ಮಾತೃಭಾಷಾ ಶಿಕ್ಷಣ ಮರೀಚಿಕೆಯಾಗುವುದೇ?

Share Button
Lakshmisha J Hegade

ಲಕ್ಷ್ಮೀಶ ಜೆ.ಹೆಗಡೆ

 

ಇಂದಿನ ಜಗತ್ತಿನಲ್ಲಿ ಎಲ್ಲವೂ ಅಭಿವೃದ್ಧಿ ಕೇಂದ್ರಿತವಾಗಿದೆ.ನಮ್ಮ ಜೀವನ,ನಮ್ಮ ಆರ್ಥಿಕ ಸ್ಥಿತಿ,ನಾವು ಬದುಕುವ ಪ್ರದೇಶ ಎಲ್ಲವೂ ಅಭಿವೃದ್ಧಿಯಾಗಿ ಸ್ಮಾರ್ಟ್ ಸಿಟಿ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಜಾಗತೀಕರಣದ ಇಂದಿನ ಯುಗದಲ್ಲಿ ಇತರ ದೇಶಗಳೊಂದಿಗೆ ನಾವು ವ್ಯವಹರಿಸಬೇಕಾದರೆ ಎಲ್ಲವೂ ಸ್ಮಾರ್ಟ್ ಆಗಿರಬೇಕಾದ್ದು ಅನಿವಾರ್ಯ. ಆದರೆ ಹಾಗೆ ಸ್ಮಾರ್ಟ್ ಆಗುವತ್ತ ಗಮನ ಹರಿಸುತ್ತಲೇ ನಾವು ಎಲ್ಲೋ ಒಂದೆಡೆ ನಮ್ಮತನವನ್ನೇ ದಿನೇ ದಿನೇ ಕಳೆದುಕೊಳ್ಳುತ್ತಿದ್ದೇವೇನೋ  ಎಂದೆನಿಸುತ್ತಿದೆ. ನಾವು ಕನ್ನಡಿಗರು.ನಮಗೆ ನಮ್ಮತನ ಎಂದರೆ ಯಾವುದು? ಜಾತಿ,ಧರ್ಮ,ಉದ್ಯೋಗ ಯಾವ ಬೇಧಭಾವವಿಲ್ಲದೇ ಕನ್ನಡತನವೇ ನಮ್ಮತನ.ಕನ್ನಡತನವನ್ನು ನಾವು ಉಳಿಸಿಕೊಂಡರೆ ನಾವು ನಮ್ಮತನವನ್ನು ಉಳಿಸಿಕೊಂಡಂತೆ.ಏಕೆಂದರೆ ಮನೆಯಿಂದ ಹೊರಗೆ ಕಾಲಿಟ್ಟು ಸಮಾಜಕ್ಕೆ ಬಂದಕೂಡಲೇ ಎಲ್ಲ ಬೇಧಭಾವವನ್ನು ಮರೆತು ನಾವು ಮೊದಲಿಗೆ ಕನ್ನಡಿಗರು.

