ಕಾದಂಬರಿ : ತಾಯಿ – ಪುಟ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
ರಾಜಲಕ್ಷ್ಮಿ ಆಶ್ರಮಕ್ಕೆ ಬಂದು 5 ತಿಂಗಳು ಕಳೆದಿತ್ತು. ರಾಹುಲ್ ಒಮ್ಮೆ ಬಂದು ಹೋಗಿದ್ದ. ಅವನೂ ತಾಯಿಯನ್ನು ಕರೆಯಲಿಲ್ಲ. ರಾಜಲಕ್ಷ್ಮಿಯೂ ಹೋಗುವ ಉತ್ಸಾಹ ತೋರಲಿಲ್ಲ.
ಎರಡು ತಿಂಗಳ ನಂತರ ರಾಹುಲ್ ತಾಯಿಯನ್ನು ನೋಡಲು ಬಂದ. ಹೇಗಿದ್ದೀಯಮ್ಮ? ಎಲ್ಲಾ ಅನುಕೂಲವಾಗಿದೆಯಾ? ಎರಡು ತಿಂಗಳಾದರೆ ನಮ್ಮ ಹೊಸಮನೆ ಸಿದ್ಧವಾಗತ್ತೆ. ಆಗ ನಿನ್ನನ್ನು ಕರ‍್ಕೊಂಡು ಹೋಗ್ತೀನಿ” ಎಂದ.
“ಆಯ್ತಪ್ಪ ನೋಡೋಣ” ಎಂದರು ರಾಜಲಕ್ಷ್ಮಿ
.
“ಅಮ್ಮ, ನಿನ್ನ ಹತ್ತಿರ ಒಂದು ಮುಖ್ಯವಾದ ವಿಚಾರ ಮಾತನಾಡಬೇಕಾಗಿತ್ತು.”
“ಏನು ವಿಷಯ?”
“ಅಮ್ಮ, ನಮ್ಮ ಹೊಸಮನೆಗೆ ಹಣ ಸಾಕಾಗ್ತಿಲ್ಲ. ಅದಕ್ಕೆ….”
‘ಅದಕ್ಕೆ….?’ ರಾಜಲಕ್ಷ್ಮಿ ಕೇಳಿದರು.
“ನಂಜನಗೂಡಿನ ಮನೆ ಮಾಡಿಬಿಡೋಣಾಂತ….”
“ಮನೆ ಮಾರುವುದಾ?”
“ಈಗ ಅಲ್ಲಿ ಯಾರೂ ಇಲ್ಲವಲ್ಲ….”
“ರಾಹುಲ್ ನೀನು ನಿನ್ನ ಹೆಸರಿನಲ್ಲಿದ್ದ ಮನೆ ಮಾರುವಾಗ ನನ್ನನ್ನು ಕೇಳಿದೆಯಾ? ನಂಜನಗೂಡಿನ ಮನೆ ನನ್ನ ಹೆಸರಿನಲ್ಲಿದೆ. ನಾನದನ್ನು ಮಾರುವುದಿಲ್ಲ. ನನ್ನ ಕೊನೆ ದಿನಗಳನ್ನು ಅಲ್ಲಿ ಕಳೆಯುವ ಯೋಚನೆ ಇದೆ.”
“ನಿನಗೊಂದು ತರಹ ಹುಚ್ಚು.”
“ಹಾಗೇ ಅಂದುಕೋ.”
“ಮಗ ಕಷ್ಟದಲ್ಲಿದ್ದಾನೆ ಸಹಾಯ ಮಾಡಬೇಕು ಅನ್ನುವ ಬುದ್ಧಿಯೂ ಇಲ್ಲವಲ್ಲಮ್ಮ ನಿನಗೆ?”
“ಅಪ್ಪ-ಅಮ್ಮ ಮೈಸೂರಿಗೆ ಹತ್ತಿರದಲ್ಲೇ ಇದ್ದರೂ ಎಷ್ಟು ಸಲ ಬಂದು ನೀನು ಬರ‍್ತಿದ್ದೆ? ಅಪ್ಪನಿಗೆ ಹುಷಾರಿಲ್ಲದಿದ್ದಾಗ ಮೈಸೂರಿಗೆ ಕರೆದುಕೊಂಡು ಬಂದು ತೋರಿಸಬಹುದಿತ್ತಲ್ವಾ? ಅಪ್ಪ-ಅಮ್ಮ ಬೇಡ ಅವರ ಹಣ ಬೇಕೂಂದ್ರೆ ಹೇಗೆ?”
“ನಿನ್ನ ಮೇಲೆ ಪ್ರೀತಿ ಇಲ್ಲದೆ ನಾನು 3 ಲಕ್ಷ ಅಡ್ವಾನ್ಸ್ ಕೊಟ್ಟು ಈ ಆಶ್ರಮಕ್ಕೆ ಸೇರಿಸಿದ್ನಾ ಅಮ್ಮ?”
“ಜೊತೆಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಇದು ವಾಸಿ ಅಲ್ವಾ? ನೀನು ಈಗಾಗಲೇ ಹೊಸ ಮನೆಯಲ್ಲಿ ಇರುವುದು ನನಗೆ ಗೊತ್ತು. ನಿಮ್ಮ ಅತ್ತೆ-ಮಾವ ನಿಮ್ಮ ಜೊತೆಯೇ ಇರುವುದೂ ನನಗೆ ಗೊತ್ತು. ಆದಷ್ಟು ಬೇಗ ನಿನ್ನ ಮೂರು ಲಕ್ಷ ವಾಪಸ್ಸು ಮಾಡ್ತೀನಿ. ಮನೆ ಮಾರುವ ವಿಚಾರಕ್ಕೆ ತಲೆ ಹಾಕಬೇಡ.”
ರಾಹುಲ್‌ಗೆ ಕಪಾಳಕ್ಕೆ ಹೊಡೆದಂತಾಗಿತ್ತು.
“ನನಗೆ ಮಗ ಅನ್ನುವ ವ್ಯಾಮೋಹ ಹೊರಟುಹೋಗಿದೆ. ರಜನಿ ಇದ್ದಿದ್ದಿದ್ರೆ ಅನಾಥ ಪ್ರಜ್ಞೆ ನನ್ನನ್ನು ಕಾಡುತ್ತಿರಲಿಲ್ಲ. ಈಗ ಎಲ್ಲಿದ್ರೂ ನಾನು ಒಂಟೀನೇ. ನಾನು ನಿಮ್ಮ ಮನೆಗೆ ಯಾವತ್ತೂ ಬರಲ್ಲ. ಹೆಂಡತಿ ಹಾಕುವ ಗೆರೆ ದಾಟುವ ಯೋಗ್ಯತೆಯಿಲ್ಲದ ನೀನು ಒಂದು ದಿನ ಬಹಳ ಅನುಭವಿಸ್ತೀಯ. ಆಗ ಈ ಅಮ್ಮನ್ನ ನೆನಪು ಮಾಡಿಕೋ.”
ರಾಹುಲ್ ತಲೆ ತಗ್ಗಿಸಿ ಹೊರನಡೆದ.
ಅವನು ಹೋಗುತ್ತಿರುವಾಗ ರಾಜಲಕ್ಷ್ಮಿ ಬಿಕ್ಕಿ ಬಿಕ್ಕಿ ಅತ್ತರು.
“ಯಾಕಳ್ತಿದ್ದೀರ ರಾಜಲಕ್ಷ್ಮಿ? ನಿಮ್ಮ ಮಗನಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರ. ಅತ್ತೆ-ಮಾವನ್ನ ಮನೆಯಲ್ಲಿಟ್ಟುಕೊಳ್ಳಕ್ಕಾಗತ್ತೆ. ಆದರೆ ತಾಯಿ ಬೇಡ ಅಲ್ವಾ? ನನಗಂತೂ ನಿಮ್ಮ ನಿರ್ಧಾರ ಕೇಳಿ ಖುಷಿಯಾಯ್ತು.”
“ಒಂದು ಸಲ ನಂಜನಗೂಡಿಗೆ ಹೋಗಿ ನಮ್ಮ ಲಾಯರ್‌ನ ನೋಡಬೇಕು.”
“ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಮಗ ಮನೆ ಮಾರಕ್ಕಾಗಲ್ಲ. ಧೈರ್ಯವಾಗಿರಿ” ಭವಾನಿ ಸಮಾಧಾನ ಹೇಳಿದರು.
ಸುಮಾರು ಒಂದು ತಿಂಗಳು ಕಳೆಯಿತು. ಒಂದು ಸಾಯಂಕಾಲ ರಾಜಲಕ್ಷ್ಮಿ ಅಳಿಯ ಫೋನ್ ಮಾಡಿದ.
“ಅತ್ತೆ ನಾನು ಮೈಸೂರಿಗೆ ಬಂದಿದ್ದೀನಿ. ನಿಮ್ಮನ್ನು ಭೇಟಿ ಮಾಡಬೇಕು. ಎಲ್ಲಿದ್ದೀರಾ?”
ರಾಜಲಕ್ಷ್ಮಿ ಆಶ್ರಮದ ವಿಳಾಸ ತಿಳಿಸಿದರು. ಭರತ್ ಸಾಯಂಕಾಲ ನಾಲ್ಕು ಗಂಟೆಯ ಹೊತ್ತಿಗೆ ಅವರನ್ನು ನೋಡಲು ಬಂದ. ರಾಜಲಕ್ಷ್ಮಿ ಅವನನ್ನು ತಮ್ಮ ರೂಮ್‌ನಲ್ಲೇ ಕೂಡಿಸಿಕೊಂಡರು. ಅತ್ತೆ ವೃದ್ಧಾಶ್ರಮದಲ್ಲಿರುವುದು ನೋಡಿ ಅವನು ತುಂಬಾ ನೊಂದುಕೊಂಡ.
“ಏನು ಮಾಡುವಂತಿಲ್ಲಪ್ಪ. ಅವನ ಜೊತೆ ಅವರ ಅತ್ತೆ-ಮಾವ ಇದ್ದಾರೆ. ನಾನು ಹೇಗಿರಲು ಸಾಧ್ಯ? ಅವನ ಮಕ್ಕಳಿಗೆ ನನ್ನ ಅಭ್ಯಾಸವೇ ಇಲ್ಲ. ನಾನು ಇಲ್ಲೇ ಆರಾಮವಾಗಿದ್ದೇನೆ.”
“ಅಮ್ಮಾ ಒಂಟಿಕೊಪ್ಪಲ್‌ನಲ್ಲಿದ್ದ ನಿಮ್ಮ ಮನೆ ಏನಾಯ್ತು?”
“ಅದು ಪಿತ್ರಾರ್ಜಿತ ಆಸ್ತಿ. ಆದ್ದರಿಂದ ಅವನು ನನ್ನನ್ನು ಒಂದು ಮಾತೂ ಕೇಳದೆ ಮಾರಿಬಿಟ್ಟ. ನಂಜನಗೂಡಿನ ಮನೆ ನನ್ನ ಹೆಸರಲ್ಲಿದೆ.”
“….. ಒಂಟಿಕೊಪ್ಪಲ್ಲಿನ ಮನೆ ಹಾಗೇ ಇದೆಯಾ?”
“ಗೊತ್ತಿಲ್ಲ. ನಾನು ಇತ್ತೀಚೆಗೆ ನೋಡೇ ಇಲ್ಲ.”
“ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆ ಬರ‍್ತೀನಿ. ನೀವು ರೆಡಿಯಾಗಿರಿ. ಮನೆ ನೋಡಿಕೊಂಡು ಬರೋಣ.”
“ಆಗಲಪ್ಪ.”
“ನೀವು ಒಬ್ಬರೇ ಬನ್ನಿ.”
ರಾಜಲಕ್ಷ್ಮಿಒಪ್ಪಿದರು.
ಮರುದಿನ 11 ಗಂಟೆಗೆ ಸರಿಯಾಗಿ ಭರತ್ ಕಾರ್‌ನಲ್ಲಿ ಆಗಮಿಸಿದ. ರಾಜಲಕ್ಷ್ಮಿ ಸಿದ್ಧವಾಗಿದ್ದರು.
