ಕಾದಂಬರಿ : ತಾಯಿ – ಪುಟ 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
“ಯಾಕೋ ಹೊತ್ತೇ ಹೋಗ್ತಿಲ್ಲ ಸುನಂದಮ್ಮ. ವಾಪಸ್ಸು ನಂಜನಗೂಡಿಗೆ ಹೋಗೋಣ ಅನ್ನಿಸ್ತಿದೆ.”
“ಅಮ್ಮ ಬನ್ನಿ ಊಟ ಮಾಡಿ. ಆಮೇಲೆ ಮಾತಾಡೋಣ.”
ಊಟದ ನಂತರ ಸುನಂದಾ ಮನೆಗೆ ಹೋಗಲಿಲ್ಲ.
“ಊಟ ಮಾಡಿ ಸುನಂದಾ……..”
“ಬೇಡ 1/2 ಗಂಟೆ ಇದ್ದು ನನ್ನ ಫ್ರೆಂಡ್ ಮನೆಗೆ ಹೋಗ್ತೀನಿ. ಅವಳ ಮೊಮ್ಮಗನ ನಾಮಕರಣ ಇವತ್ತು…..”
“ಓ…… ಸರಿಹಾಗಾದ್ರೆ ಏನಾದ್ರೂ ಕುಡಿಯಬಾರದಿತ್ತಾ?”
“ದೇವಿ ಜೊತೆ ಟೀ ಕುಡಿದೆನಲ್ಲಾ………..?”
“ಸುನಂದಮ್ಮ ನೀವು ಎಷ್ಟು ಮನೆ ಕೆಲಸ ಮಾಡ್ತೀರಾ?”
“ಇದೊಂದೇ ಮನೆ. ನಿಮ್ಮ ಸೊಸೆ 15,000 ಕೊಡ್ತಾರೆ. ರಾತ್ರಿ ನಾನು ಐದು ಮನೆಗಳಿಗೆ ಚಪಾತಿ, ಪಲ್ಯ, ಮೊಸರನ್ನ ಕಳಿಸ್ತೀನಿ.”
“ಹೌದಾ?”
“ನನಗೆ ಇಬ್ಬರು ಮಕ್ಕಳು. ನನ್ನ ಗಂಡ ಆಟೋ ಓಡಿಸ್ತಾರೆ. ಮೊದಲು ನಾವು ನಮ್ಮಕ್ಕ ಮನೆಯಲ್ಲಿದ್ದೆವು. ನಮ್ಮತ್ತೇನೂ ನಮ್ಮ ಜೊತೆ ಚೆನ್ನಾಗಿದ್ರು. ನಮ್ಮನೆಯವರ ಅಣ್ಣ ಅಡಿಗೆಗೆ ಹೋಗ್ತಾರೆ. ಅಣ್ಣ-ತಮ್ಮ ಸೇರಿ ಕೊನೆಯವನನ್ನು ಇಂಜಿನಿಯರ್ ಮಾಡಿದ್ರು. ಅವನು ಇಂಜಿನಿಯರ್‌ನ ಮದುವೆಯಾದ. ಆ ದಿನದಿಂದ ನಮ್ಮತ್ತೆ ನಮ್ಮ ಎರಡು ಕುಟುಂಬಗಳನ್ನು ತುಂಬಾ ಹೀನಾಯವಾಗಿ ಕಾಣಲು ಶುರುಮಾಡಿದ್ರು. ಸರಿ ಮನೆಯಲ್ಲಿ ಜಗಳವಾಯ್ತು. ಚಿಕ್ಕವನು ಬೇರೆ ಮನೆ ಮಾಡಿ ತಾಯೀನ್ನ ಹೆಂಡತೀನ್ನ ಕರ‍್ಕೊಂಡು ಹೋದ.”
“ನಿಮ್ಮ ಭಾವ?”
“ಅವರ ಹೆಂಡತಿ ಉಡುಪಿಯವರು. ಆಕೆ ತಂದೆಯದೇ ಹೊಡ್ಡ ಅಡಿಗೆ ಪಾರ್ಟಿ ಇದೆಯಂತೆ. ಅಲ್ಲಿಗೇ ಗಂಡ-ಮಕ್ಕಳ ಜೊತೆ ಹೊರಟು ಹೋದರು.”
“ಮೈಸೂರು ನಿಮಗೆ ಒಗ್ಗಿದೆ ಅಲ್ವಾ?”
“ಯಾವ ಊರೇ ಆಗಲಿ ನಾವು ಒಗ್ಗಿಸಿಕೊಳ್ಳಬೇಕು. ನೀವೀಗ ನಂಜನಗೂಡಿಗೆ ಹೋಗ್ತೀರಾಂತ ಇಟ್ಟುಕೊಳ್ಳಿ. ನಿಮ್ಮ ಮಗ ನಿಮ್ಮನ್ನು ನೋಡಕ್ಕೇ ಬರದಿದ್ರೆ ಏನು ಮಾಡ್ತೀರಾ?”
“ಆದರೆ……….”
“ಇಲ್ಲಿ ಹತ್ತಿರ ಒಂದು ಗಣೇಶನ ದೇವಸ್ಥಾನವಿದೆ. ಸಾಯಂಕಾಲ ಅಲ್ಲಿಗೆ ಕರೆದುಕೊಂಡು ಹೋಗಿ ೪-೫ ಜನರ ಪರಿಚಯ ಮಾಡಿಸ್ತೀನಿ. ನಿಮಗೆ ಹೊತ್ತು ಹೋಗುತ್ತದೆ.”
“ಅಷ್ಟು ಮಾಡಿ ಪುಣ್ಯ ಕಟ್ಟುಕೊಳ್ಳಿ” ಎಂದರು ರಾಜಲಕ್ಷ್ಮಿ.
ಒಂದು ತಿಂಗಳು ಕಳೆಯುವಷ್ಟರಲ್ಲಿ ರಾಜಲಕ್ಷ್ಮಿಯ ಬೇಸರ ಮಾಯವಾಯಿತು. ಗಣೇಶನ ದೇವಸ್ಥಾನಕ್ಕೆ ಪ್ರತಿದಿನ ಹೋಗಲು ಆರಂಭಿಸಿದರು. ಅಲ್ಲಿಯ ಭಜನಾ ಮಂಡಳಿಗೆ ಸೇರಿದರು. ಆ ಮಂಡಳಿಯಲ್ಲಿ ಸುಭದ್ರಮ್ಮ, ಕಲ್ಯಾಣಮ್ಮ ಅವರಿಗೆ ಕೊಂಚ ಆಪ್ತರಾಗಿದ್ದರು. ಅವರ ಜೊತೆ ಒಂಟಿಕೊಪ್ಪಲ್ ದೇವಸ್ಥಾನ, ಕೋಟೆ ಆಂಜನೇಯನ ದೇವಸ್ಥಾನ, ನರಸಿಂಹದೇವರ ದೇವಸ್ಥಾನಕ್ಕೆ ಹೋಗಿ ಬರುವುದು ಅಭ್ಯಾಸ ಮಾಡಿಕೊಂಡರು.
ರಾಜಲಕ್ಷ್ಮಿಗೆ ಹಣದ ಕೊರತೆಯಿರಲಿಲ್ಲ. ಅವರು ಫೋನ್ ಮಾಡಿದರೆ ಸಾಕು ಭಾಸ್ಕರ ಬಂದು ಚೆಕ್ ತೆಗೆದುಕೊಂಡು ಹೋಗಿ ಹಣ ತಂದುಕೊಡುತ್ತಿದ್ದ.
ಭಜನಾ ಮಂಡಳಿಯವರ ಜೊತೆ ಒಮ್ಮೆ ಮೇಲುಕೋಟೆಗೆ ಹೋಗಿ ಬಂದರು. ಇನ್ನೊಮ್ಮೆ ಶ್ರೀರಂಗಪಟ್ಟಣ, ಕರಿಘಟ್ಟ, ನಿಮಿಷಾಂಬ ದೇವಾಲಯಗಳನ್ನು ನೋಡಿ ಬಂದರು. ನಂತರ ತಾವೇ ನಂಜನಗೂಡಿಗೆ ಪ್ರವಾಸ ಏರ್ಪಡಿಸಿ ಭಜನಾಮಂಡಳಿಯ ೧೫ ಜನರನ್ನು ಕರೆದೊಯ್ದು ರಾಮಾವಧಾನಿಗಳ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಕಾಲ ಸರಿದುಹೋಗುತ್ತಿತ್ತು. ಮಗ-ಸೊಸೆ ಮದುವೆ ವಾರ್ಷಿಕೋತ್ಸವಕ್ಕೆ, ಹುಟ್ಟಿದ ಹಬ್ಬಗಳಿಗೆ, ಮಕ್ಕಳ ಹುಟ್ಟಿದ ಹಬ್ಬಗಳಿಗೆ ಧಾರಾಳವಾಗಿ ಹಣದ ಉಡುಗೊರೆ ಕೊಡುತ್ತಿದ್ದುದರಿಂದ, ಅವರುಗಳೂ ಕೊಂಚ ಮಾತು ಕಥೆಮಾಡುವ ಮನಸ್ಸು ಮಾಡಿದ್ದರು.
ಒಂದು ಭಾನುವಾರ ಎಲ್ಲರೂ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ರಾಜಲಕ್ಷ್ಮಿ ಕೇಳಿದರು. “ರಾಹುಲ್, ಒಂಟಿಕೊಪ್ಪಲ್‌ನಲ್ಲಿರುವ ನಮ್ಮ ಮನೆ ನೋಡಬೇಕು ಅನ್ನಿಸ್ತಿದೆ. ಒಂದು ಸಲ ಕರೆದುಕೊಂಡು ಹೋಗ್ತೀಯಾ?”
ರಾಹುಲ್ ತಕ್ಷಣ ಉತ್ತರಿಸಲಿಲ್ಲ. ಅವರ ಸೂಕ್ಷ್ಮ ಕಣ್ಣುಗಳು ಗಮನಿಸಿದವು.
ಆದಿನ ಮೈತ್ರಿ ಮಕ್ಕಳ ಜೊತೆ ಸಿನಿಮಾಕ್ಕೆ ಹೊರಟಿದ್ದಳು.
ತಾವಿಬ್ಬರೇ ಉಳಿದಾಗ ರಾಹುಲ್ ಹೇಳಿದ. “ಅಮ್ಮ ನಾನು ಈ ಮನೆ ಕೊಂಡುಕೊಂಡಿದ್ದು ನಿನಗೆ ನೆನಪಿದೆಯಾ?”
“ಇಲ್ಲಪ್ಪ ನನಗೇನು ಗೊತ್ತಿಲ್ಲ. ನೀವು ಗೃಹಪ್ರವೇಶ ಮಾಡಲಿಲ್ಲ ಅಲ್ವಾ?”
“ಇಲ್ಲಮ್ಮ. ಅಪ್ಪ ಹೋದವರ್ಷ ಏನೂ ಮಾಡೋದು ಬೇಡಾಂತ ಸುಮ್ಮನಾಗಿಬಿಟ್ಟೆವು. ಮನೆ ಕೊಂಡುಕೊಳ್ಳಲು ದುಡ್ಡು ಸಾಕಾಗಲಿಲ್ಲಾಂತ ಒಂಟಿಕೊಪ್ಪಲ್ ಮನೆ ಮಾರಿಬಿಟ್ಟೆ.”