ಕನ್ನಡಕ್ಕೆ ಅಂಥ ಸಮಸ್ಯೆ ಬಂದಿರುವುದಾದರೂ ಏನು ಈಗ ಎಂದು ಅನೇಕರು ಕೇಳಬಹುದು.ಹೌದು ಕನ್ನಡಕ್ಕೆ ಏನೂ ಆಗಿಲ್ಲ,ಅದು ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದೆ.ಆಗಿರುವುದೆಲ್ಲ ಕನ್ನಡಿಗರಿಗೆ,ಕನ್ನಡದ ಮನಸ್ಥಿತಿಗೆ.ಗಂಗಾವತಿ ಪ್ರಾಣೇಶ್ ಅವರು ಯಾವಾಗಲೂ ಒಂದು ಹಾಸ್ಯವನ್ನು ಹೇಳುತ್ತಿರುತ್ತಾರೆ. ಬೆಂಗಳೂರಿನಲ್ಲಿ ಕನ್ನಡಿಗ ಯಾರು ಎಂದು ಗುರುತಿಸುವುದು ತುಂಬಾ ಸುಲಭ. ಯಾವ ಮನಷ್ಯ ತಮಿಳುನಾಡಿನವರ ಜೊತೆ ತಮಿಳಿನಲ್ಲಿಯೂ, ಕೇರಳದವರ ಜೊತೆ ಮಲಯಾಳಂನಲ್ಲಿಯೂ,ಆಂಧ್ರದವರ ಜೊತೆ ತೆಲುಗಿನಲ್ಲಿಯೂ,ಉತ್ತರಭಾರತದವರ ಜೊತೆ ಹಿಂದಿಯಲ್ಲಿ ಮಾತನಾಡಿ ತನ್ನದೇ ನಾಡಿನ ಜನರ ಜೊತೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಾನೋ ಅವನೇ ಕನ್ನಡಿಗ. ಈ ಮಾತುಗಳಿಂದಲೇ ನಾವು ಊಹಿಸಬಹುದು ಕನ್ನಡದ ಮನಸ್ಸುಗಳಿಗೆ ಏನಾಗಿದೆಯೆಂದು.ನಮ್ಮತನ ಉಳಿಯಬೇಕು ಎಂದರೆ ಕನ್ನಡ ಉಳಿಯಬೇಕು.ಕನ್ನಡ ಉಳಿಯಬೇಕೆಂದರೆ ಎಲ್ಲರೂ ಕನ್ನಡದಲ್ಲಿ ವ್ಯವಹರಿಸಬೇಕು.ಅನೇಕರ ಮಾತೃಭಾಷೆ ಕನ್ನಡ,ಹಾಗಾಗಿ ಅವರಿಂದ ಕನ್ನಡಕ್ಕೇನೂ ಅಪಾಯವಿಲ್ಲ ಎಂದು ನಾವು ಊಹಿಸಬಹುದೇ?

kannada1

ಈ ಇಪ್ಪತ್ತೊಂದನೆ ಶತಮಾನದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಬಹಳ ಕಡಿಮೆಯಿದೆ.ಜಾಗತೀಕರಣದ ಕಾರಣದಿಂದ ಅನೇಕರು ನಗರವಾಸಿಗಳಾದರೆ ಇನ್ನು ಕೆಲವು ಕಡೆ ಜಾಗತೀಕರಣದ ಪರಮಾವಧಿಯಿಂದ ಹಳ್ಳಿಗಳೇ ನಿಧಾನವಾಗಿ ನಗರಗಳಾಗಿ ಪರಿವರ್ತಿತವಾಗುತ್ತಿವೆ.ನಗರದ ಹೊರವಲಯದಲ್ಲಿ ಒಂದು ಹಳ್ಳಿಯ ಹತ್ತಿರ ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿ ಶುರುವಾಗಬಹುದು.ಯಾವುದೋ ರಾಜ್ಯದಿಂದ,ದೇಶಗಳಿಂದ ಜನರು ಉದ್ಯೋಗಿಗಳಾಗಿ ಅಲ್ಲಿಗೆ ಬರಬಹುದು.ಆಗ ಅವರಿಗಾಗಿ ಅಲ್ಲೊಂದು ದೊಡ್ಡ ಮಾಲ್ ಆರಂಭವಾಗಬಹುದು.ಒಂದು ಆಂಗ್ಲ ಮಾಧ್ಯಮದ ಕಾನ್ವೆಂಟ್ ಶಾಲೆಯಂತೂ ಹೇಗಿದ್ದರೂ ಆರಂಭವಾಗುತ್ತದೆ.ಆ ಕಾನ್ವೆಂಟ್ ಶಾಲೆಗೆ ಆ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳ ಮಕ್ಕಳಲ್ಲದೆ ಅಲ್ಲಿನ ಸ್ಥಳೀಯರ ಮಕ್ಕಳೂ ಹೋಗುತ್ತಾರೆ.ತಾವೂ ಸಹ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಿಗಳಾಗುವ ಕನಸು ಕಾಣುತ್ತಾ ಆಂಗ್ಲ ಭಾಷೆಯನ್ನೇ ಪ್ರಧಾನವಾಗಿ ಕಲಿಯಲಾರಂಭಿಸುತ್ತಾರೆ.ವಿಭಕ್ತ ಕುಟುಂಬ ದ ಪೋಷಕರೂ ತಮ್ಮ ಮಗು ಮನೆಯಲ್ಲಿಯೂ ಇಂಗ್ಲೀಷ್ ನಲ್ಲೇ ಮಾತನಾಡಲಿ ಎಂದೇ ಬಯಸುತ್ತಾರೆ(ತಮಗೆ ಇಂಗ್ಲೀಷ್ ಬರದಿದ್ದರೂ).ಏಕೆಂದರೆ ಅವರೆಲ್ಲರೂ ತಮ್ಮ ಹಳ್ಳಿ ಸ್ಮಾರ್ಟ್ ಸಿಟಿ ಆಗುತ್ತಿರುವಾಗ ತಾವೂ ಸ್ಮಾರ್ಟ್ ಆಗಲು ಬಯಸುತ್ತಾರೆ.ತಮ್ಮ ಮಕ್ಕಳು ಇಂಗ್ಲೀಷ್ ಮಾತನಾಡಿ ದೊಡ್ಡದೊಡ್ಡ ಕಂಪೆನಿಗಳಲ್ಲಿ ಲಕ್ಷಗಟ್ಟಲೇ ಸಂಬಳ ಪಡೆಯುವಂತಾದರೆ ತಮ್ಮ ಮಕ್ಕಳ ಮೂಲಕವಾದರೂ ತಾವು ಸ್ಮಾರ್ಟ್ ಆದೆವೆಂದು ಬೀಗುತ್ತಾರೆ.ಒಂದು ಬಹುರಾಷ್ಟ್ರೀಯ ಕಂಪೆನಿ ಹಳ್ಳಿಗೆ ಬರುವುದರೊಂದಿಗೆ ಹೇಗೆ ಜಾಗತೀಕರಣ ಆರಂಭವಾಗುತ್ತದೆ ಮತ್ತು ಕನ್ನಡದ ಅಳಿವಿಗೆ ಹೇಗೆ ಅಡಿಪಾಯ ಸಿದ್ಧವಾಗುತ್ತದೆ ನೋಡಿ!ಇದೊಂದು ಕೇವಲ ಉದಾಹರಣೆಯಷ್ಟೇ.

ಜಾಗತೀಕರಣವಾಗುವುದನ್ನಂತೂ ತಪ್ಪಿಸಲು ಸಾಧ್ಯವಿಲ್ಲ.ಆದರೆ ಆ ಜಾಗತೀಕರಣಕ್ಕೆ ನಾವು ಬಲಿಪಶುಗಳಾಗುವುದನ್ನಾದರೂ ತಪ್ಪಿಸಬಹುದಲ್ಲ.ಅದರ ಪ್ರಭಾವದಿಂದಾದಿ ಕನ್ನಡ ಅವನತಿಯ ಅಂಚಿಗೆ ಸಾಗುವುದನ್ನಾದರೂ ತಪ್ಪಿಸಬಹುದಲ್ಲ.ಮುಂದೊಂದು ದಿನ ನಮ್ಮ ಮಕ್ಕಳು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಅಥವಾ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೇ ಸಂಬಳ ಪಡೆಯಬೇಕೆಂಬ ಏಕೈಕ ಕಾರಣದಿಂದ ಅವರನ್ನು ಎಳವೆಯಿಂದಲೇ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಕಳಿಸಬೇಕೆ?ಕನ್ನಡ ಮಾಧ್ಯಮದಲ್ಲಿ ಕಲಿತೂ ಸ್ಪಷ್ಟ ಇಂಗ್ಲೀಷ್ ಜ್ಞಾನ ಹೊಂದಿರುವವರು ಅನೇಕರು ಸಿಕ್ಕಿದರೆ,ಆಂಗ್ಲ ಮಾಧ್ಯಮದಲ್ಲಿ ಕಲಿತು ಕನ್ನಡದ ಸ್ಪಷ್ಟ ಜ್ಞಾನ ಹೊಂದಿರುವವರು ಕೇವಲ ಬೆರಳೆಣಿಕೆಯಷ್ಟಿದ್ದಾರೆ.ಮಗುವನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರೂ ಅದರ ಇಂಗ್ಲೀಷ್ ಜ್ಞಾನ ಇನ್ನೂ ಪಕ್ವವಾಗಬೇಕು,ಅದು ಇಂಗ್ಲೀಷ್ ಅನ್ನು ನಿರರ್ಗಳವಾಗಿ ಮಾತನಾಡಬೇಕು,ಅಷ್ಟೇ ಏಕೆ ಕನಸನ್ನೂ ಕೂಡಾ ಇಂಗ್ಲೀಷ್ ನಲ್ಲೇ ಕಾಣಬೇಕೆಂದು ಅನೇಕ ಪೋಷಕರು ಮನೆಯಲ್ಲಿಯೂ ಮಗುವಿನ ಹತ್ತಿರ ಇಂಗ್ಲಿಷ್ ಮಾತನಾಡಿಸುವುದನ್ನು ನಾನೇ ನೋಡಿದ್ದೇನೆ.`If you talk in English then only I will give you chocolate,then only I will allow you to watch cartoon‘ ಎಂದು ಜಾಣವಾಗಿ ಗದರಿ ಮಕ್ಕಳ ಮನಸ್ಸಿನಿಂದ ಕನ್ನಡವನ್ನು ಕಿತ್ತೊಗೆಯುತ್ತಿರುವವರನ್ನೂ ನಾನು ನೋಡಿದ್ದೇನೆ.

