ಪ್ರಾಣಾಯಾಮ-ಒಂದು ನೋಟ : ಭಾಗ 1
ಪ್ರಾಣಾಯಾಮ-ಎಂದರೆ?
’ಪ್ರಾಣ’ ಎಂದರೆ ಜೀವಶಕ್ತಿ ಅಥವಾ ಚೈತನ್ಯ. ಇನ್ನೂ ಸರಳ ಪದ ಉಪಯೋಗಿಸಬೇಕೆಂದರೆ, ಉಸಿರಾಟ ಅಥವಾ ಜೀವಿಸಲು ಅಗತ್ಯವಾದ ಮೂಲ ಚೈತನ್ಯ. ’ಆಯಾಮ’ ಎಂದರೆ ವಿಸ್ತರಿಸುವಿಕೆ. ’ಪ್ರಾಣಾಯಾಮ’ ಎಂಬುದರ ಅರ್ಥ ’ಉಸಿರಾಟದ ದೀರ್ಘಗೊಳಿಸುವಿಕೆ’, ಅಥವಾ ಸಮತೋಲಿತ ರೀತಿಯಲ್ಲಿ ಶ್ವಾಸೋಚ್ವಾಸವನ್ನು ವಿಸ್ತರಿಸುವುದು.
ಉಸಿರಾಟದ ವೇಗ/ಗತಿ ಮತ್ತು ಆಯಸ್ಸಿನ ಮಧ್ಯೆ ಸಂಬಂಧ?
ಜೀವ/ಪ್ರಾಣ ಇರುವವುಗಳೆಲ್ಲ ಉಸಿರಾಡಲೇ ಬೇಕು. ಪ್ರಾಣ ವಾಯುವನ್ನು ದೇಹಕ್ಕೆ ಪೂರೈಸಲೇ ಬೇಕು. ನಮ್ಮನ್ನು ನಾವೇ ಗಮನಿಸಿಕೊಂಡರೆ, ಉಸಿರಾಟವು ದೇಹದಲ್ಲಿ ಒಂದು ಸ್ವಯಂಚಾಲಿತ ಕ್ರಿಯೆಯಂತೆ ನಡೆಯುತ್ತಲಿರುತ್ತದೆ. ಉಸಿರಾಟದ ಮೇಲೆ ಪ್ರತ್ಯೇಕ ಗಮನ ಹರಿಸದೇ ಹೋದರೂ ಅದು ತಂತಾನೇ ನಡೆಯುತ್ತಿರುತ್ತದೆ, ಅದರದ್ದೇ ಆದ ವೇಗದಲ್ಲಿ.
ಬೇರೆ ಬೇರೆ ಜೀವಿಗಳ ಉಸಿರಾಟದ ಗತಿಯನ್ನು ಗಮನಿಸಿದರೆ, ಉದಾಹರಣೆಗೆ ದೈತ್ಯ ಆಮೆಯು ನಿಮಿಷಕ್ಕೆ ಸರಾಸರಿ 4 ಬಾರಿ ಉಸಿರಾಡುತ್ತದೆ. ಆನೆಯ ಉಸಿರಾಟ ನಿಮಿಷಕ್ಕೆ ಸರಾಸರಿ 6 ಬಾರಿ. ಮನುಷ್ಯ 16 ಬಾರಿ ಆದರೆ ನಾಯಿಯದು 40, ಚಿಟ್ಟೆ 300 ಬಾರಿ. ಇವುಗಳ ಆಯಸ್ಸನ್ನೂ ಗಮನಿಸಿ ನೋಡಿ, ದೈತ್ಯ ಆಮೆಗಳು 300 ವರ್ಷಗಳ ಕಾಲ ಬದುಕುವುದುಂಟು. ಆನೆ 150 ವರುಷ, ಮನುಷ್ಯನ ಸರಾಸರಿ ಆಯಸ್ಸು 85 ವರ್ಷ, ನಾಯಿ ಹೆಚ್ಚೆಂದರೆ 15 ವರ್ಷ, ನಿಮಿಷಕ್ಕೆ 300 ಉಸಿರಾಟ ನಡೆಸುವ ಚಿಟ್ಟೆಯ ಆಯಸ್ಸು ಅತಿ ಕಡಿಮೆ. ಉಸಿರಾಟದ ವೇಗ ಹೆಚ್ಚಾದಷ್ಟೂ ಜೀವಿಗಳ ಆಯಸ್ಸು ಕಡಿಮೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಯಾಕಾಗಿ ಪ್ರಾಣಾಯಾಮ?
ಮನುಷ್ಯ ಬುದ್ಧಿವಂತ ಜೀವಿ. ಹಾಗಾಗಿ ಸಾಕಷ್ಟು ಹಿಂದೆಯೇ ಉಸಿರಾಟದ ಮೂಲಕವೇ ಮನಸ್ಸು, ದೇಹ, ಆತ್ಮಗಳನ್ನು ಜೊತೆ ಜೊತೆಗೆ ಶುದ್ಧೀಕರಿಸಿ ಬಲಗೊಳಿಸುವುದರ ಮೂಲಕ ಆರೋಗ್ಯಪೂರ್ಣವಾದ, ಉತ್ತಮ ಆಯಸ್ಸನ್ನು ಹೊಂದಿದ ಜೀವನವನ್ನು ಪಡೆವ ತಂತ್ರವನ್ನು ಪತ್ತೆಹಚ್ಚಿದ್ದಾನೆ. ಉಸಿರಾಟವನ್ನು ನಿಯಂತ್ರಿತವಾಗಿ ದೀರ್ಘ್ಹಗೊಳಿಸುವ ಕ್ರಿಯೆಯಾದ ಇದರ ಹೆಸರು ಪ್ರಾಣಾಯಾಮ.
ಪ್ರಾಣಾಯಾಮದ ಮೂಲ ತತ್ವ ಏನು-ಹೇಗೆ?
ಈಗಾಗಲೇ ಓದಿದಂತೆ ಇಲ್ಲಿ ಉಸಿರಾಟವನ್ನು ಸಮತೋಲಿತ ರೀತಿಯಲ್ಲಿ ವಿಸ್ತರಿಸಬೇಕು. ಪ್ರತಿ ಉಸಿರಾಟವನ್ನೂ ಹಿಡಿತಕ್ಕೆ ತೆಗೆದುಕೊಂಡು ಅದನ್ನು ಹೇಗೆ ದೀರ್ಘಗೊಳಿಸುವುದೆಂದು ನೋಡೋಣ.
ಕುಳಿತಲ್ಲೇ ಕಣ್ಣುಗಳನ್ನು ಮುಚ್ಚಿ ಕೆಳಗೆ ಹೇಳಿದ ರೀತಿಯಲ್ಲಿ ಉಸಿರಾಟ ಮಾಡಿ ನೋಡಿ:
- ಉಚ್ವಾಸ (ಪೂರಕ) : 4 ಸೆಕೆಂಡ್ ಗಳ ಕಾಲ.
- ನಿಶ್ವಾಸ (ರೇಚಕ) : 6 ಸೆಕೆಂಡ್ ಗಳ ಕಾಲ.
ಅಂದರೆ, ಒಂದು ಉಸಿರಾಟವು ಹತ್ತು ಸೆಕೆಂಡ್ ತೆಗೆದುಕೊಳ್ಳುವಂತೆ ನೋಡಬೇಕು. ಇದರರ್ಥ, 60 ಸೆಕೆಂಡ್(1 ನಿಮಿಷ)ದಲ್ಲಿ ಬರಿಯ 6 ಉಸಿರಾಟಗಳು. ಹೀಗೆ ಮಾಡುವಾಗ, ನಿಮಿಷಕ್ಕೆ ಸರಾಸರಿ 16 ಉಸಿರಾಟ ಮಾಡುವಲ್ಲಿ ಅದನ್ನು 6 ಕ್ಕೆ ಇಳಿಸಿರುತ್ತೇವೆ.
ಮನಸ್ಸಿನಲ್ಲೇ 1..2..3…4..5..6.. ಹೀಗೆ ಒಂದೊಂದು ಸೆಕೆಂಡ್ ಗಳ ಅಂತರದಲ್ಲಿ ಎಣಿಸುತ್ತಾ ಪೂರಕ, ರೇಚಕಗಳನ್ನು ನಿಧಾನವಾಗಿ ಮಾಡಿ ಉಸಿರಾಟವನ್ನು ಹದಗೊಳಿಸಿರಿ. ಉಸಿರಾಟದ ಗತಿಯನ್ನು ಒತ್ತಡಪೂರ್ವಕವಾಗಿ ಹೆಚ್ಚಿಸಬಾರದು. ನಿಧಾನವಾಗಿ ಅಭ್ಯಾಸ ಮಾಡುತ್ತಾ ಆರಾಮದಾಯಕವೆನಿಸುವಷ್ಟು ಮಾತ್ರ ದೀರ್ಘಗೊಳಿಸಬಹುದು. ಆರಂಭದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕೆಲವರಿಗೆ ಕಷ್ಟವೆನಿಸಿದರೂ ಏಕಾಗ್ರತೆಯಿಂದ, ಸಮಚಿತ್ತದಿಂದ ನಿಧಾನವಾಗಿ ಅಭ್ಯಾಸ ಮಾಡುತ್ತಾ ಬಂದಾಗ ಉಸಿರಾಟದ ಮೇಲೆ ಪೂರ್ಣ ಹಿಡಿತ ಸಿಗುವುದು. ಸ್ವಚ್ಚವಾದ ಜಾಗ, ಶುದ್ಧ ಗಾಳಿ ಲಭ್ಯವಿರುವ ಸ್ಥಳದಲ್ಲಿ ಕುಳಿತು ಇದನ್ನು ಅಭ್ಯಾಸ ಮಾಡುವುದು ಒಳಿತು.
ಪೂರ್ಣ ಪ್ರಮಾಣದ ಸಮತೋಲಿತ, ಸುಧಾರಿತ ಉಸಿರಾಟದಿಂದಾಗಿ ಮೆದುಳು, ರಕ್ತ, ಶರೀರದ ಅಂಗಾಂಗಗಳಿಗೆ ಬೇಕಾದ ಆಮ್ಲಜನಕವು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ.
ಖಾಯಿಲೆಗಳತ್ತ ಒಂದು ನೋಟ..
ಯೋಗ ತಜ್ನರಾದ ಶ್ರೀಯುತ ಆರ್. ಶ್ರೀನಿವಾಸ್, ಮೈಸೂರು ಇವರು ವಿವರಿಸುವಂತೆ, ರೋಗಗಳನ್ನು ವಿಂಗಡಣೆ ಮಾಡುವಾಗ ಎರಡು ಪ್ರಮುಖ ವಿಧಗಳು ಕಾಣಬಹುದು.
1. ಮನಸ್ಸಿಗೆ ಸಂಬಂಧಿಸಿದ ಖಾಯಿಲೆಗಳು
ಸೈಕೋಮಾಟಿಕ್ ಡಿಸಾರ್ಡರ್, ಅಂದರೆ ಮನೋದೈಹಿಕ ಖಾಯಿಲೆಗಳು. ಒತ್ತಡ, ಆತಂಕ ಇತ್ಯಾದಿ ಮಾನಸಿಕ ಸ್ಥಿತಿಗಳಿಂದ ಉಂಟಾಗುವ ದೈಹಿಕ ಅಸ್ವಾಸ್ಥ್ಯತೆ ಅಥವಾ ದೈಹಿಕ ಅಸ್ವಾಸ್ಥ್ಯತೆಯು ಮನಸ್ಸಿನಲ್ಲಿ ಮೂಡಿಸುವ ಒತ್ತಡ, ಆತಂಕ ಮನಸ್ಥಿತಿ ಇದರಲ್ಲಿ ಯಾವುದೂ ಆಗಿರಬಹುದು.
ಮಾನಸಿಕ ಒತ್ತಡದಿಂದಾಗಿ ಶಾರೀರಿಕ ಕಡೆಗಣನೆ ಅಥವಾ ಶಾರೀರಿಕ ಅಸ್ವಸ್ಥತೆಯಿಂದ ಉಂಟಾಗುವ ಮಾನಸಿಕ ಅಸಮತೋಲನ ಇವೆರಡನ್ನೂ ಈ ವಿಂಗಡಣೆಗೆ ಸೇರಿಸಬಹುದು.
2. ಉದರಕ್ಕೆ ಸಂಬಂಧಪಟ್ಟ ಖಾಯಿಲೆಗಳು.
ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಇತ್ತೀಚಿನ ವರದಿಯಲ್ಲಿ ಬಹುತೇಕ ಎಲ್ಲ ದೈತ್ಯ ರೋಗಗಳೂ ನಮ್ಮ ಆಹಾರ ಕ್ರಮಕ್ಕೆ ಸಂಬಂಧಪಟ್ಟುದು ಎಂಬುದರ ಉಲ್ಲೇಖವಿದೆ. ಅಮೇರಿಕನ್ ಸೈಕಾಲಾಜಿಕಲ್ ಅಸೋಸಿಯೇಶನ್ ಹೇಳುವಂತೆ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ದೀರ್ಘಕಾಲೀನ ರೋಗಗಳು ವ್ಯಕ್ತಿಯಲ್ಲಿ ಸ್ವಾಭಿಮಾನದ ಕೊರತೆ, ಅಸಹಾಯಕತೆ ಮತ್ತು ತೀವ್ರ ಅಸಮಾಧಾನ ಇಂತಹ ಮಾನಸಿಕ ತೊಂದರೆಗಳನ್ನು ತರುತ್ತದೆ.
ಮೇಲಿನ ಎರಡು ವಿಧಗಳಲ್ಲಿ ಪುನರಾವರ್ತಿತ ವ್ಯಾಖ್ಯಾನಗಳನ್ನು ಗಮನಿಸಿದರೆ, ಮಾನಸಿಕ-ಶಾರೀರಿಕ ಅಸೌಖ್ಯಗಳು ಪರಸ್ಪರ ಸಂಬಂಧಪಟ್ಟಿದ್ದಾಗಿದ್ದು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ನೋಡಬಹುದು. ಚಿಂತೆಗೂ ಚಿತೆಗೂ ಮಧ್ಯ ಬರಿಯ ಸೊನ್ನೆಯ ವ್ಯತ್ಯಾಸ!
ಪ್ರಾಣಾಯಾಮಕ್ಕೆ ಇಲ್ಲಿ ಪ್ರಸಕ್ತಿಯೇನೆಂದರೆ, ಮೊದಲೇ ಹೇಳಿದಂತೆ ಇದು ಮಾನಸಿಕ, ಶಾರೀರಿಕವಾಗಿ ವ್ಯಕಿಯನ್ನು ದಿನೇ ದಿನೇ ಸಧೃಢಗೊಳಿಸುತ್ತಾ ಹೋಗುತ್ತದೆ. ವಯಸ್ಸಿನ ಕಾರಣದಿಂದುಂಟಾಗುವ ಮತ್ತು ವಂಶವಾಹಿಯಾದ ಹಲವು ತೊಂದರೆಗಳನ್ನೂ ಇದು ಹಿಮ್ಮೆಟ್ಟಿಸುವುದೂ ಕೂಡಾ ಸಾಧಿಸಿ ತೋರಿಸಲಾಗಿರುವ ಸತ್ಯ.
(ಮುಂದುವರೆಯುವುದು…)
ಮುಂದಿನ ಭಾಗದಲ್ಲಿ : ಪ್ರಾಣಾಯಾಮ ತಂತ್ರಗಳನ್ನು ಅರಿಯುವ ಮುನ್ನ ತಿಳಿಯಬೇಕಾದ ಕೆಲವು ವಿಷಯಗಳು.
ಪ್ರಾಣಾಯಾಮ-ಒಂದು ನೋಟ : ಭಾಗ 2
ಪ್ರಾಣಾಯಾಮ-ಒಂದು ನೋಟ : ಭಾಗ 3
– ಶ್ರುತಿ ಶರ್ಮಾ, ಕಾಸರಗೋಡು.
Nice
nice
ಹೆಚ್ಚು ಪ್ರಾಣಾಯಾಮಗಳ ಬಗ್ಗೆ ದೀರ್ಘವಾಗಿ ತಿಳಿಸಿಕೊಡಿ
ಖಂಡಿತಾ ತಿಳಿಸುವೆ. ಲೇಖನವು ಹಂತ ಹಂತವಾದ ಮಾಹಿತಿಯಿಂದ ಕೂಡಿದೆ 🙂
ಪ್ರಾಣಾಯಾಮ, ಯೋಗ, ಧ್ಯಾನ ಎಲ್ಲವೂ ಉಸಿರಾಟ, ರಕ್ತಸಂಚಾರ (ಹ್ರುದಯ ಬಡಿತದ ನಿಯಂತ್ರಣ -ಹ್ರದಯದ ಮೇಲಿನ ಒತ್ತಡ) ನಿಯಂತ್ರಿಸುವ ಮಾರ್ಗಗಳು. ಇವನ್ನು ನಿಯಮಿತವಾಗಿ, ಸತತವಾಗಿ ಮಾಡುವುದು ಅತೀ ಮುಖ್ಯ. ಇಂದಿನ ಯುವ ಜನಾಂಗ ತ್ವರಿತ ಫಲವನ್ನು ನಿರೀಕ್ಷಿಸಬಾರದು. ಈ ಗುಟ್ಟು ಅತಿ ಮುಖ್ಯ
ಮುಂದಿನ ಭಾಗವನ್ನು ಇಲ್ಲಿ ಓದಿ.. 🙂
http://52.55.167.220/?p=7383
ಶ್ರುತಿಯಿಂದ ಸುಂದರ ಸಚಿತ್ರ ಸರಾಗವಾಗಿ ಓಡಿಸಿಕೊಂಡು ಹೋಗುವ ಉತ್ಕೃಷ್ಟ ಲೇಖನ. ಮುಂದುವರಿದ ಭಾಗ ಬೇಗ ಬರಲಿ.
ಬಹಳ ಉಪಯುಕ್ತ ಲೇಖನ .ಧನ್ಯವಾದಗಳು
ದಯಮಾಡಿ ಜಿಗಣೆಯ ಆಯಸ್ಸು ಎಷ್ಟು ಎಂದು ತಿಳಿಸಿ.
ಈ ಒಂದು ಯೋಗ ಮತ್ತ ಪ್ರಾಣಾಯಮವು ತುಂಬಾ ಉಪಯುಕ್ತವಾದದ್ದು ಆಗಿದೆ…. ಧನ್ಯವಾದಗಳು