ನೀ ನನಗಿದ್ದರೆ ನಾ ನಿನಗೆ : ಪುಟ – 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುವುದು ಸಾಧ್ಯ. ನಮ್ಮ ಶರೀರವನ್ನು ಆರೋಗ್ಯವಾಗಿಟ್ಟುಕೊಳ್ಳಲು ನಿತ್ಯ ಯೋಗಾಭ್ಯಾಸ, ಹಿತಮಿತವಾದ ಸಾತ್ವಿಕವಾದ ಆಹಾರ, ವಿಶ್ರಾಂತಿ ಎಲ್ಲವೂ ಅವಶ್ಯ. ಇಲ್ಲವಾದರೆ ಶರೀರ ರೋಗಗ್ರಸ್ತವಾಗುವುದು, ಕೆಲವು ವಿಜ್ಞಾನಿಗಳ ಪ್ರಕಾರ ಮನುಷ್ಯ ತನ್ನ ಮೆದುಳಿನ ಎರಡು ಪ್ರತಿಶತವನ್ನು ಮಾತ್ರ ಬಳಸುತ್ತಾನೆ, ತನ್ನ ಶ್ವಾಸಕೋಶಗಳ ಪ್ರತಿಶತ ಇಪ್ಪತ್ತರಷ್ಟು ಮಾತ್ರ ಬಳಸುತ್ತಾನೆ ಆದರೆ ತನ್ನ ಹೊಟ್ಟೆಯ ಪ್ರತಿಶತ ೨೦೦ ರಷ್ಟನ್ನು ಬಳಸುತ್ತಾನೆ. ಹೀಗಿರುವಾಗ ಅವನು ಆರೋಗ್ಯವಂತನಾಗಿರಲು ಹೇಗೆ ಸಾಧ್ಯ? ದೈಹಿಕವಾಗಿ ಗಟ್ಟಿಯಾಗಿದ್ದರೆ ಮಾತ್ರ ನಾವು ಏನನ್ನಾದರೂ ಮಾಡಲು ಸಾಧ್ಯ. ‘ಶರೀರಮಾಧ್ಯಂ ಖಲುಧರ್ಮ ಸಾಧನಮ್’ ಎಂದು ಉಕ್ತಿಯು ಮಹಾಕವಿ ಕಾಳಿದಾಸ ವಿರಚಿತ ಕುಮಾರಸಂಭವ ನಾಟಕದಲ್ಲಿ ಬರುತ್ತದೆ.. ಮನುಷ್ಯನ ಉದ್ಧಾರಕ್ಕೆ ಬೇಕಾಗುವ ಎಲ್ಲ ಸಾಧನೆಗಳನ್ನೂ ಈ ದೇಹದ ಮೂಲಕವೇ ಮಾಡಬೇಕು ಅಲ್ಲವೇ? ಹಾಗಾಗಿ ದೇಹ ಹೇಳುತ್ತದೆ ನೀ ನನಗಿದ್ದರೆ ನಾ ನಿನಗೆ.