ಹಾಗಾಗಿ ಮನೆಯಲ್ಲಂತೂ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುವ ವಾತಾವರಣ ಅನೇಕ ಕಡೆ ಕಡಿಮೆಯಾಗುತ್ತಿದೆ.ಆದ್ದರಿಂದ ಮಕ್ಕಳು ಶಾಲೆಯಲ್ಲಾದರೂ ಕನ್ನಡವನ್ನು ಕಲಿಯಲಿ ಎಂಬ ಉದ್ದೇಶದಿಂದ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಸಿಗಬೇಕು ಎಂಬುದು ಹಲವರ ವಾದ.ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲೂ ಕನ್ನಡ ಎಂಬುದು ಒಂದು ವಿಷಯವಾಗಿ ಇರುತ್ತದಲ್ಲ ಎಂದು ಅನೇಕರು ಪ್ರಶ್ನಿಸುತ್ತಾರೆ.ಆದರೆ ಅಲ್ಲಿ ಕನ್ನಡ ಕೇವಲ ಪರೀಕ್ಷೆಯಲ್ಲಿ ಪಾಸಾಗಿ ಮುಂದಿನ ತರಗತಿಗಳಿಗೆ ಹೋಗುವುದಕ್ಕಷ್ಟೇ ಸೀಮಿತವಾಗಿರುತ್ತದೆ.ಆಂಗ್ಲ ಮಾಧ್ಯಮದಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಮಾತ್ರ ಕಲಿತವರ ಕನ್ನಡದ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.ನಾನು ಒಂದರಿಂದ ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವನು.ಪಿಯುಸಿಗೆ ಬಂದಾಗ ಒಬ್ಬ ಮಿತ್ರ ಸಿಕ್ಕಿದ.ಆತ ಹತ್ತನೇ ತರಗತಿಯವರೆಗೂ ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದವನು.ಒಂದು ದಿನ ಕನ್ನಡ ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುತ್ತಾ ಎರಡು ಸಾಲಿನ ಪದ್ಯಕ್ಕೆ ‘ದ್ವಿಪದಿ’ ಎನ್ನುತ್ತಾರೆ.’ತ್ರಿಪದಿ’ ಎಂದರೆ ಮೂರು ಸಾಲಿನದ್ದು,’ಷಟ್ಪದಿ’ ಎಂದರೆ ಆರು ಸಾಲಿನದ್ದು ಎಂದು ಯಾವುದೋ ಹಳೆಗನ್ನಡದ ಪಾಠ ಮಾಡುತ್ತಿರುವಾಗ ವಿವರಿಸುತ್ತಿದರು.ಪಕ್ಕದಲ್ಲಿ ಕುಳಿತಿದ್ದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದ ಆ ನನ್ನ ಮಿತ್ರ ಹಾಗಾದರೆ ‘ದ್ರೌ’ಪದಿ ಎಂದರೆ ಎಷ್ಟು ಸಾಲಿನ ಪದ್ಯ ಎಂದು ಕೇಳಿಬಿಟ್ಟ.ನನಗೆ ನಗು ತಡೆಯಲಾಗಲಿಲ್ಲ. ಹೀಗಿರುತ್ತದೆ ಆಂಗ್ಲ ಮಾಧ್ಯಮದಲ್ಲಿ ಓದಿದವರ ಕನ್ನಡ ಮನಸ್ಥಿತಿ.