“ಮನೆ ಮಾರಿದೆಯಾ? ನನಗೆ ಹೇಳಲೇ ಇಲ್ಲ.”
“ಅದು ಪಿತ್ರಾರ್ಜಿತ ಆಸ್ತಿ ಅಲ್ವೇನಮ್ಮ? ಅಪ್ಪ ನನ್ನ ಹೆಸರಿಗೆ ಬರೆದಿದ್ರು…. ನಿನ್ನನ್ನು ಕೇಳುವ ಅವಶ್ಯಕತೆ ಇಲ್ಲ ಅನ್ನಿಸಿತು. ಅದೂ ಅಲ್ಲದೆ ನೀನು ಅಪ್ಪ ಹೋದ ದುಃಖದಲ್ಲಿದ್ದೆ. ನಿನಗೆ ತೊಂದರೆಕೊಡೋದು ಬೇಡಾಂತ ಹೇಳಲಿಲ್ಲ.”
ರಾಜಲಕ್ಷ್ಮಿ ಮಾತಾಡಲಿಲ್ಲ.
“ಅಮ್ಮಾ…….”
“ನಿಮ್ಮಪ್ಪ ಇಲ್ಲ ನಿಜ. ಅಮ್ಮಾನೂ ನಿನ್ನ ಪಾಲಿಗೆ ಇಲ್ಲವಾಗಿಬಿಟ್ಟಳಾ? ನಿನಗೆ ಸೇರಿದ ಮನೆ ನೀಣು ಮಾರುವುದಕ್ಕೆ ನಾನು ಅಡ್ಡಿ ರ‍್ತಿದ್ನಾ?”
“ತಪ್ಪು ತಿಳಿಯಬೇಡಮ್ಮ……..”
“ನಾನು ಮಾತಾಡದಿದ್ದರೆ ಒಳ್ಳೆಯದು ಅನ್ನಿಸತ್ತೆ” ಎಂದಷ್ಟೇ ಹೇಳಿದರು ರಾಜಲಕ್ಷ್ಮಿ.
ಅಂದಿನಿಂದ ರಾಜಲಕ್ಷ್ಮಿ ಮೌನಕ್ಕೆ ಶರಣಾದರು. ಹಾಗೂ ಹೀಗೂ ರಾಜಲಕ್ಷ್ಮಿ ಮೈಸೂರಿಗೆ ಬಂದು ಒಂದು ವರ್ಷ ಕಳೆಯಿತು. ಒಂದು ಭಾನುವಾರ ಎಲ್ಲರೂ ತಿಂಡಿ ತಿನ್ನುತ್ತಾ ಕುಳಿತಿರುವಾಗ ರಾಹುಲ್ ಹೇಳಿದ – “ನಿಮ್ಮೆಲ್ಲರಿಗೂ ಒಂದು ಸರ್ ಪ್ರೈಸ್ ನ್ಯೂಸ್ ಇದೆ.”
“ಏನದು? ಬೇಗ ಹೇಳಿ” ಮೈತ್ರಿ ಒತ್ತಾಯ ಮಾಡಿದಳು.
“ನನಗೆ ಬೆಂಗಳೂರಿನ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದೆ.”
“ಹೌದಾ? ಕಂಗ್ರಾಟ್ಸ್.”
“ಪಪ್ಪ, ನಮ್ಮ ಸ್ಕೂಲು?”
“ಬೆಂಗಳೂರಿನಲ್ಲೇ ಸೇರಿಸ್ತೀನಿ. ನನ್ನ ಫ್ರೆಂಡ್ ದಿನಕರ್ ವಿಲಿಯಂ ಇದಾನಲ್ಲ. ಅವನು ಎಲ್ಲಾ ಅನುಕೂಲ ಮಾಡಿಕೊಡ್ತಾನೆ.”
“ನನಗೆ ಬೆಂಗಳೂರಿಗೆ ವರ್ಗ ಸಿಗೋದು ಕಷ್ಟವಾಗಲಾರದು.”
ರಾಹುಲ್, ಅವನ ಹೆಂಡತಿ ಮಕ್ಕಳು ಸಂಭ್ರಮಿಸುತ್ತಿರುವಾಗ ರಾಜಲಕ್ಷ್ಮಿ ಅಲ್ಲಿಂದ ಎದ್ದು ಹೋದರು. ಅವರ ಮನಸ್ಸು ಗೊಂದಲದಲ್ಲಿ ಮುಳುಗಿತ್ತು. “ಬೆಂಗಳೂರಿನ ಜೀವನ ಹೇಗಿರುವುದೋ?” ಎಂಬ ಭಯವೂ ಕಾಡುತ್ತಿತ್ತು.
ಎರಡು ತಿಂಗಳ ಒಳಗೆ ರಾಹುಲ್ ಬೆಂಗಳೂರಿಗೆ ಶಿಫ್ಟ್ ಆಗಲು ಸಕಲ ಸಿದ್ಧತೆ ಮಾಡಿಕೊಂಡ. ಗಂಡ-ಹೆಂಡತಿ ಹೋಗಿ ಮನೆ ನೋಡಿ ಬಂದರು. ಮಕ್ಕಳನ್ನು ಹೊಸ ಶಾಲೆಗೆ ಸೇರಿಸಿದರು.
ಒಂದು ಸಾಯಂಕಾಲ ಹೆಂಡತಿ, ಮಕ್ಕಳು ಇಲ್ಲದಿರುವ ಸಮಯ ನೋಡಿ ರಾಹುಲ್ ತಾಯಿಯ ಬಳಿ ಬಂದು ಕುಳಿತ.
“ಅಮ್ಮಾ ನಾವು ಈ ವಾರದಲ್ಲಿ ಬೆಂಗಳೂರಿಗೆ ಶಿಫ್ಟ್ ಆಗ್ತಿದ್ದೇವೆ. ಈಗ ನೋಡಿರುವುದು ಬಾಡಿಗೆ ಮನೆ ಅಷ್ಟು ದೊಡ್ಡದಾಗಿಲ್ಲ. ಆದ್ದರಿಂದ ನಿನ್ನನ್ನು ಈಗ ಕರೆದುಕೊಂಡು ಹೋಗಲು ಆಗ್ತಿಲ್ಲ.”
“ಪರವಾಗಿಲ್ಲ. ನಾನು ಇಲ್ಲೇ ಇರ್ತೀನಿ.”
“ನೀನು ಇಲ್ಲಿರಕ್ಕೆ ಆಗಲ್ಲಮ್ಮ. ನಾವು ಈ ಮನೆ ಮಾರ‍್ತಾ ಇದ್ದೇವೆ.”
“ಮನೆ ಮಾರ‍್ತಾ ಇದ್ದೀರಾ? ಯಾಕೆ?”
“ನಮಗೆ ಮೂರು ಬೆಡ್‌ರೂಂ ಮನೆ ಬೇಕು. ಅಪಾರ್ಟ್ಮೆಂಟ್‌ನಲ್ಲಿ ಮೂರು ಬೆಡ್‌ರೂಂ ಮನೆಯಂದ್ರೆ 40-45 ಸಾವಿರ ಬಾಡಿಗೆಯಾಗತ್ತೆ. ಬೆಂಗಳೂರಿನಲ್ಲಿ ಬಾಡಿಗೆ ಕೊಟ್ಟುಕೊಂಡು ಬದುಕೋದು ಕಷ್ಟ. ಅದಕ್ಕೆ ಈ ಮನೆ ಮಾರಿ, ಬೆಂಗಳೂರಿನಲ್ಲಿ ಮನೆ ಕೊಂಡುಕೊಳ್ಳಬೇಕೂಂತ ಇದ್ದೀವಿ.”
“ಸರಿಯಪ್ಪ. ನಾನು ನಂಜನಗೂಡಲ್ಲಿ ಇರ್ತೀನಿ. ಮುಂದೆ ಆ ದೇವರು ಮಾಡಿಸಿದಂತಾಗಲಿ.”
“ಅಮ್ಮ ನಂಜನಗೂಡಿಗೆ ಬೇಡ. ಜೆ.ಪಿ.ನಗರದಲ್ಲಿ ಒಂದು ಸಸ್ಯಾಹಾರಿಗಳ ವೃದ್ಧಾಶ್ರಮವಿದೆ. ಅವರ ಜೊತೆ ಮಾತಾಡಿದ್ದೇನೆ. ನೀನು ಅಲ್ಲಿ ಒಂದೆರಡು ತಿಂಗಳು ಇರು.”
“ವೃದ್ಧಾಶ್ರಮದಲ್ಲಾ?”
“ಹೌದಮ್ಮ. ಒಂದೆರಡು ತಿಂಗಳು ಅಲ್ಲಿರು. ನಿನಗೇ ಪ್ರತ್ಯೇಕ ಕೋಣೆ ಕೊಡ್ತಾರೆ. ನೀನು ಟಿ.ವಿ, ಇಟ್ಟುಕೊಳ್ಳಬಹುದು. 20-22 ಜನ ಇದ್ದಾರೆ. ಊಟ-ತಿಂಡಿ ಎಲ್ಲಾ ಚೆನ್ನಾಗಿದೆಯಂತೆ. ವಾರಕ್ಕೆರಡು ದಿನ ಡಾಕ್ಟರ್ ಬರ‍್ತಾರೆ. ನೀನು ಬ್ಯಾಂಕ್‌ಗೆ ಹೋಗಬೇಕಾದರೆ ಅವರೇ ಜೊತೆಮಾಡಿ ಕಳಿಸಿಕೊಡ್ತಾರೆ. ಪ್ರತಿ ಭಾನುವಾರ ಪ್ರವಚನಗಳಿರುತ್ತವೆ.”
“ತಿಂಗಳಿಗೆಷ್ಟು ಕೊಡಬೇಕು?”
“ಮೂವತ್ತು ಸಾವಿರ. ನಿನಗೆ ಪ್ರತ್ಯೇಕ ಕೋಣೆ ಕೊಟ್ಟಿರುವುದರಿಂದ ಈ ಏರ್ಪಾಡು. ನಿನ್ನ ಬಟ್ಟೆ ಒಗೆಯಲು ಆಯಗಳಿದ್ದಾರೆ…. ನೀನು ಯೋಚನೆ ಮಾಡಬೇಡ.”
ರಾಜಲಕ್ಷ್ಮಿ ಒಪ್ಪುವುದು ಅನಿವಾರ್ಯವಾಗಿತ್ತು.
ಜೆ.ಪಿ.ನಗರದ ಗೊಬ್ಬಳಿ ಮರ ದಾಟಿ 4 ಕಿ.ಮೀ. ಹೋದ ನಂತರ ಆ ವೃದ್ಧಾಶ್ರಮ ಸಿಗುತ್ತಿತ್ತು. ದೊಡ್ಡ ಕಾಂಪೌಂಡ್‌ನಲ್ಲಿ ನಾನಾ ರೀತಿಯ ಮರಗಳಿದ್ದವು.
ರಾಹುಲ್ ತಾಯಿಯನ್ನು ಬಿಟ್ಟು ಹೊರಟ. ಆಗಾಗ್ಗೆ ಫೋನ್ ಮಾಡುವುದಾಗಿ ತಿಳಿಸಿದ.
ಆ ಆಶ್ರಮದ ಮ್ಯಾನೇಜರ್ ಗೋಪಾಲರಾಯರು ಅವರಿಗೆ ಅವರ ಕೋಣೆ ತೋರಿಸಿದರು. ಕೋಣೆ ದೊಡ್ಡದಾಗಿತ್ತು. ಒಂದು ಮಂಚ ಇತ್ತು. ಬಟ್ಟೆ-ಬರೆ ಇಟ್ಟುಕೊಳ್ಳಲು ಮರದ ದೊಡ್ಡ ಬೀರುವಿತ್ತು. ಫ್ಯಾನ್ ಇತ್ತು. ಗಾಳಿ-ಬೆಳಕು ಚೆನ್ನಾಗಿತ್ತು.
ರಾಜಲಕ್ಷ್ಮಿ ಬಚ್ಚಲಿಗೆ ಹೋಗಿ ಬಂದ ಮಂಚದ ಮೇಲೆ ಕುಳಿತರು. ಅಷ್ಟು ಹೊತ್ತಿಗೆ ಗೋಪಾಲರಾಯರು ಟಿ.ವಿ. ತಂದು ಫಿಕ್ಸ್ ಮಾಡಿಸಿದರು. ‘ತಿಂಗಳಿಗೆ 350 ರೂ. ಕೊಡಬೇಕಮ್ಮ” ಎಂದರು.
ರಾಜಲಕ್ಷ್ಮಿ “ಆಗಲಿ ಕೊಡ್ತೀನಿ” ಎಂದರು.
ಒಂದು ಗಂಟೆಯ ಹೊತ್ತಿಗೆ 18-20 ರ ಅಂಚಿನಲ್ಲಿದ್ದ ನಗುಮುಖದ ಹುಡುಗಿಯೊಬ್ಬಳು ಊಟ ತಂದಳು.
“ಅಮ್ಮ ಊಟ ಬಿಸಿಯಾಗಿದೆ ಊಟ ಮಾಡಿ?”
“ನೀನು ಯಾರಮ್ಮ? ಇಲ್ಲಿ ಕೆಲಸ ಮಾಡ್ತೀಯ?”
“ನಮ್ಮ ತಾಯಿ ಗೌರಮ್ಮಾಂತ. ಅವರು ಇಲ್ಲಿ ಅಡಿಗೆ ಮಾಡ್ತಾರೆ. ನಾನು ಬಿ.ಎಸ್.ಸಿ ಓದ್ತಿದ್ದೀನಿ. ರಜ ಇರುವಾಗ ಬಂದು ಅಮ್ಮನಿಗೆ ಸಹಾಯ ಮಾಡ್ತೀನಿ.”
“ಈ ಆಶ್ರಮದಲ್ಲಿ ಎಷ್ಟು ಜನ ಇದ್ದಾರೆ?”
“12 ಜನ ಇದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ರೂಮುಗಳನ್ನು ಕೊಟ್ಟಿದ್ದಾರೆ.”
“ಹೌದಾ?”
“ಇಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಇಲ್ಲವಾ?”
“ಮೊದಲಿತ್ತು. ಕೆಲವರಿಗೆ ಆ ವ್ಯವಸ್ಥೆ ಇಷ್ಟವಾಗಲಿಲ್ಲ. ಎಲ್ಲರೂ ಶ್ರೀಮಂತರು. ಮಾತು ಕಡಿಮೆ.”
“ಇಲ್ಲಿ ಪೇಪರ್ ತರಿಸ್ತಾರಾ?”
“ಆಶ್ರಮದಿಂದ ತರಿಸಲ್ಲ. ಇಷ್ಟ ಇದ್ದವರು ಪೇಪರ್ ಮ್ಯಾಗಜೈನ್ ತರಿಸಿಕೊಳ್ತಾರೆ.”
