ಉಜ್ಜಯಿನಿಯ ಮಹಾಕಾಳನಿಗೊಂದು ಭಕ್ತಿಪೂರ್ವಕ ನಮನ
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಅಂತರ್ ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದೆವು ನಾವು. ನಮ್ಮ ದಕ್ಷಿಣದ ಹವೆಗೆ ಹೊಂದಿಕೊಂಡಿದ್ದ ನಮಗೆ ಅಲ್ಲಿನ ಹಿಮಗಡ್ಡೆಯಂಥ ಛಳಿಗೆ, ಆಗಾಗ ಮಣ್ಣಿನ ಕಪ್ ಗಳಲ್ಲಿ ಒದಗಿಸುತ್ತಿದ್ದ ಉತ್ಕೃಷ್ಟವಾದ ಚಹಾ ಸುಡು ಸುಡುತ್ತಿದ್ದುದನ್ನೇ ಕುಡಿಯುತ್ತಿದ್ದೆವು. ನಾಲ್ಕು ದಿನಗಳ ಕಾಲ ಅಲ್ಲಿ ತಂಗಿದ್ದೆವು. ಇನ್ನೇನು. ಸಮ್ಮೇಳನ ಮುಗಿದು ಮರುದಿನಕ್ಕೆ ಫ್ಲೈಟ್ ಗೆ ಹೊರಡಬೇಕಿತ್ತು. ಆಗ ಉಜ್ಜೈನಿಯ ಮಹಾಕಾಳೇಶ್ವರನ ದರ್ಶನ ಮಾಡಿಬರಲು ತೀರ್ಮಾನಿಸಿದ್ದೆವು. ಎಂಟು ಘಂಟೆಗಳ ಪ್ರಯಾಣ. ರಸ್ತೆಯ ಎರಡೂ ಪಕ್ಕ ದಟ್ಟವಾದ ಕಾಡು. ದುರ್ಗಮ ಹಾದಿ. ಹೋದಷ್ಟೂ ರಸ್ತೆ ಮುಂದೆ ಚಾಚಿಕೊಳ್ಳುತ್ತಿತ್ತು. ಕತ್ತಲಾವರಿಸಿ ವಾತಾವರಣವನ್ನು ಮತ್ತಷ್ಟು ಹೆದರಿಸುವ ಹಾಗಿತ್ತು. ಚಾಲಕ ಮೊದಲೇ ಎಚ್ಚರಿಸಿದ್ದ. ನಮಗೆ ದೇವರ ದರ್ಶನ ಆದರೆ ಅದೇ ಸಾಕು ಎನ್ನುವ ಹಂಬಲ. ಪ್ರಯಾಣ ಹೊರಟಾಗ ಇದ್ದ ಉತ್ಸಾಹ ರಾತ್ರೆ ಹತ್ತು ಆಗುವಾಗ ಉಳಿದಿರಲಿಲ್ಲ.
–
ಭಾರತದಲ್ಲಿನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಉಜ್ಜೈನಿಯ ಮಹಾಕಾಳೇಶ್ವರ ಲಿಂಗವೂ ಒಂದು. ಶಂಕರಾಚಾರ್ಯರು ಸ್ತಾಪಿಸಿದ್ದ ಈ ಶಿವಕ್ಷೇತ್ರಕ್ಕೆ ಹೋಗುವ ದಾರಿ ದಟ್ಟ ಗೊಂಡಾರಣ್ಯದ್ದು. ಅದು ಯಾವ ತಪೋಶಕ್ತಿಯ ಮೂಲಕ ಈ ದುರ್ಗಮ ಹಾದಿಯನ್ನು ಕಾಲ್ನಡಿಗೆಯಿಂದ ಕ್ರಮಿಸಿದರೋ? . ಕ್ಷಿಪ್ರಾ ನದಿ ತಟದಲ್ಲಿ ಎತ್ತರವಾಗಿ ಈ ಮಹಾಕಾಳನನ್ನು ಅವರು ಸ್ಥಾಪಿಸಿದ್ದರೋ, ಆ ದಿವ್ಯಶಕ್ತಿಗೆ ತಾನಾಗೇ ನಮ್ಮ ತಲೆ ಬಾಗುತ್ತದೆ. ಇಲ್ಲಿನ ಮಹಾಕಾಳ ದಕ್ಷಿಣಾಭಿಮುಖನಾದ ಶಿವ . ಬಹುಶ ಮಹಾಕಾಳ ಭಸ್ಮಾರತಿ ಮಾಡಿಸಿಕೊಳ್ಳುವ ಕ್ಷೇತ್ರ ಇದು ಆದ ಕಾರಣ ಯಮನ ಸ್ಥಾನವಾದ ದಕ್ಷಿಣಕ್ಕೆ ಅಭಿಮುಖನಾಗಿ ನಿಂತ ದಕ್ಷಿಣಾಮೂರ್ತಿ ಆಗಿರಲೂಬಹುದು. ಎತ್ತರವಾದ ಶಿಲಾಕಲ್ಲಿನ ಹಾಸು , ಅದೂ ಪ್ರಕೃತಿ ನಿರ್ಮಿತ ಜಾಗ ಇದು. ಕ್ಷಿಪ್ರಾ ನದಿ ದಡಕ್ಕೆ ನಮ್ಮ ವಾಹನ ತಲಪಿದಾಗ ದೇವಸ್ಥಾನ ಮುಚ್ಚುವ ಸಮಯ. ನದಿಯ ದೋಣಿ ಚಾಲಕರು ( ಸಂಜೆ ಆರು ಘಂಟೆಗೆ ಕರಾರುವಾಕ್ಕಾಗಿ ನಿಲ್ಲಿಸುತ್ತಾರೆ) ಅಲ್ಲಿರಲಿಲ್ಲ. ಸುತ್ತಾಗಿ ಬಳಸು ಹಾದಿಯಲ್ಲಿ ಬಂದು ಕೊರೆಯುವ ಛಳಿ ಸಹಿಸುತ್ತ ಕಗ್ಗಲ್ಲಿನ ಮೆಟ್ಟಲೇರಿ ಬಂದಾಗ ಎದುರಾದ ಮಹಾಕಾಳ ಆಗಿಂದ ನಮ್ಮನ್ನೇ ಗಮನಿಸುತ್ತಿದ್ದಾನೆಂಬ ಅನುಭಾವ. ಅಲ್ಲಿನ ಮಹಾಶಿವನ ವಿಗ್ರಹ ಕಂಡಾಗ ಇಲ್ಲಿ ಶಿವನಿಗೆ ಮಹಾಕಾಳೇಶ್ವರ ಎನ್ನುವುದೇಕೆಂದು ಅರ್ಥವಾಯಿತು. ಭಕ್ತಿಪೂರ್ವಕ ದೇವರಿಗೆ ಮಣಿದು ಮೆಟ್ಟಲೇರಿ ಒಳಭಾಗಕ್ಕೆ ಬಂದಾಗ ಅಲ್ಲಿದ್ದ ಪುರೋಹಿತ ವ ರ್ಗದವರು ಸ್ವಾಗತಿಸಿ ವಿಚಾರಿಸಿಕೊಂಡಿದ್ದರು. ಪೂರ್ಣಫಲವಾದ ತೆಂಗಿನಕಾಯಿ ಪ್ರಸಾದವಾಗಿ ಕೊಟ್ಟು ಆಶೀರ್ವಚನ ಮೂಲಕ ಹರಸಿದ್ದರು.
ಬಲು ಎತ್ತರದ ಭಾಗದಲ್ಲಿದ್ದ ನಾವು ಕೆಳಗೆ ನೋಡಿದರೆ ಕ್ಷಿಪ್ರೆ ಕಪ್ಪಗೆ( ಕತ್ತಲಾದ ಕಾರಣ) ಹೊಳೆಯತ್ತಿದ್ದ್ದಳು. ಆಳವಾದ ನದಿ ಮೇಲ್ನೋಟಕ್ಕೆ ಶಾಂತ. ಅರ್ಚಕ ವರ್ಗದವರು ಶಾರ್ಟ್ ಕಟ್ ಮೂಲಕ ದೇಗುಲದ ಹಿಂಭಾಗದ ಹಾದಿಯಲ್ಲಿ ಕರೆದರು. ಆಗ ಕಾಣಿಸಿದ್ದು ಅಲ್ಲಿ ದೇಶದ ನಾನಾ ಭಾಗದಿಂದ ಬಂದಿದ್ದ ವೇದ, ಮಂತ್ರ, ಸಂಸ್ಕೃತ ಕಲಿಯುತ್ತಿದ್ದ ವಿದ್ಯಾರ್ಥಿಗಳು. ಅವರಾಗಲೇ ವಿಶ್ರಾಂತಿಯ ಹವಣಿಕೆಯಲ್ಲಿದ್ದರು. ಸಪಾಟಾಗಿ ಮಾನವ ನಿರ್ಮಿತವೋ ಎಂಬಂತಿದ್ದ ಉದ್ದಾನುದ್ದದ ಶಿಲೆಕಲ್ಲಿನ ಅಗಾಧತೆಯ ಮೇಲೆ ನಡೆದು ನಮ್ಮನ್ನು ವಾಹನದ ಬಳಿ ತನಕ ಕರೆತಂದು ಬಿಟ್ಟಿದ್ದ ನೆನಪು ಇಂದಿಗೂ ಹಸಿರು. ಬೆಳ್ಳಂಬೆಳಗಿನ ಝಾವದ ನಾಲ್ಕು ಘಂಟೆಗೆ ಮಹಾಕಾಳನಿಗೆ ಜರಗುವ ಭಸ್ಮಾರತಿ(ಚಿತಾಭಸ್ಮ) ನೋಡಲು ಮುಂಜಾವದ ಎರಡು ಘಂಟೆಗೇ ಕ್ಯೂ ನಿಲ್ಲುತ್ತಾರೆ ಎಂದು ಹೇಳಿದ್ದರು.
–
ಅಲ್ಲೇ ನಿಂತು , ಮಹಾಕಾಳನ ಜ್ಯೋತಿರ್ಲಿಂಗದ ಸ್ಥಾಪನೆ; ಅದೆಷ್ಟು ಕಠಿಣ, ದುರ್ಗಮ ಕಾಡಿನಲ್ಲಿ , ಅದೂ ಕಾಲ್ನಡಿಗೆಯಲ್ಲಿ ಬಂದು ಪೂಜ್ಯ ಶಂಕರಾಚಾರ್ಯರು ಸ್ಥಾಪಿಸಿದ ಅಗಾಧ ಸಾಧನೆಗೆ ಮತ್ತೊಮ್ಮೆ ತಲೆಬಾಗಿದ್ದೆವು. ಆಗ ಭೋಪಾಲ್ ನಲ್ಲಿ ನಮ್ಮ ಉಸ್ತುವಾರಿ ಗಮನಿಸುತ್ತಿದ್ದ ಅಲ್ಲಿನ ಹಿರಿಯರು ಫೋನ್ ಮೂಲಕ ನಾವೆಲ್ಲಿದ್ದೇವೆ ಎಂದು ವಿಚಾರಿಸಿದ್ದರು. ಹೇಳಿದಾಗ ತಕ್ಷಣ ಅಲ್ಲಿಂದ ಹೊರಡಲು ಆದೇಶಿಸಿದ್ದರು. ಆ ಹೊತ್ತಿನಲ್ಲಿ ಹೊರಗಡೆ ಸುರಕ್ಷಿತವಲ್ಲದ ಕಾರಣ ಅವರು ಎಚ್ಚರಿಸಿದ್ದರು. ಅಲ್ಲಿಂದ ಹೊರಟ ನಾವು ಬೆಳಗಿನ ಝಾವ ಭೋಪಾಲ್ ಸೇರಿದ್ದೆವು.
–
ನಿರಂತರವಾಗಿ ಸುರಿಯುವ ಧಾರಾಕಾರ ಮಳೆಗೆ ಉಜ್ಜೈನಿಯ ಮಹಾಕಾಳೇಶ್ವರನ ಗರ್ಭಗುಡಿಗೆ ಮತ್ತು ಪ್ರಾಂಗಣಕ್ಕೆ (ಮತ್ತೂ ಮೇಲುಭಾಗ) ನೆರೆ ನೀರು ನುಗ್ಗಿದೆ ಎನ್ನುವ ಮಾಧ್ಯಮ ವರದಿ ಗಮನಿಸಿದ್ದೆ. ಬೆಳಗಿನ ಝಾವ ನೀರು ನುಗ್ಗಿದರೂ ಅರ್ಚಕರು ಅದೇ ನೆರೆ ನೀರಿನಲ್ಲಿ ನಿಂತು ಮಹಾಕಾಳನಿಗೆ ಭಸ್ಮಾರತಿ ನೆರವೇರಿಸಿದರೆಂದು ವರದಿಯಾಗಿತ್ತು. ದೇಗುಲದ ಇತಿಹಾಸದಲ್ಲೇ ಗರ್ಭಗುಡಿಗೆ ನೆರೆ ಬಂದಿರುವುದು ಇದೇ ಮೊದಲು ಎಂದು ಅರ್ಚಕರು ತಿಳಿಸಿದ್ದರು. ನದಿಯ ಮಟ್ಟದಿಂದ ಬಹಳಷ್ಟು ಎತ್ತರದಲ್ಲಿರುವ ಮಹಾಕಾಳನ ಮೂರ್ತಿ, ಅದರಿಂದಲೂ ಎತ್ತರಕ್ಕಿರುವ ವಿಶಾಲವಾದ ಪ್ರಾಂಗಣಕ್ಕೆ ಕ್ಷಿಪ್ರೆ ಹರಿದು ಬಂದು ಮಹಾಕಾಳನಿಗೆ ಜಲಾಭಿಷೇಕ ನಡೆಸಿದ ಅಪೂರ್ವವಾದ ಅಚ್ಚರಿ, ಜ್ಯೋತಿರ್ಲಿಂಗಕ್ಕೆ ನಾವು ನಮಿಸಿದ್ದನ್ನು , ಕ್ಷಿಪ್ರಾ ನದಿಯ ದರ್ಶನ ಮಾಡಿದ್ದನ್ನು ಮತ್ತೆ ಮೆಲುಕು ಹಾಕಿಸಿತು.
–
–
– ಕೃಷ್ಣವೇಣಿ, ಕಿದೂರು
–