English

ಕನ್ನಡದ ಕಥೆಗಾರ ವಸುಧೇಂದ್ರ ಅವರು ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ತಮ್ಮ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ದಾಖಲಿಸುತ್ತಾ ಹೇಗೆ ಬರೆದಿದ್ದರು.”ಒಬ್ಬ ತಾಯಿ ನನ್ನ ಪುಸ್ತಕ ಮಳಿಗೆಗೆ ತನ್ನ ಪುಟ್ಟ ಮಗಳನ್ನು ಕರೆದುಕೊಂಡು ಬಂದಿದ್ದಳು.ಆ ಮಗುವೂ ಯಾವುದಾದರೂ ಪುಸ್ತಕವನ್ನು ಕೊಡಿಸೆಂದು ಹಟ ಮಾಡುತ್ತಿತ್ತು.ಆ ತಾಯಿ ‘ನೀನು ಯಾವುದಾದರೂ ಪುಸ್ತಕದ ಟೈಟಲ್ ಓದು ಸಾಕು,ಖಂಡಿತಾ ಕೊಡಿಸ್ತೀನಿ’ ಎಂದು ಸವಾಲು ಹಾಕಿದರು.ಆ ಮಗು ಇನ್ನಿಲ್ಲದಂತೆ ಶೀರ್ಷಿಕೆಯನ್ನು ಓದಲು ತಿಣುಕಾಡಿತು.ಸಾಧ್ಯವಾಗಲಿಲ್ಲ.’ಓದು,ಓದು.. ಕೊಡಿಸ್ತೀನಿ’ ಅಂತ ಅವರಮ್ಮ ಇನ್ನಷ್ಟು ಪುಸಲಾಯಿಸಲಾರಂಭಿಸಿದರು.ಅದಕ್ಕೆ ತೋಚದಂತಾಯ್ತು.ಕೊನೆಗೆ ಸೋತು ಪುಸ್ತಕದ ಒಳಪುಟಗಳನ್ನು ತೆರೆಯಿತು.ಎರಡನೇ ಪುಟದಲ್ಲಿಯೇ ಟೆಕ್ನಿಕಲ್ ಪೇಜ್ ಇಂಗ್ಲೀಷ್ ನಲ್ಲಿಯೇ ಇರುತ್ತದಲ್ಲವೆ?ಅದನ್ನು ಕಂಡದ್ದೇ ಸಂಭ್ರಮಗೊಂಡ ಮಗು ಪಟಪಟನೆ ಪುಸ್ತಕದ ವಿವರವನ್ನೆಲ್ಲ ಅವರಮ್ಮನಿಗೆ ಓದಿಬಿಟ್ಟು,’ಪುಸ್ತಕ ಕೊಡಿಸು’ ಅಂತ ಕೇಳಿತು.ಅವರಮ್ಮ ಬೆಪ್ಪಾದರು.’ಈ ಅವಸ್ಥೆ ಯಾರ ಮುಂದೆ ಹೇಳ್ಕೊಳೋಣ ಹೇಳ್ರಿ?’ ಎಂದು ನನ್ನ ಮುಂದೆ ಪೇಚಾಡಿದರು”.ಇದು ಅರ್ಥವಾದವರಿಗೆ ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ಕೊಡಿಸದಿದ್ದರೆ ಮುಂದೆ ಕನ್ನಡದ ಗತಿ ಏನಾದೀತು ಎಂಬುದು ತಿಳಿದೀತು.