ಮನಸ್ಸು ಹೇಳುತ್ತೆ – ನಿನ್ನ ಮನಸ್ಸಿನ ಕಿಡಕಿಗಳನ್ನು ತೆರೆದಿಡು, ಉತ್ತಮ ಆಲೋಚನೆಗಳು ವಿಶ್ವದೆಲ್ಲೆಡೆಯಿಂದ ನಿನ್ನೆಡೆಗೆ ಸಾಗಿ ಬರಲಿ. ರಾಗ ದ್ವೇಷಗಳನ್ನು ಬೇರು ಸಹಿತ ಕಿತ್ತೊಗೆ. ಎಲ್ಲರ ಬಗ್ಗೆ ಪ್ರೀತಿ, ಸ್ನೇಹ, ವಿಶ್ವಾಸ ಬೆಳೆಸಿಕೋ. ದಯೆ, ಕರುಣೆ ನಿನ್ನಲ್ಲಿ ಮನೆ ಮಾಡಲಿ. ಋಣಾತ್ಮಕ ಚಿಂತನೆಗಳನ್ನು ಹೊಡೆದೋಡಿಸು, ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೋ’ ನಿನ್ನ ಹೃದಯ ಕಮಲದಲ್ಲಿ ದೇವರು ನೆಲೆಯಾಗಲಿ. ಹಾಗಿದ್ದಲ್ಲಿ ಮಾತ್ರ ನಾನು ನಿನ್ನೊಂದಿಗಿರುವೆ. ಇಲ್ಲವಾದರೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ರ್ಯ ಗಳು ನಿನ್ನ ಬಾಳನ್ನೇ ನರಕ ಮಾಡಿ ಬಿಡುವೆವು. ಮನಸ್ಸು ಹೇಳುತ್ತದೆ ನೀ ನನಗಿದ್ದರೆ ನಾ ನಿನಗೆ .
ಹೀಗೆ ನಮ್ಮ ಶರೀರ ಹಾಗೂ ಮನಸ್ಸನ್ನು ಸ್ವಸ್ಥವಾಗಿಡುವ ಸಾಧನವೇ ಯೋಗ. ದೇಹ ಮತ್ತು ಮನಸ್ಸನ್ನು, ಚಿಂತನೆ ಮತ್ತು ಕ್ರಿಯೆಯನ್ನು ಒಂದುಗೂಡಿಸುವುದೇ ಯೋಗ. ನಾವು ನಮ್ಮ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗಾಭ್ಯಾಸ ಮಾಡಿದಾಗ ಮಾತ್ರ ಆರೋಗ್ಯವಂತರಾಗಲು ಸಾಧ್ಯ. ಇಲ್ಲಿಯೂ ‘ನೀ ನನಗಿದ್ದರೆ ನಾ ನಿನಗೆ’ ಎಂಬ ನುಡಿಗಳು ಪ್ರತಿಧ್ವನಿಸುವುವು.
ಇನ್ನು ಮಾನವ ಮತ್ತು ಅವನ ಪರಿಸರದ ಮಧ್ಯೆ ಇರುವ ಅವಿನಾಭಾವ ಸಂಬಂಧದ ಬಗ್ಗೆ ಕೆಲವು ಚಿಂತನೆಗಳನ್ನು ನಡೆಸೋಣ – ಪ್ರಕೃತಿಯು ಜೀವಿಗಳ ಅವಶ್ಯಕತೆಗಳಿಗನುಗುಣವಾಗಿ ಎಲ್ಲಾ ಬಗೆಯ ಮೂಲ ಸೌರ್ಯಗಳನ್ನು ದಯಪಾಲಿಸುವಳು. ಉಸಿರಾಡಲು ಗಾಳಿ, ಕುಡಿಯಲು ನೀರು, ಉಣ್ಣಲು ಅನ್ನ ಇತ್ಯಾದಿ. ನಾಗರೀಕತೆ ಬೆಳೆದ ಹಾಗೆ ಇನ್ನು ಹಲವು ಅವಶ್ಯಕತೆಗಳು ಉಂಟಾದವು – ಉಡಲು ಬಟ್ಟೆ, ವಾಸಿಸಲು ಮನೆ, ಅಕ್ಷರ ಕಲಿಯಲು ಶಾಲೆ, ಖಾಯಿಲೆಗಳು ಬಂದಾಗ ಆಸ್ಪತ್ರೆ ಇತ್ಯಾದಿ. ಆದರೆ ಇವನ ಆಸೆಗಳಿಗೆ ಎಲ್ಲೆ ಎಲ್ಲಿದೆ? ಇವನ ದುರಾಸೆಗಳನ್ನು ಪೂರೈಸಲು ಯಾರಿಂದ ಸಾಧ್ಯ? ಮಹಾತ್ಮ ಗಾಂಧಿಯವರು ಹೇಳುತ್ತಾರೆ ‘‘‘Earth provides enough to satisfy every man’s needs but not every man’s greed’ ಪ್ರಕೃತಿ ಮಾನವನ ಅವಶ್ಯಕತೆಗಳನ್ನು ಪೂರೈಸುವುದು, ಆದರೆ ಅವನ ದುರಾಸೆಗಳನ್ನಲ್ಲ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿದೆ, ಒಂದೆಡೆ ಬಿಸಿಲಿನ ಧಗೆ ಏರುತ್ತಿದೆ, ಮತ್ತೊಂದೆಡೆ ಅಕಾಲಿಕ ಹಿಮಪಾತ. ಒಂದೆಡೆ ನೀರಿಲ್ಲ ಎಂಬ ಹಾಹಾಕಾರ, ಮತ್ತೊಂದೆಡೆ ಧೋ ಎಂದು ಸುರಿಯುವ ಮಳೆ, ಮೇಘಸ್ಫೋಟದಿಂದ ಸಂಭವಿಸುವ ಭೂ ಕುಸಿತ, ಇದಕ್ಕೆಲ್ಲಾ ಕಾರಣ ಪರಿಸರ ನಾಶ. ಅರಣ್ಯಗಳನ್ನು ಬೋಳಿಸುತ್ತಿರುವ ಮಾನವ, ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡುತ್ತಿರುವ ಮಾನವ, ಕೆರೆ ಕಟ್ಟೆಗಳನ್ನು ತುಂಬಿಸಿ ನಗರಗಳನ್ನು ನಿರ್ಮಿಸುತ್ತಿರುವ ಮಾನವ, ಭೂತಾಯಿಯ ಗರ್ಭವನ್ನೇ ಸೀಳಿ ಖನಿಜಗಳ ಅದಿರನ್ನು ಹೊರತೆಗೆಯುತ್ತಿದ್ದೇವೆ, ಕಲ್ಲಿದ್ದಲು, ಪೆಟ್ರೋಲಿಯಮ್ಗಾಗಿ ನೆಲವನ್ನು ಬಗೆಯುತ್ತಿದ್ದೇವೆ. ಕಾರ್ಖಾನೆಗಳಿಂದ ಮಣ್ಣು, ನೀರು, ವಾಯು ಎಲ್ಲವನ್ನೂ ಕಲುಷಿತಗೊಳಿಸಿದ್ದೇವೆ. ನಾವುಣ್ಣುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲುಷಿತವಾಗಿವೆ.
ಪುರಾತನ ಕಾಲದಲ್ಲಿ ಮನುಷ್ಯ ಸಂತೃಪ್ತ ಜೀವನ ನಡೆಸುತ್ತಿದ್ದ, ಆಧುನಿಕ ಕಾಲದಲ್ಲಿ ಮಾನವನ ಸ್ವಾರ್ಥ, ದುರಾಸೆ ಹೆಚ್ಚಾದ ಹಾಗೆಯೇ ಪರಿಸರ ನಾಶವೂ ಹೆಚ್ಚಾಗಿದೆ. ಈಗ ನಮಗೆ ಕೇಳಿಸುತ್ತಿರುವ ಕೂಗು – ಪರಿಸರ ಉಳಿಸಿ, ಹಸಿರೇ ಉಸಿರು, ಮರ ಗಿಡಗಳನ್ನು ನೆಡಿರಿ, ಊರಿಗೊಂದು ಮರದ ತೋಪು ಇರಲಿ, ನೀರನ್ನು ಮಿತವಾಗಿ ಬಳಸಿ, ಇಂಧನವನ್ನು ಹಿತಮಿತವಾಗಿ ಬಳಸಿ ಇತ್ಯಾದಿ ಪರಿಸರವಾದಿಗಳ ಕೂಗು ಜೋರಾಗಿ ಕೇಳಿಬರುತ್ತಿದೆ.