“ನಾಳೆಯಿಂದ ನನಗೆ ಒಂದು ಲೋಕಲ್ ಪೇಪರ್ ಹಾಗೂ ಒಂದು ಕನ್ನಡ ಪೇಪರ್ ತಂದುಕೊಡು. ಯಾವ ಮ್ಯಾಗಜೈನ್ಸ್ ಬೇಕೂಂತ ಆಮೇಲೆ ಹೇಳ್ತೀನಿ.”
“ಆಗಲೀಮ್ಮ. ನೀವು ರಾತ್ರಿ ಊಟ ಮಾಡ್ತೀರೋ ಚಪಾತಿ ತಿನ್ನುತ್ತೀರೋ?”
“ಚಪಾತಿ ಸಾಕು.”
ಊಟ ರುಚಿಯಾಗಿತ್ತು. ಅನ್ನ, ಸಾರು, ಹುರುಳಿಕಾಯಿ ಪಲ್ಯ, ಮೊಸರು ಬಜ್ಜಿ.”
“ನಿನ್ನ ಹೆಸರೇ ಹೇಳಲಿಲ್ಲ?”
“ಚಿನ್ಮಯೀಂತ. ಎಲ್ಲರೂ ಚಿನ್ನು ಅಂತ ಕರೆಯುತ್ತಾರೆ. ನಮ್ಮ ಅಜ್ಜಿ ಮಾತ್ರ ಒಂದೊಂದು ಸಲ ಆಯಿ ಅಂತಾರೆ.”
“ಯಾಕೆ?”
“ಅವರೇ ಒಂದು ದಿನ ಹೇಳ್ತಾರೆ ಬಿಡಿ.”
ಊಟದ ನಂತರ ರಾಜಲಕ್ಷ್ಮಿ ಕೊಂಚಹೊತ್ತು ಟಿ.ವಿ. ನೋಡಿದರು. ನಂತರ ಮಂಚದ ಮೇಲೆ ಉರುಳಿದರು. ಹಳೆಯ ದಿನಗಳು ನೆನಪಾದವು. ಮಗ, ಸೊಸೆ, ಮೊಮ್ಮಕ್ಕಳಿದ್ದೂ ತಾನು ವೃದ್ಧಾಶ್ರಮದಲ್ಲಿ ಇರುವಂತಾಯಿತೆ? ರಾಹುಲ್ ಮೂರು ತಿಂಗಳ ನಂತರ ನನ್ನನ್ನು ಕರೆದೊಯ್ಯುತ್ತಾನಾ?” ಎಂಬ ಪ್ರಶ್ನೆ ಕಾಡಿತು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41377
-ಸಿ.ಎನ್. ಮುಕ್ತಾ
ತಾಯಿ ಕಾದಂಬರಿ.. ವಾಸ್ತವಿಕ ಬದುಕಿನ ಅನಾವರಣ ವಾಗುತ್ತಾ ಸಾಗುತ್ತಿದೆ..ಮೇಡಂ ..ಸುಂದರ ನಿರೂಪಣೆ..
ಇವತ್ತಿನ ಭಾಗ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ. ಇಂದಿನ ವಾಸ್ತವದ ಚಿತ್ರಣವಿದೆ.
ಪ್ರಸ್ತುತ ಸಮಾಜದಲ್ಲಿ ನಾವು ಕಾಣುವ ವಾಸ್ತವಿಕದ ಚಿತ್ರಣವು ಪುಟ 3ರಲ್ಲಿ ಮನಕಲಕುವಂತೆ ಮೂಡಿಬಂದಿದೆ…
ನವನವೀನ ಸಮಾಜದ ಬದಲಾವಣೆಗಳನ್ನು ಒಪ್ಪಿಕೊಂಡು ಸ್ವೀಕರಿಸಲೇಬೇಕಾದ ಅನಿವಾರ್ಯತೆಗೆ ಮನಸ್ಸು ಮುದುರುವಂತಾಯಿತು. ಆಪ್ತ ನಿರೂಪಣೆ ಮನಸ್ಸಿಗೆ ಹತ್ತಿರವಾಗಿದೆ.