ಕನ್ನಡ ಸಾಹಿತ್ಯ ಬೆಳೆಯಬೇಕು,ಶ್ರೀಮಂತವಾಗಬೇಕು ಎಂದು ಬಯಸುವವರೂ ನಾವೇ.ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಗೆ ಕಳಿಸುವವರೂ ನಾವೇ.ಇಂದಿನ ಮಕ್ಕಳು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ತೆರಳಿ ಕನ್ನಡವನ್ನೇ ಮರೆತರೆ,ಆಂಗ್ಲ ಮನಸ್ಥಿತಿಯನ್ನೇ ಬೆಳೆಸಿಕೊಂಡರೆ ಮುಂದೆ ಕನ್ನಡ ಸಾಹಿತ್ಯವನ್ನು ರಚಿಸುವವರು ಯಾರು?ಸರ್ಕಾರವೂ ಸಹ ಮಾತೃಭಾಷಾ ಶಿಕ್ಷಣದ ಬಗ್ಗೆ ಮಾತನಾಡುತ್ತಲೇ ಹೊಸಹೊಸ ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಮಾನ್ಯತೆ ನೀಡುತ್ತಲೇ ಇದೆ.ಕನ್ನಡಪರ ಹೋರಾಟಗಾರರೆಂದು ಹೇಳಿಕೊಳ್ಳುವ ಅನೇಕ ಜನ ಕೂಡಾ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳಿಸುವ ಉದಾಹರಣೆಗಳೂ ನಮ್ಮ ಮುಂದಿವೆ.ನಮ್ಮತನವನ್ನೇ ಮಾರಿಕೊಳ್ಳುವುದು ಎಂದರೆ ಇದೇ.ಇಂದಿನ ಮಕ್ಕಳು ಕನ್ನಡವನ್ನು ಸರಿಯಾಗಿ ಕಲಿಯದಿದ್ದರೆ ಮುಂದೆ ಅವರ ಮಕ್ಕಳ ಕನ್ನಡ ಹೇಗಿರಬಹುದು?ಆ ತಲೆಮಾರಿನವರಿಗೆ ಕನ್ನಡ ಎಂಬ ಒಂದು ಭಾಷೆ ಇದೆ ಎಂಬುದೂ ಗೊತ್ತಿರುತ್ತದೋ ಇಲ್ಲವೋ? ಭಾಷೆಯೇ ಉಳಿಯದಿದ್ದ ಮೇಲೆ ಆ ನೆಲದ ಸಂಸ್ಕೃತಿ ಉಳಿದೀತೇ?ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯದೇ ಇರುವ ಏಕೈಕ ಕಾರಣದಿಂದ ಕನ್ನಡ ಸಂಸ್ಕೃತಿ ನಶಿಸಿ ಹೋಗಬೇಕೆ?ಕನ್ನಡತನವನ್ನು ಉಳಿಸಲು ಕಡೇ ಪಕ್ಷ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡದಲ್ಲಿ ಕಲಿಸಲು ನಾವು ಮುಂದಾಗಬಾರದೇ?ಬೇರೆ ರಾಜ್ಯಗಳಲ್ಲಿ,ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಬಗ್ಗೆ ಮಾತನಾಡುತ್ತಿಲ್ಲ.ನಮ್ಮ ರಾಜ್ಯದ ಜನರೇ ಕನ್ನಡವನ್ನು ಉಳಿಸಲು ಮುಂದಾದಿದ್ದರೆ ಭಾಷೆ ಅಳಿಯದೇ ಉಳಿದೀತೇ?

ಶಿಕ್ಷಣ ವ್ಯಾಪಾರೀಕರಣವಾಗಿದೆ,ಶಿಕ್ಷಣ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ,ಅಲ್ಲೆಲ್ಲ ಆಂಗ್ಲ ಮಾಧ್ಯಮದ್ದೇ ಕಾರುಬಾರು ಎಂದೆಲ್ಲಾ ಚರ್ಚೆಗಳು ನಡೆಯುತ್ತವೆ.ಆದರೆ ಶಿಕ್ಷಣ ವ್ಯಾಪಾರೀಕರಣವಾಗಲು ಕಾರಣರಾದವರು ಯಾರು?ಸ್ಮಾರ್ಟ್ ಜಗತ್ತಿನಲ್ಲಿ ನಾವೂ ಸ್ಮಾರ್ಟ್ ಆಗಬೇಕೆಂದು,ನಮ್ಮ ಮಕ್ಕಳು ಮುಂದೆ ದೇಶವಿದೇಶದಲ್ಲಿ ಲಕ್ಷಗಟ್ಟಲೇ ಸಂಬಳ ಪಡೆಯಬೇಕೆಂದು ನಮ್ಮತನವನ್ನೇ ಕಳೆದುಕೊಂಡವರಂತೆ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿರುವುದು ನಾವೇ ಅಲ್ಲವೇ?ನಮಗೆ ಸರ್ಕಾರದ ಎಲ್ಲಾ ಸವಲತ್ತುಗಳೂ ಬೇಕು,ಆದರೆ ಮನೆ ಪಕ್ಕದಲ್ಲೇ ಇರುವ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕಾದರೂ ಮಕ್ಕಳನ್ನು ಕಳಿಸಲು ನಾವೇಕೆ ತಯಾರಾಗುವುದಿಲ್ಲ?ವಿದ್ಯಾರ್ಥಿಗಳಿಂದ ತುಂಬಿ ತುಳುಕಿ,ಗತವೈಭವದಿಂದ ಮೆರೆದು ಶತಮಾನೋತ್ಸವ ಆಚರಿಸಿಕೊಂಡ ಅನೇಕ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳು ಇಂದು ಮಕ್ಕಳಿಲ್ಲದೇ ಬಾಗಿಲು ಹಾಕುವ ಹಂತ ತಲುಪಿವೆ.ಎಷ್ಟು ಜನ ನಂಬುತ್ತರೋ ಗೊತ್ತಿಲ್ಲ,ಬೆರಳೆಣಿಕೆಯಷ್ಟಿರುವ ಖಾಸಗೀ ಕನ್ನಡ ಮಾಧ್ಯಮ ಶಾಲೆಗಳು ಯಾವುವೂ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿಲ್ಲ.ವ್ಯಾಪಾರೀಕರಣಗೊಳಿಸಿ ಶಿಕ್ಷಣವನ್ನು ಮಾಫಿಯಾ ಮಾಡಿದವರು ಆಂಗ್ಲ ಮಾಧ್ಯಮ ಶಾಲೆಗಳು ಮಾತ್ರ.’ಮಗುವಿನ ಕಲಿಕೆಯ ಮಾಧ್ಯಮವನ್ನು ನಿರ್ಧರಿಸುವವರು ಪೋಷಕರು,ಅದರ ಕುರಿತು ಯಾರೂ ಒತ್ತಾಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವೇ ತೀರ್ಪಿತ್ತಿದೆ.ನಾಲ್ಕನೇ ತರಗತಿಯವರೆಗಾದರೂ ಎಲ್ಲರೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಶಿಕ್ಷಣ ಪಡೆಯಬೇಕೆಂದು ಆದೇಶ ಹೊರಡಿಸಬೇಕೆಂದಿದ್ದ ಕರ್ನಾಟಕ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಲೇ ಇದೆ.

kannada

ಕನ್ನಡದಲ್ಲೇ ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ಸಿಗುತ್ತಿಲ್ಲವಾದ್ದರಿಂದ ಸಮ್ಮೇಳನಾಧ್ಯಕ್ಷನಾಗಲಾರೆ ಎಂದು ದೇವನೂರು ಮಹಾದೇವ ಅವರು ಹಿಂದೆ ಸರಿದಿದ್ದರು.ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಸಿದ್ಧಲಿಂಗಯ್ಯನವರೂ ಮಾತೃಭಾಷಾ ಶಿಕ್ಷಣದ ಕುರಿತೇ ಧ್ವನಿ ಎತ್ತಿದರು.ಸಾಹಿತಿಗಳು,ಬುದ್ಧಿಜೀವಿಗಳು,ಜನರು ಎಲ್ಲರೂ ಶಿಕ್ಷಣ ಕನ್ನಡದಲ್ಲೇ ಸಿಗುವಂತಾಗಲು ಹೋರಾಟ ಮಾಡಬೇಕೆಂದು ಕರೆಕೊಟ್ಟರು.ಅವರ ಭಾಷಣವನ್ನು ಕೇಳಿ ಎಲ್ಲರೂ ಚಪ್ಪಾಳೆ ತಟ್ಟಿ ‘ಸಿರಿಗನ್ನಡಂ ಗೆಲ್ಗೆ’ ಎಂದು ಘೋಷಣೆ ಕೂಗಿದ್ದಾರೆ.ಆದರೆ ಯಥಾ ಪ್ರಕಾರ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೇ ಕಳಿಸುತ್ತಿದ್ದಾರೆ.ಹೋಗಲಿ ಬಿಡಿ. ಮಗುವನ್ನು ಇನ್ನೂ ಶಾಲೆಗೆ ಸೇರಿಸದ್ದಿವರು,ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗೆ ಸೇರಿಸುವವರು,ಸಮ್ಮೇಳನದಲ್ಲಿ ಕನ್ನಡದ ಉಳಿವಿಗಾಗಿ ಘೋಷಣೆ ಕೂಗಿದ ಜನರಲ್ಲಿ ಎಷ್ಟು ಜನ ಮುಂದೆ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ?

ಘೋಷಣೆ ಕೂಗಲು,ಚರ್ಚಾಸ್ಪರ್ಧೆಯಲ್ಲಿ ಮಾತನಾಡಿ ಬಹುಮಾನ ಗಿಟ್ಟಿಸಲು,ಆಶ್ವಾಸನೆಗಳನ್ನು ನೀಡಲು ಮಾತ್ರ ಕನ್ನಡ ಸೀಮಿತವಾಗುತ್ತಿರುವುದು ತೀರಾ ವಿಷಾದನೀಯ ಹಾಗು ಅಪಾಯಕಾರೀ ಸಂಗತಿ ಕೂಡಾ.ಒಂದು ವೇಳೆ ಕನ್ನಡದ ಉಳಿವಿಗಾಗಿ ಆಗಾಗ ಹೋರಾಟಗಳು ನಡೆದರೂ ಅವೆಲ್ಲವೂ ಕೊನೆಗೆ ರಾಜಕೀಯ ಲಾಭದಲ್ಲಿಯೇ ಅಂತ್ಯವಾಗುತ್ತಿರುವುದು ಬೇಜಾರಿನ ಸಂಗತಿ.ಕನ್ನಡವನ್ನು ಉಳಿಸಲು ಯಾವ ಸಂಸ್ಥೆಗಳಾಗಲೀ,ಸಂಘಟನೆಗಳಾಗಲೀ ಬೇಕಾಗಿಲ್ಲ.ನಮಗೆ ನಾವೇ ಆತ್ಮಾವಲೋಕನ ಮಾಡಿಕೊಂಡು ನಮ್ಮತನವನ್ನು ಉಳಿಸಿಕೊಳ್ಳುವತ್ತ ಆಲೋಚಿಸಿ ಕಾರ್ಯಪ್ರವರ್ತರಾದರೆ ಸಾಕು.ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ ಎಂಬಂತೆ ಎಲ್ಲಿಯವರೆಗೆ ಜಾಗತೀಕರಣದಲ್ಲಿ ಸ್ಮಾರ್ಟ್ ಆಗುವ ಹುಚ್ಚಿಗೆ ಬಿದ್ದು ನಾವು ಮಕ್ಕಳನ್ನು ಖಾಸಗೀ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸುತ್ತಿರುತ್ತೇವೋ ಅಲ್ಲಿಯವೆರೆಗೂ ಶಿಕ್ಷಣದ ವ್ಯಾಪಾರೀಕರಣ,ಮಾಫಿಯಾ ನಡೆಯುತ್ತಲೇ ಇರುತ್ತದೆ.

ನಾವು ಎಚ್ಚೆತ್ತುಕೊಳ್ಳದೇ ಇನ್ನಷ್ಟು ಖಾಸಗೀ ಶಾಲೆಗಳು ಸ್ಥಾಪನೆಯಾಗಲು ಕಾರಣವಾಗಿ,ಕನ್ನಡತನವನ್ನು ಮರೆತು,ಕನ್ನಡಮ್ಮನ ಒಡಲಿಗೇ ಚೂರಿ ಇರಿದರೆ ಎಲ್ಲೋ ಇರುವ ಒಬ್ಬ ಸಾಮಾನ್ಯ ಕನ್ನಡಪ್ರೇಮಿಯ ಮಕ್ಕಳಿಗೆ ಮಾತೃಭಾಷಾ ಶಿಕ್ಷಣ ಮರೀಚಿಕೆಯಾದೀತು.

 

 

– ಲಕ್ಷ್ಮೀಶ ಜೆ.ಹೆಗಡೆ

1 Response

  1. Niharika says:

    ಉತ್ತಮ ವೈಚಾರಿಕ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: