ಲಹರಿ

ತಬ್ಬಲಿಯು  ನೀನಾದೆ….

Share Button

ಇದು 90ರ ದಶಕ. ನಾಗಪುರದಲ್ಲಿ ಬ್ಯಾಂಕ್ ನೌಕರಿ. ಅಲ್ಲಿಯ ಸಹೋದ್ಯೋಗಿಗಳೊಂದಿಗೆ, ಸಹವಾಸಿಗಳೊಂದಿಗೆ, ತುಂಬಾ ಚೆನ್ನಾಗಿ ಹೊಂದಾಣಿಕೆ ಇದ್ದುದರಿಂದ ಮೂರು ವರ್ಷಗಳ ಬದಲು ಐದು ವರ್ಷ ಅಲ್ಲಿ ಇದ್ದೆವು.  ಅಲ್ಲಿಯ ನಮ್ಮ ಬ್ಯಾಂಕ್ ನೌಕರರ ಸಂಘಕ್ಕೆ ನಾನು ಜಿಲ್ಲಾ ಕಾರ್ಯದರ್ಶಿಯಾಗಿದ್ದೆ. ಒಮ್ಮೆ ಮುಂಬೈ ನಗರದಲ್ಲಿರುವ ನಮ್ಮ ವೃತ್ತ ಕಚೇರಿಯಲ್ಲಿ ನಡೆಯುತ್ತಿದ್ದ ನೌಕರರ ಸಂಘ ಮತ್ತು ಆಡಳಿತ ವರ್ಗದವರ ಮುಖಾಮುಖಿ ಸಭೆಗೆ ನನ್ನನ್ನು ವಿಶೇಷ ಆಹ್ವಾನಿತನಾಗಿ ಕರೆದಿದ್ದರು. ಉಳಿದ ನಾಲ್ಕೈದು ಜನ ಸಹೋದ್ಯೋಗಿಗಳು ರೈಲಿನಲ್ಲಿ ಪ್ರಯಾಣಿಸಲು ಅನುಮತಿ ಇತ್ತು. ಆದರೆ ನನಗೊಬ್ಬನಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಿದ್ದರು. ಅದರಂತೆ ನಾನೊಬ್ಬನೇ ವಿಮಾನದಲ್ಲಿ ಪ್ರಯಾಣಿಸಿ, ಆಗಲೇ ರೈಲಿನಲ್ಲಿ ಪ್ರಯಾಣ ಮಾಡಿ ಬಂದಿದ್ದ ಇತರೆ ಸಹೋದ್ಯೋಗಿಗಳನ್ನು ಸೇರಿಕೊಂಡು, ಒಂದೆಡೆ  ವಾಸ್ತವ್ಯ ಹೂಡಿದೆವು. ಮರುದಿನ ಸಭೆ ಮುಗಿಸಿ, ಉಳಿದ ಎಲ್ಲಾ ಸಹೋದ್ಯೋಗಿಗಳು ರೈಲಿನಲ್ಲಿ ಪ್ರಯಾಣಿಸಬೇಕಾಗಿದ್ದರಿಂದ ಎಲ್ಲರೂ ತರಾತುರಿಯಲ್ಲಿ ಲಗುಬಗೆಯಿಂದ ಊಟ ಮಾಡಿ  ರೈಲು ನಿಲ್ದಾಣಕ್ಕೆ ಹೋದರು.