ಪ್ರಾಕೃತಿಕ ಸಂಪತ್ತನ್ನು ಮಿತವಾಗಿ ಬಳಸಿದಾಗ ಮಾತ್ರ ಈ ಭೂಮಿ ಉಳಿಯಲು ಸಾಧ್ಯ. ಇಲ್ಲವಾದರೆ ನೂರಾರು ಮಿಲಿಯನ್ ವರ್ಷಗಳಿಂದ ಸೃಷ್ಟಿಯಾಗಿರುವ ಈ ಜೀವ ಜಾಲ ನಿರ್ನಾಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವಾರ್ಥ ದುರಾಸೆಗಳಿಂದ ನಮ್ಮ ಬದುಕನ್ನು ಹಾಳುಮಾಡಿಕೊಳ್ಳದಿರೋಣ. ಪ್ರಕೃತಿಯ ಕೂಗನ್ನು ಕೇಳಿಸಿಕೊಳ್ಳೋಣ – ನೀ ನನಗಿದ್ದರೆ ನಾ ನಿನಗೆ. ಇಲ್ಲವಾದರೆ ಮಾನವ ಜನಾಂಗದ ಮಾರಣ ಹೋಮ ನಡೆಯುವ ದಿನಗಳು ದೂರವಿಲ್ಲ. ನೆಲ ಜಲವನ್ನು ಸಂರಕ್ಷಿಸು, ಕಾಡುಗಳನ್ನು ಉಳಿಸು.
ಕಾರ್ಗತ್ತಲ ಮಧ್ಯೆಯೂ ಕೆಲವು ಆಶಾಕಿರಣಗಳು ಮೂಡುತ್ತಿವೆ. ಕೆಲವು ರೈತರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಿಟ್ಟು ಹಸಿರೆಲೆ ಗೊಬ್ಬರ, ಸಗಣಿ ಗಂಜಲದಿಂದ ತಯಾರಿಸುವ ಕಾಂಪೋಸ್ಟ್ ಬಳಸುತ್ತಿರುವರು, ಕ್ರಿಮಿನಾಶಕಗಳ ಬದಲಿಗೆ ಬೇವಿನೆಣ್ಣೆಯ ಉತ್ಪನ್ನಗಳು, ಬೋರ್ವೆಲ್ಗಳ ಬದಲಿಗೆ ಕೃಷಿ ಹೊಂಡಗಳು ಹೀಗೆ ಸಾವಯವ ವ್ಯವಸಾಯವನ್ನು ಅಪ್ಪಿಕೊಂಡಿರುವರು. ಕೆಲವು ಪರಿಸರವಾದಿಗಳು ಮನೆ ಕಟ್ಟುವಾಗ ಅಳವಡಿಸಿಕೊಂಡಿರುವ ಮಳೆನೀರಿನ ಕೊಯ್ಲು, ವಿದ್ಯುಚ್ಛಕ್ತಿಯ ಬದಲಿಗೆ ಸೌರಶಕ್ತಿಯ ಬಳಕೆ ಗಮನಾರ್ಹ. ಇಂತಹ ಪರಿಸರವಾದಿಗಳ ಒಂದು ಯಶೋಗಾಥೆಯನ್ನು ಕೇಳೋಣ ಬನ್ನಿ – ಒಂದು ಪುಟ್ಟ ಗ್ರಾಮದಲ್ಲಿ ನಡೆದ ಘಟನೆಯಿದು. ಒಮ್ಮೆ ಅಜ್ಜ, ಮೊಮ್ಮಗ ಒಂದು ದೋಣಿಯಲ್ಲಿ ಕುಳಿತು ಸರೋವರದ ಮಧ್ಯೆಯಿದ್ದ ಒಂದು ದ್ವೀಪಕ್ಕೆ ಪಿಕ್ನಿಕ್ ಹೋಗುತ್ತಾರೆ. ಆ ದ್ವೀಪದಲ್ಲಿ ಕುರುಚಲು ಗಿಡಗಳನ್ನು ಬಿಟ್ಟರೆ ಮತ್ಯಾವ ಗಿಡಗಳೂ ಇರಲಿಲ್ಲ. ಮೊಮ್ಮಗ ಅಜ್ಜನನ್ನು ಕೇಳುತ್ತಾನೆ, ‘ನಾವು ಮರ ಗಿಡಗಳ ಸಸಿಗಳನ್ನು, ಬೀಜಗಳನ್ನು ತಂದು ಈ ದ್ವೀಪದಲ್ಲಿ ನೆಡೋಣ. ಇಲ್ಲೊಂದು ಮರದ ತೋಪು ಮಾಡೋಣ’. ಆಗಲಿ ಎಂದು ತಲೆಯಾಡಿಸಿದ ಅಜ್ಜ, ಮನೆಗೆ ಹಿಂತಿರುಗಿದವನೇ, ಮೊಮ್ಮಗನ ಜೊತೆಗೂಡಿ ಗಿಡ ಮರಗಳ ಸಸಿಗಳನ್ನು ಒಟ್ಟು ಮಾಡಿ, ದ್ವೀಪಕ್ಕೆ ಹೋಗಿ ನೆಟ್ಟು ಬರುತ್ತಾರೆ. ಹತ್ತಾರು ವರ್ಷಗಳು ಉರುಳುತ್ತವೆ. ತನ್ನ ಉದ್ಯೋಗದಲ್ಲಿ ನಿರತನಾಗಿದ್ದ ಮೊಮ್ಮಗ ಈ ದ್ವೀಪದ ವಿಷಯವನ್ನು ಮರೆತೇ ಬಿಟ್ಟಿರುತ್ತಾನೆ. ಅಜ್ಜನ ಸಾವಿನ ಸುದ್ದಿ ಕೇಳಿದವನು, ಆ ಗ್ರಾಮಕ್ಕೆ ಬರುತ್ತಾನೆ. ಸರೋವರದ ಮಧ್ಯೆಯಿದ್ದ ದ್ವೀಪಕ್ಕೆ ಭೇಟಿ ನೀಡುತ್ತಾನೆ, ಅವನಿಗೊಂದು ಅಚ್ಚರಿ ಕಾದಿರುತ್ತದೆ, ಅಲ್ಲೊಂದು ಅರಣ್ಯ ಇವನಿಗೆ ಸ್ವಾಗತ ಕೋರುತ್ತದೆ, ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ. ಕೆಲವು ಪ್ರಾಣಿಗಳೂ ಇಲ್ಲಿ ನೆಲೆ ಕಂಡುಕೊಂಡಿರುತ್ತವೆ. ಇಂತಹ ಘಟನೆಗಳು ಮತ್ತೆ ಮತ್ತೆ ಜರುಗಲಿ ಎಂದು ಪ್ರಾರ್ಥಿಸೋಣ.
ಈ ಲೋಕವು ಒಂದು ಸುಂದರವಾದ ದೇವಾಲಯ, ಪ್ರಕೃತಿಯು ಸೂರ್ಯನಾಗಿ ಮೇಲೆ ಚಲಿಸಿ ಕತ್ತಲನ್ನು ಸರಿಸುವುದು, ಮೋಡವಾಗಿ ನೀರ ಸುರಿಸಿ ಲೋಕಕನ್ನ ಉಣಿಸುವುದು, ಪ್ರಾಣವಾಯುವಾಗಿ ಸುಳಿದು ನಮ್ಮನ್ನು ಕಾಯುವುದು. ಹಸಿರಿನಲ್ಲೂ ಹೂವಿನಲ್ಲೂ, ಕೋಟಿ ಹಕ್ಕಿ ಕಂಠದಲ್ಲೂ ಸುಂದರವಾದ ಪ್ರಕೃತಿಯ ಹೆಜ್ಜೆಯ ಗುರುತಿದೆ. ಮರಗಳು ಕೂಗಿ ಕೂಗಿ ಹೇಳುತ್ತಿವೆ, ‘ನೀ ನನಗಿದ್ದರೆ, ನಾ ನಿನಗೆ’ ಪ್ರಕೃತಿಯನ್ನು ನಾವು ಸಂರಕ್ಷಿಸದಿದ್ದಲ್ಲಿ ನಮ್ಮ ಅಳಿವು ಖಂಡಿತಾ.
