ವಿಭಿನ್ನ ಬಣ್ಣದ ಕೈಕೇಯಿ

Share Button


ನಮ್ಮ ಬದುಕಿನ ದಾರಿದೀಪಗಳಾದ ರಾಮಾಯಣ,ಮಹಾಭಾರತ ಮೊದಲಾದ ಪುರಾಣಗಳಲ್ಲಿ ಸಾಮಾನ್ಯವಾಗಿ ಶಿಷ್ಟರು ಹಾಗೂ ದುಷ್ಟರು ಎಂಬ ಎರಡು ವಿಧದ ವ್ಯಕ್ತಿತ್ವ ಉಳ್ಳವರನ್ನು ಕಾಣುತ್ತೇವೆ. ಶಿಷ್ಟರು ಎನಿಸಿಕೊಳ್ಳುವಂತವರು ಆರಂಭದಿಂದ ಅಂತ್ಯದವರೆಗೂ ಮೌಲ್ಯಾಧಾರಿತ ಮಹಾಗುಣದಿಂದ ಕೂಡಿದ್ದರೆ ದುಷ್ಟರು ಹುಟ್ಟಿನಿಂದ ಸಾಯುವ ತನಕವೂ ಕೆಟ್ಟವರಾಗೇ ಬಾಳುವಂಥವರು. ಆದರೆ ಅಪರೂಪವಾಗಿ ಇವೆರಡಕ್ಕೂ ವಿಭಿನ್ನವಾದ ಇನ್ನೊಂದು ಬಣ್ಣದವರನ್ನೂ ಕಾಣುತ್ತೇವೆ. ಇಂತಹ ವಿರಳ ವ್ಯಕ್ತಿತ್ವ ಎಂದರೆ ದೈವವು ಯಾವದೋ ರೂಪದಲ್ಲಿ ಯಾವದೋ ಸಾಧನೆಗೆ ಒಳ್ಳೆಯವರನ್ನೂ ತನ್ನ ಕೈಗೊಂಬೆಯನ್ನಾಗಿ ಮಾಡಿ ತನ್ನ ಕಾರ್ಯವನ್ನು ಮಾಡಿದುದು ಎದ್ದು ಕಾಣುತ್ತದೆ.ಈ ಉದಾಹರಣೆಯಲ್ಲಿ ಹೇಳುವುದಾದರೆ ರಾಮಾಯಣದಲ್ಲಿ ರಾಮನ ವನವಾಸಕ್ಕೆ ಕಾರಣಳಾದ ಕೈಕೆ ಒಬ್ಬಳು.

ಕೇಕಯ ದೇಶದ ಅಶ್ವಪತಿ ರಾಜನ ಮಗಳು ಕೈಕೆ. ಸೂರ್ಯವಂಶದ ದಶರಥನನ್ನು ಮದುವೆಯಾಗುತ್ತಾಳೆ. ದಶರಥ ರಾಜನ ಹಿರಿರಾಣಿ ಕೌಸಲ್ಯೆ. ಎರಡನೆಯವಳು ಕೈಕೆ, ಮೂರನೆಯಾಕೆ ಸುಮಿತ್ರೆ. ಮೂವರು ಪತ್ನಿಯರಿದ್ದರೂ ಬಹುಕಾಲ ಮಕ್ಕಳಿಲ್ಲದ ದಶರಥ ಪುತ್ರಕಾಮೇಷ್ಟಿ ಯಾಗ ಮಾಡುವಾಗ ಯಜ್ಞಪುರುಷ ಪ್ರತ್ಯಕ್ಷನಾಗಿ ಸುವರ್ಣ ಪಾತ್ರೆಯಲ್ಲಿ ಪಾಯಸವನ್ನು ದಶರಥನಿಗೆ ಕೊಟ್ಟು “ಇದನ್ನು ನಿನ್ನ ಪತ್ನಿಯರಿಗೆ ಕೊಡು” ಎಂದು ಅದೃಶ್ಯನಾಗುವನು. ದಶರಥನು ತನ್ನ ಮೂವರು ಪತ್ನಿಯರಿಗೂ ಪಾಯಸವನ್ನು ಹಂಚಿ, ಮುಂದೆ ಗರ್ಭವತಿಯರಾದ ರಾಜಪತ್ನಿಯರಿಗೆ; ಕೌಸಲ್ಯೆಗೆ ರಾಮನೂ ಕೈಕೆಗೆ ಭರತನೂ ಸುಮಿತ್ರೆಗೆ ಲಕ್ಷ್ಮಣ- ಶತ್ರುಘ್ನರೂ ಜನಿಸುವರೆಂದು ರಾಮಾಯಣ ಹೇಳುತ್ತದೆ.

ದಶರಥನಿಗೆ ಕೈಕೆಯಲ್ಲಿ ಒಲವು ಹೆಚ್ಚು. ಕಾರಣ ಕೈಕೆ ಸುಂದರಿಯೂ ವೀರಪತ್ನಿಯೂ ಆಗಿ ವೀರನಾರಿಯೆಂದು ಪ್ರಸಿದ್ಧಳಾಗಿದ್ದಳು. ಪತಿಯಲ್ಲೂ ಒಲವು ತೋರಿಸುವ ಈಕೆ ತನ್ನ ಮಗನಂತೆ ಸವತಿಯರ ಮಕ್ಕಳಲ್ಲೂ ಅಕ್ಕರೆ ತೋರಿಸಿತ್ತಿದ್ದಳು. ಭೋಗ ವಿಲಾಸದಲ್ಲಿ ಮಗ್ನಳಾಗಿದ್ದ ಕೈಕೆಯು ದಶರಥನಿಗೆ ಮಿಕ್ಕ ರಾಣಿಯರಿಗಿಂತ ಹೆಚ್ಚು ಬೇಕಾದವಳಾಗಿ ತೋರುತ್ತಿದ್ದಳು. ಮುಂದೆ ರಾಮಾಭಿಷೇಕದ ಸುದ್ದಿಯನ್ನು ಸೇವಕಿ ಮಂಥರೆ ಬಂದು ತಿಳಿಸಿದಾಗ “ರಾಮನಿಗೆ ಪಟ್ಟಾಭಿಷೇಕದ ಸುದ್ದಿಯನ್ನು ತಂದಿರುವೆ.ನನಗೆ ರಾಮಾಭಿಷೇಕದ ವಾರ್ತೆಗಿಂತ ಪ್ರಿಯವಾದ ವಾರ್ತೆ ಬೇರಿಲ್ಲ. ಇಗೋ ತೆಗೆದುಕೋ” ಎಂದು ಉತ್ತಮ ಬೆಲೆಯ ಆಭರಣಗಳನ್ನು ಕೊಡಹೋಗುತ್ತಾಳೆ. ಮೇಲಿನ ಅಂಶದಿಂದ ಕೈಕೆಗೆ ರಾಮನಲ್ಲಿ ಎಷ್ಟು ಪ್ರೀತಿ -ವಾತ್ಸಲ್ಯ ಇತ್ತೆಂಬುದು ಅರಿವಾಗುತ್ತದೆ. ಇಂಥವಳು ಮಂಥರೆಯಂತಹ ದುರ್ಭೋದನೆ ಮಾತಿಗೆ ಸೋತುಹೋದಳಲ್ಲಾ ಎಂಬ ಖೇದ ರಾಮಾಯಣ ಓದುವ‌ ಪ್ರತಿಯೊಬ್ಬನಿಗೂ ಆಗುವುದು ಸಹಜ. ಮೊದ ಮೊದಲು ಮಂಥರೆಯ ಮಾತ್ಸರ್ಯ, ಬೋಧನೆ ಮಾತಿಗೆ ಸೊಪ್ಪು ಹಾಕದೆ ಇದ್ದ ಕೈಕೇಯಿಯನ್ನು ಮರುಳುಮಾಡಿ ಆಕೆಯ ಹೃದಯ ಕೆಡಿಸುತ್ತಾಳೆ ಮಂಥರೆ.

ಮೆಲ್ಲ ಮೆಲ್ಲಗೆ ತಲೆಗೆ ಹತ್ತಿದ ಕೂಡಲೇ ಕಠಿಣ ಹೃದಯದವಳಾದಳು ಕೈಕೆ. ದಶರಥನು ಎಷ್ಟೇ ಬೇಡಿಕೊಂಡರೂ ಒಪ್ಪದೆ ಭರತನಿಗೇ ಪಟ್ಟಾಭಿಷೇಕವಾಗಬೇಕೆಂದೂ ಶ್ರೀರಾಮನಿಗೆ ವನವಾಸವಾ್ಲೆಂದೂ ಹಠಹಿಡಿದಳು. ಈ ಹಠಮಾರಿ ಸ್ವಭಾವ ನಿನಗೆ ನಿನ್ನ ತಾಯಿಯಿಂದ ಬಂತೆಂದು ದಶರಥ ಕ್ರೋಧದಿಂದ ಹೇಳುತ್ತಾನೆ. ‘ತಾಯಿಯಂತೆ ಮಗಳು’ ಎಂಬ ಗಾದೆ ಇಲ್ಲಿ
ಸ್ಮರಿಸಬೇಕಾಗುತ್ತದೆ. ಮಂಥರೆಯ ಮಾತ್ಸರ್ಯದ ನುಡಿಗಳಿಂದ ಪ್ರಭಾವಿತಳಾದ ಕೈಕೆ, ದಶರಥ ಹಿಂದೆ ತನಗೆ ನೀಡಿದ್ದ ಎರಡು ವರಗಳನ್ನು ನೆನಪಿಸಿ ಪೂರೈಸುವಂತೆ ಕೇಳಿಕೊಳ್ಳುತ್ತಾಳೆ.