ನಾನೊಬ್ಬನೇ ವಿಮಾನದಲ್ಲಿ ಪ್ರಯಾಣ ಮಾಡುವವನಾಗಿದ್ದರಿಂದ,  ವಿಮಾನ ಹೊರಡಲು ತುಂಬಾ ಸಮಯ ಇದ್ದುದರಿಂದ, ಸಾವಕಾಶವಾಗಿ ಯಾವ ಗಡಿಬಿಡಿಯಾಗಿ ಇಲ್ಲದೆ,  ಲೋಕಲ್ ಟ್ರೈನ್ ನಲ್ಲಿ ಸಂತಾಕ್ರೂಜ್ ಗೆ ಬಂದು‌, ವಿಮಾನ ನಿಲ್ದಾಣದಲ್ಲಿ  ಪ್ರಯಾಣಿಕರು ವಿಶ್ರಮಿಸಿಕೊಳ್ಳುವ ಜಾಗದಲ್ಲಿ ಕುಳಿತು, ಅಲ್ಲೇ ಟಿವಿಯಲ್ಲಿ  ಬರುತ್ತಿದ್ದ ಕ್ರಿಕೆಟ್‌ ಪಂದ್ಯ ನೋಡುತ್ತಾ ಕುಳಿತೆ.  ಹೇಗೂ ಕಾಯ್ದಿರಿಸಿದ ಟಿಕೆಟ್ ಇದೆ, ಅಲ್ಲೇ ಎದುರಿಗೆ ಕಾಣುವ ವಿಮಾನಯಾನ ಸಂಸ್ಥೆಯ ಕೌಂಟರ್ ನಲ್ಲಿ ಹೋಗಿ ಟಿಕೆಟ್ ತೋರಿಸಿದರೆ ಬೋರ್ಡಿಂಗ್ ಪಾಸ್ ಕೊಡುತ್ತಾರೆ‌, ಅದನ್ನು ತೆಗೆದುಕೊಂಡು ಒಳಗೆ ಹೋಗಿ ವಿಮಾನದಲ್ಲಿ ಕೂರುವುದು, ಅಷ್ಟೇ ತಾನೇ ಎನ್ನುವ ಉಡಾಫೆ ಮತ್ತು ಬೇಜವಾಬ್ದಾರಿತನದಿಂದ 6.40ಕ್ಕೆ ಹೊರಡುವ ವಿಮಾನ ಹಿಡಿಯಲು 6.20 ರವರೆಗೆ ಕ್ರಿಕೆಟ್ ನೋಡುತ್ತಾ ಕುಳಿತು, ನಂತರ ವಿಮಾನಯಾನ ಸಂಸ್ಥೆಯ ಕೌಂಟರ್ ಬಳಿ ಹೋದರೆ, ಅವರು ಈ ವಿಮಾನ ಟರ್ಮಿನಲ್ ಎರಡರಿಂದ ಹೊರಡುವುದಾಗಿ ತಿಳಿಸಿದರು.  ನನ್ನ ಜಂಘಾಲವೇ ಡುಗಿ ಹೋಯಿತು. ಏಕೆಂದರೆ ಆ ಟರ್ಮಿನಲ್ ತಲುಪಲು ಕನಿಷ್ಟ ಪಕ್ಷ 30 ನಿಮಿಷಗಳು ಬೇಕಾಗುತ್ತಿತ್ತು. ಎದ್ದೆನೋ ಬಿದ್ದೆನೋ ಎಂದು ಓಡುತ್ತಾ ಹೋಗಿ ಅಲ್ಲಿಯ ಕೌಂಟರ್‌ ನಲ್ಲಿ ಕೇಳಿದರೆ, ಇವತ್ತಿನ ಪ್ರಯಾಣದ ಕೌಂಟರ್ ಮುಕ್ತಾಯವಾಗಿದೆ.  ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದರು. ಆದರೆ ಹೇಗಾದರೂ ಮಾಡಿ ಸಹಾಯ ಮಾಡಿ ಎಂದು ಗೋಗರೆಯ ತೊಡಗಿದೆ. ನನ್ನ ಗೋಳು ನೋಡಲಾರದೆ ಅಥವಾ ನನ್ನನ್ನು ಸಾಗಹಾಕುವ ಉದ್ದೇಶದಿಂದ ಒಳಗಡೆ ಮ್ಯಾನೇಜರ್ ಇದ್ದಾರೆ ಅವರನ್ನು ವಿಚಾರಿಸಿ ಎಂದು ಹೇಳಿದರು. ಒಳಗಡೆ ಇರುವ ಮ್ಯಾನೇಜರ್ ಬಳಿ ಹೋಗಿ ನನ್ನ ಪರಿಸ್ಥಿತಿಯನ್ನು ವಿವರಿಸಿ ಹೇಗಾದರೂ ಮಾಡಿ ಸಹಾಯ ಮಾಡಬೇಕೆಂದು ಕೇಳಿಕೊಂಡಾಗ ಅವರು ಅತ್ಯಂತ ಶಾಂತವಾಗಿ ಆಂಗ್ಲ ಭಾಷೆಯಲ್ಲಿ “ಈಗ ವಿಮಾನ ಹಾರಲು ಪ್ರಾರಂಭಿಸಿದೆ. ಈ ದಿನ ನಾಗಪುರಕ್ಕೆ ಹೋಗುವುದನ್ನು ಮರೆತು ಬಿಡಿ. ಬೇಕಾದರೆ, ಟಿಕೆಟ್‌ ನ ಹಣ ವಾಪಾಸು ಪಡೆಯಿರಿ ಅಥವಾ ನಾಳೆಯ ಪ್ರಯಾಣಕ್ಕೆ ಟಿಕೆಟ್ ಪಡೆಯಿರಿ” ಎಂದರು.   ಬಂದ ದಾರಿಗೆ ಸುಂಕವಿಲ್ಲವೆಂದು ಕೌಂಟರ್ ನಲ್ಲಿ ಹೋಗಿ ಹಣ ರೀಫಂಡ್ ಮಾಡಿ ಹೇಗಾದರೂ ಬಸ್ ನಲ್ಲಿ ಅಥವಾ ಟ್ರೈನ್ ನಲ್ಲಿ ನಾಗಪುರಕ್ಕೆ ಹೋಗುತ್ತೇನೆ ಎಂದು ತಿಳಿಸಿದೆ.  ಟಿಕೆಟ್‌ ನೋಡಿ ಈ ಟಿಕೆಟ್‌ ಅನ್ನು  ನಾಗಪುರದಲ್ಲಿ ಪಡೆದಿರುವುದರಿಂದ, ರಿಫಂಡ್‌ ಸಹ ನಾಗಪುರದಲ್ಲೇ ಪಡೆಯಬಹುದೆಂದು ತಿಳಿಸಿದಾಗ, ಬೇರೆ ಟಿಕೆಟ್ ಪಡೆಯುವಷ್ಟು ಹಣವು ನನ್ನ ಬಳಿ ಇಲ್ಲದ್ದರಿಂದ, ಮರುದಿನಕ್ಕೆ ಟಿಕೆಟ್ ಪಡೆದೆ.  ಏನು ಮಾಡಲೂ ಗೊತ್ತಾಗದೆ, ಮತ್ತೆ ಟ್ಯಾಕ್ಸಿ ಮಾಡಿಕೊಂಡು ನನ್ನ ಬೇಜವಾಬ್ದಾರಿ  ನಡವಳಿಕೆಗೆ ನನ್ನನ್ನು ನಾನೇ ಶಪಿಸಿಕೊಂಡು, ಈಗ ಪಶ್ಚಾತ್ತಾಪ ಪಟ್ಟುಕೊಂಡು ಪ್ರಯೋಜನವಿಲ್ಲ ಎಂದು ಸಮಾಧಾನ ಪಟ್ಟುಕೊಂಡು, ಟ್ಯಾಕ್ಸಿಯಲ್ಲಿ ಚೆಂಬೂರಿಗೆ ಬಂದು, ಹೋಟೇಲ್‌ ನಲ್ಲಿ ರೂಂ ಮಾಡಿ ಊಟ ಮಾಡಿ ಮಲಗಿದೆ.  

ಮತ್ತೆ ಮರುದಿನ ಸಂಜೆ 6.40 ಕ್ಕೆ ವಿಮಾನ ಹೊರಡುವುದಿತ್ತು.  ಆಗ ಮುಂಬೈನಿಂದ ನಾಗಪುರಕ್ಕೆ ದಿನಕ್ಕೆ ಒಂದೇ ವಿಮಾನ ಇರುತ್ತಿತ್ತು. ಆದ್ದರಿಂದ  ಬೇಕಾದಷ್ಟು ಸಮಯವಿತ್ತು.  ಬೆಳಗ್ಗೆ ನಿಧಾನವಾಗಿ ಎದ್ದು, ನಿಧಾನವಾಗಿ ಸ್ನಾನ ತಿಂಡಿ ಕಾರ್ಯಕ್ರಮ ಮುಗಿಸಿ, ಎದುರಿಗೆ ಇದ್ದ ಡಬಲ್ ಡೆಕ್ಕರ್‌  ಬಸ್‌ ಹತ್ತಿ, ವಿಕ್ಟೋರಿಯಾ ಟರ್ಮಿನಸ್ ಗೆ ಟಿಕೆಟ್ ಪಡೆದು, ಬಸ್‌ ನ  ಮೇಲಿನ  ಅಂತಸ್ತಿನಲ್ಲಿ ಕಿಟಕಿಯ ಪಕ್ಕ  ಕುಳಿತು, ಮಹಾರಾಜರು ರಥದಲ್ಲಿ ಅತ್ತಿತ್ತ ಠೀವಿಯಿಂದ ನೋಡುವಂತೆ,  ಮುಂಬೈ ನಗರವನ್ನು ನೋಡುತ್ತಾ ಕುಳಿತೆ.  ಕೊನೆಗೆ ಸ್ಟೇಷನ್ ಬಂದಾಗ ಇಳಿದು, ಸಂತಾಕ್ರೂಜ್‌ ಗೆ ಹೊರಡುವ ರೈಲಿಗೆ ಟಿಕೆಟ್ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತೆ.  ಆ ಮುಂಬೈ ನಗರದಲ್ಲಿ ಯಾರಿಗೂ ಯಾವುದಕ್ಕೂಸಮಯವೇ ಇಲ್ಲದೆ, ಎಲ್ಲರೂ ಧಾವಂತದಲ್ಲೇ ಅತುರಾತುರವಾಗಿ ಓಡುತ್ತಿರುವಾಗ, ನನಗೊಬ್ಬನಿಗೆ ಮಾತ್ರ ಬೇಕಾದಷ್ಟು ಸಮಯವಿತ್ತು. ನಿಧಾನವಾಗಿ ಟಿಕೆಟ್ ಪಡೆದು, ನಿಧಾನವಾಗಿ ಟ್ರೈನ್ ಹತ್ತಿದೆ. ರೈಲು ಸಂತಕ್ರೂಜ್‌ ಗೆ ಬಂದಾಗ,  ಇನ್ನೂ ಅರ್ಧ ದಿನ ಸಮಯ ಇದೆ, ಎಂದು ಆ ಕಡೆ ಈ ಕಡೆ ನೋಡುತ್ತಾ, ಅಂಗಡಿ ಮುಂಗಟ್ಟುಗಳನ್ನು,  ಜನರನ್ನು ನೋಡುತ್ತಾ ನಿಧಾನವಾಗಿ ನಡೆಯುತ್ತಾ ಸಾಗಿದೆ.  ಅಷ್ಟೊತ್ತಿಗೆ ಮಧ್ಯಾಹ್ನ 1.00  ಗಂಟೆ ಸಮಯ ಆಗಿದ್ದಿದ್ದರಿಂದ, ಮತ್ತೆ ಬೇಕಾದಷ್ಟು ಸಮಯವೂ ಇದ್ದುದರಿಂದ ಅಲ್ಲೇ ಇದ್ದ  ಪಂಜಾಬಿ ರೆಸ್ಟೋರೆಂಟ್  ಹೋಟೆಲ್ ಒಳಗೆ ಹೋಗಿ, ಊಟ ಮುಗಿಸಿ,  ಕೈ ತೊಳೆದು,   32 ರೂಪಾಯಿ ಬಿಲ್‌ ಪಾವತಿಸಲು ಜೇಬಿಗೆ ಕೈ ಹಾಕಿದರೆ,  ಎದೆ ಧಸಕ್ಕೆಂದಿತು. ಜೇಬಿನಲ್ಲಿ ಪರ್ಸ್‌ ಇರಲಿಲ್ಲ. ಎಲ್ಲೋ ಪಿಕ್‌ ಪಾಕೆಟ್‌  ಆಗಿತ್ತು.  ಜೇಬು ಖಾಲಿ. ಮೇಲಿನ ಅಂಗಿ ಜೇಬಿನಲ್ಲಿ ಚಿಲ್ಲರೆ 10-12 ರೂಪಾಯಿ ಅಷ್ಟೇ ಇತ್ತು.   

