನ ಗಂಡನ ಕುಮ್ಮಕ್ಕಿನಿಂದ, ಆಕೆ ಸೆರೆಯಾಳಾಗುವಂತಾಯಿತು. ರಾಣಿ ಅಬ್ಬಕ್ಕಳು ಸೆರೆಯಲ್ಲಿದ್ದರೂ ಹೋರಾಡುತ್ತಲೇ ಮಡಿದಳು. ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿಯ ಚೆನ್ನಮ್ಮ , ಒನಕೆ ಓಬವ್ವರಂತೆಯೇ ರಾಣಿ ಅಬ್ಬಕ್ಕಳಿಗೂ ಇತಿಹಾಸದಲ್ಲಿ ಗೌರವಯುತವಾದ ಸ್ಥಾನವಿದೆ.
– ಹೇಮಮಾಲಾ.ಬಿ
(ಮಾಹಿತಿ: ವಿಕಿಪೀಡಿಯ)
ಒಳ್ಳೆಯ ಫೋಟೋಗಳು…. ಒಳ್ಳೆಯ ಮಾಹಿತಿ…
Very nice story. Suuuuperb.
Super information