ಹಿಂದೊಮ್ಮೆ ಶಂಭನೆಂಬ ರಾಕ್ಷಸನು ಇಂದ್ರನನ್ನು ತುಂಬಾ ಪೀಡಿಸಲು ಮಹೇಂದ್ರನ ಸಹಾಯಕ್ಕೆ ದಶರಥನು ಹೋಗಿದ್ದನು. ಆ ರಥಕ್ಕೆ ಸಾರಥಿಯಾಗಿ ವೀರನಾರಿಯಾದ ಕೈಕೆಯನ್ನು ಕರೆದೊಯ್ದನು ದಶರಥ. ಅಲ್ಲಿ ಶಂಭನ ಬಾಣದಿಂದ ಎಚ್ಚರ ತಪ್ಪಿದ ಅವನ ರಥವನ್ನು ಕಂಗೆಡದೆ ಸುರಕ್ಷಿತ ಸ್ಥಳಕ್ಕೊಯ್ದು ಅವನಿಗೆ ಶುಶ್ರೂಷೆ ಮಾಡಿದ್ದಳು. ಅವಳ ಸಾಹಸಕ್ಕೆ ಮೆಚ್ಚಿದ ದಶರಥ “ಎರಡು ವಿಶೇಷ ಬೇಡಿಕೆಗಳನ್ನು ಕೇಳಿಕೋ ಕರುಣಿಸುವೆ” ಎಂದಿದ್ದ. “ಅದಕ್ಕೀಗ ಸಮಯವಲ್ಲ.ಮುಂದೆ ಸಮಯ ಬಂದಾಗ ಬೇಡಿಕೊಳ್ಳುವೆ” ಎಂದಿದ್ದಳಾಗ. ಆ ಅವಕಾಶವನ್ನು ಈಗ ಉಪಯೋಗಿಸಿಕೊಂಡು ಅನರ್ಥ ಪರಂಪರೆಗೆ ಕಾರಣಳಾಗುತ್ತಾಳೆ.

ಇಲ್ಲಿ ಗಮನಿಸಬೇಕಾದ ಅಂಶ ಕೈಕೆಯ ಪತಿವ್ರತಾ ಬುದ್ಧಿ. ಸ್ವಭಾವತಃ ಆಕೆ ದುಷ್ಟೆಯಾಗಿದ್ದರೆ ದಶರಥ ಎರಡು ಬೇಡಿಕೆಗಳನ್ನು ಈಡೇರಿಸಿಕೋ ಎಂದಾಗಲೇ ತನ್ನ ದುಷ್ಟ ಕಾಮನೆಗಳನ್ನು ಮುಂದಿಡ ಬಹುದಿತ್ತು. ನಿಜವಾದ ಪತ್ನಿ ತನ್ನ ಪತಿ ತೊಂದರೆಯಲ್ಲಿದ್ದಾಗ ಆತ ಆ ಕಷ್ಟದಿಂದ ಪಾರಾಗಿ ಮೊದಲಿನಂತಾಗಬೇಕೆಂದು ಬಯಸುವಳೇ ಅಲ್ಲದೆ ತನ್ನ ಸುಖಕ್ಕೆ ಬೆಲೆಕೊಡುವುದಿಲ್ಲ. ಬಹುಶಃ ಕೈಕೆಯೂ ಅದನ್ನೇ ಲೆಕ್ಕ ಹಾಕಿದಗದಿರಬೇಕು. ಪತಿ ಯುದ್ಧದಲ್ಲಿ ಗೆಲುವು ಸಾಧಿಸುವುದೇ ಅವಳ ಯೋಚನೆಯೂ ಆಗಿತ್ತು.