ಅವರ ಮನೆಯಿದ್ದ ಜಾಗದಲ್ಲಿ ಭವ್ಯವಾದ ಕಟ್ಟಡವಿತ್ತು. ಬಾಗಿಲಿನ ಬಳಿ ಕುಳಿತಿದ್ದ ಸೆಕ್ಯೂರಿಟಿ “ಯಾರೂ ವಾಸವಾಗಿಲ್ಲ ಸರ್. ಮನೆ ಮಾರಾಟಕ್ಕಿದೆ.”
“ನಾವು ಮನೆ ನೋಡಬಹುದಾ?”
“ಓನರ್ ನಂಬರ್ ಕೊಡ್ತೀನಿ ಮಾತಾಡಿ.”
ಓನರ್ ಹೆಸರು ಗುರುಚರಣದತ್. ಅವರು ಚೆನ್ನಾಗಿ ಮಾತನಾಡಿದರು. ಭರತ್ ತನ್ನ ಪರಿಚಯ ಹೇಳಿಕೊಂಡ.
“ಸರ್, ನಾನು ಆ ಬಿಲ್ಡಿಂಗ್‌ನಲ್ಲಿ ಕಂಪನಿ ನಡೆಸುತ್ತಿದ್ದೆ. ಲಾಸ್ ಆಯ್ತು. ನಾನು ನನ್ನ ಮಗನ ಹತ್ತಿರ ವಾಪಸ್ಸಾಗ್ತೀನಿ. ನನ್ನ ಮಗ ನ್ಯೂಜೆರ್ಸಿಯಲ್ಲಿದ್ದಾನೆ.”
“ನಾವು ಬಿಲ್ಡಿಂಗ್ ನೋಡಬಹುದಾ?”
“ಷೂರ್. ಸೆಕ್ಯೂರಿಟಿಗೆ ಹೇಳಿ. ಅವನು ಬಿಲ್ಡಿಂಗ್ ತೋರಿಸ್ತಾನೆ.”
ಸೆಕ್ಯೂರಿಟಿ ಬಾಗಿಲು ತೆಗೆದ. ಒಂದು ದೊಡ್ಡ ವರಾಂಡ. ನಂತರ ದೊಡ್ಡ ಹಾಲ್. ಹಾಲ್‌ನ ಬಲಭಾಗದಲ್ಲಿ ಆರು ಕೋಣೆಗಳಿದ್ದವು. ಹಾಲ್ ದಾಟಿದರೆ ಸಣ್ಣ ಪ್ಯಾಸೇಜ್. ಅಲ್ಲಿ ಲಿಫ್ಟ್ ಇತ್ತು. ಪ್ಯಾಸೇಜ್ ನಂತರ ದೊಡ್ಡ ಅಡಿಗೆ ಮನೆ, ದೇವರ ಮನೆ ಇತ್ತು. ದೇವರ ಮನೆ ಹತ್ತಿರ ಡೈನಿಂಗ್ ಹಾಲ್ ಇತ್ತು. ಮಹಡಿ ಮೇಲೆ ಅಟ್ಯಾಚ್ಡ್ಬಾತ್‌ರೂಂ ಇರುವ ಆರು ಕೋಣೆಗಳು, ವಿಶಾಲವಾದ ಬಾಲ್ಕನಿ ಇತ್ತು.
“ಸಾಹೇಬರು ಮೊದಲು ಈ ಮನೆಯಲ್ಲಿ ವಾಸವಾಗಿದ್ರಾ?”
“ನಾಲ್ಕೂ ಜನ ಅಣ್ಣ-ತಮ್ಮಂದಿರು ಒಟ್ಟಿಗೆಯಾಗಿದ್ರು. ಆಮೇಲೆ ಜಗಳ ಶುರುವಾಯ್ತು. ಆಸ್ತಿ ಪಾಲಾಯಿತು. ಈ ಮನೆ ಸಾಹೇಬರ ಪಾಲಿಗೆ ಬಂತು. ಮಗಳಿಗೋಸ್ಕರ ಈ ಕಂಪನಿ ಶುರು ಮಾಡಿದ್ರು. ಮಗಳು ಕ್ಯಾನ್ಸರ್‌ನಿಂದ ಹೋಗಿಬಿಟ್ರು. ಅದಕ್ಕೆ ಅವರು, ಅವರ ಹೆಂಡತಿ ಅಮೇರಿಕಾಕ್ಕೆ ಹೊರಟಿದ್ದಾರೆ.”