ಇರೋ ಜೇಬುಗಳನ್ನೆಲ್ಲಾ ತಡಕಾಡುತ್ತಾ ಗಾಬರಿಯಲ್ಲಿ ನಿಂತದ್ದನ್ನು ನೋಡಿ ಹೋಟೆಲ್‌ ಹುಡುಗರು ಏನಾಯಿತೆಂದು ಕೇಳಿದರು. ನಾನಾಗ ವಿಷಯ ತಿಳಿಸಿ ಬಿಲ್‌ ಪಾವತಿಸಲು ಹಣ ಇಲ್ಲವೆಂದು ತಿಳಿಸಿದೆ. ಏನು  ಮಾಡುವುದೆಂದು ಗೊತ್ತಾಗದೆ, ಗಲ್ಲಾ ಪೆಟ್ಟಿಗೆಯ ಬಳಿ ಕುಳಿತಿದ್ದ ವ್ಯಕ್ತಿಗೆ, ಇರುವ ವಿಷಯ ತಿಳಿಸಿದೆ, ಬ್ರೀಫ್‌  ಕೇಸ್ ನಲ್ಲಿ ಇದ್ದ ಮೀಟಿಂಗ್ ಪತ್ರ,  ನಾಗಪುರಕ್ಕೆ ಹೋಗಲು ಇದ್ದ ವಿಮಾನ ಯಾನದ ಟಿಕೆಟ್ ಎಲ್ಲಾ ತೋರಿಸಿ, ತಾನು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಎಂದೂ ಬ್ಯಾಂಕಿನ ಮೀಟಿಂಗ್‌ ಗಾಗಿ ನಾಗಪುರದಿಂದ ಬಂದು ಈಗ ಮೀಟಿಂಗ್‌ ಮುಗಿಸಿ ನಾಗಪುರಕ್ಕೆ ವಾಪಸ್ ಹೋಗುತ್ತಿರುವುದಾಗಿಯೂ,  ಪರ್ಸ್ ಪಿಕ್ ಪಾಕೆಟ್ ಆಗಿ ಕಳೆದು ಹೋಗಿರುವುದರಿಂದ ಬಿಲ್ ಪಾವತಿಸಲು ಹಣ ಇಲ್ಲದಿರುವುದಾಗಿಯೂ ತಿಳಿಸಿದೆ.   ಬೇಕಾದರೆ 32 ರೂಪಾಯಿಗೆ   ಬ್ಯಾಂಕ್ ಚೆಕ್ ಕೊಡುವುದಾಗಿ ತಿಳಿಸಿದೆ. (ಅದೃಷ್ಟಕ್ಕೆ ಬ್ರೀಫ್ ಕೇಸ್ ನಲ್ಲಿ  ಚೆಕ್‌  ಪುಸ್ತಕ ಇತ್ತು)  ಈಗಿನಂತೆ ಆಗ ಮೊಬೈಲ್ ಫೋನ್ ಆಗಲಿ, ಗೂಗಲ್ ಪೇ, ಫೋನ್ ಪೇ, ಗಳಾಗಲಿ, ಏಟಿಎಂ ಗಳಾಗಲಿ  ಏನೂ ಇರಲಿಲ್ಲ.  ನನ್ನ ಪರಿಸ್ಥಿತಿಯನ್ನು ಮುಂಬೈಯ ಸ್ನೇಹಿತರಿಗೆ ತಿಳಿಸಲು ಫೋನ್ ನಂಬರ್ ಗಳನ್ನು ಬರೆದುಕೊಂಡಿದ್ದ ಚಿಕ್ಕ ಫೋನ್ ಬುಕ್ ಸಹ ಪರ್ಸನೊಂದಿಗೆ ಕಳೆದು ಹೋಗಿತ್ತು.  ತಬ್ಬಲಿಯಂತಾಗಿದ್ದ  ನನ್ನ ಕರುಣಾಜನಕ ಸ್ಥಿತಿಯನ್ನು ನೋಡಿ, ಯಾವ ದೇವರು ಬುದ್ಧಿ ಕೊಟ್ಟನೋ ಆ ಗಲ್ಲಾ ಪೆಟ್ಟಿಗೆಯ  ವ್ಯಕ್ತಿ, ನನ್ನ ಮನವಿಯನ್ನು ಸಮ್ಮತಿಸಿದನು. ತಕ್ಷಣ ನಾನು 32 ರೂಪಾಯಿಗೆ ಚೆಕ್ ಬರೆಯುತ್ತಿದ್ದೆ.

ಅಷ್ಟರಲ್ಲಿ ಹೋಟೆಲ್‌  ಮಾಲೀಕರು ಬಂದರು. ಗಲ್ಲಾ ಪೆಟ್ಟಿಗೆಯ ವ್ಯಕ್ತಿ ಮಾಲೀಕರಿಗೆ ವಿಷಯ ತಿಳಿಸಿದಾಗ, ನಾನು ಪುನಃ ನನ್ನ ಪುರಾಣವನ್ನು ದೈನೇಶಿಯಾಗಿ ಪ್ರಸ್ತುತಪಡಿಸಿದೆ. ಪುಣ್ಯಕ್ಕೆ ಆ ಮಾಲೀಕರು ಮಂಗಳೂರಿನವರಾಗಿದ್ದರು (ಹೋಟೆಲ್ ಹೆಸರು ಪಂಜಾಬಿ ರೆಸ್ಟೋರೆಂಟ್ ಆಗಿದ್ದರೂ ಸಹ) ಅವರು ಕನ್ನಡ ಮಾತನಾಡುವವರಾಗಿದ್ದರು.   ಸಮೀಪದ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಂಡು ಬಂದು ಬಿಲ್ ಪಾವತಿಸಲು ತಿಳಿಸಿದರು.  ಆದರೆ ಆಗ ಆ ಬ್ಯಾಂಕ್ ತೆರೆದಿರಲಿಲ್ಲ.  ಆಗ ಮಾಲೀಕರು ಪರಸ್ಥಳಕ್ಕೆ ಬಂದಾಗ ತುಂಬಾ ಹುಷಾರಾಗಿ ಇರಬೇಕೆಂದೂ,  ಈ ರೀತಿಯ ಕಥೆಗಳನ್ನು ಯಾರೂ ನಂಬುವುದಿಲ್ಲವೆಂದೂ, ಕೈಯಲ್ಲಿರುವ ವಾಚು, ಉಂಗುರಗಳನ್ನು ಕಿತ್ತುಕೊಂಡು ಕಳುಹಿಸುತ್ತಾರೆ ಎಂದೂ ತಿಳಿಸಿದರು. ಚೆಕ್‌ ಕೊಡುವುದು ಎನೂ ಬೇಡ.   ಊರಿಗೆ ಹೋದ ಮೇಲೆ  ಸಾಧ್ಯವಾದರೆ ಕಳುಹಿಸಿ, ಇಲ್ಲದಿದ್ದರೂ ಪರವಾಗಿಲ್ಲ.  ಈಗ ಊರು ತಲುಪಲು ಏನಾದರೂ ಹಣದ ಅವಶ್ಯಕತೆ ಇದೆಯೇ ಎಂದು ಕೇಳಿ, ಇನ್ನೂರು ರೂಪಾಯಿ ಕೊಡಲು ಬಂದರು.  ಆಗ ನಾನು ಅವರಿಗೆ ಕೈ ಮುಗಿದು, ನಾಗಪುರಕ್ಕೆ ಹೋಗಲು ವಿಮಾನದ ಟಿಕೆಟ್ ಇರುವುದರಿಂದ ಹಣದ ಅವಶ್ಯಕತೆ ಇಲ್ಲವೆಂದು ತಿಳಿಸಿದೆ.  (ತನ್ನನ್ನು ಕೈಬಿಟ್ಟರೆ ಸಾಕು ಎಂದು ಮನಸ್ಸಿನಲ್ಲಿ ಅಂದುಕೊಂಡೆ.) ಅವರು ವಿಮಾನ ನಿಲ್ದಾಣಕ್ಕೆ ಹೇಗೆ ಹೋಗುವಿರಿ ಎಂದು ಕೇಳಿದರು.  ಹಣ ಇದ್ದಿದ್ದರೆ ಆಟೋದಲ್ಲಿ ಹೋಗುತ್ತಿದ್ದೆ.  ಈಗ ಹಣ ಇಲ್ಲ, ಆದರೆ ಸಮಯ ಬೇಕಾದಷ್ಟಿದೆ,  ವಿಮಾನ ನಿಲ್ದಾಣ ನಡೆದು ಹೋಗುವಷ್ಟು ದೂರವೇ ಇರುವುದರಿಂದ, ನಡೆದೇ ಹೋಗುತ್ತೇನೆ ಎಂದು ತಿಳಿಸಿ ಅವರಿಗೆ ಕೈ ಮುಗಿದು ಅಲ್ಲಿಂದ ಹೊರಟೆ.

 ಇಡೀ ಜೀವನದಲ್ಲಿ ಇಂತಹ ಅವಮಾನ, ಅನಾಥ ಪ್ರಜ್ಞೆ, ಅನುಭವಿಸಿದ ಸಂದರ್ಭ ಒದಗಿರಲಿಲ್ಲ. ತಬ್ಬಲಿಯು ನೀನಾದೆ ಮಗನೆ ಎನ್ನುವ ಸ್ಥಿತಿ ನನ್ನದಾಗಿತ್ತು.  ಪ್ರಥಮ ಬಾರಿಗೆ ಅತ್ಯಂತ ಅವಮಾನಿತನಾಗಿ, ತಲೆತಗ್ಗಿಸಿಕೊಂಡು ಕುಗ್ಗಿದ ಮನಸ್ಸಿನಲ್ಲಿ ನಡೆಯುತ್ತಾ ಹೊರಟೆ.  ವಿಮಾನ ನಿಲ್ದಾಣ ಸುಮಾರು ಎರಡು ಕಿಲೋಮೀಟರ್ ಇತ್ತು.  ಈ ಸಾರಿ ಸರಿಯಾಗಿ ವಿಚಾರಿಸಿ ವಿಮಾನ ಹೊರಡುವ ಸಮಯ,  ಪ್ರವೇಶಿಸಬೇಕಾದ ಗೇಟ್ ನಂಬರ್,  ಎಲ್ಲಾ ಸರಿಯಾಗಿ ವಿಚಾರಿಸಿ,  ಅಲ್ಲಿಗೆ ಹೋದೆ.  ಇನ್ನೂ ಸಮಯ ಇದ್ದಿದ್ದರಿಂದ ವಿಷಯವನ್ನು ಸ್ನೇಹಿತರಿಗೆ ತಿಳಿಸಲು ಕಾಯಿನ್‌ ಬೂತ್‌ ಗೆ ಹೋಗಿ ಫೋನ್ ಮಾಡಲು ಪ್ರಯತ್ನಿಸಿದೆ.  ಆಗ ಒಂದು ರೂಪಾಯಿ ನಾಣ್ಯವನ್ನು ಹಾಕಿ ಫೋನ್ ಮಾಡಬೇಕಾಗಿತ್ತು.  ಮೀಟಿಂಗ್ ಆಹ್ವಾನ ಪತ್ರದಲ್ಲಿದ್ದ ಒಂದೆರಡು ಫೋನ್ ನಂಬರ್ ಗಳಿಗೆ ಡಯಲ್ ಮಾಡಿ ಒಂದು ರೂಪಾಯಿ ನಾಣ್ಯ ಹಾಕಿ ಹಲೋ ಹಲೋ ಅನ್ನುವುದರಲ್ಲಿ, ಸಂಪರ್ಕ ಕಡಿದು ಹೋಗುತ್ತಿತ್ತು.  ಜೇಬಿ ನಲ್ಲಿ ಒಂದು ರೂಪಾಯಿಯ  2-3 ನಾಣ್ಯಗಳು ಇದ್ದವು. ಎಷ್ಟು ಬಾರಿ ಪ್ರಯತ್ನಿಸಿದರೂ ಸಂಪರ್ಕ ಸಾಧಿಸಲಾಗಲಿಲ್ಲ. ಒಂದು ರೂಪಾಯಿ ನಾಣ್ಯಗಳು ಮುಗಿದು ಹೋದ ನಂತರ  ಅಲ್ಲಿ ಓಡಾಡುತ್ತಿದ್ದ ಜನರನ್ನು ಒಂದು ರೂಪಾಯಿ ನಾಣ್ಯ ಚಿಲ್ಲರೆಗೆ  ಕೇಳಿಕೊಂಡಾಗ ಕೈ ತಿರುವಿಕೊಂಡು ಹೊರಟು ಹೋದರು.  ನನ್ನ ಪರಿಸ್ಥಿತಿ ಭಿಕ್ಷುಕನಂತಾಗಿತ್ತು.   

 ನಂತರ ವಿಮಾನ ಟಿಕೆಟ್ ನೋಡಿದರೆ ಗಾಯದ ಮೇಲೆ ಉಪ್ಪು ಸುರಿದಂತೆ,  ನನ್ನದು ವೇಟಿಂಗ್ ಲಿಸ್ಟ್ ನಂಬರ್ ಆರು ಎಂದಿತ್ತು.  ಆಗ ಅಲ್ಲಿ ವಿಮಾನ ಸಂಸ್ಥೆಯ ನೌಕರನೊಬ್ಬನನ್ನು ಹಿಡಿದು ವೇಟಿಂಗ್ ಲಿಸ್ಟ್ ನಲ್ಲಿ ಇರುವುದು ಕನ್ಫರ್ಮ್ ಆದರೆ ಅದಕ್ಕೆ ಏನಾದರೂ ಹಣ ಕೊಡಬೇಕಾ ಎಂದು ಕೇಳಿದೆ.  ಅವನು ಇಲ್ಲ ಯಾಕೆ ಅಂತ ಕೇಳಿದ. ನಾನು ನನ್ನ ಪರಿಸ್ಥಿತಿಯನ್ನು ವಿವರಿಸಿ ಪಿಕ್ ಪಾಕೆಟ್ ಆಗಿ ಪರ್ಸ್ ಇಲ್ಲದಿರುವುದರಿಂದ ಹಣವಿಲ್ಲವೆಂದು ತಿಳಿಸಿದೆ.  ಅವನಿಗೆ ಏನು ಅನ್ನಿಸಿತ್ತೋ ಏನೋ, ಅಲ್ಲೇ ಕೌಂಟರ್ ಎದುರಿಗೆ ಇದ್ದ ಆಸನ ತೋರಿಸಿ, ತಾನು ಹೇಳುವವರೆಗೂ ಅಲ್ಲೇ ಕುಳಿತಿರಬೇಕಾಗಿಯೂ ಎಲ್ಲೂ ಹೋಗಬಾರದೆಂದೂ, ರೆಗ್ಯುಲರ್ ಟಿಕೆಟ್ ಕೌಂಟರ್ ಮುಗಿದ ತಕ್ಷಣ, ತನ್ನನ್ನು ಕಳುಹಿಸುವುದಾಗಿ ತಿಳಿಸಿದಾಗ ನನ್ನ ಪಾಲಿಗೆ ಅವನೇ ದೇವರಾಗಿ ಕಂಡ. ಅವನು ಹೇಳಿದಂತೆ ಅಲ್ಲೇ ಅಲುಗಾಡದೇ ಕುಳಿತೆ.  6.30ಕ್ಕೆ ಸರಿಯಾಗಿ ಅವನು ನನ್ನನ್ನು ಕರೆದು ಒಳಗೆ ಹೋಗಿ ವಿಮಾನದಲ್ಲಿ ಕುಳಿತುಕೊಳ್ಳಲು ತಿಳಿಸಿದ. ತಕ್ಷಣ ಜಿಂಕೆಮರಿಯಂತೆ ಹಾರಿಕೊಂಡು ಓಡಿ ಹೋಗಿ ವಿಮಾನದಲ್ಲಿ ಕುಳಿತು, ನನಗೆ ಸಹಾಯ ಮಾಡಿದ ಹೋಟೆಲ್ ಮಾಲೀಕ, ವಿಮಾನಯಾನ ಸಂಸ್ಥೆಯ ನೌಕರ ಇವರ ಉಪಕಾರವನ್ನು ಸ್ಮರಿಸುತ್ತಾ, ಇನ್ನೂ ಈ ತರಹದ ಪರೋಪಕಾರಿಗಳು ಇರುವುದರಿಂದಲೇ, ಅಲ್ಪ ಸ್ವಲ್ಪ ಮಳೆ ಬೆಳೆ ಆಗುತ್ತಿದೆ ಎಂದು ಮತ್ತೊಮ್ಮೆ ಮನಸ್ಸಿನಲ್ಲಿ ಅವರಿಗೆ ಧನ್ಯವಾದಗಳು ಅರ್ಪಿಸಿದೆ.  ಅಷ್ಟರಲ್ಲಿ ವಿಮಾನ ಹೊರಟು ಮುಂದಿನ 40 ನಿಮಿಷದಲ್ಲಿ ನಾಗಪುರದ  ವಿಮಾನ ನಿಲ್ದಾಣ ತಲುಪಿತ್ತು. ಈ ಸಮಯದಲ್ಲಿ ನಾನು ಪರ್ಸ್‌ ಅನ್ನು ಎಲ್ಲಿ ಕಳೆದುಕೊಂಡಿರಬಹುದೆಂದು, ಬೆಳಗಿನಿಂದ ಆದ ಘಟನೆಗಳನ್ನು ಮೆಲುಕು ಹಾಕ ತೊಡಗಿದೆ.  

ವಿ ಟಿ ಸ್ಟೇಷನ್‌ ನಲ್ಲಿ ಸಂತಾಕ್ರೂಜ್‌ ಗೆ ಹೋಗಲು ಟಿಕೆಟ್‌ ಸಲುವಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಯಾರೋ ಹಿಂದಿನಿಂದ ದಬ್ಬಿಕೊಂಡು ಹೋದಹಾಗಾಯಿತು. ಆದರೆ ಟಿಕೆಟ್‌ ಗಾಗಿ ಬೇಕಾಗುವಷ್ಟು ಹಣ ಮೇಲಿನ ಜೇಬಿನಲ್ಲಿ ಇದ್ದುದರಿಂದ ಪರ್ಸ್‌ ಬಗ್ಗೆ ಗಮನ ಕೊಡಲಿಲ್ಲ. ಇಲ್ಲದಿದ್ದರೆ ಪರ್ಸ್‌ ಕಳೆದಿರುವುದು ಆಗಲೇ ಗೊತ್ತಾಗಿ, ಈ ಹೋಟೆಲ್‌ ಹಗರಣ ಆಗುತ್ತಿರಲಿಲ್ಲ. ನಂತರ ಸಂತಾಕ್ರೂಜ್‌ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು, ನಿಧಾನವಾಗಿ ಹೋಗುತ್ತಿದ್ದಾಗ ಹಿಂದಿನಿಂದ ಒಂದಿಬ್ಬರು, ದಬ್ಬಿಕೊಂಡು ಹೋಗಿದ್ದು ನೆನಪಾಯಿತು.

ಈ ಎರಡು ಸಂದರ್ಭಗಳಲ್ಲೇ ಪಿಕ್‌ ಪಾಕೆಟ್‌ ಆಗಿರಬಹುದೆಂದು ಯೋಚಿಸಿದೆ.

 ಅಷ್ಟರಲ್ಲಿ ವಿಮಾನ ನಾಗಪುರ ತಲುಪಿತ್ತು. ಅಲ್ಲಿಂದ ವಿಮಾನ ನಿಲ್ದಾಣದ ಹೊರಗೆ ಬಂದು ಆಟೋ ಹಿಡಿದು, ನಮ್ಮ ಅಪಾರ್ಟ್ಮೆಂಟ್‌ ನ  ಮುಂದೆ ಇಳಿದು  ಆಟೋದವನಿಗೆ ಐದು ನಿಮಿಷ ಕಾಯಲು ಹೇಳಿ ಮನೆಗೆ ಓಡಿದೆ.  ಮುಂಬೈನಿಂದ ವಿಮಾನದಲ್ಲಿ ಬಂದು ಇಲ್ಲಿ ದುಡ್ಡು ಕೊಡದೆ ಓಡಿ ಹೋದನಲ್ಲ ಅಂತ ಆಟೋದವನು ಆಶ್ಚರ್ಯ ಪಟ್ಟಿರಬಹುದು. ಅಷ್ಟರಲ್ಲಿ ಮನೆಗೆ ಹೋಗಿ ಮನೆಯಲ್ಲಿ 30 ರೂಪಾಯಿ ಕೊಡಲು ಕೇಳಿದಾಗ, ಅವರಿಗೂ ಆಶ್ಚರ್ಯ. ಮುಂಬೈನಿಂದ ಬಂದು ರೂ.30 ಕೇಳುತ್ತಿದ್ದಾರಲ್ಲ ಅಂತ. ಮೊದಲು ದುಡ್ಡು ಕೊಡು ಆಮೇಲೆ ಕಥೆಯೆಲ್ಲಾ  ಹೇಳುತ್ತೇನೆ ಎಂದು ಹಣ ಪಡೆದು, ಮೊದಲು ಹೋಗಿ ಆಟೋದವನಿಗೆ ದುಡ್ಡು ಕೊಟ್ಟು ಕಳುಹಿಸಿ,  ಮನೆಗೆ ಬಂದು ಪೂರ್ಣ ವೃತ್ತಾಂತವನ್ನು ಒಪ್ಪಿಸಿದಾಗ,  “ಅದಕ್ಕೇ ಹೇಳೋದು  ಹಿಂದಿನ ಜೇಬಿನಲ್ಲಿ ಪರ್ಸ್‌ ಇಟ್ಟು ಕೊಳ್ಳಬೇಡಿ, ದುಡ್ಡು ಒಂದೇ ಕಡೆ ಇಟ್ಟುಕೊಳ್ಳಬೇಡಿ  ಅಂತ,  ನೀವು ನಮ್ಮ ಮಾತು ಎಲ್ಲಿ ಕೇಳ್ತಿರಾ”  ಎಂದು ಮುಖಕ್ಕೆ ಮಂಗಳಾರತಿ ಮಾಡಿದರು.

 ಈ ಘಟನೆಯ ನಂತರ ಪ್ಯಾಂಟ್‌ ನ   ಮುಂಭಾಗದಲ್ಲಿ ಸೊಂಟದ ಬಳಿ, ಒಳಭಾಗದಲ್ಲಿರುವ ಗುಪ್ತ ಜೇಬಿನಲ್ಲಿ, ಹಣ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡೆ.  ಆದರೆ ಒಂದೆರಡು ವರ್ಷಗಳಲ್ಲೇ, ನಾಯಿಬಾಲ ಡೊಂಕು ಅಂತ ಮತ್ತೆ ಹಿಂದುಗಡೆ ಜೇಬಿ ನಲ್ಲಿ ಇಟ್ಟುಕೊಳ್ಳುತ್ತಿದ್ದೆ.

ಟಿ.ವಿ.ಬಿ.ರಾಜನ್ , ಬೆಂಗಳೂರು

12 Comments on “ತಬ್ಬಲಿಯು  ನೀನಾದೆ….

  1. ಅಸಹಕಾಯತೆಗೆ ಉದಾಹರಣೆ ನಿಮ್ಮ ಅಂದಿನ ಪರಿಸ್ಥಿತಿ, ಬರಹ ಇದನ್ನು ಮನ ಮುಟ್ಟುವಂತೆ ವಿವರಿದಿದೆ. ಜೊತೆಗೆ ಇದರಿಂದ ನಿಮ್ಮ ಆತಂಕ, ಪಶ್ಯತ್ತಾಪ, ಮಾನಸಿಕ ಒತ್ತಡ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹೋಟೆಲ್ ಮಾಲೀಕರ ಉದಾರತೆ, ಕಷ್ಟಕ್ಕೆ ಸ್ಪಂದನೆ, ಬುದ್ಧಿವಾದ ಆತನ ದಿದ್ದ ಮನಸ್ಸನ್ನು ತೋರಿದೆ. ಹೀಗೆಯೇ ವಿಮಾನ ನಿಲ್ದಾಣದ ವ್ಯಕ್ತಿಯ ಕರ್ತವ್ಯ ಪ್ರಜ್ಞೆ, ಸ್ನೇಹಶೀಲತೆ ತೋರಿಸುತ್ತದೆ. ಮತ್ತೆ ಈ ಘಟನೆ ನಡೆದು ಎಷ್ಟೋ ವರ್ಷಗಳಾಗಿದ್ದರೂ ನಿಮ್ಮ ನೆನಪು ಹಚ್ಚ ಹಸಿರಾಗಿರುವುದು ಮತ್ತು ಪದಗಳಲ್ಲಿ ಹಾಗೆಯೇ ಮೂಡಿ ಬಂದಿತುವುದು ವಿಶೇಷ. ಇದನ್ನು ಓದಿದ ಹಲವಾರು ಮಂದಿಗೆ ತಮ್ಮ ಜೀವನದಲ್ಲಿ ಹೇಗೆ ನಡೆದುಹೋದ ಘಟನೆಗಳು ನೆನಪಾಗುವುದು ಸಹಜ.

  2. ಅಬ್ಬಾ…ನೀವಾದುದಕ್ಕೆ ನಿಭಾಯಿಸಿದಿರಿ…

  3. ಅಬ್ಭಾ..ನಿಮ್ಮ ಪರಸ್ಥಳದ ಪರದಾಟದ ಕಥೆ..ಬಹಳ ರೋಚಕವಾಗಿ ಬಂದಿದೆ.. ಹಾಗೇ .. ಎಚ್ಚರಿಕೆಯ ಸಂದೇಶ ವನ್ನು ಸಾರಿದೆ ಸಾರ್.. ಗುಡ್

  4. ನಿಮ್ಮ ಅನುಭವ ರಿಂದ ಬೇರೆಯವರು ಪಾಠ ಕಲಿಯುವ ಂತಿದೆ. ಒಳ್ಳೆಯವರು, ಸಹಾಯಹಸ್ತ ನೀಡುವವರು ಎಲ್ಲಾಕಡೆ ಇರುತ್ತಾರೆಂದು ಸಮಾಧಾನವೂ ಆಯಿತು.

    1. Very good lesson for visitors to Mumbai where pickpocket is common in suburban rail journey because of crowd and punctuality is very important for flight because of formalities like getting boarding pass, security check, and finding exact gate number to proceed. Anyway one becomes panicky and helplessness in these circumstances. We will appreciate your wisdom and boldness to tide over all the events. Very good narration, Good luck for your future article and longing to read it.