ಈ ಬರಹದ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41322
(ಮುಗಿಯಿತು)
–ಡಾ. ಗಾಯತ್ರಿ ದೇವಿ ಸಜ್ಜನ್, ಶಿವಮೊಗ್ಗ.
Nice
ಸೊಗಸಾಗಿದೆ
ನಮ್ಮ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಮೇಲಣ ಅಭಿಮಾನದಿಂದ ಅವರ ಮಕ್ಕಳ ಮನಮುಟ್ಟಲು ಬರೆದಿದ್ದ ಸರಳ ಹಾಡಿನ ವಿವಿಧ ( ಪ್ರಬುದ್ಧರಿಗೆ ಅನ್ವಯ) ಮಗ್ಗಲುಗಳನ್ನು ಹಲವು ಉತ್ಕೃಷ್ಟ ದೃಷ್ಟಿಕೋನಗಳಿಂದ ನೋಡಿ ಬಹಳ ಗೌರವದಿಂದ ಉದ್ಧರಿಸಿ ಬರೆದು ಕವಿವರ್ಯರನ್ನು *ಗಗನದೆತ್ತರಕೆ* ಏರಿಸಿದ್ದೀರಿ
ಅಭಿನಂದನೆಗಳು. ಒಳಿತಾಗಲಿ.
Article is informative and nice. You would have mentioned about air, water and soil polution
ತುಂಬಾ ಮಾಹಿತಿಯನ್ನು ಒಳಗೊಂಡ ಲೇಖನ ಸೊಗಸಾದ ನಿರೂಪಣೆಯೊಂದಿಗೆ ಅನಾವರಣವಾಗಿದೆ…ಮೇಡಂ
ಲೇಖನವನ್ನು ಪ್ರಕಟಿಸಿದ ಹೇಮಮಾಲಾರವರಿಗೆ ವಂದನೆಗಳು
ಲೇಖನವನ್ನು ಓದಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ ಸಹೃದಯ ಓದುಗರಿಗೆ ಹೃದಯಪೂರ್ವಕ ವಂದನೆಗಳು
ಜೀವಿ ಅಥವ ಪ್ರಕೃತಿ, ಯಾವುದೇ ಆಗಿರಲಿ…ಅವುಗಳಲ್ಲಿಯ ಪರಸ್ಪರ ಕೊಡು ಕೊಳ್ಳುವಿಕೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ‘ನೀ ನನಗಿದ್ದರೆ ನಾ ನಿನಗೆ…` ಎಂದೆಂದಿಗೂ ಪ್ರಸ್ತುತವೆನಿಸುವ ಶಕ್ತಿಯುತವಾದ ಸಾಲುಗಳು. ಒಳ್ಳೆಯ ಲೇಖನ…ಧನ್ಯವಾದಗಳು ಮೇಡಂ.
ಪ್ರಾಥಮಿಕ ಶಾಲೆಯಿಂದಲೇ ಬೋಧಿಸಲು ಯತ್ನಿಸಿದ ಸರಳ ಜೀವ ಸೂತ್ರವನ್ನು ಮರೆತ ಮಾನವ ಕುಲವನ್ನು ನೈಜ ಉದಾಹರಣೆಗಳನ್ನು ಮನಮುಟ್ಟುವಂತೆ ನೀಡಿ ಎಚ್ಚರಿಸಲು ಯತ್ನಿಸುವ ವೈಚಾರಿಕ ಲೇಖನ, ಸೊಗಸಾಗಿದೆ. ಅಭಿನಂದನೆಗಳು.