“ಸರಿ ಸರಿ” ಎಂದ ಭರತ್.
ನಂತರ ರಾಜಲಕ್ಷ್ಮಿಯನ್ನು ನರಸಿಂಹದೇವರ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ಪೂಜೆ ಮಾಡಿಸಿದ ನಂತರ ದೇವಸ್ಥಾನದ ಕಟ್ಟೆ ಹತ್ತಿರ ಕುಳಿತರು.
“ಅಮ್ಮಾ ನಾನು ನಿಮಗೊಂದು ವಿಚಾರ ಹೇಳಬೇಕು.”
“ಹೇಳಪ್ಪ.”
“ನಾನು ಮದುವೆಯಾಗ್ತಿದ್ದೇನೆ.”
“ತುಂಬಾ ಒಳ್ಳೆಯದು. ನಿಮಗಿನ್ನೂ ಚಿಕ್ಕ ವಯಸ್ಸು ಎಷ್ಟು ದಿನ ಒಂಟಿಯಾಗಿರಲು ಸಾಧ್ಯ?”
“ಈಗಾಗಲೇ ನಾನು ಒಂಟಿಯಾಗಿದ್ದೇನೆ.”
“ಯಾಕೆ ಹಾಗಂತೀರಾ?”
“ನನ್ನ ಮಗಳಿಗೆ ಈಗ 16 ವರ್ಷ. ಮಗನಿಗೆ 11 ವರ್ಷ. ಅವರಿಗೆ ಅವರ ಪ್ರಪಂಚಾನೇ ಮುಖ್ಯ. ತಂದೆ ಹಣ ಕೊಡುವ ಯಂತ್ರ. ಅವರು ಯಾರ ಮಾತೂ ಕೇಳಲ್ಲ. ರಜನಿ ಇದ್ದಾಗ ಹೇಗೋ ಮ್ಯಾನೇಜ್ ಮಾಡ್ತಿದ್ದಳು. ಮಗಳು 2 ವರ್ಷವಾದ ಮೇಲೆ ಬೇರೆ ಹೋಗ್ತಾಳೆ. ಮಗ ಬೋರ್ಡಿಂಗ್ ಶಾಲೆಯಲ್ಲಿದ್ದಾನೆ.”
“ನಿಮ್ಮ ತಂದೆ-ತಾಯಿ?”
“ಅವರು ನನ್ನ ಮದುವೆಯ ನಂತರ ವಾಪಸ್ಸಾಗ್ತಾರೆ.”
“ನೀವು ಮದುವೆಯಾಗ್ತಿರುವ ಹುಡುಗಿ ಯಾರು?”
“ಹುಡುಗಿ ಅಲ್ಲ. ನನಗಿಂತ 3 ವರ್ಷ ಚಿಕ್ಕವಳು. ಇಂದಿರಾನಾಡಿಗ್ ಅಂತ ಹೆಸರು. ಅವಳೂ ಇಂಜಿನಿಯರ್. ಕನ್ನಡದವಳು. ವಿಧವೆ ಮಕ್ಕಳಿಲ್ಲ…..”
“ಒಳ್ಳೆಯ ಕೆಲಸ ಮಾಡ್ತಿದ್ದೀರ ಒಬ್ಬ ವಿಧವೆಗೆ ಬಾಳು ಕೊಡ್ತಿದ್ದೀರಲ್ಲಾ?”
“ಅಮ್ಮ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು. ರಜನಿ ಸ್ಥಾನ ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಂಟಿತನ ನನ್ನನ್ನು ತುಂಬಾ ಕಾಡುತ್ತಿದೆ. ಇಂದಿರಾ ಕೆಲವು ವಿಚಾರಗಳಲ್ಲಿ ರಜನಿಯನ್ನು ಹೋಲುತ್ತಾಳೆ….”
“ಆದಷ್ಟು ಬೇಗ ಮದುವೆಯಾಗಿ ಒಳ್ಳೆಯದಾಗಲಿ.”
“ಇನ್ನೊಂದು ವಿಚಾರ. ನಮ್ಮ ಮನೆಯಲ್ಲಿ ರಜನಿ ಸಂಬಳದ ಹಣ ಅವಳೇ ಖರ್ಚು ಮಾಡಿಕೊಳ್ತಿದ್ದಳು. ಅವಳ ಹಣ ನಾವ್ಯಾರೂ ಕೇಳ್ತಿರಲಿಲ್ಲ. ಅವಳು ನಿಮ್ಮಿಬ್ಬರಿಗೆ ಕೊಡಬೇಕೂಂತ ಪ್ರತಿತಿಂಗಳು ಹಣ ತೆಗೆದಿಡ್ತಿದ್ದಳು. ಮಾವ ಹೋದ ಮೇಲೆ ಆ ಹಣ ನಿಮಗೆ ಸೇರುವಂತೆ ಮಾಡಿದ್ದಳು. ನೀವು ಕೆಲವು ಪೇಪರ್‌ಗಳಿಗೆ ಸೈನ್ ಮಾಡಿಕೊಡಿ. ನಿಮಗೆ ಆ ಹಣ ಬರುವಂತೆ ಮಾಡ್ತೀನಿ. ಜೊತೆಗೆ ನಾನು-ಇಂದಿರಾ ಇಂಡಿಯಾಕ್ಕೆ ರ‍್ತೀವಿ. ಆಗ ನಿಮಗೆ ಚೆಕ್ ತಂದುಕೊಡ್ತೀನಿ.”
“ನನಗ್ಯಾಕಪ್ಪ ಹಣ?”
“ನೀವು ಹಾಗನ್ನಬೇಡಿ. ಹಣ ಇದ್ದರೆ ಬೆಲೆ. ಈ ವಿಚಾರ ಈಗಲೇ ಯಾರಿಗೂ ಹೇಳಬೇಡಿ.”
ರಾಜಲಕ್ಷ್ಮಿ ಒಪ್ಪಿದರು.
ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41513
-ಸಿ.ಎನ್. ಮುಕ್ತಾ
ಆಧುನಿಕ ವಿಚಾರಧಾರೆಯನ್ನು ಅಳವಡಿಸಿಕೊಂಡ ಕಾದಂಬರಿಯು ಸೊಗಸಾಗಿ ಮೂಡಿ ಬರುತ್ತಿದೆ.
ಹೊಸ ಹೊಸ ತಿರುವುಗಳಿಂದ ಧಾರವಾಹಿ ಕುತೂಹಲವನ್ನು ಇಮ್ಮಡಿಗೊಳಿಸುತ್ತಾ ಸಾಗಿದೆ.
ಧಾರವಾಹಿ ಕುತೂಹಲ ದಿಂದ ಓದಿಸಿಕೊಂಡು ಹೋಗುತ್ತಿದೆ ಮೇಡಂ..
ಸೊಗಸಾಗಿ ಸಾಗುತ್ತಿದೆ ಕಥೆ. ಇವತ್ತಿನ ಕಾಲಕ್ಕೆ ಹೊಂದಿಕೆ ಆಗುವಂತಿದೆ.
ಅಭಿಪ್ರಾಯ ತಿಳಿಸಿರುವ ಓದುಗರೆಲ್ಲರಿಗೂ ನಾನು ಆಭಾರಿ. ಧನ್ಯವಾದಗಳು
ಸ್ವಂತ ಮಗನು ಇಳಿವಯಸ್ಸಿನ ಅಮ್ಮನಿಗೆ ಸಹಾಯ ಮಾಡದಿದ್ದರೂ, ಅಳಿಯ ಸಹಾಯಕ್ಕೆ ಬಂದಿರುವುದು ಮನಸ್ಸಿಗೆ ಹಿತವೆನಿಸಿತು. ಕಥಾಹಂದರ ಕುತೂಹಲಕಾರಿಯಾಗಿದೆ.. ಧನ್ಯವಾದಗಳು ಮುಕ್ತಾ ಮೇಡಂ.