  5. ನಿಮ್ಮ ಅನುಭವ ತುಂಬಾ ಆಸಕ್ತಿದಾಯಕವಾಗಿತ್ತು sir

  6. ಓದುತ್ತಾ ಹೋದ ಹಾಗೆ, ನೀವು ಅನುಭವಿಸಿರಬಹುದಾದ ನೋವು, ಆತಂಕಗಳು ಕಣ್ಣಿಗೆ ಕಟ್ಟುವಂತೆ ಮೂಡಿ ಬಂತು.

  7. *ನಮ್ಮ ದೇಶದಲ್ಲಿರುವಾಗಲೇ ಹಣ ಅಥವಾ ಸಾಮಾನುಗಳನ್ನು ಕಳೆದು ಕೊಂಡಾಗ ಅಪರಿಚಿತ ಊರುಗಳಲ್ಲಿ ಈ ತರಹದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಪರದೇಶದಲ್ಲಿ ಹಣ, ಸಾಮಾನು ಅಥವಾ ಪಾಸ್ ಪೋರ್ಟ ಕಳೆದು ಕೊಂಡರೆ ದೇವರೇ ಗತಿ. ಅಂತೂ ನೀವು ಸುರಕ್ಷಿತವಾಗಿ ವಾಪಸ್ಸು ಊರಿಗೆ ಬಂದು ತಲುಪಿದ್ದೀರಿ. ಏಕೆಂದರೆ ಇಂತಹ ವೇಳೆಯಲ್ಲೇ ಏನಾದರೂ ದುರ್ಘಟನೆ ಸಂಭವಿಸುವ ಸಾಧ್ಯತೆಗಳಿರುತ್ತವೆ.*

    *ಕೆಲವು ವರ್ಷಗಳ ಹಿಂದೆ ನಡೆದ ಘಟನೆ – ನಾನು ನಮ್ಮೂರಿನಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿ ಬರುತ್ತಿದ್ದೆ. ನಡುವೆ ಹಾನಗಲ್ಲಿನಲ್ಲಿ ಒಂದು ಕುಟುಂಬ ಬಸ್ಸು ಹತ್ತಿತು. ಅವರ ಕೂಡ ಏಳೆಂಟು ಬ್ಯಾಗುಗಳಿದ್ದವು. ಅವರು ಎಲ್ ಟೀಸಿ ಮೇಲೆ ಯಾತ್ರೆಗೆ ಹೂರಟಿದ್ದರು. ಬಸ್ ಹತ್ತಿದ ನಂತರ ಕುಟುಂಬದ ಯಜಮಾನ ಟಿಕೆಟ್ ತಗಿಸಲು ಪ್ಯಾಂಟ್ ಹಿಂದಿನ ಜೇಬಲ್ಲಿ ಕೈ ಹಾಕಿನೋಡುತ್ತಾನೆ. ಪರ್ಸ ಇಲ್ಲ. ಬಸ್ ಹತ್ತುವಾಗ ಯಾರೋ ಪರ್ಸ ಹೊಡೆದಿದ್ದರು. ಎಲ್ಲಾ ಹಣ, ಮುಂದಿನ ರೇಲ್ವೆ ಟಿಕೇಟ್ ಪರ್ಸಕೂಡ ಕಳೆದು ಕೊಂಡಿದ್ದರು. ಬಸ್ ಅಲ್ಲೇ ನಿಲ್ಲಿಸಿ ಎಲ್ಲರೂ ಅಳುತ್ತಾ ಇಳಿದು ಹೋದರು. ನೋಡಿ ಮನಸ್ಸಿಗೆ ಬಹಳ ನೋವಾಯಿತು.*
    *ಈಗಂತೂ ಪರ್ಸಿನಲ್ಲಿ ಡೆಬಿಟ ಕಾರ್ಡ, ಕ್ರೆಡಿಟ್ ಕಾರ್ಡ, ಡ್ರೈವಿಂಗ್ ಲೈಸನ್ಸ ಏನೇನೆಲ್ಲ ಇಟ್ಟಿರುತ್ತೇವೆ. ಪರ್ಸ ಕಳೆದರೆ ಎಲ್ಲಾ ಗೋವಿಂದ. ಈಗ ಮೊಬೈಲ್ ದಲ್ಲಿ ಹಣ, ಬ್ಯಾಂಕ ವಿವರ ಎಲ್ಲಾ ಇರುತ್ತವೆ. ಮೊಬೈಲ್ ಕಳೆದರೆ ಕಥೆ ಮುಗಿಯಿತು. ಸೈಬರ ಕಳ್ಳರಿಂದ ಎಷ್ಟೇ ಎಚ್ಚರಿಕೆಯಿಂದಿದ್ದರೂ ಯಾವ ಸಮಯದಲ್ಲಿ ನಮ್ಮ ಬ್ಯಾಂಕ ಖಾತೆಯಲ್ಲಿಯ ಹಣ ಮಾಯಮಾಡುತ್ತಾರೋ ತಿಳಿಯುವದಿಲ್ಲ.*
    *ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಒಬ್ಬ ವ್ಯಕ್ತಿ ಅಪರಿಚಿತ ಸ್ಥಳದಲ್ಲಿ ಹೇಗೆ ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂದು ನಿಮ್ಮ ಅನುಭವದ ಮುಖಾಂತರ ಚೆನ್ನಾಗಿ, ವಿವರವಾಗಿ ಬರೆದಿದ್ದೀರಿ. ಇನ್ನು ಮುಂದೆ ಪ್ರವಾಸಗಳಲ್ಲಿ ಹುಷಾರಾಗಿರೋಣ.*
    ಬಿ.ಕೆ.ಕಲ್ಲಾಪುರ.

  8. ಇಂತಹ ಅಸಹಾಯಕ ಪರಿಸ್ಥಿತಿಯನ್ನು ನಿಭಾಯಿಸಲು ಮನಸ್ಸು ಬಹಳ ಗಟ್ಟಿ ಬೇಕಪ್ಪಾ! ಬಸ್ಸಿನಲ್ಲಿ ಪ್ರಯಾಣಿಸುವಾಗ ನನಗೂ ಇಂತಹದೇ ಪರಿಸ್ಥಿತಿ ಎದುರಾಗಿದ್ದ ಹಳೆಯ ನೆನಪು ಮರುಕಳಿಸಿತು. ಲೇಖನ ಸಹಜವಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *