ರಾಮಾಯಣ ಎಂಬುದು ರಸಪಾಕ..
ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ ನಡೆಯುತ್ತದೆ.ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವಂತೆ. ರಾಮಾಯಣವೆಂಬ ಕಾವ್ಯವೇ ಶ್ರೇಷ್ಠ.ಅದರಲ್ಲೊಳಗೊಂಡ ಎಲ್ಲಾ ಕಥಾಭಾಗಗಳೂ ಉತ್ತಮ ರಸಪಾಕಗಳು. ಶ್ರೀರಾಮಚಂದ್ರಾಪುರಾಧೀಶ ಶ್ರೀಶ್ರೀರಾಘವೇಶ್ವರರು ಹೇಳುವಂತೆ ಕೇಳಲು ರಾಮನ ಪಾವನ ಕಥನಾ | ಜನುಮ ಜನುಮಗಳ ಪಾಪ ವಿಮೋಚನ ||ಜೈ..ಜೈ ರಾಮಕಥಾ…ಜೈ..ಶ್ರೀರಾಮಕಥಾ..||
ಇದರಿಂದ ಕೆಲವು ರಸ ಹನಿಗಳುಃ- ರಾಮಾಯಣವೆಂಬುದು ನಮ್ಮ ಸಂಸ್ಕೃತಿಯ ತಾಯಿಬೇರು.ಇದರಿಂದಲೇ ನಮಗೊಂದು ಅಸ್ಥಿತ್ವ. ಕೊಲೆಗಡುಕನಂತಹ ಕೆಟ್ಟವನೂ ಸುಸಂದರ್ಭ ಒದಗಿ ಬಂದರೆ; ಪಶ್ಚಾತ್ತಾಪಗೊಂಡು ಗುರು ಉಪದೇಶದಿಂದ ಪರಿವರ್ತನೆಗೊಂಡು ಲೋಕಮಾನ್ಯನಾಗಿ ಪ್ರಾತಃ ಸ್ಮರಣೀಯನಾಗಬಹುದು ಎಂಬುದಕ್ಕೆ ಪ್ರಾಚೇತಸ ವಾಲ್ಮೀಕಿಯಾದುದೇ ಸಾಕ್ಷಿ. ಹೊರಕಣ್ಣಿಗೆ ಹೊಳಪು ಕಂಡು,ಚಿನ್ನ ಲೇಪಿತ ಒಂದೆರಡು ಮಾತಿಗೆ ಮರುಳಾಗಬೇಡಿ!. ನಿಜರೂಪ ತಿಳಿಯುವ ಮೊದಲೇ ಸಂಗಾತಿಯನ್ನ ಸ್ವತಃ ಆಯ್ಕೆ ಮಾಡಿಕೊಳ್ಳಬೇಡಿ!.ಯಾವುದೇ ಆಮಿಷಕ್ಕೆ ಬಲಿಯಾಗಿ ತಮ್ಮ ಶೀಲವನ್ನು ಕಳಕೊಳ್ಳಬಾರದು. ಎಂದು ಇಂದಿನ ಯುವಕ-ಯುವತಿಯರಿಗೆ; ಸ್ವರ್ಣಮೃಗದ ಮಾರೀಚನ ಕತೆಯ ಮೂಲಕ ಸೀತೆ ಸಂದೇಶ ನೀಡುತ್ತಾಳೆ. ಎಲ್ಲರೊಳಗೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ಅದು ಬೆಳಗುವುದಕ್ಕೆ; ಅದರಲ್ಲೂ ಮಕ್ಕಳಿಗೆ, ಹಿರಿಯರ, ಶಿಕ್ಷಕರ ಪ್ರೋತ್ಸಾಹ, ಸಹಕಾರಗಳು ಅಗತ್ಯ ಎಂಬ ಕಿವಿಮಾತು ಜಾಂಬವಂತ ನೀಡುತ್ತಾನೆ. ನಮ್ಮೊಳಗಿನ ಶಕ್ತಿ-ಯುಕ್ತಿಯನ್ನು ಹಿರಿಯರು ಅರಿತು ಎತ್ತಿ ತೋರಿಸುವಾಗ ನಾವದಕ್ಕೆ ಸ್ಪಂಧಿಸಬೇಕು ಎಂಬುದಾಗಿ ಆಂಜನೇಯ ಅನುಭವ ಹೇಳುತ್ತಾನೆ. ಹಾಗೂ ಶ್ರೀರಾಮನಲ್ಲಿ ಭಕ್ತಿಪಾರಮ್ಯತೆ,ಪ್ರಾಮಾಣಿಕ ಶ್ರೇಷ್ಟತೆ,ವಾನರನಾಗಿಯೂ ರಾಮನ ಕಂಡು ರಾಮನ ಬಂಟನಾದ ಹನುಮ!.ದೇವರೆತ್ತರಕ್ಕೇರಿದರೆ; ಯಾತರಭಯವೂ ಇಲ್ಲ ಎನ್ನುವ ಸಂದೇಶ ಹನುಮನಿಂದ. ಕಳ್ಳನಲ್ಲೂ ಒಂದೊಳ್ಳೆ ಗುಣವಿದೆ ಎನ್ನುವಂತೆ; ಸೀತೆಯ ಸಂಗವನ್ನು ಬಯಸಿದ ರಾವಣ ,ಆಕೆಯ ಅನುಮತಿಗಾಗಿ ಕಾಯುತ್ತಾನೆ.ಆಧುನಿಕ ಯುಗದ ಸ್ತ್ರೀ ಅತ್ಯಾಚಾರಿಗಳು ಈ ರಾಕ್ಷಸರಿಗಿಂತಲೂ ಕೀಳು ಎಂಬುದನ್ನಿಲ್ಲಿ ಗಮನಿಸಬಹುದು. ದಾಯಾದಿಗಳು ಲಕ್ಷ್ಮಣ,ಭರತರ ಸೋದರ ಪ್ರೇಮವನ್ನು ಅನುಕರಿಸಬೇಕು. ಮಂಥರೆಯರಂತಹ ಕುಟಿಲ ಬುದ್ಧಿಯ ಪರಿಚಾರಿಕಾ ಸ್ನೇಹಿತೆಯರ ಮಾತನ್ನು ಕೇಳಲೇ ಬಾರದು.ಪತಿಗೆ, ಹಠಮಾರಿತನದಿಂದ ದುರ್ಭೋದನೆಯನ್ನಿತ್ತು ಮನೆಯೊಳಗಿನ ಸಾಮರಸ್ಯವನ್ನ ಕೆಡಿಸಬಾರದು ಎಂಬುದು ಕೈಕೆಯ ಪರೋಕ್ಷ ಪಶ್ಚಾತ್ತಾಪ!.ಸೀತೆಯ ಭೂಮಿತೂಕದ ಸಹನೆ, ರಾಮನ ನೀತಿ, ಪಿತೃವಾಕ್ಯ ಪರಿಪಾಲನೆ, ಪ್ರಜಾ ಪ್ರೀತಿ ಎಣೆಯಿಲ್ಲದುದು.
ರಾಮಾಯಣ ಮುಗಿಯದ ಕತೆ ಎಂಬ ಮಾತಿದೆ. ಹೌದು, ಅದು ನಿಶ್ಚಿತಾವಧಿಯೊಳಗೆ ತೀರುವಂತಹುದಲ್ಲ. ಅದರೊಳಗಿನ ತಿರುಳು ನಿರಂತರ ನಮ್ಮ ಹೃದಯಕ್ಕಿಳಿಯ ಬೇಕಾಗಿದೆ. ಅದಕ್ಕಾಗಿ ಅನುಗಾಲವೂ ನಮಗದು ಬೇಕು. ಹಾಗಾಗಿ ಅದು ಮುಗಿಯದ ಕತೆ. ಅದರೊಳಗಿರುವ ರಾಶಿ-ರಾಶಿ ರಸದಿಂದ ಇಂತಹ ಕೆಲವು ಹನಿಗಳನ್ನಾದರೂ ಹೆಕ್ಕಿ ತೆಗೆದು , ಜನರು ಸುಶಿಕ್ಷಣ ಹೊಂದಬೇಕು ಎಂಬುದೇ ಸದಾಶಯ.
– ವಿಜಯಾ ಸುಬ್ರಹ್ಮಣ್ಯ, ಕುಂಬಳೆ