ಆದರೆ ಮುಂದೆ ಸೇವಕಿಯ ಮಾತ್ಸರ್ಯದ ಮಾತುಗಳನ್ನು ಆಲಿಸುತ್ತಾ ಅದಕ್ಕೆ ಸೋತು ಹೋದಳು ಕೈಕೆ. ಕುಲೀನ ಸ್ತ್ರೀಯರಿಗೆ ಇಂತಹ ದುರ್ಬೋಧನೆ ಕೇಳುವ ಹಿತ್ತಾಳೆ ಕಿವಿ ಇರಬಾರದು ಎಂಬ ನೀತಿ ರಾಮಾಯಣ ತಿಳಿಸುತ್ತದೆ. ಮುಂದೆ ರಾಮನು ವನವಾಸಕ್ಕೆ ತೆರಳಿ ,ದಶರಥ ಮರಣವನ್ನಪ್ಪಿ ಕಾಲ ಸರಿದು ಭರತ ಎಚ್ಚರಿಸಿದಾಗ ಕೈಕೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಆಗಿ ಬಿಡುತ್ತದೆ. ಆಗ ಸಮಯ ಮೀರಿದುದರಿಂದ ತನ್ನ ಕಳಂಕವನ್ನು ತಿದ್ದಿಕೊಳ್ಳುವ ಅವಕಾಶ ಸರಿದು ಹೋಗಿರುತ್ತದೆ. ಸಣ್ಣ ವಿಷಯಕ್ಕೇ ಗಂಡನಲ್ಲಿ ಚಂಡಿ ಹಿಡಿಯುವ ನಾರಿಯರಿಗೆ ಈ ಕತೆ ಹಲವಾರು ಪಾಠ ಹೇಳುತ್ತದೆ. ಅಲ್ಲದೆ ಸಂಗ ದೋಷದಿಂದ ಒಳ್ಳೆಯವರು ಕೆಟ್ಟವರಾಗುವುದಕ್ಕೂ ಸಾಧ್ಯ ಎಂಬ ಅಂಶವನ್ನು ಕೈಕೆ ತನ್ನ ವಿಭಿನ್ನ ಗುಣದಿಂದ ತಿಳಿಸುತ್ತಾಳೆ.


-ವಿಜಯಾಸುಬ್ರಹ್ಮಣ್ಯ ಕುಂಬಳೆ.

7 Responses

  1. MANJURAJ says:

    ಕೈಕೇಯಿಯನ್ನು ಕನಿಕರಿಸಬೇಕೆಂಬ
    ಆ ಪಾತ್ರದ ತುಮುಲಗಳನು ಅನಾವರಣ
    ಮಾಡಿದ ಚೆಂದದ ಲೇಖನ

    ಇಷ್ಟವಾಯಿತು, ವಂದನೆಗಳು

  2. ಪೌರಾಣಿಕ ಕಥೆಗಳನ್ನು ಎಷ್ಟು ಸಾರಿ ಓದಿದರೂ..
    ಬೇಸರವೆಂಬುದಿಲ್ಲ..ಅದರಲ್ಲೂ ಈ ಸಾರಿಯ ಕೈಕೆಯಿ ಪಾತ್ರ ದ ಅನಾವರಣ ಸೊಗಸಾಗಿ ಬಂದಿದೆ ವಿಜಯಾ ಮೇಡಂ

  3. ವಿಜಯಾಸುಬ್ರಹ್ಮಣ್ಯ. ಕುಂಬಳೆ.ಳೆ says:

    ಧನ್ಯವಾದಗಳು. ಸುರಹೊನ್ನೆ ಹೇಮಮಾಲಾ. ಹಾಗೂ ಓದಿ ನೋಡಿ ಸಹಕರಿಸಿದ ಓದುಗ ಬಳಗಕ್ಕೆ.

  4. ನಯನ ಬಜಕೂಡ್ಲು says:

    Nice

  5. ಪದ್ಮಾ ಆನಂದ್ says:

    ಎಲ್ಲರಿಗೂ ತಿಳಿದಿರುವ ರಾಮಾಯಣದ ಕಥೆಯೇ ಆದರೂ ಆಸಕ್ತಿಭರಿತ ನಿರೂಪಣೆಯಿಂದ ಮನಮುಟ್ಟುವುದಲ್ಲದೆ ಇಂದೀಗೂ ಅನ್ವಯವಾಗುವ ಸಂದೇಶವನ್ನು ಸರಳೀಕರಿಸಿ ಹೇಳಿರುವುದು ಉತ್ತಮವಾಗಿ ಮೂಡಿ ಬಂದಿದೆ.

  6. ಶಂಕರಿ ಶರ್ಮ says:

    ಸ್ವಭಾವತ: ಒಳ್ಳೆಯವಳಾಗಿದ್ದ ಕೈಕೆಯು ದಾಸಿ ಮಾತಿನಿಂದ ದುಷ್ಟ, ಕ್ರೂರ ನಡವಳಿಕೆಯನ್ನು ತೋರುವುದು ಪ್ರಸ್ತುತ ಕಾಲಘಟ್ಟಕ್ಕೂ ಅನ್ವಯಿಸುತ್ತದೆ. ಇನ್ನೊಬ್ಬರ ಮಾತನ್ನು ಕೇಳಿದರೆ ಅಧೋಗತಿಯಂತೂ ಖಚಿತ! ಸ್ವಂತಿಕೆಯನ್ನು ಎಂದಿಗೂ ಬಿಡಬಾರದೆಂಬ ಎಚ್ಚರಿಕೆಯೊಂದಿಗೆ ಇನ್ನಷ್ಟು ಉತ್ತಮ ಸಂದೇಶಗಳನ್ನು ಹೊತ್ತ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: